Sunday, 5th January 2025

ಕರೋನಾ ಪರಿಹಾರ ಗೊಂದಲ ಮುಗಿಯಲಿ

ಕರೋನಾದಿಂದ ಮೃತಪಟ್ಟ ಮನೆಯ ಪ್ರಮುಖ ವ್ಯಕ್ತಿಯ ಕುಟುಂಬಕ್ಕೆ ಒಂದು ಲಕ್ಷ ರು. ನೀಡಲು ಸರಕಾರ ನಿರ್ಧರಿಸಿದ್ದು, ಆ ವಿಚಾರದಲ್ಲಿನ ದಿನಕ್ಕೊಂದು ಹೇಳಿಕೆ ಗಳು ಜನರಲ್ಲಿ ಗೊಂದಲ ಹುಟ್ಟಿಸಿವೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಬಿಎಸ್‌ವೈ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಕರೋನಾದಿಂದ ಕುಟುಂಬದ ದುಡಿಯುವ ವ್ಯಕ್ತಿ ಸಾವಿಗೀಡಾದರೆ, ಆತನ ಕುಟುಂಬಕ್ಕೆ ಒಂದು ಲಕ್ಷ ರು. ಪರಿಹಾರ ನೀಡುವ ನಿಟ್ಟಿನಲ್ಲಿ ತೀರ್ಮಾನಿಸಲಾಗಿತ್ತು. ಈ ಘೋಷಣೆ ಕೇವಲ ಹೇಳಿಕೆಯಾಗಿತ್ತೇ ಹೊರತು, ಅಧಿಕೃತವಾಗಿ ಯಾವು ದೇ ಆದೇಶವಾಗಿರಲಿಲ್ಲ. ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ ಕೆಲ ದಿನಗಳ ನಂತರ ಅನುದಾನ ಬಿಡುಗಡೆ ಮಾಡುವ ತೀರ್ಮಾನ ತೆಗೆದುಕೊಂಡು, ಯೋಜನೆಗೆ ಚಾಲನೆ ನೀಡಲು ಮುಂದಾಗಿದ್ದರು. ಆದರೆ, ಸುಪ್ರೀಂ ಕೋಟ್ ನ ಆದೇಶದಂತೆ ಕೇಂದ್ರ ಸರಕಾರ ಕರೋನಾದಿಂದ ಸಾವಿಗೀಡಾದ ಪ್ರತಿ ವ್ಯಕ್ತಿಯ ಕುಟುಂಬಕ್ಕೆ 50 ಸಾವಿರ ಪರಿಹಾರ ನೀಡಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿಂದಿನ ಸರಕಾರ ತೆಗೆದುಕೊಂಡಿದ್ದ ತೀರ್ಮಾನವನ್ನು ವಾಪಸ್ ಪಡೆಯಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿತ್ತು. ಆದರೆ, ನಂತರದಲ್ಲಿ ಸರಕಾರ ಮತ್ತೊಂದು ಅಧಿಕೃತ ಸುತ್ತೋಲೆ ಹೊರಡಿಸಿ, ಕೇಂದ್ರದ ಯೋಜನೆ ಜಾರಿಯಾದರೂ, ಕರ್ನಾಟಕ ಸರಕಾರ ಘೋಷಣೆ ಮಾಡಿದ ಪರಿಹಾರ ಪ್ರಸ್ತಾವವನ್ನು ಹಿಂದಿಕ್ಕೆ ಪಡೆಯುವುದಿಲ್ಲ ಎಂದು ಸ್ಪಷ್ಟನೆ ನೀಡಲಾಯಿತು. ಹೀಗೆ ಸರಕಾರ ದಿನದಿಂದ ದಿನಕ್ಕೆ ಈ ರೀತಿ ವಿವಿಧ ತೀರ್ಮಾನ ತೆಗೆದು ಕೊಂಡಿದ್ದು, ಈ ಪರಿಹಾರ ಧನ ಪಡೆಯುವ ಫಲಾನುಭವಿಗಳನ್ನು ಗೊಂದಲಕ್ಕೀಡು ಮಾಡಿದೆ. ಸರಕಾರ ತನ್ನ ನಿಲುವನ್ನು ಸರಿಯಾಗಿ ತಿಳಿಸಿ, ಜನರಿಗೆ ಸರಿಯಾದ ಮಾಹಿತಿ ನೀಡುವುದು ಸೂಕ್ತ. ಜತೆಗೆ, ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಎಲ್ಲಿ, ಹೇಗೆ, ಯಾವ ರೀತಿಯಲ್ಲಿ ಕ್ರಮವಹಿಸಬೇಕು ಎಂಬ ಗೊಂದಲ ಮುಂದುವರಿದಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಅರ್ಜಿ ಸಲ್ಲಿಕೆ ಎನ್ನಲಾಗುತ್ತಿದ್ದು, ಎಸ್‌ಆರ್‌ಎಫ್ ಐಡಿ, ಕರೋನಾ ದೃಢೀಕರಣ ಪತ್ರ ಸೇರಿದಂತೆ ಇನ್ನಿತರ ಗೊಂದಲಗಳು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿವೆ. ಸರಕಾರ ಇದಕ್ಕೆಲ್ಲ ಕಡಿವಾಣ ಹಾಕಿ, ಇದಕ್ಕೊಂದು ಸೂಕ್ತ ನಿಯಮಾವಳಿ ರೂಪಿಸಿ, ಜನರಲ್ಲಿನ ಗೊಂದಲಗಳನ್ನು ನಿವಾರಣೆ ಮಾಡಬೇಕಿದೆ. ಸರಿಯಾದ ಫಲಾನುಭವಿಗಳಿಗೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸರಕಾರ ಕ್ರಮವಹಿಸಬೇಕಿದೆ.

Leave a Reply

Your email address will not be published. Required fields are marked *