Wednesday, 27th November 2024

ಮೊಬೈಲ್‌ ಬರ್ತ್‌ಡೆ ಮುನ್ನಾ ದಿನಗಳ ಹಳವಂಡ !

ಸುಪ್ತ ಸಾಗರ

ರಾಧಾಕೃಷ್ಣ ಎಸ್.ಭಡ್ತಿ

rkbhadti@gmail.com

ಮೊಟೊರೊಲಾ ಸಂಶೋಧಕ ಮತ್ತು ಕಾರ್ಯನಿರ್ವಾಹಕನಾಗಿದ್ದ ಮಾರ್ಟಿನ್ ಕೂಪರ್ ಎಂಬ ಆ ಮಹಾನುಭಾವ ಜಗತ್ತಿನ ಮೊಟ್ಟ ಮೊದಲ ಮೊಬೈಲ್ ಕರೆಯನ್ನು ಮಾಡಿದ್ದರು. ಅತ್ತಲಿಂದ ಮೊಟೊರೊಲಾದ ಪ್ರತಿಸ್ಪರ್ಧಿ ಎನಿಸಿದ್ದ ನ್ಯೂಜರ್ಸಿಯ ಬೆಲ್ ಲ್ಯಾಬ್‌ನ ಸಂಸ್ಥೆಯ ಜೋಯೆಲ್ ಎಂಗೆಲ್ ಎನ್ನುವವ ಇದಕ್ಕೆ ಕಿವಿಯಾಗಿದ್ದ. ಮೊದಲ ಮೊಬೈಲ್ ಕರೆ ಇತಿಹಾಸ ಸೃಷ್ಟಿಸಿಬಿಟ್ಟಿತ್ತು.

ಹೆಚ್ಚೂ ಕಡಿಮೆ ನಾನು ಹುಟ್ಟಿದ ಆಸು ಪಾಸಿನ ವರ್ಷಗಳೇ. ಅದಕ್ಕೂ ನನಗೂ ಸಂಬಂಧವಿಲ್ಲ. ಜಗತ್ತಿನ ಆ ಮಹತ್ವದ ಬೆಳವಣಿಗೆ ಯನ್ನು ನಾನು ನೆಪಿಟ್ಟುಕೊಂಡಿದ್ದು ಹಾಗೆ, ಅಷ್ಟೆ. ಇರಲಿ, ಅಂದು ಆತ ಅದೆಷ್ಟು ಉದ್ವಿಘ್ನನಾಗಿದ್ದನೆಂದರೆ ಬಹುಶಃ ತಾನು ರಸ್ತೆಯಲ್ಲಿ ನಿಂತಿದ್ದೇನೆ ಎಂಬ ಪರಿವೆಯೂ ಆತನಲ್ಲಿ ಇರಲಿಲ್ಲ.

ಸಂತೋಷದಿಂದ ನ್ಯೂಯಾರ್ಕ್‌ನ ಆ ಜನನಿಬಿಡ ರಸ್ತೆಯಲ್ಲಿ ತನ್ನ ಸುತ್ತಲೂ ಒಂದು ಜಗತ್ತು ಇದೆ ಎಂಬುದನ್ನೇ ಮರೆತು ಓಡಾಡುತ್ತಿದ್ದ. ಬಹುಶಃ ಅವತ್ತು ಆ ವ್ಯಕ್ತಿ ಇದ್ದ ಅವಸ್ಥೆಯ ಇಂದಿಗೂ ನಾವು ಬಹುತೇಕರು ಮೈಮರೆತು ಸೆಲ್ ಪೋನ್ ನಲ್ಲಿ ಮಾತ ನಾಡುತ್ತ ರಸ್ತೆಗಳಲ್ಲಿ ನಡೆಯುತ್ತಿರುತ್ತೇವೇನೋ! ವಾಹನಗಳ ಓಡಾಟವಿರುವು ದನ್ನೂ ಗಮನಿಸಿದೇ ಮಾತನಾಡುವ ಭರದಲ್ಲಿ ಅಪಾಯಕ್ಕೆ ಸಿಲುಕಿ ಕೊಳ್ಳುತ್ತಿದ್ದೇವೇನೋ? ಮೊಬೈಲ್ ಪೋನ್ ಎಂದರೆ ಬೀದಿಯಲ್ಲಿ ಬಳಸುವ ಸಾಧನ ಎಂಬ ತಪ್ಪು ಕಲ್ಪನೆ ಆತನಿಂದಲೇ ಬಂದಿರ ಬಹುದೇ? ಹೌದು, ಒಂದು ಕಾಲದಲ್ಲಿ ಮನೆಯ ಹಾಜಾರದ, ಆಫೀಸಿನ ಬಾಸ್‌ನ ಟೇಬಲ್ ಮೇಲೋ ಉದ್ದದ ದಪ್ಪ ಸ್ಪ್ರಿಂಗ್ ನಂಥ ಸರಪಳಿಗೆ ಬಂದಿ ಯಾಗಿ ಕುಳಿತಿರುತ್ತಿದ್ದ ದೂರವಾಣಿ ಉರ್ಫ್‌ ಲ್ಯಾಂಡ್ ಫೋನ್ ಇಂದು ಮೊಬೈಲ್ ಆಗಿ ಅವತರಿಸಿ ಬೀದಿಬೀದಿ  ಸುತ್ತು ತ್ತಿರುವುದಕ್ಕೆ ಅದರ ಸಂಶೋಧಕ ಮಾಡಿದ ಮೊದಲ ಕರೆ ಬೀದಿಯ ಎಂಬುದೂ ಕಾರಣವಿದ್ದೀತೆ? ಅವತ್ತು ಅವರು ಪ್ರಾಯೋಗಿಕ ವಾಗಿ ಬೀದಿಗೆ ಬಂದು ಕರೆ ಮಾಡಿದ್ದನ್ನು ನಾವು ತಪ್ಪಾಗಿ ಭಾವಿಸಿ, ಮನೆಯಲ್ಲಿ ಮಾತನಾಡುವುದಕ್ಕಿಂತ ಹೆಚ್ಚಾಗಿ ಮೊಬೈಲ್ ಫೋನ್ ಅನ್ನು ಕೈಯಲ್ಲಿ ಹಿಡಿದು ಬೀದಿಗಿಳಿದೇ ಮಾತನಾಡುತ್ತೇ ವೆಯೇ? ಒಂದೊಮ್ಮೆ ನಮ್ಮ ಇಂಥ ವರ್ತನೆಯ ಕಲ್ಪನೆ ಇದ್ದಿದ್ದರೆ ಸ್ಥಿರ  ದೂರವಾಣಿಗೆ ಆತ ಬಂಧಮುಕ್ತಿ ದೊರಕಿಸುತ್ತಲೇ ಇರಲಿಲ್ಲವೇನೋ? ಮೊಬೈಲ್‌ಗೆ ಆಧುನಿಕ ಯುಗ ಅದೆಷ್ಟು ಅಡಿಕ್ಟ್ ಆಗಿದೆ ಎಂದರೆ ಹೆಂಡತಿ ಮಕ್ಕಳ ನ್ನಾದರೂ ಬಿಟ್ಟೇವು, ಊಟ ತಿಂಡಿಯನ್ನಾದರೂ ಮರೆತೇವು, ಮೊಬೈಲ್ ಫೋನ್ ಅನ್ನು ಬಿಟ್ಟಿರರದಷ್ಟರ ಮಟ್ಟಿಗೆ ಅದರ ಮೇಲೆ ನಾವು ಅವಲಂಬಿತರಾಗುತ್ತಿದ್ದೇವೆ.

