Wednesday, 27th November 2024

ಮರೆತ ನಿಸರ್ಗದ ಕಾವಲುಗಾರ ಜುಂಜಪ್ಪನ ಕಥೆ

ಸುಪ್ತ ಸಾಗರ

ರಾಧಾಕೃಷ್ಣ ಎಸ್.ಭಡ್ತಿ

rkbhadti@gmail.com

ತನ್ನ ಸಮುದಾಯದ ಸ್ವಾವಲಂಬನೆ, ಸ್ವಾತಂತ್ರ್ಯದ ಜತೆಗೆ ಇಡೀ ಜೀವಕೋಟಿಯ ಒಳಿತಿಗಾಗಿ ಮಿಡಿಯುವ ಜುಂಜಪ್ಪನ ಗುಣ ಲೋಕದೃಷ್ಟಿಯಲ್ಲಿ ಆತನಿಗೆ ದೈವತ್ವವನ್ನು ಆರೋಪಿಸಿದ್ದರಲ್ಲಿ ಅತಿಶಯ ಕಾಣುವುದಿಲ್ಲ. ಅದರಲ್ಲೂ ಸಮಾಜದ ನಿರ್ಲಕ್ಷಿತ ಸಮುದಾಯಕ್ಕೆ ಜುಂಜಪ್ಪ ಗಳಿಸಿಕೊಟ್ಟ ಮಾನ್ಯತೆ ಮಹತ್ವಪೂರ್ಣ.

ಜಾನಪದ ಪರಂಪರೆಯಲ್ಲಿ ಇಂಥ ಅದೆಷ್ಟೋ ವ್ಯಕ್ತಿತ್ವಗಳು ಬಂದು ಹೋಗುತ್ತವೆ. ವಿಶೇಷವೆಂದರೆ ಇಂಥ ಎಲ್ಲ ವ್ಯಕ್ತಿಗಳೂ ಪರಿಸರದ ಉಳಿವಿಗೆ ಒತ್ತುಕೊಟ್ಟುಕೊಂಡೇ ಬಂದಿದ್ದವರು. ಪರಿಸರವನ್ನೇ ಆರಾಧಿಸುತ್ತಾ ಮಾದರಿಯಾದವರು.

ಪರಿಸರವಾದಿಗಳ ಆರಾದ್ಯನಾಗಿ, ನಿಸರ್ಗದ ಕಾವಲುಗಾರ ದೈವನಾಗಿ, ಮರುಭೂಮೀ ಕರಣ ಪ್ರಕ್ರಿಯೆಯನ್ನು ತಡೆಯಬಲ್ಲ ಬೀಜಮಂತ್ರದ ಜನಕನಾಗಿ, ಅಲೆಮಾರಿ ಪಶುಪಾಲಕನಾಗಿ ಪ್ರಕೃತಿಯಲ್ಲಿ ಸಮತೋಲನ ಕಾಪಾಡುವ ತಜ್ಞನಾಗಿ ಕಾಣುವ
ಜುಂಜಪ್ಪ ಜಾನಪದೀಯ ಪರಂಪರೆಯ ಪ್ರಮುಖ ಹೆಸರು. ಪ್ರಕೃತಿ ಹಾಗೂ ಸಭ್ಯತೆಗಳ ನಡುವೆ ಅಗತ್ಯವಾಗಿ ಇರಬೇಕಾದ ಸಮತೋಲನವನ್ನು ಅರಿತ ಜುಂಜಪ್ಪ ಅಂತಹ ಅರಿವನ್ನು ಸಾಂಸ್ಕೃತಿಕವಾಗಿ ಕಾಪಾಡಿಕೊಂಡು ಬಂದಿದ್ದವನು.

ಅಷ್ಟಕ್ಕೂ ಯಾರೀತ ಈ ಜುಂಜಪ್ಪ? ಭಾರತದಲ್ಲಿ ಎರಡು ರೀತಿಯ ಪರಂಪರೆಗಳನ್ನು ನೋಡುತ್ತೇವೆ. ನೂರಾರು ವರ್ಷಗಳಿಂದ ಈ ಪರಂಪರೆ ಎರಡು ನದಿಗಳ ರೀತಿಯಲ್ಲಿ ಹರಿಯುತ್ತಿದೆ. ವೇದ- ಮಂತ್ರಗಳಿರುವ ವೈದಿಕ ಪರಂಪರೆ ಒಂದಾದರೆ ಇನ್ನೊಂದು ಸಂತ ಪರಂಪರೆ. ಅಲ್ಲಮ ಕಬೀರರಾದಿಯಾಗಿ ಸಾವಿರಾರು ಸಂತರು ಸ್ಥಳೀಯತೆಯಲ್ಲಿ ತಮ್ಮ ಸ್ಥಾನವನ್ನು ಸ್ಥಾಪಿಸಿಕೊಂಡಿದ್ದಾರೆ.

