ಮೂರ್ತಿಪೂಜೆ
ಆರ್.ಟಿ.ವಿಠ್ಠಲಮೂರ್ತಿ
ಆಕಸ್ಮಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬೆನ್ನಿಗೆ ಬಿಜೆಪಿ ವರಿಷ್ಠರು ಆಸರೆಯಾಗಿ ನಿಂತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ರಾಜ್ಯ ಸಚಿವ ಸಂಪುಟವನ್ನು ರಚಿಸಿದ ರೀತಿಯೇ ಇದಕ್ಕೆ ಸಾಕ್ಷಿ.
ಹಲವು ಕಾಲದ ಪ್ರತಿರೋಧದ ನಡುವೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಬಿಜೆಪಿ ಹೈಕಮಾಂಡ್ ಆ ಜಾಗಕ್ಕೆ ಬೊಮ್ಮಾಯಿ ಅವರನ್ನು ತಂದು ಕೂರಿಸಿದಾಗ ಹಲವು ಅನುಮಾನಗಳು ಶುರು ವಾಗಿದ್ದವು. ಅಧಿಕಾರದಿಂದ ಕೆಳಗಿಳಿದರೂ ಯಡಿಯೂರಪ್ಪ ಅವರು ತಮಗೆ ಬೇಕಾದವರನ್ನೇ ಸಿಎಂ ಹುದ್ದೆಗೆ ತಂದು ಕೂರಿಸಿದ್ದಾರೆ ಎಂದರೆ, ಪಕ್ಷದ ವರಿಷ್ಠರು ಅವರ ಶಕ್ತಿಯನ್ನು ನಿರ್ಲಕ್ಷಿಸಲು ತಯಾರಿಲ್ಲ ಎಂಬ ಮಾತು ಕೇಳತೊಡಗಿತ್ತು.
ಸಂಪುಟ ರಚನೆಯ ನಂತರ ಈ ಭಾವನೆ ಮರೆಯಾಗಿದೆ ಎಂದೇನಲ್ಲ. ಈಗಲೂ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರ ಶಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಹೆಜ್ಜೆ ಇಟ್ಟಿದ್ದಾರೆ. ಆದರೆ ಹೀಗೆ ಹೆಜ್ಜೆ ಇಡುವಾಗ ಮುಂದಿನ ದಿನಗಳಲ್ಲಿ ಯಾವ-ಯಾವ ಅಪಾಯ ಎದುರಾಗಬಹುದು? ಎನ್ನುವುದನ್ನೂ ಅವರು ಲೆಕ್ಕ ಹಾಕಿದ್ದಾರೆ ಎಂಬುದೇ ವಿಶೇಷ. ಅಂದ ಹಾಗೆ ಕಳೆದ ಬುಧವಾರ ಅಸ್ತಿತ್ವಕ್ಕೆ ಬಂದ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ಯಡಿಯೂ ರಪ್ಪ ಅವರ ಇಚ್ಛೆಯನ್ನು ನಿರಾಕರಿಸಿಲ್ಲ.
ಹಾಗಂತ ಅದು ಯಡಿಯೂರಪ್ಪ ಅವರ ಕನಸಿನ ಸಂಪುಟವೂ ಅಲ್ಲ. ಏಕೆಂದರೆ ಸಂಪುಟದಲ್ಲಿ ಯಡಿಯೂರಪ್ಪ ಅವರ ಪಡೆಯಲ್ಲಿದ್ದ ಬಹುತೇಕರು ಉಳಿದು ಕೊಂಡಿದ್ದಾರೆ. ಅದೇ ರೀತಿ ಹಿಂದೆ ಯಡಿಯೂರಪ್ಪ ಅವರ ವಿರುದ್ಧ ಬಂಡಾಯವೆದ್ದವರೂ ಸರಕಾರದ ಕಾಂಪೌಂಡಿನಿಂದ ದೂರ ಹೋಗಿದ್ದಾರೆ. ಈಗಿನ ಸಂಪುಟ ವನ್ನೇ ನೋಡಿ. ಅಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಆರ್.ಅಶೋಕ್ ಸೇರಿದಂತೆ ಹಲವರು ಚಾವಣಿಯ ಮೇಲೇ ಇದ್ದಾರೆ. ಹಾಗೆಯೇ ಯಡಿಯೂರಪ್ಪ ಅವರ ವಿರುದ್ಧ ಹೋರಾಡುತ್ತಲೇ ಬಂದಿದ್ದ ಬಸನ ಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೀಶ್ವರ್ ಮತ್ತು ನಾನೇ ಪರ್ಯಾಯ ನಾಯಕ ಎಂದು ನಂಬಿಕೊಂಡಿದ್ದ ಅರವಿಂದ ಬೆಲ್ಲದ್ ಸರಕಾರದ ಗೇಟಿನ ಒಳಗೆ ಬರಲಾಗದೇ ಸೋತಿದ್ದಾರೆ.
