Saturday, 23rd November 2024

ರಾವಲ್ಪಿಂಡಿ ಟೆಸ್ಟ್‌ ಪಂದ್ಯ ಡ್ರಾ: ಇಮಾಮ್‌ ಎರಡು ಶತಕ

ರಾವಲ್ಪಿಂಡಿ: ಪಾಕಿಸ್ಥಾನ-ಆಸ್ಟ್ರೇಲಿಯ ನಡುವಿನ ರಾವಲ್ಪಿಂಡಿ ಟೆಸ್ಟ್‌ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ.

ಪಾಕಿಸ್ಥಾನ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದ್ದು, ಆರಂಭಕಾರ ಇಮಾಮ್‌ ಉಲ್‌ ಹಕ್‌ ಎರಡೂ ಇನ್ನಿಂಗ್ಸ್‌ ಗಳಲ್ಲಿ ಸೆಂಚುರಿ ಬಾರಿಸಿದ್ದು, ಮತ್ತೋರ್ವ ಅಬ್ದುಲ್ಲ ಶಫೀಕ್‌ ಚೊಚ್ಚಲ ಸೆಂಚುರಿ ಸಂಭ್ರಮ ಆಚರಿಸಿದರು. ಪಂದ್ಯ ಡ್ರಾ ಆಗುವಾಗ ಪಾಕಿಸ್ಥಾನ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 252 ರನ್‌ ಪೇರಿಸಿತ್ತು.

ಪಾಕಿಸ್ಥಾನದ 476ಕ್ಕೆ ಉತ್ತರವಾಗಿ ಆಸ್ಟ್ರೇಲಿಯ 459ಕ್ಕೆ ಆಲೌಟ್‌ ಆಯಿತು. ನೌಮಾನ್‌ ಅಲಿ 6 ವಿಕೆಟ್‌ ಉರುಳಿಸಿ ಮಿಂಚಿದರು.

ಪಾಕಿಸ್ಥಾನ ದ್ವಿತೀಯ ಸರದಿಯಲ್ಲಿ 77 ಓವರ್‌ ಬ್ಯಾಟಿಂಗ್‌ ನಡೆಸಿತು. ಆಗ ಅಬ್ದುಲ್ಲ ಶಫೀಕ್‌ 136 ರನ್‌ ಹಾಗೂ ಇಮಾಮ್‌ ಉಲ್‌ ಹಕ್‌ 111 ರನ್‌ ಮಾಡಿ ಅಜೇಯರಾಗಿದ್ದರು. ಇಮಾಮ್‌ ಮೊದಲ ಇನ್ನಿಂಗ್ಸ್‌ ನಲ್ಲಿ 157 ರನ್‌ ಬಾರಿಸಿದ್ದರು. ಅವಳಿ ಶತಕ ಸಾಧನೆಗಾಗಿ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸರಣಿಯ 2ನೇ ಟೆಸ್ಟ್‌ ಮಾ. 12ರಂದು ಕರಾಚಿಯಲ್ಲಿ ಆರಂಭವಾಗಲಿದೆ.