ಕೊರೋನಾ ಹಿನ್ನೆಲೆಯಲ್ಲಿ ಒಂದೊಮ್ಮೆ ಮೊಬೈಲ್ ಕರೆಗಳನ್ನು ‘ಲಾಕ್‌ಡೌನ್’ ಮಾಡಬೇಕೆಂದು ಹೇಳಿದ್ದರೆ ಬಹುಶಃ ಇಡೀ ಜಗತ್ತೇ ಹುಚ್ಚಾಸ್ಪತ್ರೆಯಾಗಿ ಬದಲಾಗುತ್ತಿತ್ತೇನೋ?! ಇಂಥ ಮೊಬೈಲ್ ಅಡಿಕ್ಷನ್ನಿಂದ ‘ನೋಮೋ ಫೋಬಿಯಾ’ ಎಂಬ ರೋಗವೂ ಜಗತ್ತನ್ನು
ಆವರಿಸಿಕೊಳ್ಳುತ್ತಿದೆ. ಈ ಫೋಬಿಯಾ ಪತ್ತೆ ಹಚ್ಚಲೆಂದೇ ಮಾನಸಿಕ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳು ಸಹ ಇವೆ ಎಂದರೆ ಬೆರಗಾಗ ಬೇಡಿ!

ಅದಿರಲಿ, ಮನುಕುಲದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮೈಲುಗನಿಸಿದ ಆ ಒಂದು ದೂರವಾಣಿ ಕರೆ ಮಾಡಿ ಬರುವ ಏಪ್ರಿಲ್ ೩ಕ್ಕೆ ಬರೋಬ್ಬರಿ ೪೯ ವರ್ಷಗಳಾದವು. ಬಹುತೇಕ ಪ್ರಮುಖ ದೂರವಾಣಿ ಕರೆಗಳು ನಾವು ಹೊರ ಹೋಗಿದ್ದಾಗ, ಟಾಯ್ಲೆಟ್ ಅಥವಾ
ಸ್ನಾನದ ಮನೆಯಲ್ಲಿರುವಾಗ, ಉದ್ಯಾನದಲ್ಲಿ ಗಾಳಿ ಸೇವನೆಗೆ ಹೋಗಿದ್ದಾಗಲೇ ಬಂದಿರುತ್ತವೆ ಎಂಬುದು ಸಾಂದರ್ಭಿಕ ಜೋಕ್ ಎನಿಸಿ ದರೂ ಆಗ ಈಗಿನಂತೆ ನಾವು ಹೋದೆಡೆಯಲ್ಲ ಫೋನ್ ಅನ್ನೂ ಜತೆಗೆ ಒಯ್ಯಲಾಗುತ್ತಿರಲಿಲ್ಲ ಎಂಬುದು ಸಂವಹನಕ್ಕೆ ಪ್ರಮುಖ ಅಡ್ಡಿ ಯಾಗಿದ್ದುದಂತೂ ಸತ್ಯ.

