Monday, 25th November 2024

ವಿವಿಧ ದೃಷ್ಟಿಕೋನದ ತ್ರಿಕೋನ

ಮುಂದಿನ ಶುಕ್ರವಾರ ತ್ರಿಕೋನಾ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಶಿರ್ಷಿಕೆ ಕೇಳಿದಾಕ್ಷಣ ಚಿತ್ರದಲ್ಲಿ ವಿಭಿನ್ನ ಕಥೆ ಇರುವುದು ಸ್ಪಷ್ಟವಾಗುತ್ತದೆ. ಚಿತ್ರದ ಪೋಸ್ಟರ್ ಹಾಗೂ ಟೀಸರ್ ಇದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತವೆ. ಇದು ಕಾಲದ ಕಥೆಯೇ ಇಲ್ಲ ಅಘೋರಿ ಸ್ಟೋರಿಯೆ ಹೀಗೆ ಹಲವು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಇದೆಲ್ಲದಕ್ಕೂ ತೆರೆ ಯಲ್ಲಿಯೇ ಉತ್ತರ ಸಿಗಲಿದೆ. ಅಷ್ಟಕ್ಕೂ ಏನಿದು ತ್ರಿಕೋನಾ ಈ ಚಿತ್ರದ ಮೂಲಕ ನಿರ್ದೇಶಕರು ಏನು ಹೇಳಲು ಹೊರಟ್ಟಿದ್ದಾರೆ, ಇದೆಲ್ಲದರ ಬಗ್ಗೆ ನಿರ್ಮಾಪಕ ರಾಜಶೇಖರ್ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.

ವಿ.ಸಿನಿಮಾಸ್: ತ್ರಿಕೋನಾ ಶಿರ್ಷಿಕೆಯೇ ಡಿಫರೆಂಟ್ ಆಗಿದಿದೆಯಲ್ಲ ? ಚಿತ್ರದ ಮೂಲಕ ಏನು ಹೇಳಲು ಹೊರಟ್ಟಿದ್ದೀರಿ?
ರಾಜಶೇಖರ್: ಹೌದು, ಶಿರ್ಷಿಕೆಯಂತೆಯೇ ಚಿತ್ರದ ಕಥೆಯೂ ವಿಭಿನ್ನವಾಗಿದೆ. ಎಲ್ಲರಿಗೂ ಹಿಡಿಸುವ ಕಥೆ ಸಿನಿಮಾದಲ್ಲಿದೆ. ಪ್ರತಿಯೊಬ್ಬರಿಗೂ ತಾಳ್ಮೆ ಎಷ್ಟು ಮುಖ್ಯ ಎಂಬುದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಅಂದರೆ ಜೀವನದ ಮಹತ್ವವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ.

ಕಥೆಯನ್ನು ನಾನೇ ರಚಿಸಿ, ನಿರ್ದೇಶನಕ್ಕೂ ಅಣಿಯಾಗಿದ್ದೆ, ಸಂಭಾಷಣೆ ಬರೆಯಲು ಚಂದ್ರ ಕಾಂತ್ ಅವರಿಗೆ ನೀಡಿದೆ. ಅವರು ಈ ಚಿತ್ರಕ್ಕಾಗಿ ಬರೆದ ಅರ್ಥಗರ್ಭಿತ ಸಂಭಾಷಣೆ ನನಗೆ ತುಂಬಾ ಹಿಡಿಸಿತು. ಚಂದ್ರಕಾತ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಿದರೆ ಸೂಕ್ತ ಅನ್ನಿಸಿತು. ಅಂತೆಯೆ ಅವರೇ ನಿರ್ದೇಶನದ ಜವಾಬ್ದಾರಿ ನಿರ್ವಹಿಸಿದರು. ಹಾಗಾಗಿ ನಾನು ಈ ಚಿತ್ರದ ನಿರ್ಮಾಣದ ಜವಬ್ದಾರಿ ಹೊತ್ತುಕೊಮಡಿದೆ. ಚಿತ್ರ ಅಂದುಕೊಂಡಂತೆ ಅದ್ಬುತವಾಗಿ ಮೂಡಿಬಂದಿದೆ.

