Wednesday, 27th November 2024

ಅಷ್ಟಕ್ಕೂ ಚರ್ನೋಬಿಲ್‌ ರಷ್ಯಾ ವಶವಾದರೇನು ?

ಸುಪ್ತ ಸಾಗರ

ರಾಧಾಕೃಷ್ಣ ಎಸ್.ಭಡ್ತಿ

rkbhadti@gmail.com

ಇದು ಇನ್‌ಸ್ಟಂಟ್ ಯುಗ. ಸ್ಥಳದಲ್ಲೇ ಡ್ರಾ, ಸ್ಥಳದಲ್ಲೇ ಬಹುಮಾನ ಇಂದಿನ ಸಿದ್ಧಾಂತ. ಇಲ್ಲಿ ಮಾಡಿದ ಪಾಪಗಳಿಗೆ ಮನುಷ್ಯನಿಗೆ ಇನ್ನೆಲ್ಲೋ ಸತ್ತಮೇಲೆ, ನರಕ ದರ್ಶನವಾಗುತ್ತದೆ ಎಂಬ ಕರ್ಮ ಸಿದ್ಧಾಂತ ತುಂಬ ಹಳೆಯದಾಯಿತು. ಈಗೇನಿದ್ದರೂ ಇಲ್ಲಿ ಮಾಡಿದ್ದಕ್ಕೆ ಇಲ್ಲಿಯೇ ಅನುಭವಿಸಬೇಕು.

ಇಲ್ಲಿನ ಪಾಪಕ್ಕೆ ಇಲ್ಲಿಯೇ ಪ್ರಾಯಶ್ಚಿತ್ತ, ಇಲ್ಲೇ ಪಿಂಡ ಪ್ರಧಾನ, ಇಲ್ಲೇ ಪಿತೃತರ್ಪಣವೂ… ಪರಮಾಣು ವೆಂಬ ಮಹಾನ್(?) ಸಂಶೋಧನೆಯನ್ನು ಮುಂದಿಟ್ಟು ಕೊಂಡು ಬೀಗುತ್ತಿದ್ದ ಮನುಕುಲಕ್ಕೆ, ಅದು ಘಟಸರ್ಪವನ್ನು ಮಡಿಲಲ್ಲಿಟ್ಟಕೊಂಡು ಸಾಕಿದಂತೆ ಎಂಬುದನ್ನು ಮೊಟ್ಟ ಮೊದಲ ಬಾರಿಗೆ ಮನವರಿಕೆ ಮಾಡಿಕೊಟ್ಟದ್ದು ‘ಚರ್ನೋಬಿಲ್ ಅಣುಸ್ಥಾವರ’ದ ದುರಂತ.

ಘಟಸರ್ಪಕ್ಕೆ ಹಾಲೂಡಿಸಿದವಳು, ವಿಷ ಹಾಕಿದವಳೆಂಬ ಭೇದವಿಲ್ಲ. ಎಲ್ಲರನ್ನೂ ಸಮಾನವಾಗಿ ಕಚ್ಚಿ ಕಾರ್ಕೋಟಕವನ್ನು ಪೂಸುತ್ತದೆ; ಪೂತ್ಕರಿಸು ತ್ತದೆ. ಹಾಗೊಮ್ಮೆ ಪರಮಾಣು ಕೇಂದ್ರವೆಂಬ ಘಟಸರ್ಪ ಪೂತ್ಕರಿಸಿದ್ದ ಭಯಾನಕ ನೆನಪನ್ನು ಮೂವತ್ತೈದು, ನಲವತ್ತು ವರ್ಷಗಳಾದ ಮೇಲೂ, ಇಂದಿಗೂ ಜಗತ್ತಿಗೆ ಮರೆಯಲಾಗುತ್ತಿಲ್ಲ. ಆ ಪೂತ್ಕಾರಕ್ಕೆ ಸಿಲುಕಿ ಮಡಿದವರೆಷ್ಟೋ; ಮಣಿದವರೆಷ್ಟೋ; ಇಂದಿಗೂ ಮರುಗುತ್ತಿರು ವವರೆಷ್ಟೋ? ಸಾವಿನ ಮನೆಯ ದರ್ಶನ ಎಂದಿಗೂ ಸವಿಯಾಗಿರಲು ಸಾಧ್ಯವೇ ಇಲ್ಲ; ಅಲ್ಲವೇ? ಅಂಥ ಭೀಕರ ಅಣು ರಕ್ಕಸನಿಗೆ ಮೂರು ಕರಾಳ ಕಣ್ಣುಗಳು; ಆಲಾ-ಬೀಟಾ ಮತ್ತು ಗಾಮಾ ಕಿರಣಗಳೆಂಬುದು.

ಧಮನಿ ದಮನಿಗಳನ್ನು ಹೊಕ್ಕು, ಮನುಷ್ಯನ ರಕ್ತವನ್ನು ಕ್ಷಣದಲ್ಲಿ ಹೀರಿ, ಆಪೋಷಶನ ತೆಗೆದುಕೊಂಡು ಆವಿಯಾಗಿಸಿಬಿಡುವ ಶಕ್ತಿ ಸಾಮರ್ಥ್ಯ ಗಳಿರುವ ಅವಕ್ಕೆ ದಾವಾಗ್ನಿಯ ಕೆನ್ನಾಲಗೆಗಳೂ ಸಾಟಿಯಾಗಲಾರದು. ಗೊತ್ತಿದ್ದೂ ಗೊತ್ತಿದ್ದೂ ಅಂಥ ರಕ್ಕಸ ಘಟ ಸರ್ಪವನ್ನು ಮಡಿಲಲ್ಲಿಟ್ಟು ಹೆಮ್ಮೆಯಿಂದ ಸಾಕುತ್ತಿದ್ದುದು ಇದೇ ರಷ್ಯಾ. ಕಚ್ಚುವುದು, ವಿಷ ಕಕ್ಕುವುದು ಹಾಗಿರಲಿ, 26 ಏಪ್ರಿಲ್ 1986ರ ಆ ಕರಾಳರಾತ್ರಿ ಒಮ್ಮೆ ಘಟಸರ್ಪ ಬುಸುಗುಟ್ಟಿದ್ದ ಮಾತ್ರಕ್ಕೆ ನಲುಗಿ ನಾಚಾರೆದ್ದು ಹೋಗಿತ್ತು ಅರ್ಧ ಜಗತ್ತು.

