Thursday, 19th September 2024

ವರ್ಷ- ಕೃಷಿಯ ಪರಸ್ಪರಕ್ಕೆ ಪರಾಶರನ ಜ್ಞಾನ ಸ್ಪರ್ಶ

ಸುಪ್ತ ಸಾಗರ

ರಾಧಾಕೃಷ್ಣ ಎಸ್.ಭಡ್ತಿ

rkbhadti@gmail.com

ಇಂದು ನಾವು ಆಧುನಿಕ ಕೃಷಿಯ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ವೈಜ್ಞಾನಿಕ ವಿಧಾನದಲ್ಲಿ ಕೃಷಿ ಚಟುವಟಿಕೆ ನಡೆಸುವ ಪದ್ಧತಿ ೪ನೇ ಶತಮಾನದಲ್ಲಿಯೇ ಜಾರಿಯಲ್ಲಿತ್ತು. ಕೌಟಿಲ್ಯ ಅರ್ಥಶಾಸ್ತ್ರ ಬರೆಯುವುದಕ್ಕೂ ಮುನ್ನವೇ ಆಧುನಿಕ ವಿಧಾನದಲ್ಲಿ ಕೃಷಿ ಮಾಡಲಾಗುತ್ತಿತ್ತು. ಅದಕ್ಕೆ ಪಿತಾಮಹ ಎನಿಸಿದವನು ಪರಾಶರ.

ಇಂದು ನಾವು ಆಧುನಿಕ ಕೃಷಿಯ ಬಗ್ಗೆ ಮಾತನಾಡುತ್ತಿದ್ದೇವೆ. ತಂತ್ರಜ್ಞಾನದ ಪ್ರಗತಿಗೆ ಹಾತೊರೆಯುತ್ತಿದ್ದೇವೆ. ಕ್ರಾಂತಿಕಾರಿ ಆಷ್ಕಾರ ಗಳಲ್ಲಿ ಬೆನ್ನು ತಟ್ಟಿಕೊಳ್ಳುತ್ತಿದ್ದೇವೆ. ಇಂಥ ಎಲ್ಲ ಅಭಿವೃದ್ಧಿಯ ನಡುವೆಯೂ ಜಗತ್ತಿನ ಒಂದು ಶತಕೋಟಿಯಷ್ಟು, ಅಂದರೆ ಸರಿಸುಮಾರು ಇಡೀ ಭಾರತದ ಜನಸಂಖ್ಯೆಯ ಮುಕ್ಕಾಲು ಪಾಲು ಮಂದಿಗೆ ಶುದ್ಧ ಕುಡಿಯುವ ನೀರು, ಪರಿಪೂರ್ಣ ಆಹಾರ ಸಿಗುತ್ತಿಲ್ಲ ವೆಂದರೆ ಅದನ್ನು ಹೇಗೆ ವ್ಯಾಖ್ಯಾನಿಸಬೇಕು? ಹಾಗೆ ನೋಡಿದರೆ ಪಾರಂಪರಿಕ ಭಾರತದಲ್ಲಿ ಇವೆರಡೂ ಸಮೃದ್ಧಿ ನೆಲೆಸಿತ್ತು.

ದೇಶದ ಕೃಷಿ ಕ್ಷೇತ್ರದಲ್ಲಿ ಹಸಿರು ಕ್ರಾಂತಿಯೇ ನಡೆದು ಹೋಗಿದೆ. ಹೆಚ್ಚೇನು ಅದು ಇಡೀ ವಿಶ್ವದ ಗಮನವನ್ನೂ ಸೆಳೆದಿತ್ತು. ಇದನ್ನೇ ಮಹಾ ಪ್ರಗತಿ ಎಂಬಂತೆ ನಾವು ಬಿಂಬಿಸಿ ಕೊಂಡೂ ಇದ್ದೇವೆ. ಅದು ಹುಟ್ಟು ಹಾಕಿದ ಸಮಸ್ಯೆಗಳು, ಅದರಿಂದಾದ ಅಪಸವ್ಯಗಳದ್ದು ಬೇರೆ ಯದೇ ಆದ ಅಧ್ಯಾಯ. ಆದರೆ ಬಹುಶಃ ಆಧುನಿಕ ಕೃಷಿಯ ಬಗ್ಗೆ ನಾವು ಅವತ್ತಿನಿಂದ ಅಧಿಕೃತವಾಗಿ ಮಾತನಾಡಲು ಆರಂಭಿಸಿದೆವು- ಹಾಗೆಂದು ಇಂದಿನ ಕೃಷಿ ತಜ್ಞರು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಇದಕ್ಕಿಂತ ಮುನ್ನ ಭಾರತಕ್ಕೆ ಆಧುನಿಕ ಕೃಷಿಯ ಪರಿಚಯವನ್ನು ಮಾಡಿಸಿದ್ದೇ ನಾವೆಂದು ಹೇಳಿಕೊಳ್ಳುತ್ತಾರೆ ನಮ್ಮನ್ನು ಶತಮಾನಗಳ ಕಾಲ ದಬ್ಬಾಳಿಕೆಯಲ್ಲಿಟ್ಟಿದ್ದ ಬ್ರಿಟಿಷರು.