ಈ ಪರಂಪರೆಯಲ್ಲಿ ಬರುವವನು ದಕ್ಷಿಣ ಕರ್ನಾಟಕದ ಹಳೆಯ ಮೈಸೂರು ಭಾಗದ ಕಾಡುಗೊಲ್ಲರ ನಡುವಿನ ದೈವ ಜುಂಜಪ್ಪ. ಈ ಜುಂಜಪ್ಪನ ವಿಶೇಷ ಅಂದರೆ ಆತನೇ ಒಬ್ಬ ಕಾಡುಗೊಲ್ಲ. ಹಾಗಾಗಿ ಅವನು ದನಗಾಹಿ ಮತ್ತು ದನಗಳನ್ನು ಮೇಯಿಸುವ ಕಾಡುಗಳಲ್ಲಿನ ಕಾವಲುಗಳನ್ನು ಕಾಯುತ್ತಿದ್ದವನು. ಜುಂಜಪ್ಪ ವೀರ. ಹದಿನಾರು ವರ್ಷಕ್ಕೆ ಸಾವನ್ನಪ್ಪುವ ಮೊದಲೇ ಅಸಾಮಾನ್ಯ ಶೌರ್ಯ ಮೆರೆದಿರುತ್ತಾನೆ. ಏಳುಸುತ್ತಿನ ಅರಸರನ್ನು ಸೋಲಿಸಿರುತ್ತಾನೆ.

ಆದರೆ ಜುಂಜಪ್ಪನ ಹೋರಾಟಗಳ ಉದ್ದೇಶ ರಾಜ್ಯ ಕಬಳಿಕೆಯಲ್ಲ. ಬದಲಾಗಿ ಪಶುಗಳಿಗೆ ಮೇವು, ನೀರು ಒದಗಿಸುವುದಷ್ಟೆ. ಪ್ರಕೃತಿದತ್ತವಾದ ಸಮೃದ್ಧಿಯನ್ನು ಖಾಸಗಿ ಆಸ್ತಿ ಮಾಡಿಕೊಂಡು ಬೇಲಿ ಬಿಗಿಯುವ ಅಧಮರು, ಅವರಾರೇ ಇರಲಿ, ಮಣಿಸುವುದು
ಜುಂಜಪ್ಪನ ಕರ್ತವ್ಯ. ಮಣಿಸಿದ ನಂತರ ಕರುಣೆಗೆ ಮಣಿಯುತ್ತಾನೆ ಜುಂಜಪ್ಪ. ಸೋತವರ ಸತಿಯರು ಸೆರಗೊಡ್ಡಿ ಬೇಡಿದಾಗ, ‘ನನಗೇಕೆ ಬೇಕು ರಾಜ್ಯ ಆಳುವ ಭಾರ!

ನಾನು ಕಾಡುಗೊಲ್ಲ! ಪಶುಗಳ ನೀರು-ಮೇವಿಗೆ ಬಾಧೆ ಬರದಂತೆ ಬದುಕಿರಿ’ ಎಂದು ಗುಡುಗಿ, ಸಂಪತ್ತನ್ನೆಲ್ಲ ನಾಡಿನವರಿಗೆ ಹಿಂದಿರುಗಿಸಿ, ಕಾಡಿಗೆ ನಡೆದು ಬಿಡುತ್ತಾನೆ ಜುಂಜಪ್ಪ. ಅಸೂಯೆಯಿಂದ ಅವನ ಸೋದರಮಾವಂದಿರೆ ಆತನನ್ನು ಕೊಲ್ಲುತ್ತಾರೆ.
ಜುಂಜಪ್ಪನ ಬಗ್ಗೆ ಇಷ್ಟೊಂದು ಅಸೂಯೆ ಬರಲಿಕ್ಕೆ ಕಾರಣ ಅವನ ಕೈಗುಣ. ಮುಟ್ಟಿದ್ದಕ್ಕೆಲ್ಲ ಜೀವ ತರಿಸಬಲ್ಲವನು ಜುಂಜಪ್ಪ. ಅವನ ಪಶುಸಂಗೋಪನಾ ತಂತ್ರ ಅಂತಹದ್ದು. ಉದಾಹರಣೆಗೆ ಸಾಯಲಿರುವ ಒಂದು ರೋಗಗ್ರಸ್ತ ಕರುವಾಗಿ ಸಿಕ್ಕುತ್ತದೆ ಅವನಿಗೆ.
ಜುಂಜಪ್ಪನ ಆರೈಕೆಯಲ್ಲಿ ಅದು, ಅಸಾಧಾರಣ ಶಕ್ತಿಯ ಬೀಜದ ಹೋರಿಯಾಗಿ ಮೈತಳೆಯುತ್ತದೆ.

