ಮೂರ್ತಿ ಪೂಜೆ
ಆರ್.ಟಿ.ವಿಠ್ಠಲಮೂರ್ತಿ
ರಾಜ್ಯ ಬಿಜೆಪಿಯಲ್ಲಿ ಕಷ್ಟದ ಸಮಯದಲ್ಲಿ ಪಕ್ಷಕ್ಕಾಗಿ ದುಡಿದವರು ಅಧಿಕಾರದಿಂದ ದೂರವಿದ್ದಾರೆ. ಉಳಿದಂತೆ ಈಗ ಅಧಿಕಾರ ಪಡೆದವರ ಪೈಕಿ ಬಹುತೇಕರು ಸನ್ನಿವೇಶಕ್ಕೆ ದಕ್ಕಿದವರೇ ಹೊರತು ಪಕ್ಷಕ್ಕಾಗಿ ದುಡಿದವರಲ್ಲ. ಈ ಅಸಮಾನತೆಯೇ ಇವತ್ತು ರಾಜ್ಯ ಬಿಜೆಪಿಯ ಬೇಗುದಿಗೆ ಕಾರಣವಾಗಿದೆ.
ಇದು ಎಂಟು ವರ್ಷಗಳ ಹಿಂದೆ ನಡೆದ ಘಟನೆ. ಅವತ್ತಿಗಾಗಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉರುಳಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ಒಮ್ಮೆ ಬಿಜೆಪಿ ಶಾಸಕರಾದ ಎಸ್.ಆರ್.ವಿಶ್ವನಾಥ್, ಸತೀಶ್ ರೆಡ್ಡಿ ಮತ್ತು ನಂದೀಶ್ ರೆಡ್ಡಿ ಅವರು ವಿಧಾನಸಭೆ ಅಽವೇಶನಕ್ಕೆಂದು ಬೆಳಗಾವಿಗೆ ಹೋದರು. ಹೀಗೆ ಹೋದವರು ತಮಗೆ ಮೀಸಲಾಗಿರಿಸಿದ್ದ ಹೋಟೆಲ್‌ಗೆ ಹೋಗಿ ನೋಡಿದರೆ ಅದು ಅಷ್ಟೇನೂ ಚೆನ್ನಾಗಿರಲಿಲ್ಲ. ಹೀಗಾಗಿ ಬೇರೆ ಎಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದವರು
ಯೋಚಿಸುತ್ತಿzಗ ವಸತಿ ಸಚಿವರಾಗಿದ್ದ ನಟ ಅಂಬರೀಷ್ ಅವರು ಎದುರು ಸಿಕ್ಕರು.
ಅದೂ, ಇದು ಮಾತನಾಡುತ್ತಿದ್ದಾಗ ವಾಸ್ತವ್ಯಕ್ಕೆ ಎಂದು ಒದಗಿಸಲಾದ ಕೊಠಡಿಗಳ ಬಗ್ಗೆ ಮೂವರು ಶಾಸಕರಿಗೆ ಸಮಾಧಾನವಿರಲಿಲ್ಲ ಎಂಬುದು ಅಂಬರೀಷ್ ಅವರ ಗಮನಕ್ಕೆ ಬಂತು. ಹೀಗಾಗಿ ಅವರು ತಮಗೆ ಇಫಾ ಹೋಟೆಲಿನಲ್ಲಿ ಒದಗಿಸಲಾದ ಕೊಠಡಿಯ ಬೀಗದ ಕೀ ಅನ್ನು ಕೊಟ್ಟು: ಬೇರೆಲ್ಲಿ ಹುಡುಕುತ್ತೀರಿ? ಇ ಉಳಿದುಕೊಳ್ಳಿ ಎಂದು ಬಿಟ್ಟರು. ಆದರೆ ಕೀ ಕೊಡುವಾಗ; ಯಾವ ಕಾರಣಕ್ಕೂ ನನ್ನ ಕೊಠಡಿ
ಯನ್ನು ನಿಮಗೆ ಬಿಟ್ಟುಕೊಟ್ಟಿದ್ದೇನೆ ಎಂದು ಯಾರಿಗೂ ಹೇಳಬೇಡಿ. ಯಾಕೆಂದರೆ ನಾನು ಕಾಂಗ್ರೆಸ್ ಸರಕಾರದಲ್ಲಿ ಸಹಿ. ನೀವು ಬಿಜೆಪಿಯವರು. ಹೀಗಾಗಿ ನಾಳೆ ಇದನ್ನೇ ಒಂದು ಸುದ್ದಿ ಮಾಡಿಬಿಟ್ಟಾರು ಎಂದು ನಕ್ಕರು.
