Wednesday, 27th November 2024

ನಾಂಡೂವಾಲಿ ಮತ್ತೆ ನದಿಯಾಗಿ ನಲಿದದ್ದು ಹೀಗೆ…

ಸುಪ್ತ ಸಾಗರ

ರಾಧಾಕೃಷ್ಣ ಎಸ್.ಭಡ್ತಿ

rkbhadti@gmail.com

ನಾಂಡೂ ಗ್ರಾಮ ಇಡೀ ದೇಶಕ್ಕೇ ಪ್ರೇರಣೆ, ಮಾದರಿ ಆದ ಕಥೆ ಇಷ್ಟು ಸಣ್ಣದೇನಲ್ಲ. ಅದರ ಹಿಂದೆ ಅಸೀಮ ಛಲ, ನಿರಂತರ ಪರಿಶ್ರಮ, ಸ್ವಾವಲಂಬನೆಯ ಕನಸು, ಸಾಧನೆಯ ಇಚ್ಛಾಶಕ್ತಿ, ಸಂಘಟನೆಯ ಬಲ ಎಲ್ಲಕ್ಕಿಂತ ಹೆಚ್ಚಾಗಿ ದೂರದೃಷ್ಟಿಯ ನಾಯಕತ್ವ ಕೆಲಸ ಮಾಡಿದೆ. ಇದನ್ನೇ ಆಧರಸಿ ಜಲ ಯಶೋಗಾಥೆಗಳ ಸರಣಿ ಇಂದಿಗೂ ರಾಜಸ್ಥಾನದಲ್ಲಿ ಮುಂದುವರಿದಿದೆ.

ಇದು ಇವತ್ತು ನಿನ್ನೆಯ ಮಾತಲ್ಲ. ಅತ್ತ ರಾಜಸ್ಥಾನದ ಅರಾವಳಿ ಬೆಟ್ಟ ಸಾಲುಗಳಲ್ಲಿ ಸದ್ದಿಲ್ಲದೇ ರಾಜೇಂದ್ರ ಸಿಂಗ್ ಎಂಬ ಮಾಂತ್ರಿಕ ನದಿಗಳಿಗೆ ಪುನರ್ ಜನ್ಮ ನೀಡುವ ತಪಸ್ಸಿನಲ್ಲಿ ನಿರತರಾಗಿದ್ದರೆ, ಅದೇ ರಾಜಸ್ಥಾನದಲ್ಲಿ ಮತ್ತೊಂದು ನದಿ ಕ್ರಾಂತಿ ನಡೆಯುತ್ತಿತ್ತು. ನಿರಂತರ ಶೋಷಣೆ, ಅವೈಜ್ಞಾನಿಕ
ಕೃಷಿ ನೀತಿ, ಅರಿವಿನ ಕೊರತೆ ಇತ್ಯಾದಿಗಳ ಕಾರಣಕ್ಕೆ ಕಣ್ಣೆದುರೇ ಕಾಣೆಯಾಗಿದ್ದಳು ನಾಂಡೂವಾಲಿ.

ಅದೇ ಜನರಿಗೆ ಸಿಕ್ಕ ಒಂದೇ ಒಂದು ನಾಯಕತ್ವ, ಸೂಕ್ತ ಮಾರ್ಗದರ್ಶನ, ವ್ಯವಸ್ಥಿತ ಯೋಜನೆ, ಇನ್ನಿಲ್ಲದ ಆತ್ಮವಿಶ್ವಾಸ, ಸ್ಥಳೀಯರ ಶ್ರಮ- ಸಂಕಲ್ಪಗಳ ಪರಿಣಾಮ ಅದೇ ನದಿ ಮತ್ತೆ ಮೈದಳೆದದ್ದು ಒಮದು ರೋಚಕ ಅಧ್ಯಾಯ. ಅದು ರಾಜಸ್ತಾನದ ಆಲ್ವರ್ ಶಹರದಿಂದ ಕೇವಲ 65 ಕಿ.ಮೀ. ದೂರದಲ್ಲಿ ರುವ ಪುಟ್ಟಹಳ್ಳಿ ನಾಂಡೂ. ಅಲ್ಲಿ ಹುಟ್ಟಿ ಹರಿಯುವಾಕೆಗೆ ಮತ್ತೆ ಬೇರೆ ಹೆಸರು ಬೇಕೇನು? ಆಕೆ ಸಹಜವಾಗಿ ನಾಂಡೂವಾಲಿ. ಅಲ್ಲಿನ ಬಹುತೇಕರ ಬದುಕಿಗೆ ಕೃಷಿಯೇ ಮುಖ್ಯಾಧಾರ, ಜತೆಗೆ ಪಶುಸಂಗೋಪನೆ ಇದ್ದೇ ಇತ್ತು.