ನಮ್ಮಲ್ಲಿ ಇಂದಿಗೂ ಬಹುಪಾಲು ಕೃಷಿಯು ಮಳೆಯನ್ನೇ ನಂಬಿ ಸಾಗುತ್ತಿದೆ. ಕೃಷಿಕರು ಮಳೆಯನ್ನೇ ನಂಬಿಕೊಂಡು ವಾರ್ಷಿಕ ಚಟುವಟಿಕೆ ನಡೆಸುತ್ತಾರೆ. ಇದು ಎಂದಿನಿಂದಲೂ ಚಾಲ್ತಿಯಲ್ಲಿರುವ ಪದ್ಧತಿ. ಆಧುನಿಕ ಕೃಷಿಯಾದರೂ ಮಳೆಯೇ ನೀರಿಗೆ ಮೂಲಾಧಾರ. ನಮ್ಮ
ದೇಶಕ್ಕೆ ಆಧುನಿಕ ಕೃಷಿ ಬಂದಿದ್ದು ಬ್ರಿಟಿಷರಿಂದ ಎಂಬ ಸಾಮಾನ್ಯ ನಂಬಿಕೆಯಲ್ಲಿ ತಪ್ಪೇನೂ ಇಲ್ಲ ಬಿಡಿ. ಅಷ್ಟರ ಮಟ್ಟಿಗೆ ಈ ಜನಜೀವನದ ಮೇಲೆ ವಸಾಹತುಶಾಹಿ ಪರಿಣಾಮ ಬೀರಿತ್ತು.

ಅದೆಲ್ಲವನ್ನೂ ಬಿಟ್ಟು ಹಿಂದಕ್ಕೆ ಹೋದರೆ ಭಾರತಕ್ಕೆ ಕೃಷಿ ಎಂಬುದೇನೂ ಹೊಸತಲ್ಲ ಎಂಬುದಕ್ಕೆ ಹಲವು ನಿದರ್ಶನಗಳು ಸಿಗುತ್ತವೆ. ಸಿಂಧೂ ನದಿ ಕಣಿವೆ ನಾಗರಿಕತೆಯ (ಕ್ರಿ.ಪೂ. 3000-1500) ಅತಿ ದೊಡ್ಡ ಪ್ರದೇಶವಾದ ದೊಲರುವು ಎಂಬಲ್ಲಿ ಮುಂಗಾರು ಮಳೆ ನೀರನ್ನು ಸಂಗ್ರಹಿಸಲು ಬೇಕಾದ ಹಲವು ಜಲಾಶಯಗಳಿದ್ದ ಕುರುಹು ಕಂಡು ಬರುತ್ತದೆ. ಅತ್ಯುತ್ತಮವಾದ ನಾಲಾ ವ್ಯವಸ್ಥೆ ಯನ್ನೂ ಹೊಂದಿದ್ದವು. ಇನ್ನು ಬಾವಿಗಳು ಹರಪ್ಪಾ ಜನಾಂಗದ ಆವಿಷ್ಕಾರ ಎನ್ನುತ್ತದೆ ಚರಿತ್ರೆ.