ಆ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಲಘುವಾಗಿ ಪರಿಗಣಿಸಲು ಸಿದ್ಧವಿಲ್ಲ ಎಂಬ ಸಂದೇಶವನ್ನು ವರಿಷ್ಠರು ನೀಡಿರುವುದು ನಿಜವಾದರೂ, ಸಂಘ ಪರಿವಾರ ದಿಂದ ಎದ್ದು ಬಂದ ಶಕ್ತಿ ಬಿ.ಎಲ್. ಸಂತೋಷ್ ಅವರ ಕಣ್ಣಿಗೆ ಭವಿಷ್ಯದ ನಾಯಕರಂತೆ ಕಾಣುತ್ತಿರುವ ಸುನೀಲ್ ಕುಮಾರ್, ಬಿ.ಸಿ.ನಾಗೇಶ್ ಅವರಂತವರೂ ಸಂಪುಟದೊಳಗೆ ಬಂದಿದ್ದಾರೆ. ಹೀಗೆ ಮಾಡುವ ಮೂಲಕ ಸರಕಾರ ಯಾರೊಬ್ಬರ ಹಿಡಿತದಲ್ಲಿಲ್ಲ. ಬದಲಿಗೆ ಅದರ ಹಿಡಿತ ತಮ್ಮ ಕೈಲಿದೆ ಎಂಬ ಸಂದೇಶವನ್ನು ವರಿಷ್ಠರು ನೀಡಿದ್ದಾರೆ. ಅಂದ ಹಾಗೆ ಗಮನಿಸಬೇಕಾದ ಸಂಗತಿ ಎಂದರೆ ಬಸವರಾಜ ಬೊಮ್ಮಾಯಿ ಅವರ ಸರಕಾರವನ್ನು ಮೆಲ್ಲಗೆ ತಮ್ಮ ಹಿಡಿತಕ್ಕೆ ತೆಗೆದು ಕೊಂಡಿರುವ ವರಿಷ್ಠರು, ಹಂತ-ಹಂತವಾಗಿ ಅದನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ ಎಂಬುದು ಸ್ಪಷ್ಟ.
ಹೀಗೆ ನಿಯಂತ್ರಣಕ್ಕೆ ತೆಗೆದುಕೊಳ್ಳುವಾಗ ಏನೇನು ಅಪಾಯಗಳು ಎದುರಾಗಬಹುದು ಎಂಬುದನ್ನು ಅವರೂ ಊಹಿಸಿದ್ದಾರೆ ಮತ್ತು ಯಡಿಯೂರಪ್ಪ ಅವರೇ ಈ
ಊಹೆಯ ಕೇಂದ್ರ ಬಿಂದುವಾಗಿದ್ದಾರೆ. ಯಾಕೆಂದರೆ ಈ ಸರಕಾರ ತಮ್ಮಿಚ್ಛೆಯಂತೆ ನಡೆಯುವುದಿಲ್ಲ ಎಂಬುದು ಮುಂದಿನ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಅವರಿಗೆ ಅರ್ಥವಾಗಲಿದೆ. ಎರಡು ವರ್ಷಗಳ ಕಾಲ ಅವರು ಸರಕಾರ ನಡೆಸಿದ ರೀತಿ ಬೇರೆ. ಈಗ ಬಸವರಾಜ ಬೊಮ್ಮಾಯಿ ಇರುವುದರಿಂದ ಅದನ್ನು ನಿಯಂತ್ರಿಸುವುದೇ ಬೇರೆ. ಈಗಲೂ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಕ್ಯಾಂಡಿಡೇಟ್ ಎಂಬುದರಲ್ಲಿ ಅನುಮಾನವೇನೂ ಇಲ್ಲ. ಆದರೆ
ಮುಖ್ಯಮಂತ್ರಿಯಾದ ಘಳಿಗೆಯಲ್ಲಿ ಅವರು ಹೇಗಿದ್ದರೋ? ಅದೇ ರೀತಿ ಇರಲು ಇನ್ನು ಮುಂದೆ ಸಾಧ್ಯವಿಲ್ಲ.