ಸರಿ, ಮಂತ್ರಿಗಳ ಕೋಟಾದಲ್ಲಿ ತಮಗೆ ಒದಗಿಸಲಾಗಿದ್ದ ಕೊಠಡಿಯನ್ನೇ ಅಂಬರೀಷ್ ಅವರು ಬಿಟ್ಟು ಕೊಟ್ಟಿದ್ದರಿಂದ ಎಸ್. ಆರ್.ವಿಶ್ವನಾಥ್, ಸತೀಶ್ ರೆಡ್ಡಿ ಅವರಿಗೆಲ್ಲ ನೆಮ್ಮದಿಯಾಯಿತು. ಅವತ್ತಿನಿಂದ ಅಲ್ಲಿ ಉಳಿದುಕೊಂಡೇ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳತೊಡಗಿದರು. ಆದರೆ, ಮೂರನೇ ದಿನದ ಹೊತ್ತಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಇ.ಕೃಷ್ಣಪ್ಪ ಮತ್ತು ದಾಸರಹಳ್ಳಿ ಶಾಸಕರಾದ ಮುನಿರಾಜು ಅವರು ಪದೇ ಪದೇ ವಿಶ್ವನಾಥ್ ಮತ್ತು ಸತೀಶ್ ರೆಡ್ಡಿ ಅವರಿಗೆ ಫೋನು ಮಾಡಿದರು.
‘ರೀ, ಎಲ್ಲಿ ಉಳಿದುಕೊಂಡಿದೀರ್ರೀ? ನಮಗೆ ಸಿಗುತ್ತಲೇ ಇಲ್ಲ’ ಎಂದವರು ಹೇಳಿದಾಗ ವಿಶ್ವನಾಥ್ ಮತ್ತು ಸತೀಶ್ ರೆಡ್ಡಿ ಅವರು: ಇನ್ನೆಲ್ಲಿ ಉಳಿದುಕೊಳ್ಳೋದು? ನೀವಿರುವ ಹೋಟೆಲಿನ ಉಳಿದುಕೊಂಡಿದ್ದೀವಲ್ಲ? ಎಂದರು. ಅದಕ್ಕೆ ಕೃಷ್ಣಪ್ಪ ಮತ್ತು ಮುನಿರಾಜು ಅವರು: ಇವೆಲ್ಲ ಕತೆ ಹೇಳಬೇಡಿ. ನಾವು ಉಳಿದುಕೊಂಡ ಹೋಟೆಲಿನ ಅಕ್ಕ-ಪಕ್ಕ ನಿಮ್ಮ ಸುಳಿವೂ ಇಲ್ಲ, ನಿಮ್ಮ ಕಾರುಗಳೂ ಕಾಣುತ್ತಿಲ್ಲ ಎಂದು ವರಾತ ತೆಗೆದರು.
ಯಾವಾಗ ಅವರ ವರಾತ ಹೆಚ್ಚಾಯಿತೋ? ಆಗ ತಾವು ಅಂಬರೀಷ್ ಅವರ ಕೊಠಡಿಯಲ್ಲಿ ಉಳಿದುಕೊಂಡ ಬಗ್ಗೆ ವಿಶ್ವನಾಥ್ ಮತ್ತು ಸತೀಶ್ ರೆಡ್ಡಿ ಬಾಯಿ ಬಿಡಲೇಬೇಕಾಯಿತು. ‘ಇಲ್ರಣ್ಣ, ನಮಗೆ ಕೊಟ್ಟ ಹೋಟೆಲ್ ರೂಮುಗಳು ಚೆನ್ನಾಗಿರಲಿಲ್ಲ. ಹೀಗಾಗಿ ನಾವು ಅಂಬರೀಷ್ ಅವರ ಕೊಠಡಿ ಯ ಕೀ ಇಸಕೊಂಡು ಇಫಾ ಹೋಟೆಲಿನ ಉಳಿದುಕೊಂಡಿದ್ದೇವೆ’ ಎಂದರು. ಅವರು ಹಾಗೆ ಹೇಳಿದ್ದೇ ತಡ, ಇ.ಕೃಷ್ಣಪ್ಪ ಮತ್ತು ಮುನಿ ರಾಜು ಕೂಡಾ: ನಮ್ಮ ಪರಿಸ್ಥಿತಿಯೂ ಹಾಗೇ ಆಗಿದೆ. ನಾವು ಉಳಿದುಕೊಂಡ ರೂಮುಗಳೂ ಚೆನ್ನಾಗಿಲ್ಲ. ಎರಡೇ ದಿನದಲ್ಲಿ ಸುಸ್ತಾಗಿ ಹೋಗಿದೆ ಎಂದು ಅಲವತ್ತುಕೊಂಡರು.