ಆನಂತರದ್ದು ಕೌಟಿಲ್ಯನ ಕಾಲ. ಆತನ ಅರ್ಥಶಾಸದಲ್ಲಿ ಇಂದೇನು ಆಧುನಿಕ ಕೃಷಿ ಎಂಬುದನ್ನು ನಾವು ಗುರುತಿಸುತ್ತೇವೆಯೋ ಅದೆಲ್ಲ ತಂತ್ರಗಳ ಪ್ರಸ್ತಾಪವೂ ಇದೆ. ಒಟ್ಟಾರೆ ರಾಜಕೀಯ ಪ್ರಜ್ಞೆ ಮತ್ತು ಸಮುದಾಯದ ಭಾಗವಹಿಸುವಿಕೆಯಿಂದ ಸಾಗುವ ಸಮರ್ಥ ಜಲ
ಸಂರಕ್ಷಣಾ ಕ್ರಮಗಳು ಮಾತ್ರ ಭಾರತದ ಗ್ರಾಮೀಣ ಬಡತನ ನೀಗಿಸಲು ಸಾಧ್ಯ ಎಂದಿತ್ತು ಕೌಟಿಲ್ಯನ ಅರ್ಥಶಾಸ್ತ್ರ. ಇದು ಇಂದಿಗೂ ಅನ್ವಯವಾಗುತ್ತದಲ್ಲವೇ ? ಆದರೆ, ಲಭ್ಯವಿರುವ ಮಾಹಿತಿಗಳ ಪ್ರಕಾರ, ವೈಜ್ಞಾನಿಕ ವಿಧಾನದಲ್ಲಿ ಕೃಷಿ ಚಟುವಟಿಕೆ ನಡೆಸುವ ಪದ್ಧತಿ 4ನೇ ಶತಮಾನದಲ್ಲಿಯೇ ಜಾರಿಯಲ್ಲಿತ್ತು. ಕೌಟಿಲ್ಯ ಅರ್ಥಶಾಸ್ತ್ರ ಬರೆಯುವುದಕ್ಕೂ ಮುನ್ನವೇ ಆಧುನಿಕ ವಿಧಾನದಲ್ಲಿ ಕೃಷಿ ಮಾಡಲಾಗು ತ್ತಿತ್ತು.

ಅದಕ್ಕೆ ಪಿತಾಮಹ ಎನಿಸಿದವನು ಪರಾಶರ. ಆತನಿಗೆ ಮಳೆ ಹಾಗೂ ಅದರಿಂದ ನಡೆಯುವ ಕೃಷಿಯ ಬಗ್ಗೆ ಸ್ಪಷ್ಟ ಕಲ್ಪನೆಯಿತ್ತು. ಕೃಷಿ ಹಾಗೂ ಮಳೆ ಒಂದಕ್ಕೊಂದು ಗಾಢವಾಗಿ ಬೆಸೆದುಕೊಂಡಿವೆ ಎಂದು ಅವನು ಹೇಳುತ್ತಾನೆ. ‘ಕೃಷಿ ಪರಾಶರ’ ದ ಕುರಿತು ವಿದ್ವಾನ್ ಉಮಾಕಾಂತ್ ಭಟ್ ಹಾಗೂ ಡಾ. ಮಧುಸೂದನ ಅಡಿಗ ಅವರು ಅತ್ಯಮೂಲ್ಯ ಕೃತಿಯನ್ನೇ ಕನ್ನಡದಲ್ಲಿ ಹೊರತಂದಿದ್ದಾರೆ.

ಕೃತಿಯ ಆರಂಭವೇ ಹೀಗಿದೆ:
ಪ್ರಜಾಪತಿಂ ನಮಸ್ಕೃತ್ಯ ಕೃಷಿಕರ್ಮವಿವೇಚನಮ್|
ಕೃಷಕಾಣಾಂ ಹಿತಾರ್ಥಾಯ ಬ್ರೂತೇ ಋಷಿಪರಾಶರಃ||

ಸೃಷ್ಟಿಕರ್ತನಾದ ಬ್ರಹ್ಮಬನಿಗೆ ನಮಸ್ಕಾರ ಮಾಡಿ ಮುನಿ ಪರಾಶರನು ಕೃಷಿಕರ ಅನುಕೂಲಕ್ಕಾಗಿ ಕೃಷಿಕಾರ್ಯದ ವಿಶಿಷ್ಟ ಪರಿಚಯವನ್ನು ಕೊಡುವ ಗ್ರಂಥವನ್ನು ರಚಿಸಿದ್ದಾನೆ. ಇದು ಋಷಿಗಳ ಶೈಲಿ. ತಾವೇ ಸ್ವತಃ ಗ್ರಂಥವನ್ನು ರಚಿಸುತ್ತ ಇದ್ದರೂ ಮೂರನೇ ವ್ಯಕ್ತಿ ಬರೆದಂತೆ ಅದನ್ನು ಉಲ್ಲೇಖಿಸುತ್ತಾರೆ. ಕೃಷಿಕರ ಹಿತಕ್ಕಾಗಿ ಕೃಷಿಕಾರ್ಯದ ವಿವೇಚನೆಯನ್ನು ಮಾಡುವುದಾಗಿ ಗ್ರಂಥಕಾರನೇ ಹೇಳಿದ್ದಾನೆ. ವಿಸ್ತಾರ ವಾಗಿ ವೃಷ್ಟಿ ಜ್ಞಾನ , ಕೃಷಿಪರಿಕರಗಳ ಪೂರ್ವರಂಗ , ಕೃಷಿ ಪ್ರಕ್ರಿಯೆ ಬೆಳೆ, ಸುಗ್ಗಿ ಬೆಳೆ ಸಂರಕ್ಷಣೆ ಮೊದಲಾದ ವಿಷಯಗಳನ್ನೂ ನಿರೂಪಿಸುತ್ತಾನೆ ಪರಾಶರ.

