Saturday, 23rd November 2024

ಬಿಸಿಲು ಏರಿದಾಗ ಬಿಸ್ಲೇರಿ; ಬೆವರು ಬಂದಾಗ ಬೆವರೇಜ್‌ !

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ವಿದ್ಯಾರ್ಥಿಗೆ ಪರೀಕ್ಷೆಯ ‘ಜ್ವರ’ದಲ್ಲಿ, ಯಾವ್ಯಾವ ಪ್ರಶ್ನೆಗಳನ್ನು ಎದುರಿಸಬೇಕಾಗಬಹುದು ಎಂಬ ತಳಮಳದ ಬೆವರು ಸುರಿಸು ವುದು ಈ ಗ್ರಂಥಿಗಳು. ಪ್ರೇಮ‘ಜ್ವರ’ದಲ್ಲಿ ಮನಸೆಳೆದ ನಲ್ಲ ಕಿವಿಯಲಿಂಚರ ನುಡಿಯುವಾಗ ನಲ್ಲೆಯ ಹಣೆಯ ಮೇಲೆ ಬೆವರಿ ನುಂಗುರ ಮೂಡಿಸುವವೂ ಅವೇ ಗ್ರಂಥಿಗಳು. ಅದೊಂದು ರೀತಿ ತನ್ಮಯತೆಯ, ತೀವ್ರಾಪೇಕ್ಷೆಯ ಬೆವರು!

ಅದು ವಂಡರ್‌ಕಣ್ಣಿನ ಪನ್‌ಡಿತ ವೈಎನ್‌ಕೆ ಅವರ ಪ್ರಖ್ಯಾತ ಪನ್‌ಗಳಲ್ಲೊಂದು. ಅದನ್ನು ಅವರು ಭಾರತವಾಸಿ ಭಾರತೀಯರ ಬಗ್ಗೆಯೇ ಹೇಳಿದರೋ ಅಥವಾ ಅಮೆರಿಕ/ಯುರೋಪ್‌ನಂತಹ ತಂಪು ಪ್ರದೇಶಗಳಲ್ಲಿ ಜೀವನ ಅಭ್ಯಾಸವಾಗಿ ಭಾರತಕ್ಕೆ ಭೇಟಿ ಯಿತ್ತಾಗ ಸ್ಟೈಲ್  ಮಾಡುವ ಅನಿವಾಸಿ ಭಾರತೀಯರ ಬಗ್ಗೆ ಹೇಳಿದರೋ ಗೊತ್ತಿಲ್ಲ.

ಹಾಗಂತ ಉತ್ಪ್ರೇಕ್ಷೆ ಏನಲ್ಲ, ಸತ್ಯಾಂಶ ಇರುವ ಮಾತೇ. ವೈಎನ್‌ಕೆ ಅವರ ಪನ್ ಮತ್ತೊಮ್ಮೆ ನೆನಪಿಸುವಂತೆ ಮಾಡಿದ್ದು ಮೊನ್ನೆ ವಿಶ್ವವಾಣಿಯ ಮುಖಪುಟದಲ್ಲಿ ವ್ಯಂಗ್ಯಚಿತ್ರಕಾರ ರಘುಪತಿ ಶೃಂಗೇರಿ ಅವರು ಚಿತ್ರಿಸಿದ ಫನ್‌ತರಂಗ ಕಾರ್ಟೂನ್. ‘ರಾಜ್ಯ
ದಲ್ಲಿ ಏರುತ್ತಿದೆ ಬಿಸಿಲ ಧಗೆ’ ಎಂಬ ಸುದ್ದಿಯ ಹಿನ್ನೆಲೆ; ಅಲ್ಲಿ ಬಿಸಿಲ ಧಗೆಗೆ ಸೂರ್ಯನೇ ಬೆವರುತ್ತಿರುವ, ಭೂಮಿಯ ಮೇಲಿನ (ಬೆಂಗಳೂರಿನ ಯಾವುದೋ ಬೀದಿಯವನಿರ ಬಹುದು) ವ್ಯಾಪಾರಿಯೊಬ್ಬನ ಬಳಿ ಎಳ್ನೀರು ಕೊಂಡು ಉದ್ದನೆಯ ಸ್ಟ್ರಾ ಮೂಲಕ ಎಳ್ನೀರು ಕುಡಿಯುತ್ತಿರುವ ದೃಶ್ಯ! ಎಳ್ನೀರು ಅನ್ನೋದಕ್ಕಿಂತಲೂ ತುಳು ಭಾಷೆಯಲ್ಲಿ ‘ಬೊಂಡ’ ಅಂತಂದ್ರೆ ಒಳ್ಳೇದು.

‘ಬೆವರಿಳಿದ ಬಾನಿನೊಡೆಯನಿಗೆ ಬುವಿಯಿಂದ ಬೊಂಡ ಬೆವರೇಜು’ ಅಂತ ಎಲ್ಲಿಟರೇಟಿವ್ ಕ್ಯಾಪ್ಷನ್ ಒಂದು ನನಗೆ ಹೊಳೆ ಯಿತು ಆ ವ್ಯಂಗ್ಯಚಿತ್ರವನ್ನು ನೋಡಿ. ಅಷ್ಟೇಅಲ್ಲ, ಸೂರ್ಯನೇ ಬೆವರಿದ್ದಾನೆಂದ ಮೇಲೆ ಬೆವರಿನ ಬಗ್ಗೆಯೇ ಒಂದು ಅಕ್ಷರ ತೋರಣ ಕಟ್ಟಬಾರದೇಕೆ ಎಂಬ ಐಡಿಯಾ ಕೂಡ. ಅಕ್ಷಯತದಿಗೆ ಯವರೆಗೂ ಕಾಯುವುದು ಬೇಡ ಇಂದೇ ಅದಕ್ಕೆ ಒಳ್ಳೆಯ
ಮುಹೂರ್ತ. ಚಾಂದ್ರಮಾನ ಗಣನೆಯ ಪ್ರಕಾರ ವೈಶಾಖ ಮಾಸ ಆರಂಭ.

