Monday, 25th November 2024

ಗೋವಿಂದ ಗೋವಿಂದ ಎಂದ ಸುಮಂತ್ ಶೈಲೇಂದ್ರ

ಎರಡು ತಿಂಗಳಿಂದ ಇತ್ತೀಚೆಗೆ ಹಲವು ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬಂದಿವೆ. ಆಕ್ಷನ್, ಸಸ್ಪೆನ್ಸ್ ಜಾನರ್‌ನಲ್ಲಿಯೇ ಹೆಚ್ಚು
ಸಿನಿಮಾಗಳು ರಿಲೀಸ್ ಆಗಿವೆ. ಈಗ ಕಾಮಿಡಿ ಕಥೆಯ ಗೋವಿಂದ ಗೋವಿಂದ ಚಿತ್ರ ತೆರೆಗೆ ಬಂದಿದ್ದು, ಪ್ರೇಕ್ಷಕರನ್ನು ನಗಿಸುತ್ತಿದೆ.

ಈ ಹಿಂದೆ ಹಲವು ಸಿನಿಮಾಗಳಲ್ಲಿ ಆಕ್ಷನ್ ಲುಕ್‌ನಲ್ಲಿ ಮಿಂಚಿ ಗಮನ ಸೆಳೆದ ಸುಮಂತ್ ಶೈಲೇಂದ್ರ ಈ ಚಿತ್ರದಲ್ಲಿ ಕಾಮಿಡಿ ಮೂಲಕ ಕಮಾಲ್ ಮಾಡಿದ್ದು, ಅದಕ್ಕಾಗಿಯೇ ಹೊಸ ಅವತಾರ ತಾಳಿದ್ದಾರೆ. ಸುಮಂತ್ ನಟನಾ ಜೀವನದಲ್ಲಿಯೇ ಗೋವಿಂದ ಗೋವಿಂದ ಮಹತ್ವದ ಮೈಲುಗಲ್ಲಾಗಲಿದ್ದು, ತಮ್ಮ ಚಿತ್ರದ ಬಗ್ಗೆ ಸುಮಂತ್ ವಿ.ಸಿನಿ ಮಾಸ್‌ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

ವಿ.ಸಿನಿಮಾಸ್: ಮತ್ತೆ ಕಾಮಿಡಿ ಮೂಲಕ ಕಮಾಲ್ ಮಾಡಲು ಬಂದಿದ್ದೀರ ನಿಮ್ಮ ಪಾತ್ರದ ಬಗ್ಗೆ ಹೇಳುವುದಾದರೆ?
ಸುಮಂತ್: ಗೋವಿಂದ ಗೋವಿಂದ ಹೆಸರೇ ಹೇಳುವಂತೆ ಇದು ಕಾಮಿಡಿ ಕಥೆಯ ಸಿನಿಮಾ. ತಿರುಪತಿ ಎಕ್ಸ್‌ಪ್ರೆಸ್ ಬಳಿಕ ಮತ್ತೆ ನಾನು ಕಾಮಿಡಿ ಸಿನಿಮಾದ ಮೂಲಕ ತೆರೆಗೆ ಬಂದಿದ್ದೇನೆ. ಇಲ್ಲಿ ನಾನು ಕಾಲೇಜು ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಉತ್ತರ ಕರ್ನಾಟಕ ಭಾಗದ ಕಾಲೇಜು ಕಥೆ ಚಿತ್ರದಲ್ಲಿ ಮಿಳಿತವಾಗಿದೆ. ಹಳ್ಳಿಗಾಡಿನ ವಿದ್ಯಾರ್ಥಿಗಳು ಹೇಗಿರುತ್ತಾರೆ, ಎಂಬುದನ್ನು
ಚಿತ್ರ ದಲ್ಲಿ ನೋಡಬಹುದು. ವಿದ್ಯಾರ್ಥಿಗಳ ಬದುಕು, ಸ್ನೇಹಿತರ ಜತೆಗಿನ ಮೋಜು ಮಸ್ತಿ ಎಲ್ಲವೂ ತೆರೆಯಲ್ಲಿ ನಗಿಸುತ್ತದೆ. ಈ ಚಿತ್ರದಲ್ಲಿ ಸ್ಕೂಟರ್ ಕೂಡ ಪ್ರಮುಖ ಪಾತ್ರವೇ ಆಗಿದೆ. ಅದೊಂದು ಹಳೆಯ ಬೈಕ್. ನಾನು ನನ್ನ ಸ್ನೇಹಿತರು ಅದೇ ಬೈಕಿನಲ್ಲಿ ಪ್ರವಾಸಕ್ಕೆ ತೆರಳುತ್ತೇವೆ, ಆ ವೇಳೆ ಕೈಕೊಡುವ ಬೈಕ್, ಅದರಿಂದ ಎದುರಾಗುವ ಪಜೀತಿ ಇವೆಲ್ಲವೂ ಚಿತ್ರದಲ್ಲಿ ಅಡಕವಾಗಿವೆ.
ಅದೆಲ್ಲವನ್ನು ಚಿತ್ರದಲ್ಲಿ ನೋಡುತ್ತಿದ್ದರೆ ನಗು ಉಕ್ಕಿ ಬರುತ್ತದೆ.