ಇಷ್ಟಕ್ಕೂ ಪರಾಶರ ಅಂದರೆ ಯಾರು? ಸಂಸ್ಕೃತ ವ್ಮಾದ ಬೇರೆ ಬೇರೆ ಕ್ಷೇತ್ರಗಳಲ್ಲಿ ಪರಾಶರ ಎಂಬ ಹೆಸರು ಪ್ರಸಿದ್ಧವಾಗಿದೆ. ಪುರಾಣ ಪ್ರಸಿದ್ಧ ಪರಾಶರ ವಸಿಷ್ಠರ ಮಗನಾದ ಶಕ್ತಿಯ ಪುತ್ರ ಕೃಷ್ಣ ದ್ವೈಪಾಯನ ವ್ಯಾಸರ ತಂದೆ. ಸ್ಮೃತಿಕಾರರಲ್ಲಿ ಪರಾಶರ ಒಬ್ಬ. ಆತನ ಸ್ಮೃತಿ ಈ ಕಲಿಯುಗದಲ್ಲಿ ಪ್ರಧಾನವಾಗಿದೆ.

‘ಕಲೌ ಪರಾಶರೀ ಸ್ಮೃತಿಃ – ಕಲಿಯುಗದಲ್ಲಿ ಪರಾಶರರ ಸ್ಮೃತಿ ಮುಖ್ಯ.’ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಪರಾಶರನನ್ನು ಆರ್ಚಾರರ ಸ್ಥಾನದಲ್ಲಿ ಉಲ್ಲೇಖಿಸಲಾಗಿದೆ. ಜ್ಯೋತಿರ್ವಿದರಲ್ಲಿಯೂ ವೃಕ್ಷಾಯುರ್ವೇದ ಪರಿತರಲ್ಲಿಯೂ, ಪ್ರಮುಖವಾಗಿ ಪರಾಶರನನ್ನು ಪರಿಗಣಿಸಿ ವರಾಹಮಿಹಿರನೂ ಗೌರವಿಸುತ್ತಾನೆ. ಕೃಷಿಶಾಸ್ತ್ರದಲ್ಲಿ ಮೂವರು ಋಷಿಗಳು ಪ್ರವರ್ತಕರೆಂಬ ಪ್ರಶಂಸೆಗೆ ಪಾತ್ರರು. ಅವರು ಕಾಶ್ಯಪ, ಗರ್ಗ ಮತ್ತು ಪರಾಶರ. ಅವರಲ್ಲಿ ಪರಾಶರನಿಗಿರುವ ಪ್ರಾಶಸ್ತ್ಯ ಉಳಿದವರಿಗಿಲ್ಲ.

ಪರಾಶರನ ಹೆಸರಿನಲ್ಲಿ ಈಗ ಲಭ್ಯ ಗ್ರಂಥಗಳು ಎರಡೇ. ಅವು ಪರಾಶರ ಸ್ಮೃತಿ ಮತ್ತು ಕೃಷಿ ಪರಾಶರ, ಕೃಷಿಪರಾಶರವು ಮುದ್ರಿತವಾದ ರೂಪದಲ್ಲಿ ಸಿಗುತ್ತಿದೆ. ಇದನ್ನು 1960ರಲ್ಲಿ ಏಶಿಯಾಟಿಕ್ ಸೊಸೈಟಿಯ ವತಿಯಿಂದ ಮುದ್ರಿಸಲಾಗಿದೆ. ಕೃಷಿಪರಾಶರದ ಕರ್ತೃವಿನ
ಕಾಲ ವನ್ನು ಕ್ರಿ.ಶ. ನಾಲ್ಕನೇ ಶತಮಾನದಿಂದ ಕ್ರಿ.ಶ.ಆರನೇ ಶತಮಾನದವರೆಗೂ ವಿಭಿನ್ನವಾಗಿ ಗುರುತಿಸಲಾಗಿದೆ.