ಅದೇನು ಗರಬಡಿದಿತ್ತೋ, ಬರ ಬಡಿಯಿತೋ, ಅಂತೂ ನೋಡನೋಡುತ್ತಿದ್ದಂತೆಯೇ ಊರಿನ ಜೀವಾಳವಾಗಿದ್ದ ನಾಂಡೂವಾಲಿ ಮುನಿಸಿಕೊಂಡು ಕಣ್ಮರೆಯಾಗಿ ಬಿಟ್ಟಳು. ಊರಿಡೀ ನೀರಿಗೆ ಹಾಹಾಕಾರ, ಕೃಷಿ ಕಂಗಾಲಾಯಿತು. ಜನ ತಲೆ ಮೇಲೆ ಕೈ ಹೊತ್ತರು, ಜಾನು ವಾರುಗಳು ಮೈ ಕಳೆದುಕೊಂಡವು. ಕೊನೆಗೂ ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಇಡೀ ಹಳ್ಳಿಗೆ ಹಳ್ಳಿಯೇ ಒಗ್ಗೂಡಿತು. ಬೆವರು ಹರಿಯಿರು. ಯಾವುದೇ ಕ್ಯಾತೆ ತೆಗೆಯದೇ ನದಿಯೂ ಸಹ ಮತ್ತೆ ಮೈದುಂಬಿ ಹರಿಯಲಾರಂಭಿಸಿತು.

ವಿಶೇಷ ಗೊತ್ತೇ? ಇದ್ಯಾವುದಕ್ಕೂ ಆ ಮುಗ್ಧ ಹಳ್ಳಿಗರು ಸರಕಾರವನ್ನು ನಿಂದಿಸಲಿಲ್ಲ. ರಾಜಕೀಯ ಕೆಸರೆರಚಾಟ ಗಳಿರಲಿಲ್ಲ. ಆಂದೋಲನವಿತ್ತು, ಹೋರಾಟವಿತ್ತು. ಆದರೆ ಪ್ರತಿಭಟನೆಗಳಿರಲಿಲ್ಲ. ಕೊನೆಪಕ್ಷ ಒಂದು ಹಿಡಿ ನೆರವಿಗಾಗಿಯೂ ಸರಕಾರದ ಮುಂದೆ ಕೈಯೊಡ್ಡಲಿಲ್ಲ. ಒಟ್ಟಾರೆ ಯೋಜನೆಗೆ ಆದ ವೆಚ್ಚ ಮೂವತ್ತು ಲಕ್ಷ ರೂ.ಗಳನ್ನು ಆ ಹಳ್ಳಿಗರೇ ಹಂಚಿಕೊಂಡು ಭರಿಸಿದ್ದು ಸಮುದಾಯವೊಂದರ ಶಕ್ತಿಯ ಪ್ರತೀಕ.

ಇದೀಗ ಸರಿಸುಮಾರು 160 ಚದರ ಕಿ.ಮೀ. ವ್ಯಾಪ್ತಿಯ ಸುತ್ತಮುತ್ತಲಿನ ೨೦ಕ್ಕೂ ಹೆಚ್ಚು ಗ್ರಾಮಗಳ ಬದುಕು ಬಂಗಾರವಾಗಿದೆ. ಹೊಲಗದ್ದೆಗಳು ಹಚ್ಚ ಹಸಿರಿನಿಂದ  ಕಂಗೊಳಿಸುತ್ತಿವೆ. ಹೊಟ್ಟೆ ಪಾಡಿಗಾಗಿ ದಾರಿಗಾಣದೇ ಕೃಷಿ ತೊರೆದು ಪೇಟೆ-ಪಟ್ಟಣಗಳಿಗೆ ವಲಸೆ ಹೋಗಿದ್ದ ಅದೆಷ್ಟೋ ಮಂದಿ ಮತ್ತೆ ಮಣ್ಣಿನ ಅ ಕೂಲಿಗಳಾಗಿ ದುಡಿಯುತ್ತಿದ್ದವರು ಮತ್ತೆ ಜಮೀನ್ದಾರರಾಗಿ ಸ್ವಾವಲಂಬಿ ಬದುಕಿಗೆ ತೊಡಗಿದ್ದಾರೆ. ಹಳ್ಳಿಗಳ ನೂರಾರು ಬಾವಿಗಳಲ್ಲಿ ನೀರು
ತುಂಬಿ ತುಳುಕುತ್ತಿದೆ. ಹಸುಗಳು ಮತ್ತೆ ಮೈದುಂಬಿಕೊಂಡಿವೆ. ಹಾಲು-ಹೈನು ಮನೆಮನೆಗಳಲ್ಲೂ ಈಗ ಉಕ್ಕುತ್ತಿದೆ.