ವಿ.ಸಿ : ಚಿತ್ರಕ್ಕಾಗಿ ನಿಮ್ಮ ತಯಾರಿ ಹೇಗಿತ್ತು?
ಸುಮಂತ್: ರವಿ.ಆರ್.ಗರಣಿ ಅವರು ಚಿತ್ರದ ಕಥೆ ಹೇಳಿದರು. ಕಥೆ ಕೇಳಿ ನನಗೂ ತುಂಬಾ ಇಷ್ಟವಾಯಿತು. ನಾನು ಬೇರೆ ನಟನನ್ನು ಚಿತ್ರಕ್ಕಾಗಿ ಕರೆತರಬೇಕು ಎಂದುಕೊಂಡಿದ್ದೆ. ಆದರೆ ಈ ಚಿತ್ರದಲ್ಲಿ ನೀವೆ ನಾಯಕನಾಗಿ ನಟಿಸಬೇಕು ಎಂದು ರವಿ ಗರಣಿ ಹೇಳಿದರು. ಈ ಪಾತ್ರದಲ್ಲಿ ನಟಿಸುವುದು ಹೇಗೆ ಎಂಬ ಪ್ರಶ್ನೆ ನನ್ನಲ್ಲೇ ಕಾಡಿತು. ಯಾಕೆಂದರೆ ಈ ಚಿತ್ರದಲ್ಲಿ ಕಾಲೇಜು ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ನಾನು ಸ್ವಲ್ಪ ದಪ್ಪಗಿದ್ದೆ. ಅಂತೂ ರವಿ ಗರಣಿ ಅವರ ಮಾತಿನಂತೆ ನಟಿಸಲು ಒಪ್ಪಿದೆ. ಅದಕ್ಕಾಗಿ ಆರು ತಿಂಗಳ ಕಾಲಾವಕಾಶ ಪಡೆದೆ. ನನ್ನನ್ನು ಹೈದರಾಬಾದ್‌ಗೆ ಕರೆದುಕೊಂಡು ಹೋಗಿ ಕೇಶ ವಿನ್ಯಾಸ ಮಾಡಿಸಿದರು. ವರ್ಕ್‌ಔಟ್ ಮಾಡಿ ಹದಿನಾಲ್ಕು ಕೆ.ಜಿ ತೂಕ ಇಳಿಸಿಕೊಂಡೆ. ಅಂತು ನಟಿಸಲು ಸಿದ್ಧನಾದೆ.

ವಿ.ಸಿ : ಈ ಹಿಂದೆಯೇ ಸಾಕಷ್ಟು ಕಾಮಿಡಿ ಕಥೆಗಳು ಬಂದಿವೆ. ಈ ಚಿತ್ರದಲ್ಲಿ ಏನು ವಿಶೇಷವಿದೆ ?
ಸುಮಂತ್: ಗೋವಿಂದ ಗೋವಿಂದ ಕಂಪ್ಲೀಟ್ ಕಾಮಿಡಿ ಸಿನಿಮಾ. ಉತ್ತರ ಕರ್ನಾಟಕದ ಸೊಗಡಿನ ಸಂಭಾಷಣೆ ಚಿತ್ರದಲ್ಲಿರು ವುದು ವಿಶೇಷ. ಆದರೆ ಎಲ್ಲಿಯೂ ಅಶ್ಲೀಲ ಪದಗಳನ್ನು ಬಳಸಿಲ್ಲ. ದೃಶ್ಯಗಳೂ ಇಲ್ಲ. ಹಾಗಾಗಿಯೇ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು ಪ್ರಮಾಣ ಪತ್ರ ನೀಡಿದೆ. ಕಾಮಿಡಿಯ ಜತೆಗೆ ಕೌಟುಂಬಿಕ ಕಥೆಯೂ ಚಿತ್ರದಲ್ಲಿದ್ದು, ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡಬಹುದಾಗಿದೆ.

ವಿ.ಸಿ : ಚಿತ್ರದ ಬಗ್ಗೆ ನಿರೀಕ್ಷೆ ಹೇಗಿದೆ?
ಸುಮಂತ್: ನಮ್ಮ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ನಾನು ಪ್ರತಿ ಚಿತ್ರದಲ್ಲಿಯೂ ಹೊಸತನ ಬಯಸುತ್ತೇನೆ. ಅಂತೆಯೇ ಈ ಚಿತ್ರದಲ್ಲಿಯೂ ಹೊಸ ಅವತಾರದಲ್ಲಿ ಮಿಂಚಿದ್ದೇನೆ. ಮಾತ್ರವಲ್ಲ ಹೊಸತನ್ನು ಕಲಿತಿದ್ದೇನೆ. ಚಿತ್ರದ ಕಥೆಯಲ್ಲಿ ಗಟ್ಟಿತನವಿದೆ. ಹಾಗಾಗಿಯೇ ಸಿನಿಮಾ ಗೆಲ್ಲುತ್ತದೆ ಎಂಬ ನಿರೀಕ್ಷೆ ನನಗಿದೆ. ನನ್ನ ಜತೆಗೆ ಭಾವನಾ ಮೆನನ್, ಕವಿತಾ ಗೌಡ, ಪವನ್ ವಿಜಯ್ ಚೆಂಡೂರು ನಟಿಸಿದ್ದಾರೆ.

ಪ್ಯಾನ್ ಇಂಡಿಯಾ ಕನಸಿನಲ್ಲಿ ಮೂಡಿದ ಸಿನಿಮಾ

ನಿರ್ದೇಶಕ ತಿಲಕ್ ಸಾರಥ್ಯದಲ್ಲಿ ಗೋವಿಂದ ಗೋವಿಂದ ಮೂಡಿಬಂದಿದೆ. ನಿರ್ದೇಶಕ ರವಿ ಆರ್ ಗರಣಿ, ಹಿರಿಯ ನಿರ್ಮಾಪಕ ಶೈಲೇಂದ್ರ ಬಾಬು ಹಾಗೂ ಕಿಶೋರ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ಮಾಪಕ ಕಿಶೋರ್ ಅವರಿಗೆ ಗೋವಿಂದ
ಗೋವಿಂದ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿದೆ. ಚಿತ್ರದಲ್ಲಿ ಕಾಮಿಡಿ ಮಾತ್ರವಲ್ಲ ಕೌಟುಂಬಿಕ ಕಥೆಯ ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶವೂ ಅಡಗಿದೆ. ಹಾಗಾಗಿ ಮೊದಲು ಕಥೆ ಕೇಳಿದಾಗಲೇ ಚಿತ್ರ ನಿರ್ಮಾಣಕ್ಕೆ ಮುಂದಾದೆ. ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಬೇಕು ಎಂಬ ಆಸೆ ನಮಗಿತ್ತು. ಸದ್ಯ ಕನ್ನಡ ಸೇರಿದಂತೆ ತಮಿಳು, ಮಲಯಾಳಂನಲ್ಲಿ ತೆರೆಗೆ ತರುತ್ತಿದ್ದೇವೆ. ಬಳಿಕ ಇತರ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದೇವೆ. ರಾಜ್ಯದ ಸುಮಾರು ೨೦೦ ಚಿತ್ರಮಂದಿರಗಳಲ್ಲಿ
ಗೋವಿಂದ ಗೋವಿಂದ ತೆರೆಗೆ ಬರಲಿದೆ ಎನ್ನುತ್ತಾರೆ ನಿರ್ಮಾಪಕ ಕಿಶೋರ್.