Thursday, 19th September 2024

ಯುದ್ಧ ತರುವ ಆರೋಗ್ಯ ಸಮಸ್ಯೆಗಳು

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ಯುದ್ಧವು ಬೇಗನೆ ನಿಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ತುಂಬಾ ಹೆಚ್ಚಾಗಿ ಉಕ್ರೇನಿನ ನಾಗರಿಕರು ತೀವ್ರ ತೊಂದಗೆ ಒಳಗಾಗುತ್ತಾರೆ.
ಆಸ್ಪತ್ರೆಗಳಲ್ಲಿನ ವೈದ್ಯರು, ದಾದಿಯರು ಮತ್ತು ಸಿಬ್ಬಂದಿ ವರ್ಗದವರು ತಮ್ಮ ಜೀವ ಉಳಿಸಿಕೊಳ್ಳಲು ಹಲವು ತಾಣಗಳಿಗೆ ಓಡಿ ಹೋಗಿ ದ್ದಾರೆ.

ಯುದ್ಧಗಳು ವಿನಾಶಕ್ಕೇ ಎಡೆಮಾಡಿಕೊಡುತ್ತವೆ. ಪ್ರಸ್ತುತ ನಡೆಯುತ್ತಿರುವ ರಷ್ಯಾ – ಉಕ್ರೇನ್ ಯುದ್ಧವೂ ಹಲವು ರೀತಿಯ ವಿನಾಶವನ್ನು ಈಗಾಗಲೇ ಕಂಡಿದೆ. ಭವಿಷ್ಯದಲ್ಲಿ ಯಾವ ಮಟ್ಟದ ಹಾನಿ ಯಾವ ದೇಶಕ್ಕೆ ಆಗುತ್ತದೆ ಎಂಬುದು ಯುದ್ಧ ಸಂಪೂರ್ಣ ನಿಂತ ಹಲವಾರು ತಿಂಗಳುಗಳ ಬಳಿಕ ಗೊತ್ತಾಗಬಹುದು. ಈ ಯುದ್ಧದಿಂದ ಹೆಚ್ಚು ತೊಂದರೆ ಗೀಡಾದ ದೇಶ ಉಕ್ರೇನಿನ ಆರೋಗ್ಯ ವ್ಯವಸ್ಥೆ ಮತ್ತು ಅಲ್ಲಿಯ ಪ್ರಜೆಗಳ ಮೇಲೆ ಯುದ್ಧವು ಬೀರಿದ ಪರಿಣಾಮಗಳ ಬಗ್ಗೆ ಪರಿಶೀಲಿಸೋಣ.

ರಷ್ಯಾದ ಶೆಲ್ ಮತ್ತು ಬಾಂಬ್‌ಗಳ ದಾಳಿಗೆ ಈಡಾದ ಪ್ರದೇಶಗಳ ಜನರು ದಾಳಿಯನ್ನು ತಪ್ಪಿಸಿಕೊಳ್ಳಲು ತಮ್ಮ ಮನೆ, ವಾಸಸ್ಥಾನ ತೊರೆದು ಎಲ್ಲಿಯೋ ಅಡಗಿ ಕುಳಿತು ಕೊಳ್ಳುವ, ಅಲ್ಲಿಂದ ಓಡಿಹೋಗುವ ಪರಿಸ್ಥಿತಿ ಉಂಟಾಗಿದೆ. ಇಕ್ಕಟ್ಟಿನ ಸ್ಥಳದಲ್ಲಿ ಬಹಳಷ್ಟು ಜನರು ಒಟ್ಟಾಗಿರುವ ಈ ಪರಿಸ್ಥಿತಿಯಲ್ಲಿ ಈಗಾಗಲೇ ಇರುವ ಕೋವಿಡ್ ಕಾಯಿಲೆ ಗಮನಾರ್ಹ ಜಾಸ್ತಿ ಯಾಗಿದೆ, ಇನ್ನೂ ಜಾಸ್ತಿಯಾಗುವ ಸಂಭವ ವಿದೆ.