ನೆಲ ಕಂಡಿದ್ದ ಧಾನ್ಯದ ಕಣಜ ಮತ್ತೆ ತುಂಬಿ ನಿಂತಿದೆ. ಗ್ರಾಮದ ಹೊರವಲಯದ ಬೆಟ್ಟ- ಗುಡ್ಡಗಳಲ್ಲಿ ಮತ್ತೆ ಚಿಗುರಿದ ಮರಗಿಡಗಳು ಹಾರುವ ಮೇಘ ನನ್ನು ಓಡುವ ಮಳೆ ನೀರನ್ನು ಹಿಡಿದು ನಿಲ್ಲಿಸುವ ಸಾಮರ್ಥ್ಯ ಗಳಿಸಿ ಕೊಂಡಿವೆ. ಅಷ್ಟಕ್ಕೂ ನದಿಗೆ ನದಿಯೇ ಕಣ್ಮರೆಯಾಗುವ ಅವಾಂತರಕ್ಕೆ ನಾಂದಿ ಹಾಡಿದ್ದೇ ಹಳ್ಳಿಗರು ಕಡಿದುರುಳಿಸಿದ್ದ ಕಾಡಿನ ಮರಗಳು. ಯಾವಾಗ ಗ್ರಾಮವನ್ನು ಹಚ್ಚಡದಂತೆ ಬೆಚ್ಚಗಿಟ್ಟಿದ್ದ ಕಾಡು ಕರಗುತ್ತ ಬಂತೋ ಬದುಕೋ ಬೋರಲು ಮಲಗತೊಡಗಿತ್ತು. ಬೆಟ್ಟದ ಮೇಲಿಂದ ಇಳಿದು ಬಂದು ಊರಿನ ತಾಲಾಬ್ ಗಳಲ್ಲಿ ಇಂಗುತ್ತಿದ್ದ ಮಳೆ ನೀರನ್ನ ತಡೆಯುವವರೇ ಇಲ್ಲದಾದಾಗ ಖಾಲಿಯಾದದ್ದು ಜೋಹಾಡ್‌ಗಳು ಮಾತ್ರವಲ್ಲ, ಹಳ್ಳಿಯೂ.

ಮಳೆ ಕೈಕೊಟ್ಟಿತು, ತಾಲಾಬ್‌ಗಳು ಬತ್ತಿದವು, ಜಮೀನುಗಳು ಬರಿದಾದವು. ಕೊನೆಗೆ ಹೊಟ್ಟೆಗಾಗಿ ಮನೆಯಲ್ಲಿದ್ದ ಆಡು-ಮೇಕೆಗಳನ್ನು ಮಾರಿದರು, ಜಾನುವಾರುಗಳನ್ನು ಕೊಟ್ಟರು, ಕೆಲವರು ಜಮೀನುಗಳನ್ನೂ ಮಾರಿದರು. ಕೊನೆಗೆ ದಿಕ್ಕುಗಾಣದೇ ಸಾಮೂಹಿಕ ಗುಳೆ ಹೋರಟರು. ಹಳ್ಳಿಗೆ ಹಳ್ಳಿಯೇ
ಕಂಗಾಲಾಗಿದ್ದ ಸನ್ನಿವೇಶದಲ್ಲಿ ಏನಾದರೂ ಮಾಡಲೇಬೇಕೆಂಬ ಸ್ಥೈರ್ಯ ತೋರಿ ಹೊರಟವರೇ ಆ ಎರಡು ಯುವಕರು. ಹಾಗೆ ಟೊಂಕಕಟ್ಟಿ ನೀರ ಸಾಮ್ರಾಜ್ಯ ಸ್ಥಾಪನೆಗೆ ಹೊರಟ ಕುಂಜಬಿಹಾರಿ ಮತ್ತು ಸತೀಶ್ ಶರ್ಮಾ ಎಂಬ ಸೋದರರ ಮಾರ್ಗದರ್ಶನಕ್ಕೆ ನಿಂತ ವಿದ್ಯಾರಣ್ಯ’ ಪರಿಸರವಾದಿ ಅನುಪಮ ಮಿಶ್ರಾ.

ತಮ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಮೂಲಕ ನಾಂಡೂವಾಲಿಯ ಹರಿವಿನ ಕಾಯಕಕ್ಕೆ ಯುವಕರಿಗೆ ಮಾರ್ಗದರ್ಶನ ಮಾಡಲು ಸಮ್ಮತಿಸಿದರು ಮಿಶ್ರಾ. ಜತೆಗೆ ನೆರವಿಗೆ ಬಂದದ್ದು ಅಹಮದಾಬಾದ್‌ನ ‘ಸಂಭಾವ್’ ಸಂಸ್ಥೆ. ಸಂಭಾವ್‌ನಬ್ಬ ಸಂಭಾವಿತ ಜಲಯೋಧ ಫರ್ಹಾದ್ ಕಾಂಟ್ರ್ಯಾಕ್ಟರ್, ಆತ ಮಿಶ್ರರ ಪಕ್ಕಾ ಅನುಯಾಯಿ. ಆತನ ನೇತೃತ್ವದಲ್ಲಿ ಇಡೀ ಗ್ರಾಮದಲ್ಲಿ ಆಗಬೇಕಾದ ಕಾಯಕದ ರೂಪುರೇಷೆ ಸಿದ್ಧಗೊಂಡಿತ್ತು. ನಿಜಕ್ಕೂ ಆಲ್ಲಿ ಎಲ್ಲದಕ್ಕಿಂತ ಮುಖ್ಯವಾಗಿ ಆಗಬೇಕಾದುದು ಆತ್ಮ ವಿಶ್ವಾಸದ ಪುನಶ್ಚೇತನzಗಬೇಕಿತ್ತು.