ಸರಿ,ಇನ್ನೇನು ಮಾಡುವುದು? ಹಾಗಂತಲೇ ಅವತ್ತು ಅಧಿವೇಶನಕ್ಕೆ ಹೋದಾಗ ಅವರಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಿಕ್ಕರು. ಅಷ್ಟೊತ್ತಿಗಾಗಲೇ ಅವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದರು. ಅಷ್ಟೇ ಅಲ್ಲ, 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ವಾಗಿ ಸೋಲಲು ಕಾರಣರಾಗಿದ್ದರು. ಹೀಗೆ ಬಿಜೆಪಿ ಸೋಲಲು ಕಾರಣರಾಗಿದ್ದರೂ ಯಡಿಯೂರಪ್ಪ ಅವರಿಗೆ ಕೆಜೆಪಿ ಪಕ್ಷದಲ್ಲಿ ಉಳಿದು ಕೊಳ್ಳುವ ಮನಸ್ಸೇನೂ ಇರಲಿಲ್ಲ.
2013 ರಲ್ಲಿ ಅವರು ಬಿಜೆಪಿಯಿಂದ ಹೊರಹೋಗಿ ಕೆಜೆಪಿ ಕಟ್ಟಿದ್ದರಾದರೂ ಅದು ಅವರ ಸ್ವಂತ ಇಚ್ಛೆಯಿಂದೇನೂ ಅಲ್ಲ. ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರಬೇಕೆಂದರೆ ಆಡಳಿತಾರೂಢ ಬಿಜೆಪಿಯನ್ನು ಹೋಳು ಮಾಡಬೇಕು ಎಂದು ದಿಲ್ಲಿಯ ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದ್ದ ರಲ್ಲ? ಅದರ ಭಾಗವಾಗಿ ಅವರು ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ಹೊರಹೋಗುವಂತೆ ನೋಡಿಕೊಂಡಿದ್ದರು. ಅವತ್ತು ಕೇಂದ್ರದಲ್ಲಿ ಅಽಕಾರ ಹಿಡಿದಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಹೊಡೆತ ತಾಳಲಾಗದ ಯಡಿಯೂರಪ್ಪ ಕೂಡ ಪರ್ಯಾಯ ಮಾರ್ಗ ಕಾಣದೇ ಬಿಜೆಪಿ ತೊರೆದು ಹೊರಬಂದರು. ಅಂದ ಹಾಗೆ ಅವರಿಗೆ ಬಿಜೆಪಿ ಭೀಷ್ಮ ಲಾಲಕೃಷ್ಣ ಆಡ್ವಾಣಿ ಅವರ ಬಗ್ಗೆ ಅಸಮಾ ಧಾನವಿತ್ತು ಎಂಬುದೇನೂ ಸುಳ್ಳಾಗಿರಲಿಲ್ಲ.
2008 ರಲ್ಲಿ ಮುಖ್ಯಮಂತ್ರಿ ಹುzಗೇರಿದ ತಾವು 2011 ರಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಆಡ್ವಾಣಿ ಅವರ ಕುಮ್ಮಕ್ಕು ಇತ್ತು ಎಂಬುದು ಯಡಿಯೂರಪ್ಪ ಅವರ ಅನುಮಾನ. ಎಷ್ಟೇ ಆದರೂ ಆಡ್ವಾಣಿ ಅವರು ಅನಂತಕುಮಾರ್ ಅವರ ಗಾಡ್ ಫಾದರ್. ಹೀಗಾಗಿ ಅವರು ತಮ್ಮನ್ನು ಸಹಿಸಿಕೊಳ್ಳಲಿಲ್ಲ ಎಂಬ ಸಿಟ್ಟು ಯಡಿಯೂರಪ್ಪ ಅವರಿಗಿತ್ತು. ಯಾವಾಗ ದಿಲ್ಲಿಯ ಕಾಂಗ್ರೆಸ್ ನಾಯಕರ ಒತ್ತಡ ಅತಿಯಾಯಿತೋ? ಆಗ ಯಡಿಯೂರಪ್ಪ ಅವರು ಆಡ್ವಾಣಿ ವಿರುದ್ಧ ತಮಗಿದ್ದ ಅಸಮಾಧಾನ ವನ್ನೇ ದೊಡ್ಡದನ್ನಾಗಿ ಮಾಡಿ ಬಿಜೆಪಿಯಿಂದ ಹೊರಬಂದರು. ಹೀಗೆ ಹೊರಬಂದ ಯಡಿಯೂರಪ್ಪ ಅವರು ಪ್ರಬಲ ಲಿಂಗಾ ಯತ ಮತಗಳ ವಿಭಜನೆಗೆ ಕಾರಣರಾದ ರಲ್ಲದೆ, ಆ ಮೂಲಕ ಬಿಜೆಪಿ ಹೀನಾಯವಾಗಿ ಸೋಲಲು ಕಾರಣರಾದರು.
ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ಹೊರಹಾಕುವ ತಮ್ಮ ಉದ್ದೇಶ ಈಡೇರಿದ ಮೇಲೆ ಕಾಂಗ್ರೆಸ್ ನಾಯಕರು ಮೌನ ವಾದರು. ಆದರೆ ರಾಜ್ಯದಲ್ಲಿ ಪಕ್ಷವನ್ನು ಸೋಲಿಸಿದ ನೋವಿನಿಂದ ಚಡಪಡಿಸಿದ ಯಡಿಯೂರಪ್ಪ ಮರಳಿ ಬಿಜೆಪಿ ಸೇರಲು ತವಕಿಸತೊಡಗಿದರು. ಅಂದ ಹಾಗೆ ಯಡಿಯೂರಪ್ಪ ಜನನಾಯಕ ಎಂಬುದು ನಿಜವಾದರೂ ಬಿಜೆಪಿಯಲ್ಲಿದ್ದಾಗ ಮಾತ್ರ ಅವರಿಗೆ ಡೆಡ್ಲಿ ಪವರ್ ದಕ್ಕುತ್ತಿತ್ತು. ಹೀಗಾಗಿ ಬಿಜೆಪಿಗೆ ಮರಳಿ ಹೋಗಲು ಅವರು ತವಕಿಸತೊಡಗಿದರೂ, ಹೋಗುವ ದಾರಿ ಸರಳವಾಗಿರಲಿಲ್ಲ. ಇಂತಹ ಕಾಲದ ಯಡಿಯೂರಪ್ಪ ಅವರು ಎಸ್. ಆರ್.ವಿಶ್ವನಾಥ್ ಮತ್ತು ಸತೀಶ್ ರೆಡ್ಡಿ ಅವರಿಗೆ ಎದುರಾದರು.
ಹೀಗೆ ಎದುರಾದಾಗ: ಏನ್ರೀ ವಿಶ್ವನಾಥ್, ಸತೀಶ್? ಹೇಗಿದ್ದೀರಿ? ಎಂದು ಕೇಳಿದರು. ಸರಿ,ಅದು ಇದು ಮಾತನಾಡುತ್ತಿದ್ದಾಗ ವಿಶ್ವನಾಥ್ ಅವರು: ಸಾರ್, ನಮ್ಮ ಇ.ಕೃಷ್ಣಪ್ಪ ಮತ್ತು ಮುನಿರಾಜು ಅವರಿಗೆ ಉಳಿದುಕೊಳ್ಳಲು ಒಳ್ಳೆಯ ಹೋಟೆಲ್ಲು ಸಿಕ್ಕಿಲ್ಲ ಸಾರ್, ಬೇಸರ ಮಾಡಿಕೊಂಡಿದ್ದಾರೆ ಎಂದರು.
ಈ ಮಾತು ಕೇಳಿದ ಯಡಿಯೂರಪ್ಪ ತಕ್ಷಣವೇ ತಮ್ಮ ಗನ್ ಮ್ಯಾನ್ ರುದ್ರಪ್ಪ ಕಡೆ ತಿರುಗಿ: ನಮಗೆ ಪ್ರಭಾಕರ್ ಕೋರೆ ಅವರ ಅತಿಥಿಗೃಹದಲ್ಲಿ ಉಳಿದುಕೊಳ್ಳಲು ಕೊಠಡಿ ಕೊಟ್ಟಿದ್ದಾರಲ್ಲ? ಅದರ ಕೀಯನ್ನು ಕೃಷ್ಣಪ್ಪ, ಮುನಿರಾಜು ಅವರಿಗೆ ಕೊಟ್ಟು ಬಿಡು ಎಂದರು.
ಹೀಗೆ ಯಡಿಯೂರಪ್ಪ ಅವರ ಬಳಿ ಕೀ ಇಸಕೊಂಡ ಎಸ್.ಆರ್. ವಿಶ್ವನಾಥ್ ಮತ್ತು ಸತೀಶ್ ರೆಡ್ಡಿ ಅವರು ಇ.ಕೃಷ್ಣಪ್ಪ ಮತ್ತು ಮುನಿರಾಜು ಅವರನ್ನು ಭೇಟಿ ಮಾಡಿ: ನಿಮಗೆ ಒಳ್ಳೆಯ ರೂಮು ಸಿಕ್ಕಿಲ್ಲ ಎಂಬ ವಿಷಯ ಕೇಳಿದ ಕೂಡಲೇ ಯಡಿಯೂರಪ್ಪ ಅವರು ತಮಗೆ ಕೊಟ್ಟ ರೂಮಿನ ಕೀಯನ್ನೇ ಕೊಟ್ಟಿದ್ದಾರೆ ಕಣ್ರೀ ಎಂದರು.
