Sunday, 22nd December 2024

ಪ್ರತಿಭಟನೆಗಳ ಉದ್ದೇಶವಾದರೂ ಏನು?

ಸಾಲು ಸಾಲು ಪ್ರತಿಭಟನೆಗಳು ನಡೆದಷ್ಟು ಪ್ರತಿಭಟನೆಗಳು ಮಹತ್ವ ಕಳೆದುಕೊಳ್ಳುತ್ತವೆ. ಪ್ರತಿಷ್ಠೆಗೆ ನಡೆಸುವ ಪ್ರತಿಭಟನೆಗಳಿಂದ ಪ್ರತಿಭಟನೆಗಳಿಗಿರುವ ನಿಜವಾದ ಶಕ್ತಿಯೂ ಕ್ಷೀಣವಾಗುತ್ತದೆ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಬೀತಾಗುತ್ತಿದೆ. ಕೇಂದ್ರ ಸರಕಾರದ ಕೃಷಿ ಕಾಯಿದೆಗಳನ್ನು ವಿರೋಧಿಸಿ ರೈತರು ಭಾರತ್ ಬಂದ್‌ಗೆ ಕರೆ ನೀಡಿದ್ದು, ಉತ್ತರ ಭಾರತದಲ್ಲಿ ಪ್ರತಿಭಟನೆಯ ಉದ್ದೇಶ ತಕ್ಕಮಟ್ಟಿಗೆ ಯಶಸ್ವಿಯಾಗಿದೆ.

ಆದರೆ, ದಕ್ಷಿಣ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಪ್ರತಿಭಟನೆಯ ಕಾವು ಅಷ್ಟೊಂದು ಜೋರಾಗಿಲ್ಲ ಎಂಬುದು ಗೊತ್ತಾಗುತ್ತಿದೆ. ಮೊದಲೇ ಜನರು ಕರೋನಾ, ಲಾಕ್‌ಡೌನ್ ಕಾರಣಕ್ಕೆ ಆರ್ಥಿಕವಾಗಿ ತಲ್ಲಣ ಗೊಂಡಿದ್ದಾರೆ. ಈ ನಡುವೆ ಹೀಗೆ ಮೇಲಿಂದ ಮೇಲೆ ಬಂದ್‌ಗಳನ್ನು ಆಚರಿಸಿದರೆ ಅವರೆಲ್ಲರ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಇಂತಹ ಕಷ್ಟಗಳಿಂದಾಗಿಯೇ ಪ್ರತಿಭಟನೆ ನಡೆಸುವ ಉದ್ದೇಶ ಸರಿಯಾಗಿಯೇ ಇದ್ದರೂ, ಅದರ ಯಶಸ್ಸು ಸಾಧ್ಯವಾಗುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದು ಸಾಂವಿಧಾನಿಕ ಹಕ್ಕು.

ಪ್ರತಿಭಟನೆಯ ಉದ್ದೇಶಕ್ಕಿಂತ ಅಂದಿನ ಜೀವನ ನಿರ್ವಹಣೆಗೆ ಬಹುತೇಕ ಕಾರ್ಮಿಕ ವರ್ಗಕ್ಕೆ ಸವಾಲಿನ ದ್ದಾಗಿರುವ ಕಾರಣಕ್ಕೆ ಪ್ರತಿಭಟನೆ ಗಳಿಗೆ ಇತ್ತೀಚೆಗೆ ಅಷ್ಟೊಂದು ಮಹತ್ವ ಸಿಗುತ್ತಿಲ್ಲ ಎನ್ನಬಹುದು. ದಿನ ಹೋರಾಟಗಳಲ್ಲಿ ಅವರು ನಡೆದುಕೊಂಡ ರೀತಿಗಳನ್ನು ಕಂಡಿರುವ ಜನರು ಪ್ರತಿಭಟನೆಗೆ ಇತ್ತೀಚಿನ ದಿನಗಳಲ್ಲಿ ಅಷ್ಟೊಂದು ಮಹತ್ವ ನೀಡುತ್ತಿಲ್ಲ. ಇಂತಹ ಪ್ರತಿಭಟನೆಗಳನ್ನು ಆಯೋಜನೆ ಮಾಡುವ ಮೊದಲು ಆಯೋ ಜಕರು, ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಕೊಳ್ಳುವುದು ಕೂಡ ಅತ್ಯವಶ್ಯಕ. ಇಲ್ಲದಿದ್ದರೆ, ಪ್ರತಿಭಟನೆಗೆ ಮನ್ನಣೆ ಸಿಗುವುದು ಸಾಧ್ಯ ವಿಲ್ಲದ ಮಾತು ಎಂಬ ಸತ್ಯ ಅವರಿಗೆ ಇದೀಗ ಅರ್ಥವಾಗಿರಬಹುದು.

ಆಳುವ ಸರಕಾರದ ವಿರುದ್ಧ ಪ್ರತಿಭಟನೆ ಮಾಡುವುದು ತಪ್ಪಲ್ಲ. ಆದರೆ, ಸರಕಾರವನ್ನು ಟೀಕಿಸುವ ಉದ್ದೇಶದಿಂದ ಹೀಗೆ ಆಗಾಗ್ಗೆ ಪ್ರತಿಭಟನೆ ನಡೆಸುವ ಮೂಲಕ ಜನರ ಜೀವನದ ಜತೆಗೆ ಆಟವಾಡುವುದನ್ನು ಜನರು ಹೆಚ್ಚು ದಿನ ಸಹಿಸುವುದಿಲ್ಲ. ಬಡ ಮತ್ತು ಮಧ್ಯಮ ವರ್ಗದ ಬಹುತೇಕ ಜನರಿಗೆ ಅಂದಿನ ಜೀವನ ನಿರ್ವಹಣೆಯೇ ಮುಖ್ಯವಾಗಿರುವ ಕಾರಣ, ಇದಕ್ಕೆ ಅವರು ಮಹತ್ವ ನೀಡುತ್ತಾರೆ. ಹೀಗಾಗಿ, ಪ್ರತಿಭಟನೆಗಳು ಸಾರ್ವಜನಕರಿಗೆ ಉಪಟಳ ನೀಡುವ ಉಪದ್ರವ ಗಳಾಗದಿರಲಿ ಎಂಬುದು ಬಹುತೇಕರ ಆಶಯ. ಇದರ ಬಗ್ಗೆ ಪ್ರತಿಭಟನೆ ಆಯೋಜನೆ ಮಾಡುವವರು ಅರಿತುಕೊಳ್ಳುವುದು ಒಳಿತು.