ವಿ.ಸಿ : ಚಿತ್ರದ ಕಥೆ ಹೊಳೆದಿದ್ದು ಹೇಗೆ ?
ರಾಜಶೇಖರ್: ನಮ್ಮ ಸುತ್ತಮುತ್ತ ನಡೆದ ಕೆಲವು ಘಟನೆಗಳನ್ನು ಆಧರಿಸಿ ಚಿತ್ರದ ಕಥೆ ಹೆಣೆದಿದ್ದೇನೆ. ಬಿಸಿರಕ್ತದ ಯುವಕರು ತಾಳ್ಮೆಯನ್ನೇ ಮರೆತ್ತಿದ್ದಾರೆ. ಇದರಿಂದ ಸಾಕಷ್ಟು ಅಚಾತುರ್ಯಗಳು ಆಗುತ್ತವೆ. ವಯಸ್ಸಾದಂತೆ ನಮಗಿರಿವಿಲ್ಲದಂತೆ ತಾಳ್ಮೆ,  ಸಹನೆ ನಮ್ಮನ್ನು ಆವರಿಸುತ್ತವೆ. ಆಗ ನಾವು ಹಿಂದೆ ಮಾಡಿದ ತಪ್ಪು ಒಪ್ಪುಗಳು ನಮ್ಮನ್ನು ಕಾಡುತ್ತವೆ. ಇದನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಪ್ರೇಕ್ಷಕರು ಚಿತ್ರ ವೀಕ್ಷಿಸಿ ಚಿತ್ರಮಂದಿರದಿಂದ ಹೊರಗೆ ಬಂದ ಮೇಲೂ ಸಿನಿಮಾ ಕಾಡುತ್ತದೆ.

ವಿ.ಸಿ : ತ್ರಿಕೋನಾದಲ್ಲಿ ಅಘೋರಿಯ ಕಥೆಯೂ ಇದೆಯೆ?
ರಾಜಶೇಖರ್: ತ್ರಿವಿಕ್ರಮ, ಕೋದಂಡ ರಾಮ, ನಟರಾಜ ಹೀಗೆ ಮೂರು ಕಥೆಗಳು ಚಿತ್ರದಲ್ಲಿವೆ. ಅವು ಮೂರು ಆಯಾಗಳಲ್ಲಿ ಸಾಗುತ್ತವೆ. ಇದರಲ್ಲಿ ಮತ್ತೊಂದು ವಿಭಿನ್ನ ಪಾತ್ರವೂ ಇದೆ. ಅದನ್ನು ಅಘೋರಿ ಅಂತಲಾದರೂ ಅಂದುಕೊಳ್ಳಬಹುದು, ಕಾಲ
ಅಂದುಕೊಳ್ಳಬಹುದು, ನಾವು ಯಾವ ದೃಷ್ಟಿಕೋನದಲ್ಲಿ ನೋಡುತ್ತೇವೆಯೋ ಅಂತೆಯೇ ಆ ಪಾತ್ರ ನಮಗೆ ಭಾಸವಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ನಮ್ಮನ್ನು ನಾವು ತೆರೆಯಲ್ಲಿ ಕಾಣಬಹುದಾಗಿದೆ.

ವಿ.ಸಿ : ತಾರಾಗಣದ ಬಗ್ಗೆ ಹೇಳುವುದಾದರೆ ?
ರಾಜಶೇಖರ್: ಚಿತ್ರದಲ್ಲಿ ಹಿರಿಯ ನಟರ ಬಳಗವೇ ಇದೆ. ಸುರೇಶ್ ಹೆಬ್ಳಿಕರ್, ಲಕ್ಷ್ಮೀ, ಅಚ್ಯುತ್ ಕುಮಾರ್, ಸಾಧುಕೋಕಿಲ, ಸುಧಾರಾಣಿ, ಮಂದೀಪ್ ರಾಯ್, ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಸುಬ್ರಮಣ್ಯ ಘಾಟ್ ಸುತ್ತಮುತ್ತ ಸುಮಾರು ಐವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತ್ರಿಕೋನ ತೆರೆಗೆ ಬರಲಿದೆ.