ಅವರು ತಮ್ಮ ಕೈಗೆ ಕೀ ಕೊಟ್ಟ ತಕ್ಷಣ ಇ.ಕೃಷ್ಣಪ್ಪ ಮತ್ತು ಮುನಿರಾಜು: ಇದು ಕಣ್ರೀ ಯಡಿಯೂರಪ್ಪ ಅಂದ್ರೆ, ಅಂತಹ ದಿಲ್‌ದಾರ್ ನಾಯಕರು ಈಗ ಯಾರಿದ್ದಾರೆ? ಅವರು ಪಕ್ಷ ತೊರೆದು ಹೋಗಿದ್ದಕ್ಕೆ ತಾನೇ ನಮ್ಮ ಪಕ್ಷಕ್ಕೀಗ ವನವಾಸ? ಏನಾದರೂ ಆಗಲಿ. ಅವರು ಮರಳಿ ಪಕ್ಷಕ್ಕೆ ಬರಬೇಕು ಎನ್ನತೊಡಗಿದರು. ಸರಿ, ಅವತ್ತು ಮಧ್ಯಾಹ್ನ ಯಡಿಯೂರಪ್ಪ ಅವರಿಗೆ ಮೀಸಲಾಗಿದ್ದ ಕೊಠಡಿಗೆ ಹೋದ ಈ ಶಾಸಕರು ಸೇರಿದಂತೆ ಸುಮಾರು ಇಪ್ಪತ್ತು ಮಂದಿ ಶಾಸಕರು ಅವತ್ತೇ ಭೋಜನಕೂಟಕ್ಕೆ ಅಂತ ಸೇರಿಕೊಂಡರು. ಹಿರಿಯ ನಾಯಕ ಆರ್.ಅಶೋಕ್, ಸಿ.ಟಿ.ರವಿ ಸೇರಿದಂತೆ ಅವತ್ತು ಭೋಜನ ಕೂಟಕ್ಕೆ ಬಂದ ಎಲ್ಲರು ಮಾತಿಗೆ ಬಿzಗ ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆತರಬೇಕು ಎಂಬುದೇ ಚರ್ಚೆಯ ಮುಖ್ಯ ವಿಷಯವಾಯಿತು.
ಇದಾದ ನಂತರ ಆರ್.ಅಶೋಕ್ ಅವರು: ಎಲ್ಲರೂ ಹೇಳುತ್ತಿರುವುದು ನಿಜ ಕಣ್ರೀ. ಈ ಬಗ್ಗೆ ಅನಂತಕುಮಾರ್ ಅವರ ಬಳಿ ಮಾತನಾ ಡುತ್ತೇನೆ ಎಂದರೆ ಯಲಹಂಕ ಶಾಸಕರಾದ ಎಸ್.ಆರ್.ವಿಶ್ವನಾಥ್ ಅವರು ಸತೀಶ್ ರೆಡ್ಡಿ ಅವರ ಮೂಲಕ ಅನಂತ ಕುಮಾರ್‌ಗೆ ಫೋನು ಮಾಡಿಸಿಯೇ ಬಿಟ್ಟರು. ಅಂದ ಹಾಗೆ ಸತೀಶ್ ರೆಡ್ಡಿ ಅವರು ಅನಂತಕುಮಾರ್ ಗ್ಯಾಂಗಿನಲ್ಲಿದ್ದವರು. ಆದರೆ ಈ ಸಂದರ್ಭದಲ್ಲಿ ಕೆಲ ಕಾರಣ ಗಳಿಗಾಗಿ ಮುನಿಸಿಕೊಂಡು ದೂರವಿದ್ದರು. ಆದರೂ ಪಟ್ಟು ಬಿಡದ ವಿಶ್ವನಾಥ್: ಈ ಸಂದರ್ಭದಲ್ಲಿ ಏನೂ ಮನಸ್ಸಿನಲ್ಲಿ ಇಟ್ಟು ಕೊಳ್ಳ ಬೇಡಣ್ಣ, ಒಂದು ಸಲ ದಿಲ್ಲಿಗೆ ಬರುತ್ತೇವೆ. ಮಾತನಾಡಬೇಕು ಎಂದು ಅನಂತಕುಮಾರ್ ಅವರಿಗೆ ಹೇಳು ಎಂದರು.