ಜುಂಜಪ್ಪನ ಹಸುಗಳೂ ಅಷ್ಟೆ, ಸಂತಾನಲಕ್ಷ್ಮಿಯರು. ಆತ ಹುತಾತ್ಮನಾಗಿ, ಒಬ್ಬ ಜನಪ್ರಿಯ ದೈವನಾಗುತ್ತಾನೆ. ತನ್ನ ಹದಿನೇಳ ನೆಯ ವಯಸ್ಸಿನಲ್ಲಿ ಹೀಗೆ ಸೋದರಮಾವಂದಿರ ಸಂಚಿಗೆ ಬಲಿಯಾಗುವ ಜುಂಜಪ್ಪ, ಮತ್ತವನ ಇಬ್ಬರು ಸೋದರ ರಾದ ಮಾರ-ಮೈಲರನ್ನೂ ಕಳುವೂರಳ್ಳಿಯಲ್ಲಿ ಒಟ್ಟಿಗೇ ಮಣ್ಣು ಮಾಡಲಾಗುತ್ತದೆ.

ಇದರ ಎದುರಲ್ಲೇ ಆತನಿಗಾಗಿ ಮಡಿದ ಆತನ ಪ್ರೀತಿಪಾತ್ರ ಎತ್ತು, ಬಡಮೈಲನನ್ನೂ ಸಮಾಧಿ ಮಾಡಲಾಗಿದೆ. ಸನಿಹದಲ್ಲೇ ಆತನಿಗಾಗಿ ಪ್ರಾಣ ಅರ್ಪಿಸಿದ ಆತನ ನೆಚ್ಚಿನ ಜೂಲು ನಾಯಿಯನ್ನೂ ಸಮಾಧಿ ಮಾಡಲಾಗುತ್ತದಂತೆ. ಇಂದಿಗೂ ಆ ಪ್ರದೇಶ ವನ್ನು ‘ಜೂಲು ನಾಯು ಗುಡ್ಡೆ’ ಎಂದೇ ಗುರುತಿಸಲಾಗುತ್ತದೆ. ಇನ್ನು ಜುಂಜಪ್ಪನ ಸಮಾಧಿ ಸ್ಥಳವನ್ನು ‘ಜುಂಜಪ್ಪನ ಗುಡ್ಡೆ’ ಎಂದೇ ಕರೆದು ಆಪ್ರದೇಶದಲ್ಲಿ ಪೂಜೆ-ಪುನಸ್ಕಾರಗಳು ನಡೆಯುತ್ತವೆ.

ಇದರ ಸಮೀಪದಲ್ಲೇ, ಕಳುವೂರಳ್ಳಿಯ ಹೊಲದಲ್ಲಿ ಜುಂಜಪ್ಪನ ಹೆತ್ತವರಾದ ಮಲೆಗೊಂಡ-ಚಿನ್ನಮ್ಮನ ಸಮಾಧಿಯಿದ್ದು, ಪಕ್ಕದಲ್ಲಿ ಬೆಳೆದು ನಿಂತಿರುವ ಎರಡು ಬೃಹತ್ ಅರಳೀಮರಗಳನ್ನು ಅವರೇ ನೆಟ್ಟಿದ್ದೆಂದು ನಂಬಿಕೆಯಿದೆ. ಇವೆಲ್ಲವೂ ಈಗ ಅನಾಥ ಸ್ಮಾರಕಗಳಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈ ಯಾವುದರ ಬಗ್ಗೆಯೂ ಗಂಭೀರ ಅಧ್ಯಯನವಾಗಲೀ, ಸಂರಕ್ಷಣಾ
ಕ್ರಮ ಗಳಾಗಲೀ ಈವರೆಗೆ ನಡೆದಿಲ್ಲ.

ಇನ್ನು ಚಿಕ್ಕನಾಯಕನಹಳ್ಳಿ ಪ್ರಾಧ್ಯಾಪಕ ನಾಗರಾಜ ಕುಮಾರ್ ಅವರು ಸಂಗ್ರಹದನ್ವಯ ಜುಂಜಪ್ಪನ ಈ ಮಹಾಕಾವ್ಯ ಅನೇಕ ತಲೆಮಾರಿನಿಂದ ಪಶುಪಾಲಕರಾಗಿ ಜೀವನ ಸಾಗಿಸುತ್ತಿರುವರರ ಏಳು ಬೀಳುಗಳನ್ನು ಕುರಿತ ದುರಂತ ಕಾವ್ಯ. ಈ ಕಥೆಯ ಮೊದಲ ಭಾಗದಲ್ಲಿ ಮೊದಲನೆಯ ತಲೆಮಾರಿನ ದೇವರ ದಯಾಮಾರ ಮತ್ತು ಆತನ ಪತ್ನಿ ಕಂಬಕ್ಕ ಮತ್ತು ಇವರ ಮದುವೆ, ನಂತರ ಇವರಿಬ್ಬರೂ ಭಯಂಕರ ಕಾಡಿನಲ್ಲಿ ಹಸು-ದನಗಳನ್ನು ಪೋಷಿಸುವುದು ಇವರ ಕುಲವೃತ್ತಿಯಾಗಿತ್ತು.