ಹೆಸರಲ್ಲೇ ಶಾಖ ಇದೆಯೆಂದಮೇಲೆ ಬಿಸಿಲ ಬೇಗೆ ಇರಬೇಕಾದ್ದೇ. ಬೆವರು ಇಳಿಯಬೇಕಾದ್ದೇ. ಹಾಗಾಗಿ, ‘ಬೆಳುವಲದ ಮಡಿಲಲ್ಲಿ ಬೆವರಹನಿ ಬಿದ್ದಾಗ ಒಂದೊಂದು ಬೆವರ ಹನಿ ಮುತ್ತಾಯ್ತದೋ…’ ಎಂಬ ಚಿತ್ರಗೀತೆಯ ಸಾಲನ್ನೂ ನೆನಪಿಸಿಕೊಂಡು ಇಂದಿನ ಅಂಕಣದಲ್ಲಿ ‘ಒಂದೊಂದು ಬೆವರ ಹನಿ ಅಕ್ಷರವಾಯ್ತದೋ…’ ನಾವೆಲ್ಲರೂ ಬೆವರುತ್ತೇವೆ, ಆದರೆ ಹಾಗೆ ಹೇಳಿಕೊಳ್ಳಲು ಇಷ್ಟ ಪಡುವುದಿಲ್ಲ ಅಷ್ಟೇ.

ಇಂಗ್ಲಿಷ್‌ನಲ್ಲೊಂದು ನುಡಿಗಟ್ಟು ಇದೆ- Horses sweat, men perspire, and women glow ಎಂದು. ಬೆವರುವುದೇನಿದ್ದರೂ ಕುದುರೆ ಮತ್ತು ಇತರ ಪ್ರಾಣಿಗಳು ಮಾತ್ರ. ಗಂಡಸರು ಬೆವರುವುದಲ್ಲ ಅದು ಅವರ ಶ್ರಮಧಾರೆ. ಹೆಂಗಸರಿಗಂತೂ ಬೆವರು ಏನೆಂದೇ ಗೊತ್ತಿಲ್ಲ, ಅವರಿಗೆ ಬೆವರು ಬಂದರೂ ಅದು ಮೈಕಾಂತಿ (ಅಥವಾ ಹಾಗೊಂದು ಭ್ರಾಂತಿ)! ಅಂದ ಹಾಗೆ ಪ್ರಾಣಿಗಳ ಪೈಕಿ ಕುದುರೆಗಳಿಗೆ ಅತ್ಯಧಿಕ ಬೆವರು ಬರುವುದು ಹೌದಂತೆ. ಕುದುರೆಯ ಬೆವರು ‘ಲ್ಯಾದರಿನ್’ ಎಂಬ ವಸ್ತು, ಮೈಯನ್ನು ತಂಪಾಗಿರಿ ಸುವುದಲ್ಲದೆ ಒಂಥ ರ ಡಿಟರ್ಜೆಂಟ್ ನಂತೆ ಕೆಲಸ ಮಾಡುತ್ತದಂತೆ. ಆದ್ದರಿಂದಲೇ ಕುದುರೆಯ ಮೈ ಲಕಲಕ ಹೊಳೆಯುತ್ತಿರು ತ್ತದೆ.

ನೀರು ಕುದುರೆ (ಹಿಪೊಪೊಟಾಮಸ್), ಮಂಗ, ಗೊರಿಲ್ಲಾ ಇತ್ಯಾದಿಯೂ ಬೆವರುತ್ತವೆ. ಸ್ವಲ್ಪೇಸ್ವಲ್ಪ ಪ್ರಮಾಣದಲ್ಲಿ ಬೆಕ್ಕು-ನಾಯಿ ಕೂಡ. ಮೂಗಿನ ಹೊಳ್ಳೆಗಳ ಬಳಿ ಮಾತ್ರ ಬೆವರುವ ಹಸು-ಎಮ್ಮೆ ಕೂಡ. ಇರಲಿ, ಈ ಹರಟೆಯನ್ನು ಪ್ರಾಣಿಗಳ ಬೆವರಿಗಿಂತ ಮನುಷ್ಯರ ಬೆವರಿಗಷ್ಟೇ ಸೀಮಿತಗೊಳಿಸೋಣ. ಮುಖ್ಯವಾಗಿ ಗಮನಿಸಬೇಕಾದ್ದೇನೆಂದರೆ, ಬೆವರು ಸುರಿಸಿ ಕಷ್ಟ ಸಹಿಸಿ ಒಂದೇ ಸಮನೆ ದುಡಿಯುವ ಅನ್ನದಾತ ರೈತನ ಶ್ರಮವನ್ನು ನಾವು ಗುರುತಿಸುತ್ತೇವೆ; ಅಥವಾ ‘ನಾನಿವತ್ತು ಈ ಸುಸ್ಥಿತಿಯಲ್ಲಿದ್ದೇನಾದರೆ ಅದು ನಮ್ಮಪ್ಪ ಸುರಿಸಿದ ಬೆವರಿನ ಫಲ, ನನ್ನನ್ನು ಹೊತ್ತು ಹೆತ್ತು ಸಾಕಿ ಸಲಹಿದ ಅಮ್ಮನ ಒಂದೊಂದು ಬೆವರ ಹನಿಯೇ ಈವತ್ತು ನಾನು ನಾನಾಗಿರುವುದರ ಕಾರಣ…’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ.