ಸರಿ,ಸತೀಶ್ ರೆಡ್ಡಿ ಅವರು ಅನಂತಕುಮಾರ್ ಅವರಿಗೆ ಫೋನು ಮಾಡಿದರೆ ಅತ್ತಲಿಂದ: ಓಹೋ, ಸತೀಶ್ ರೆಡ್ಡಿಯವರು, ಏನು ಸಾರ್ ಅಪರೂಪಕ್ಕೆ ನಮ್ಮನ್ನು ನೆನಪಿಸಿಕೊಂಡಿದ್ದೀರಿ?ಎಂಬ ಮಾತು ಕೇಳಿ ತಂತು. ಹಾಗೇನಿಲ್ಲ ಸಾರ್, ನಮ್ಮನ್ನು ದೂರವಿಟ್ಟವರು ನೀವೇ ಎಂದು ಸತೀಶ್ ರೆಡ್ಡಿ ಹೇಳಿದಾಗ ನಸು ನಕ್ಕ ಅನಂತಕುಮಾರ್ ಮುಖ್ಯ ವಿಷಯಕ್ಕೆ ಬಂದರು. ಆಗ ವಿಷಯ ಹೇಳಿದ ಸತೀಶ್ ರೆಡ್ಡಿ ಅವರು: ಸಾರ್, ನಿಮ್ಮನ್ನು ನೋಡಲು ಯಲಹಂಕದ ಎಸ್. ಆರ್.ವಿಶ್ವನಾಥ್, ನಂದೀಶ್ ರೆಡ್ಡಿ, ನಾನು ಬರಬೇಕೆಂದಿದ್ದೇವೆ ಎಂದಾಗ ಅನಂತಕುಮಾರ್ ಕೂಡ ನಿರಾಳರಾಗಿ, ಬನ್ನಿ ಬನ್ನಿ ಎಂದರು.
ಇದಾದ ನಂತರ ದಿಲ್ಲಿಗೆ ಹೋದ ವಿಶ್ವನಾತ್, ಸತೀಶ್ ರೆಡ್ಡಿ ಅವರೆಲ್ಲ ಅನಂತಕುಮಾರ್ ಅವರನ್ನು ಭೇಟಿ ಮಾಡಿ: ಸಾರ್, ರಾಜ್ಯದಲ್ಲಿ ಪಕ್ಷ ಅಽಕಾರ ಕಳೆದುಕೊಂಡಿದೆ. ಇನ್ನೇನು ಸಧ್ಯದ ಪಾರ್ಲಿಮೆಂಟ್ ಎಲೆಕ್ಷನ್ ಬರುತ್ತಿದೆ. ಈ ಸಂದರ್ಭದಲ್ಲಿ ನೀವು ಮತ್ತು ಯಡಿಯೂರಪ್ಪ ಅವರು ಒಂದಾಗಬೇಕು ಸಾರ್, ಇಲ್ಲದಿದ್ದರೆ ನಾವು ದೊಡ್ಡ ಗೆಲುವು ನೋಡುವುದು ಕಷ್ಟ ಎಂದರು.
ಆದರೆ, ಯಡಿಯೂರಪ್ಪ ಅವರ ವಿಷಯದಲ್ಲಿ ಅಡ್ವಾಣಿ ಅವರಿಗಿದ್ದ ರಿಸರ್ವೇಶನ್ ಬಗ್ಗೆ ಅನಂತಕುಮಾರ್ ಚಿಂತೆ ವ್ಯಕ್ತಪಡಿಸಿದಾಗ: ಸಾರ್,ನೀವು ಮನಸ್ಸು ಮಾಡಿದರೆ ಆಡ್ವಾಣಿ ಅವರನ್ನು ಒಪ್ಪಿಸಬಲ್ಲಿರಿ. ಕರ್ನಾಟಕದಲ್ಲಿ ಜನತಾ ಪರಿವಾರದ ಪಾಲಿಗೆ ಹೆಗಡೆ-ದೇವೇ ಗೌಡರು ಹೇಗೋ? ಬಿಜೆಪಿಗೆ ನೀವು ಮತ್ತು ಯಡಿಯೂರಪ್ಪ ಹಾಗೆ. ಎಲ್ಲಿಯವರೆಗೆ ನೀವು ಒಂದಾಗುವುದಿಲ್ಲವೋ? ಅಲ್ಲಿಯವರೆಗೆ ನಾವು ಮೇಲೇಳುವುದು ಕಷ್ಟ ಎಂದರು ವಿಶ್ವನಾಥ್ ಮತ್ತು ಸತೀಶ್ ರೆಡ್ಡಿ.
