Thursday, 19th September 2024

ಮಗುವಿಗೆ ಮೂರು ಪಾಲಕರು

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ಟೋಕಾಂಡ್ರಿಯಾ ಕಾಯಿಲೆಯ ಜತೆಗೆ ಹುಟ್ಟುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು ವೈದ್ಯರು ಪ್ರಯತ್ನಿಸಿದ್ದಾರೆ. ತಾಯಿಯ ಗರ್ಭದ ಹನ್ನೊಂದು
ವಾರಗಳಲ್ಲಿ ಕೋರಿಯಾನಿಕ್ ವಿಲ್ಲಸ್ ಸ್ಯಾಂಪ್ಲಿಂಗ್ ಎಂಬ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ವಂಶವಾಹಿಯ ತೊಂದರೆಗಳು ಗೊತ್ತಾಗುತ್ತವೆ.

ಒಂದು ಮಗುವಿಗೆ ತಾಯಿ ಮತ್ತು ತಂದೆ- ಹೀಗೆ ಎರಡು ಪಾಲಕರು ಅಥವಾ ಪೋಷಕರು ಇರುವುದು ನಮಗೆಲ್ಲಾ ಗೊತ್ತಿದೆ. ಹಾಗಾದರೆ ಮೂರನೇ ಪಾಲಕರು ಎಂದರೆ ಯಾರು? ಅವರ ಅವಶ್ಯಕತೆ ಏನಿದೆ? – ಈ ಎಲ್ಲಾ ಪ್ರಶ್ನೆ ಗಳು ನಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ.

ಆಧುನಿಕ ವೈದ್ಯ ವಿಜ್ಞಾನದಲ್ಲಿ ವ್ಯಕ್ತಿಯ ಆರೋಗ್ಯ ವೃದ್ಧಿಸಲು ಹಲವು ರೀತಿಯ ನವೀನ ಸಂಶೋಧನೆಗಳು, ಆವಿಷ್ಕಾರಗಳು ನಿರಂತರವಾಗಿ ಜರುಗುತ್ತಿರುತ್ತವೆ. ಈ ದಿಸೆಯಲ್ಲಿ ಮೂರು ಪಾಲಕರ ಮಗು ಒಂದು ಹೊಸ ಆವಿಷ್ಕಾರ ಹಾಗೂ ಸಾಧ್ಯತೆ. ಮಗುವಿನಲ್ಲಿ ವಂಶವಾಹಿಯ ಮಟ್ಟದಲ್ಲಿ ಕೆಲವು ಗುಣಗಳಿದ್ದು ಅವು ಮೊದಲೇ ವಿವಿಧ ಸ್ಕ್ಯಾನಿಂಗ್‌ಗಳಿಂದ ಗೊತ್ತಾದಾಗ, ಆ ತರಹದ ಮಗು ಹುಟ್ಟುವುದನ್ನು ತಪ್ಪಿಸಲು ತಂದೆ- ತಾಯಿಯರ ವಂಶವಾಹಿ ಗಳ ಜತೆ ಹೊರಗಿನ ಆರೋಗ್ಯವಂತ ಮಹಿಳೆಯ ವಂಶವಾಹಿಯ ಅಂಶಗಳನ್ನು ಸೇರಿಸಿ ಈ ಪ್ರಯೋಗ ಅಥವಾ ಪ್ರಕ್ರಿಯೆ ಮಾಡಲಾಗುತ್ತಿದೆ.

ವಿಕಲಾಂಗ ಅಥವಾ ವಿಕೃತ, ಕಡಿಮೆ ಆಯಸ್ಸು ಹೊಂದಿರುವ ಮಗು ಹುಟ್ಟುವುದನ್ನು ತಪ್ಪಿಸಲು ಈ ವಿಧಾನವನ್ನು 3-4 ವರ್ಷಗಳ ಮೊದಲೇ ಇಂಗ್ಲೆಂಡಿನಲ್ಲಿ ಕಂಡು ಹಿಡಿಯಲಾಗಿತ್ತು. ಅಲ್ಲಿ ಆ ವಿಧಾನದ ಪ್ರಕ್ರಿಯೆಗೆ ಎರಡು ವರ್ಷಗಳ ಮೊದಲೇ ಕಾನೂನಿನ ಬೆಂಬಲ ಸಿಕ್ಕಿತ್ತು. ಈ ವಿಧಾನವನ್ನು ಇತ್ತೀಚೆಗೆ ಒಪ್ಪಿ ಅಂದರೆ ಮಾರ್ಚ್ 30ರಂದು ಆಸ್ಟ್ರೇಲಿಯಾದ ಸೆನೆಟ್ ಈ ಮಸೂದೆಯನ್ನು ಅಂಗೀಕರಿಸಿ ಕಾನೂನಾತ್ಮಕವಾಗಿ ಈ ವಿಧಾನ ಒಪ್ಪಿದ ಜಗತ್ತಿನ ಎರಡನೇ ದೇಶವಾಗಿ ಹೊರ ಹೊಮ್ಮಿತು.

