Saturday, 23rd November 2024

ಶಾಸಕ ಸಾ.ರಾ. ಒತ್ತುವರಿ ಕೇಸ್‌ಗೆ ಹೊಸ ತಿರುವು

ಇನ್ನೂ ಮೊದಲ ಸರ್ವೆಯೇ ಮುಗಿದಿಲ್ಲ, ಆದರೂ ಮರು ಸರ್ವೆ ವಿವಾದವಾಗಿದ್ದು ಏಕೆ?

ಬೆಂಗಳೂರು: ಮೈಸೂರಿನ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರ ಸರಕಾರಿ ಜಾಗ ಒತ್ತುವರಿ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ಒತ್ತುವರಿ ಮರು ಸರ್ವೇ ವಿವಾದ ಆಗುತ್ತಿರುವ ಸಂದರ್ಭದಲ್ಲಿ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

ಸಾರಾ ವಿರುದ್ಧ ಕೇಳಿಬಂದಿರುವ ಒತ್ತುವರಿ ಕುರಿತ ಸರ್ವೆ ಕಾರ್ಯ ಒಂದು ಬಾರಿಯೂ ನಡೆದಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ. ಹಿಂದಿನ ಸರ್ವೆ ಕಾರ್ಯವೇ
ಮುಗಿಯದೆ ಒತ್ತುವರಿ ಪ್ರಕರಣದ ಮರು ಸರ್ವೇ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸರ್ವೆ ಇಲಾಖೆ ಸ್ಪಷ್ಟವಾಗಿ ಹೇಳುತ್ತಿದೆ. ಶಾಸಕ ಸಾ.ರಾ.ಮಹೇಶ್ ಅವರ ಕಲ್ಯಾಣ ಮಂಟಪ ಸೇರಿದಂತೆ ಅನೇಕ ಒತ್ತುವರಿಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಸರಕಾರ ಸರ್ವೆ ಕಾರ್ಯಕ್ಕೆ ಸೂಚಿಸಿತ್ತು. ಆದರೆ ಸರ್ವೆ ಕಾರ್ಯ ಮಾಡಿದಿ ರುವುದು ಕಲ್ಯಾಣಮಂಟಪದ ಒಂದು ಭಾಗದಲ್ಲಿ ಮಾತ್ರ. ಇನ್ನುಳಿದ ಒತ್ತುವರಿಗಳ ಸರ್ವೆ ಕಾರ್ಯ ಈಗಷ್ಟೇ ಆರಂಭವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೀಗಾಗಿ ಕಲ್ಯಾಣಮಂಟಪ ನಿರ್ಮಿಸುವಾಗ ರಾಜಕಾಲುವೆ ಒತ್ತುವರಿ ಆಗಿದೆಯೇ ಮತ್ತು ಮೂಡಾ ಜಾಗ ಕಬಳಿಕೆ ಆಗಿದೆಯೇ ಎನ್ನುವ ಬಗ್ಗೆ ಇನ್ನೂ ಸರ್ವೆ ಕಾರ್ಯವೇ ಮುಗಿದಿಲ್ಲ. ಇದಲ್ಲದೆ ಐದಾರು ಪ್ರಮುಖ ಒತ್ತುವರಿ ಗಳ ಬಗ್ಗೆ ಸರ್ವೆ ಕಾರ್ಯ ನಡೆಯುತ್ತಿದ್ದು, ತನಿಖೆ ಮಾಡಿ ವರದಿ ಸಲ್ಲಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ವಾಸ್ತವ ಕಥೆ?: ಟಿ.ಎಂ.ವಿಜಯಭಾಸ್ಕರ್ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಸರಕಾರಿ ಜಮೀನುಗಳ ಒತ್ತುವರಿ ಕುರಿತು ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ್ದ ಹಿಂದಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಒತ್ತುವರಿ ತೆರವು ಮಾಡಲು ಮುಂದಾಗಿದ್ದರು. ಆಗ ಸಾ.ರಾ. ಮಹೇಶ್ ಅವರ ಒತ್ತುವರಿ ಪುರಾಣ ಒಂದೊಂದಾಗಿ ಬಯಲಾಗುತ್ತಾ ಬಂದಿತ್ತು. ಇದಕ್ಕೆ ಮೈಸೂರಿನ ರಿಯಲ್ ಎಸ್ಟೇಟ್ ಕುಳಗಳು ಮತ್ತು ಅದನ್ನು ಅವಲಂಬಿಸಿರುವ ರಾಜಕೀಯ ನಾಯಕರು ರೋಹಿಣಿ ಸಿಂಧೂರಿ ವಿರುದ್ಧ ತಿರುಗಿಬಿದ್ದರು. ಏಕೆಂದರೆ ಸಾ.ರಾ.ಮಹೇಶ್ ರೀತಿ ಇತರ ರಿಯಲ್ ಎಸ್ಟೇಟ್ ಕುಳಗಳು ಮತ್ತು ರಾಜಕೀಯ ನಾಯಕರ ಪುರಾಣಗಳು ವರದಿಯಲ್ಲಿದ್ದವು.