ಅಷ್ಟೇ ಅಲ್ಲ, ಪಕ್ಷದಲ್ಲಿ ಯಡಿಯೂರಪ್ಪ ಅವರು ಇಲ್ಲದಿದ್ದರೆ ಮುಂದೆ ನಾವು ಸಿಎಂ ಆಗಬಹುದು, ಪ್ರತಿಪಕ್ಷ ನಾಯಕರಾಗ ಬಹುದು ಅಥವಾ ಇನ್ನೇನೋ ಜಾಗ ಹಿಡಿಯಬಹುದು ಎಂದು ಕನಸು ಕಾಣುತ್ತಿರುವವರು ನೀವು ಮತ್ತು ಯಡಿಯೂರಪ್ಪ ಒಂದಾಗಲು ಬಿಡುತ್ತಿಲ್ಲ ಎಂದು ಹಲವು ವಿವರಗಳನ್ನು ನೀಡಿದಾಗ ಖುದ್ದು ಅನಂತಕುಮಾರ್ ಕೂಡ ಬೆಕ್ಕಸ ಬೆರಗಾದರು. ಹಾಗಂತಲೇ: ಇಷ್ಟೆಲ್ಲ ನನಗೂ ಗೊತ್ತಿರಲಿಲ್ಲ ವಲ್ರೀ? ಎಂದವರು: ಇನ್ನೊಂದು ವಾರ ಟೈಮು ಕೊಡಿ. ನಾನು ಅಡ್ವಾಣಿ ಅವರ ಜತೆ ಮಾತನಾಡಿ ಫೈನಲೈಸ್ ಮಾಡುತ್ತೇನೆ ಎಂದು ಹೇಳಿ ಕಳಿಸಿಕೊಟ್ಟರು.
ಹೀಗೆ ದಿಲ್ಲಿಗೆ ಹೋಗಿ ಬಂದ ಎಸ್.ಆರ್.ವಿಶ್ವನಾಥ್, ಸತೀಶ್ ರೆಡ್ಡಿ ಅವರೆಲ್ಲ ಬೆಂಗಳೂರಿಗೆ ಬಂದು ಯಡಿಯೂರಪ್ಪ ಅವರ ಬಳಿ: ಸಾರ್,ನೀವು ಆದಷ್ಟು ಬೇಗ ಬಿಜೆಪಿಗೆ ವಾಪಸ್ಸಾಗ ಬೇಕು ಸಾರ್ ಎಂದಾಗ: ಪಕ್ಷಕ್ಕೆ ವಾಪಸ್ಸು ಬರಲು ನಾನು ರೆಡಿ ಇದ್ದೇನಲ್ಲ? ಎಂದರು ಯಡಿಯೂರಪ್ಪ. ಸರಿ,ಇದಾದ ಒಂದು ವಾರದ ಬಳಿಕ ಎಸ್. ಆರ್.ವಿಶ್ವನಾಥ್ ಮತ್ತು ಸತೀಶ್ ರೆಡ್ಡಿ ಅವರಿಗೆ ಫೋನು ಮಾಡಿದ ಅನಂತಕುಮಾರ್: ನೀವು ಹೇಳಿದ ಕೆಲಸವಾಗಿದೆ. ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆದುಕೊಳ್ಳಲು ಅಡ್ವಾಣಿ ಅವರು
ಒಪ್ಪಿಗೆ ನೀಡಿದ್ದಾರೆ. ನೀವು ಒಂದು ಕೆಲಸ ಮಾಡಿ, ನಾನು ಸೂಚನೆ ಕೊಟ್ಟ ಮೇಲೆ ಮಧ್ಯಾಹ್ನ ಒಂದೂವರೆ ಗಂಟೆಗೆ ತಾಜ್ ವೆಸ್ಟ್ ಎಂಡ್ ಹೋಟೆಲಿಗೆ ಯಡಿಯೂರಪ್ಪ ಅವರನ್ನು ಕರೆದುಕೊಂಡು ಬನ್ನಿ ಎಂದರು.
ಅವರು ಹೀಗೆ ಹೇಳಿದ ಕಾಲದ ಆರ್.ಅಶೋಕ್ ಕೂಡ ಫೋನು ಮಾಡಿ: ನಿಮ್ಮ ಇಷ್ಟಾರ್ಥ ನೆರವೇರಿಸಿದ್ದೇವೆ ಕಣ್ರೀ ಎಂಬ ಮೆಸೇಜು ರವಾನಿಸಿದರು. ಅವತ್ತು ಮಧ್ಯಾಹ್ನ ಅನಂತಕುಮಾರ್ ಅವರನ್ನು ಭೇಟಿ ಮಾಡುವವರೆಗೆ ಯಡಿಯೂರಪ್ಪ ಕೂಡ ಕೂತಲ್ಲಿ ಕೂರದೆ, ನಿಂತಲ್ಲಿ ನಿಲ್ಲದೆ ಚಡಪಡಿಸುತ್ತಿದ್ದರು.
