Monday, 25th November 2024

1 ಲಕ್ಷ 79 ಸಾವಿರದ 729 ಹೊಸ ಪ್ರಕರಣ: ಇಂದು ಆರೋಗ್ಯ ಸಚಿವರೊಂದಿಗೆ ಸಂವಾದ

ನವದೆಹಲಿ: ದೇಶದಲ್ಲಿ ಕರೋನಾ ವೈರಸ್‌ ಕಳೆದ 24 ಗಂಟೆಗಳಲ್ಲಿ 1 ಲಕ್ಷ 79 ಸಾವಿರದ 729 ಹೊಸ ಪ್ರಕರಣಗಳು ವರದಿಯಾಗಿದ್ದು, 146 ಜನರು ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳು 3 ಕೋಟಿ 57 ಲಕ್ಷ 7 ಸಾವಿರದ 727 ಕ್ಕೆ ಏರಿದೆ.

ಹೊಸ ಕರೋನಾ ಪ್ರಕರಣದ ನಂತರ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 7 ಲಕ್ಷ 23 ಸಾವಿರ 619 ಕ್ಕೆ ಏರಿದೆ. ಆದಾಗ್ಯೂ ಇದುವರೆಗೆ 3 ಕೋಟಿ 45 ಲಕ್ಷ 172 ಜನರು ಕೊರೋನಾ ಸಾಂಕ್ರಾಮಿಕದಿಂದ ಗುಣಮುಖರಾಗಿದ್ದಾರೆ.

ಓಮೈಕ್ರಾನ್‌ ನ ಹೆಚ್ಚಿದ ಆತಂಕದ ನಡುವೆಯೇ ಕೊರೋನಾದ ಅನಿಯಂತ್ರಿತ ವೇಗದ ನಡುವೆ ಲಸಿಕೆ ಅಭಿಯಾನವನ್ನು ತೀವ್ರವಾಗಿ ನಡೆಸಲಾಗುತ್ತಿದೆ. ಭಾನುವಾರ ದೇಶದಲ್ಲಿ ಒಟ್ಟು 13 ಲಕ್ಷದ 52 ಸಾವಿರದ 717 ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ. ಅಂದರೆ ನಿನ್ನೆಯವರೆಗೆ 69 ಕೋಟಿ 15 ಲಕ್ಷ 75 ಸಾವಿರದ 352 ಮಾದರಿ ಪರೀಕ್ಷೆ ಮಾಡಲಾಗಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಸೋಮವಾರ ಐದು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಸಚಿವರೊಂದಿಗೆ ಸಂವಾದ ನಡೆಸಲಿದ್ದು, ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿರುವ ಮಧ್ಯೆ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.