ಇದೇ ಸಂಧರ್ಭದಲ್ಲಿ ಪತ್ನಿ ಕಂಬಕ್ಕ ಒಂದು ಗಂಡು ಮಗುವಿಗೆ ಜನ್ಮ ನೀಡುವುದು, ಹಾಗೂ ಇಬ್ಬರು ಆ ದಟ್ಟವಾದ ಅರಣ್ಯದಲ್ಲಿ ದಾರಿ ತಪ್ಪಿ ತೃಷೆ, ಬಾಯಾರಿಕೆಯಿಂದ ಇಬ್ಬರೂ ಮರಣವನ್ನಪ್ಪುವುದು ಮೊದಲನೇ ಭಾಗದದಲ್ಲಿ ತುಂಬಾ ಸುಂದರವಾಗಿ
ವಿವರಿಸಲಾಗಿದೆ. ನಂತರ ಎರಡನೇ ಭಾಗದಲ್ಲಿ ಇಬ್ಬರೂ ಸತ್ತ ನಂತರ ಅನಾಥವಾಗಿದ್ದ ಮಗುವನ್ನು ಅವರ ಸೋದರತ್ತೆ  ಬಡಚಿತ್ರಮ್ಮ ಎಂಬುವವಳು ಸಾಕಿ ಸಲುಹುತ್ತಾಳೆ. ಈ ಮಗುವಿಗೆ ಕಂಗೂರ ಮಗೌಡ ಎಂಬ ಹೆಸರನ್ನಿಡುತ್ತಾರೆ. ಆದರೆ ತನ್ನ ಸಂಬಂಧಿಗಳಾದ ದೊಡ್ಡಪ್ಪ-ದೊಡ್ಡಮ್ಮರಿಂದ ಇವನು ಕಿರುಕುಳಕ್ಕೆ ಒಳಗಾಗುತ್ತಾನೆ,. ಈ ಕಿರುಕುಳವನ್ನು ತಡೆಯಲಾರದೆ
ಅಳೂಪನವರ ಒಕ್ಕಲಿಗನಾದ ಹೊನ್ನಟ್ಟಿ ಆಲೇಗೌಡರ ಬಳಿ ಆಶ್ರಯವನ್ನ ಪಡೆಯುತ್ತಾನೆ.

ನಂತರ ಇದೇ ಆಲೇಗೌಡ ಇವನನ್ನು ಸಾಕಿ ಸಲುಹುತ್ತಾನೆ. ಮಗೌಡ ಮದುವೆ ವಯಸ್ಸಿಗೆ ಬಂದಾಗ ಕಂಚಿಯ ಗೊಲ್ಲರ
ಚಿನ್ನಮ್ಮನೊಡನೆ ಮದುವೆ ಮಾಡುತ್ತಾರೆ. ಹೀಗೆ ಇಬ್ಬರೂ ಜೀವನ ನಡೆಸುತ್ತಿರಲು ಮಗೌಡ ಚಿನ್ನಮ್ಮನನ್ನು ಬಿಟ್ಟು ದನಗಳನ್ನು ಮೇಯಿಸಲು ಕಾಡಿಗೆ ಹೋದದ್ದರಿಂದ ಅನೇಕ ಕಷ್ಟಗಳನ್ನು ಅನುಭವಿಸುತ್ತಾಳೆ. ಎಷ್ಟೋ ದಿನಗಳ ನಂತರ ಗಂಡನನ್ನು ಕೂಡುತ್ತಾಳೆ.

ಚಿನ್ನಮ್ಮ ತನ್ನ ಮನೆ ದೇವರಾದ ಗೌರಸಂದ್ರದ ಮಾರಕ್ಕನ ಪ್ರಯತ್ನದಿಂದ ಹಾಗೂ ಶಿವನ ವರಪ್ರಸಾದದಿಂದ ನಮ್ಮ ಈ ಕಥೆಯ ನಾಯಕನಾದ ಜುಂಜಪ್ಪ ಎಂಬ ಮಹಾನ್ ಚೇತನವನ್ನು ಮಗನನ್ನಾಗಿ ಪಡೆಯುತ್ತಾಳೆ. ಇದಲ್ಲದೇ ನಂತರ ಮಾರಣ್ಣ, ಮೈಲಣ್ಣ ಎಂಬ ಎರಡು ಗಂಡು ಮಕ್ಕಳಿಗೆ ಮತ್ತು ಮಾರಕ್ಕ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ನಂತರ ತನ್ನ ಗಂಡ ಮಗೌಡನ ನಿಧನದ ನಂತರ ಚಿನ್ನಮ್ಮ ವಿಧವೆಯಾಗಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ತನ್ನ ಜೀವನದಲ್ಲಿ ಅನುಭವಿಸುತ್ತಾಳೆ.