ಗ್ರಂಥದಲ್ಲಿ ಬಳಸಲಾದ ಭಾಷೆ, ಪ್ರಾದೇಶಿಕ ಆಚರಣೆಗಳು ಇತ್ಯಾದಿಗಳ ಆಧಾರದಲ್ಲಿ ಪರಾಶರ ಇಂದಿನ ಬಂಗಾಲದವನಿರಬಹುದೆಂದು ಹೇಳಲಾಗಿದೆ. ಸುಮಾರು ಒಂದು ಸಾವಿರದ ಐದು ನೂರು ವರ್ಷಗಳಿಂದ ಈ ಗ್ರಂಥವು ಭಾರತದ ಕೃಷಿಪ್ರಜ್ಞೆಯನ್ನು ಕುದುರಿಸಿ,
ಕಾಪಾಡಿ, ಬೆಳಗಿಸುತ್ತ ಇರುವುದು ಇದರ ಹಿರಿಮೆಯಷ್ಟೆ!

ಕೃಷಿಕ ಅಜ್ಞಾನಿಯಾಗಬಾರದು. ಅವನು ಕೃಷಿಗೆ ಅನುಕೂಲವಾಗುವ ತಂತ್ರಗಳನ್ನೂ, ಕೌಶಲಗಳನ್ನೂ ಪರಂಪರೆ, ಸ್ವಯಂಪರೀಕ್ಷೆ ಮತ್ತುಗ್ರಂಥಗಳಿಂದ ತಿಳಿದುಕೊಂಡು ಕೃಷಿಯಲ್ಲಿ ತೊಡಗಬೇಕು. ಅವನು ಆಲಸಿಯಾಗಬಾರದು. ಕೃಷಿ ಫಲವನ್ನು ಕೊಡುವುದಾ ದರೂ ಅದು ಕೃಷಿಕನ ಪರಿಶ್ರಮ, ಪ್ರಕೃತಿಯ ಆನುಕೂಲ್ಯ, ಇತರ ಪ್ರಾಣಿ ಮತ್ತು ವಸ್ತುಗಳ ಸಹಕಾರ, ದೈವಾನುಗ್ರಹ ಮೊದಲಾದ ನಾನಾ
ಅಂಶಗಳನ್ನು ಅಪೇಕ್ಷಿಸುತ್ತದೆ. ಇದನ್ನೆಲ್ಲ ಅರ್ಥಮಾಡಿಕೊಂಡು, ಆಸ್ತಿಕನಾಗಿಯೂ, ದಯಾಳುವಾಗಿಯೂ ಕೃಷಿಕನು ವಿಶ್ವಾಸದಿಂದ ವ್ಯವಸಾಯದಲ್ಲಿ ತೊಡಗಿಕೊಳ್ಳಬೇಕು. ಈ ಹಿನ್ನೆಲೆಯಿಂದ ಕೃಷಿಕನಿಗೆ ಕೈಪಿಡಿಯಾಗಿ ಒದಗುವ ಗ್ರಂಥ ಕೃಷಿಪರಾಶರ.

ಕೃಷಿಪರಾಶರವು ಎರಡುನೂರ ನಲವತ್ತಮೂರು ಕಾರಿಕೆಗಳಿಂದ ಕೂಡಿದ ಲಘುಗ್ರಂಥವಾದರೂ ಪ್ರತ್ಯೇಕವಾದ ಶೀರ್ಷಿಕೆಗಳೊಡನೆ ಮೂವತ್ತಾರು ಉಪವಿಭಾಗಳಲ್ಲಿ ಧಾನ್ಯಕೃಷಿಯನ್ನು ವಿಶದವಾಗಿ ನಿರೂಪಿಸುತ್ತಿದೆ. ಇದು ವಿಷಯ ನಿರೂಪಣೆಗೆ ಕೃಷಿಯ ಪೂರ್ವಸಿದ್ಧತೆ, ನಿರ್ವಹಣೆ ಮತ್ತು ಫಲಪ್ರಾಪ್ತಿ ಎಂಬ ಸೂತ್ರವನ್ನು ಅನುಸರಿಸಿದಂತಿದೆ.

