Wednesday, 27th November 2024

ಕಣ್ಣನ್ನೂ ಆವರಿಸುವ ಸರ್ಪ ಸುತ್ತು ಸೋಂಕು

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ಸರ್ಪಸುತ್ತು ಕಾಯಿಲೆಗೆ ಇಂಗ್ಲಿಷ್ ಔಷಧ ತೆಗೆದುಕೊಳ್ಳಲೇಬಾರದು ಎಂಬ ಬಲವಾದ ಮೂಢನಂಬಿಕೆ ಇದೆ. ಜತೆಗೆ ಆಯುರ್ವೇದವೇ ಸರಿ ಎಂದು ಜನರ ತಿಳಿವಳಿಕೆಗೆ ಪೂರಕವಾಗಿ ಖೊಟ್ಟಿ ವೈದ್ಯರು, ಅಳಲೆಕಾಯಿ ಪಂಡಿತರು ತಮ್ಮ ಔಷಧದ ಜತೆಗೆ ಅವರ ಇಂಗ್ಲಿಷ್ ಔಷಧ ತೆಗೆದುಕೊಳ್ಳಲೇ ಬೇಡಿ ಎಂದು ರೋಗಿಗಳ ದಾರಿ ತಪ್ಪಿಸುತ್ತಾರೆ.

ಕಣ್ಣಿನ ಮೇಲೆ ಹಣೆಯ ಭಾಗದಲ್ಲಿ ಚರ್ಮದ ಲಕ್ಷಣಗಳು ಹಾಗೂ ಕಣ್ಣಿನಲ್ಲಿ ವಿವಿಧ ರೀತಿಯ ಲಕ್ಷಣಗಳು ಕಾಣಿಸಿಕೊಂಡಾಗ ಅದನ್ನು ನಾವು ನೇತ್ರ ತಜ್ಞರು ಯಾವ ಸಂದೇಹವೂ ಇಲ್ಲದೆ ‘ಸರ್ಪಸುತ್ತು’ ಎಂದು ರೋಗ ಪತ್ತೆ ಮಾಡುತ್ತೇವೆ.

ಅಷ್ಟಕ್ಕೂ ಸರ್ಪಸುತ್ತು ಅಂದರೇನು? ಅದು ಯಾವ ಕಾರಣಕ್ಕೆ ಬರುತ್ತದೆ? ಪರಿಹಾರ, ಮುಂಜಾಗೃತೆ ಏನು ಎಂಬಿತ್ಯಾದಿ ವಿವರಗಳೇ ಇಂದಿನ ಅಂಕಣದ ಹೂರಣ. ಹರ್ಪಿಸ್ ಜೋಸ್ಟರ್ ಎಂದ ವೈದ್ಯಕೀಯ ಪರಿಭಾಷೆಯಲ್ಲಿ ಕರೆಯಲಾಗುವ ಇದರಲ್ಲಿ ವೇರಿಸೆ ಜೋಸ್ಟರ್ ಎಂಬ ವೈರಸ್ ಚರ್ಮದ ಮೇಲೆ ತೀವ್ರ ರೀತಿಯ ಸೋಂಕು ಉಂಟು ಮಾಡುತ್ತದೆ. ಸ್ಥಳೀಯವಾಗಿ ಇದನ್ನು ಸರ್ಪಸುತ್ತು ಅಥವಾ ಹರ್ಪಿಸ್ ಎನ್ನಲಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಈ ಕಾಯಿಲೆಯಲ್ಲಿ ವಿಪರೀತ ನೋವಿರುತ್ತದೆ. ಚಿಕನ್ ಪಾಕ್ಸ್ ಕಾಯಿಲೆ ಉಂಟು ಮಾಡುವುದು ಇದೇ ವೈರಸ್.

