ಮಾಡಲಿಂಗ್ ಕ್ಷೇತ್ರದಿಂದ ಬಂದ ಅದೆಷ್ಟೋ ನಟ-ನಟಿಯರು ಚಂದನವನದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇದೀಗ ಆ ಸಾಲಿಗೆ ನಟಿ ಸುಷ್ಮಿತಾ ದಾಮೋದರ್ ಕೂಡ ಸೇರಿದ್ದಾರೆ. ಮಾಡಲಿಂಗ್ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದ್ದ ಸುಷ್ಮಿತಾ, ಮಿಸ್ ಬೆಂಗಳೂರು, ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿ ಸೈಎನಿಸಿಕೊಂಡಿದ್ದರು. ಈಗ ಸುಷ್ಮಿತಾ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಸುಷ್ಮಿತಾಗೆ ಆರಂಭದಲ್ಲಿ ಕಿರುತೆರೆಯಲ್ಲಿ ಸಾಕಷ್ಟು ಅವಕಾಶಗಳು ಅರಸಿ ಬಂದಿದ್ದವು. ಆದರೆ ಅದಕ್ಕೆ ಒಪ್ಪದೆ ಸಿನಿಮಾ ರಂಗಕ್ಕೆ ಬರಬೇಕು ಎಂದು ಕಾಯುತ್ತಿದ್ದರು. ಇದೇ ಸಮಯಕ್ಕೆ ಫಣೀಶ್ ಭಾರದ್ವಾಜ್ ನಿರ್ದೇಶಿಸುತ್ತಿದ್ದ ಡಾರ್ಕ್ ಫ್ಯಾಂಟಸಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಚಿತ್ರದ ಟೈಟಲ್ ಹೇಳುವಂತೆ ಇದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾವಾಗಿದೆ. ಈಗಾಗಲೇ ಚಿತ್ರದ ಚಿತ್ರೀಕರ ಣವೂ ಮುಕ್ತಾಯವಾಗಿದೆ. ಈ ಚಿತ್ರದಲ್ಲಿ ಒಳ್ಳೆಯ ಪಾತ್ರವೇ ಸಿಕ್ಕಿದೆ ಎಂದು ಸಂತಸಪಡುವ ಸುಷ್ಮಿತಾ, ಚಿತ್ರದ ಬಿಡುಗಡೆಗಾಗಿ ಎದಿರು ನೋಡುತ್ತಿದ್ದಾರೆ.
ಆಡಿಸಿದಾತನ ಆರಂಭ
ಡಾರ್ಕ್ ಫ್ಯಾಂಟಸಿ ತೆರೆಗೆ ಬರುವ ಮೊದಲೇ ಮತ್ತೊಂದು ಸಿನಿಮಾದಲ್ಲಿ ನಟಿಸಲು ಸುಷ್ಮಿತಾಗೆ ಅವಕಾಶ ಅರಸಿ ಬಂದಿದೆ. ಆಡಿಸಿದಾತ ಚಿತ್ರದಲ್ಲಿಯೂ ಸುಷ್ಮಿತಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ನಿಧನರಾದ ಹಿನ್ನೆಲೆಯಲ್ಲಿ ಆ ಪ್ರಾಜೆಕ್ಟ್ ಆರಂಭ ವಿಳಂಬವಾಗಿತ್ತು. ಇದೀಗ ಆಡಿಸಿದಾತ ಸಿನಿಮಾದ ಕೆಲಸ ಆರಂಭವಾಗಿದೆ. ಹಾಗಾಗಿ ಸುಷ್ಮಿತಾ ಶೀಘ್ರದಲ್ಲಿಯೇ ಚಿತ್ರತಂಡದ ಸೇರಲಿದ್ದಾರೆ. ಇದರ ಜತೆಗೆ ಮತ್ತೊಂದಿ ಷ್ಟು ಕಥೆ ಕೇಳಿರುವ ಸುಷ್ಮಿತಾ, ಕೆಲವೊಂದು ಚಿತ್ರಗಳಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಟಾಲಿವುಡ್ ಅಂಗಳದಲ್ಲಿ
ಕನ್ನಡ ಚಿತ್ರಗಳಲ್ಲಿ ನಟಿಸುತ್ತಿರುವ ಸುಷ್ಮಿತಾ ಈಗ ಟಾಲಿವುಡ್ಗೂ ಹಾರಿದ್ದಾರೆ. ತೆಲುಗಿನ ಚಾಯ್ ಕಹಾನಿ ಸಿನಿಮಾದಲ್ಲಿ ನಟಿಸುವುದಕ್ಕೆ ಸಹಿ ಮಾಡಿ ದ್ದಾರೆ. ಪಕ್ಕಾ ಕಮರ್ಷಿಯಲ್ ಕಥೆ ಇರುವ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಲಿದ್ದಾರೆ. ಇದಷ್ಟೇ ಅಲ್ಲ ಸುಷ್ಮಿತಾ, ನೃತ್ಯದಲ್ಲಿ ಯೂ ಪರಿಣಿತಿ ಹೊಂದಿದ್ದಾರೆ. ಪ್ರೇಮಂ ಪೂಜ್ಯಂ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ನೀಡಿದ್ದ ಎಂ.ಎಸ್. ತ್ಯಾಗರಾಜ್ ಟ್ರುಥ್ ಆರ್ ಡೇರ್ ಆಲ್ಬಂ ಹಾಡನ್ನು ನಿರ್ದೇಶಿಸಿದ್ದಾರೆ.
ಈ ಹಾಡಿನಲ್ಲಿ ಸುಷ್ಮಿತಾ ನಟಿಸಿದ್ದು, ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಶೀಘ್ರದಲ್ಲಿಯೇ ಈ ಹಾಡು ಬಿಡುಗಡೆಯಾಗಲಿದೆ. ಸಣ್ಣ ಪುಟ್ಟ ಪಾತ್ರಗಳು ಸಾಕಷ್ಟು ಬರುತ್ತಿವೆ. ಆದರೆ, ನಾನು ಒಂದೊಳ್ಳೆ ಪಾತ್ರದ ಹುಡುಕಾಟದಲ್ಲಿದ್ದೇನೆ. ಜನರನ್ನು ತಲುಪಲು ಅವರ ಮನಸ್ಸಿನಲ್ಲಿ ಉಳಿಯುವಂಥ ಪಾತ್ರ ಬೇಕಿದೆ. ಈಗಾಗಲೇ ನಟಿಸಿದ ಎರಡು ಸಿನಿಮಾಗಳಲ್ಲಿ ಅಂತಹ ಅಂಶ ಇದೆ. ಕನ್ನಡ, ಹಿಂದಿ ಧಾರಾವಾಹಿಯಿಂದಲೂ ಅವಕಾಶಗಳು ಬರುತ್ತಿವೆ. ಆದರೆ, ನನ್ನ ಆಸೆ ಸಿನಿಮಾ ಮಾತ್ರ. ಇದೆಲ್ಲದರ ಜತೆಗೆ ದೊಡ್ಡಮನೆಯ ಆಶೀರ್ವಾದವೂ ಸಿಕ್ಕಿದೆ. ಲಕ್ಷ್ಮೀ ಅಕ್ಕ ಮತ್ತು ಎಸ್.ಎ ಗೋವಿಂದರಾಜು ಅವರ ಸಿನಿಮಾ ವಿಚಾರವಾಗಿ ಬೆನ್ನಹಿಂದಿದ್ದಾರೆ ಎಂಬುದು ಸುಶ್ಮಿತಾ ಮನದಾಳ.