ಇದನ್ನು ತಪ್ಪಿಸಲೋಸುಗವೇ 1940ರ ದಶಕದಲ್ಲಿ ಬಂದದ್ದು ಕಾರ್ ಫೋನ್. ಮನೆಯಲ್ಲಿ ಕಟ್ಟಿಹಾಕಿರಬೇಕಿದ್ದ ಫೋನ್ ಅನ್ನು ಕಾರಿನವ ರೆಗೂ ತೆಗೆದುಕೊಂಡು ಹೋಗಿ ಅಳವಡಿಸಿಕೊಳ್ಳಬಹುದಾದ ಸ್ವಾಂತಂತ್ರ್ಯ ಬಂದರೂ ಜನಕ್ಕೆ ಹೆಚ್ಚೇನೂ ತೃಪ್ತಿ ಕಾಣಲಿಲ್ಲ. ಏಕೆಂದರೆ ಹೆಚ್ಚೆಂದರೆ ಮನೆಯಿಂದ ಹೊರಗಿಳಿದು ಕಾರು ಓಡಿಸುವಾಗಲಷ್ಟೇ ಬಳಸಬಹುದು. ಕಾರು ಇಳಿದ ಮೇಲೆ? ಮನೆಯ ಓಡಾಡುತ್ತ, ಕೆಲಸ ಮಾಡುತ್ತ ಇರುವಾಗ ಏನು ಮಾಡುವುದು ಎಂಬ ಪ್ರಶ್ನೆ ಹಾಗೆಯೇ ಉಳಿದಿತ್ತು. ಜನರ ಈ ಮನಃಸ್ಥಿತಿಯನ್ನು ಕುರಿತು ಮತ್ತೆ ತಂತ್ರಜ್ಞರು ಹುಡುಕಾಟಕ್ಕೆ ಶುರುವಿಟ್ಟುಕೊಂಡರು. ಅದರ ಫಲವಾಗಿ ಹುಟ್ಟಿದ್ದೇ ಮೋಬೈಲ್ ಫೋನ್.

ಅವತ್ತು ಅಂದರೆ 1973, ಏಪ್ರಿಲ್ 3ರಂದು ಬೆಳಗಿನ ಸಮಯ, ಮೊಟೊರೊಲಾ ಸಂಶೋಧಕ ಮತ್ತು ಕಾರ್ಯ ನಿರ್ವಾಹಕನಾಗಿದ್ದ ಮಾರ್ಟಿನ್ ಕೂಪರ್ ಎಂಬ ಆ ಮಹಾನುಭಾವ ನ್ಯೂಯಾರ್ಕ್ ಸಿಟಿಯ 53 ಮತ್ತು 54ನೇ ಬೀದಿ ನಡುವಿನ 6ನೇ ಅವೆನ್ಯೂ ರಸ್ತೆಯಲ್ಲಿನ 900 ಮೆಗಾ ಹರ್ಟ್ಸ್ (MHz) ಸಾಮರ್ಥದ ಮುಖ್ಯ ಕೇಂದ್ರದೆದುರು ನಿಂತು ಜಗತ್ತಿನ ಮೊಟ್ಟ ಮೊದಲ ಮೊಬೈಲ್ ಕರೆಯನ್ನು
ಮಾಡಿದ್ದರು.

ಅಚ್ಚರಿಯ ಸಂಗತಿಯೆಂದರೆ 1.1 ಕೆಜಿ ತೂಕದ ದೊಡ್ಡ ಇಟ್ಟಿಗೆ ತುಂಡಿನಂತಿದ್ದ ಆ ಸಾಧನವನ್ನು ಕಿವಿಯ ಬಳಿ ಹಿಡಿದುಕೊಂಡು  ಬೀದಿ ಯಲ್ಲಿ ಸುತ್ತುತ್ತ ಆತ ಕರೆ ಮಾಡುತ್ತಿದ್ದರೆ, ಅತ್ತಲಿಂದ ಮೊಟೊರೊಲಾದ ಪ್ರತಿಸ್ಫರ್ಧಿ ಎನಿಸಿದ್ದ ನ್ಯೂಜರ್ಸಿಯ ಬೆಲ್ ಲ್ಯಾಬ್‌ನ ಸಂಸ್ಥೆಯ ಜೋಯೆಲ್ ಎಂಗೆಲ್ ಎನ್ನುವವ ಇದಕ್ಕೆ ಕಿವಿಯಾಗಿದ್ದ. ಕೊನೆಗೂ ಜಗತ್ತಿನ ಮೊದಲ ಮೊಬೈಲ್ ಕರೆ ಯಶಸ್ವಿಯಾಗಿ ಸಂವಹಿಸಿ ಇತಿಹಾಸ ಸೃಷ್ಟಿಸಿಬಿಟ್ಟಿತ್ತು.