ಕಾಯಿಲೆ ಬರಲು ಕಾರಣಗಳು: ಚಿಕನ್ ಪಾಕ್ಸ್ ಕಾಯಿಲೆ ಬಂದು ವಾಸಿಯಾದ ಮೇಲೆ, ದೇಹದ ಕೆಲವು ನರಗಳಲ್ಲಿ ಅದಕ್ಕೆ ಸಂಬಂಧಪಟ್ಟ ವೈರಸ್‌ಗಳು ಒಂದು ರೀತಿಯಲ್ಲಿ ನಿಷ್ಕ್ರಿಯವಾಗಿರುತ್ತವೆ ಅಥವಾ ಮಂಪರು ಸ್ಥಿತಿ ಯಲ್ಲಿರುತ್ತವೆ. ಎಷ್ಟೋ ವರ್ಷಗಳ ಬಳಿಕ ಇದೇ ವೈರಸ್‌ ಗಳು ಸಕ್ರಿಯವಾಗಿ ಸರ್ಪಸುತ್ತಿಗೆ ಕಾರಣವಾಗುತ್ತವೆ. ಯಾವ ಕಾರಣದಿಂದ ನಿಷ್ಕ್ರಿಯವಾದ ವೈರಸ್‌ಗಳು ಪುನಃ ಸಕ್ರಿಯ ವಾಗುತ್ತವೆ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಚಿಕ್ಕಂದಿನಲ್ಲಿ ಚಿಕನ್ ಪಾಕ್ಸ್ ಕಾಯಿಲೆಗೆ ಒಳಗಾಗದೆ ಅಥವಾ ಆ ಕಾಯಿಲೆಯ ವ್ಯಾಕ್ಸಿನ್ ಕೊಡದಿದ್ದಾಗ, ಅಂತಹ ವ್ಯಕ್ತಿ ಮಗುವಾಗಿದ್ದಾಗ ಅಥವಾ ವಯಸ್ಕನಾದಾಗ ಹರ್ಪಿಸ್ ಜೋಸ್ಟರ್ ವೈರಸ್ ನ ಪ್ರಭಾವಕ್ಕೆ ಒಳಗಾದರೆ, ಆತನಿಗೆ ತೀವ್ರ ಪ್ರಮಾಣದ ಚಿಕನ್ ಪಾಕ್ಸ್ ಕಾಯಿಲೆ ಬರುತ್ತದೆಯೇ ಹೊರತು ಹರ್ಪಿಸ್ ಜೋಸ್ಟರ್ ಕಾಯಿಲೆ ಬರುವುದಿಲ್ಲ.

ಚಿಕನ್ ಪಾಕ್ಸ್ ಕಾಯಿಲೆ ಬರದೆ ಹರ್ಪಿಸ್ ಜೋಸ್ಟರ್ ಕಾಯಿಲೆ ಬಂದ ವ್ಯಕ್ತಿ ಇತರರಿಗೆ ನೇರ ಸಂಪರ್ಕದಿಂದ ಜೋಸ್ಟರ್ ಕಾಯಿಲೆಯನ್ನು ಹರಡಬಲ್ಲ. ಹಾಗಾಗಿ ಈ ಕಾಯಿಲೆಗೆ ಪ್ರತಿರೋಧ ಶಕ್ತಿಯಿಲ್ಲ. ಯಾವ ವಯಸ್ಸಿನವರಲ್ಲಿಯೂ ಹರ್ಪಿಸ್ ಜೋಸ್ಟರ್ ಕಾಯಿಲೆ ಬರಬಹು ದಾದರೂ 60 ವರ್ಷ ದಾಟಿದವರಲ್ಲಿ, ಒಂದು ವರ್ಷ ಮಗು ಆಗಿರುವ ಮೊದಲೇ ಚಿಕನ್ ಪಾಕ್ಸ್ ಬಂದವರಲ್ಲಿ ಮತ್ತು ನಾನಾ ಕಾರಣ ಗಳಿಂದ ದೇಹದ ಪ್ರತಿರೋಧ ಶಕ್ತಿ ಕಡಿಮೆಯಾದವರಲ್ಲಿ ಈ ಕಾಯಿಲೆ ಬರುವ ಸಾಧ್ಯತೆ ಜಾಸ್ತಿ.