ಯಾವುದೇ ಕಾರಣಕ್ಕೂ, ಎಂಥದ್ದೇ ಸನ್ನಿವೇಶದಲ್ಲೂ ನಾನು ಸಾಕಿದ ಈ ಅಣುಸ್ಥಾವರವೆಂಬ ‘ಮುದ್ದು ಹಾವಿನ ಮರಿ’ ನನ್ನನ್ನೇ ಹೆಡೆ ತಿರುಗಿಸಿ ಕಚ್ಚಲು ಸಾಧ್ಯವೇ ಇಲ್ಲ ಎಂದು ಹೆಮ್ಮೆಯಿಂದ ಮೆರೆಯುತ್ತಿದ್ದ ಅಂದಿನ ಯುನೈಟೆಡ್ ಸ್ಟೇಟ್ಸ್ ಆಫ್ ಸೋವಿಯತ್ ರಷ್ಯಾ(ಯುಎಸ್‌ಎಸ್‌ಆರ್), ಆ ರಾತ್ರಿ ಸಣ್ಣ ದೊಂದು ನಿದ್ದೆಯ ಮಂಪರಿನ ಕನವರಿಕೆಯಲ್ಲಿದ್ದಾಗಲೇ ಆರ್‌ಎಂಬಿಕೆ ರಿಯಾಕ್ಟರೆಂಬ ಅದರ ಒಂದೇ ಹೆಡೆಯನ್ನೆತ್ತಿ ಬಡಿದಿತ್ತು.

ಅಷ್ಟೇ, ಇವತ್ತೇನು ಯುದ್ಧಭೂಮಿಯಾಗಿ ಪರಿವರ್ತಿತವಾಗಿದೆಯೋ ಇದೇ ಉಕ್ರೇನಿನ ‘ಪ್ರಿಪ್ಯಾತ್’ ಎಂಬ ಸಣ್ಣಪಟ್ಟಣ ಕ್ಷಣದಲ್ಲಿ ಸ್ಮಶಾನವಾಗಿ ಪರಿವರ್ತನೆಯಾಗಿತ್ತು. ಏನಾಗುತ್ತಿದೆ ಎಂಬುದು ಅರಿವಾಗುವುದರೊಳಗೆ ಮೂವತ್ತಕ್ಕೂ ಹೆಚ್ಚು ಮಂದಿ ಆವಿಯಾಗಿ ಹೋಗಿದ್ದರು. ರಷ್ಯಾ ಸ್ಥಾಪಿಸಿ ಮರೆಯುತ್ತಿದ್ದ ಆ ಅಣುಸ್ಥಾವರದ ನಾಲ್ಕು ರಿಯಾಕ್ಟರುಗಳ ಪೈಕಿ 4ನೇ ರಿಯಾಕ್ಟರ್ ಅನಿಯಂತ್ರಿತವಾಗಿ ಸೋಟಿಸಿತ್ತು. ರೆಪ್ಪೆ ಮಿಟುಕಿಸುವಷ್ಟರಲ್ಲಿ ಆ ಬ್ಲಾಕಿನ ಎಡೆ ಬೆಂಕಿಯ ಕೆನ್ನಾಲಗೆಗಳು ಚಾಚಿದ್ದವು.

ಬೃಹತ್ ಚಿಮಣಿಯೊಳಗೆ ಅವಿತಿದ್ದ ಕಬ್ಬಿಣ, ಉಕ್ಕು, ಕಾಂಕ್ರೀಟು, ಗ್ರಾ-ಟುಗಳು ಸುತ್ತ ಹತ್ತು ದಿಕ್ಕಿಗೆ ಚೆಲ್ಲಾಡಿ ಹೋಗಿದ್ದವು. ಕುಲುಮೆ ಯೊಳಗೆ ಕಾದ ಸೀಸದಂತೆ ಕೆಂಪಗೆ ನಿಗಿನಿಗಿ ನಿಗಿದಾಡುತ್ತಿದ್ದ ಅವುಗಳು ತಾಕಿದ ಮಾತ್ರಕ್ಕೆ ಕರಕಲಾಗಿ ಬೀಳುವಷ್ಟು ಶಕ್ತಿಯುತವಾಗಿತ್ತು ಅದರ ಬಿಸಿ. ಆ ಗಾಬರಿಯಿಂದ ಚೇತರಿಸಿಕೊಂಡು ಏನಾಗುತ್ತಿದೆಯೆಂಬುದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲೇ ‘ಚೆರೆಂಕೋವ್’ ಎಂಬ ತಿಳಿನೀಲ ವರ್ಣದ ವಿಕಿರಣಗಳು ನೇರ ನಭದೆಡೆಗೆ ಮುಖ ಮಾಡಿ ಚಿಮ್ಮಲಾರಂಭಿಸಿದ್ದವು. ಭೂಮ್ಯಾಕಾಶಗಳನ್ನು ಬೆಸೆಯುವ ನೀಲಕಂಬದಂತೆ ಅದು ನಿಂತಿತ್ತು.

‘ಏನೋ ಆಗುತ್ತಿದೆ, ಅಣುಸ್ಥಾವರದಲ್ಲಿ ಬೆಂಕಿ, ಬೆಂಕಿ’ ಅಂತ ಕೂಗಿದ್ದಷ್ಟೇ, ಸುತ್ತಲಿದ್ದವರು ಓಡೋಡಿ ಬಂದರು. ಬೆಂಕಿ ಆರಿಸಲು ಅಗ್ನಿ ಶಾಮಕ ಸಿಬ್ಬಂದಿಯೂ ದಾಂಗುಡಿಯಿಟ್ಟರು. ಆರಿಸಲು ಸಿಗುವಷ್ಟು ಸಣ್ಣ ಬೆಂಕಿಯೇ ಅದು? ಮನುಕುಲವನ್ನೇ ಆಪೋಷನ ತೆಗೆದುಕೊಂಡು ಬಿಡಬಹುದಾದಂಥ ದಾವಾಗ್ನಿ. ಅದರ ಪ್ರಭಾವಲಯದೊಳಕ್ಕೆ ಬರುತ್ತಿದ್ದಂತೆ ರಕ್ತ ಕಕ್ಕುತ್ತ ನಿಶ್ಚೇಷ್ಟಿತರಾಗಿ ಬಿದ್ದಿದ್ದರು ಅವರಲ್ಲೊಂದಿಷ್ಟು ಮಂದಿ. ಎಲ್ಲಾ ಅಜಾಗರೂಕತೆ ಯಿಂದ ಸಣ್ಣ ಸೋಟ ಆಗಿ ಬೆಂಕಿ ಹೊತ್ತಿಕೊಂಡಿದೆ. ಅದನ್ನು ಆರಿಸಿದರಾಯಿತು ಎಂಬುದು ಸುತ್ತಲಿನವರೆಲ್ಲರ ಭಾವನೆ. ಆದರೆ ಅಸಲಿಗೆ ಆ ಸೋಟಕ್ಕೆ ಅಣುಸ್ಥಾವರದ ರಿಯಾಕ್ಟರ್ ಒಂದರ ಕೇಂದ್ರವೇ ತನ್ನ ಲಂಕಿಣಿಯ ಬಾಯಿ ತೆರೆದು ಕೂತಿತ್ತು. ಅದರಿಂದ ಹೊರಸೂಸುತ್ತಿದ್ದ ವಿಕಿರಣಗಳು ಸುತ್ತಲಿನವರ ನರನಾಡಿಗಳೊಳಕ್ಕೆ ಹೊಕ್ಕು ಸೀಳಲಾರಂಭಿಸಿತ್ತು.