ಅವನು ಮಳೆಯನ್ನು ವಿಶ್ಲೇಷಿಸುವುದು ಹೀಗೆ… ನೀರಾವರಿ ವ್ಯವಸ್ಥೆ ಹೊಂದಿರುವ ಕೃಷಿಭೂಮಿಯಾದರೂ ಅಂತಿಮವಾಗಿ ಅದಕ್ಕೆ ಮಳೆಯೇ ಬೇಕು. ಬಾಯೇ ಆಗಲಿ, ಕೊಳವೆ ಮಾರ್ಗವೇ ಆಗಲಿ, ಈ ನೀರಿನ ಮೂಲಗಳನ್ನು ತುಂಬಲು ಮಳೆ ಅಗತ್ಯ. ಕೃಷಿಯ ಪ್ರಾಥಮಿಕ ಅಗತ್ಯವೆಂದರೆ ಮಳೆ. ಹೀಗಾಗಿ ಮಳೆಯ ಬಗ್ಗೆ ಸಮಗ್ರ ಮಾಹಿತಿ ಅರಿಯುವುದು ಮುಖ್ಯ. ಈ ರೀತಿಯಲ್ಲಿ ವೇದ ಕಾಲದ ಜನರು ಅನುಸರಿಸುತ್ತಿದ್ದ ಯಾಗ ಪದ್ಧತಿಗಳಿಂದ ಒಂದು ಹೆಜ್ಜೆ ಆತ ಮುಂದೆ ಹೋಗುತ್ತಾನೆ.

ಪ್ರತಿಯೊಬ್ಬರೂ ಮಳೆಯ ಬಗ್ಗೆ ಕನಿಷ್ಠ ಜ್ಞಾನ ಹೊಂದಿರಬೇಕು. ಒಂದು ವರ್ಷದಲ್ಲಿ ಆಯಾ ಪ್ರದೇಶದಲ್ಲಿ ಬೀಳುವ ಮಳೆ, ನಕ್ಷತ್ರ, ರಾಶಿಗಳ
ಚಲನೆಯಿಂದ ಮಳೆಯ ಮೇಲಾಗುವ ಪರಿಣಾಮಗಳ ಬಗ್ಗೆ ಅರಿವು ಅಗತ್ಯ. ಕ್ಷಾಮ ಅಥವಾ ಅತಿವೃಷ್ಟಿ ಉಂಟಾಗುವುದಕ್ಕೂ, ಅಕಾಲಿಕ ಮಳೆ ಬೀಳುವುದಕ್ಕೂ ಇವುಗಳಿಗೂ ಸಂಬಂಧವಿದೆ. ಪರಾಶರನ ಕಾಲದಲ್ಲಿ ಜ್ಯೋತಿಷ್ಯಶಾಸ್ತ್ರ, ಗ್ರಹಗಳ ಚಲನೆಯ ಬಗ್ಗೆ ಹೆಚ್ಚು ಹೆಚ್ಚು ಅಧ್ಯಯನಗಳನ್ನು ಮಾಡಿ ಹೆಚ್ಚು ಆಳವಾಗಿ ಅರ್ಥೈಸಿಕೊಳ್ಳಲಾಯಿತು.

ಪರಾಶರ ಇದರಲ್ಲಿ ಇನ್ನೂ ಸಾಕಷ್ಟು ಮುಂದೆ ಸಾಗುತ್ತಾನೆ. ಗ್ರಹಗಳ ಸುತ್ತುವಿಕೆ, ಮುಖ್ಯ ಗ್ರಹದ ಚಲನೆ ಇತ್ಯಾದಿಗಳ ಮೂಲಕ ವಾರ್ಷಿಕ
ಮಳೆಮೋಡಗಳನ್ನು ಅಂದಾಜಿಸಬಹುದು ಎಂಬುದು ಆತನ ಪ್ರತಿಪಾದನೆ. ಇದನ್ನು ಕಂಡುಡಿಯಲು ಆತ ಅನುಸರಿಸುತ್ತಿದ್ದ ಪದ್ಧತಿಯೂ ಸರಳವಾಗಿತ್ತು- ಶಕ ವರ್ಷದಲ್ಲಿ ರಚಿಸಲಾದ ಸಂಖ್ಯಾಪದ್ಧತಿ ಹಾಗೂ ಕೆಲವು ಸರಳ ಗಣಿತದ ಪದ್ಧತಿಗಳನ್ನು ಆತ ಅನುಸರಿಸುತ್ತಿದ್ದ.
ತಿಂಗಳಾನುಸಾರ ಮಳೆ ಸುರಿದ ಪ್ರಮಾಣವನ್ನು ಅಂದಾಜಿಸುವುದು. ಅವನ ಮಳೆಯ ಲೆಕ್ಕಾಚಾರ ಪುಷ್ಯ ಮಾಸ(ಜನವರಿ)ದಿಂದ ಆರಂಭ ವಾಗಿ ಆಗಸ್ಟ್ (ಶ್ರಾವಣ)ದವರೆಗೂ ಮುಂದುವರಿಯುತ್ತಿತ್ತು. ಅವನ ಲೆಕ್ಕದಲ್ಲಿ ಪ್ರತಿ ದಿನದ ಮಳೆಯನ್ನೂ ಅಳೆಯುವುದು ಮುಖ್ಯ.