‘ಮೊಟೊರೊಲಾ DynaTAC’ ಬ್ರಾಂಡ್ ಹೆಸರಿನೊಂದಿಗೆ ಬರೋಬ್ಬರಿ 23 ಸೆಂ.ಮೀ ಉದ್ದವಿದ್ದಿದ್ದ ಅದನ್ನು ಸಂಪೂರ್ಣ 10 ಗಂಟೆಗಳ ಸಮಯ ಚಾರ್ಜ್ ಮಾಡಿದ್ದರೆ ಕೇವಲ 35 ನಿಮಿಷ ಮಾತನಾಡಬಹುದಿತ್ತು. ಆ ನಂತರ ಸಾರ್ವಜನಿಕ ಸೇವೆಗೆ ಬಂದ ಮೊಟೊರೊಲಾ ಡೈನಾಟ್ಯಾಕ್ 8000-ಎಕ್ಸ್ ಎಂಬ ಸೆಲ್ ಫೋನ್‌ನ ಮೂಲ ಮಾದರಿಯದು. ದೂರವಾಣಿ ಕರೆ ಮಾಡುವುದನ್ನು ಬಿಟ್ಟರೆ ಬೇರೆ ಯಾವ ಸೌಲಭ್ಯವೂ ಅದರಲ್ಲಿ ಇರಲೇ ಇಲ್ಲ. ಇವತ್ತು ಕರೆಗಿಂತ ಹೆಚ್ಚಾಗಿ ಸಿನೇಮಾ ನೋಡುವ ಚಿಕ್ಕ ಟೀವಿಯಾಗಿ, ಸಂಗಾತಿಯ ಫೋಟೋ ತೆಗೆಯುವ ಕ್ಯಾಮೆರಾ ಆಗಿ, ಸಂದರ್ಭ ಬಂದರೆ ಕಂಪ್ಯೂಟರ್ ಆಗಿ, ಮಕ್ಕಳ ನೆಚ್ಚಿನ ಆಟದ ಕೇಂದ್ರವಾಗಿ ಹೀಗೆ ಬೇರೆ ಬೇರೆ ಕೆಲಸಗಳಿಗೆ ಮೊಬೈಲ್ ಪೋನ್ ಬಳಕೆಯಾಗುವುದೇ ಹೆಚ್ಚು.

ಅಂದಿನಿಂದ ಈವರೆಗೆ ಮೊಬೈಲ್ ಫೋನ್‌ನಲ್ಲಿ ಆದ ಕ್ರಾಂತಿ ಕಲ್ಪನೆಗೂ ನಿಲುಕದ್ದು. ಮತ್ತೆ ಹತ್ತು ವರ್ಷಗಳ ಸಂಶೋಧನೆಯ ಬಳಿಕ 1983ರಲ್ಲಿ ಮೊದಲ ಬಾರಿಗೆ ವಾಣಿಜ್ಯಾತ್ಮಕವಾಗಿ ಮೊಬೈಲ್ ಫೋನುಗಳನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಿತು ಮೊಟೊ ರೊಲಾ. ಅದೇ ಮೊಟೊರೊಲಾ DynaTAC 8000&X ಮಾಡೆಲ್ ಸೆಲ್ ಫೋನ್‌ನ ಬೆಲೆ ಆಗ 3955 ಡಾಲರ್ ಆಗಿತ್ತು. ಅಂದರೆ ಭಾರತದ ಕರೆನ್ಸಿಯಲ್ಲಿ ಸುಮಾರು 2.5 ಲಕ್ಷ ರು. ಇವತ್ತು ಟಚ್ ಸ್ಕ್ರೀನ್‌ನಂಥ ಸ್ಮಾರ್ಟ್ ಫೋನ್ ಗಳು ಸಹ ಸಾವಿರ, ಎರಡು ಸಾವಿರ ರು. ಗೆ ಹಾದಿ ಬೀದಿಯಲ್ಲಿ ಮಾರಾಟವಾಗುತ್ತವೆ.

ಫೋನುಗಳ ಗಾತ್ರ ಕಡಿಮೆಯಾಗಿ ತೀರಾ ಝೀರೋ ಸೈಜ್‌ನ ಬಳಕು ಬಾಲೆಯಂಥ ಸೆಲ್ಫೋನ್‌ಗಳು ಮಾರುಕಟ್ಟೆಗೆ ಬಂದಿವೆ. ಮನೆಗೆಲಸ ದವರು, ಕೂಲಿ-ಕಾರ್ಮಿಕರು ಎಂಬಿತ್ಯಾದಿ ಭೇದವಿಲ್ಲದೇ ಜಗತ್ತಿ ಕೋಟ್ಯಂತರ ಜನರನ್ನು ತಲುಪಿವೆ. ಆಧುನಿಕ ಜಗತ್ತಿನಲ್ಲಿ ಮೊಬೈಲ್ ಇಲ್ಲದವನೇ ಪಾಪಿ ಎನಿಸಿzನೆ. ಸ್ಮಾರ್ಟ್ ಫೋನ್ ಕ್ರಾಂತಿಯಿಂದ ಎಷ್ಟೋ ವೇಳೆ ಮೊಬೈಲಿಗೂ ಕಂಪ್ಯೂಟರಿಗೂ ವ್ಯತ್ಯಾಸವೇ ಇಲ್ಲ ದಂತಾಗಿದೆ.