ಇದ್ಯಾವುದರ ಅರಿವೂ ಅಲ್ಲಿದ್ದ ಯಾರಿಗೂ ಇರಲಿಲ್ಲ. ಅಷ್ಟೊಂದು ಮುಗ್ಧರಾಗಿದ್ದರೆಂಬುದಲ್ಲ, ಆದರೆ ಸ್ಥಳೀಯ ಆಡಳಿತ ತಾವು ಸ್ಥಾಪಿಸಿದ ಅಣು ಸ್ಥಾವರದ ಆ ರಿಯಾಕ್ಟರು ಯಾವುದೇ ಕಾರಣಕ್ಕೂ ಹಾಗೆ ಸಿಡಿಯಲು ಸಾಧ್ಯವೇ ಇಲ್ಲ ಎಂದು ಬಲವಾಗಿ ನಂಬಿತ್ತು; ಹಾಗೆಯೇ ಎಲ್ಲರನ್ನೂ ನಂಬಿಸಿತ್ತು. ಇಂಥ ಅಸೀಮ ನಂಬಿಕೆಯ ಬಲೆಯಲ್ಲಿ ಸಿಲುಕಿರುವಾಗಲೇ ಪ್ರಿಪ್ಯಾತ್ ಪಟ್ಟಣದ ಸುತ್ತ ಮುತ್ತಲಿನ ಮುನ್ನೂರು ಚದರ ಕಿಲೋಮೀಟರಿನ ಆಸುಪಾಸಿನ ಅಷ್ಟೂ ಜೀವಿಗಳು; ಗಮನಿಸಿ ಕೇವಲ ಮನುಷ್ಯರಲ್ಲ, ಎಲ್ಲ ಜೀವಿಗಳೂ ರಣಭಯಂಕರ ಅಣುವಿಕಿರಣದ ಆಕ್ರಮಣಕ್ಕೆ ತುತ್ತಾಗಿದ್ದರು. ಮತ್ತೆಂದೂ ಅವರ‍್ಯಾರೂ ಮೊದಲಿನಂತೆ ಸಹಜವಾಗಿ ಬದಕುವ ಪ್ರಮೇಯವೇ ಉಳಿದಿ ರಲಿಲ್ಲ!

ಆಗಿದ್ದನ್ನು ಪತ್ತೆ ಹಚ್ಚುವಷ್ಟರಲ್ಲಿ ಬರೋಬ್ಬರಿ ನಲವತ್ತೆಂಟು ಗಂಟೆಗಳು, ಅಂದರೆ ಎರಡು ದಿನಗಳೇ ಕಳೆದುಹೋಗಿದ್ದವು. ಮಗಳು ಮೈ ನೆರೆದಷ್ಟೇ ಸಹಜವಾಗಿದ್ದರೆ ಒಪ್ಪಬಹುದಿತ್ತು. ಆದರೆ ಇದು ಈಗಷ್ಟೇ ಮೈನೆರೆದ ಮಗಳ ಮೇಲೆ ಅಪ್ಪನೇ ರಾತೋರಾತ್ರಿ ಅಮಲಲ್ಲಿ ಅತ್ಯಾಚಾರ ಎಸಗಿದಂಥ ಹೇಸಿಗೆ ಯನ್ನು ಎದುರುಹಾಕಿಕೊಂಡಿತ್ತು ಅವಿಭಜಿತ ರಷ್ಯಾ. ಇಡೀ ರಾದ್ಧಾಂತವನ್ನು ಮನೆಯಲ್ಲೇ ಮುಚ್ಚಿ ಹಾಕಲು ನಿರ್ಧರಿಸಿದ್ದರು ಕಮ್ಯೂನಿಸ್ಟರು. ಘಟನೆಯನ್ನೇನೋ ಮುಚ್ಚಿಡಬಹುದು; ಆದರೆ ಅದರಿಂದ ಬಂದ ಬಸಿರನ್ನು ಮುಚ್ಚಿಡ ಲಾದೀತೇ? ಇದೂ ಹಾಗೆಯೇ, ಅಪ್ಪನಿಂದ ಬಸಿರಾದ ಮಗಳಂತೆಯೇ ಅಣುಸ್ಥಾವರದೊಳಗೆ ಅಂದಿನ ರಾತ್ರಿ ನಡೆದ ಸೋಟದ ಸುದ್ದಿಯನ್ನೇನೋ ಮುಚ್ಚಿಟ್ಟರು.

ಆದರೆ, ನಂತರದ ಕ್ಷಣದಿಂದಲೇ ಹಬ್ಬಲಾರಂಭಿಸಿದ ಅಕ್ರಮದ ಬಸಿರು, ವಿಕಿರಣವನ್ನು ತಡೆಯಲು ಸಾಧ್ಯವೇ ಆಗಲಿಲ್ಲ. ಒಂದೇ ದಿನಕ್ಕೆ ಸಾವಿರಾರು ಕಿಲೋಮೀಟರ್ ವ್ಯಾಪ್ತಿಗೆ ಅದು ಹಬ್ಬಲಾರಂಭಿಸಿತ್ತು. ಹೇಗಾದರೂ ಮಾಡಿ ಮುಖವುಳಿಸಿಕೊಳ್ಳಬೇಕೆಂದು ನಿರ್ಧರಿಸಿದ ರಷ್ಯಾ, ಸ್ಫೋ ನಡೆದೇ ಇಲ್ಲ ಎಂದ ಕಮ್ಯುನಿಷ್ಟ್ ಆಡಳಿತ, ಕಳ್ಳ ಬಸಿರನ್ನು ತೆಗೆಸಿ ತಿಪ್ಪೆ ಸಾರಿಸಲು ‘ಪ್ರಾಜೆಕ್ಟ್’ ಒಂದನ್ನು ಸಿದ್ಧಪಡಿಸಿತು. ಇಡೀ ಆಡಳಿತ ಶಕ್ತಿಯನ್ನು ಒಟ್ಟುಗೂಡಿಸಿ ವಿಜ್ಞಾನಿಗಳು, ತಂತ್ರಜ್ಞರು, ತಜ್ಞರನ್ನೊಳಗೊಂಡ ಲಕ್ಷಾಂತರ ಜನರ ತಂಡವೊಂದನ್ನು ಇದಕ್ಕಾಗಿ ನಿಯೋಜಿಸಿತು.