ಮೂರನೇ ಭಾಗ ಕದನದ ವಿವರಗಳನ್ನು ಕಟ್ಟಿಕೊಡುತ್ತದೆ. ಜುಂಜಪ್ಪ ತನ್ನ ಸೋದರ ಮಾವಂದಿರೊಡನೆ ಹಾಗೂ ಮ್ಯಾಸದೇವರ ಕುಲಕ್ಕೆ ಸೇರಿದ ಸಿರ ರಂಗಣ್ಣ, ಹುಲಿಕುಂಟೆ ತಮ್ಮಣ್ಣ ಮೊದಲಾದ ಪಾಳೇಗಾರರೊಡನೆ ಮತ್ತು ತಾಳೆದುರ್ಗಿ ಎಂಬ ಸ್ತ್ರೀ ದೇವತೆ ಯೊಡನೆ. ನಡೆಸಿದ ಸಂಘರ್ಷದ ವಿವರಗಳಿವೆ. ಆದರೆ ಈ ಜುಂಜಪ್ಪನ ಏಳ್ಗೆಯನ್ನು ಸಹಿಸದ ಇವನ ಸೋದರ ಮಾವಂದಿರು ತಂಗಿ ಮಾರಕ್ಕನಿಂದ ಊಟದಲ್ಲಿ ವಿಷ ಹಾಕಿ ಸಾಯಿಸುತ್ತಾರೆ. ಇದರಿಂದ ಕೋಪಗೊಂಡ ಜುಂಜಪ್ಪ ಅವರನ್ನು ಹಾಗೂ ಕಂಚಿ ಯರ ಹಟ್ಟಿಯನ್ನು ಸುಟ್ಟು ಬೂದಿ ಮಾಡುತ್ತಾನೆ.

ಹೀಗೆ ಈ ಕಥೆ ಮುಂದುವರೆಯುತ್ತಾ ಜುಂಜಪ್ಪನ ಪವಾಡಗಳನ್ನು ವರ್ಣಿಸುತ್ತದೆ. ನಂತರ ಇವನ ತಂಗಿ ಮಾರಕ್ಕನ ಗರ್ಭದಲ್ಲಿದ್ದ
ಮಗುವಿನಿಂದ ಕಂಚಿಯ ಗೊಲ್ಲರ ಸಂತಾನ ಮುಂದುವರಿಯುತ್ತದೆ. ಹಾಗೆ ನೋಡಿದರೆ, ಅವನ ಅನುಯಾಯಿಗಳ ಪಾಲಿಗೆ ಜುಂಜಪ್ಪ ಒಬ್ಬ ಪವಾಡಪುರುಷನೇ. ಎಲ್ಲರಂತೆ ಸಹಜ ಹುಟ್ಟು ಪಡೆದವನಲ್ಲ ಜುಂಜಪ್ಪ ಎನ್ನಲಾಗುತ್ತದೆ. ತನ್ನ ತಾಯಿಯ ಬೆನ್ನಿನಿಂದ ಹುಟ್ಟಿದವನೆಂದು ಹೇಳಲಾಗುತ್ತದೆ. ಪಾರಂಪರಿಕ ದೈವ ಗಣೇಪತಿ ತಾಯಿ ಪಾರ್ವತಿಯ ಮೈಯ್ಯ ಕೊಳೆಯಲ್ಲಿ ಜನಿಸಿದಂತೆಯೇ ಜುಂಜಪ್ಪ ಸಹ ಜಾನಪದರ ಕಲ್ಪನೆಯಲ್ಲಿ ವೈಭವೀಕರಣೆಕ್ಕೆ ಒಳಗಾದವನೇ.

ಆದರೆ, ಆತನ ಬದುಕು ಪ್ರೇರಾಣೆಯೊದಗಿಸಿ, ಜನಾಂಗೀಯ ನಾಯಕನಾಗಿ ರೂಪುಗೊಳ್ಳುತ್ತಾನೆ. ತನ್ನ ಸಮುದಾಯದ ಸ್ವಾವ ಲಂಬನೆ, ಸ್ವಾತಂತ್ರ್ಯದ ಜತೆಗೆ ಇಡೀ ಜೀವಕೋಟಿಯ ಒಳಿತಿಗಾಗಿ ಮಿಡಿಯುವ ಆತನ ಗುಣ ಲೋಕದೃಷ್ಟಿಯಲ್ಲಿ ಆತನಿಗೆ ದೈವತ್ವವನ್ನು ಆರೋಪಿಸಿದ್ದರಲ್ಲಿ ಅತಿಶಯ ಕಾಣುವುದಿಲ್ಲ. ಅದರಲ್ಲೂ ಸಮಾಜದ ನಿರ್ಲಕ್ಷಿತ ಸಮುದಾಯಕ್ಕೆ ಜುಂಜಪ್ಪ
ಗಳಿಸಿಕೊಟ್ಟ ಮಾನ್ಯತೆ ಮಹತ್ವಪೂರ್ಣ.