ಗಾಳಿ ಆಡುವ ವಾತಾವರಣದಲ್ಲಿ ಒಂದು ಎತ್ತರದ ಕೋಲನ್ನು ನಿಲ್ಲಿಸಿ, ಅದಕ್ಕೆ ಬಟ್ಟೆಯನ್ನು ಕಟ್ಟಿ ಗಾಳಿ ಬೀಸುವ ದಿಕ್ಕು, ಅದರ ವೇಗವನ್ನು ಅಂದಾಜಿಸುತ್ತಿದ್ದ. ವೈಶಾಖ (ಮೇ)ತಿಂಗಳನ್ನು ಹೆಚ್ಚು ನಿಖರವಾಗಿ ಅಧ್ಯಯನ ಮಾಡುವುದು. ನದಿಯಲ್ಲಿನ ನೀರಿನ ಪ್ರಮಾಣವನ್ನೂ ಸಹ ಕೆಲವು ಸಲಕರಣೆಗಳ ಸಹಾಯದಿಂದ ಅಳೆದುಕೊಳ್ಳುವುದು.

ಗ್ರಹಗಳ ಚಲನೆಯನ್ನು ಖಗೋಲಜ್ಞಾನ ರೀತ್ಯಾ ಅಂದಾಜಿಸುವುದು. ಇದು ಕೂಡ ಮಳೆಯ ಲೆಕ್ಕಾಚಾರಕ್ಕೆ ನೆರವಾಗುತ್ತದೆ. ಸೂರ್ಯ ಮೇಷ ರಾಶಿಗೆ ಪ್ರವೇಶಿಸಿದಾಗ ನಕ್ಷತ್ರಗಳ ಚಲನೆ. ಇದಕ್ಕಾಗಿ ಆತನದ್ದು ಪ್ರತ್ಯೇಕ ಒಂದು ಚಾರ್ಟ್ ಇತ್ತು. ವರ್ಷದಲ್ಲಿ ಹಗಲು, ರಾತ್ರಿಗಳು ಸಮನಾಗಿರುವ ದಿವಸ (ಈಕ್ವಿನಾಕ್ಸ್)ಗಳನ್ನು ಲೆಕ್ಕ ಹಾಕಿಕೊಳ್ಳುವುದು. ಭತ್ತ ಬೆಳೆಯುವ ಗದ್ದೆಗಳಲ್ಲಿ ಸಣ್ಣ ಸಣ್ಣ ತೆಮರುಗಳನ್ನು ನಿಸಿಕೊಂಡು ನೀರು ನಿಲ್ಲಿಸಿಕೊಳ್ಳಬೇಕೆಂದು ಆಗಲೇ ಆತ ಹೇಳಿದ್ದ.

ಪ್ರವಾಹದಲ್ಲಿ ಭತ್ತದ ಗದ್ದೆ ಕೊಚ್ಚಿ ಹೋಗದಂತೆ ಸೂಕ್ತ ಕಾಲುವೆ ಮಾರ್ಗವನ್ನೂ ಆತ ಸೂಚಿಸುತ್ತಾನೆ. ಮಳೆ ನೀರು ಕೊಯ್ಲು ಮಾಡುವ ಪದ್ಧತಿಯೂ ನಿಖರವಾಗಿತ್ತು. ಏಕೆಂದರೆ, ಆಶ್ವೀಜ (ಸಾಮಾನ್ಯವಾಗಿ ಅಕ್ಟೋಬರ್) ಹಾಗೂ ಕಾರ್ತೀಕ (ನವೆಂಬರ್) ತಿಂಗಳೊಳಗೆ ಮಳೆ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎನ್ನುತ್ತಾನೆ ಆತ. ಮಾರುತಗಳು ಹಿಂದೆ ಸರಿಯುವ ಕಾಲ ಅದು ಎಂದು ಬಣ್ಣಿಸುತ್ತಾನೆ. ಆದರೆ, ದುರದೃಷ್ಟವಶಾತ್ ಮಳೆನೀರು ಕೊಯ್ಲು ಪದ್ಧತಿ ಹಾಗೂ ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಆತ ವರಿಸಿಲ್ಲ. ಅದನ್ನು ವರಿಸಿದ್ದರೆ ಇಂದಿನ ಕಾಲಕ್ಕೆ ಅದೊಂದು ಅಮೂಲ್ಯ ಮಾರ್ಗದರ್ಶಿಯಾಗಿ ಪರಿಣಮಿಸುತ್ತಿತ್ತೋ ಏನೋ !

