ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಧರಂ ಸಿಂಗ್ ಸೈನಿಯವರಿಗೆ ಕೆಂಪು ಪೇಟೆ ತೊಡಿಸುವ ಮೂಲಕ ಅಖಿಲೇಶ್ ಯಾದವ್, ತಮ್ಮ ಪಕ್ಷಕ್ಕೆ ಸ್ವಾಗತಿಸಿದರು. ಇದೇ ವೇಳೆ ಭಗವತಿ ಸಾಗರ್, ವಿನಯ್ ಶಾಕ್ಯ, ಮುಕೇಶ್ ವರ್ಮಾ ಮತ್ತು ರೋಶನ್ ಲಾಲ್ ವರ್ಮಾ ಸಮಾಜವಾದಿ ಪಕ್ಷಕ್ಕೆ ಸೇರಿಕೊಂಡರು.
ಜೊತೆಗೆ ಬಿಜೆಪಿ ಮಿತ್ರಪಕ್ಷವಾಗಿರುವ ಅಪ್ನಾ ದಳ (ಎಸ್)ದ ಶೋರತ್‌ಗಂಜ್‌ನ ಶಾಸಕ ಚೌಧರಿ ಅಮರ್ ಸಿಂಗ್ ಅವರನ್ನು ಅಖಿಲೇಶ್ ಯಾದವ್ ಸ್ವಾಗತಿಸಿ ದರು.
ಧರಂ ಸಿಂಗ್ ಸೈನಿ, “ಸಂವಿಧಾನ, ಪ್ರಜಾಪ್ರಭುತ್ವ ಮತ್ತು ದಲಿತರ ಹಿತಾಸಕ್ತಿ ಉಳಿಸಲು ನಾವೆಲ್ಲರೂ ಇಂದು ಸಮಾಜವಾದಿ ಪಕ್ಷಕ್ಕೆ ಸೇರುತ್ತಿದ್ದೇವೆ. ನಿಮ್ಮನ್ನು ಮುಂದಿನ ಸಿಎಂ ಮಾಡುತ್ತೇವೆ,” ಎಂದರು. “ನಾವು ನಿಮ್ಮನ್ನು ಮಾರ್ಚ್ 10 ರಂದು ಯುಪಿ ಸಿಎಂ ಮತ್ತು 2024ರಲ್ಲಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಮಾಡುತ್ತೇವೆ,” ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಕಳೆದ ಮಂಗಳವಾರದಿಂದ ಮೂವರು ಸಚಿವರು ಸೇರಿದಂತೆ 10 ಮಂದಿ ಬಿಜೆಪಿ ಶಾಸಕರು ಪಕ್ಷದಿಂದ ಹೊರ ನಡೆದಿದ್ದಾರೆ. ಸರ್ಕಾರದಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ ನಂತರದಲ್ಲಿ ಎಲ್ಲ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.