ಬಹಳಷ್ಟು ಜನರಿಗೆ ಸೂಕ್ತ ಆಹಾರ, ಕುಡಿಯುವ ಶುದ್ಧ ನೀರು ಸಿಗದಿರುವ ಸಂದರ್ಭ ಬಂದುದರಿಂದ ಪೌಷ್ಟಿಕಾಂಶ ಕೊರತೆ ಮತ್ತು ಸೋಂಕು ಸಂಬಂಧಿತ ಕಾಯಿಲೆಗಳು ಜಾಸ್ತಿಯಾಗುವ ಸಂಭವ ಇದ್ದೇ ಇದೆ. ಅಶುದ್ಧ ನೀರಿನಿಂದ ಕಾಲರಾ, ಅತಿಸಾರ ಭೇದಿ, ಹೆಪಟೈ ಟಿಸ್ ಎ ಟೈಫಾಯಿಡ್, ಪೋಲಿಯೊ – ರೀತಿಯ ಕಾಯಿಲೆಗಳು ಹೆಚ್ಚಾಗುತ್ತವೆ. ಈ ಯುದ್ಧದಲ್ಲಿ ಉಕ್ರೇನಿನ ಹಲವು ನಗರ ಮತ್ತು ಪಟ್ಟಣ ಗಳು ತೀವ್ರ ರೀತಿಯ ಬಾಂಬ್ ದಾಳಿಗೆ ಒಳಗಾಗಿ ಆಸ್ಪತ್ರೆಗಳ ವ್ಯವಸ್ಥೆ ಅಲ್ಲೋಲ  ಕಲ್ಲೋಲವಾಗಿದೆ.

ಆಸ್ಪತ್ರೆಗಳಲ್ಲಿನ ವೈದ್ಯರು, ದಾದಿಯರು ಮತ್ತು ಸಿಬ್ಬಂದಿ ವರ್ಗದವರು ತಮ್ಮ ಜೀವ ಉಳಿಸಿಕೊಳ್ಳಲು ಹಲವು ತಾಣಗಳಿಗೆ ಓಡಿ ಹೋಗಿ ದ್ದಾರೆ. ಹಾಗಾಗಿ ತೀವ್ರ ಚಿಕಿತ್ಸೆ ಅಗತ್ಯ ಇರುವ ರೋಗಿಗಳಿಗೆ ಆಸ್ಪತ್ರೆಯಲ್ಲಿನ ಚಿಕಿತ್ಸೆ ಮರೀಚಿಕೆಯೇ ಸರಿ. ಹಾಗೆಯೇ ದೀರ್ಘ ಕಾಲದ ಡಯಾಬಿಟಿಸ್ ಮತ್ತು ಅಸ್ತಮಾ ಹೊಂದಿರುವ ಹಲವಾರು ರೋಗಿಗಳಿಗೆ ಇನ್ಸುಲಿನ್, ಇನ್‌ಹೇಲರ್ ನಂತಹವುಗಳು ಲಭ್ಯವಾಗದಿ ರುವ ಸಾಧ್ಯತೆ ಇದೆ.