ಬೆಳೆ ಬೆಳೆಯಲು ನೀರು ಸಂಗ್ರಹ ಎಂಬ ಮಾತನ್ನು ಆತ ಸ್ಪಷ್ಟವಾಗಿ ಉಲ್ಲೇಖಿಸುತ್ತಾನೆ. ಮಳೆಯನ್ನು ಆತ ಎಷ್ಟು ನಿಖರವಾಗಿ ಅಳೆದಿದ್ದ
ಎಂದರೆ, ಮಳೆ ಇಂತಿಷ್ಟೇ ಪ್ರಮಾಣದಲ್ಲಿ ಹಂಚಿಹೋಗುತ್ತದೆ ಎಂದಿದ್ದ. ಅವನ ಪ್ರಕಾರ, ಸುರಿದ ಮಳೆಯಲ್ಲಿ ಶೇ. 50ರಷ್ಟು ಭಾಗ ಸಮುದ್ರಕ್ಕೆ, ಶೇ.30ರಷ್ಟು ಪರ್ವತ ಪ್ರದೇಶಕ್ಕೆ, ಶೇ.೨೦ರಷ್ಟು ಭೂಮಿಗೆ ಹಂಚಿ ಹೋಗುತ್ತದೆ. ಆದ್ದರಿಂದ ಶೇ.20ರಷ್ಟು ಮಳೆಯಲ್ಲೇ ಕೃಷಿ ನಡೆಸಲು ಕೃಷಿಕರು ಪ್ಲಾನ್ ಮಾಡಿಕೊಳ್ಳಬೇಕು ಎಂದು ಸಹ ಸಲಹೆ ನೀಡಿದ್ದ.

ಇಂದಿಗೂ ಎಷ್ಟು ಸಮುಚಿತವಾದ ಸಲಹೆ ಅಲ್ಲವೆ ? ಮಳೆ ಕಾಲವನ್ನು ಅಧ್ಯಯನ ಮಾಡುತ್ತಲೇ ಆತ ಹವಾಮಾನ ಮುನ್ಸೂಚನೆ ಮಾಡುವ ಪದ್ಧತಿಗೂ ನಾಂದಿ ಹಾಡಿದ್ದ ಎನ್ನುವುದನ್ನು ಹೇಳುವುದೇ ಬೇಡ. ಆತನ ಮಾದರಿಯನ್ನು ಸೂಕ್ತ ತಂತ್ರಜ್ಞಾನ ಸುಧಾರಣೆ ಗಳೊಂದಿಗೆ ಅಳವಡಿಸಿದರೆ, ನಮ್ಮ ಹವಾಮಾನ ಇಲಾಖೆ ನೀಡುವ ವರದಿಗೆ ಇನ್ನಷ್ಟು ನಿಖರತೆ ಬರುತ್ತದೆಯೋ ನೋಡಬೇಕು.

ಪಾಪ, ಪುಣ್ಯಗಳ ದೃಷ್ಟಿಯಿಂದ ಮಳೆಯನ್ನು ನೋಡುವ ವಿಧಾನವನ್ನು ಪ್ರಮಾಣಬದ್ಧ ಅಧ್ಯಯನವಾಗಿ ಆತನೇ ಮಾರ್ಪಡಿಸಿದ್ದು. ಇಂದು
ಪರಾಶರ ನೀಡಿದ ಹಲವಾರು ಅಧ್ಯಯನ ಶಿಸ್ತುಗಳು ಕಳೆದೇ ಹೋಗಿವೆ, ಕೆಲವು ಉಳಿದುಕೊಂಡಿವೆ. ಉಳಿದುದು ಅಳಿಯದಂತೆ ನೋಡಿಕೊಂಡರೆ ನಾವು ಜಲಸಂಪನ್ನರಾದೇವು.