ದೋಷಪೂರಿತ ಮೈಟೋಕಾಂಡ್ರಿಯಾದ ದೆಸೆಯಿಂದ ಬರುವ ವಂಶವಾಹಿ ಕಾಯಿಲೆಗಳನ್ನು ಬರದಿರುವಂತೆ ಮಾಡುವುದೇ ಈ ವಿಧಾನದ ಮುಖ್ಯ ಉದ್ದೇಶ. ನಮ್ಮ ಜೀವಕೋಶದಲ್ಲಿ ಇರುವ ಈ ಮೈಟೋಕಾಂಡ್ರಿಯಾಗಳು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುವ ಕೇಂದ್ರಗಳು. ಇವು ನಮ್ಮ ಜೀವಕೋಶದ ಬ್ಯಾಟರಿಗಳು. ಜೀವಕೋಶಗಳ ಮುಂದಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಈ ಮೈಟೋಕಾಂಡ್ರಿಯಾಗಳು ಅವಶ್ಯಕ. ಇವು ಏನೂ ಶಕ್ತಿಯನ್ನು ಉತ್ಪಾದನೆ ಮಾಡದ ಸಂದರ್ಭ ಗಳಲ್ಲಿ ಮಗುವಿಗೆ ಬರುವ ವಂಶವಾಹಿ ಕಾಯಿಲೆಯಿಂದ ಮಗು ಕೂಡಲೇ ಮರಣ ಹೊಂದುತ್ತದೆ.

ಇದೇ ಮೈಟೋಕಾಂಡ್ರಿಯಾ ಬಹಳ ಕಡಿಮೆ ಪ್ರಮಾಣದಲ್ಲಿ ಶಕ್ತಿ ಉತ್ಪಾದಿಸಿದರೆ ಮಗು ಹಲವು ಗಂಭೀರ ಕಾಯಿಲೆಗಳಿಗೆ ಅಥವಾ ವಿವಿಧ ಊನಗಳಿಗೆ ಒಳಗಾಗುವ ಸಾಧ್ಯತೆ ಬಹಳ. ಈ ಕಾಯಿಲೆ ಮತ್ತು ಊನಗಳು ತೀವ್ರ ಗಂಭೀರ ರೀತಿಯವು. ಇಂಥ ಮಗು ಜೀವ ಇರುವವರೆಗೆ ವಿವಿಧ ರೀತಿಯ ಊನ, ಕಡಿಮೆ ಬೆಳವಣಿಗೆ ಹೊಂದಿರಬಹುದು ಮತ್ತು ಕೆಲವು ಮಕ್ಕಳು ಹುಟ್ಟುವಾಗ ಅಥವಾ ಹುಟ್ಟಿದ ಕೂಡಲೇ ಮರಣ ಹೊಂದಬಹುದು.