ಹೆಚ್ಚಿನ ಔಷಧದ ಅಂಗಡಿಗಳು ಸರಿಯಾಗಿ ತೆರೆದಿರುವ ಸಾಧ್ಯತೆ ಕಡಿಮೆ. ನಿಯಮಿತವಾಗಿ ಹಲವು ಕಾಯಿಲೆಗಳಿಗೆ ಔಷಧ ಸೇವಿಸು ತ್ತಿರುವ ರೋಗಿಗಳು ಬಹಳ ಸಂಕಷ್ಟಕ್ಕೆ ಈಡಾಗಿದ್ದಾರೆ. ಉಕ್ರೇನಿನ ಆರೋಗ್ಯ ಪರಿಸ್ಥಿತಿ ಪರಿಶೀಲಿಸಿದ ವಿಶ್ವ ಆರೋಗ್ಯ ಸಂಸ್ಥೆಯು (WHO) ಅಲ್ಲಿನ ಶೀತಲ ವಾತಾವರಣ ಗಮನದಲ್ಲಿಟ್ಟುಕೊಂಡು ವಿಪರೀತ ಚಳಿಯಿಂದ ಕೈಕಾಲುಗಳು ತೀವ್ರವಾಗಿ ಊದಿಕೊಳ್ಳುವುದು (Frostbite), ವ್ಯಕ್ತಿಯ ದೇಹದ ತಾಪಮಾನ ತೀವ್ರವಾಗಿ ಕಡಿಮೆಯಾಗುವುದು, ಹಲವು ಬಗೆಯ ಮಾನಸಿಕ ಸಮಸ್ಯೆಗಳು, ಹೃದಯ ಮತ್ತು ಕ್ಯಾನ್ಸರ್ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ದೊರಕದಿರುವುದು – ಇವು ಉಕ್ರೇನಿನ ಪ್ರಮುಖ ಆರೋಗ್ಯ ಸಮಸ್ಯೆಗಳೆಂದು ಪಟ್ಟಿ ಮಾಡುತ್ತದೆ.

ಹಲವು ಸೋಂಕು ರೋಗಗಳು ದಿಢೀರನೆ ಕಾಣಿಸಿಕೊಳ್ಳಬಹುದು. ಹಾಗೆಯೇ ಕೋವಿಡ್ 19 ಕಾಯಿಲೆ, ದಢಾರ, ಪೋಲಿಯೋದಂತಹ
ಕಾಯಿಲೆಗಳು ತೀವ್ರ ಪ್ರಮಾಣದಲ್ಲಿ ಜಾಸ್ತಿಯಾಗಬಹುದೆಂಬ ನಿರೀಕ್ಷೆ ಇದೆ. ಯುದ್ಧದ ಕಾರಣಗಳಿಂದ ಕೋವಿಡ್ ಬಗೆಗಿನ ಪರೀಕ್ಷೆ, ವ್ಯಾಕ್ಸಿನೇಷನ್ ಪ್ರಮಾ ಣಗಳು ಗಮನಾರ್ಹವಾಗಿ ಕುಂಠಿತಗೊಂಡಿವೆ. ಹಲವು ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ ವಾದ್ದರಿಂದ ತೀವ್ರ ಸ್ವರೂಪದ ಕೋವಿಡ್ ಕಾಯಿಲೆ ರೋಗಿಗಳ ಚಿಕಿತ್ಸೆ ವ್ಯತ್ಯಾಸಗೊಳ್ಳುತ್ತಿವೆ. ಆಸ್ಪತ್ರೆಗೇ ದಾಖಲಿಸಿ ಚಿಕಿತ್ಸೆಯ ಅಗತ್ಯವಿರುವ ರೋಗಿಗಳ ಕಾಯಿಲೆ ಉಲ್ಬಣಗೊಂಡು ಅಂತಹವರ ಮರಣದ ಸಂಖ್ಯೆ ಜಾಸ್ತಿಯಾಗಿದೆ, ಇನ್ನೂ ಹೆಚ್ಚಾಗ ಲೂಬಹುದು.