ಪರಿಸರದ ಸುತ್ತಲೇ ಸುತ್ತುವ ಜುಂಜಪ್ಪನ ಸಾಹಿತ್ಯ, ಕಾಲ ಮತ್ತು ಸನ್ನಿವೇಶಕ್ಕನುಗುಣವಾಗಿ ವಿಕಾಸಹೊಂದುತ್ತಾ, ವಿಸ್ತಾರ ವಾಗುತ್ತಾ ಸಾಗಿದೆ. ಹೀಗಾಗಿ ಅದು ಸೀಮಿತ ಸಮುದಾಯದ ಪರಿಧಿಯಲ್ಲಿ ಉಳಿಯದೇ, ಪರಿಸರ ಅವಲಂಬಿತ ಎಲ್ಲರ ನಾಡಿಗಳಲ್ಲಿ
ಧಮನಿಯಾಗಿ ಹರಿಯುತ್ತಿದೆ. ಹೀಗಾಗಿ ಇಂದಿಗೂ ಆತ ನಡೆದಾಡಿದ ಪ್ರದೇಶದಲ್ಲೆಲ್ಲಾ ಭಾವುಕವಾಗಿ ಆತನ ಸಾಹಿತ್ಯ ಪ್ರಚಲಿತ ದಲ್ಲಿದೆ. ಜತೆಗೆ ಆತನನ್ನು ಇತಿಹಾಸದಲ್ಲಿ ಗತಿಸಿಹೋದ ಕೇವಲ ವ್ಯಕ್ತಿಯಾಗಿ ಗುರುತಿಸದೇ ಇಮದಿಗೂ ದೈವ ಸ್ವರೂಪದಲ್ಲಿ
ಆರಾಽಸುತ್ತಾ ಬರಲಾಗಿದೆ. ಇಂದಿಗೂ ಗ್ರಾಮೀಣರ ಮನದಲ್ಲಿ, ಹೃದಯದಲ್ಲಿ ಜುಂಜಪ್ಪ ಜೀವಂತವಾಗಿದ್ದಾನೆ.

ಹೀಗಾಗಿಯೇ ಜುಂಜಪ್ಪನ ಕುರಿತು ಅಸಂಖ್ಯ ನಂಬಿಕೆಗಳು, ಆಚರಣೆಗಳು, ಸಾಹಿತ್ಯ ಪ್ರಚಲಿತದಲ್ಲಿ ಬಂದಿದೆ. ಬಹುಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಾಡುಗೊಲ್ಲರ ಸಾಂಸ್ಕೃತಿಕ ವೀರರಾದ ಎತ್ತಪ್ಪ ಹಾಗೂ ಜುಂಜಪ್ಪನ ಮೌಖಿಕ ಸಾಹಿತ್ಯ ಪರಂಪರೆ ದೇಶೀ ಸಂಸ್ಕೃತಿಯದೃಷ್ಟಿಯಿಂದ ಶಿಷ್ಟ ಸಾಹಿತ್ಯ ಮಾರ್ಗದಷ್ಟೆ ಮಹತ್ವ ಪಡೆದಿದೆ. ಸುಮಾರು ೧೮ನೇ ಶತಮಾನದಲ್ಲಿ
ತನ್ನ ಸಮುದಾಯದ ನಡುವೆ ಬದುಕಿದ್ದ ಜುಂಜಪ್ಪ, ಹುಟ್ಟಿ ಬೆಳೆದದ್ದು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಳುವೂರಳ್ಳಿ ಯಲ್ಲಿ. ಬೇವಿನಹಳ್ಳಿ, ಶಿರಾ, ತಾವರೆಕೆರೆ, ಚಿತ್ರದುರ್ಗ ತಾಲೂಕಿನ ಹೊಳಲ್ಕೆರೆ, ಮದ್ದೇರಿ ಇಲ್ಲೆಲ್ಲ ತನ್ನ ಪ್ರಭಾವವನ್ನು ಬೀರಿದ್ದ ಜುಂಜಪ್ಪನ ಅನುಯಾಯಿ ಕಾಡುಗೊಲ್ಲ ಜನಾಂಗ ಇಂದಿಗೂ ಅಲ್ಲೆಲ್ಲಾ ವ್ಯಾಪಕವಾಗಿದ್ದಾರೆ.

