ಪ್ರಶಾಂತ್ ಟಿ.ಆರ್
ನೆನಪಿರಲಿ ಚಿತ್ರದ ಮೂಲಕ ಪ್ರೇಮ್, ಲವ್ಲಿ ಸ್ಟಾರ್ ಆಗಿ ಹೊರಹೊಮ್ಮಿದರು. ಆ ಬಳಿಕ ಅಂತಹದ್ದೆ ಪಾತ್ರದಲ್ಲಿ ಪ್ರೇಮ್ ಅವರನ್ನು ಕಣ್ತುಂಬಿಕೊಳ್ಳಬೇಕು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆ ರೀತಿಯ ಕಥೆ ಸಿಗಲೇ ಇಲ್ಲ. ಅಂತೂ ಬಹು ವರ್ಷಗಳ ಬಳಿಕ ಪ್ರೇಮ್, ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ಮಿಂಚಲಿದ್ದಾರೆ. ಇದು ಪ್ರೇಮ್ ಅಭಿನಯದ 25 ನೇ ಸಿನಿಮಾ ಎನ್ನುವುದು ವಿಶೇಷ. ಹಾಗಾಗಿ ಪ್ರೇಮ್‌ಗೆ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿವೆ. ಪ್ರೇಮಂ ಪೂಜ್ಯಂ ತೆರೆಯಲ್ಲಿ ಹೊಸ ಪ್ರೇಮ ಕಾವ್ಯ ಬರೆಯು ವುದು ಖಚಿತವಾಗಿದೆ. ತಮ್ಮ 25ನೇ ಚಿತ್ರದ ಬಗ್ಗೆ ಪ್ರೇಮ್ ವಿ.ಸಿನಿಮಾಸ್ ನೊಂದಿಗೆ ಮನದಾಳ ಹಂಚಿಕೊಂಡಿದ್ದಾರೆ.
ವಿ.ಸಿ: ಬಹು ವರ್ಷಗಳ ಬಳಿಕ ಲವ್ವರ್ ಬಾಯ್ ಆಗಿ ಕಾಣಿಸಿಕೊಳ್ಳು ತ್ತಿದ್ದೀರ, ಈ ಚಿತ್ರದಲ್ಲಿ ಅಂತಹ ವಿಶೇಷ ಏನಿದೆ?
ಪ್ರೇಮ್ : ನಾನು ಈ ಹಿಂದೆ 80ಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದೆ. ಯಾವುದೂ ನನ್ನ ಮನಸಿಗೆ ಹಿಡಿಸಲಿಲ್ಲ. ಹಾಗಾಗಿ 24ನೇ ಚಿತ್ರದ ಬಳಿಕ ಸಿನಿಮಾ ಮಾಡವುದನ್ನೇ ನಿಲ್ಲಿಸೋಣ ಎಂದು ಚಿಂತಿಸಿದ್ದೆ. ಆ ಸಮಯದಲ್ಲಿ ಡಾ.ರಾಘವೇಂದ್ರ ಬಂದು ಕಥೆ ಯೊಂದನ್ನು ಹೇಳಿದರು. ಕಥೆ ಕೇಳುತ್ತಾ… ಬಲು ಇಂಟ್ರೆಸ್ಟಿಂಗ್ ಅನ್ನಿಸಿತು. ಕಥೆ ಸಂಪೂರ್ಣ ಕೇಳಿದ ಮೇಲೆ ನಾನು ಭಾವುಕ ನಾಗಿದ್ದೆ. ಕಾರಣ ಅಂತಹ ಕಂಟೆಂಟ್ ಚಿತ್ರದಲ್ಲಿತ್ತು. ಈ ಚಿತ್ರದಲ್ಲಿ ನಟಿಸಲೇಬೇಕು ಅನ್ನಿಸಿತು. ಸಿನಿಮಾದಲ್ಲಿ ಅಭಿನಯಿಸು ವುದಾಗಿ ನಿರ್ದೇಶರಿಗೆ ಮಾತುಕೊಟ್ಟೆ. ಅದರಂತೆ ಹುಮ್ಮಸಿನಿಂದಲೇ ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಅಂದುಕೊಂಡಂತೆ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ. ಒಳ್ಳೆಯ ಸಿನಿಮಾದಲ್ಲಿ ನಟಿಸಿರುವ ಸಂತೃಪ್ತಿ ನನಗಿದೆ.
ವಿ.ಸಿ: ಇದು ನಿಮ್ಮ ಇಪ್ಪತ್ತೈದನೆ ಸಿನಿಮಾ ಎನ್ನುವುದು ವಿಶೇಷ, ನಿಮ್ಮ ಪಾತ್ರದ ಬಗ್ಗೆ ಹೇಳುವುದಾದರೆ ?