ರೋಗ ಲಕ್ಷಣಗಳು: ಆರಂಭದಲ್ಲಿ ದೇಹದ ಒಂದು ಭಾಗದಲ್ಲಿ ವಿಪರೀತ ನೋವು, ಬಹಳ ಉರಿಯ ಅನುಭವ, ಚರ್ಮ ಅಥವಾ ನರಗಳಲ್ಲಿ ಒಂದು ರೀತಿಯ ಚುಟು ಚುಟು ಎನ್ನುವ ಲಕ್ಷಣ. ಹೀಗೆ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಚರ್ಮದ ಮೇಲೆ ಕೆಂಪಗಿನ ಹುಗುಳು ಅಥವಾ ಗುಳ್ಳೆ ಗಳು ಕಾಣಿಸಿಕೊಳ್ಳುತ್ತವೆ. ಈ ಗುಳ್ಳೆಗಳಲ್ಲಿ ಸಣ್ಣ ಪ್ರಮಾಣದ ಕೀವಿನ ಅಂಶ ನಂತರ ಆಗಬಹುದು. ಈ ಹಂತದಲ್ಲಿ ಇದು ಚಿಕನ್ ಪಾಕ್ಸ್ ಕಾಯಿಲೆಯನ್ನು ಬಹಳ ಹೋಲುತ್ತದೆ. ನೀರ್ಗುಳ್ಳೆಗಳು ನಂತರ ಒಡೆದು ಅಲ್ಸರ್ ರೀತಿಯ ಹುಣ್ಣು ಆಗುತ್ತದೆ. ಅವು ಬಹಳ ದಿನಗಳ ನಂತರ ಒಣಗಿ ಹೊಪ್ಪಳದ ರೀತಿಯಾಗುತ್ತದೆ. ಚರ್ಮದಿಂದ ಈ ಹೊಪ್ಪಳ 2-3 ವಾರಗಳ ನಂತರ ಕಿತ್ತು ಹೊರ ಬರುತ್ತದೆ ಅಥವಾ ಬೀಳುತ್ತದೆ. ಚರ್ಮದ ಈ ಲಕ್ಷಣಗಳು ಸಾಮಾನ್ಯವಾಗಿ ಬೆನ್ನಿನ ಒಂದು ಭಾಗ (ಬೆನ್ನು ಹುರಿಯ ಬದಿಯಲ್ಲಿ), ಮುಂಭಾಗದ ಹೊಟ್ಟೆಯ ಭಾಗ ಅಥವಾ ಎದೆಯ ಭಾಗಗಳಲ್ಲಿ ಕಂಡು ಬರುತ್ತವೆ.

ಕಣ್ಣಿನ ಭಾಗದ ಹರ್ಪಿಸ್: ಹರ್ಪಿಸ್ ಜೋಸ್ಟರ್ ಆಫ್ತಾಲ್ಮಿಕಸ್ ಮುಖ, ಕಣ್ಣು, ಬಾಯಿ, ಕಿವಿಯ ಭಾಗಗಳಲ್ಲೂ ಕಾಣಿಸಿಕೊಳ್ಳುತ್ತದೆ. ಜತೆಗೆ ಹೊಟ್ಟೆ ನೋವು, ಚಳಿ ಮತ್ತು ನಡುಕ, ಮುಖದ ಮೇಲೆ ಕೆಲವು ಚಲನೆ ಮಾಡಲು ಸಾಧ್ಯವಾಗದಿರುವುದು, ಕಣ್ಣಿನ ರೆಪ್ಪೆ ಕೆಳಗೆ ಬಂದು ಒಂದು ಕಣ್ಣು ಮುಚ್ಚಿಕೊಂಡಂತೆ ಕಾಣುವುದು, ಜ್ವರ, ದೈಹಿಕ ನಿತ್ರಾಣ, ಜನನಾಂಗಗಳಲ್ಲಿ ಕಾಯಿಲೆಯಿಂದ ಗುಳ್ಳೆ ಅಥವಾ ಹುಣ್ಣು ಕಾಣಿಸಿ ಕೊಳ್ಳುವುದು, ವಿಪರೀತ ತಲೆ ನೋವು, ಕಿವಿ ಮಂದವಾಗುವುದು, ಕೀಲುಗಳು ಅಥವಾ ಸಂದುಗಳಲ್ಲಿ ನೋವು, ಕಣ್ಣನ್ನು ಆಚೀಚೆ
ಚಲಿಸಲು ಸಾಧ್ಯವಾಗದೇ ಇರುವುದು, ಲಿಂ- ಗ್ಲಾಂಡ್‌ಗಳು ದೊಡ್ಡದಾಗುವುದು, ಬಾಯಿಯ ರುಚಿ ಕೆಡುವುದು, ಕಣ್ಣಿನ ದೃಷ್ಟಿ ಕಡಿಮೆ ಯಾಗುವುದು – ಈ ರೀತಿಯ ಲಕ್ಷಣಗಳೂ ಕಾಣಿಸಿಕೊಳ್ಳಬಹುದು.