ಸ್ಮಾರ್ಟ್ ಫೋನ್ ಬರುವುದಕ್ಕೂ ಮುಂಚೆ ನೊಕಿಯಾ ಸಂಸ್ಥೆ ವಿಶ್ವದ ಮೊಬೈಲ್ ಸಾಮ್ರಾಟನಾಗಿತ್ತು. ನೊಕಿಯಾದ ಜನಪ್ರಿಯ ‘1100 ಮಾಡೆಲ’ನ ಹ್ಯಾಂಡ್‘ಸೆಟ’ಗಳು ಬರೋಬ್ಬರಿ 25 ಕೋಟಿ ಸಂಖ್ಯೆಯಲ್ಲಿ ಮಾರಾಟ ಕಂಡಿದ್ದವು. ಬಹುಶಃ ವಿಶ್ವದ ಅತೀ ಹೆಚ್ಚು ಎಲೆಕ್ಟ್ರಾ ನಿಕ್ ಸಾಧನ ಮಾರಾಟದಲ್ಲಿ ನೋಕಿಯಾದ ಈ ದಾಖಲೆ ಮುರಿಯಲು ಸದ್ಯಕ್ಕೆ ಯಾರಿಂದಲೂ ಸಾಧ್ಯವಿಲ್ಲವೇನೋ. ಗ್ರಾಹಕ ರನ್ನು ತಲುಪಲು ಎರಡು ದಶಕಗಳ ಕಾಲ ನಾಟ್ಯಾಕ್‌ಗೆ ಮತ್ತೊಂದು ದಶಕ ತೆಗೆದುಕೊಂಡಿದ್ದ ಸೆಲ್ ಫೋನ್ ಮುಂದಿನ ಎರಡೂವರೆ ದಶಕದಲ್ಲಿ ವಿಶ್ವವ್ಯಾಪಿಯಾಗಿಬಿಟ್ಟಿದೆ.

ಅರ್ಧದಶಕ ಕಳೆಯುವ ಮುನ್ನವೇ ಅದು ತಳೆದ ತ್ರಿವಿಕ್ರಮ ಅವತಾರ ಒಮ್ಮೆಮ್ಮೆ ಭಯ ಹುಟ್ಟಿಸುತ್ತದೆ. ಮೊದಲ ಮೊಬೈಲ್ ಸೃಷ್ಟಿಸಿದ
ಮೊಟೊರೊಲಾದ ಮೊಬೈಲ್ ವಿಭಾಗದ ವ್ಯವಹಾರ ಇದೀಗ ಗೂಗಲ್ ಒಡೆತನದಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಗೂಗಲ್ ಮಾಡುತ್ತಿರುವ ಕ್ರಾಂತಿಗೆ ಸರಿಸಾಟಿ ಇಲ್ಲದಾಗಿದೆ. ಇನ್ನು ನಮ್ಮೂರಿನ ವಿಚಾರಕ್ಕೆ ಬಂದರೆ, ನಮ್ಮಲ್ಲಿ ಅಂದರೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಓಡಾಡ್ತಾ ‘ಹಲೋ’ ಎನ್ನೋಕೆ ಆಗಿದ್ದು ಈಗಿನ ಜನರೇಷನ್‌ನವರೇ. ಅಂದ್ರೆ ಕೇವಲ 25 ವರ್ಷಗಳ ಹಿಂದಷ್ಟೇ ಭಾರತಕ್ಕೆ ಸೆಲ್ ಫೋನ್ ಕಾಲಿಟ್ಟಿದ್ದು. ಅಲ್ಲಿಯವರೆಗೂ ನಮ್ಮದು ‘ಸ್ಥಿರ ವಾಣಿ’ಯೇ!

ನೀವು ನಂಬಲಿಕ್ಕಿಲ್ಲ, ಜಗತ್ತಿನ ಎಲ್ಲರಿಗಿಂತ ಹೆಚ್ಚು ಬೇಕ ನಾವು ಜಂಗಮವಾಣಿಗಳಾಗಿಬಿಟ್ಟೆವು. ಇವತ್ತು ಏನಿಲ್ಲವೆಂದರೂ ನಮ್ಮ ದೇಶದ ಅರ್ಧಕ್ಕರ್ಧ ಜನ, ಅಂದರೆ 77 ಕೋಟಿಗೂ ಹೆಚ್ಚು ಜನ ಸೆಲ್ಫೋನ್ ಬಳಸುತ್ತಿದ್ದಾರೆ. ‘ಮೊಬೈಲ್’ ಅನ್ನೋ ಪದ ಸೆಲ್ ಫೋನ್‌ಗೆ ಪರ್ಯಾಯ ವಾಗುವಷ್ಟು ಅದನ್ನು ದೇಹಕ್ಕಂಟಿಸಿಕೊಂಡೇ ಓಡಾಡುತ್ತೇವೆ. ಹಠಮಾರಿ, ತುಂಟ ಮಕ್ಕಳನ್ನು ಸುಮ್ಮನಿರಿಸಲು ನಮ್ಮ ಗೃಹಣಿಯರಿಗೆ ಅತ್ಯಂತ ಆಪ್ತ ಸಾಧನವಾಗುವರೆಗೆ ಈ ಮೊಬೈಲ್ ಯಾನೆ ಸೆಲ್ ಫೋನ್ ಬೆಳೆದಿದೆ.