ಮರುಹುಟ್ಟು ಪಡೆಯಬೇಕಾದುದು ನದಿಗಿಂತ ಮೊದಲು ನಾಯಕತ್ವದ್ದಾಗಿತ್ತು. ಜೀವನದ ಆಶಾಕಿರಣವನ್ನೇ ಕಳಕೊಂಡಿದ್ದ ನಾಂಡೂ ನೆಲದ
ಮಂದಿಗೆ ಭರವಸೆಯ ಬೆಳಕನ್ನು ಕಾಣಿಸುವುದೇ ದೊಡ್ಡ ಸಂಗತಿಯಾಗಿತ್ತು. ಇದು, ಹೊರಗಿನಿಂದ ತರುವ ಯಾವ ಸಂಗತಿಯಿಂದಲೂ ಈಡೇರು ವಂತಿರಲಿಲ್ಲ. ಅದು ಅವರೊಳಗೇ ಮೊಳೆಯಬೇಕಿತ್ತು. ಅದಕ್ಕೊಂದು ಭರವಸೆಯ ಸೇಚನ ಮಾಡಿದವರು ಕಾಂಟ್ರ್ಯಾಕ್ಟರ್. ಊರ ನೀರಿನ ಕೆಲಸ,
ತಮ್ಮದೇ ಎಂಬ ಭಾವನೆ ಮೊಳೆತದ್ದೇ ಎಲ್ಲರೂ ಧಿಗ್ಗನೆದ್ದು ಅವರ ಜತೆಗೆ ಕೈ ಜೋಡಿಸಿ ಹೊರಟರು. ಒಂದೇ ಪ್ರಯತ್ನಕ್ಕೆ ಇವೆಲ್ಲವೂ ಕೈಗೂಡಲಿಲ್ಲ ವಾದರೂ ಸಮುದಾಯವನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾದರು ಫರ್ಹಾದ್.

ಈವರೆಗೆ 10 ಸಾವಿರಕ್ಕೂ ಹೆಚ್ಚು ಕೆರೆಗಳಿಗೆ ಜೀವಕೊಟ್ಟ -ರ್ಹಾದ್‌ಗೆ ನಾಂಡೂವಾಲಿಯನ್ನು ಮತ್ತೆ ಹರಿಸುವುದು ದೊಡ್ಡ ವಿಚಾರ ಆಗಿರಲಿಲ್ಲ. ಆದರೆ ಅದನ್ನು ಆ ಊರಿನವರಿಂದಲೇ ಮಾಡಿಸಿದಾಗಲೇ ಅದನ್ನು ಸುಸ್ಥಿರಗೊಳಿಸಲು ಸಾಧ್ಯ ಎನ್ನುವ ಅನುಭವ ಜನ್ಯ ನಿರ್ಧಾರಕ್ಕೆ ಬಂದಿದ್ದರು. ಇಡೀ ದೇಶದ ಸ್ವಾವಲಂಬನೆ ಹಳ್ಳಿಗಳ ಸ್ವಾವಲಂಬನೆಯಿಂದ ಮಾತ್ರವೇ ಸಾಧ್ಯ. ಸರಕಾರಿ ಯೋಜನೆಗಳು ವಿಫಲವಾಗುವುದೇ ಸ್ಥಳೀಯರ ಸಹಭಾಗಿತ್ವದ ಕೊರತೆ ಯಿಂದ ಎನ್ನುತ್ತಾರೆ ಅವರು. ಮಾತ್ರವಲ್ಲ, ಒಂದಿಡೀ ತಲೆಮಾರನ್ನೇ ಕೊಂದು ಸಾಧಿಸುವ ಅಭಿವೃದ್ಧಿಗೆ ಅರ್ಥವೇ ಇಲ್ಲ.

ನಿಸರ್ಗವನ್ನು ಬಲಿಗೊಟ್ಟು ನಾವು ಸಾಧಿಸುವ ಆಧುನಿಕತೆಗಿಂತ ಮೂರ್ಖತನ ಮತ್ತೊಂದಿಲ್ಲ. ಅದರ ಪರಿಣಾಮವನ್ನು ಮುಂದಿನ ತಲೆಮಾರು ಎದುರಿಸ ಬೇಕಾಗುತ್ತದೆ. ನೀರು-ನೆಲದ ಸಮಸ್ಯೆಯ ವಿಚಾರದಲ್ಲಿ ಆಧುನಿಕತೆಗಿಂತ ಪರಂಪರೆಯೇ ಸೂಕ್ತ ಉತ್ತರ ಮತ್ತು ಪರಿಹಾರ ಎಂಬುದು ಅವರ ವಾದ. ಅಂಥ ಪಾರಂಪರಿಕ ವ್ಯವಸ್ಥೆ ಹಾಗೂ ಸ್ಥಳೀಯರ ಸಹಭಾಗಿತ್ವದೊಂದಿಗೇ ನಾಂಡೂ ಪುನಶ್ಚೇತನಕ್ಕೆ ಸೂತ್ರ ರೂಪಿಸಿದರು.