ಚಿಕಿತ್ಸೆ ಹೇಗೆ?
ಸಾಮಾನ್ಯವಾಗಿ ಸರ್ಪಸುತ್ತಿನ ಈ ಸೋಂಕು ತನ್ನಿಂದ ತಾನೇ ಗುಣವಾಗುತ್ತದೆ. ಆದರೆ ಎಲ್ಲ ಸಂದರ್ಭಗಳಲ್ಲಿ ಹಾಗಾಗುವುದಿಲ್ಲ. ವಿಪರೀತ ನೋವಿರುವಾಗ ನೋವು ನಿವಾರಕ ಔಷಧಗಳು ಅಗತ್ಯವಿವೆ. ವೈರಸ್ ವಿರುದ್ಧ ಕೆಲಸ ಮಾಡುವ ಔಷಧ ಏಸೈಕ್ಲೋವಿರ್ ನಿರ್ದಿಷ್ಟ ಚಿಕಿತ್ಸೆ. ಇದು ನೋವು ಕಡಿಮೆ ಮಾಡುವುದಲ್ಲದೆ, ಕಾಯಿಲೆಯ ಅವಧಿಯನ್ನು, ಭವಿಷ್ಯದ ತೊಡಕುಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ನೋವು ಉರಿ ಕಡಿಮೆಯಾಗುವ ಮೊದಲು, ಗುಳ್ಳೆಗಳು ಕಾಣಿಸಿಕೊಳ್ಳುವ ಮೊದಲು ಚಿಕಿತ್ಸೆ ಆರಂಭಿಸಿದರೆ
ಫಲಿತಾಂಶ ಉತ್ತಮ.

ಕೆಲವೊಮ್ಮೆ ಸ್ಟೀರಾಯ್ಡ್ ಮತ್ತು ಆಂಟಿ ಹಿಸ್ಟಮೀನ್ ಔಷಧಗಳನ್ನು ಮಾತ್ರೆಗಳ ರೂಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಡಬೇಕಾಗುತ್ತದೆ. ಕೆಲಮೀನ್ ಲೋಷನ್ ತರಹ ಚರ್ಮ ಲೇಪನ ಚರ್ಮಕ್ಕೆ ಉಪಯೋಗಿಸಬೇಕಾಗುತ್ತದೆ. ಸಾಮಾನ್ಯವಾಗಿ 2-3 ವಾರಗಳಲ್ಲಿ ಸರ್ಪಸುತ್ತು
ಗುಣವಾಗುತ್ತದೆ. ಕೆಲವೊಮ್ಮೆ ಕಾಯಿಲೆ ಪುನಃ ಕಾಣಿಸಿಕೊಂಡು ಬಹಳ ದೀರ್ಘಕಾಲ ವಿಪರೀತ ನೋವೂ ಇರಬಹುದು. ಪೋಸ್ಟ್ ಹರ್ಪಿಟಿಕ್ ನ್ಯೂರಾಲ್ಜಿಯಾ ಎಂಬ ವಿಪರೀತ ನೋವು ಉಂಟು ಮಾಡಿ ರೋಗಿಯನ್ನು ಹೈರಾಣಾಗುವಂತೆ ಮಾಡಬಹುದು.