ತಾವು ಬದುಕಿಗಾಗಿ ನಂಬಿದ್ದ ಗೋವುಗಳಿಗಾಗಿ ಅವುಗಳಿಗಾಗಿಯೇ ನೀರು, ಮೇವನ್ನು ಅರಸುತ್ತಾ ‘ಕಾವಲು’ ಎಂದು ಗುರುತಿಸುವ
ಪ್ರದೇಶಗಳಿಂದ ಪ್ರದೇಶಕ್ಕೆ ವಲಸೇ ಹೋಗುತ್ತಿದ್ದರು. ‘ಎಲ್ಲಿ ಹುಲ್ಲು- ನೀರಿದೆಯೋ, ಅದೇ ಮನೆ-ಮಾರು’ ಎಂಬುದು ಅವರ ನಂಬಿಕೆ. ಹೀಗಾಗಿಯೇ ಸಹಜವಾಗಿ ಅವರ ಜೀವನ ವಿಧಾನ, ಆಚರಣೆ, ನಂಬಿಕೆಗಳು ಅದರ ಸುತ್ತಲೇ ಇರುತ್ತಿತ್ತು. ಇದೇ ಮೌಖಿಕ ಸಾಹಿತ್ಯದ ರೂಪದಲ್ಲಿ ಹೊರಹೊಮ್ಮಿ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಅಳಿಸಲಾರದ ಹೆಜ್ಜೆಯನ್ನು ಮೂಡಿಸಿವೆ.

ತಮ್ಮ ಗೋ ಸಂತತಿಯ ರಕ್ಷಣೆಗಾಗಿಯೇ ಜೀವದಾನ ಮಾಡಿದ ಜುಂಜಪ್ಪನನ್ನು ಹೊಗಳಿ ಹುಟ್ಟಿದ ಸಮೃದ್ಧ ಜಾನಪದ ಕಾವ್ಯ, ಗಧ್ಯ ಕಥನ, ತ್ರಿಪದಿಗಳು, ಗಣೆ ಕಾವ್ಯಗಳು ಅಧ್ಯಯನದ ದೃಷ್ಟಿಯಿಮದ ಮಾತ್ರವಲ್ಲದೇ ಪರಿಸರ ಸಂರಕ್ಷಣೆಯ ದೃಷ್ಟಿ ಯಿಂದಲೂ ಮಹತ್ವದ್ದೆನಿಸುತ್ತದೆ. ವಿಶೇಷವೆಂದರೆ ಆ ಜನಾಂಗದ ಅಂತರಾಳದ ಪ್ರೀತಿಯ ಸೆಲೆಯ ರೂಪದಲ್ಲಿ ಹುಟ್ಟಿದ
ಇಂಥ ಜಾನಪದ ಸಾಹಿತ್ಯ ವೈವಿಧ್ಯ, ಕನ್ನಡದ ಬೇರಾವ ಸಾಹಿತ್ಯ ಪ್ರಕಾರದಲ್ಲೂ ಕಾಣಸಿಗದು.

ಸ್ವತಃ ಜುಂಜಪ್ಪ ಸೃಷ್ಟಿಸಿದ ಮೌಖಿಕ ಸಾಹಿತ್ಯ ಬೇರಾವ ಜಾನಪದೀಯ ನಾಯಕರಿಂದಲೂ ಈವರೆಗೆ ಹುಟ್ಟಿಲ್ಲ. ಇವೆಲ್ಲವೂ
ಅನುಭವ ಜನ್ಯ ಎಂಬುದಕ್ಕೆ ಇನ್ನಷ್ಟು ಪ್ರಾಮುಖ್ಯ ಪಡೆಯುತ್ತವೆ. ಇಂದಿಗೂ ಈತನ ಅನುಯಾಯಿಗಳು ಮನೆಮನೆಗೆ ಭಿಕ್ಷೆಗೆ ಬರುತ್ತಾರೆ. ‘ಜುಂಜಪ್ಪನ್ ಕಾಣ್ಕೆ!’ ಎಂದು ಒಮ್ಮೆ ಗಟ್ಟಿಯಾಗಿ ಬೇಡಿ, ಒಂದು ಕೈಯಲ್ಲಿ ಉರಿಯುವ ಎಣ್ಣೆದೀಪ ಅಥವಾ ಹಾವಿನ ಮೂರ್ತಿ ಹಿಡಿದು ಅಥವಾ ಬಸವನನ್ನು ಅಟ್ಟಿಕೊಂಡು ತಂದು ನಿಮ್ಮೆದುರು ನಿಲ್ಲಿಸಿ, ಮತ್ತೊಂದು ಕೈಯಲ್ಲಿ ಸಣ್ಣದೊಂದು ಕೊಳಲನ್ನು ಹಿಡಿದು, ಬಗಲಿಗೆ ಕೌದಿ ವಸದ ಜೋಳಿಗೆ ನೇತು ಹಾಕಿಕೊಂಡು, ತಲೆಗೆ ಕರಡಿರೂಪದ ಕರಿ ಕೂದಲಿನ ಟೊಪ್ಪಿಗೆ ಧರಿಸಿಕೊಂಡು ಅಥವಾ ಪೇಟ ಸುತ್ತಿಕೊಂಡು ಮನೆ ಎದುರು ಬರುತ್ತಾರೆ. ಮನೆಯವರು ಈ ದೀಪಕ್ಕೆ ಎಣ್ಣೆ ಹಾಕುತ್ತಾರೆ.