ಮೈಟೋಕಾಂಡ್ರಿಯಾದಲ್ಲಿ ವ್ಯಕ್ತಿಯ ಡಿಎನ್ ಎಯು ಸ್ವಲ್ಪ ಪ್ರಮಾಣದಲ್ಲಿರುತ್ತದೆ. ಹುಟ್ಟುವ ಮಕ್ಕಳು ಡಿಎನ್‌ಎ ಅನ್ನು ತಾಯಿಯಿಂದ ಪಡೆಯುತ್ತಾರೆ. ದೋಷ ಪೂರಿತ ವಂಶವಾಹಿ ಮಗುವಿನಲ್ಲಿ ಬರದಿರುವಂತೆ ಮಾಡಲು ಆರೋಗ್ಯವಂತ ಬೇರೆ ಮಹಿಳೆಯಿಂದ ಮೈಟೋಕಾಂಡ್ರಿಯಾವನ್ನು ದಾನವಾಗಿ ಪಡೆಯಲಾಗುತ್ತದೆ. ನೈಜ ತಾಯಿಯ ಜೀವಕೋಶದಿಂದ ಅದರ ಮುಖ್ಯ ಭಾಗ ನ್ಯೂಕ್ಲಿಯಸ್ ಅನ್ನು ಆರೋಗ್ಯವಂತ ಮೈಟೋಕಾಂಡ್ರಿಯಾ ಹೊಂದಿರುವ ಮಹಿಳೆಯ ಅಂಡಕ್ಕೆ ಸೇರಿಸಲಾಗುತ್ತದೆ. ಅಂತರ ಅಂಡವನ್ನು ಪ್ರನಾಳಶಿಶು (ಐವಿಎಫ್) ವಿಧಾನದಿಂದ ತಂದೆಯ ವೀರ್ಯಾಣುವಿನೊಂದಿಗೆ ಪ್ರಯೋಗಾಲಯದಲ್ಲಿ ಸಂಯೋಗ
ಮಾಡಲಾಗುತ್ತದೆ.

ಹೀಗೆ ಫಲಿಸುವ ಭ್ರೂಣ ಎರಡು ಮಹಿಳೆಯರ ಮತ್ತು ಒಬ್ಬ ಪುರುಷನ ವಂಶವಾಹಿ ವಸ್ತುವನ್ನು ಹೊಂದಿರುತ್ತದೆ. ಇದು ಬಹಳ ವರ್ಷ ದಿಂದ ಚಾಲ್ತಿಯಲ್ಲಿರುವ ಪ್ರನಾಳ ಶಿಶು ವಿಧಾನದ ಮುಂದುವರಿದ ಹಂತ ಎನ್ನಬಹುದು. ಹೀಗೆ ಮೂರು ವ್ಯಕ್ತಿಗಳ ವಂಶವಾಹಿ ವಸ್ತುಗಳನ್ನು ಈ ಮಗು ಹೊಂದಿರುವುದರಿಂದ ಮೂರು ಪಾಲಕರಿಂದ ಜನಿಸಿದ ಮಗು ಎಂದು ಹೆಸರಿಸಲಾಗಿದೆ. ಇದರಲ್ಲಿ ನೈತಿಕ ಪ್ರಶ್ನೆಯನ್ನು ಕೆಲವರು ಎತ್ತುತ್ತಾರೆ. ಈ ರೀತಿಯಲ್ಲಿ ಹುಟ್ಟಿದ ಮಗು ರೂಪಾಂತರ ಗೊಂಡ ಡಿಎನ್‌ಎ ಹೊಂದಿರುತ್ತದೆ. ನಂತರ ಅದು ತನ್ನ ಮುಂದಿನ ಪೀಳಿಗೆಗೆ ರೂಪಾಂತರಗೊಂಡ ಡಿಎನ್‌ಎ ಅನ್ನು ವರ್ಗಾಯಿಸುತ್ತದೆ.

ಅಂದರೆ ಈ ಮಗು ತಂದೆ-ತಾಯಿ ಅಲ್ಲದ ಮೂರನೇ ವ್ಯಕ್ತಿಯ ವಂಶವಾಹಿ ವಸ್ತುಗಳನ್ನು ಹೊಂದಿ ಮುಂದಿನ ತನ್ನ ಪೀಳಿಗೆಗೆ ವರ್ಗಾಯಿಸುತ್ತದೆ. ಇದು ಸರಿಯೇ ಎಂದು ಕೆಲವು ವಿಜ್ಞಾನಿಗಳ ಹಾಗೂ ನೈತಿಕ ತಜ್ಞರ ಅಭಿಪ್ರಾಯ. ದೋಷಪೂರಿತ ಡಿಎನ್‌ಎ ಇಟ್ಟುಕೊಂಡು ಗಂಭೀರ ಕಾಯಿಲೆಯಿಂದ ಮಗು ಜನಿಸಿದರೆ ಪಾಲಕ ರಿಗೆ ಎಷ್ಟು ಹೊರೆ, ಅದರ ಪರಿಸ್ಥಿತಿ ಎಷ್ಟು ಚಿಂತಾಜನಕ. ಇಂತಹ ಸಮಯದಲ್ಲಿ ನೈತಿಕ ಪ್ರಶ್ನೆ ಗೌಣವಾಗುತ್ತದೆ ಎಂದು ನ್ಯೂಯಾರ್ಕ್ ವಿಶ್ವವಿದ್ಯಾ ನಿಲಯದ ಗ್ರಾಸ್ಮನ್ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಎಥಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಆರ್ಥರ್ ಕಪ್ಲಾನ್ ನುಡಿಯುತ್ತಾರೆ.