ಯಾರ‍್ಯಾರೂ ಅಣುಸ್ಥಾವರವನ್ನು ಗುಡಿಸಿ, ಸಾರಿಸಿ, ಮೊದಲಿನಂತೆ ಸ್ವಚ್ಛಗೊಳಿಸಿ ರಂಗೋಲಿ ಇಕ್ಕಲು ಸಿದ್ಧರಾಗುತ್ತೀರೋ, ಅವರೆಲ್ಲರಿಗೆ ಆಕರ್ಷಕ ಸಂಬಳ, ಸಾರಿಗೆಯನ್ನು ಕೊಡುವುದಾಗಿಯೂ ಘೋಷಿಸಿತು. ಬಹುತೇಕರಿಗೆ ತಾವು ಎಂಥಾ ಸಾವಿನ ದವಡೆಗೆ ಸಿಲುಕುತ್ತಿದ್ದೇವೆ ಎಂಬುದರ ಅರಿವೂ ಇಲ್ಲ. ಅರಿವಿದ್ದು ಹಿಂದೆಗೆದವರನ್ನು ಬಲವಂತವಾಗಿ, ಜಬರ್‌ದಸ್ತ್ ಮಾಡಿ ಕೆಲಸಕ್ಕೆ ನಿಯೋಜಿಸಿತು. ಬೇರೆ ದಾರಿಗಾಣದೇ, ಅಂಗವೈಕಲ್ಯ, ನಿರ್ವಿರ್ಯತೆ, ಕ್ಯಾನ್ಸರ್ ನ ಅಪಾಯವನ್ನು ಬಗಲಲ್ಲಿ ಕಟ್ಟಿಕೊಂಡೇ, ಜೀವವನ್ನು ಬಿಗಿಮುಷ್ಟಿಯಲ್ಲಿಟ್ಟುಕೊಂಡು ಅಣುಸ್ಥಾವರದ ಅಂಗಳಕ್ಕೆ ಬಂದು ನಿಂತರು ಲಕ್ಷಾಂತರ ಮಂದಿ. ಆ ಕ್ಷಣಕ್ಕೆ ರಷ್ಯಾದ ‘ಮನೆತನದ ಮರ್ಯಾದೆ’ ಪ್ರಶ್ನೆಯಾಗಿತ್ತು ಆ ಅಕ್ರಮ ಬಸಿರು!

ಅದನ್ನು ಇಳಿಸಲೇಬೇಕಿತ್ತು. ಸಾವಿಗೂ ಅಂಜದ ‘ಮಹಾ ಮಾನವತಾವಾದಿ ಕಾಮ್ರೇಡು’ ಗಳು ಎಲ್ಲವನ್ನೂ ಮರೆತು ಒಟ್ಟಾಗಿ ಸಾವಿನ ವಿರುದ್ಧದ ಹೋರಾಟಕ್ಕೆ ಟೊಂಕಕಟ್ಟಿ ನಿಂತಿದ್ದರು. ಬಹಳಷ್ಟು ಮಂದಿಗೆ ಅತ್ತ ದರಿ, ಇತ್ತ ಪುಲಿ ಎನ್ನುವ ಪರಿಸ್ಥಿತಿ. ಇಲ್ಲಿದ್ದು, ಕೆಲಸವನ್ನು ನಿರಾಕರಿಸಿದ ಕಾರಣಕ್ಕೆ ನರಕ ಅನುಭವಿಸುವುದಕ್ಕಿಂತ ಅಲ್ಲಿ ಹೋಗಿ ನೇರ ಸಾವನ್ನು ಸ್ಪರ್ಶಿಸುವುದೇ ಲೇಸೆನಿಸಿರಬೇಕು. ಬೇರೆ ದಾರಿಯಾದರೂ ಏನಿತ್ತು? ಒಂದು ಕಡೆಯಿಂದ ಬಳಿದು, ಗುಡಿಸಿ ಗುಂಡಾಂತರಗೊಳಿಸುವ ಕಾರ್ಯ ಶುರುವಾದದ್ದು ಮೂರನೇ ದಿನದ ಹೊತ್ತಿಗೆ.

ಆದರೆ, ಘಟಸರ್ಪ ಕೆರಳಿ ಬುಸುಗುಡುತ್ತಲೇ ಇತ್ತು. ರಿಯಾಕ್ಟರ್ ವಿಕಿರಣವನ್ನು ಹೊರಸೂಸುತ್ತಲೇ ಇತ್ತು. ಆದ ಅತ್ಯಾಚಾರದ ನೋವಿನ ಚೀರಾಟ, ಕೂಗಾಟಗಳು. ಹಾಗೆ ಒಮ್ಮೆಲೆ ನಿಂತು ಹೋಗಲು ಸಾಧ್ಯವೇ? ಕೊನೆಪಕ್ಷ ನಿಟ್ಟುಸಿರುಗೈಯ್ಯುವ ಹಂತಕ್ಕಾದರೂ ತರಬೇಕೆಂದು ನಿಂತದ್ದು ಅತ್ಯಾಚಾರಿ ಕಮ್ಯುನಿಸ್ಟ್ ಆಡಳಿತ. ಅದಕ್ಕೂ ಮೊದಲು ಮನೆಯಲ್ಲಿದ್ದವರನ್ನೆಲ್ಲ ಖಾಲಿ ಮಾಡಿಸಲೇಬೇಕಿತ್ತು. ಆ ಬೆಳಗ್ಗೆ ರಷ್ಯಾ ಸರಕಾರಿ ರೇಡಿಯೋ ಏನೂ ಆಗಿಯೇ ಇಲ್ಲವೆಂಬಂತೆ ಉಲಿದಿತ್ತು-‘ಸಣ್ಣದೊಂದು ಸ್ಫೋದಿಂದಾದ ಹಾನಿ ಸರಿಪಡಿಸುವ ಕಾರ್ಯಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಕೇವಲ ಮೂರೆಂದರೆ, ಮೂರೇ ದಿನ ಸುತ್ತಮುತ್ತಲಿನ ಪ್ರದೇಶದ ಜನ ಸ್ಥಳಾಂತರಗೊಳ್ಳಬೇಕು.