ಈ ಜುಂಜಪ್ಪ ದೈವದ ವೈಶಿಷ್ಟ್ಯವೆಂದರೆ ಆತನಿಗೆ ಯಾವುದೇ ಗುಡಿ ಇಲ್ಲ. ಶಿರಾ ಪಟ್ಟಣದಿಂದ ಹದಿನಾರು ಕಿಲೋಮೀಟರುಗಳ ದೂರದಲ್ಲಿದೆ ಜುಂಜಪ್ಪನ ಗುಡ್ಡೆ. ಅದರ ಬಯಲೇ ಆತನಿಗೆ ಆಲಯ. ಆದರೆ ಇತರೆ ದೈವಗಳಿಗಿಂತ ಹೆಚ್ಚು ಭಕ್ತರು ಈ ಜುಂಜಪ್ಪ ನಿಗಿದ್ದಾರೆ. ಅಲ್ಲದೆ ಜುಂಜಪ್ಪನ ಭಕ್ತರು ಕಾಡುಗೊಲ್ಲರು ಮಾತ್ರವಲ್ಲ. ಹಳೆ ಮೈಸೂರಿನ ಎಲ್ಲ ಜನಾಂಗದವರೂ ಆತನಿಗೆ ನಡೆದುಕೊಳ್ಳುತ್ತಾರೆ. ಹಾವು ಕಡಿದರೂ ಜುಂಜಪ್ಪನಿಗೆ ಕೇಳಿಕೊಂಡರೆ ಸಾಯುವುದಿಲ್ಲ ಎಂಬಿತ್ಯಾದಿ ನಂಬಿಕೆಗಳು ಜುಂಜಪ್ಪನ ಭಕ್ತರಲ್ಲಿದೆ.

ಈಗ ಪರಿಸರವಾದಿಗಳಿಗೆ ಜುಂಜಪ್ಪ ಮುಖ್ಯವಾಗುವುದು ಆತ ನಿಸರ್ಗದ ಕಾವಲುಗಾರ ದೈವನಾಗಿ. ಮರುಭೂಮೀಕರಣ ಪ್ರಕ್ರಿಯೆಯನ್ನು ತಡೆಯಬಲ್ಲ ಬೀಜಮಂತ್ರ ಜುಂಜಪ್ಪನಲ್ಲಿ ಅಡಗಿದೆ. ಜುಂಜಪ್ಪ ಒಬ್ಬ ಅಲೆಮಾರಿ ಪಶುಪಾಲಕ. ಹುಲ್ಲು ಗಾವಲುಗಳು ಬೋಳಾದಂತೆಲ್ಲ ಪಶುಗಳನ್ನು ಮತ್ತೊಂದೆಡೆಗೆ ಕೊಂಡೊಯ್ದು, ಹುಲ್ಲು ಮತ್ತೆ ಚಿಗುರುವಂತೆ ಮಾಡಿ ಪ್ರಕೃತಿ ಯಲ್ಲಿ ಸಮತೋಲನವನ್ನು ಕಾಪಾಡಿಕೊಂಡು ಬಂದಿದ್ದವನು ಅವನು. ಪ್ರಕೃತಿ ಹಾಗೂ ಸಭ್ಯತೆಗಳ ನಡುವೆ ಅಗತ್ಯವಾಗಿ ಇರಬೇಕಾದ ಸಮತೋಲನವನ್ನು ಅರಿತವನು. ಹಾಗೂ ಅಂತಹ ಅರಿವನ್ನು ಸಾಂಸ್ಕೃತಿಕವಾಗಿ ಕಾಪಾಡಿಕೊಂಡು ಬಂದಿದ್ದ ವನು. ನಿಸರ್ಗಾರಾಧನೆಯ ಭಾಗವಾಗಿ, ಜಾನಪದ ನಂಬಿಕೆಗಳ ಮೂಲ ಸ್ರೋತವಾಗಿ, ಸಾಹಿತ್ಯ ಪ್ರಕಾರದ ಗಂಭೀರ ಕೊಡುಗೆ ಯಾಗಿ ಕಾಣುವ ಜುಂಜಪ್ಪ ಯಾವುದೇ ದೃಷ್ಟಿಯಿಂದಲೂ ಪ್ರಾತಃಸ್ಮರಣೀಯ.