ಈ ವಿಧಾನದ ಸಂಶೋಧನೆಯನ್ನು ಇಂಗ್ಲೆಂಡಿನ ನ್ಯೂ ಕ್ಯಾಸಲ್ ವಿಶ್ವವಿದ್ಯಾನಿಲಯದ ನರ ಶಾಸಗಳ ಪ್ರೊಫೆಸರ್ ಡಾಡಗ್ ಟರ್ನ್ ಬುಲ್ ಕಳೆದ 5-6 ವರ್ಷ ಗಳಿಂದ ಕೈಗೊಳ್ಳುತ್ತಿದ್ದಾರೆ. ಮೈಟೋಕಾಂಡ್ರಿಯಾದ ಕಾಯಿಲೆಯಿಂದ ಪ್ರತಿ ವರ್ಷ ಹಲವಾರು ಮಕ್ಕಳು ಹಾಗೂ ರೋಗಿಗಳು ಅಸು ನೀಗುವುದನ್ನು ಅವರು ನೋಡಿದ್ದಾರೆ. ಒಬ್ಬ ಮಹಿಳೆಗೆ ಆರು ಬಾರಿ ಹುಟ್ಟಿದ ಮಕ್ಕಳು 2 ದಿನದೊಳಗೆ ಮರಣ ಹೊಂದಿದ್ದನ್ನು ಅವರು ಸಮೀಪದಿಂದ ನೋಡಿದ್ದಾರೆ. ಆಕೆಯ ಏಳನೇ ಮಗು ೨೧ ವರ್ಷಗಳ ಕಾಲ ವಿವಿಧ ಊನಗಳನ್ನು ಹೊಂದಿ ದಿನ ದೂಡಿ ನಂತರ ಮರಣಿಸಿದ್ದನ್ನು ಅವರು ಉದಾಹರಿಸುತ್ತಾರೆ. ಇನ್ನೂ ಹಲವು ಉದಾಹರಣೆ ಗಳನ್ನು ನೋಡಿದ ಡಾ ಡಗ್ ಟರ್ನ್ ಬುಲ್ ಈ ಬಗ್ಗೆ ಸಂಶೋಧನೆ ಕೈಗೊಂಡು 3-4 ನಾಲ್ಕು ವರ್ಷಗಳ ಮೊದಲೇ ಸಫಲತೆ ಕಂಡುಕೊಂಡಿದ್ದಾರೆ.

ಜೀವಕೋಶದ ಬ್ಯಾಟರಿಗಳು: ಮೈಟೋಕಾಂಡ್ರಿಯಾಗಳನ್ನು ನಮ್ಮ ಜೀವಕೋಶಗಳಲ್ಲಿರುವ ಬ್ಯಾಟರಿಗಳೆಂದು ಹೇಳಬಹುದು. ವಜ್ರದಾಕೃತಿಯ ಇವು
ಒಂದು ಮಿ.ಮೀ.ನ ಎಷ್ಟೋ ಸಾವಿರದಷ್ಟು ಸಣ್ಣಗಿರುತ್ತವೆ. ಒಂದು ಸಣ್ಣ ಮಾನವ ಜೀವಕೋಶದಲ್ಲಿ ಸಾವಿರಾರು ಇಂತಹ ಮೈಟೋಕಾಂಡ್ರಿಯಾಗಳಿರುತ್ತವೆ.ಇವು ನಮ್ಮ ಆಹಾರದಲ್ಲಿನ ಕೊಬ್ಬು ಮತ್ತು ಶರ್ಕರ ಪಿಷ್ಟಗಳಿಂದ ಶಕ್ತಿಯನ್ನು ಬೇರ್ಪಡಿಸಿ ಎಟಿಪಿ ಎಂಬ ಘಟಕದಲ್ಲಿ ಶೇಖರಿಸುತ್ತವೆ. ಸಾಧಾರಣ ಒಂದು ದಿವಸದಲ್ಲಿ 65 ಕೆಜಿ ಅಷ್ಟು ಎಟಿಪಿಯನ್ನು ಮೈಟೋಕಾಂಡ್ರಿಯಾ ಶೇಖರಿಸುತ್ತದೆ.

