ಶೇ.50ರಷ್ಟು ಮಹಿಳಾ ಮೀಸಲಾತಿಯಿಂದ ಆಕಾಂಕ್ಷಿಗಳ ನಿರೀಕ್ಷೆ ಹುಸಿ
ಆರು ಜನ ಮಾಜಿ ಮೇಯರ್ಗಳು ಅಖಾಡದಲಿ
ವಿಶೇಷ ವರದಿ: ಚಂದ್ರಕಾಂತ ಬಾರಕೇರ ಹುಬ್ಬಳ್ಳಿ
ರಾಜ್ಯದ ಗಮನ ಸೆಳೆದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಅಖಾಡ ಸಜ್ಜುಗೊಂಡಿದ್ದು, ಟಿಕೆಟ್ ಹಂಚಿಕೆಯಲ್ಲಿನ ಗೊಂದಲಗಳು ಬಂಡಾಯವಾಗಿ ಪರಿಣಮಿಸಿದ್ದು, ಈ ಹಿಂದಿನ ಪಾಲಿಕೆ ಚುನಾವಣೆಗೆ ಹೋಲಿಸಲಾಗಿ ಪ್ರಸ್ತುತ ಪಾಲಿಕೆ ಚುನಾವಣೆ ಹಲವು ಮಹತ್ವಗಳಿಗೆ ಸಾಕ್ಷಿಯಾಗಲಿದೆ.
ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನದ ಅಭ್ಯರ್ಥಿಗಳ ಬಂಡಾಯ, ಪಕ್ಷಗಳು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಹೆಸರು ಹೊಂದಿ ಕೆಲವರಿಗೆ ಬಿ-ಫಾರ್ಮ್ ಸಿಗದೆ ಆಘಾತ, ರಾತ್ರೋರಾತ್ರಿ ಪಕ್ಷಗಳ ಬದಲಾವಣೆ, ಟಿಕೆಟ್ ನೀಡದ ಪಕ್ಷಗಳ ವಿರುದ್ಧದ ಆಕ್ರೋಶ, ಮಂಗಳವಾರದ ನಾಮಪತ್ರ ಹಿಂಪಡೆಯುವ ಸಂದರ್ಭ ದಲ್ಲಿಯೂ ದ್ವಿಗುಣಗೊಂಡಿದ್ದು ಪ್ರಸ್ತುತ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವುದರಲ್ಲಿ ಸಂದೇಹ ವಿಲ್ಲ.
ಬಿ-ಫಾರ್ಮ್ಗಾಗಿ ತೆರೆಮರೆಯ ಗುದ್ದಾಟಗಳಿಂದಾಗಿ ಮಾತೃ ಪಕ್ಷಗಳನ್ನು ತೊರೆದು ಅನ್ಯ ಪಕ್ಷಗಳನ್ನು ಸೇರುವಂತೆ ಮಾಡಿದರೆ, ನಿರೀಕ್ಷಿತ ಪಕ್ಷದ ಬಿ-ಫಾರ್ಮ್ ದೊರೆಯದವರು ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರಗಳನ್ನು ಸಲ್ಲಿಸಿ ದ್ದರು. ಆದರೆ, ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬಂಡೆದ್ದು, ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳನ್ನು ಮನವೊಲಿಸಿ, ಪಕ್ಷದ ನಿರ್ಣಯದಂತೆ ನಡೆದುಕೊಳ್ಳುವಂತೆ ಮಾತುಕತೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದರು.
ಆದರೆ, ಮಂಗಳವಾರ ನಡೆದ ನಾಮಪತ್ರ ಹಿಂಪಡೆಯುವಿಕೆ ಪ್ರಕ್ರಿಯೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಬಹುತೇಕರು ಯಾರ ಮಾತಿಗೂ ಮನ್ನಣೆ ನೀಡದೆ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಅಖಾಡದಲ್ಲಿ ಉಳಿಯಲು ತೀರ್ಮಾನಿಸಿದರು. ಪರಿಣಾಮ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಸೋಲು-ಗೆಲುವಿಗೆ ಸ್ವತಂತ್ರ ಅಭ್ಯರ್ಥಿಗಳ ಸ್ಪರ್ಧೆಕಾರಣವಾಗಲಿದೆ.
577 ನಾಮಪತ್ರಗಳ ಸಲ್ಲಿಕೆ: ಮಹಾನಗರ ಪಾಲಿಕೆಯ 82 ವಾರ್ಡ್ಗಳಿಗೆ ಒಟ್ಟು 577 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಕಾಂಗ್ರೆಸ್ 112, ಬಿಜೆಪಿ 121, ಜೆಡಿಎಸ್-55, ಎಎಪಿ-46, ಉತ್ತಮ ಪ್ರಜಾಕಿಯ-13, ಕರ್ನಾಟಕ ರಾಷ್ಟ್ರ ಸಮಿತಿ-6, ಎಐಎಂಐಎಂ-13, ಎಸ್ಡಿಪಿಐ-4, ಬಿಎಸ್ಪಿ-7, ಆರ್ಪಿಐ (ಎ)-4, ಭಾರತ ಕಮ್ಯುನಿಷ್ಠ್ ಪಾರ್ಟಿ-1, ಕರ್ನಾಟಕ ಶಿವಸೇನಾ-5, ಕರ್ನಾಟಕ ಜನಸೇನಾ ಶಕ್ತಿ-1, ಪಕ್ಷೇತರರು-189 ಜನ ಸೇರಿ ಒಟ್ಟು 577 ಅಭ್ಯರ್ಥಿ ಗಳು ನಾಮಪತ್ರ ಸಲ್ಲಿಸಿದ್ದರು.