ಕ್ರೇನಿನಲ್ಲಿ ಜನವರಿ ಮಧ್ಯ ಭಾಗದಿಂದ ಕೋವಿಡ್‌ನ ಹೊಸ ಅಲೆ ಆರಂಭವಾಗಿತ್ತು. ರಷ್ಯಾದ ಸೈನಿಕರು ಉಕ್ರೇನಿನ ಮೇಲೆ ದಾಳಿ ಮಾಡಿದ ನಾಲ್ಕು ದಿನಗಳ ನಂತರ ಫೆಬ್ರವರಿ 28ರಂದು ಅಲ್ಲಿ ಕೋವಿಡ್ ರೋಗಿಗಳ ಸಂಖ್ಯೆ 40 ಸಾವಿರ ಇತ್ತು. ಅದೇ ಮಾರ್ಚ್ 14 ರಂದು ಈ ಸಂಖ್ಯೆ ಕೇವಲ 2256. ಕರೋನಾ ವೈರಸ್ ಬಗ್ಗೆ ಪರೀಕ್ಷೆ ಮಾಡುವ ಪ್ರಮಾಣ ಕಡಿಮೆಯಾಗಿದ್ದೇ ಇದಕ್ಕೆ ಕಾರಣ ಎಂದು
ನ್ಯೂಯಾರ್ಕ್ ಟೈಮ್ಸ ಪತ್ರಿಕೆ ವರದಿ ಮಾಡಿದೆ. ಉಕ್ರೇನಿನಲ್ಲಿ ಇದುವರೆಗೆ ಶೇ.34ರಷ್ಟು ಜನತೆಗೆ ಮಾತ್ರ ಪೂರ್ಣ ಪ್ರಮಾಣದಲ್ಲಿ ವ್ಯಾಕ್ಸಿನ್ ಹಾಕಲಾಗಿದೆ.

ಅಲ್ಲಿಯ ಜನತೆಯಲ್ಲಿ ವ್ಯಾಕ್ಸಿನ್ ಬಗ್ಗೆ ಇರುವ ಹಿಂಜರಿಕೆಯೇ ಈ ಪ್ರಮಾಣ ಕಡಿಮೆಯಾಗಲು ಕಾರಣ. ಹಾಗಾಗಿ ಉಳಿದ ಶೇ.66ರಷ್ಟಿ
ಮಂದಿ ಕರೋನಾ ಸೋಂಕಿಗೆ ಒಳಗಾಗುವ ಅಪಾಯವಿದೆ. ಯುದ್ಧದ ದೆಸೆಯಿಂದ ಉಕ್ರೇನಿನ ಸುಮಾರು 20 ಲಕ್ಷ ಜನರು ತಮ್ಮ ದೇಶ ತೊರೆದು ಹತ್ತಿರದ ಜೆಕಿಯ, ರೊಮಾನಿಯ, ಹಂಗರಿ, ಮಾಲ್ಡೋವಾ, ಪೋಲೆಂಡ್ ಮತ್ತು ಸ್ಲೋವಾಕಿಯಾ ದೇಶಗಳಿಗೆ ಓಡಿ ಹೋಗಿ ಆಶ್ರಯ ಪಡೆದಿದ್ದಾ.

ಗುಂಪಿನಲ್ಲಿ, ವಾಹನಗಳಲ್ಲಿ ಅವರು ಹೋಗುವಾಗ ಶ್ವಾಸಕೋಶದ ಹಲವು ಬ್ಯಾಕ್ಟೀರಿಯಾ, ವೈರಸ್‌ಗಳು (ಕರೋನಾ ವೈರಸ್ ಸಹ ಸೇರಿ) ಹುಟ್ಟುವ, ಹರಡುವ ತಾಣಗಳಾಗುತ್ತವೆ. ನೀರಿನ ತಾಣಗಳು ಮತ್ತು ಶೌಚಾಲಯಗಳು ಅವ್ಯವಸ್ಥೆಗೊಂಡಿರುವುದರಿಂದ, ವ್ಯಾಕ್ಸಿ ನೇಷನ್ ಪ್ರಮಾಣ ಒಮ್ಮೆಲೇ ತಳಮಟ್ಟಕ್ಕೆ ಮುಟ್ಟಿದ್ದರಿಂದ, ಅಗತ್ಯ ಔಷಧಗಳ ತೀವ್ರ ಕೊರತೆ, ಜನರ ಹೆಚ್ಚಿದ ವಲಸೆ, ಪ್ರಯಾಣ, ಗುಂಪುಗೂಡುವಿಕೆ – ಈ ಎಲ್ಲ ಕಾರಣಗಳಿಂದ ಹಲವಾರು ಸೋಂಕು ರೋಗಗಳು, ಟಿ ಬಿ ಕಾಯಿಲೆ, ಏಡ್ಸ್, ನಾನಾ ಬಗೆಯ ಭೇದಿ
ರೋಗಗಳು ಶೀಘ್ರವಾಗಿ ಹರಡುತ್ತವೆ.