ಭಾವನಾತ್ಮಕವಾಗಿ ಆಪ್ಯಾಯಮಾನವಾಗುವ ಬೆವರು ಭೌತಿಕವಾಗಿ ನಮಗೆ ಕೊಂಚ ಮುಜುಗರ ತರಿಸುತ್ತದೆ. ಬೆವರುತ್ತೇವೆ ಎಂಬ ಕಲ್ಪನೆಗೆ ನಾವು ಹಿಂಜರಿಯುತ್ತೇವೆ. ಕೆಲವರು ಅದರಿಂದಲೇ ಕೀಳರಿಮೆ ತಂದುಕೊಳ್ಳುವುದೂ ಇದೆ. ವಾಸ್ತವ ಹಾಗಿಲ್ಲ. ಕೆಲವರು ಹೆಚ್ಚು ಇನ್ನು ಕೆಲವರು ಕಡಿಮೆ ಬೆವರುತ್ತಾರೆ ಎಂಬುದನ್ನು ಬಿಟ್ಟರೆ ಎಲ್ಲರೂ ಬೆವರುತ್ತಾರೆ, ಬೆವರಲೇಬೇಕು- ಎನ್ನುತ್ತದೆ ವಿಜ್ಞಾನ. ಶ್ವಾಸೋಚ್ಛ್ವಾಸ ಹೃದಯ ಬಡಿತಗಳಷ್ಟೇ ನೈಸರ್ಗಿಕವೂ ಅತ್ಯಾವಶ್ಯಕವೂ ಆದುದು ನಮ್ಮ ಶರೀರವು ಬೆವರುವ ಪ್ರಕ್ರಿಯೆ. ಗಂಡಸರಲ್ಲೂ ಹೆಂಗಸರಲ್ಲೂ ಸಮಾನವಾಗಿ, ಶರೀರದ ಒಂದೊಂದು ಚದರ ಸೆಂಟಿಮೀಟರ್‌ನಲ್ಲೂ ಸುಮಾರು 150ರಿಂದ 300ರವರೆಗೆ ಸ್ವೇದಗ್ರಂಥಿಗಳು ಇರುತ್ತವೆ.

ನಮ್ಮ ಶರೀರದ ತಾಪಮಾನ ನಿಯಂತ್ರಣ ವ್ಯವಸ್ಥೆಯ ಮೂಲಾಧಾರವೇ ಬೆವರು. ನಾವು ಸೇವಿಸುವ ದೈನಂದಿನ ಆಹಾರದಲ್ಲಿನ ಸುಮಾರು 2500 ಕ್ಯಾಲೋರಿಗಳು ಬರ್ನ್ ಆದಾಗಿನ ಶಾಖ ಹದ್ದುಬಸ್ತಿಗೆ ಬರುವುದು ಬೆವರಿನಿಂದಲೇ. ಸಂಸ್ಕೃತದಲ್ಲಿ ಬೆವರಿಗೆ ‘ಸ್ವೇದ’ ಎಂಬ ಪದ, ಇಂಗ್ಲಿಷ್‌ನಲ್ಲಿ sweat ಎಂಬ ಪದ. ಇವೆರಡೂ ತುಂಬ ಹತ್ತಿರದ ಸಂಬಂಧದವು ಅನಿಸುವುದಿಲ್ಲವೇ? ‘ಶ್ಲೇಷ್ಮಾ ಪಿತ್ತಮಥ ಸ್ವೇದೋ ವಸಾ ಶೋಣಿತಮೇವ ಚಣ ಇತ್ಯಾಪಃ ಪಂಚಧಾ ದೇಹೇ ಭವಂತಿ ಪ್ರಾಣಿನಾಂ ಸದಾಣಣ (ಕಫ, ಪಿತ್ತ, ಬೆವರು, ಕೊಬ್ಬು ಮತ್ತು ರಕ್ತ- ಈ ಐದು ವಸ್ತುಗಳು ಪ್ರಾಣಿಗಳ ಶರೀರದಲ್ಲಿರುವ ಜಲರೂಪಗಳು)’ ಎಂದು ವೇದವ್ಯಾಸೋಕ್ತಿ.
ಮನುಷ್ಯರಷ್ಟೇ ಬೆವರುವುದಲ್ಲ. ದೇವ-ದೇವತೆಗಳ, ಪುರಾಣ ಪುರುಷರ ಬೆವರಿನ ಕಥೆಗಳು ರೋಚಕವಾಗಿವೆ.