ಹೇಗಿದ್ದೀರೋ, ಹಾಗೆಯೇ ನಿಮ್ಮನ್ನು ಕರೆದುಕೊಂಡು ಹೋಗಲು ಬರುವವರ ಜತೆಗೆ ಹೊರಟುಬಿಡಿ. ಎಲ್ಲ ಮುಗಿದ ಮೇಲೆ ಮತ್ತೆ ಎಂದಿನಂತೆ ನಿಮ್ಮಲ್ಲಿಗೇ ಕರೆತಂದು ಬಿಡುತ್ತೇವೆ’. ಮೊಟ್ಟಮೊದಲಿಗೆ ಇಡೀ ಪಟ್ಟಣದಲ್ಲಿ ಒಂದು ನರಪಿಳ್ಳೆಯೂ ಉಳಿಯದಂತೆ ಎಲ್ಲರನ್ನೂ ಹೊರದಬ್ಬಲಾಯಿತು. ನೂರಾರು ಸೇನಾ ವಾಹನಗಳಲ್ಲಿ, ಸಾವಿರಾರು ಮಂದಿ ಹಗಲಿರುಳೂ ಗುದ್ದಾಡಿ ಎಲ್ಲರನ್ನೂ ಹೊರಗೆ ಕಳುಹಿಸಿದ ನಂತರ, ಅಕ್ರಮ ಪಿಂಡಕ್ಕೊಂದು ಗತಿ ಕಾಣಿಸುವ ಕೆಲಸ ಆರಂಭವಾಗಿತ್ತು. ಮತ್ತೆ ನೂರಾರು ಸೇನಾ ಹೆಲಿಕಾಪ್ಟರುಗಳು ಎಲ್ಲೆಲ್ಲಿಂದಲೋ ಮರಳು, ಸಿಮೆಂಟು, ಬೋರಾನ್ ಇತ್ಯಾದಿಗಳ ಮಿಶ್ರಣವನ್ನು ಹೊತ್ತು ಹಾರಿಬಂದು ನಿರಂತರ 24 ಗಂಟೆಯೂ ಹೊತ್ತಿ ಉರಿಯುತ್ತಿದ್ದ ರಿಯಾಕ್ಟರ್‌ನ ಮೇಲೆ ಸುರಿದವು.

ಆಗಸದೆತ್ತರಕ್ಕೆ ಚಾಚಿದ್ದ ವಿಕಿರಣಗಳ ಕೆನ್ನಾಲಗೆ, ದಟ್ಟ ರಾಸಾಯನಿಕಯುಕ್ತ ಹೊಗೆಯಲ್ಲಿ ಸಿಲುಕಿ ಅಲ್ಲೇ ಉಸಿರುಗಟ್ಟಿದವರೆಷ್ಟೋ? ಅದನ್ನೇ ಉಸಿರಾಡಿ ಮುಂದಿನ ಐದಾರು ವರ್ಷಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ, ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿ ಅಸುನೀಗಿದವರೆಷ್ಟೋ? ಅಂತೂ ಅವಿಭಜಿತ ರಷ್ಯಾದ ಮೂಲೆಮೂಲೆಗಳಿಂದ ಬಂದ ಲಕ್ಷಾಂತರ ಮಂದಿ ಯದ್ಧೋಪಾದಿಯಲ್ಲಿ ಈ ಕಾರ್ಯಕ್ಕೆ ಕೈಜೋಡಿಸಿದರು.

ಇಷ್ಟಾದರೂ ಪೈಶಾಚಿಕ ವಿಕರಣಗಳನ್ನು ಹದ್ದಬಸ್ತಿಗೆ ತರಲಾಗಲೇ ಇಲ್ಲ. ಇದಷ್ಟೇ ಅಲ್ಲ, ರಿಯಾಕ್ಟರಿನಿಂದ ಹೊರ ಸೂಸುತ್ತಿರುವ ಸಾವಿರಗಟ್ಟಲೇ ಡಿಗ್ರಿ ಸೆಲ್ಷಿಯಸ್ ಉಷ್ಣಾಂಶದ ಯುರೇನಿಯಂ ಭೂಗರ್ಭ ಸೇರಿಸಬೇಕಿತ್ತು. ಅಲ್ಲೂ ಅಪಾಯಗಳಿಲ್ಲದಿಲ್ಲ. ಪಟ್ಟಣದ ಪಕ್ಕದಲ್ಲೇ ಹರಿಯುವ ಪ್ರಿಪ್ಯಾತ್ ನದಿ, ಅದನ್ನೂ ದಾಟಿ ಸಮುದ್ರ, ಎಲ್ಲವೂ ಕಾರ್ಕೋಟಕವಾಗಿ ಮಾರ್ಪಡುವ ಎಲ್ಲ ಅಪಾಯಗಳಿದ್ದವು. ಈ ಬಗ್ಗೆ ವಿಜ್ಞಾನಿಗಳು ಎಚ್ಚರಿಸುತ್ತಿದ್ದಂತೆಯೇ ಆ ವಿಕಿರಣಗಳನ್ನು ಅಲ್ಲೇ ಭೂಗತಗೊಳಿಸಿ, ಸಮಾದಿಕಟ್ಟುವುದಾಗಿ ನಿರ್ಧಾರವಾಯಿತು.

ರಿಯಾಕ್ಟರ್ ಇರುವ ಸ್ಥಳದಲ್ಲೇ 30-40 ಅಡಿ ಆಳಕ್ಕೆ ಅಗೆದು ಸೀಸದ ಕಾಂಕ್ರೀಟ್ ಅನ್ನು ಹಾಕಿ ಸಮಾದಿ ಕಟ್ಟಲು 300-400 ಕೆಲಸಗಾರರನ್ನು ನಿಯೋಜಿಸಲಾಯಿತು. ಒಂದಿನಿತೂ ರಿಯಾಕ್ಟರ್ ಅಲುಗಾಡದಂತೆ ಭೂಮಿಯನ್ನು ನಡುಗಿಸದೇ ಅಗೆಯಬೇಕಿತ್ತು. ಒಂದಿಡೀ ತಿಂಗಳು ನರಕ ಹಿಂಸೆ ಅನುಭವಿಸಿದ ಆ ಕಾರ್ಮಿಕರಲ್ಲಿ ಅದೆಷ್ಟೋ ಮಂದಿ ನಂತರದ ಆರೋಗ್ಯದಲ್ಲಿನ ಏರುಪೇರು ಸಹಿಸ ಲಾಗದೇ ಆತ್ಮಹತ್ಯೆಗೆ ಶರಣಾದರು. ಹಾಗೂ ಗಟ್ಟಿ ಗುಂಡಿಗೆಯವರನ್ನು ವಿಕಿರಣದ ಪರಿಣಾಮ ಬದುಕಗೊಡಲಿಲ್ಲ.