ಪೋಲಿಯೋದ ಭಯ: ವೈರಸ್ ಕಾಯಿಲೆ ಪೋಲಿಯೊ ಮಕ್ಕಳಲ್ಲಿ ಕಾಣಿಸಿಕೊಂಡಾಗ ಜೀವಮಾನವಿಡೀ ಮಗುವಿನ ಕಾಲು ಊನವಾಗ ಬಹುದು, ಕೆಲವೊಮ್ಮೆ ಮರಣವೂ ಬರಬಹುದು. ಈ ಅಪಾಯಕಾರಿ ಕಾಯಿಲೆ ಉಕ್ರೇನಿನಲ್ಲಿ 2021ರಲ್ಲಿ ಪುನಃ ಕಾಣಿಸಿಕೊಂಡಿದೆ. ಜನವರಿ 2021ರಲ್ಲಿ ಒಂದು ಮಗುವಿನಲ್ಲಿ ಕಾಲಿನ ಊನ ಕಾಣಿಸಿಕೊಂಡು, 19 ಮಕ್ಕಳಲ್ಲಿ ಹೆಚ್ಚಿನ ಲಕ್ಷಣವಿಲ್ಲದೆ ಕಂಡುಬಂದಿದ್ದವು. ರಾಷ್ಟ್ರೀಯ ದಾಖಲೆಗಳ ಪ್ರಕಾರ ಅಲ್ಲಿ ಕೇವಲ ಶೇ.53ಮಕ್ಕಳಿಗೆ ವ್ಯಾಕ್ಸಿನ್ ಲಭ್ಯವಾಗಿದೆ.

ಹಾಗಾಗಿ ಉಕ್ರೇನ್ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಇದುವರೆಗೆ ವ್ಯಾಕ್ಸಿನ್ ತೆಗೆದುಕೊಳ್ಳದ 140000 ಮಕ್ಕಳನ್ನು ಗುರಿಯಾಗಿಸಿಕೊಂಡು ರಾಷ್ಟ್ರೀಯ ಪೋಲಿಯೊ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಫೆಬ್ರವರಿ 2022ರಲ್ಲಿ ಆರಂಭಿಸಿತು. ಪ್ರಸ್ತುತ ದೇಶದ ಎಲ್ಲ ಆರೋಗ್ಯ ಅಧಿಕಾರಿಗಳು ಯುದ್ಧಕ್ಕೆ ಸಂಬಂಧ ಪಟ್ಟ ತುರ್ತು ಚಿಕಿತ್ಸೆಯ ಉಸ್ತುವಾರಿಯಲ್ಲಿ ತೊಡಗಿಕೊಂಡದ್ದರಿಂದ ಅದನ್ನು ತಾತ್ಕಾ ಲಿಕವಾಗಿ ನಿಲ್ಲಿಸಲಾಗಿದೆ. ಪೋಲಿಯೊ ಸೋಂಕಿನ ವಿವರಗಳನ್ನು ಕಲೆ ಹಾಕುವ ಕಾರ್ಯಕ್ರಮ ಸಹಿತ ಸಂಪೂರ್ಣ ವಾಗಿ ನಿಂತಿದ್ದರಿಂದ ಪೋಲಿಯೊ ಪೀಡಿತ ಮಕ್ಕಳ ಸಂಖ್ಯೆ ಖಂಡಿತಾ ಜಾಸ್ತಿಯಾಗುತ್ತದೆ ಎಂದು ಅಲ್ಲಿನ ಪೋಲಿಯೊ ನಿರ್ಮೂಲನಾ ಸಮಿತಿ ಅಭಿಪ್ರಾಯ ಪಡುತ್ತದೆ.