‘ನದಿಯೊಂದು ಬತ್ತಲು ಮುಖ್ಯ ಕಾರಣ ಎರಡು. ಮೊದಲನೆಯದ್ದು ಬಿದ್ದ ಮಳೆಯಲ್ಲಿ ಶೇ.60ರಷ್ಟು ನೇರವಾಗಿ ನದಿಯ ಒಡಲಿಗೆ ಸೇರಿ ಹರಿದು ಸಮುದ್ರ ಸೇರಬೇಕು. ಉಳಿದದ್ದು, ನದಿಯ ಇಕ್ಕೆಲಗಳಲ್ಲಿ ಇರುವ ಕೆರೆ- ಕಟ್ಟೆಗಳಲ್ಲಿ ಇಂಗಲೇಬೇಕು. ಹೀಗಾದಾಗ ಮಾತ್ರ ಸಮುದ್ರ ಸೇರುವ ನೀರು ಆವಿಯಾಗಿ ಮುಂದಿನ ಸಮೃದ್ಧ ಮಳೆಗೆ ಕಾರಣವಾಗುತ್ತದೆ. ಮತ್ತೆ, ಕೆರೆಗಳಲ್ಲಿ ಇಂಗಿದ ನೀರು ಬಸಿದು ಅಕ್ಕಪಕ್ಕದ ಜಮೀನುಗಳ ತೇವಾಂಶ ರಕ್ಷಣೆ ಮಾಡುತ್ತದೆ. ಇಂಥ ಹನಿಗಳ ಸಂರಕ್ಷಣೆಯನ್ನು ನಾಂಡೂ ಮಂದಿ ಮರತದ್ದೇ ನದಿ ಬತ್ತಿಹೋಗಲು ಕಾರಣವಾಯಿತು. ಇಡೀ ಮಳೆಯ ಆವರ್ತನವನ್ನೇ ತುಂಡು ಮಾಡಲಾಗಿತ್ತು’ ಎಂದು ವಿಶ್ಲೇಷಿಸುತ್ತಾರೆ ಅನುಪಮ್ ಮಿಶ್ರಾ.

ಇಂಥ ವಿವೇಚನೆ ಮೊಳೆತದ್ದೇ ತಡ, ಮತ್ತೆ ತಡ ಮಾಡಲಿಲ್ಲ ನಾಂಡೂ ಜನ. ನದಿಗೆ ಜೀವ ಕೊಡಲು ತಮ್ಮ ಬೆವರ ಹನಿಯನ್ನು ಬೆಸೆದರು. ಇಡೀ ಊರಿಗೆ ಊರೇ ಮೈಕೊಡವಿ ಮೇಲೆದ್ದಿತ್ತು. ಜನ್- ಜಲ- ಜಂಗಲ- ಜಾನ್ವರ್- ಜಮೀನ್ ಎಂಬ ಪಂಚ ಸೂತ್ರದಡಿ ಕೆಲಸ ಆರಂಭವಾಯಿತು. ಊರ ಹಿರಿಯರ ಅನುಭವ ಆಧರಿತ ಪರಂಪರಾಗತ ಪದ್ಧತಿಯನ್ನು ಮರುಜಾರಿಗೊಳಿಸಿದರು. ಸ್ವಾವಲಂಬಿ, ಸ್ವಾಭಿಮಾನಿ ಮನಸ್ಸು ಅವರಲ್ಲಿ ಮೊಳೆತಿತ್ತು. ನಿಸರ್ಗಾ ಧಾರಿತ ಅರ್ಥ ವ್ಯವಸ್ಥೆಯನ್ನು ಅರತು, ಕಾಡಿನ ಪುನಶ್ಚೇತನಕ್ಕೆ ಮುಂದಾದರು. ಬಿದ್ದ ಪ್ರತಿ ಹನಿಯ ಸಂಗ್ರಹಕ್ಕೆ ತೊಡಗಿದರು. ಸಂಗ್ರಹಿಸಿದ ಎಲ್ಲ ನೀರನ್ನೂ ಎಚ್ಚರಿಕೆಯಿಂದ ಬಳಸುವುದನ್ನು ಕಲಿತರು. ತಲೆಮಾರುಗಳಿಂದ ಬಂದು ಮರೆತಿದ್ದ ವನಪೂಜೆಯ ಮಹತ್ವ ಮತ್ತೆ ಮನವರಿಕೆಯಾಯಿತು.