ಕಾಯಿಲೆಯ ತೊಡಕುಗಳು: ಮುಖದ ಭಾಗದ ನರ ಫೇಶಿಯಲ್ ನರಕ್ಕೆ ಆವರಿಸಿದಾಗ ಮುಖದ ಚಲನೆಯನ್ನು ತೀವ್ರ ರೀತಿಯಲ್ಲಿ ಕುಂಠಿತಗೊಳಿಸಬಹುದು. ಕಿವಿಯ ಶ್ರವಣ ಶಕ್ತಿ ಕಡಿಮೆಯಾಗಬಹುದು. ನಾಲಿಗೆ ರುಚಿ ಕುಂಠಿತಗೊಳ್ಳಬಹುದು. ತೀವ್ರ ರೀತಿಯಲ್ಲಿ ಸೋಂಕು ಮತ್ತೆ ಮರುಕಳಿಸಬಹುದು. ಕಣ್ಣಿನ ಭಾಗದಲ್ಲಿ ಸೋಂಕು ಕಾಣಿಸಿಕೊಂಡಾಗ ಹೆಚ್ಚಿನ ಸಂದರ್ಭಗಳಲ್ಲಿ ರೋಗಿ ನಿರ್ಲಕ್ಷಿಸು ತ್ತಾನೆ. ಪಾರದರ್ಶಕ ಪಟಲ ಕಾರ್ನಿಯಾದಲ್ಲಿ ಬಿಳಿ ಕಲೆಗಳು ಪೂರ್ಣ ಪ್ರಮಾಣದ ಅಂಧತ್ವ ಉಂಟು ಮಾಡಬಹುದು. ಚರ್ಮದ ಭಾಗದಲ್ಲಿ ಬ್ಯಾಕ್ಟೀರಿಯಾದ ಸೋಂಕು ಕಾಣಿಸಿಕೊಂಡು ಮೂಲ ವೈರಸ್ ಸೋಂಕು ತೀವ್ರ ರೀತಿಯಲ್ಲಿ ಉಲ್ಬಣಿಸಬಹುದು.

ಮುನ್ನೆಚ್ಚರಿಕೆ ಕ್ರಮಗಳು: ಹರ್ಪಿಸ್ ಜೋಸ್ಟರ್ ಅಥವಾ ಚಿಕನ್ ಪಾಕ್ಸ್ ಬಂದ ರೋಗಿಗಳ ಚರ್ಮದ ಗುಳ್ಳೆಗಳನ್ನು ನೇರವಾಗಿ ಸ್ಪರ್ಶಿಸ
ಬಾರದು. ಮೊದಲು ಚಿಕನ್ ಪಾಕ್ಸ್ ಗೆ ಒಳಗಾಗದವರು ಚಿಕನ್ ಪಾಕ್ಸ್ ಚುಚ್ಚುಮದ್ದು ತೆಗೆದುಕೊಳ್ಳುವುದು ಒಳ್ಳೆಯದು.

