Tuesday, 26th November 2024

ಚಿತ್ರಮಂದಿರಗಳಿಗೆ 100% ಅವಕಾಶ ಸದ್ಯಕ್ಕಿಲ್ಲ

ಆಗಸ್ಟ್ ಎರಡನೆ ವಾರದಲ್ಲಿ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತದೆ ಎಂಬ ಆಶಾಭಾವವಿತ್ತು. ಹಾಗಾಗಿಯೇ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದ್ದವು. ಹೈ ಬಜೆಟ್‌ನ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ದಿನಾಂಕವನ್ನು ಘೋಷಿಸಿದ್ದವು. ಇದರಿಂದ ಮತ್ತೆ ಚಿತ್ರ ರಂಗದಲ್ಲಿ ಹಳೆಯ ವೈಭವ ಮರುಕಳಿಸುತ್ತದೆ ಎಂಬ ಭರವಸೆ ಇತ್ತು.

ಆದರೆ ಆ ಆಸೆ ಈಗ ನಿರಾಸೆಯಾಗಿದೆ. ಚಿತ್ರಮಂದಿರಗಳಲ್ಲಿ ಸದ್ಯಕ್ಕೆ ಶೇ 100 ರಷ್ಟು ಪ್ರೇಕ್ಷರಿಗೆ ಅವಕಾಶ ನೀಡುವುದು ಅನುಮಾನವಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧಾರಕ್ಕೆ ಬರುವುದಾಗಿ ಸರಕಾರ ತಿಳಿಸಿದೆ. ಇದರಿಂದ ಬಿಡುಗಡೆಗೆ ಸಿದ್ಧವಾಗಿದ್ದ ಸಿನಿಮಾಗಳು ಮತ್ತೆ ಅತಂತ್ರವಾಗಿವೆ. ಕಳೆದ ತಿಂಗಳಿನಿಂದಲೇ ಚಿತ್ರಮಂದಿರಗಳನ್ನು ತೆರೆಯಲು ಸರಕಾರ ಅನುಮತಿ ನೀಡಿತ್ತು. ಶೇ೫೦ ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಎಂದು ಷರತ್ತು ವಿಽಸಿತ್ತು. ಈ ಆದೇಶದಂತೆ ಕೆಲವು ಚಿತ್ರಮಂದಿರಗಳು ತೆರೆದರೆ, ಹಲವು ಬಾಗಿಲು ಮುಚ್ಚಿದ್ದವು.

ಸ್ಟಾರ್ ನಟರ ಚಿತ್ರಗಳು ತೆರೆಗೆ ಬಂದಾಗ ಎಲ್ಲಾ ಚಿತ್ರಮಂದಿರಗಳು ತೆರೆಯಬಹುದು ಎಂಬ ಆಶಾಭಾವವಿತ್ತು. ಆದರೆ ಈಗ ಅದು ಸುಳ್ಳಾಗಿದೆ. ಶೇ 100 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡದೆ ಹೈ ಬಜೆಟ್ ಚಿತ್ರಗಳು ತೆರೆಗೆ ಬರುವುದು ಅಸಾಧ್ಯವಾದ ಮಾತಾಗಿದೆ. ಇದರಿಂದ ಹೊಸ ಚಿತ್ರಗಳ ಮೇಲೆಯೂ ಪರಿಣಾಮ ಬೀರಿದೆ. ಚಿತ್ರರಂಗ ಮತ್ತೆ ಲಯಕ್ಕೆ ಮರಳಲು ಇನ್ನಷ್ಟು ದಿನಗಳು ಕಾಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಹೈ ಬಜೆಟ್ ಚಿತ್ರಗಳೇ ಅಡಿಪಾಯ

ಸ್ಟಾರ್ ನಟರ ಚಿತ್ರಗಳು ತೆರೆಗೆ ಬಂದರೆ ಮಾತ್ರ ಎಲ್ಲಾ ಚಿತ್ರಮಂದಿರಗಳು ತೆರೆಯುವುದು ಪ್ರದರ್ಶನ ಆರಂಭಿಸುವುದು. ಥಿಯೇಟರ್‌ಗಳ ಮುಂದೆ ಪ್ರೇಕ್ಷಕರ ಸಂಭ್ರಮವನ್ನು ಕಾಣಲು ಸಾಧ್ಯವಾಗುವುದು. ಇಲ್ಲದೇ ಇದ್ದರೆ ಚಿತ್ರಮಂದಿರಗಳು ತೆರೆಯುವುದಿಲ್ಲ, ಹೊಸ ಚಿತ್ರಗಳು ರಿಲೀಸ್ ಆಗುವುದಿಲ್ಲ. ಎರಡು ವರ್ಷಗಳ ಹಿಂದೆಯೇ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ರೆಡಿಯಾಗಿದ್ದ ಚಿತ್ರಗಳು ಪೆಟ್ಟಿಗೆಯಲ್ಲಿಯೇ ಉಳಿಯಬೇಕಾಗು ತ್ತದೆ. ಇನ್ನು ಒಟ್ಟೊಟ್ಟಿಗೆ ಚಿತ್ರಗಳು ತೆರೆಗೆ ಬಂದರು ಆಗಲೂ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿಯೇ ಹೊಸಬರ ಚಿತ್ರಗಳಿಗೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ.