ಕಾರಣ? ಸರಕಾರವನ್ನು ಕೇವಲ ಯಡಿಯೂರಪ್ಪ ಮಾತ್ರವಲ್ಲ, ಅವರಿಗಿಂತ ಮುಖ್ಯವಾಗಿ ಹೈಕಮಾಂಡ್ ನಿಯಂತ್ರಿಸುತ್ತದೆ. ಯಾವುದೇ ಆರ್ಥಿಕ ವ್ಯವಹಾರ ಗಳಿರಲಿ, ಅದನ್ನು ಹೈಕಮಾಂಡ್ ಗಮನಕ್ಕೆ ತಂದೇ ಬಸವರಾಜ ಬೊಮ್ಮಾಯಿ ಮುಂದುವರಿಯಬೇಕಾಗುತ್ತದೆ. ಆದರೆ ಒಂದು ವಿಷಯವನ್ನು ಇಬ್ಬರು ನಿಯಂತ್ರಿಸಲು ಹೊರಟಾಗ ಯಾರ ಮಾತು ಕೇಳಬೇಕಾಗುತ್ತದೆ? ಎಂಬುದು ಮುಖ್ಯ. ಆ ದೃಷ್ಟಿಯಿಂದ ಅವರು ವರಿಷ್ಟರನ್ನು ಬಿಟ್ಟು ಮುಂದಡಿ ಇಡಲು ಸಾಧ್ಯವೇ ಇಲ್ಲ. ಹಾಗಾದಾಗ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರ ಹಿತಾಸಕ್ತಿ ಏನಿದೆ? ಅದನ್ನು ಕಾಪಾಡುವುದು ಬಸವರಾಜ ಬೊಮ್ಮಾಯಿ ಅವರಿಗೆ ಕಷ್ಟವಾಗುತ್ತದೆ. ಯಾವಾಗ ಒಂದು ವಿಷಯ ಸಂಕಷ್ಟದ ತಿರುಗಣಿಯಲ್ಲಿ ಸಿಲುಕುತ್ತದೋ? ಆಗ ಅನಿವಾರ್ಯವಾಗಿ ಅವರು ಯಡಿಯೂರಪ್ಪ ಅವರಿಂದ ಅಂತರ ಕಾಪಾಡಿಕೊಳ್ಳಲು ಬಯಸುತ್ತಾರೆ.
ಹಿಂದೆ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡರಿಗೆ ಆಗಿದ್ದು ಇದೇ ಅಲ್ಲವೇ? ಮತ್ತು ಇದನ್ನೇ ದೊಡ್ಡದು ಮಾಡಿ ಬೆಂಬಲಿಗ ಮಂತ್ರಿಗಳು, ಶಾಸಕರ ಗುಂಪು ಯಡಿಯೂರಪ್ಪ ಅವರ ಬಳಿ ಕಂಪ್ಲೇಂಟ್ ರಿಜಿಸ್ಟರ್ ತೆಗೆದುಕೊಂಡು ಹೋಗಿದ್ದು ತಾನೇ? ಅವತ್ತೇನೋ ಪಕ್ಷದ ಹೈಕಮಾಂಡ್ ದುರ್ಬಲವಾಗಿತ್ತು. ಹೀಗಾಗಿ ಸದಾನಂದ ಗೌಡರನ್ನು ಇಳಿಸುವುದಾಗಿ ಘೋಷಿಸಿ ಯಡಿಯೂರಪ್ಪ ಬೀದಿಗಿಳಿದಾಗ ಮತ್ತು ಆ ಜಾಗಕ್ಕೆ ಜಗದೀಶ್ ಶೆಟ್ಟರ್ ಅವರನ್ನು ತಂದು ಕೂರಿಸುವುದಾಗಿ ಅಬ್ಬರಿಸಿದಾಗ ವರಿಷ್ಠರು ಚಕಾರವೆತ್ತಲಿಲ್ಲ. ವಾಸ್ತವವಾಗಿ ಸದಾನಂದಗೌಡರು ಕೆಳಗಿಳಿಯಲು ಅವತ್ತಿನ ದುರ್ಬಲ ಹೈಕಮಾಂಡೇ ಕಾರಣ. ಅದು ಸದಾನಂದ ಗೌಡರಿಂದ ನಿಷ್ಠೆ ಬಯಸಿತೇ ಹೊರತು, ಆ ನಿಷ್ಠೆ ಯಡಿಯೂರಪ್ಪ ಅವರ ಆಕ್ರೋಶಕ್ಕೆ ಕಾರಣವಾದಾಗ ಗೌಡರ ರಕ್ಷಣೆಗೆ ಬರಲಿಲ್ಲ.