ಕಣ್ಣಿನ ಕಾಯಿಲೆಯ ಲಕ್ಷಣಗಳು: ಸೋಂಕಿನ ಆರಂಭಕ್ಕೂ ಮೊದಲೇ ಜ್ವರ, ಮೈ ಕೈ ನೋವು ಬರಬಹುದು. ಮುಖ, ಕೆನ್ನೆಯ ಒಂದು ಬದಿಯಲ್ಲಿ 5ನೇ ಕಪಾಲ ನರದ ಪ್ರಭಾವ ಇರುವ ಭಾಗದಲ್ಲಿ ವಿಪರೀತ ಸೆಳೆತದ ರೀತಿಯ ಅಥವಾ ಹಿಂಡುವ ರೀತಿಯ ನೋವು ಕಾಣಿಸ ಬಹುದು. ಗುಳ್ಳೆಗಳು ಬರಲು ಆರಂಭಿಸಿದ ಕೂಡಲೇ ಇದು ಹರ್ಪಿಸ್ ಜೋಸ್ಟರ್ ಎಂದು ಹೇಳುವಷ್ಟು ನಿಖರವಾಗಿರುತ್ತದೆ ಈ ಗುಳ್ಳೆಗಳ ಹರಡುವಿಕೆ. ಚರ್ಮದ ಗುಳ್ಳೆಗಳು ಕಾಣಿಸಿಕೊಂಡ ನಂತರ ಕೆಲವರಲ್ಲಿ ನೋವು ಕಡಿಮೆಯಾಗಬಹುದು.

ಮತ್ತೆ ಕೆಲವರಲ್ಲಿ ಆ ನೋವು ಹಲವಾರು ತಿಂಗಳುಗಳವರೆಗೆ ಅಥವಾ ಹಲವು ವರ್ಷಗಳವರೆಗೂ ಇರಬಹುದು. ಕಣ್ಣಿನ ರೆಪ್ಪೆಯ ಮೇಲಿನ ಚರ್ಮ ಕೆಂಪಾಗುತ್ತದೆ, ಊದಿಕೊಳ್ಳುತ್ತದೆ. (ಈ ಹಂತದಲ್ಲಿ ಚರ್ಮದ ಇತರ ಕಾಯಿಲೆಗಳ ಬಗ್ಗೆ ಸಂದೇಹ ಹುಟ್ಟಿಸುತ್ತದೆ.) ಮುಖದ ಒಂದು ಭಾಗ, ಕಣ್ಣಿನ ಸುತ್ತ, ಮೂಗಿನ ಒಂದು ಬದಿ, ತಲೆಯ ಅರ್ಧಭಾಗಗಳಲ್ಲಿ (ಆ ಭಾಗವನ್ನು ದಾಟಿ ಮತ್ತೊಂದು ಭಾಗದಲ್ಲಿ ಯಾವ ಲಕ್ಷಣ ಗಳೂ ಕಾಣಿಸಿಕೊಳ್ಳದಿರುವುದೇ ಈ ಕಾಯಿಲೆಯ ವಿಶೇಷತೆ.) ಸಣ್ಣ ಸಣ್ಣ ಗುಳ್ಳೆಗಳು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತವೆ. ಈ ಗುಳ್ಳೆಗಳು ಅಗಲವಾಗಿ, ಒಡೆದು ಸಣ್ಣ ಪ್ರಮಾಣದಲ್ಲಿ ಕೀವನ್ನೂ ಹೊರಸೂಸುತ್ತವೆ.

ಸ್ವಲ್ಪ ಪ್ರಮಾಣದಲ್ಲಿ ರಕ್ತವೂ ಒಸರಬಹುದು. ನಂತರ ಅವೆಲ್ಲ ಒಣಗಿದ ನಂತರ ತೀವ್ರ ಪ್ರಮಾಣದ ಕಲೆ ಬಹಳಷ್ಟು ದಿವಸ ಉಳಿಯ ಬಹುದು. ಈ ರೀತಿಯ ಚರ್ಮದ ಗುಳ್ಳೆಗಳು ಸಾಮಾನ್ಯವಾಗಿ 3 ವಾರ ಇರುತ್ತವೆ. ನಂತರ ಆ ಭಾಗದಲ್ಲಿ ಸ್ಪರ್ಷ ಜ್ಞಾನ ಕಡಿಮೆ ಯಾಗುತ್ತದೆ. ಜೋಸ್ಟರ್ ಸೋಂಕಿನಿಂದ ಕಣ್ಣಿನಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ಈ ಹಂತದಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಕಣ್ಣು ಊದಿಕೊಂಡು ದಪ್ಪಗಾಗುವುದರಿಂದ ಚರ್ಮದ ಲಕ್ಷಣಗಳು ಮುಖ್ಯವಾಗಿ ಗಮನ ಸೆಳೆಯುತ್ತವೆ, ಕಣ್ಣಿನ ಲಕ್ಷಣಗಳು ನಿರ್ಲಕ್ಷಕ್ಕೆ
ಒಳಗಾಗುತ್ತವೆ. ಆರಂಭದಲ್ಲಿ ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾ (ಕಪ್ಪು ಗುಡ್ಡೆ)ಯ ಮೇಲೆ ಸಣ್ಣ ಸಣ್ಣ ಬಿಳಿ ಚುಕ್ಕೆಗಳು ಕಾಣಿಸಿ ಕೊಳ್ಳುತ್ತವೆ.