ಕ್ಯಾನ್ಸರ್ ಪೀಡಿತರಿಗೆ ಸಮಸ್ಯೆ: ಕೋವಿಡ್ ಕಾಯಿಲೆ ಆರಂಭವಾದಾಗಿನಿಂದ ಕ್ಯಾನ್ಸರ್ ರೋಗಿಗಳ ಬಗೆಗಿನ ಕಾಳಜಿ, ಅವರ ಚಿಕಿತ್ಸೆ ತೀವ್ರ ಮಟ್ಟದಲ್ಲಿ ಏರುಪೇರಾಗಿತ್ತು. ಈಗ ರಷ್ಯಾದ ದಾಳಿಯ ನಂತರ ಉಕ್ರೇನಿನ ಕ್ಯಾನ್ಸರ್ ರೋಗಿಗಳಿಗೆ ಮತ್ತಷ್ಟು ತೊಂದರೆಯಾಗಿದೆ. ನಿಯಮಿತವಾಗಿ ನಡೆಯುತ್ತಿದ್ದ ಎಲ್ಲ ಶಸ್ತ್ರಕ್ರಿಯೆಗಳೂ ಕ್ಯಾನ್ಸರ್ ಸರ್ಜರಿಗಳೂ ಸೇರಿ ಈಗ ಸಂಪೂರ್ಣ ನಿಂತು ಹೋಗಿವೆ.

ಜತೆಗೆ ಕ್ಯಾನ್ಸರ್ ಕಾಯಿಲೆಯ ಪತ್ತೆ ಹಚ್ಚುವಿಕೆ, ಕೀಮೋಥೆರಪಿ ಮತ್ತು ರೇಡಿಯೋಥೆರಪಿ ಚಿಕಿತ್ಸೆಗಳೂ ಅಲಕಲವಾಗಿವೆ. ಒಂದು ಉದಾ: ಒಂದು ಪ್ರದೇಶದಲ್ಲಿ 1500 ಮಕ್ಕಳು ಕ್ಯಾನ್ಸರ್‌ಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು. ಅದರಲ್ಲಿ ಶೇ. 80 ಗುಣವಾಗುವ ಕ್ಯಾನ್ಸರ್ ಆಗಿತ್ತು. ಆ ಚಿಕಿತ್ಸೆ ಸಂಪೂರ್ಣ ಅಸ್ತವ್ಯಸ್ತಗೊಂಡು ಅವರ ಭವಿಷ್ಯ ಡೋಲಾಯಮಾನವಾಗಿದೆ. ಕೆಲವು ಆಸ್ಪತ್ರೆಗಳು ತಮ್ಮ ರೋಗಿಗಳನ್ನು ಪೋಲೆಂಡ್ ಮತ್ತು ಪಶ್ಚಿಮ ಉಕ್ರೇನ್ ಭಾಗಕ್ಕೆ ಸ್ಥಳಾಂತರಿಸಿವೆ.

ವಾತಾವರಣದ ಹಾನಿ: ಮೇಲಿನ ಹಲವು ಕೆಟ್ಟ ಕೆಟ್ಟ ಪರಿಣಾಮಗಳ ಜತೆಗೆ ಈ ಯುದ್ಧವು ಹಲವಾರು ರೀತಿಯಲ್ಲಿ ವಾತಾವರಣದಲ್ಲಿ ಹಾನಿ ಉಂಟು ಮಾಡುತ್ತಿದೆ. ಇವು ನಾನಾ ರೀತಿಯಲ್ಲಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಹೊಂದಿವೆ. ಉಕ್ರೇನಿನ ನ್ಯೂಕ್ಲಿಯರ್ ಶಕ್ತಿ ಕೇಂದ್ರಗಳಿಂದ ಹೊರ ಹೊಮ್ಮುವ ಅಣು ವಿಕಿರಣಗಳು ತಕ್ಷಣದಲ್ಲಿ ವಿಪರೀತ ಹಾನಿ ಉಂಟು ಮಾಡಬಲ್ಲದು. ಬಾಂಬ್ ದಾಳಿಗೆ ಒಳಗಾದ ಕಟ್ಟಡಗಳು ಕ್ಯಾನ್ಸರ್‌ಕಾರಕ ಧೂಳುಗಳನ್ನು ಹೊರ ಸೂಸುತ್ತವೆ.