ಬಸವರಾಜ ಬೊಮ್ಮಾಯಿ ಪ್ರಕರಣದಲ್ಲಿ ಆಗುವುದೂ ಇದೇ. ಅವರು ಅನಿವಾರ್ಯವಾಗಿ ಪಕ್ಷ ನಿಷ್ಠೆಗೆ ಅಂಟಿಕೊಳ್ಳುತ್ತಾರೆ. ಮತ್ತಿದರ ಪರಿಣಾಮವಾಗಿ ಯಡಿಯೂರಪ್ಪ ಕ್ರುದ್ಧಗೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಇಂತಹ ಸನ್ನಿವೇಶವನ್ನು ನೋಡಬೇಕಾಗಬಹುದು ಎಂಬುದು ಬಿಜೆಪಿ ವರಿಷ್ಠರ ಸದ್ಯದ ಯೋಚನೆ. ಹಾಗಂತ ಹಿಂದಿನಂತೆ ಈಗ ಬಿಜೆಪಿ ಹೈಕಮಾಂಡ್ ದುರ್ಬಲವಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಇರುವ ಬಿಜೆಪಿ ಹೈಕಮಾಂಡ್ ಈಗ ಪ್ರಬಲ ಹೈಕಮಾಂಡ್ ಎಂಬುದು ಸ್ಪಷ್ಟ. ರಾಷ್ಟ್ರ ರಾಜಕಾರಣದಲ್ಲಿ ತಮಗೆ ಎದುರಾದವರನ್ನು ಅವರು ಪಕ್ಕಕ್ಕೆ ಸರಿಸಿದ ರೀತಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಹೀಗಾಗಿ ಯಡಿಯೂರಪ್ಪ ಅವರು ಮುಂದೊಡ್ಡಬಹುದಾದ ಅಪಾಯಗಳನ್ನೂ ಅವರು ಅದಾಗಲೇ ಲೆಕ್ಕ ಹಾಕಿದ್ದಾರೆ.
ಅಂದ ಹಾಗೆ ಸರಕಾರದ ಬಗ್ಗೆ ಯಡಿಯೂರಪ್ಪ ಅವರಿಗೆ ಆಕ್ರೋಶ ಬಂದರೆ ಏನು ಮಾಡಬಹುದು? ಸರಕಾರವನ್ನು ಉರುಳಿಸಲು ಯತ್ನಿಸಬಹುದು. ಹಾಗಂತಲೇ ಬಿಜೆಪಿ ವರಿಷ್ಠರು ಬೊಮ್ಮಾಯಿ ಸರಕಾರಕ್ಕೆ ಯಾವತ್ತೂ ಬಹುಮತದ ಅಪಾಯ ಎದುರಾಗಬಾರದು ಅಂತ ಜೆಡಿಎಸ್ ಜತೆ ಮೈತ್ರಿಯ ಮಾತುಕತೆಯನ್ನು ಪೂರ್ಣಗೊಳಿಸಿದ್ದಾರೆ. ಬೊಮ್ಮಾಯಿ ಸರಕಾರ ಅಪಾಯ ಎದುರಿಸುವಾಗ ನಾವು ಅದರ ಬೆಂಬಲಕ್ಕೆ ನಿಲ್ಲುತ್ತೇವೆ ಅಂತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದು ಇದೇ ಕಾರಣಕ್ಕಾಗಿ. ಅಲ್ಲಿಗೆ ಯಡಿಯೂರಪ್ಪ ಒಡ್ಡಬಹುದಾದ ಒಂದು ಅಪಾಯವನ್ನು ಎದುರಿಸಲು ಬಿಜೆಪಿ ಹೈಕಮಾಂಡ್ ಪೂರ್ವಭಾವಿ ತಯಾರಿ ಮಾಡಿಕೊಂಡಿದೆ.