ಹೀಗಾಗಿ ಪಕ್ಷಾತೀತವಾಗಿ ರೋಹಿಣಿ ಸಿಂಧೂರಿ ವಿರುದ್ಧ ಎಲ್ಲರೂ ತಿರುಗಿಬಿದ್ದು ಅವರ ವರ್ಗಾವಣೆಗೆ ಸರಕಾರದ ಮೇಲೆ ಒತ್ತಡ ಹಾಕಿದ್ದರು. ಈ ಮಧ್ಯೆ, ಸರ್ವೆ ಕಾರ್ಯದ ಹೊಣೆ ಹೊತ್ತಿದ್ದ ಪ್ರಾದೇಶಿಕ ಆಯುಕ್ತರಾದ ಜೆ.ಸಿ.ಪ್ರಕಾಶ್ ಅವರು ಸಾರಾ ಕಲ್ಯಾಣ ಮಂಟಪ ಒತ್ತುವರಿಯಾಗಿಲ್ಲ ಎಂದು ವರದಿ ಸಲ್ಲಿಸಿದ್ದರು. ನಂತರ ರಾಜ್ಯ ಸರ್ವೆ ಇಲಾಖೆ ಆಯುಕ್ತರಾದ ಮೌನೇಶ್ ಮೌದ್ಗಿಲ್ ಅವರು ಎಲ್ಲ ಒತ್ತುವರಿಗಳ ಸರ್ವೆ ಕಾರ್ಯ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಆದರೆ ಸರ್ವೆ
ಮುಗಿಸಿದ್ದರೂ ಆಯುಕ್ತರು ಮರು ಸರ್ವೇ ಕಾರ್ಯಕ್ಕೆ ಆದೇಶಿಸಬೇಕೆಂದು ವಿವಾದ ಮಾಡಲಾಗಿತ್ತು. ಇದನ್ನು ಬರಬೇಕೆಂದು ತಿಳಿದು ಸಿಟ್ಟಾಗಿದ್ದ ಮೈಸೂರು ಜಿ ಉಸ್ತುವಾರಿ ಸಚಿವ ಎಸ್ .ಟಿ.ಸೋಮಶೇಖರ್ ಅವರು ಮೌನೇಶ್ ಮೌದ್ಗಿಲ್ ಅವರ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.

ಈಗಾಗಲೇ ಮುಗಿದಿರುವ ಸರ್ವೆ ಕಾರ್ಯವನ್ನು ಮತ್ತೆ ನಡೆಸಲು ಅಽಕಾರ ಕೊಟ್ಟವರು ಯಾರು ಎಂದು ಪ್ರಶ್ನೆ ಮಾಡಿದ್ದರು. ಆದರೆ ಈ ಬಗ್ಗೆ ವಾಸ್ತವ ಪರಿಶೀಲನೆ ನಡೆಸಿದರೆ ಸಾರಾ ಕಲ್ಯಾಣ ಮಂಟಪ ಸೇರಿದಂತೆ ಎಲ್ಲ ರೀತಿಯ ಒತ್ತುವರಿಗಳ ಸರ್ವೆಕಾರ್ಯ ಇನ್ನೂ ಪೂರ್ಣವಾಗಿಯೇ ಇಲ್ಲ. ವಿಶೇಷವಾಗಿ ಸಾ.ರಾ.ಮಹೇಶ್ ಅವರ ಕಲ್ಯಾಣಮಂಟಪ ಸೇರಿದಂತೆ ಅವರು ಒತ್ತುವರಿ ಮಾಡಿದ್ದಾರೆ ಎನ್ನಲಾದ ಲಿಂಗಂಬುಽ ಪಾಳ್ಯ ಸೇರಿದಂತೆ ೧೧ ಸರ್ವೆ ನಂಬರ್ ಗಳಲ್ಲಿರುವ ಒತ್ತುವರಿ ಪ್ರಕರಣಗಳ ಸರ್ವೆ ಕಾರ್ಯ ನಡೆಯುತ್ತಿದೆ.