ಪ್ರೇಮ್ : ಹೌದು, ಪ್ರೇಮಂ ಪೂಜ್ಯಂ ನನ್ನ ಇಪ್ಪತ್ತೈದನೆ ಸಿನಿಮಾ ಎಂದು ಹೇಳಿ ಕೊಳ್ಳಲು ಹೆಮ್ಮೆ ಎನ್ನಿಸುತ್ತದೆ. ಯಾವ ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದ ನಾನು, ಚಂದನವನದಲ್ಲಿ ಇಪ್ಪತ್ತೈದು ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂದರೆ ಅದು ಖುಷಿಯ ವಿಚಾರವೆ. ಚಿತ್ರದಲ್ಲಿ ನನ್ನದು ಶ್ರೀಹರಿಯ ಪಾತ್ರ. ಶ್ರೀಹರಿ ಸ್ನೇಹಕ್ಕೆ ಪ್ರಾಣ ಕೊಡುವ ಸ್ನೇಹಜೀವಿ. ಮನಕೊಪ್ಪಿದಾಕೆ ಯನ್ನು ಆರಾಧಿಸುವ ಆದರ್ಶ ವ್ಯಕ್ತಿ. ಈ ಪಾತ್ರ ನಿಜಕ್ಕೂ ನನಗೆ ಸಂತಸ ತಂದಿದೆ. ಇನ್ನೂ ವಿಶೇಷ ಎಂದರೆ ಈ ಚಿತ್ರದಲ್ಲಿ ನಾನು ಏಳು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರು ಎಲ್ಲರಿಗೂ ಮೆಚ್ಚುಗೆಯಾಗುವಂತೆ ಈ ಪಾತ್ರವನ್ನು ಸೃಷ್ಟಿಸಿದ್ದಾರೆ. ಅವರ ಕ್ರಿಯಾಶೀಲತೆಯನ್ನು ಮೆಚ್ಚಲೇಬೇಕು.
ವಿ.ಸಿ : ಪ್ರೀತಿ, ಪ್ರೇಮ ಕಥಾಹಂದರದ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಈ ಸಿನಿಮಾದಲ್ಲಿ ಹೊಸತೇನನ್ನು ನಿರೀಕ್ಷಿಸಬಹುದು?
ಪ್ರೇಮ್ : ಚಿತ್ರದ ಶೀರ್ಷಿಕೆ ಪ್ರೇಮಂ ಪೂಜ್ಯಂ. ಅಂತೆಯೇ ಪ್ರೀತಿಯನ್ನು ಆರಾಧಿಸುವ ಕಥೆ ನಮ್ಮ ಚಿತ್ರದಲ್ಲಿದೆ. ಪ್ರೀತಿ ಕೇವಲ ಯುವಕ, ಯುವತಿಯರಿಗೆ ಮಾತ್ರ ಸೀಮಿತವಲ್ಲ. ತಂದೆ- ತಾಯಿಯ ಅಣ್ಣ- ತಂಗಿಯರಲ್ಲೂ ಪ್ರೀತಿ ಮೂಡುತ್ತದೆ, ಪ್ರೀತಿಗೆ ಪೂಜ್ಯ ಭಾವನೆ ಇದೆ. ಅದನ್ನೇ ಚಿತ್ರದಲ್ಲಿ ಹೇಳಿದ್ದೇವೆ. ಅಷ್ಟೇ ಅಲ್ಲ ಚಿತ್ರದಲ್ಲಿ ಸ್ನೇಹಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದು, ಸ್ನೇಹಂ ಪೂಜ್ಯಂ
ಎಂಬುದನ್ನು ಸಾರಿದ್ದೇವೆ. ಚಿತ್ರದ ಕಥೆಗೆ ತಕ್ಕಂತೆ ಸಂಗೀತ ಮೂಡಿಬಂದಿದ್ದು, ಒಂದರ್ಥ ದಲ್ಲಿ ಇದನ್ನು ಮ್ಯೂಸಿಕಲ್ ಜರ್ನಿ ಎನ್ನಬಹುದು. ಇದರ ಜತೆಗೆ ಛಾಯಾಗ್ರಹಣ ಮತ್ತಷ್ಟು ಮೆರುಗು ತಂದಿದೆ.
