Friday, 20th September 2024

ಮೂರ್ತಿ ತಯಾರಕರ ಬದುಕು ಬೀದಿಗೆ ಬೀಳದಿರಲಿ

ಗಣೇಶ ಹಬ್ಬಕ್ಕೆ ಕೇವಲ ಮೂರು ದಿನ ಬಾಕಿ ಇರುವಾಗ ರಾಜ್ಯ ಸರಕಾರವು ಮನೆಯಲ್ಲಿ 2 ಅಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಗಣೇಶ ಮೂರ್ತಿ ಇಡ ಬೇಕೆಂಬ ನಿರ್ಬಂಧ ಹೇರುವ ಮೂಲಕ ಮೂರ್ತಿ ತಯಾರಕರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ.

ರಾಜ್ಯದಲ್ಲಿ ಕಳೆದ 2 ತಿಂಗಳಿಂದ ಗಣೇಶ ಮೂರ್ತಿ ತಯಾರಕರು ಲಕ್ಷಾಂತರ ಮೂರ್ತಿಗಳನ್ನು ಮಾಡಿದ್ದಾರೆ. ಸರಕಾರ ಕೊನೆ ಕ್ಷಣದಲ್ಲಿ ಇಂತಹ ನಿರ್ಬಂಧ ಹೇರಿದರೆ ಅವರ ಸ್ಥಿತಿ ಏನಾಗಬೇಕು? ಸರಕಾರ ಇದನ್ನೇ ಎರಡು ಮೂರು ತಿಂಗಳ ಹಿಂದೆಯೇ ಹೇಳಿದ್ದರೆ, ಮೂರ್ತಿ ತಯಾರಕರು ದೊಡ್ಡ ಮೂರ್ತಿಗಳನ್ನು ಮಾಡುತ್ತಲೇ ಇರಲಿಲ್ಲ. ಕೋವಿಡ್ ಸಮಯದಲ್ಲಿ ಆದಾಯವಿಲ್ಲದಿದ್ದ ಗಣೇಶ ಮೂರ್ತಿ ತಯಾರಕರು, ತಮ್ಮ ಬಳಿ ಇದ್ದಬದ್ದ ಹಣ ಹಾಕಿ, ಸಾಲ ಮಾಡಿ ಮೂರ್ತಿ ಗಳನ್ನು ತಯಾರಿಸಿದ್ದಾರೆ. ಕೊನೆ ಗಳಿಗೆಯಲ್ಲಿ ಈ ನಿರ್ಬಂಧ ಹೇರಿದರೆ ಅವರು ಎಲ್ಲಿಗೆ ಹೋಗಬೇಕು? ಸರಕಾರ ಇದುವರೆಗೂ ಇವರಿಗೆ ನಯಾ ಪೈಸೆ ಕೋವಿಡ್ ಪರಿಹಾರ ಕೊಟ್ಟಿಲ್ಲ.

ಹೀಗಿರುವಾಗ ಈ ರೀತಿ ನಿರ್ಬಂಧ ಎಷ್ಟು ಸರಿ? ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನ ಸೇರಬಾರದು, ಮೆರವಣಿಗೆ ಮಾಡಬಾರದು ಎಂಬುದು ಸರಿ. ಆದರೆ ಗಣೇಶನ ಪ್ರತಿಮೆ 2-4 ಅಡಿಯೇ ಇರಬೇಕು ಎಂಬ ನಿರ್ಬಂಧದ ಹಿಂದೆ ಯಾವ ತರ್ಕ ಇದೆ? ಹಿಂದೂ ಸಂಸ್ಕೃತಿ ವಕ್ತಾರರು ಎಂದು ಹೇಳಿಕೊಳ್ಳುವವರು ಮಾಡುವ ಕೆಲಸ ಇದೇನಾ? ಸರಕಾರ ಅಂತಿಮ ಗಳಿಗೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದು ಕೊಂಡಿರುವುದರಿಂದ ಈಗ ಮಾಡಿರುವ ಮೂರ್ತಿಗಳನ್ನು ಏನು ಮಾಡ ಬೇಕು ಎಂಬ ಬಗ್ಗೆಯೂ ನಿರ್ಧಾರ ಪ್ರಕಟಿಸಲಿ.

ದೇವರ ಮೂರ್ತಿ ಮಾಡಿಕೊಂಡು ಜೀವನ ನಡೆಸುವವರ ಬದುಕು ನಿರ್ವಹಣೆ ಬಗ್ಗೆಯೂ ಯೋಚಿಸುವ ಮೂಲಕ ಸರಕಾರದ ಅವೈಜ್ಞಾನಿಕ ತೀರ್ಮಾನವನ್ನು ಹಿಂಪಡೆಯಬೇಕು ಅಥವಾ ಮೂರ್ತಿ ತಯಾರಕರಿಗೆ ಪರಿಹಾರ ನೀಡಬೇಕು.