ಎರಡನೆಯದಾಗಿ, 2023ರ ವಿಧಾನಸಭಾ ಚುನಾವಣೆ ಹತ್ತಿರ ಬಂದಾಗ ಹದಿನೈದರಿಂದ ಇಪ್ಪತ್ತು ಶಾಸಕರನ್ನು ಮತ್ತು ಬೆಂಬಲಿಗರನ್ನು ಕರೆದುಕೊಂಡು ಅವರು ಕೈ ಪಾಳೆಯಕ್ಕೇ ಹೋಗಿ ಬಿಡಬಹುದು ಎಂಬುದು ವರಿಷ್ಠರ ಮುಂದಾಲೋಚನೆ. ಆದರೆ ಅಂತಹ ಪರಿಸ್ಥಿತಿಯಲ್ಲೂ ಸಮಸ್ಯೆ ಎದುರಾಗದಂತೆ ವರಿಷ್ಠರು ಮುನ್ನೆಚ್ಚ ರಿಕೆ ವಹಿಸಿದ್ದಾರೆ. ಈ ಬಾರಿ ಸಚಿವ ಸಂಪುಟ ರಚಿಸುವಾಗ ಜೆಡಿಎಸ್ ಪ್ರಾಬಲ್ಯದ ಮೈಸೂರು, ರಾಮನಗರ, ಹಾಸನ, ಕೊಡಗು ಮತ್ತಿತರ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡದಿರುವುದು ಇದಕ್ಕೆ ಸಾಕ್ಷಿ.
ಅರ್ಥಾತ್, ಚುನಾವಣೆಯಲ್ಲಿ ಬಿಜೆಪಿಯ ಜತೆಗೆ ಜೆಡಿಎಸ್ ಕೂಡಾ ಐವತ್ತರಿಂದ ಅರವತ್ತರಷ್ಟು ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗಲಿ ಎಂಬುದು ಇಂತಹ
ನಿರ್ಣಯದ ಹಿಂದಿರುವ ಲೆಕ್ಕಾಚಾರ. ಮಿತ್ರ ಗಟ್ಟಿಯಿದ್ದರೆ ತಾನೇ ನಮ್ಮ ಶಕ್ತಿ ಗಟ್ಟಿಯಾಗಿರುವುದು? ಎಂಬುದು ಇದರ ಹಿಂದಿರುವ ನೀತಿ. ವಸ್ತುಸ್ಥಿತಿ ಎಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪ್ರಾಬಲ್ಯವಿರುವ ಹದಿನೇಳು ಕ್ಷೇತ್ರಗಳಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಗಳನ್ನು ಹಾಕಿತ್ತು. ಇದರ ಹಿಂದಿದ್ದ
ಲೆಕ್ಕಾಚಾರವೂ ಅದೇ. ಆದರೆ ಚುನಾವಣೆ ನಡೆದು ಫಲಿತಾಂಶ ಬಂದಾಗ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿತ್ತು.
ತೆರೆ ಹಿಂದಿನ ಮಾತುಕತೆಯಂತೆ ಜೆಡಿಎಸ್ ಪಕ್ಷದ ಬೆಂಬಲ ಕಮಲ ಪಾಳೆಯಕ್ಕೆ ದಕ್ಕಬೇಕಿತ್ತು. ಆದರೆ ಜೆಡಿಎಸ್ ಜತೆ ಮೈತ್ರಿ ಒಪ್ಪಿತವಾದರೂ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಲಾಗದು ಎಂದು ಯಡಿಯೂರಪ್ಪ ಪಟ್ಟು ಹಿಡಿದರು. ಅವರು ಹೀಗೆ ಹಟ ಹಿಡಿದ ಕಾಲಕ್ಕೆ ಸರಿಯಾಗಿ ಕಾಂಗ್ರೆಸ್ ಪಕ್ಷ ತುರ್ತು ಕಾರ್ಯಾ ಚರಣೆಗೆ ಇಳಿಯಿತು. ಅವತ್ತು ಫಲಿತಾಂಶದ ಸ್ವರೂಪ ನಿಕ್ಕಿಯಾಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇ ಗೌಡರ ನಿವಾಸಕ್ಕೆ ದೌಡಾಯಿಸಿದ್ದೇ ಇದಕ್ಕೆ ಸಾಕ್ಷಿ.