ಚಂದನವನಕ್ಕೆ ಬಂದ ಬೃಂದಾ
ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ನವ ನಟಿ ಬೃಂದಾ ಆಚಾರ್ಯ ಚಂದನವನಕ್ಕೆ ಎಂಟ್ರಿಕೊಟ್ಟಿದ್ದಾರೆ. ನಟಿಯಾಗಬೇಕು ಎಂಬ ತಮ್ಮ ಬಹು ದಿನಗಳ ಕನಸನ್ನು ಈ ಚಿತ್ರದ ಮೂಲಕ ನನಸು ಮಾಡಿಕೊಂಡಿದ್ದಾರೆ. ಚೊಚ್ಚಲ ಚಿತ್ರದ ಬಗ್ಗೆ ಭರವಸೆ ಹೊಂದಿದ್ದಾರೆ. ಪ್ರೇಮಂ ಪೂಜ್ಯಂ ಪ್ರೀತಿಯಿಂದ ಮೂಡಿಬಂದಿರುವ ಚಿತ್ರ. ಮಾತ್ರವಲ್ಲ ನನ್ನಲ್ಲಿ ಹೊಸತನವನ್ನು ಹೊತ್ತು ತಂದಿರುವ ಸಿನಿಮಾ. ಪ್ರೇಮ್ ಅವರ ಇಪ್ಪತ್ತೈದನೇ ಚಿತ್ರಕ್ಕೆ ನಾಕಿಯಾಗಿದ್ದೇನೆ ಎಂಬ ಹೆಮ್ಮೆ ನನಗಿದೆ. ನನ್ನ ಮೊದಲ ಸಿನಿಮಾ ವಿದು ಅದನ್ನು ಬೆಳ್ಳಿಪರದೆಯಲ್ಲಿ ನೋಡಬೇಕು ಎಂಬ ಸಂಭ್ರಮದಲ್ಲಿದ್ದೇನೆ. ಪ್ರೇಕ್ಷಕರು ಸಿನಿಮಾವನ್ನು ನೋಡಿ ಮೆಚ್ಚುತ್ತಾರೆ ಎಂಬ ನಂಬಿಕೆ ನನಗಿದೆ. ಈ ಸಿನಿಮಾದ ಕಥೆ ಕೇಳಿದ ಮೇಲೆ ಅದರಲ್ಲೇ ನಾನು ಮುಳುಗಿದ್ದೆ. ಚಿತ್ರೀಕರಣ ಶುರುವಾದ ಮೇಲಂತು ಪ್ರತಿನಿತ್ಯ ಅದೇ ಕನವರಿಕೆ.
ನಿರ್ದೇಶಕರು ಚಿತ್ರದ ಸಂಭಾಷಣೆಯನ್ನು ಹಿಂದಿನ ದಿನವೇ ವಾಯ್ಸ್ ಮೇಲ್‌ನಲ್ಲಿ ಕಳುಹಿಸುತ್ತಿದ್ದರು. ಅದನ್ನು ಹತ್ತಾರು ಬಾರಿ ಪ್ರಾಕ್ಟಿಸ್ ಮಾಡಿ ಶೂಟಿಂಗ್‌ಗೆ ಹಾಜರಾಗುತ್ತಿದ್ದೆ. ನಾನು ನನ್ನ ಪಾತ್ರಕ್ಕೆ ಎಷ್ಟು ಇನ್ವಾಲ್ ಆಗಿದ್ದೆ ಎಂದರೆ, ಚಿತ್ರೀಕರಣ ಮುಗಿದ ಮೇಲೂ ಶೂಟಿಂಗ್ ಸ್ಥಳಕ್ಕೆ ಬಂದು ಡೈಲಾಗ್ ಹೇಳುತ್ತಿದ್ದೆ. ಈ ಚಿತ್ರದಲ್ಲಿ ನಾನು ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಒಂದು ಶೇಡ್‌ನಿಂದ ಮತ್ತೊಂದು ಶೇಡ್‌ಗೆ ತಯಾರಾಗಲು ಒಂದಷ್ಟು ದಿನ ಹಿಡಿಯುತ್ತಿತ್ತು. ಆ ಬಳಿಕವೇ ಚಿತ್ರೀಕರಣ ಮಾಡು ತ್ತಿದ್ದುದು, ಹಾಗಾಗಿ ಸನ್ನಿವೇಶಕ್ಕೆ ತಕ್ಕಂತೆ ತಯಾರಾಗಲು ಸಾಕಷ್ಟು ಅವಕಾಶವೂ ಸಿಕ್ಕಿತು. ನಮ್ಮದು ಕ್ರಿಯೇಟಿವಿಟಿ ತಂಡ, ಹಾಗಾಗಿಯೇ ಚಿತ್ರದಲ್ಲಿ ಒರಿಜಿನಾಲಿಟಿ ಇದೆ ಎನ್ನುತ್ತಾರೆ ಬೃಂದಾ.