ಸಾರಾ ಮಹೇಶ್ ಆರೋಪದ ಹಿಂದೇನು?

ಸರ್ವೆ ಆಯುಕ್ತರು ಆಗ ೩೧ರಂದು ಒತ್ತುವರಿ ಸರ್ವೆ ಮಾಡುವಂತೆ ಆದೇಶ ನೀಡಿದ್ದರು. ಇದನ್ನು ಸೆ.೩ ರಂದು ಸಾ.ರಾ. ಮಹೇಶ್ ಅವರು ಸ್ವಾಗತಿಸಿ ಅಽಕಾರಿಯನ್ನು ಅಭಿನಂದಿಸಿದ್ದರು. ಆದರೆ ಸೆಪ್ಟೆಂಬರ್ ೫ರಂದು ಇದೇ ಸಾ.ರಾ.ಮಹೇಶ್ ಅವರು ಸರ್ವೇ ವಿರುದ್ಧ ಕಿಡಿಕಾರಿದ್ದರು. ಏಕೆಂದರೆ ಇದರಲ್ಲಿ ಕಲ್ಯಾಣ ಮಂಟಪ ಹಾಗೂ ಇತರ ಒತ್ತುವರಿ ಸರ್ವೆಗೆ ಆದೇಶಿಸಲಾಗಿತ್ತು. ನಂತರ ಸೆ.೬ ರಂದು ಸರ್ವೆ ಆಯುಕ್ತರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿ ಇದರಲ್ಲಿ ಯಾರನ್ನೂ ರಕ್ಷಿಸುತ್ತಿಲ್ಲ ಬದಲಾಗಿ ಅಪೂರ್ಣಗೊಂಡಿರುವ ಸರ್ವೆ ಕಾರ್ಯವನ್ನು ಮುಂದುವರಿಸುತ್ತಿದ್ದೇವೆ ಎಂದಷ್ಟೇ ಹೇಳಿದ್ದರು.

ಆದರೆ ತನಿಖೆಗೆ ಮೂಲ ಕಾರಣ ರೋಹಿಣಿ ಸಿಂಧೂರಿ ಎನ್ನುವ ನಿಟ್ಟಿನಲ್ಲಿ ಸಾ.ರಾ.ಮಹೇಶ್ ಅವರು ರೋಹಿಣಿ ಸಿಂಧೂರಿ ವಿರುದ್ಧ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಆರು ಕೋಟಿ ರು.ಗಳ ಅಕ್ರಮ ನಡೆದಿದೆ ಎಂದು ವರ್ಗಾವಣೆ ಆದ ಮೂರು ತಿಂಗಳ ನಂತರ ಆರೋಪ ಮಾಡಿದ್ದರು. ಅದರಲ್ಲೂ ರೋಹಿಣಿ ಸಿಂಧೂರಿ ಅವರು ಡಿಸಿಯಾಗಿ ಮುಂದುವರಿದಿದ್ದರೆ ೬ ಕೋಟಿ ಅಕ್ರಮ ನಡೆಯುತ್ತಿತ್ತು ಎಂದು ಊಹಾತ್ಮಕ ಆರೋಪ ಮಾಡಿzರೆ. ಏಕೆಂದರೆ ಬ್ಯಾಗ್ ಖರೀದಿ ಮತ್ತು ಬಿಲ್ ಪಾವತಿ ರೋಹಿಣಿ ಸಿಂಧೂರಿ ವರ್ಗಾವಣೆಯಾದ ೧೬ ತಿಂಗಳ ನಂತರ ನಡೆದಿದ್ದು. ಅದಕ್ಕೆ ಅವರನ್ನು ಹೊಣೆ ಮಾಡುವುದು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

***

ಸಾರಾ ಕಲ್ಯಾಣ ಮಂಟಪ ಸೇರಿದಂತೆ ಇನ್ನೂ ಅನೇಕ ಒತ್ತುವರಿ ಸರ್ವೆ ಕಾರ್ಯ ಪೂರ್ಣವೇ ಆಗಿಲ್ಲ. ಹೀಗಾಗಿ ಮರು ಸರ್ವೆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈಗಾಗಲೇ ಆದೇಶಿಸಿರುವ ಸರ್ವೆ ಕಾರ್ಯ ಮುಗಿದಿಲ್ಲ. ಆದ್ದರಿಂದ ಮತ್ತೆ ಏಕೆ ಸರ್ವೆ ಮಾಡಬೇಕು?

– ಮೌನೇಶ್ ಮೌದ್ಗಿಲ್, ಸರ್ವೆ ಇಲಾಖೆ ಆಯುಕ್ತರು