ಹೀಗಾಗಿ ಇನ್ನು ಲೇಖನದಲ್ಲೂ ಮೊಬೈಲ್ ಅಂತಾನೇ ಬಳಸುವುದು ಉತ್ತಮವೆನಿಸುತ್ತದೆ. ಭಾರತದಲ್ಲಿ ನೀವು ನಂಬಲಿಕ್ಕಿಲ್ಲ, ನೂರು ಕೋಟಿಗೂ ಹೆಚ್ಚು ಮೊಬೈಲ್ ಸಿಮ್ ಬಳಕೆಯಾಗುತ್ತಿವೆ. 46.20 ಕೋಟಿ ಜನರು ಮೊಬೈಲ್‌ನಲ್ಲಿ ಇಂಟರ್‌ನೆಟ್ ಬಳಸುತ್ತಿದ್ದಾರೆ. 25
ಕೋಟಿ ಜನ ಸಾಮಾಜಿಕ ಜಾಲತಾಣಗಳಲ್ಲಿ ಹಗಲೂ ರಾತ್ರಿ ಈಜಾಡು (ಸರ್ಫ್)ತ್ತಾರೆ. ಬಹುಶಃ ನಮ್ಮಷ್ಟು ಮೊಬೈಲ್‌ಗೆ ಅಡಿಕ್ಟ್ ಆದ ಮತ್ತೊಂದು ದೇಶದ ಜನರು ಜಗತ್ತಿನಲ್ಲಿಲ್ಲವೇನೋ? ಶೌಚಾಲಯವೂ ಇಲ್ಲದ ಕೊಳೆಗೇರಿಯ ಮನೆಯಿಂದ ನಸುಕಿನ ಮಬ್ಬುಗತ್ತಲಿನಲ್ಲೇ ಚರಿಗೆ (ಶೌಚದ ಬಳಿಕ ಅಗತ್ಯನೀರು ಒಯ್ಯುವ ಹಳೇ ಡಬ್ಬಿಯೂ ಇರಬಹುದು) ಹಿಡಿದು ಹೋಗುವವರ ಇನ್ನೊಂದು ಕೈ ಕಿವಿಗಾನಿಸಿ ಕೊಂಡೇ ಇರುತ್ತದೆ; ಅಂದರೆ ಅಲ್ಲಿ ಯಾರೊಂದಿಗೋ ಜಂಗಮವಾಣಿಯಲ್ಲಿ ಉಲಿಯುತ್ತಿರುತ್ತಾರೆ!

ಇಷ್ಟೆಲ್ಲ ಇರುವ ಭಾರತದಲ್ಲಿ ಮೊದಲ ಕರೆ ಯಾವಾಗ, ಯಾರು ಮಾಡಿದ್ದು? ಮೊದಲ ಮೊಬೈಲ್ ಸಂಭಾಷಣೆ ನಡೆದದ್ದು 1995ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಹಾಗೂ ಆಗಿನ ಕೇಂದ್ರ ಸರಕಾರದ ದೂರಸಂಪರ್ಕ ಸಚಿವ ಸುಖರಾಮ್ ನಡುವೆ. ಕರೆ ಮಾಡಿ ದವರು ಕೋಲ್ಕತಾದಿಂದ ಜ್ಯೋತಿ ಬಸು. ಸ್ವೀಕರಿಸಿದ್ದು ಅತ್ತ ದೆಹಲಿಯಿಂದ ಸುಖರಾಮ್. ಆ ಸೇವೆಯೊದಗಿಸಿದ್ದು
‘ಮೋದಿ ಟೆಲ್‌ಸ್ಟ್ರಾ’ ಕಂಪನಿ. ಭಾರತದ ಮೋದಿ ಸಮೂಹ ಸಂಸ್ಥೆ ಮತ್ತು ಆಸ್ಟ್ರೇಲಿಯಾದ ಟೆಲಿಕಾಂ ಕಂಪನಿ ಟೆಲ್‌ಸ್ಟ್ರಾ ಗಳ ಜಂಟಿ ಸಹಭಾಗಿತ್ವದಲ್ಲಿ ‘ಮೋದಿ ಟೆಲ್‌ಸ್ಟ್ರಾ ನೆಟ್‌ವರ್ಕ್’ ಏರ್ಪಟ್ಟಿತ್ತು.

ನಂತರದ ದಿನಗಳಲ್ಲಿ ಇದನ್ನೇ ‘ಮೊಬೈಲ್ ನೆಟ್’ ಎಂದು ಕರೆಯಲಾಯಿತು. ದೇಶದಲ್ಲಿ ಸೆಲ್ಯುಲರ್ ಸೇವೆ ಒದಗಿಸುವ ಪ್ರಮುಖ ಅಽಕೃತ 8 ಕಂಪನಿಗಳಲ್ಲಿ ಅದು ಮುಂಚೂಣಿಯಲ್ಲಿತ್ತು. ಈಗ ನೂರೆಂಟು ಬಂದಿವೆ. ಮೋದಿ ಟೆಲ್‌ಸ್ಟ್ರಾ ಏನೇನೋ ಆಗಿ ಹೋಗಿದೆ ಬಿಡಿ. ಆದರೆ ಆಗ
ಬಳಸಿದ ಸೆಟ್ ಮಾತ್ರ ನೋಕಿಯಾ. ಇವತ್ತಿಗೂ ಭಾರತೀಯರಿಗೆ ನೋಕಿಯಾ ಸೆಟ್‌ಗಳೆಂದರೆ ಅದೇನೋ ಆಪ್ತತೆ ಯಾಕೆಂದರೆ, ಇದೇ ಕಾರಣಕ್ಕೆ. ಆಗಿದ್ದುದು ನೋಕಿಯಾ ಮಾತ್ರ. 1998ರಲ್ಲಿ ದೇಶದ ಮೊದಲ ರಿಂಗ್ ಟೋನ್ ಅನ್ನು ನೋಕಿಯಾ 5110 ಸೇಟ್‌ನಲ್ಲಿ ಪರಿಚಯಿಸಲಾಯಿತು.