ಏನು ಮಾಡಿದರೂ ಪರಿಣಾಮ ಊಹಿಸಿದ್ದಕ್ಕಿಂತ ಅಸಹ್ಯವಾಗಿತ್ತು. ಇಷ್ಟಾಗುವ ಹೊತ್ತಿಗಾಗಲೇ ಇಡೀ ಪ್ರಿಪ್ಯಾತ್ ಪಟ್ಟಣ ಮತ್ತು ಸುತ್ತಲಿನ 30-35 ಕಿ.ಮೀ. ವ್ಯಾಪ್ತಿಯ ಪ್ರದೇಶ ಶಾಶ್ವತವಾಗಿ ಬರಡಾಗಿ ಹೋಗಿತ್ತು. ಪಟ್ಟಣದ ಸುತ್ತಮುತ್ತಲ ವಸತಿ ಪ್ರದೇಶದಲ್ಲಿನ ಅಳುದಿಳಿದ ಕುರಿ-ಕೋಳಿ, ಬೆಕ್ಕು- ನಾಯಿ, ಹಸು-ಹಂದಿ ಮಾತ್ರವಲ್ಲ ಸಮೀಪದ ಕಾಡಿನಲ್ಲಿದ್ದ ಜೀವಿಗಳನ್ನೂ ಹಿಡಿ ತಂದು ತಮ್ಮ ಶಸಾಸಗಳೊಂದಿಗೇ ಹೂತುಹಾಕಿ ಸುಂದರ ಸಮಾದಿಕಟ್ಟಿ, ಕಾರ್ಯಾಚರಣೆಯ ಸುಳಿವೂ ಸಿಗದಂತೆ ಮಾಡಿಟ್ಟರು ರಷ್ಯನ್ ಯೋಧರು. ಹೋಗಲಿ ಎಂದರೆ ಎರಡು ಸಾವಿರಕ್ಕೂ ಮಿಕ್ಕಿದ್ದ ಆ ಸೈನಿಕರಾದರೂ ಉಳಿದರಾ ಅಂದರೆ ಮುಂದಿನ 5-8 ವರ್ಷಗಳ ಅವಧಿಯಲ್ಲಿ ಅವರಲ್ಲಿ ಬಹುತೇಕರು ನಿರ್ವಿರ್ಯರಾಗಿ ಯುದ್ಧ ಮಾಡುವುದಿರಲಿ, ಓಡಾಡಲೂ ಆಗದ ಸ್ಥಿತಿಯಲ್ಲಿ ಸೈನ್ಯದಿಂದ ಹೊರದಬ್ಬಿಸಿಕೊಂಡು ಮನೆಗಳಿಗೆ ಹಿಂತಿರುಗಿ, ನಿಕೃಷ್ಟ ಸಾವು ಕಂಡರು. ಕೊನೆಗೂ ಆ ಅಣುಸ್ಥಾವರದ ಶವಪೆಟ್ಟಿಗೆಗೆ ಕೊಟ್ಟ ಕೊನೆಯ ಮೊಳೆ ಹೊಡೆಯಲಾಯಿತು.

ಹಾಗೆ ನೋಡಿದರೆ ಆ ರಾತ್ರಿ, ಮಾನುಕುಲದ ಇತಿಹಾಸವೇ ಬದಲಾಗಿತ್ತು. ಆ ದುರಂತದೊಂದಿಗೆ ಪರಮಾಣು ಶಕ್ತಿಯ ಬಗೆಗಿದ್ದ ದೃಷ್ಟಿಕೋನ ಬದಲಾ ಗಿತ್ತು. ಆ ನಸುಕಿನ 1:23ಕ್ಕೆ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದ ಆ ರಿಯಾಕ್ಟರ್ ಹಾಗೆ ಬೊಬ್ಬಿರಿಯದಿದ್ದರೆ ಇಂದಿಗೂ ನಮ್ಮೆಲ್ಲರನ್ನೂ ‘ಅಭಿವೃದ್ಧಿ’ಯ ಹೆಸರಿನಲ್ಲಿ ನಂಬಿಸಿ ಇನ್ನೆಷ್ಟು ಇಂಥ ಘಟಸರ್ಪಗಳನ್ನು ಸಾಕುವ ಅಪಸವ್ಯಗಳಿಗೆ ಪಂಚಾಂಗ ಕಟ್ಟ ಬೇಕಿತ್ತೋ? ಆ ಒಂದು ಘಟನೆ ಯಿಂದ ಐಎನ್‌ಇಎಸ್ ಪ್ರಮಾಣದಲ್ಲಿ ಏಳು ಹಂತದ ಅನಾಹುತವನ್ನು ಅನುಭವಿಸ ಬೇಕಾಗಿ ಬಂತು.

ಇಡೀ ರಷ್ಯಾ ಮಾತ್ರವಲ್ಲ, ಐರೋಪ್ಯ ರಾಷ್ಟ್ರಗಳು, ನೆರೆ ಅಮೆರಿಕದ ಕೆನಡಾ, ಸಾಮೀಪ್ಯದ ಹತ್ತಾರು ರಾಷ್ಟ್ರಗಳಲ್ಲಿ ಇಂದಿಗೂ ಅಚ್ಚಳಿಯದೇ ಅದರ ಕರಾಳ ಪರಿಣಾಮ ಮುಂದುವರಿದಿದೆ. ಇಟಲಿ ಗಾಳಿಯ ಮಾದರಿಯೇ ಬದಲಾಗಿದೆ. ಅದೆಷ್ಟೋ ರಾಷ್ಟ್ರಗಳ ಸುತ್ತಲಿನ ಮೋಡಗಳ ಚಲಯ ದಿಕ್ಕೇ ಬದಲಾಗಿದೆ. ಐದು ವರ್ಷದ ಕೆಳಗೆ, ಆ ದುರಂತದ 35 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ‘ಸೈನ್ಸ್ ಜರ್ನಲ್’ ಆ ವಿಕಿರಣಶೀಲ ಮೋಡಗಳಿಂದ ಬಳಲುತ್ತಿರುವ ಜನಸಂಖ್ಯೆಯ ಪರಿಣಾಮಗಳ ಕುರಿತು ಎರಡು ಸವಿಸ್ತಾರ ಅಧ್ಯಯನ ವರದಿಯನ್ನು ಪ್ರಕಟಿಸಿತ್ತು.

ಇಂದಿಗೂ ಉಕ್ರೇನ್, ಬೆಲಾರಸ್ ಸುತ್ತಮುತ್ತಲಿನ ಪ್ರದೇಶದ ಮಂದಿ ‘ಪ್ಯಾಪಿಲ್ಲರಿ ಥೈರಾಯ್ಡ್ ಕಾರ್ಸಿನೋಮ’ ಎಂಬ ಆರೊಗ್ಯ ಸಮಸ್ಯೆಯಿಂದ ಬಳಲು ತ್ತಿದ್ದಾರೆ. ಮಾತ್ರವಲ್ಲ, ದೇಹದಲ್ಲಿನ ಅಂಗಾಂಶಗಳು ಸತ್ತು ಒಳಗೊಳಗೇ ಶೇಖರಗೊಂಡು ಗಡ್ಡೆಯ ರೂಪಕ್ಕೆ ತಿರುಗಿ, ವಿಚಿತ್ರ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಇಂಥ ಥೈರಾಯ್ಡ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸಿದ ಕೀರ್ತಿ ಚರ್ನೋಬಿಲ್‌ಗೇ ಸಲ್ಲಬೇಕು.