ಸಲಗನ ನಡೆಯೇನು
ದುನಿಯಾ ವಿಜಿ ನಟಿಸಿ ನಿರ್ದೇಶಿಸಿದ್ದ ಸಲಗ ಹೈ ಬಜೆಟ್ ಚಿತ್ರವಾಗಿದೆ. ಹಿಂದೆಯೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ರೆಡಿಯಾಗಿದ್ದ ಸಲಗನ ಬಿಡುಗಡೆ
ದಿನಾಂಕ ಘೋಷಣೆಯಾಗಿತ್ತು. ವರಮಹಾಲಕ್ಷ್ಮಿ ಹಬ್ಬದಂದು ತೆರೆಗೆ ಬರಲು ಸಿದ್ಧವಾಗಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಮಹಾಲಕ್ಷ್ಮಿ ಹಬ್ಬಕ್ಕೆ ಸಲಗ ಚಿತ್ರ
ರಿಲೀಸ್ ಆಗುವುದಿಲ್ಲ ಎಂಬುದು ಖಚಿತವಾಗಿದೆ. ಚಿತ್ರ ಕಣ್ತುಂಬಿಕೊಳ್ಳಲು ಇನ್ನೂ ಒಂದಷ್ಟು ದಿನ ಕಾಯಲೇಬೇಕಾಗಿದೆ. ಈ ನಡುವೆ ಸೆಪ್ಟೆಂಬರ್ ಮೊದಲ
ವಾರದಲ್ಲಿ ಭಜರಂಗಿ 2 ಆ ಬಳಿಕ ಬಡವ ರಾಸ್ಕಲ್ ಸಿನಿಮಾಗಳು ತೆರೆಗೆ ಬರುವುದಾಗಿ ಈಗಾಗಲೇ ಅಧಿಕೃತವಾಗಿ ಘೋಷಿಸಿವೆ. ಹಾಗಾಗಿ ಈ ನಡುವೆ ಮತ್ತೊಂದು ಹೈ ಬಜೆಟ್ ಸಿನಿಮಾ ರಿಲೀಸ್ ಮಾಡುವುದು ಕಷ್ಟವೆ. ಅಂತು ಸರಕಾರದ ನಿರ್ಧಾರದ ಬಳಿಕವಷ್ಟೇ ಚಿತ್ರ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿಲಿದೆ.

ಶುರುವಾಗಲಿದೆ ಸ್ಟಾರ್ ವಾರ್
ಸಿನಿಮಾಗಳ ರಿಲೀಸ್ ಮತ್ತಷ್ಟು ವಿಳಂಭವಾದರೆ, ಚಿತ್ರರಂಗದಲ್ಲಿ ಸ್ಟಾರ್ ವಾರ್ ಶುರುವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಯಾಕೆಂದರೆ ಈಗಾಗಲೇ ಸಾಲು ಸಾಲು ಸಿನಿಮಾಗಳು ತೆರೆಗೆ ರೆಡಿಯಿದ್ದರು ಬಿಡುಗಡೆ ಸಾಧ್ಯವಾಗಿಲ್ಲ. ಹಾಗಾಗಿ ಒಂದೇ ಸಾರಿ ದೊಡ್ಡ ನಟರ ಸಿನಿಮಾಗಳು ರಿಲೀಸ್ ಆದರೆ ಚಂದನವನ ದಲ್ಲಿ ಸ್ಟಾರ್ ವಾರ್ ಶುರುವಾಗಲಿದೆ. ಅದರ ಜತೆಗೆ ಪರಭಾಷ ಚಿತ್ರಗಳಿಗೂ ಪೈಪೋಟಿ ನೀಡಬೇಕಾಗುತ್ತದೆ.

***

ಕನ್ನಡ ಚಿತ್ರರಂಗ ಮತ್ತೆ ಹಳೆಯ ಲಯಕ್ಕೆ ಮರಳಬೇಕು ಆ ನಿಟ್ಟಿನಲ್ಲಿ ಚಿತ್ರಮಂದಿರಗಳಲ್ಲಿ ಶೇ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ಸಿಗಬೇಕು ಎಂದು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸುವು ದಾಗಿ ಹೇಳಿದ್ದಾರೆ. ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಅವಕಾಶ ಸಿಗುವ ನಂಬಿಕೆ ಇದೆ. ಸ್ಟಾರ್ ನಟರ ಚಿತ್ರಗಳು ತೆರೆಗೆ ಬಂದಾಗ ಮಾತ್ರ ಚಿತ್ರರಂಗ ಹೊಸ ಚೈತನ್ಯ ಪಡೆದು ಕೊಳ್ಳುತ್ತದೆ.
-ಪ್ರವೀಣ್ ನಿರ್ಮಾಪಕರ ಸಂಘದ ಅಧ್ಯಕ್ಷ

ಆಗಸ್ಟ್ ಎರಡನೆಯ ವಾರದಲ್ಲಿ ಚಿತ್ರಮಂದಿರಗಳಲ್ಲಿ ಆಸನ ಸಾಮರ್ಥ್ಯದ ಶೇ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಬಹುದು ಎಂಬ ನಿರೀಕ್ಷೆಯಿತ್ತು. ಅದಕ್ಕಾಗಿಯೇ ಸಲಗ ಚಿತ್ರವನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ತರಲು ನಿರ್ಧರಿಸಿದ್ದೆವು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಸದ್ಯಕ್ಕೆ ಚಿತ್ರಮಂದಿರದಲ್ಲಿ ಶೇ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ಸಿಗುವುದು ಅನುಮಾನವಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ನಿರ್ಧಾರ ತೆಗೆದು ಕೊಳ್ಳುವುದಾಗಿ ಹೇಳಿದ್ದಾರೆ. ಆ ಬಳಿಕ ಸಲಗನ ಬಿಡುಗಡೆ ಯಾವಾಗ ಎಂಬುದನ್ನು ನಿರ್ಧರಿಸುತ್ತೇವೆ.
-ಕೆ.ಪಿ.ಶ್ರೀಕಾಂತ್ ನಿರ್ಮಾಪಕ