ಫೋನಲಿ,ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಅನಂತಕುಮಾರ್ ಮತ್ತು ಯಡಿಯೂರಪ್ಪ ಅವರ ಮುಖಾಮುಖಿಯಾಗುವಂತೆ ನೋಡಿ ಕೊಂಡ ಎಸ್. ಆರ್.ವಿಶ್ವನಾಥ್ ಮತ್ತು ಸತೀಶ್ ರೆಡ್ಡಿ ಅವರ ಪ್ರಯತ್ನ ದೊಡ್ಡ ಮಟ್ಟದಲ್ಲಿ ಫಲ ಕೊಟ್ಟಿತು. ಅವತ್ತೇ ಯಡಿಯೂರಪ್ಪ ಅವರು ಪಕ್ಷಕ್ಕೆ ಮರಳಿ ಬರುವುದು ನಿಕ್ಕಿಯಾಯಿತು. ಹೀಗೆ ಪಕ್ಷಕ್ಕೆ ಮರಳಿ ಬಂದ ಯಡಿಯೂರಪ್ಪ ದೊಡ್ಡ ಮಟ್ಟದಲ್ಲಿ ವಿಜೃಂಭಿಸಿದರು. 2014 ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿ ಹಿಂದೆಂದೂ ಕಾಣದಷ್ಟು ದೊಡ್ಡ ಗೆಲುವು ದಕ್ಕಲು ಸಹಕಾರಿಯಾದರು. ಅಷ್ಟೇ ಅಲ್ಲ, 2018 ರಲ್ಲಿ ಪಕ್ಷ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು, 2019 ರಲ್ಲಿ ಸರಕಾರ ರಚಿಸಲು ಕಾರಣರಾದರು.
***
ಅಂದ ಹಾಗೆ ಈ ಘಟನೆಯನ್ನು ಹೇಳಲು ಕಾರಣವೆಂದರೆ,ರಾಜ್ಯದಲ್ಲಿ ಬಿಜೆಪಿಯ ಶಕ್ತಿ ಹೆಚ್ಚಲು ತೆರೆಯ ಹಿಂದೆ ಮತ್ತು ಬಹಿರಂಗವಾಗಿ ಕೆಲಸ ಮಾಡಿದ ಎಸ್. ಆರ್.ವಿಶ್ವನಾಥ್, ಸತೀಶ್ ರೆಡ್ಡಿ ಅವರಂತವರು ಇವತ್ತಿಗೂ ಮಂತ್ರಿಗಳಾಗುವ ಲಕ್ಕು ಪಡೆದಿಲ್ಲ. ವಸ್ತುಸ್ಥಿತಿ ಎಂದರೆ ರಾಜ್ಯ ಬಿಜೆಪಿಯಲ್ಲಿರುವ ನಿಜವಾದ ಸಮಸ್ಯೆ ಇದೇ. ಅಲ್ಲಿ ಪಕ್ಷ ಸಂಘಟಿಸಲು, ನಾಯಕರನ್ನು ಒಂದುಗೂಡಿಸಿ ಅಧಿಕಾರಕ್ಕೆ ಬರಲು ನೆರವಾದವರು, ಕಷ್ಟದ ಸಮಯದಲ್ಲಿ ಪಕ್ಷಕ್ಕಾಗಿ ದುಡಿದವರು ಅಧಿಕಾರದಿಂದ ದೂರವಿದ್ದಾರೆ. ಉಳಿದಂತೆ ಈಗ ಅಽಕಾರ ಪಡೆದವರ ಪೈಕಿ ಬಹುತೇಕರು ಸನ್ನಿವೇಶಕ್ಕೆ ದಕ್ಕಿದವರೇ ಹೊರತು ಪಕ್ಷಕ್ಕಾಗಿ ದುಡಿದವರಲ್ಲ.ಈ ಅಸಮಾನತೆಯೇ ಇವತ್ತು ರಾಜ್ಯ ಬಿಜೆಪಿಯ ಬೇಗುದಿಗೆ ಕಾರಣವಾಗಿದೆ.
ಅಂದ ಹಾಗೆ ಎಸ್. ಆರ್.ವಿಶ್ವನಾಥ್, ಸತೀಶ್ ರೆಡ್ಡಿ ಅವರೆಲ್ಲ ಬಿಜೆಪಿ ನಿಷ್ಟರು. ಮಂತ್ರಿಗಿರಿ ಸಿಗಲಿ, ಸಿಗದಿರಲಿ, ಅಪಸ್ವರ ಎತ್ತುವವ ರಂತೂ ಅಲ್ಲ. ಆದರೆ ಎಲ್ಲರೂ ಹೀಗೇ ಅಲ್ಲವಲ್ಲ? ಇದೇ ಕಾರಣಕ್ಕಾಗಿ ಬಿಜೆಪಿ ಈಗ,ಮನೆಯೊಂದು ಡಜನ್ನು ಬಾಗಿಲು ಎಂಬ ಸ್ಥಿತಿಗೆ ತಲುಪಿದೆ