ನಮಗೆಲ್ಲರಿಗೂ ಗೊತ್ತಿರುವಂತೆ ಆದಿಪೂಜಿತ ಗಣೇಶ ಜನ್ಮ ತಾಳಿದ್ದೇ ಮಾತೆ ಪಾರ್ವತಿಯ ಮೈಯ ಬೆವರು ಮತ್ತು ಕೊಳೆಯಿಂದ. ಬಚ್ಚಲುಮನೆಗೆ ಚಿಲಕ ಇರಲಿಲ್ಲ, ಸ್ನಾನ ಮಾಡುವಾಗ ಯಾರೂ ಒಳಗೆ ಬರದಂತೆ ಯಾರಾದರೂ ಕಾವಲು ಕಾಯುವವರು ಬೇಕಿತ್ತು, ಪಾರ್ವತಿ ತನ್ನ ಮೈಯ ಕೊಳೆಯನ್ನು ತನ್ನದೇ ಬೆವರಿನಲ್ಲಿ ಕಲೆಸಿ ಮೂರ್ತಿಯನ್ನಾಗಿಸಿ ಜೀವ ತುಂಬಿದಳು. ‘ಯಾರೇ ಬಂದರೂ ಬಿಡಬೇಡ ಸಾಕ್ಷಾತ್ ಶಿವ ಬಂದರೆ ಬಿಡು ಬೇಗ’ ಎಂದು ಆಕೆ ಹೇಳಿದ್ದು ಗಣೇಶನಿಗೆ ‘ಯಾರೇ ಬಂದರೂ ಬಿಡಬೇಡ ಸಾಕ್ಷಾತ್ ಶಿವ ಬಂದರೂ ಬಿಡಬೇಡ’ ಎಂದು ಕೇಳಿಸಿತು.

ಹೊರಹೋಗಿದ್ದ ಶಿವ ಮನೆಗೆ ಮರಳಿದಾಗ ಗಣಪ ಬಾಗಿಲಲ್ಲೇ ತಡೆದನು, ಸಿಟ್ಟಾದ ಶಿವನ ಆಣತಿಯಿಂದಾಗಿ ತಲೆ ಕತ್ತರಿಸಿ ಕೊಳ್ಳುವಂತಾಯಿತು, ಆಮೇಲೆ ಆನೆಯ ತಲೆ ಜೋಡಿಸಲಾಯ್ತು ಅಂತೆಲ್ಲ ಕಥೆ. ಅಂತೂ ಗಣಪ ಒಬ್ಬ ‘ಸ್ವೇದಜ’ ಎನ್ನಲಿಕ್ಕಡ್ಡಿ ಯಿಲ್ಲ. ಹಾಗೆಯೇ ದೀಪಾವಳಿ ಹಬ್ಬದಲ್ಲಿ ನಾವು ನೆನಪಿಸಿಕೊಳ್ಳುವ ನರಕಾಸುರ ಸಹ ‘ಸ್ವೇದಜ’ನೇ. ವಿಷ್ಣು ವರಾಹಾವತಾರ ತಳೆದಿದ್ದಾಗ ಆತನ ದೇಹದಿಂದ ಒಂದು ತೊಟ್ಟು ಬೆವರು ನೆಲದ ಮೇಲೆ ಬೀಳಲಾಗಿ ಭೂದೇವಿಯಲ್ಲಿ ಹುಟ್ಟಿದವ ನರಕಾಸುರ. ಪ್ರಾಗ್ಜ್ಯೋತಿಷ ನಗರದಲ್ಲಿ ರಾಜ್ಯಭಾರ ಮಾಡುತ್ತ ಕ್ರಮೇಣ ಲೋಕಕಂಟಕನಾದವನು. ಆಮೇಲೆ ವಿಷ್ಣುವೇ ಕೃಷ್ಣಾವತಾರದಲ್ಲಿ ಬಂದು ಮತ್ತೊಂದಿಷ್ಟು ಬೆವರು ಸುರಿಸಿ ನರಕಾಸುರ ವಧೆ ಮಾಡಬೇಕಾಯಿತು.

ಇನ್ನೊಂದು ಪುರಾಣಕಥೆಯ ಪ್ರಕಾರ ದೇವಗಂಗೆ (ಭಗೀರಥ ಬೆವರು ಹರಿಸಿ ಭೂಮಿಗೆ ತಂದ ಗಂಗಾನದಿ)ಯ ಮೂಲವೂ ಶ್ರೀಮನ್ನಾರಾಯಣನ ಕಾಲ್ಗಳ ಬೆವರೇ! ಅದನ್ನು ಬ್ರಹ್ಮ ತನ್ನ ಕಮಂಡಲುವಿನಲ್ಲಿ ಹಿಡಿದಿಟ್ಟಿದ್ದನಂತೆ! ಮತ್ತೊಂದು ಸ್ವಾರಸ್ಯಕರ ಕಥೆಯಲ್ಲಿ, ಸುಡುತ್ತಿರುವ ಬಾಲವನ್ನು ಸಮುದ್ರದಲ್ಲಿ ಅದ್ದಿ ಆರಿಸುತ್ತಿದ್ದ ವೇಳೆ ಆಂಜನೇಯನ ಬೆವರ ಹನಿಯೊಂದು ಅಚಾನ ಕ್ಕಾಗಿ ಸಮುದ್ರಕ್ಕೆ ಬಿದ್ದು ಅದರಿಂದ ಒಂದು ಮೀನು ಗರ್ಭಧರಿಸಿ ಮಕರಧ್ವಜನ ಜನನವಾಯಿತು, ಆತ ಮಹಿರಾವಣನ ಪಾತಾಳಪುರಿಯ ದ್ವಾರಪಾಲಕನಾದನು ಎಂಬ ಉಲ್ಲೇಖವಿದೆ.