ಮೈತ್ರಿ ಸರಕಾರ ರಚಿಸೋಣ. ಅವಧಿ ಪೂರೈಸುವವರೆಗೆ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿರಲಿ ಎಂಬ ಸೋನಿಯಾಗಾಂಧಿ ಅವರ ಸಂದೇಶವನ್ನು ಸ್ಥಳೀಯ ನಾಯಕರು ದೇವೇಗೌಡರಿಗೆ ತಲುಪಿಸಿದಾಗ ಅವರು ಬೇರೆ ಯೋಚನೆ ಮಾಡುವ ಅಗತ್ಯವೇ ಬೀಳಲಿಲ್ಲ. 2018ರ ವಿಧಾನಸಭಾ ಚುನಾವಣೆಯ ನಂತರ ರಚಿತವಾಗಬೇಕಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟಕ್ಕೆ ಅಡ್ಡಿಯಾಗಿದ್ದು ಹೀಗೆ. ಆದರೆ ಈ ಸಲ ಅಂತಹ ಸಮಸ್ಯೆ ಎದುರಾಗುವ ಸಾಧ್ಯತೆಗಳು ಕಡಿಮೆ. ಏಕೆಂದರೆ 2018ರಲ್ಲಿ ಕಾಂಗ್ರೆಸ್ ಜತೆಗೂಡಿ ಮೈತ್ರಿಕೂಟ ಸರಕಾರ ರಚಿಸಿದ ಅನುಭವದಿಂದ ಜೆಡಿಎಸ್ ಮನಸ್ಸಿನಲ್ಲಿ ಕಹಿ ಉಳಿದಿದೆ.
ಅಷ್ಟೇ ಅಲ್ಲ,ಕೈ ಪಾಳೆಯದ ಮುಂಚೂಣಿಯಲ್ಲಿ ಸಿದ್ದರಾಮಯ್ಯ ಅವರು ಇರುವವರೆಗೆ ಆ ಪಕ್ಷದ ಜತೆ ಮೈತ್ರಿ ಮೂಡಿ ಕೊಳ್ಳುವುದು ಸರಿಯಲ್ಲ ಎಂಬ ಭಾವನೆ
ನಿಕ್ಕಿಯಾಗಿದೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಅತಂತ್ರ ಫಲಿತಾಂಶ ಬಂದರೆ ಜೆಡಿಎಸ್‌ನ ಅನಿವಾರ್ಯ ಆಯ್ಕೆ ಬಿಜೆಪಿ. ಹೀಗಾಗಿ ಹಳೆ ಮೈಸೂರು ಭಾಗದ ವಿಧಾನಸಭಾ ಕ್ಷೇತ್ರಗಳ ಪೈಕಿ ತನ್ನ ಶಕ್ತಿ ಎಲ್ಲಿ ಕಡಿಮೆಯೋ? ಅಲ್ಲಿ ಜೆಡಿಎಸ್ ಜತೆ ಒಳ ಮೈತ್ರಿ ಮಾಡಿಕೊಳ್ಳುವುದು ಸೂಕ್ತ ಎಂಬ ಯಡಿಯೂರಪ್ಪ ವಿರೋಧಿಗಳ ಮಾತು ವರಿಷ್ಠರಿಗೆ ಇಷ್ಟವಾಗಿದೆ. ಈ ಎಲ್ಲವುಗಳ ನಡುವೆ ಯಡಿಯೂರಪ್ಪ ಅವರೇ ನಾಲ್ಕನೇ ಶಕ್ತಿಯನ್ನು ಹುಟ್ಟು ಹಾಕಿದರೆ, ಆ ಮೂಲಕ ಯಾರೇ ಸರಕಾರ ರಚಿಸಿದರೂ ತಮ್ಮ ಬೆಂಬಲ ಅನಿವಾರ್ಯ ಎಂಬ ಸಂದೇಶವನ್ನು ರವಾನಿಸಲು ಬಯಸಿದರೆ ಅವರನ್ನು ಕಾನೂನಿನ ಬಲೆಗೆ ಬೀಳಿಸು ವುದು ವರಿಷ್ಠರ ಪ್ಲಾನು.
ಹೀಗೆ ಮಾಡುವ ಮೂಲಕ 2023 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಬೇಕು, ಆ ಮೂಲಕ ಮರು ವರ್ಷ ನಡೆಯಲಿರುವ ಲೋಕಸಭಾ
ಚುನಾವಣೆಯಲ್ಲಿ ಕನಿಷ್ಟ ಇಪ್ಪತ್ತೈದು ಸೀಟುಗಳನ್ನು ಗಳಿಸಬೇಕು ಎಂಬುದು ವರಿಷ್ಟರ ಲೆಕ್ಕಾಚಾರ. ಈ ಲೆಕ್ಕಾಚಾರಕ್ಕೆ ಪೂರಕವಾಗಿ ಅದು ದಾಳ ಉರುಳಿಸ ತೊಡಗಿದೆ. ಸಂಪುಟ ರಚನೆಯ ಸ್ವರೂಪವನ್ನು ಗಮನಿಸಿದರೆ ಅದು ಸ್ಪಷ್ಟ.