ಇದಲ್ಲದೇ ಆ ಪ್ರದೇಶದ ಮಂದಿಯ ಜೀನೋಮಿಕ್, ಎಪಿಜೆನೊಮಿಕ್ ಮತ್ತು ಟ್ರಾನ್ಸ್‌ಕ್ರಿಪ್ರೋಮಿಕ್ ಮಾದರಿ ಸಂಗ್ರಹಿಸಿದಾಗ ಸಿಕ್ಕ ಡಾಟಾ ಭಯಾನಕ ಭವಿಷ್ಯವನ್ನು ಚಿತ್ರಿಸಿತ್ತು. ಅದರ ಪ್ರಕಾರ ವಿಕಿರಣದ ಒಡ್ಡುವಿಕೆಯಿಂದ ಮುಂದಿನ ಮೂರು ತಲೆಮಾರು ಥೈರಾಯ್ಡ ನಿಯೋಪ್ಲಾಸಿ ಯಾಕ್ಕೆ ಒಳಗಾಗುವ ಆತಂಕವನ್ನು ಹೊರಹಾಕಿದೆ. ಇದು ಪಾಲಿಜೆನಿಕ್ ರಿಸ್ಕ್ ಸ್ಕೋರ್ (ಒಬ್ಬ ವ್ಯಕ್ತಿಯ ರೋಗಿಯ ಆನುವಂಶಿಕ ಭೂದೃಶ್ಯದಿಂದ ಕ್ಯಾನ್ಸರ್ ಬೆಳವಣಿಗೆಯ ಸಂಭವನೀಯತೆ ಯನ್ನು ಲೆಕ್ಕಾಚಾರ ಮಾಡುವ ಒಂದು ವಿಧಾನ) ಅನ್ನು ಅತಿ ಚಿಕ್ಕ ವಯಸ್ಸಿನವರಲ್ಲೂ ಹೆಚ್ಚಿಸಿರುವುದು ಸಾಧಾರಣ ಸಂಗತಿ ಅಲ್ಲ.

ಇಂದಿಗೂ ಜೀನೋಮ್‌ಗಳು ವಿಕಿರಣದ ಅಡ್ಡ ಪರಿಣಾಮಕ್ಕೆ ಸಿಲುಕಿ ರೂಪಾಂತರ ಹೊಂದುತ್ತಲೇ ಇವೆ. ಒಂದಿಡೀ ಜನಾಂಗದವರ, ತಲೆಮಾರಿನವರ ದೇಹಗಳನ್ನು ಹೊಕ್ಕಿ ಕುಳಿತ ಇದನ್ನೆಲ್ಲ ಸೈನಿಕರನ್ನು ಬಿಟ್ಟು ಸ್ವಚ್ಛಗೊಳಿಸಲು ಆದೀತೇ? ಕಾದ ಸಿಸವನ್ನು ಸುರಿದು ಸಮಾಧಿ ಕಟ್ಟಲು ಆದೀತೆ? ಅಲ್ಲಿ ಅವತ್ತು ಸ್ಫೋಗೊಂಡು ಹೊರಸೂಸಿದ್ದು, ಎರಡನೇ ಮಹಾಯುದ್ಧದಲ್ಲಿ ಜಪಾನ್‌ನ ಹಿರೋಷಿಮಾ-ನಾಗಾಸಾಕಿಯನ್ನು ಸರ್ವನಾಶಗೊಳಿಸಿದ ಅಣುಬಾಂಬ್ ಸೂಸಿದ್ದಕ್ಕಿಂತ 400 ಪಟ್ಟು ಹೆಚ್ಚು ವಿಕಿರಣಶೀಲ ಅಂಶಗಳನ್ನು ಗಾಳಿಯಲ್ಲಿ ಸೇರಿಸಿತ್ತು ಎನ್ನುತ್ತಾರೆ ವಿಜ್ಞಾನಿಗಳು.

ಅನಧಿಕೃತವಾಗಿ ನಡೆದ ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದ್ದೆಂದರೆ ಬಹುದೊಡ್ಡ ರಿಯಾಕ್ಟರ್ ಹೆಚ್ಚಿನ ಒತ್ತಡವನ್ನು ತಾಳಲಾರದೆ ಸಿಡಿದಿತ್ತು. ರಾತ್ರಿ ಕಳೆದು ಬೆಳಗಾಗುವುದರೊಳಗೆ ಇಡೀ ಪಟ್ಟಣ ಕಪ್ಪು ಮಸಿಯಲ್ಲಿ ಕರಗಿ ಹೋಗಿತ್ತು. ಅಂದಿನಿಂದ ಈಗಿನವರೆಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಟ್ಟುವ ಎಲ್ಲ ಮಕ್ಕಳೂ ಅಕರಾಳ-ವಿಕಾರಾಳ ಅಂಗಾಗಗಳನ್ನು ಹೊಂದಿಯೇ ಜನಿಸುತ್ತವೆ. ಈಗದು ‘ದುರಂತದ ನೆನಪಿನ ಪ್ರವಾಸಿತಾಣ’? ನಿಗೂಡ ಮೌನ, ಅಸಹ್ಯ ಮ್ಲಾನ ಮುಖವನ್ನು ತೊಟ್ಟು ನಿಂತಿರುವ ಆ ಪ್ರದೇಶಕ್ಕೆ ಇನ್ನಿಲ್ಲದ ವಿಶೇಷ ಮೌಲ್ಯವನ್ನು, ಸ್ಮಾರಕದ ಸ್ಥಾನಮಾನವನ್ನೂ ಕಟ್ಟಿಕೊಡಲು ನಂತರದ ದಿನಗಳಲ್ಲಿ ಸರಕಾರ ಹೆಣ ಗಾಡಿತು. ಅಷ್ಟರಲ್ಲಿ ಸೋವಿತ್ ಒಕ್ಕೂಟ ವಿಭಜನೆಯಾಗಿತ್ತು.

1991ರಲ್ಲಿ ಗೋರ್ಬಚೇವ್ ಸೋವಿಯತ್ ಯೂನಿಯನ್ ಅನ್ನು ವಿಸರ್ಜಿಸಿ, 15 ಸ್ವತಂತ್ರ ದೇಶಗಳನ್ನು ಘೋಷಿಸುವುದರೊಂದಿಗೆ ಚರ್ನೋಬಿಲ್, ಉಕ್ರೇನಿಯನ್ ಆಡಳಿತಕ್ಕೆ ಸೇರಿ ಮಾನವ ನಿಷೇಧಿತ ಪ್ರದೇಶವಾಗಿ ಉಳಿಯಿತು. ವಿಜ್ಞಾನಿಗಳ ಪ್ರಕಾರ ಮುಂದಿನ 24 ಸಾವಿರ ವರ್ಷಗಳ ಕಾಲ ಅಲ್ಲಿ ಏನೊಂದೂ ಜೈವಿಕ ಕ್ರಿಯೆ ಅಸಾಧ್ಯ. ಪ್ರಿಪ್ಯಾತ್ ಅಂತರಾಳದಲ್ಲಿ ಭೂಗತವಾದ ಭಯಂಕರ ನಿಶ್ಶಬ್ದ ವೊಂದು ಕುದಿಮರಳು ಸ್ಥಿತಿಯಲ್ಲಿ ತೊಳಲಾ ಡುತ್ತಿದೆ.