ಚುಕ್ಕೆಗಳು ನಿಧಾನವಾಗಿ ಅಗಲವಾಗುತ್ತವೆ. ಇವು ನೇತ್ರ ವೈದ್ಯರು ಉಪಯೋಗಿಸುವ ಸ್ಲಿಟ್ ಲ್ಯಾಂಪ್ ಸೂಕ್ಷ್ಮ ದರ್ಶಕದಲ್ಲಿ ಮಾತ್ರ ಗೊತ್ತಾಗುತ್ತವೆ. ಕಾರ್ನಿಯಾದ ಹೆಚ್ಚಿನ ಭಾಗ ಆವರಿಸಿದಾಗ ದೃಷ್ಟಿಯು ಗಮನಾರ್ಹವಾಗಿ ಕುಂಠಿತಗೊಳ್ಳುತ್ತದೆ. ಹರ್ಪಿಸ್ ನ ಈ ಕಲೆ
ಸ್ಪರ್ಶ ಜ್ಞಾನವನ್ನು ತೀವ್ರವಾಗಿ ಕುಂಠಿತಗೊವುದರಿಂದ ರೆಪ್ಪೆ ಮುಚ್ಚುವುದಿಲ್ಲ. ಆಗ ಕಾರ್ನಿಯಾದ ಗುಳ್ಳೆ ಪಸರಿಸಿ ಹುಣ್ಣಾಗಿ ಗಾಯ ವಾಸಿ ಯಾಗುವುದು ಹಲವಾರು ದಿವಸಗಳು, ಕೆಲವೊಮ್ಮೆ ತಿಂಗಳುಗಳಾಗಿ ತೀವ್ರ ಪ್ರಮಾಣದಲ್ಲಿ ದೃಷ್ಟಿ ಕುಂಠಿತಗೊಳ್ಳುತ್ತದೆ.

ಅಂದರೆ ಆ ಕಣ್ಣು ಅಂಧತ್ವ ಹೊಂದುತ್ತದೆ. ಕೆಲವೊಮ್ಮೆ ಕಣ್ಣಿನ ಕಾಯಿಲೆಗಳಾದ ತಾರಕೆಯ ಸೋಂಕು (Iritis) ಹಾಗೂ ಗ್ಲೊಕೊಮಾ ಸಹ ಜೋಸ್ಟರ್‌ನ ಮುಂದುವರಿದ ಹಂತದಲ್ಲಿ ಕಾಣಬಹುದು, ಅವುಗಳು ಕಣ್ಣಿನ ಅಂಧತ್ವಕ್ಕೆ ಮತ್ತಷ್ಟು ಕಾರಣವಾಗಬಹುದು.

