Monday, 25th November 2024

ಮಾರ್ಚ್ 4ಕ್ಕೆ ಹರೀಶ

ಮಂಗಳೂರು ಮೂಲದ ಒಂದಷ್ಟು ಸಿನಿಪ್ರಿಯರು ಸೇರಿ ಹರೀಶ ವಯಸ್ಸು ೩೬ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರೀಕರಣ ಮುಗಿಸಿರುವ ಹರೀಶ ಮಾರ್ಚ್ ೪ಕ್ಕೆ ತೆರೆಗೆ ಎಂಟ್ರಿಕೊಡಲಿದ್ದಾನೆ. ಇದಕ್ಕೂ ಮೊದಲೇ ಚಿತ್ರ ತಂಡ ಚಿತ್ರದ ಪ್ರೇಮಗೀತೆಯೊಂದನ್ನು ಬಿಡುಗಡೆ ಮಾಡಿದ್ದು, ಕುತೂಹಲ ಕೆರಳುವಂತೆ ಮಾಡಿದೆ.

ಸಂಗೀತ ನಿರ್ದೇಶಕನಾಗಿದ್ದ ಗುರುರಾಜ ಜ್ಯೇಷ್ಠ ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಾಸ್ಯ ಪ್ರದಾನ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ವಿಶೇಷವಾಗಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಟೈಟಲ್ ಸಾಂಗ್ ಅನ್ನು ಹಾಡಿದ್ದಾರೆ. ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಜೋಸೆಫ್ ಮಾಸ್ಟರ್ ಪಾತ್ರ ಮಾಡಿದ್ದ ಯೋಗೀಶ್ ಶೆಟ್ಟಿ ಈ ಚಿತ್ರದ ನಾಯಕ, ಹಿರಿಯನಟ ಉಮೇಶ್, ಶ್ವೇತಾ ಅರೆಹೊಳೆ, ದೀಪಿಕಾ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

೩೬ ವರ್ಷದ ಹರೀಶ ಮದುವೆಯಾಗಲು ಹೊರಟಾಗ ನಾಯಕನ ಸುತ್ತ ನಡೆಯುವ ಹಾಸ್ಯ ಪ್ರಸಂಗಗಳೇ ಈ ಚಿತ್ರದ ಕಥಾವಸ್ತುವಾಗಿದೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಚಿತ್ರ ನಿರ್ಮಾಣಕ್ಕೆ ಸಿದ್ಧವಾದೆ. ನನ್ನ ಜತೆಗೆ ಒಂದಷ್ಟು ಸ್ನೇಹಿತರು ಸೇರಿದರು. ೨೧ ದಿನಗಳಲ್ಲಿ ಪ್ರಮುಖ ಚಿತ್ರೀಕರಣ ಮುಕ್ತಾಯವಾಯಿತು.

ಸಾಮಾನ್ಯವಾಗಿ ಮಂಗಳೂರು ಕನ್ನಡ ಎಂದರೆ ಎಲ್ಲರಿಗೂ ಇಷ್ಟ. ನಾಟಕದ ಬ್ಯಾಂಕ್ ಗ್ರೌಂಡ್ ಇಟ್ಟುಕೊಂಡು, ಅದನ್ನು ಸಿನಿಮಾ ರೂಪದಲ್ಲಿ ಕನ್ನಡ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎಂದರು ನಿರ್ಮಾಪಕ ಲಕ್ಷ್ಮಿಕಾಂತ್. ಈ ಸಿನಿಮಾ ನನ್ನ ಎರಡು ವರ್ಷಗಳ ಕನಸು. ಈಗ ಅದು ನನಸಾಗುವ ಹಂತದಲ್ಲಿದೆ. ೩೬ ವರ್ಷದ ಹುಡುಗನ ಮದುವೆಯ ಪ್ರಹಸನವನ್ನು, ಹಾಸ್ಯರೂಪದಲ್ಲಿ ಹೇಳಿದ್ದೇವೆ. ಚಿತ್ರಕ್ಕೆ ಯು ಪ್ರಮಾಣಪತ್ರ ಸಿಕ್ಕಿದ್ದು, ಮಾರ್ಚ್  ೪ರಂದು ರಿಲೀಸ್ ಆಗುತ್ತಿದೆ. ನನ್ನ ಸಂಬಂಧಿಯೊಬ್ಬರು ವೃತ್ತಿಪರ ನಾಟಕ ತಂಡದಲ್ಲಿದ್ದರು. ಅವರು ಮದುವೆಯಾಗಲು ಹೊರಟ ಸಂದರ್ಭದಲ್ಲಿ ನಡೆದ ಘಟನೆಗಳೇ ಈ ಚಿತ್ರಕ್ಕೆ ಸ್ಪೂರ್ತಿ.

ಒಂದು ಬೀದಿ ಮತ್ತು ಮನೆಯಲ್ಲಿ ಕಥೆ ಸಾಗುತ್ತದೆ. ನಾಯಕ ಬಾಡಿಗೆ ಮನೆ ಕೊಡಿಸುವ ಬ್ರೋಕರ್, ಅದರ ಜತೆಗೆ ಹುಡುಗಿ ನೋಡುವ ಕೆಲಸ, ಈತನನ್ನ ಯಾವ ಹುಡುಗಿ ನೋಡಿದರೂ ಇಷ್ಟಪಡುವುದಿಲ್ಲ. ಕೊನೆಗೂ ನಾಯಕ ಹರೀಶನನ್ನು ಪ್ರೀತಿಸುವ ಹುಡುಗಿ ಸಿಗುತ್ತಾಳಾ, ಆತನ ಮದುವೆಯಾಗುತ್ತದೆಯೇ ಎಂಬುದೇ ಚಿತ್ರದ ಕಥೆ. ಧರ್ಮಸ್ಥಳದ ಬಳಿ ೧೦೫ ವರ್ಷದಷ್ಟು ಹಳೆಯದಾದ ಗುತ್ತೆಮನೆಯಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ ಎಂದು ನಿರ್ದೇಶಕರು ತಿಳಿಸಿದರು.