ಅತ್ಯಂತ ಕಡಿಮೆ ನಾಮಪತ್ರ (2) ವಾರ್ಡ್ ಸಂಖ್ಯೆ೧೪ಕ್ಕೆ ಮತ್ತು ಅತಿ ಹೆಚ್ಚಿನ ನಾಮಪತ್ರಗಳು (16) ವಾರ್ಡ್ ಸಂಖ್ಯೆ-24 ಮತ್ತು 28ಕ್ಕೆ ಸಲ್ಲಿಕೆಯಾಗಿವೆ.
ಶೇ.33 ರಷ್ಟಿದ್ದ ಮಹಿಳಾ ಮೀಸಲಾತಿ ಪ್ರಮಾಣವನ್ನು ಈ ಬಾರಿ ಶೇ.50ಕ್ಕೆ ಏರಿಕೆ ಮಾಡಿದ್ದು, ಬದಲಾವಣೆಗೆ ಕಾರಣವಾಗಿದೆ. ಮಾಜಿ ಮೇಯರ್ಗಳಾದ ವೆಂಕಟೇಶ ಮೇಸ್ತ್ರಿ, ಪೂರ್ಣಾ ಪಾಟೀಲ, ನಾರಾಯಣ ಜರತಾರಘರ, ಸ್ಮಿತಾ ಜಾಧವ, ಲಕ್ಷ್ಮೀಬಾಯಿ ಬಿಜವಾಡ, ಮೇನಕಾ ಹುರಳಿ ಈ ಬಾರಿ ಸ್ಪರ್ಧಿಸುತ್ತಿಲ್ಲ.
2018-19ನೇ ಸಾಲಿನಲ್ಲಿ ಮೇಯರ್ ಆಗಿದ್ದ ಸುಧೀರ್ ಸರಾಫ್ ಕೆಲ ತಿಂಗಳ ಹಿಂದೆ ನಿಧನರಾಗಿದ್ದಾರೆ. ವೆಂಕಟೇಶ ಮೇಸ್ತ್ರಿ ಅವರು ಬಿಜೆಪಿಯಲ್ಲಿದ್ದಾಗ ಒಮ್ಮೆ ಮೇಯರ್ ಹಾಗೂ ಮತ್ತೊಮ್ಮೆ ಉಪ ಮೇಯರ್ ಆಗಿದ್ದರು. ಹಿಂದಿನ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಬಳಿಕ ಕಾಂಗ್ರೆಸ್ ಸೇರ್ಪಡೆಯಾದ
ಅವರು ಈ ಬಾರಿ ಬದಲಾವಣೆ ಮೀಸಲಾತಿಯ ಕಾರಣಕ್ಕೆ ಪತ್ನಿಗೆ (ಚಂದ್ರಿಕಾ ಮೇಸಿ) 56ನೇ ವಾರ್ಡ್ನಿಂದ ಸ್ಪರ್ಧಿಸಲು ಕೈ ಟಿಕೆಟ್ ಕೊಡಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ತಣ್ಣಗಾಗದ ಬಂಡಾಯ
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿನ ಟಿಕೆಟ್ ವಂಚಿತರ ಬಂಡಾಯದ ಬೇಗುದಿ ಜೋರಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದು, ಹಿನ್ನಡೆಯಾಗುವ ಅಭ್ಯರ್ಥಿಗಳ ವಾರ್ಡ್ಗೆ ಪರ್ಯಾಯ ಆಯ್ಕೆ ಮಾಡಿದ್ದಾರೆ. ಇದರಿಂದ ಕೆರಳಿ ಕೆಂಡವಾಗಿರುವ ಟಿಕೆಟ್ ವಂಚಿತ ಅಭ್ಯರ್ಥಿಗಳು ವಿರೋಧಿ ಪಾಳೆಯ ಸೇರಿಕೊಂಡು ಅಭ್ಯರ್ಥಿಗಳ ಸೋಲಿಗೆ ಹವಣಿಸುತ್ತಿದ್ದಾರೆ. ಆದರೆ, ಎರಡೂ ಪಕ್ಷಗಳ ಮುಖಂಡರುಗಳು ಸಾಕಷ್ಟು ಮನವೊಲಿಸುವ ಪ್ರಯತ್ನ ನಡೆಸಿದರೂ ಫಲ ನೀಡಿಲ್ಲ. ಹೀಗಾಗಿ ಬಂಡಾಯದ ಬೇಗುದಿ ಯಾರಿಗೆ ಒಲವಾಗುತ್ತೋ, ಯಾರಿಗೆ ಶಾಪವಾಗುತ್ತೋ ಎಂಬುದು ಚುನಾವಣಾ ಫಲಿತಾಂಶವೇ
ಉತ್ತರ ನೀಡಲಿದೆ.