ಇದು ನಮ್ಮ ಇಡೀ ದಿವಸಕ್ಕೆ ಸಾಕಾಗುವಷ್ಟು ಶಕ್ತಿ. ಮಾನವ ಜೀವಕೋಶವನ್ನು ಬೇಯಿಸಿದ ಮೊಟ್ಟೆ ಎಂದು ಗ್ರಹಿಸಿ. ಹಳದಿಯ ಭಾಗವು ಜೀವಕೋಶದ ಕೇಂದ್ರ ಭಾಗ ನ್ಯೂಕ್ಲಿಯಸ್ ಅನ್ನು ಪ್ರತಿನಿಧಿಸುತ್ತದೆ. ನ್ಯೂಕ್ಲಿಯಸ್‌ನಲ್ಲಿ ವ್ಯಕ್ತಿತ್ವವನ್ನು ಪ್ರತಿನಿಧಿಸುವ ಓ 23000ಕ್ಕೂ ಅಧಿಕ ವಂಶವಾಹಿಗಳಿವೆ. ಮೊಟ್ಟೆಯ ಹಳದಿಯನ್ನು ಸುತ್ತುವರಿಯುವ ಬಿಳಿಯ ಭಾಗದಲ್ಲಿ ಮೈಟೋಕಾಂಡ್ರಿಯಗಳು ಸೈಟೋಪ್ಲಾಸಂ ಎಂಬ ಭಾಗದಲ್ಲಿರುತ್ತದೆ. ಮೈಟೋಕಾಂಡ್ರಿಯದಲ್ಲಿ ಬೇರೆಯೇ ವಂಶವಾಹಿ ಗಳಿವೆ.

ಅವು 37 ಇದ್ದು ಒಟ್ಟೂ ವಂಶವಾಹಿಯ ಶೇ. 2 ಆಗಿರುತ್ತದೆ. ಈ ಜೈವಿಕ ಬ್ಯಾಟರಿಗಳು ನಮ್ಮ ಜೀವಕೋಶಗಳೊಳಗೆ ಬಂದು ಹೇಗೆ ಬೇರೆಯದೇ ಆದ ವಂಶವಾಹಿ ಯನ್ನು ಹೊಂದಿವೆ ಎಂಬುದು ವಿಜ್ಞಾನದ ಒಂದು ರೋಚಕ ಕಥೆ. ಮೈಟೋಕಾಂಡ್ರಿಯಾಗಳು ಒಂದು ಕಾಲದಲ್ಲಿ ಸ್ವತಂತ್ರವಾಗಿ ಜೀವಿಸುತ್ತಿದ್ದ ಬ್ಯಾಕ್ಟೀರಿಯಾಗಳು. 2 ಬಿಲಿಯನ್ ವರ್ಷಗಳ ಹಿಂದೆ ನಮ್ಮ ಪೂರ್ವಜರ ಜೀವಕೋಶಗಳು ಈ ಮೈಟೋಕಾಂಡ್ರಿಯಾಗಳನ್ನು ನುಂಗಿ ತಮ್ಮ ಜೀವಕೋಶಗಳ ಒಳಗೆ ಬರಮಾಡಿ ಕೊಂಡವು. ಎಟಿಪಿಯ ಬದಲು ಅವುಗಳಿಗೆ ಆಹಾರ ಮತ್ತು ವಾಸಸ್ಥಾನ ಕೊಡಲಾಯಿತು.