ಆದರೆ ಈ ಎಲ್ಲ ಸ್ವರ್ಗವಾಸಿಗಳ ಬೆವರಿನ ಅಥೆಂಟಿಸಿಟಿಯ ಬಗ್ಗೆ- ಅಂದರೆ ಅವರಿಗೆ ಬೆವರು ಬಂದದ್ದು ನಿಜವಾಗಿಯೂ ಹೌದೇ ಅಲ್ಲವೇ ಎಂಬುದರ ಬಗ್ಗೆ- ನನಗೆ ಅನುಮಾನವಿದೆ. ಕಾರಣವೇನೆಂದರೆ ಒಂದು ಶ್ಲೋಕದ ಪ್ರಕಾರ- ‘ನ ಚ ಸ್ವೇದೋ ನ ದೌರ್ಗಂಧ್ಯಂ ಪುರೀಷಂ ಮೂತ್ರಮೇವ ಚ| ತೇಷಾಂ ನ ಚ ರಜೋ ವಸ್ತ್ರಂ ಬಾಧತೇ ತತ್ರ ವೈ ಮುನೇ|’ ಅಂದರೆ, ಸ್ವರ್ಗದಲ್ಲಿ ಯಾರೂ ಬೆವರುವುದಿಲ್ಲ, ದುರ್ಗಂಧವಿಲ್ಲ, ಮಲವಿಲ್ಲ, ಮೂತ್ರವಿಲ್ಲ. ಅಲ್ಲಿ ಧೂಳು ಅವರ ವಸ್ತ್ರವನ್ನು ಹೊಲಸು ಮಾಡುವು ದಿಲ್ಲ.

ಇದು ಕೂಡ ವೇದವ್ಯಾಸೋಕ್ತಿಯೇ. ಆರಣ್ಯಕ ಪರ್ವದಲ್ಲಿ ಬರುತ್ತದೆ. ಮುದ್ಗಲ ಮಹರ್ಷಿಯು ದೇವದೂತನ ಬಳಿ ಸ್ವರ್ಗಲೋಕ ಹೇಗಿದೆಯೆಂದು ಕೇಳುವಾಗ ದೇವದೂತ ಮಾಡುವ ಬಣ್ಣನೆ. ಕೊನೆಗೂ ಮುದ್ಗಲ ಆ ಪ್ರಲೋಭನೆಗೆ ಒಳಗಾಗುವುದಿಲ್ಲ. ಮಹಾ ಗುಣ-ದೋಷಗಳಿರುವ ಸ್ವರ್ಗವು ತನಗೆ ಬೇಡವೆಂದು ದೇವದೂತನನ್ನು ಹಿಂದೆ ಕಳುಹಿಸಿ, ಭತ್ತ ಕುಟ್ಟುವ ವೃತ್ತಿಯನ್ನು ತೊರೆದು, ಧ್ಯಾನಯೋಗದಿಂದ ಪರಮ ಸಿದ್ಧಿಯನ್ನು ಪಡೆಯುತ್ತಾನೆ- ಅಂತ ಕಥೆ. ಸ್ವರ್ಗದಲ್ಲಿ ಬೆವರೇ ಇಲ್ಲ ಎಂಬ ಕಲ್ಪನೆಯೇ ಮುದ್ಗಲ ನಿಗೆ ಬೆವರಿಳಿಯುವಂತೆ ಮಾಡಿತೇನೋ ಯಾರಿಗೆ ಗೊತ್ತು!

ಮಹಾಭಾರತದ್ದೇ ಕಥೆಯಲ್ಲಿ, ನಮ್ಮ ಕನ್ನಡದ ರನ್ನ ಮಹಾಕವಿ ಮಾಡಿರುವ ಬೆವರಿನ ಬಣ್ಣನೆ ಅನ್ಯಾದೃಶವಾದುದು. ದುರ್ಯೋಧನನು ಭೀಮನಿಂದ ತಪ್ಪಿಸಿಕೊಳ್ಳಲಿಕ್ಕಾಗಿ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಾಗ ‘ಆ ರವಮಂ
ನಿರ್ಜಿತ ಕಂಠೀರವಮಂ ನಿರಸ್ತಘನರವಮಂ ಕೋಪಾರುಣನೇತ್ರಂ ಕೇಳ್ದಾ ನೀರೊಳ ಗಿರ್ದುಂ ಬೆಮರ್ತನುರಗಪತಾಕಂ’ ಎಂಬ ಚಿತ್ರಣ ಇಂದಿಗೂ ಸಾಹಿತ್ಯದ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಕಾವ್ಯರಸಿಕರಿಗೆಲ್ಲ ನೆನಪಿರುವ ಸಾಲುಗಳು. ಸಿಂಹಗರ್ಜನೆಯನ್ನೂ ಗುಡುಗಿನ ಮೊಳಗನ್ನೂ ಮೀರಿಸಿದ ಭೀಮನ ಆರ್ಭಟವನ್ನು ಕೇಳಿದರೆ ಎಂಥವನಾದರೂ ಬೆಚ್ಚಿ ಬೀಳಲೇಬೇಕು.

ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದ ದುರ್ಯೋಧನನು ಆ ಸಿಂಹನಾದವನ್ನು ಕೇಳಿ ಕೆರಳಿ ಕೆಂಡವಾದನು. ಅವನ ಕಣ್ಣುಗಳು ಅರುಣವರ್ಣದವಾದುವು. ಶೀತಲವಾದ ನೀರಿನಲ್ಲಿದ್ದರೂ ಕೋಪೋದ್ರೇಕದಿಂದ ಮೈ ಬೆವರಿ ಬಿಟ್ಟಿತು. ಬೆವರುವು ದೆಂದರೆ ಅರ್ಧ ಬಲ ಉಡುಗಿದಂತೆಯೇ ಎನ್ನುತ್ತದೆ ಆಯುರ್ವೇದ ಶಾಸ್ತ್ರದ ಒಂದು ಶ್ಲೋಕ: ‘ಕಿಂ ವಾ ಲಲಾಟೇ ನಾಸಾಯಾಂ ಗಾತ್ರಸಂಷು ಕಕ್ಷಯೋಃ| ಯದಾ ಸಂಜಾಯತೇ ಸ್ವೇದೋ ಬಲಾರ್ಧಂ ತು ತದಾದಿಶೇತ್||’ ಹಣೆಯಲ್ಲಿ, ಮೂಗಿನಲ್ಲಿ, ಶರೀರದ ಸಂದುಗಳಲ್ಲಿ, ಮತ್ತು ಕಂಕುಳಲ್ಲಿ ಯಾವಾಗ ಬೆವರು ಬರುತ್ತದೆಯೋ ಆಗ ಬಲಾರ್ಧವಾಯಿತೆಂದು ತಿಳಿಯಬೇಕಂತೆ.

ನೀರೊಳಗಿದ್ದೂ ಬೆವರಿದ ದುರ್ಯೋಧನನ ಜಂಘಾಬಲ ಉಡುಗಿರಲಾರದು. ಆತ ಸರೋವರದಿಂದೆದ್ದು ಬಂದಮೇಲೆಯೇ ತಾನೆ ಗದಾಯುದ್ಧ ನಡೆದದ್ದು? ಬೆವರ ಬಣ್ಣನೆಯಲ್ಲಿ ನಮ್ಮ ಕನ್ನಡದ ಇನ್ನೊಬ್ಬ ಹೆಮ್ಮೆಯ ಕವಿ, ರೂಪಕ ಸಾಮ್ರಾಜ್ಯ ಚಕ್ರವರ್ತಿ ಯೆನಿಸಿದ ಕುಮಾರವ್ಯಾಸನೂ ಕಮ್ಮಿಯೇನಲ್ಲ. ಅಭಿಮನ್ಯು ಚಕ್ರವ್ಯೂಹ ಭೇದನಕ್ಕಾಗಿ ಹೊರಟು ನಿಂತ ಸಂದರ್ಭ. ಆತನ ಸಾರಥಿಯು ಸಾಕಷ್ಟು ಎಚ್ಚರಿಸುತ್ತಾನೆ. ದ್ರೋಣ, ಕೃಪ, ಕರ್ಣ, ಜಯದ್ರಥರಂತಹ ವೀರರೊಡನೆ ಸೆಣಸಾಟ ಅಭಿಮನ್ಯು ವಿಗೆ ಸಾಧ್ಯವಾಗಲಿಕ್ಕಿಲ್ಲ ಎಂಬ ಶಂಕೆಯನ್ನೂ ವ್ಯಕ್ತಪಡಿಸುತ್ತಾನೆ. ಆದರೆ ಅಭಿಮನ್ಯು ಎದೆಯುಬ್ಬಿಸಿ ಬೊಬ್ಬಿರಿಯುತ್ತಾನೆ: ‘ಬವರ ವಾದರೆ ಹರನ ವದನಕೆ| ಬೆವರ ತಹೆನವಗಡಿಸಿದರೆ ವಾ| ಸವನ ಸದೆವೆನು ಹೊಕ್ಕಡಹುದೆನಿಸುವೆನು ಭಾರ್ಗವನ| ಜವನ ಜವಗೆಡಿಸುವೆನು ಸಾಕಿ| ನ್ನಿವರವರಲೇನರ್ಜುನನು ಮಾ| ಧವನು ಮುನಿದೊಡೆ ಗೆಲುವೆನಂಜದೆ ರಥವ ಹರಿಸೆಂದ||’

ಯುದ್ಧಕ್ಕಿಳಿದರೆ ಪರಮೇಶ್ವರನಿಗೂ ಸಹಿತ ಮುಖದ ಮೇಲೆ ಬೆವರಿಳಿಸಬಲ್ಲೆ ಎಂದು ತನ್ನ ಪೌರುಷವನ್ನು ಬಣ್ಣಿಸುತ್ತಾನೆ. ಹರನ
ವದನವನ್ನೇ ಏಕೆ ಅಭಿಮನ್ಯು ಉಲ್ಲೇಖಿಸಿದ್ದು? ಹರನಿಗೆ ಮೂರು ಕಣ್ಣುಗಳು. ಆ ಮೂರನೆಯ ಕಣ್ಣು ಇಡೀ ಬ್ರಹ್ಮಾಂಡವನ್ನೇ
ಸುಡುವ ಶಕ್ತಿಯುಳ್ಳದ್ದು. ಅಂತಹ ಕಾವು ಇರುವಾಗಲೂ ಹರನ ವದನ ಬೆವರುವುದಿಲ್ಲ. ಹಾಗೆ ಬೆವರದ ಮುಖವನ್ನೂ ತನ್ನ
ಯುದ್ಧದ ಕಾವಿನಲ್ಲಿ ಬೆವರುವಂತೆ ಮಾಡುತ್ತೇನೆ ಎಂದು ಅಭಿಮನ್ಯುವಿನ ಪ್ರತಾಪ.