ಚಿಕಿತ್ಸೆ ಬಗೆಗೆ ತಪ್ಪು ಕಲ್ಪನೆ: ಹೆಚ್ಚಿನ ಜನರಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ಪಸುತ್ತು ಕಾಯಿಲೆಗೆ ಇಂಗ್ಲಿಷ್ ಔಷಧ ಅಥವಾ ಆಧುನಿಕ ವೈದ್ಯ ವಿಜ್ಞಾನದ ಔಷಧ ತೆಗೆದುಕೊಳ್ಳಲೇಬಾರದು ಎಂಬ ಬಲವಾದ ಮೂಢನಂಬಿಕೆ ಇದೆ. ಜತೆಗೆ ಆಯುರ್ವೇದವೇ ಸರಿ ಎಂದು ಜನರ ತಿಳಿವಳಿಕೆಗೆ ಪೂರಕವಾಗಿ ಖೊಟ್ಟಿ ವೈದ್ಯರು, ಅಳಲೆಕಾಯಿ ಪಂಡಿತರು ತಮ್ಮ ಔಷಧದ ಜತೆಗೆ ಅವರ ಇಂಗ್ಲಿಷ್ ಔಷಧ ತೆಗೆದುಕೊಳ್ಳಲೇ ಬೇಡಿ ಎಂಬ ಬೇಡದ ತಪ್ಪು ಸಲಹೆ ಕೊಟ್ಟು ರೋಗಿಗಳನ್ನು ದಾರಿ ತಪ್ಪಿಸುತ್ತಾರೆ.

ಪರಿಣಾಮ ಎಂದರೆ ಹೆಚ್ಚಿನ ರೋಗಿಗಳು ತೀರಾ ಮುಂದುವರಿದ ಹಂತದಲ್ಲಿ ಕಣ್ಣಿನ ವೈದ್ಯರಲ್ಲಿ ಬರುತ್ತಾರೆ. ಆಗ ಪರಿಸ್ಥಿತಿ ಉಲ್ಬಣ ಗೊಂಡಿರುತ್ತದೆ. ಚಿಕಿತ್ಸೆ ಪರಿಣಾಮಕಾರಿಯಾಗುವುದಿಲ್ಲ. ಆ ಕಣ್ಣು ಅಂಧತ್ವ ಹೊಂದುವ ಸಾಧ್ಯತೆ ಜಾಸ್ತಿ. ಕೆಲವು ವರ್ಷಗಳ ಮೊದಲು ಜೋಸ್ಟರ್ ಸೋಂಕಿಗೆ ಪರಿಣಾಮಕಾರಿಯಾದ ಚಿಕಿತ್ಸೆ ಲಭ್ಯವಿರಲಿಲ್ಲ. ಈಗ ವೈರಸ್ ವಿರುದ್ಧದ ಜೀವಿರೋಧಕ ಔಷಧ ಏಸೈಕ್ಲೋವಿರ್ ಈ ಕಾಯಿಲೆಯ ತೀವ್ರತೆ ತಡೆಯುವಲ್ಲಿ ಹಾಗೂ ಕಾಯಿಲೆ ಮುಂದುವರಿಯುವುದನ್ನು ನಿಲ್ಲಿಸುವಲ್ಲಿ ತುಂಬಾ ಪರಿಣಾಮಕಾರಿ.

ಏಸೈಕ್ಲೋವಿರ್ ಔಷಧವನ್ನು ಕಣ್ಣಿಗೆ ಮುಲಾಮಿನ ರೂಪದಲ್ಲಿ ಹಾಗೂ ದೇಹಕ್ಕೆ ಮಾತ್ರೆಯ ರೂಪದಲ್ಲಿ ನಿರ್ದಿಷ್ಟ ಪ್ರಮಾಣ ಮತ್ತು ಅವಧಿ ಯವರೆಗೆ ಉಪಯೋಗಿಸಬೇಕು. ನೋವು ಕಡಿಮೆ ಮಾಡಲು ಸೂಕ್ತ ಮಾತ್ರೆಗಳು ಅವಶ್ಯಕ. ಆರಂಭದಲ್ಲಿ ಚಿಕಿತ್ಸೆ ದೊರಕಿದರೆ ಸರ್ಪ ಸುತ್ತಿನಿಂದ ಉಂಟಾಗಬಹುದಾದ ಅಂಧತ್ವವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.