Sunday, 5th January 2025

ಬೆಳಗಾವಿ ಜಿಲ್ಲೆಯ ರಾಜಕೀಯ ನಾಯಕರಿಗೆ ಧ್ವನಿ ಇಲ್ಲವೇ?

#MES

ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಕಿತಾಪತಿ ಪ್ರಾರಂಭವಾಗಿ, ಇಡೀ ರಾಜ್ಯವನ್ನೇ ಹೊತ್ತಿ ಉರಿಸುತ್ತಿದೆ. ಸದನದ ಇಡೀ ಸಮಯ ಆ ಬಗೆಗಿನ ಚರ್ಚೆಯಲ್ಲೇ ಕಳೆ ಯುತ್ತಿದೆ. ಆದರೆ ಬೆಳಗಾವಿಯ ಯಾವೊಬ್ಬ ರಾಜಕಾರಣಿಯೂ ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದಕ್ಕೆ ಕಾರಣ ಮತಬ್ಯಾಂಕ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮರಾಠಾ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಹೆದರಿ ಯಾವೊಬ್ಬ ಸ್ಥಳೀಯ ಜನಪ್ರತಿನಿಽಯೂ ಅವರ ವಿರುದ್ಧ ಗಟ್ಟಿ ಧ್ವನಿ ಎತ್ತುತ್ತಿಲ್ಲ.

ಸಭೆ, ಮಾರಂಭಗಳಲ್ಲಿ ಭಾಷಣದ ಕೊನೆಯಲ್ಲಿ ಅಲ್ಲಿನ ಸ್ಥಳೀಯ ನಾಯಕರು ಜೈ ಕರ್ನಾಟಕದ ಜತೆಗೆ ಜೈ ಮಹಾರಾಷ್ಟ್ರ ಅನ್ನುವ ಪರಿಪಾಟವನ್ನು ಬೆಳೆಸಿ ಕೊಂಡಿದ್ದರಿಂದಲೇ ಎಂಇಎಸ್ ಮತ್ತೆ ಬಾಲ ಎತ್ತುತ್ತಿದೆ. ಹೀಗಾ ದರೆ ಬೆಳಗಾವಿ ಕನ್ನಡಮಯವಾಗುವು ದಾದರೂ ಹೇಗೆ? ಅಲ್ಲಿ ಎಷ್ಟು ಅಧಿವೇಶನ ನಡೆಸಿದರೂ ಏನು ಪ್ರಯೋ ಜನ? ಬೆಳಗಾವಿಯಲ್ಲಿ ಕನ್ನಡದ ಧ್ವನಿ ಗಟ್ಟಿ ಆಗಬೇಕಾದರೆ ಅಲ್ಲಿನ ರಾಜ ಕಾರಣಿಗಳು ಎಂಇಎಸ್ ಜತೆಗಿನ ಹೊಂದಾಣಿಕೆ ರಾಜಕಾರಣವನ್ನು ಬಿಡ ಬೇಕು. ಈ ನಾಡಿನ ಒಂದು ಕ್ಷೇತ್ರದಿಂದ ಆಯ್ಕೆಯಾಗುವ ನೀವು ಈ ನಾಡಿನ ಶ್ರೇಯೋಭಿವೃದ್ಧಿಗೆ ಬದ್ಧರಾಗಿಬೇಕು.

ಆದರೆ ಯಾವೊಬ್ಬ ರಾಜಕಾರಣಿಗಳೂ ಆ ಸಾಹಸಕ್ಕೆ ಕೈ ಹಾಕಿರುವ ಉದಾಹರಣೆ ಇಲ್ಲ. ಮಹಾರಾಷ್ಟ್ರದ ಜತ್ತ, ಸೊಲ್ಲಾಪುರದಲ್ಲೂ ಕನ್ನಡಿಗರ ಮತಗಳಿವೆ. ಆದರೆ ಅಲ್ಲಿನ ಯಾವ ರಾಜಕಾರಣಿಗಳೂ ಮತಬ್ಯಾಂಕ್‌ಗಾಗಿ ಮರಾಠಿ ಭಾಷೆ, ಮಹಾರಾಷ್ಟ್ರವನ್ನು ಅವಮಾನ ಮಾಡುವವರನ್ನು ಸಹಿಸಿಕೊಳ್ಳುವುದಿಲ್ಲ. ಆ ಧೈರ್ಯ ನಮ್ಮ ರಾಜಕಾರಣಿಗಳಿಗೆ ಏಕೆ ಬರುತ್ತಿಲ್ಲ? ನಾಡು, ನುಡಿಗೆ ಧಕ್ಕೆ ಬಂದಾಗಲೂ ಈ ರೀತಿ ಮೌನ ವಹಿಸಿದರೆ ನಿಮ್ಮ ಬಗ್ಗೆ ಕನ್ನಡಿಗರು ಏನು ತಿಳಿದು ಕೊಳ್ಳುತ್ತಾರೆ ಎಂಬ ಕನಿಷ್ಠ ಅರಿವಿಲ್ಲವೇ? ಮರಾಠಿ ಭಾಷಿಕರನ್ನು ಒಲಿಸಿಕೊಳ್ಳಬೇಕು ಎಂದಾದರೆ ಆ ಸಮುದಾಯದ ಏಳಿಗೆಗೆ ಕಾರ್ಯಕ್ರಮಗಳನ್ನು ಜಾರಿಗೊಳಿ ಸಬೇಕು. ಆ ಸಮುದಾಯದ ಜನರಿಗೆ ಸರಕಾರದ ಮೇಲೆ, ರಾಜ್ಯದ ಮೇಲೆ ಪ್ರೀತಿ ಬೆಳೆಯುವ ರೀತಿ ಮಾಡಲಿ. ಆದರೆ ಈ ರೀತಿ ನಾಡದ್ರೋಹದ ಕೆಲಸ ಮಾಡುವವರ ಬಗ್ಗೆ ಮೌನ ವಹಿಸುವುದು ಸರಿಯಲ್ಲ.