ಮೈಟೋಕಾಂಡ್ರಿಯಗಳು ನಮ್ಮ ಜೀವಕೋಶಗಳಿಗೆ ಶಕ್ತಿ ಕೊಡುವುದರಿಂದ ಅವುಗಳ ಯಾವುದೇ ವಂಶವಾಹಿಯ ದೋಷವೂ ಜೀವಕೋಶವನ್ನು ಹಾಳುಗೆಡವ ಬಲ್ಲದು ಅಥವಾ ನಾಶ ಮಾಡಬಲ್ಲದು. ದೇಹದಲ್ಲಿ ಶಕ್ತಿಯನ್ನು ಬಹಳವಾಗಿ ವ್ಯಯಿಸುವ ಅಂಗಾಂಗಗಳಾದ ಹೃದಯ, ಮೆದುಳು, ಮಾಂಸಖಂಡಗಳು- ಬಹಳವಾಗಿ ತೊಂದರೆಗೊಳಗಾಗುತ್ತವೆ. ಹಾಗಾಗಿ ಮಕ್ಕಳಲ್ಲಿ ಮೈಟೋಕಾಂಡ್ರಿಯಾದ ಕಾಯಿಲೆ ಕಾಣಿಸಿಕೊಂಡಾಗ ದೇಹದ ವಿವಿಧ ಅಂಗಗಳು ವೈಫಲ್ಯ ಹೊಂದುತ್ತವೆ.

ಈ ಕಾಯಿಲೆ ಪಾಲಕರಿಂದ ಮಕ್ಕಳಿಗೆ ವರ್ಗಾವಣೆಯಾಗುವುದಾದರೂ ಅದಕ್ಕೆ ಒಂದು ನಿರ್ದಿಷ್ಟ ಕ್ರಮ ಇಲ್ಲದಿರುವುದರಿಂದ ವೈದ್ಯರಿಗೆ ಇದನ್ನು ಪತ್ತೆ ಹಚ್ಚುವುದೇ ಕಷ್ಟವಾಗುತ್ತದೆ. ವೀರ್ಯಾಣು ಮತ್ತು ಅಂಡಾಣು ದೇಹದಲ್ಲಿ ಫಲಿಸಿದಾಗ ಅಂಡಾಣುವಿನಿಂದ ಮೈಟೋಕಾಂಡ್ರಿಯಾವು ಹುಟ್ಟಲಿರುವ ಮಗುವಿನ ಭ್ರೂಣಕ್ಕೆ ವರ್ಗಾವಣೆಯಾಗುತ್ತದೆ.

ಕಾಯಿಲೆಯನ್ನು ತಮ್ಮಲ್ಲಿ ಹೊಂದಿರುವ ಮಹಿಳೆಯರ ಒಂದು ಅಂಡಾಣು ಮತ್ತೊಂದು ಅಂಡಾಣುವಿಗಿಂತ ಭಿನ್ನವಾಗಿರಬಹುದು. ಕೆಲವು ಅಂಡಾಣುಗಳಲ್ಲಿ ಶೇ. 90 ಮೈಟೋಕಾಂಡ್ರಿಯಾಗಳು ರೋಗಾಣು ಪೀಡಿತವಾಗಿದ್ದರೆ ಮತ್ತೆ ಕೆಲವು ಅಂಡಾಣುಗಳು ಕೇವಲ ಶೇ.10 ರೋಗಾಣು ಪೀಡಿತವಾಗಿರುತ್ತವೆ. ನಿರ್ದಿಷ್ಟ ಮಗುವಿಗೆ ಈ ಕಾಯಿಲೆ ಬರುತ್ತದೋ ಇಲ್ಲವೋ ಎಂಬುದು ಒಂದು ರೀತಿಯ ಲಾಟರಿಯೇ ಸರಿ.

ಮೈಟೋಕಾಂಡ್ರಿಯಾ ಕಾಯಿಲೆಯ ಜತೆಗೆ ಹುಟ್ಟುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು ವೈದ್ಯರು ಪ್ರಯತ್ನಿಸಿದ್ದಾರೆ. ತಾಯಿಯ ಗರ್ಭದ ಹನ್ನೊಂದು ವಾರಗಳಲ್ಲಿ ಕೋರಿಯಾನಿಕ್ ವಿಲ್ಲಸ್ ಸ್ಯಾಂಪ್ಲಿಂಗ್ ಎಂಬ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ವಂಶವಾಹಿಯ ತೊಂದರೆಗಳು ಗೊತ್ತಾಗುತ್ತವೆ. ಪ್ರಸವಪೂರ್ವ ವಂಶವಾಹಿ ಪರೀಕ್ಷೆ ನಡೆಸಿ ಕಾಯಿಲೆ ಇಲ್ಲದ ಭ್ರೂಣಗಳನ್ನು ವೈದ್ಯರು ನಿರ್ದಿಷ್ಟವಾಗಿ ಆರಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಪರೀಕ್ಷೆಗಳು ಪ್ರಯೋಜನಕಾರಿ ಯಾದರೂ ಇವುಗಳಿಗೂ ಹಲವಾರು ಮಿತಿಗಳಿವೆ.