ಅದಿನ್ಯಾವತ್ತು ಸ್ಫೋಗೊಳಲಿದೆಯೋ? ಏಕೆಂದರೆ, ಈಗಾಗಲೇ ಆ ಸೋಟದ ಪರಿಣಾಮ, ಅಪಾರ ಪ್ರಮಾಣದ ವಿಕಿರಣಪೂರಿತ ಅಯೋಡಿನ್ ವಾತಾವರಣವನ್ನು ಸೇರಿ, ಅಲ್ಲಿಂದ ಮನುಷ್ಯರ ಗಂಟಲಲ್ಲಿನ ಥೈರಾಯ್ಡ್ ಗ್ರಂಥಿಯೊಳಗೆ ಇಳಿದು ಕೂತಿದೆ. ಪರಿಣಾಮ ಸುತ್ತಮುತ್ತಲಿನ ಮೂಲೆ ಮೂಲೆಗಳಿಂದಲೂ ಸಂತ್ರಸ್ತರ ಗಂಟಲಿಂದ ಹೊರಡುವ ಗೊಗ್ಗುರು ದನಿಯ ವಿಚಿತ್ರ ನರಳಾಟ, ಆ ನೀರವವನ್ನು ಭೇದಿಸುತ್ತಲೇ ಇದೆ. ಅದನ್ನು ಪ್ರತಿಧ್ವನಿಸುತ್ತ ಉರಿದುಳಿದು ನಿಂತಿರುವ ರೆಡ್ ಫಾರೆಸ್ಟ್ (ಛಿb ಊಟ್ಟoಛಿಠಿ) ಅಂದಿನ ಕರಾಳತೆಯನ್ನು ಬಿಂಬಿಸುತ್ತಿದೆ.

ಒಂದು ಕಾಲದಲ್ಲಿ ಸಮೃದ್ಧ ಹಸುರಾಚ್ಛಾದಿತ ಪೈನ್ ಕಾಡು, ವಿಕಿರಣಗಳನ್ನು ಹೀರಿಕೊಂಡಿದ್ದರ ಪ್ರತೀಕವಾಗಿ ಕೆಂಪು ಬಣ್ಣಕ್ಕೆ ಬದಲಾಗಿದೆ. ಅದರ ಮೇಲಿಂದ ಬೀಸಿ ಬರುವ ವಿಚಿತ್ರ ಬಿಸಿ ಗಾಳಿ ಮೈ ಮೇಲೆ ಹಾಯುತ್ತಿದ್ದಂತೆಯೇ ನರ ನಾಡಿಗಳೆಲ್ಲ ಕಂಪಿಸುವುದು ಸುಳ್ಳಲ್ಲ. ಅವತ್ತಿನ ದುರಂತದ ಪ್ರಮಾಣ, ಆನಂತರದ ಗರ್ಭಪಾತದ, ಭ್ರೂಣ ಸಮಾಽಗಾಗಿ ನಡೆದ ರಹಸ್ಯ ಕಾರ್ಯಚರಣೆಗೆ ಪಿಸುಮಾತಿನಲ್ಲಿ ಸಾಕ್ಷಿ ಹೇಳುತ್ತವೆ ನೂರಾರು ಆಂಬ್ಯುಲೆನ್ಸ್ ಗಳು, ಫೈಟರ್ ಟ್ರಕ್‌ಗಳು, ಹೆಲಿಕಾಪ್ಟರ್‌ಗಳ ಪಳೆಯುಳಿಕೆಗಳು.

ಭೂಮಂಡಲದ ಮೇಲಿನ ಮಹಾ ರುದ್ರಭೂಮಿಯಲ್ಲಿ ಇಂದಿಗೂ ಹಿಪ್ಪಳಿಕೆಯೆದ್ದು ಉಳಿದ ಅಣುಸ್ಥಾವರದ ರಿಯಾಕ್ಟರ್ ಗಳ ಅಸ್ಥಿಪಂಜರವೂ ಇದೆ. ಮೂರು ದಿನದ ಮಾತಿಗೆ ಮನೆ ಬಿಟ್ಟು, ಮತ್ತೆಂದೂ ಹಿಂದಿರುಗಲಾಗದೇ ಹೋದವರ ನಿಟ್ಟುಸಿರನ್ನು ಅಲ್ಲಿನ ಪಾಳುಬಿದ್ದ ಮನೆಗಳ ಪೀಠೋಪಕರಣಗಳು, ಅಡುಗೆ ಮನೆಯ ಪಾತ್ರೆ-ಪಗಡಗಳು, ಮಕ್ಕಳ ಆಟಿಕೆಗಳ ಬಳಿ ಸಾರಿದರೆ ಕೇಳಬಹುದು.

ಅಂಥ ಚರ್ನೋಬಿಲ್ ಅಣುಸ್ಥಾವರವನ್ನೇ ಉಕ್ರೇನ್‌ನ ಮೇಲಿನ ದಾಳಿಯ ಮೊದಲ ದಿನಗಳಲ್ಲೇ ಆಕ್ರಮಿಸಿಕೊಂಡು ಕುಳಿತಿವೆ ರಷ್ಯಾ ಪಡೆಗಳು. ರಷ್ಯಾದ ಸ್ನೇಹ ಬಾಹುವಿನಲ್ಲಿರುವ ಬಲಾರಸ್‌ನಿಂದ ಕೇವಲ ಹತ್ತು ಕಿ.ಮೀ. ದುರದಲ್ಲಿರುವ ಈ ಪ್ರದೇಶವನ್ನು ಕಬ್ಜಕ್ಕೆ ತೆಗೆದುಕೊಂಡಿರುವುದು ಕೇವಲ ಉಕ್ರೇನ್ ಮಾತ್ರವಲ್ಲ, ನ್ಯಾಟೋಪಡೆಗಳೂ ಸೇರಿದಂತೆ ಇಡೀ ಜಗತ್ತಿನ ಮುಕ್ಕಾಲುಪಾಲು ರಾಷ್ಟ್ರಗಳಿಗೆ ನಿದ್ದೆ ಕೆಡಿಸಿರುವ ಸಂಗತಿ. ಇಂಥ ಆತಂಕಕ್ಕೆ ಕಾರಣಗಳು ಸಹಜ; ಅಲ್ಲವೇ?