ಈಗ, ಬೆವರು‘ಪುರಾಣ’ದಿಂದ ಹೊರಬಂದು ಮತ್ತೆ ಬೆವರಿನ ವಿಜ್ಞಾನವನ್ನೊಂದಿಷ್ಟು ನೋಡೋಣ. ಆಗಲೇ ಹೇಳಿದಂತೆ
ಶರೀರ ದಲ್ಲಿರುವ ಮಿಲಿಯಗಟ್ಟಲೆ ಸ್ವೇದಗ್ರಂಥಿಗಳು ಅಹರ್ನಿಶಿ ಬೆವರು ಸುರಿಸುತ್ತಿರುತ್ತವೆ; ಅಂಗೈಗಳ ಮೇಲೆ, ಅಂಗಾಲುಗಳ
ಮೇಲೆ, ಹಣೆ ಕುತ್ತಿಗೆಗಳ ಮೇಲೆ ಈ ಗ್ರಂಥಿಗಳ ಸಾಂದ್ರತೆ ಹೆಚ್ಚಿರುವುದರಿಂದ ಆ ಭಾಗಗಳಲ್ಲಿ ಬೆವರು ಹೆಚ್ಚು ಗಮನೀಯ ವಾಗುತ್ತದೆ.

ಬಹುತೇಕವಾಗಿ ಬೆವರು ಬರುವುದು ಶರೀರದ ತಾಪಮಾನ ನಿಯಂತ್ರಣದ ಉದ್ದೇಶದಿಂದ. ಎರಡು ಮೈಲುಗಳಷ್ಟು ದೂರ
ಜಾಗಿಂಗ್ ಮಾಡಿಬಂದಾಗ ಬೆವರು ಸುರಿಯುವುದು ಬಿಸಿಯಾದ ಎಂಜಿನ್‌ಅನ್ನು ತಂಪಾಗಿಸಬೇಕಾಗುವುದರಿಂದ. ನೂರಮೂರು,
ನೂರನಾಲ್ಕು ಡಿಗ್ರಿಗಳಷ್ಟು ಸುಡುಜ್ವರ ಬಂದ ರೋಗಿ ಮೈಮೇಲೆ ನಾಲ್ಕು ಹೊದಿಕೆಗಳನ್ನು ಪೇರಿಸಿದಾಗ ಬೆವರುವುದೂ ಮಿದುಳಿ
ನಲ್ಲಿರುವ ಹೈಪೊಥಲಮಸ್ ಎಂಬ ಥರ್ಮೋಸ್ಟಾಟ್ ಕಳಿಸುವ ಆಜ್ಞೆಯನ್ನು ಶಿರಸಾ ವಹಿಸುವ ಸ್ವೇದಗ್ರಂಥಿಗಳಿಂದ. ಆದರೆ ಇನ್ನು ಕೆಲವು ಸ್ವೇದಗ್ರಂಥಿಗಳ ಕಾರ್ಯಾಚರಣೆಯಾಗುವುದು ಮಾನಸಿಕ ಪ್ರಚೋದನೆಯಿಂದ ಮಾತ್ರ. ವಿದ್ಯಾರ್ಥಿಗೆ ಪರೀಕ್ಷೆಯ
‘ಜ್ವರ’ದಲ್ಲಿ, ಯಾವ್ಯಾವ ಪ್ರಶ್ನೆಗಳನ್ನು ಎದುರಿಸಬೇಕಾಗಬಹುದು ಎಂಬ ತಳಮಳದ ಬೆವರು ಸುರಿಸುವುದು ಈ ಗ್ರಂಥಿಗಳು.

ಪ್ರೇಮ‘ಜ್ವರ’ದಲ್ಲಿ ಮನಸೆಳೆದ ನಲ್ಲ ಕಿವಿಯಲಿಂಚರ ನುಡಿಯುವಾಗ ನಲ್ಲೆಯ ಹಣೆಯ ಮೇಲೆ ಬೆವರಿನುಂಗುರ ಮೂಡಿ ಸುವವೂ ಅವೇ ಗ್ರಂಥಿಗಳು. ಅದೊಂದು ರೀತಿ ತನ್ಮಯತೆಯ, ತೀವ್ರಾಪೇಕ್ಷೆಯ ಬೆವರು! ಬೆವರಿನ ಹನಿಯಲ್ಲಿ 99% ನೀರಿನಂಶ ವಾದರೆ 1%ದಷ್ಟೇ ಲವಣ ಹಾಗೂ ಅಮಿನೊ ಆಮ್ಲಗಳ ಅಂಶವಿರುವುದು. ಆರೋಗ್ಯವಂತ ಮನುಷ್ಯನ ಬೆವರಿಗೆ ಯಾವುದೇ ವಾಸನೆ ಇರುವುದಿಲ್ಲ. ಬೆವರು ಎಂದರೆ ದುರ್ವಾಸನೆ ಎಂಬ ಮಿಥ್ಯೆ ಅಸಂಗತವಾದುದು. ವಾಸನೆ ಬರುವುದು ಕಂಕುಳಲ್ಲಿರುವ ಎಪೊಕ್ರಿನ್ ಗ್ರಂಥಿಗಳಿಂದಲೇ ಹೊರತು ಬೆವರಿನಿಂದಲ್ಲ.

ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎಂಬಂತೆಯೇ ತಥಾಕಥಿತ ಬೆವರಿನ ವಾಸನೆಯ ಸಂಗತಿ ಕೂಡ. ನಿಜಾಂಶವೆಂದರೆ ಶರೀರದ ತಾಪಮಾನ ನಿಯಂತ್ರಣದ ಹೊರತಾಗಿಯೂ ಬೆವರಿನಿಂದ ನಮಗೆ ಆಗುವುದು ಉಪಕಾರವೇ. ನಮ್ಮ ಅಂಗೈಗಳಿಗೆ, ಪಾದತಳಕ್ಕೆ ಒಂಥರ ಗ್ರಿಪ್ ಬರುವುದು ಅಲ್ಲಿನ ಬೆವರಿನ ಹದವಾದ ತೇವಾಂಶದಿಂದಾಗಿಯೇ. ಚರ್ಮವನ್ನು ಆದಷ್ಟು ಮೃದು ವಾಗಿಸಿ ಸ್ಪರ್ಶ ಜ್ಞಾನವನ್ನು ಸಾಧ್ಯವಾದಷ್ಟೂ ಹೆಚ್ಚಿಸುವ ಒಳ್ಳೆಯ ಕೆಲಸವಾಗುವುದೂ ಸ್ವತಃ ಬೆವರು ‘ಬೆವರು ಸುರಿಸಿ ದುಡಿಯು’ವುದರಿಂದಲೇ!

ಇವೆಲ್ಲಕ್ಕಿಂತ ಹೆಚ್ಚಾಗಿ ಬೆವರು ಮಾಡುವ ಮಹದುಪಕಾರವೊಂದಿದೆ. ಬೆವರಿನಲ್ಲಿರುವ ನೈಸರ್ಗಿಕ ಪ್ರತಿಜೀವಿಕ ಅಂಶವು ನಮ್ಮ ಚರ್ಮದ ಮೇಲಿರುವ ಸಹಸ್ರಾರು ಸೂಕ್ಷ್ಮಜೀವಿಗಳನ್ನು ನಿಯಂತ್ರಣದಲ್ಲಿಡುತ್ತದೆ. ಅದೂ ಈ ರಕ್ಷಣಾಕವಚ ನಿರ್ಮಾಣವು ‘ಯುದ್ಧಕಾಲೇ ಶಸ್ತ್ರಾಭ್ಯಾಸಃ’ ಅಲ್ಲ, ನಿರಂತರ ನಡೆಯುತ್ತಲೇ ಇರುವ ಪ್ರಕ್ರಿಯೆ.

The more we sweat in peace the less we bleed in war ಅಂತೊಂದು ಸೂಕ್ತಿಯಿದೆ. ನಮ್ಮ ಶರೀರದ ಬೆವರು ಅದನ್ನು ಅಕ್ಷರಶಃ ಪಾಲಿಸುತ್ತದೆ. ಅಂದಮೇಲೆ, ಬೆವರು ಅಸಹ್ಯವಲ್ಲ, ಅಮೂಲ್ಯ! ಅದೆಲ್ಲ ಇರಲಿ, ಕರ್ನಾಟಕದಲ್ಲಿ ಅತಿ ಹೆಚ್ಚು ಬೆವರು ಉತ್ಪಾದನೆ ಯಾಗುವುದು ಯಾವ ನಗರದಲ್ಲಿ ಎಂದು ನಿಮ್ಮ ಅಂದಾಜು? ಕಡಲತಡಿಯ ಮಂಗಳೂರಿಗೇ ಆ ಶ್ರೇಯಸ್ಸು ಸಲ್ಲುತ್ತದೆಂದು ನನಗನಿಸುತ್ತದೆ.

ಭುವನೇಶ್ವರಿ ಹೆಗಡೆಯವರು ಒಂದು ಹನಿಗವನದಲ್ಲಿ ಅದನ್ನೇ ಹೇಳಿದ್ದಾರೆ: ‘ಕಾಶ್ಮೀರದಲ್ಲಿ ಐಸಿದ್ದಂತೆ| ಮಡಿಕೇರಿಲಿ ಮಂಜಿದ್ಹಂಗೆ| ಬಳ್ಳಾರೀಲಿ ಧೂಳಿದ್ಹಂಗೆ| ಮಂಗ್ಳೂರಲಿ ಬೆವರು!’ ಅಲ್ವಾ, ಎಂಥ ಸೆಕೆ ಮಾರಾಯ್ರೇ! ಮುಖದಲ್ಲಷ್ಟೇ ಅಲ್ಲ ಮೈಯೆಲ್ಲ ಬೆವರು. ಬೈರಾಸಿನಿಂದ, ಸೀರೆಯ ಸೆರಗಿನಿಂದ, ಕರ್ಚೀಪಿನಿಂದ ಒರೆಸಿ ಒರೆಸಿ ಸಾಕ್ಸಾಕಾಗುತ್ತದೆ. ಸೂರ್ಯನೂ ಬೆವರು ಸುರಿಸಿ ಬಸವಳಿದು ಸ್ವಲ್ಪ ಕೂಲ್ ಆಗೋಣವೆಂದು ‘ಬೊಂಡ’ ಬೆವರೇಜ್ ಗೆ ಕೈಚಾಚುವುದರಲ್ಲಿ, ಸ್ಟ್ರಾ ಮುಳುಗಿಸಿ ಸಿಹಿನೀರನ್ನು
ಹೀರುವುದರಲ್ಲಿ ಆಶ್ಚರ್ಯವೇನಿಲ್ಲ.