‘ಸಾರೆ ಜಹಾನ್ ಸೆ ಅಚ್ಚಾ’ ಗೀತೆ ಮೊದಲ ರಿಂಗ್ ಟೋನ್ ಆಗಿತ್ತು. ಆನಂತರ ನೊಕಿಯಾದ ಬ್ರಾಂಡ್ ಟ್ಯೂನ್ ಜನಪ್ರಿಯವಾಯಿತು. ಇಂದಿಗೂ ಆ ಟೋನ್ ಕಿವಿಗೆ ಬಿದದ್ರೆ ಅದೊಂಥರಾ ಬೆಚ್ಚನೆಯ ಅನುಭವ; ಆಕಾಶವಾಣಿ ಕೇಂದ್ರಗಳಲ್ಲಿ ಬೆಳ್ಳಂಬೆಳಗ್ಗೆ 5.50ಕ್ಕೆ ಕೇಳಿ ಬರುತ್ತಿದ್ದ ಟ್ಯೂನ್ ನಂತೆ. ಹಾಗೆಂದು ಆಗ ಮೊಬೈಲ್ ಕರೆಗಳ ದರ ಸಾಕಷ್ಟು ತುಟ್ಟಿಯೇ ಇತ್ತು. ಈಗೇನು 45 ರು.ಗೂ ಇಂಟರ್ನೆಟ್ ಪ್ಯಾಕ್ ನೊಂದಿಗೆ ಅನ್ಲಿಮಿಟೆಡ್ ಕರೆ ಮಾಡಬಹುದು. ಆದರೆ 25 ವರ್ಷಗಳ ಹಿಂದೆ ಹಾಗಿರಲಿಲ್ಲ. ಹೊರಹೋಗುವ ಕರೆಗಳಿಗೆ ಒಂದು ನಿಮಿಷಕ್ಕೆ 16 ರು. ಚಾರ್ಚ್ ಮಾಡಲಾಗುತ್ತಿತ್ತು.

ಮಾತೂ ದುಬಾರಿಯೇ! ಅಯ್ಯೋ ನಂದೇನು ಖರ್ಚಾಗುತ್ತೆ? ಒಂದು ಮಿಸ್ಡ್ ಕಾಲ್ ಕೊಟ್ಟರೆ ಅವನೇ ಮಾಡ್ತಾನೆ, ಮಾತಾಡಿ ದ್ರಾಯ್ತು (ಮಧ್ಯದಲ್ಲಿ ಒಂದಷ್ಟು ದಿನ, ಒಂದಷ್ಟು ಹುಡುಗಿ ಯರು ತಮ್ಮ ಬಾಯ್ ಫ್ರೆಂಡ್‌ಗಳಿಗೆ ಮಾಡಿದ್ದು ಇದನ್ನೇ. ಈಗ ಕರೆನ್ಸಿ ಹಾಕಿಸೋ ಬಕ್ರನನ್ನೇ ಆರಿಸಿಕೊಳ್ತಾರೆ ಬಿಡಿ.) ಅಂತ ಅನ್ನೋ ಹಾಗೇ ಇರಲಿಲ್ಲ. ಒಳಬರುವ ಕರೆಗಳಿಗೂ ಹಣ ತೆರಬೇಕಾಗಿತ್ತು. ಹಾಗಾಗಿ ಆಗೆಲ್ಲ, ಮೊಬೈಲ್ ಶ್ರೀಮಂತರ, ಪ್ರತಿಷ್ಠೆಯ ಸಂಕೇತ. ಆದರೆ 1995ರಲ್ಲಿಯೇ ಇಂಟರ್ನೆಟ್ ಸಂಪರ್ಕ ಸೇವೆ ಆರಂಭವಾಯಿತೋ, ಅಲ್ಲಿಂದ ಎಲ್ಲವೂ ಬದಲಾಗ್ತಾ ಬಂತು.

