Monday, 25th November 2024

ಬಣ್ಣದ ಕನಸಿನ ಕಥೆ ಗುಲಾಲ್‌.ಕಾಂ

ಯುವಜನರು ಜೀವನದಲ್ಲಿ ಹಾಗಾಗಬೇಕು, ಇಂತಹ ಸಾಧನೆ ಮಾಡಬೇಕು ಎಂದು ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿ  ಕೊಂಡಿರುತ್ತಾರೆ. ಆದರೆ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸರಿ ದಾರಿ ಕಾಣದೆ, ಕೆಲವೊಮ್ಮೆ ಅಡ್ಡ ದಾರಿ ಹಿಡಿಯು ತ್ತಾರೆ. ಇದರಿಂದ ಎದುರಾಗುವ ಕಷ್ಟ ಒಂದೆರಡಲ್ಲ. ಅದನ್ನು ಅನುಭವಿಸಿದವರಿಗೆ ಗೊತ್ತು. ಇಂತಹದ್ದೇ ಕಥೆಯನ್ನು ಆಧರಿಸಿ ಗುಲಾಲ್.ಕಾಂ ಚಿತ್ರ ಸಿದ್ಧವಾಗಿದೆ.

ಗುಲಾಲ್.ಕಾಂ ಶೀರ್ಷಿಕೆ ಕೇಳಿದಾಕ್ಷಣ ಇದು ಸೈಬರ್ ಕ್ರೈಂ ಕಥೆಯ ಚಿತ್ರವೇ ಅನ್ನಿಸ ಬಹುದು. ಆದರೆ ಕನಸು ಕಟ್ಟಿಕೊಂಡು ನಗರಕ್ಕೆ ಬರುವ ಹಳ್ಳಿ ಹುಡುಗರ ಸಿನಿಮಾ. ಹಳ್ಳಿ ಯಲ್ಲಿ ಹುಟ್ಟಿ ಬೆಳೆದ ಹುಡುಗರು ಸಿನಿಮಾ ಆಸೆಯಿಂದ ಪಟ್ಟಣ ಸೇರಿ ಕೆಟ್ಟು ಮತ್ತೆ ಊರು ಸೇರುವ ವ್ಯಥೆ ಈ ಚಿತ್ರದಲ್ಲಿದೆ. ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಶಿವು ಜಮಖಂಡಿ ಈ ಚಿತ್ರವನ್ನು ತೆರೆಗೆ ತಂದಿದ್ದಾರೆ.

ಬಣ್ಣ ಲೋಕ್ಕೆ ಮಾರು ಹೋದವರು: ಕಾಸು ಇದ್ದರೆ ಕನಸು ಅನ್ನುವ ಈ ಕಾಲದಲ್ಲಿ ಆರು ಜನ ಸ್ನೇಹಿತರು ಸೇರಿ ಸಿನಿಮಾ ಮಾಡಬೇಕು ಎಂದು ನಿರ್ಧರಿಸುತ್ತಾರೆ. ಸಿನಿಮಾದ ಹುಚ್ಚೇನೋ ಇವರಿಗಿದೆ. ಆದರೆ ಸಿನಿಮಾ ನಿರ್ಮಾಣ, ನಿರ್ದೇಶನದ ಬಗೆ ಹೇಗೆ, ಅದಕ್ಕೆ ದಾರಿ ಯಾವುದು ಎಂಬುದೇ ಇವರಿಗೆ ತಿಳಿದಿರುವುದಿಲ್ಲ. ಆದರೂ ಸಿನಿಮಾ ಮಾಡಲೇಬೇಕು ಎಂಬ ಆಸೆಯಿಂದ ಹುಟ್ಟಿದ ಹಳ್ಳಿಯನ್ನು ಬಿಟ್ಟು ದೂರದ ಊರಿಗೆ ಬರುತ್ತಾರೆ. ಇಲ್ಲಿ ಬಂದ ಮೇಲೆ ಬಣ್ಣದ ಜಗತ್ತಿನ ಸಂಕಷ್ಟ ತಿಳಿಯುತ್ತದೆ. ನಿರ್ದೇಶಕರ ಹುಡುಕಾಟ, ನಿರ್ಮಾಪಕರ ಮನೆ ಬಾಗಿಲಿಗೆ ಅಲೆದಾಟ ಇವೆಲ್ಲವೂ ಈ ಹುಡುಗರನ್ನು ಸಾಕಪ್ಪ ಸಾಕು ಈ ಸಹವಾಸ ಅನ್ನಿಸಿ ಬಿಡುತ್ತದೆ.

ಅಡ್ಡದಾರಿ ಹಿಡಿದ ಹುಡುಗರು: ಸಿನಿಮಾ ಹಾಗಿರಲಿ, ಹಳ್ಳಿಗೆ ಹಿಂತಿರುಗುವ ಮೊದಲು ಕೈ ತುಂಬಾ ಹಣ ಸಂಪಾದನೆ ಮಾಡ ಬೇಕು ಅಂದುಕೊಳ್ಳುತ್ತಾರೆ. ಇದೇ ಸಮಯದಲ್ಲಿ ನಾಯಕನ ಸ್ನೇಹಿತನೊಬ್ಬ ಒಂದು ವೆಬ್ ಸೈಟ್‌ನಲ್ಲಿ ಕೆಲಸ ಮಾಡಿದರೆ ಕೈ ತುಂಬ ಹಣ ಸಂಪಾದಿಸಬಹುದು ಎಂಬ ಉಪಾಯ ನೀಡುತ್ತಾನೆ. ಎಲ್ಲರೂ ಇದಕ್ಕೆ ಒಲ್ಲದ ಮನಸಿನಿಂದಲೇ ಒಪ್ಪುತ್ತಾರೆ. ಈ ಕೆಲಸದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಅಷ್ಟಕ್ಕೂ ಏನದು ಗುಲಾಲ.ಕಾಂ ಎಂಬುದೇ ಚಿತ್ರದ ಸಾರಾಂಶ. ಅದಕ್ಕಾಗಿಯೇ ಅಡ್ಡದಾರಿ ಅಪಾಯಕಾರಿ ಎನ್ನುವ ಸಂದೇಶವನ್ನು ಚಿತ್ರದಲ್ಲಿ ಹೇಳಲಾಗಿದೆ.