ನಾಂಡೂವಾಲಿಯ ಪುನಶ್ಚೇತನದ ಮೊದಲ ಹೆಜ್ಜೆಯೇ ಗ್ರಾಮದ ಸುತ್ತಮುತ್ತಲ ಅರಣ್ಯದ ಸಂರಕ್ಷಣೆ ಮತ್ತು ಸಂವರ್ಧನೆ. ಅದರ ಸಾರ ಸಂರಕ್ಷಣೆ
ಯಾದದ್ದೇ ಹಳ್ಳಿಯ ಮಣ್ಣಿನ ಫಲವತ್ತತೆ ಹೆಚ್ಚಿತು. ಬೆಳೆಗಳು ಚಿಗುರಲಾರಂಭಿಸಿದವು. ಊರಿನಲ್ಲಿದ್ದ ಜಾತಿತಾರತಮ್ಯ, ಬಡವಬಲ್ಲಿದನೆಂಬ ಭೇದ ಮರೆಯಾಗಿತ್ತು. ಎಲ್ಲರೂ ಒಂದಾಗಿದ್ದರು. ಜಲಸಂರಕ್ಷಣೆ ಎಲ್ಲರ ಏಕೈಕ ಗುರಿಯಾಗಿತ್ತು. ಎರಡು ಹಳ್ಳಿಗಳ ನಡುವಿನ ಪ್ರತ್ಯೇಕತೆಗೆ ಇದ್ದದ್ದು ಕೇವಲ ದಟ್ಟ ಕಾಡಷ್ಟೇ. ಅದರ ದಟ್ಟತೆಗೆ ಧಕ್ಕೆ ತರುವ ಮಂದಿಗೆ ಉಗ್ರ ಶಿಕ್ಷೆ ಜಾರಿಗೊಳಿಸಿಕೊಂಡರು ಊರ ಪ್ರಮುಖರು. ಊರಿನ ಸುತ್ತಲಿನ ಕಾಡಿಗೆ ಪ್ರವೇಶ ನಿರ್ಬಂಽಸಿ, ಪವಿತ್ರ ವನಗಳು, ದೇವರ ಕಾಡುಗಳು ಅಸ್ತಿತ್ವಕ್ಕೆ ಬಂದವು. ಎಂಥದ್ದೇ ಸನ್ನಿವೇಶದಲ್ಲೂ ಅಲ್ಲಿನ ಮರಗಳಿಗೆ ಕೊಡಲಿ ಇಡುವಂತಿಲ್ಲ. ಕಾಡಿನ ಉಪ ಉತ್ಪನ್ನ ಬಳಕೆಗಷ್ಟೇ ಪೂರ್ವಾನುಮತಿಯ ಸ್ವಾತಂತ್ರ್ಯ..

ಪರಿಣಾಮ ಗೋಮಾಳಗಳು ಚಿಗುರಿದವು. ಜಾನುವಾರುಗಳು ಊರಿಗೆ ಮರಳುತ್ತಿದ್ದಂತೆಯೇ ಅದರ ಪಾಲಕರೂ ಊರಿನತ್ತ ಮುಖಮಾಡಿದರು. ಜಮೀನನ್ನೂ ಉತ್ತು ಬಿತ್ತು, ಬೆಳೆಗೆ ಮುಂದಾದರು. ಭೂಮಿಗೆ ಸಾವಯವ ಸಾರ ತನ್ನಿಂದ ತಾನೇ ದೊರತಂತೆಲ್ಲ ಸಮೃದ್ಧಿ ಕಾಣತೊಡಗಿತು. ಭರವಸೆಯ ಬೆಳಕು ಮೂಡಿತು. ಕೃಷಿಗೆ ಮಾನದಂಡಗಳು ನಿಗದಿಯಾಯಿತು. ಕಡಿಮೆ ನೀರು ಬೇಡುವ ಬೆಳೆಗಳಿಗೆ ಆದ್ಯತೆ ನೀಡಲಾಯಿತು.

ಮುಂದಿನ ಮಳೆಗಾಲಕ್ಕೆ ಮೊದಲೇ ಹಳ್ಳಿಹಳ್ಳಿಗಳ ಜೋಹಾಡ್‌ಗಳು ಹೂಳು ಬರಿದಾಗಿಸಿಕೊಂಡು ಸಜ್ಜಾಗಿದ್ದವು. ನೀರಿನ ಸ್ವಾವಲಂಬನೆಗೆ ಇಡೀ ಗ್ರಾಮದ ಸಮುದಾಯ ಕಾತರಿಸುತ್ತಿತ್ತು. ಎಲ್ಲರೂ ಕೂಡಿ ಜೋಹಡ್ ಕಟ್ಟಿ, ಮುಂದಿನ ಗಂಗೆ ಪೂಜೆಗಾಗಿ ಕಾಯುತ್ತಿದ್ದರು. ಅಂದುಕೊಂಡಂತೆ ಮುಂದಿನ ಮಳೆಗೆ ನೀರು ಹೇಳಿದಂತೆ ಕೇಳುತ್ತ ಜೋಹಾಡ್‌ಗೆ ಬಂದು ಕುಳಿತಿತ್ತು. ವರ್ಷಗಳಿಂದ ನೀರೇ ಕಾಣದಾಗಿದ್ದ ಬಾವಿಗಳಲ್ಲಿ ನೀರು ಇಣುಕಿತ್ತು. ಮುಂದಿನ ಹಂತವೇ ನದಿಯ ಪುನಶ್ಚೇತನ. ಅದಕ್ಕಾಗಿ ಮೊದಲೇ ರೂಪಿಸಿದ್ದ ಯೋಜನೆ ಜಾರಿಗೊಂಡಿತ್ತು. ಊರಿನ ಜಲ ನಕ್ಷೆ ಆಧರಿಸಿ, ವಾಟರ್ ಆಡಿಟಿಂಗ್ ನಡೆಯಿತು. ಜಲಾನಯನ, ಅಚ್ಚುಕಟ್ಟು ಪ್ರದೇಶಗಳ ಅಧ್ಯಯನ ನಡೆಯಿತು.