ಆ ವರ್ಷದ ಸ್ವಾತಂತ್ರ್ಯ ದಿನ ಭಾರತವೆಂಬೋ ಭಾರತವನ್ನೇ ಅಂತರ್ಜಾಲ ಸಂಪರ್ಕದ ಮೂಲಕ ಬೆಸೆಯುವ ಮಹತ್ತರ ಸೇವೆಯನ್ನು ‘ವಿದೇಶ್ ಸಂಚಾರ್ ನಿಗಮ್ ಲಿಮಿಟೆಡ್’ ಆರಂಭಿಸಿತು. ಆ ವರ್ಷ ದೇಶದ ನಾಲ್ಕು ಮೆಟ್ರೊ ನಗರಗಳಲ್ಲಿ ಮಾತ್ರ ಗೇಟ್‌ವೇ ಇಂಟರ್ನೆಟ್
ಆಕ್ಸೆಸ್ ಸೇವೆ ಆರಂಭವಾಯಿತು. ಲೀಸ್ಡ್ ಲೈನ್ ಅಥವಾ ಡಯಲ್-ಅಪ್ ಸೌಲಭ್ಯ ಗಳೊಂದಿಗೆ ದೂರಸಂಪರ್ಕ ಇಲಾಖೆಯು ಒದಗಿಸುವ ಇ-ನೆಟ್‌ನಿಂದ ಅಂತರ್ಜಾಲ ಬಳಕೆಗೆ ದೊರೆಯುತ್ತಿತ್ತು. ರೇಟೆಷ್ಟು ಗೊತ್ತಾ? 250 ಗಂಟೆಗಳ ಇಂಟರ್‌ನೆಟ್ ಬಳಕೆಗೆ 5 ಸಾವಿರ ರು.,
ಕಾರ್ಪೋರೆಟ್ ಕ್ಷೇತ್ರಗಳಿಗಾದರೆ ಇದಕ್ಕೇ 15 ಸಾವಿರ ರು. ತೆರಲೇಬೇಕು.

ನೋಕಿಯಾ ಭಾರತದಲ್ಲಿ ಕ್ರಾಂತಿಯನ್ನೇ ಎಬ್ಬಿಸಿತ್ತು ಬಿಡಿ. ಮೊದಲ ಕ್ಯಾಮೆರಾ ಫೋನ್ ಅನ್ನು ಬಿಡುಗಡೆ ಮಾಡಿದ್ದೂ ನೋಕಿಯಾವೇ. ‘ನೋಕಿಯಾ 7650’ ಸೆಟ್ ನಲ್ಲಿ ಕ್ಯಾಮೆರಾ ಅಳವಡಿಕೆಯಾಗಿ ಭಾರತದಲ್ಲಿ ಬಿಡುಗಡೆಯಾದಾಗ ದೇಶಕ್ಕೆ ದೇಶವೇ ಸುದ್ದಿ ಓದಿ ನಿಬ್ಬೆರ ಗಾಗಿತ್ತು. ಈ ಮೊಬೈಲ್ ಫೋನ್‌ನ ನಂತರವೇ ಮೊಬೈಲ್‌ನಲ್ಲಿ ಮಲ್ಟಿ ಮೀಡಿಯಾ ಬಳಕೆ ಮಾಡಬಹುದು ಎಂಬುದನ್ನು ಹೆಚ್ಚಿನ ಭಾರತಿಯರು ತಿಳಿದುಕೊಂಡರು. ಈಗ ನೋಕಿಯಾವನ್ನು ನೂಕಿಯಾಗಿದೆ. ಅವೆಷ್ಟೋ ಸ್ಮಾರ್ಟ್ ಫೋನ್‌ಗಳು ಬಂದಿವೆ. ಮೊಬೈಲ್ ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಮುಂದೊಂದು ದಿನ ಮಿದುಳಿಗೆ ಅಳವಡಿಸಬಹುದಾದ ‘ಚಿಪ್’ನ ಸ್ವರೂಪಕ್ಕೆ ಸೆಲ್
ಪೋನ್ ಬದಲಾದರೂ ಆದೀತೆ? ತಂತ್ರಜ್ಞಾನ-ಸಂವಹನ ದೃಷ್ಟಿಯಿಂದ ಇಡೀ ಮನುಕುಲ ಹೆಮ್ಮೆ ಪಡುವಂಥ ಬೆಳವಣಿಗೆ ಆಗಿದೆ ಯಾದರೂ ಮೊಬೈಲ್ ಹುಚ್ಚು ಸೃಷ್ಟಿಸುತ್ತಿರುವ ಅವಾಂತರಗಳು, ಅದು ಬೀರುತ್ತಿರುವ ಸಾಮಾಜಿಕ, ಕೌಟುಂಬಿಕ ದುಷ್ಪರಿಣಾಮಗಳು ನಿಜಕ್ಕೂ ಅನಪೇಕ್ಷಣೀಯ.

ಜಗತ್ತಿನ ಅಂತರವನ್ನು ಕಡಿಮೆ ಮಾಡಿದ ಮೊಬೈಲ್ ಕೌಟುಂಬಿಕ ಸದಸ್ಯರ ಬಾಂಧವ್ಯದ ಅಂತರವನ್ನು ಇನ್ನಷ್ಟು ಮತ್ತಷ್ಟು ಹೆಚ್ಚಿಸು ತ್ತಿರುವುದು ದುರಂತ. ಕಲೆತು ಮಾತನಾಡುವ, ಕುಳಿತು ಓದುವ, ಬೆರೆತು ಬದುಕುವ ಮನುಷ್ಯನ ಮೂಲಭೂತ ಗುಣವನ್ನು ಕಿತ್ತು ಕೊಂಡಿದೆ, ಛೆ!