ಇವು ಬಹಳ ವರ್ಷಗಳು, ದಶಕಗಳವರೆಗೆ ಹಾನಿ ಉಂಟು ಮಾಡಬಲ್ಲ ಪರಿಣಾಮ ಹೊಂದಿವೆ. ಹಾಗೆಯೇ ಭವಿಷ್ಯದ ಪೀಳಿಗೆಗಳಿಗೆ ಅಪಾಯಕಾರಿ ದುಷ್ಪರಿಣಾಮ ಬೀರಬಲ್ಲವು. ಉಕ್ರೇನಿನ ಪೂರ್ವ ಭಾಗವು ತುಂಬಾ ದಟ್ಟ ಕೈಗಾರಿಕಾ ಪ್ಲಾಂಟ್‌ಗಳನ್ನು ಹೊಂದಿದೆ. ಮುಖ್ಯವಾಗಿ ಉಕ್ಕಿನ ಪ್ಲಾಂಟ್‌ಗಳು, ಕೀವ್, ಕೊರೊಸ್ಟೆನ್ ನಗರಗಳಲ್ಲಿರುವ ರಾಸಾಯನಿಕ ಕಾರ್ಖಾನೆಗಳು, ಹಲವು ಶಸ್ತ್ರಾಸ್ತ್ರ ಉತ್ಪಾದಿ ಸುವ ಕಾರ್ಖಾನೆಗಳು ಇವೆ. ಅದರಲ್ಲಿಯೂ ಹಿಂದಿನ ಯು ಎಸ್‌ಎಸ್‌ಆರ್ (ಸೋವಿಯತ್ ಯೂನಿಯನ್) ಕಾಲದಲ್ಲಿ ಆರಂಭ ಗೊಂಡ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್‌ಗಳನ್ನು ಉತ್ಪಾದಿಸುವ ಘಟಕವು ಸರಿಯಾದ ನಿಗಾ ಇಲ್ಲದೆ, ರಿಪೇರಿ ಕಾಣದೆ ಶಿಥಿಲಾ ವಸ್ಥೆಯಲ್ಲಿದೆ.

ಇಂತಹ ಘಟಕಗಳಿಗೆ ಬಾಂಬ್ ಗಳು, ಶೆಲ್‌ಗಳು ಬಿದ್ದರೆ ಸಾವಿರಾರು ಜನರು ತಕ್ಷಣವೇ ಮರಣ ಹೊಂದುತ್ತಾರೆ. ಈ ಭಾಗದಲ್ಲಿರುವ ಕೆಲವು ಜಲವಿದ್ಯುತ್ ಯೋಜನೆಯ ಆಣೆಕಟ್ಟುಗಳು ಬಾಂಬ್ ದಾಳಿಗೆ ಒಳಗಾದರೆ ಹಲವಾರು ಹಳ್ಳಿ, ಪಟ್ಟಣಗಳು ಕೊಚ್ಚಿ ಹೋಗಿ ಅಪಾರ ಹಾನಿ ಉಂಟಾಗಬಹುದು. ಟೋರಸ್ಕ್ ನಗರದ ಸಮೀಪದ ರಾಸಾಯನಿಕ ಘಟಕವೇನಾದರೂ ದಾಳಿಗೆ ಒಳಗಾದರೆ ವಿಷಪೂರಿತ ಅನಿಲಗಳು ಹೊರಗೆ ಬಂದು ಹಲವರು ಮಡಿಯಬಹುದು, ಮತ್ತೆ ಕೆಲವರು ತೀವ್ರ ರೀತಿಯ ನಾನಾ ಆರೋಗ್ಯ ಸಮಸ್ಯೆಗಳಿಗೆ ಒಳಗಾಗ ಬಹುದು. ಈ ಭಾಗದಲ್ಲಿ ಸುಮಾರು 3 ಲಕ್ಷ ಟನ್ ಗಳಷ್ಟು ರಾಸಾಯನಿಕ ಹೂಳು ( Chemical Sludge) ತುಂಬಿರುವ ಘಟಕವು ತುಂಬಾ ಅಸ್ಥಿರ ಸ್ಥಿತಿಯಲ್ಲಿದೆ.