ಕಾಲುವೆಗಳು ಸ್ವಚ್ಛಗೊಂಡವು. ಗುಡ್ಡಗಳಲ್ಲಿ ಇಂಗುಗುಂಡಿ ನಿರ್ಮಾಣವಾದವು. ಒಡ್ಡುಗಳು ತಲೆ ಎತ್ತಿದವು. ಸರಣೀ ಜೋಹಾಡ್ ಗಳು ರಚನೆಯಾದವು. ಕೊನೆಗೊಮ್ಮೆ ಎಲ್ಲವೂ ನದಿಗೆ ಸಂಪರ್ಕ ಸಾಧಿಸಿದವು. ನೋಡನೋಡುತ್ತಿದ್ದಂತೆಯೇ ಒರತೆಗಳು ಚಿಮ್ಮಿ, ಇಡೀ ನದಿ ಜೀವ ತಳೆದಿತ್ತು. ಹರಿಯುತ್ತ ಹರಿಯುತ್ತ ಕಡೆಗೆ ಸೇರಿದ್ದು ನದಿ ಪಾತ್ರ. ನಿರ್ಜೀವ ನದಿ ಸಜೀವ ಆಯಿತು. ಇಲ್ಲಿ, ಅತ್ಯಂತ ಪ್ರಮುಖ ಪಾತ್ರವಹಿಸಿದ್ದು ಗುಡ್ಡಗಳಲ್ಲಿನ ಜಲ ನಿರ್ಮಿತಿಗಳು. ಇಡೀ ಜೀವ ತಂತುಗಳಾಗಿ ನಿರ್ವಹಿಸಿದ್ದು ಅವೇ. ಗುಡ್ಡದ ಮೇಲೆ ಬಿದ್ದ ಒಂದು ಹನಿಯನ್ನೂ ವ್ಯರ್ಥವಾಗಿ ಓಡಗೊಡದೇ, ಸಂಗ್ರಹಿಸಿ, ನದಿಗೆ ಹನಿಸಿದವು. ಅಡ್ಡಡ್ಡ, ಉದ್ದುದ್ದ ಮಲಗಿದ್ದ ಇಂಗುಗುಂಡಿಗಳು ಒಂದಕ್ಕೊಂದು ಬೆಸೆದಿದ್ದವು. ಇಂಥ ಸರಣಿ ಕೊನೆಗೆ ಜೋಹಾಡ್‌ಗಳನ್ನು ಸಂಪರ್ಕಿಸಿದ್ದವು.

ಇಂಥ ಜೋಹಾಡ್‌ಗಳು ಭೌತಿಕ ನೀರು ಪೂರೈಕೆ, ಅಂದರೆ ಊರವರ ಕೃಷಿ-ಪಶುಸಂಗೋಪನೆ ಹಾಗೂ ದೈನಂದಿನ ಬಳಕೆಯ ಅಗತ್ಯವನ್ನು ಪೂರೈಸು ವುದರ ಜತೆಗೆ, ತನ್ನೊಡಲಲ್ಲಿ ನೀರಿಂಗಿಸಿಕೊಂಡು, ನದಿಗೆ ಬಸಿದು ಅದರ ಪುನಶ್ಚೇತನಕ್ಕೂ ಕಾರಣವಾದವು. ಇಡೀ ವಾತಾವರಣದಲ್ಲಿ ಹಸಿರು ತುಂಬಿದ್ದಲ್ಲದೇ, ಅಲ್ಲಲ್ಲಿ ಸಣ್ಣಪುಟ್ಟ ತೊರೆಗಳು, ಝರಿಗಳು ಕಾಣಿಸಿಕೊಂಡು ಊರ ಸೌಂದರ್ಯವನ್ನೂ ಇಮ್ಮಡಿಸಿದವು. ಇಷ್ಟಾದ ನಂತರ ಊರವರ ಆದ್ಯತೆ ಇಡೀ ಪರಿಸರದ ನಿರ್ವಹಣೆಯತ್ತ ಹೊರಳಿತು.

ಜೋಹಾಡ್‌ಗಳು, ಇಂಗುಗುಂಡಿಗಳ ನಿರ್ವಹಣೆಯಲ್ಲದೇ ಅರಣ್ಯ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು. ಇದಕ್ಕಾಗಿ ಗ್ರಾಮ ಅರಣ್ಯ ಸಮಿತಿಗಳು, ಕೆರೆ ಸಂಘಗಳು ಅಸ್ತಿತ್ವಕ್ಕೆ ಬಂದವು. ಎಲ್ಲದರ ವೈಜ್ಞಾನಿಕ ನಿರ್ವಹಣೆ ಮತ್ತು ದುರಸ್ತಿಗೆ ತಕ್ಕ ತರಬೇತಿಯನ್ನು ಯುವಕರಿಗೆ ನೀಡಲಾ ಯಿತು. ಗುಡ್ಡದಾದ್ಯಂತ ಬೆಳೆದಿದ್ದ ಬಬೂಲ್ ಮರಗಳು ನಕ್ಕಿದ್ದೇ ಆವಾಗ. ಸೊಂಪಾಗಿದ್ದ ಆ ಹಸಿರು ವನರಾಜಿಗೆ ಮರಳಿದವು, ಪ್ರಾಣಿ-ಪಕ್ಷಿ ಸಂಕುಲ. ಈ ಎಲ್ಲ ಪ್ರಕ್ರಿಯೆ ಸಾಮೂಹಿಕ ಮತ್ತು ವೈಯಕ್ತಿಕ ಮಟ್ಟದಲ್ಲಿ ಏಕಕಾಲಕ್ಕೆ ನಡೆದವು.