ಇದೇನಾದರೂ ಶೆಲ್ ದಾಳಿಗೆ ಒಳಗಾದರೆ 8 ಮಿಲಿಯನ್ ಟನ್‌ಗಳಿಗಿಂತಲೂ ಹೆಚ್ಚಿನ ಬಗೆಯ ಕೆಟ್ಟ ರಾಸಾಯನಿಕಗಳು ಹೊರಬ ರುತ್ತವೆ. ಕೇವಲ 10 ನಿಮಿಷಗಳ ಅವಧಿಯಲ್ಲಿ ಮಿಲಿಯನ್ ಗಟ್ಟಲೆ ಟನ್‌ಗಳಷ್ಟು ವಿಷಪೂರಿತ ಹೂಳು ಹತ್ತಿರದ ಜಾಲಿಜಾನ್ ನದಿಯನ್ನು ಸೇರಿ ಸಮೀಪದ ಸೇತುವೆಗಳು ಮತ್ತು ವಿದ್ಯುತ್ ಉಪಕರಣಗಳನ್ನು ನಾಶಗೊಳಿಸಿ, ಇಡೀ ಒಂದು ವಿಶಾಲ ಪ್ರದೇಶದ ಕುಡಿಯುವ ನೀರನ್ನು ಸಂಪೂರ್ಣ ಕಲುಷಿತಗೊಳಿಸಬಲ್ಲದು. ಕುತೂಹಲದ ವಿಚಾರವೆಂದರೆ ಇದರಲ್ಲಿನ ವಿಷದ ಅಂಶಗಳು ಕೆಳಭಾಗಕ್ಕೆ ಹರಿಯುತ್ತ ಹೋಗಿ ಸೆವರ್ ಸ್ಕೈ ಡೋನೆಟ್ಸ್ ನದಿ ಸೇರಿ ರಷ್ಯಾವನ್ನು ಪ್ರವೇಶಿಸುತ್ತದೆ.

ಆಗ ರಷ್ಯಾದ ನಲ್ಲಿಗಳಲ್ಲಿ ಉಕ್ರೇನಿನ ವಿಷಪೂರಿತ ರಾಸಾಯನಿಕಗಳು ಹರಿಯುತ್ತವೆ ಎಂದು ತಜ್ಞರು ಎಚ್ಚರಿಸುತ್ತಾರೆ. ವಿಪರೀತ ಸಿಟ್ಟು, ತೀವ್ರ ಭೀತಿ, ದೀರ್ಘ ಚಿಂತೆ, ಚಡಪಡಿಸುವಿಕೆ, ಮನಸ್ಸು ಡೋಲಾಯಮಾನವಾಗುವುದು, ಆತಂಕಕ್ಕೆ ಒಳಗಾಗುವುದು – ಈ ರೀತಿಯ ಮಾನಸಿಕ ಲಕ್ಷಣಗಳು ಹಲವರಲ್ಲಿ ಕಾಣಿಸಿಕೊಳ್ಳಬಹುದು. ಯುದ್ಧವು ಬೇಗನೆ ನಿಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ತುಂಬಾ ಹೆಚ್ಚಾಗಿ ಉಕ್ರೇನಿನ ನಾಗರಿಕರು ತೀವ್ರ ತೊಂದಗೆ ಒಳಗಾಗುತ್ತಾರೆ.