ಖಾಸಗಿ ಜಮೀನುಗಳಲ್ಲಿಯೂ ಒಡ್ಡುಗಳು, ಇಂಗುಗುಂಡಿಗಳು ನಿರ್ಮಾಣವಾದವು. ಪರಿಣಾಮ ಮಣ್ಣಿನಲ್ಲಿ ತೇವಾಂಶ ಹೆಚ್ಚಿ, ಹ್ಯೂಮಸ್ ಮೊಳೆತು, ಭೂಸಾರ ಕೊಚ್ಚಿ ಹೋಗುವುದು ನಿಂತಿತು. ಇಳುವರಿ ಹೆಚ್ಚಿತು. ಕೃಷಿಗೆ ಪೂರಕವಾದ ಪಾರಂಪರಿಕ ಗ್ರಮೀಣ ಕಸುಬುಗಳು ಮತ್ತೆ ಆರಂಭವಾಗಿ ಉದ್ಯೋಗ ಸೃಷ್ಟಿಯಾಯಿತು. ಭೂಮಿಯಲ್ಲಷ್ಟೇ ಅಲ್ಲ ಬದುಕಲ್ಲೂ ಜೀವಕಳೆ ತುಂಬಿತು. ಜನರ ಮುಖದಲ್ಲಿ ಉತ್ಸಾಹ ಉಕ್ಕಿತು. ಮಂದಹಾಸ ಮಿನುಗಿತು. ಶಾಲೆಗಳು ಮತ್ತೆ ಬಾಗಿಲು ತೆರೆದವು. ಮಕ್ಕಳು ನೀರುಹೊರುವುದನ್ನು ಬಿಟ್ಟು ಕಲಿಕೆಗೆ ತೊಡಗಿದರು. ಶಿಕ್ಷಿತರ ಸಂಖ್ಯೆ ಹೆಚ್ಚಿತು. ಊರ ಸಮಗ್ರ
ಅಭಿವೃದ್ಧಿಗೆ ನುರಿತ, ಶಿಕ್ಷಿತರ ಯುವ ಪಡೆ ಸಜ್ಜಾಯಿತು. ಕಲಿತವರು ಉದ್ಯೋಗ ಅರಸಿ ಪಟ್ಟಣಕ್ಕೆ ಹೋಗುವ ಬದಲು ಹಳ್ಳಿಗಳ ನೆಲೆನಿಂತರು, ನಾಂಡೂವಾಲಿ ನಕ್ಕಳು.

ಊರೂ ನಲಿದಾಡಿತು. ನಾಂಡೂ ಗ್ರಾಮ ಇಡೀ ದೇಶಕ್ಕೇ ಪ್ರೇರಣೆ, ಮಾದರಿ ಆದ ಕಥೆ ಇಷ್ಟು ಸಣ್ಣದೇನಲ್ಲ. ಅದರ ಹಿಂದೆ ಅಸೀಮ ಛಲ, ನಿರಂತರ ಪರಿಶ್ರಮ, ಸ್ವಾವಲಂಬನೆಯ ಕನಸು, ಸಾಧನೆಯ ಇಚ್ಛಾಶಕ್ತಿ, ಸಂಘಟನೆಯ ಬಲ ಎಲ್ಲಕ್ಕಿಂತ ಹೆಚ್ಚಾಗಿ ದೂರದೃಷ್ಟಿಯ ನಾಯಕತ್ವ ಕೆಲಸ ಮಾಡಿದೆ.
ಇದನ್ನೇ ಆಧರಸಿ ಸಮೀಪದ ದೌಸಾ ಸುತ್ತಮುತ್ತಲಿನ ೩೫ ಗ್ರಾಮದ ಮಂದಿ ಒಗ್ಗಟ್ಟಾಗಿ ಬತ್ತಿ ಹೋಗಿದ್ದ ಬಾಡಗಂಗಾವನ್ನೂ ಪುನಶ್ಚೇತನಗೊಳಿಸಿದ್ದಾರೆ. 18 ಕಿ.ಮೀ. ಉದ್ದದ ಸಕಟ್ ವಾಲಿ ಮತ್ತೆ ನಕ್ಕಿದೆ. ಹೀಗೆ ಜಲ ಯಶೋಗಾಥೆಗಳ ಸರಣಿ ಇಂದಿಗೂ ರಾಜಸ್ಥಾನದಲ್ಲಿ ಮುಂದುವರಿದಿದೆ. ಎಲ್ಲಕ್ಕೂ ಪ್ರೇರಣೆ ಮಾತ್ರ ನಾಂಡೂವಾಲಿಯೇ. ಕೇವಲ 350 ಮಿಮಿ ಮಳೆ ಬೀಳುವ ರಾಜಸ್ಥಾನದಲ್ಲಿ ಆದದ್ದು ಹೇರಳ ಮಳೆ ಸರಾಸರಿಯ ನಮ್ಮ ಕರ್ನಾಟಕ
ದಲ್ಲಿಯೂ ಖಂಡಿತಾ ಆಗಬಹುದಲ್ಲವೇ? ಮನಸ್ಸು ಮಾಡಬೇಕಷ್ಟೇ.