ಮೊದಲೇ ತಿಳಿಸಿದಂತೆ ಡಾ ಟರ್ನ್ ಬುಲ್ ಅವರು ಹಾಳಾದ ಮೈಟ್ರೋಕಾಂಡ್ರಿಯ ತೆಗೆದು ಆರೋಗ್ಯವಂತ ದಾನಿಯ ಮೈಟೋಕಾಂಡ್ರಿಯಾ ಸೇರಿಸುವ ಚಿಕಿತ್ಸೆಯ ಬಗೆಗೆ ಸಂಶೋಧನೆ ನಡೆಸುತ್ತಿದ್ದಾರೆ. ಮೈಟೋಕಾಂಡ್ರಿಯಾ ವರ್ಗಾವಣೆಯಿಂದ ಮಗುವಿನ ಗುಣದಲ್ಲಿ ಏರುಪೇರಾಗುವ ಪ್ರಶ್ನೆಯೇ ಇಲ್ಲ. ನಮ್ಮ ಗುಣಕ್ಕೆ ಮೈಟೋಕಾಂಡ್ರಿಯಾ ಕಾರಣ ವಲ್ಲ ಎಂಬುದು ಜಾರ್ಜ್ ಟರ್ನ್ ಬುಲ್‌ರ ಅಭಿಪ್ರಾಯ.

ತಮ್ಮ ಮಗುವಿಗೆ ಮೈಟೋಕಾಂಡ್ರಿಯಾದ ಊನತೆ ಇಲ್ಲದೆ ತಾಯಿ ತಂದೆ ಇಬ್ಬರ ಡಿಎನ್‌ಎ ಗಳೂ ಇರಬೇಕು ಎಂದರೆ ಎರಡು ಸಾಧ್ಯತೆಗಳಿವೆ. ೧)
ತಾಯಿಯ ಗರ್ಭದ ಭ್ರೂಣವನ್ನು .ಪ್ರಸವ ಪೂರ್ವ ವಂಶವಾಹಿ ಪರೀಕ್ಷೆ ಮಾಡಿ ಮೈಟೋಕಾಂಡ್ರಿಯಾಗಳ ಊನತೆ ಇಲ್ಲದ ಭ್ರೂಣಗಳನ್ನು ನಿರ್ದಿಷ್ಟವಾಗಿ ಆರಿಸುವುದು. ಇದು ತಮ್ಮ ಡಿಎನ್‌ಎನಲ್ಲಿ ಮೈಟೋಕಾಂಡ್ರಿಯಾದ ಮ್ಯುಟೇಷನ್ ಕಡಿಮೆ ಇದ್ದಾಗ ಅಂತಹವರಲ್ಲಿ ಇದು ಸಾಧ್ಯ. ೨) ಆರೋಗ್ಯವಂತ ಮೈಟೋಕಾಂಡ್ರಿಯಾ ಹೊಂದಿರುವ ಬೇರೆ ಅನ್ಯಮಹಿಳೆಯ ಅಂಡವನ್ನು ಉಪಯೋಗಿಸುವುದು.

ಮೊದಲು ತಿಳಿಸಿದ ಮೈಟೋಕಾಂಡ್ರಿಯಾ ದಾನವಾಗಿ ಪಡೆದು ಮಗುವನ್ನು ರೂಪಿಸುವ ಈ ವಿಧಾನ ತಾಯಿ ತಂದೆ ಇಬ್ಬರ ವಂಶವಾಹಿ ವಸ್ತುಗಳನ್ನು ಮಗುವಿ ನಲ್ಲಿ ಹೊಂದಿರಬೇಕು ಎನ್ನುವ ದಂಪತಿಗಳಿಗೆ ಇರುವ ಸುಲಭ ಆಯ್ಕೆ. ಆದರೆ ಇದು ತುಂಬಾ ಇತ್ತೀಚಿನ ಆಧುನಿಕ ಚಿಕಿತ್ಸಾ ವಿಧಾನವಾದ್ದರಿಂದ ಸಾಂಪ್ರದಾಯಿಕ ಪ್ರನಾಳ ಶಿಶು ರೀತಿಯ ವಿಧಾನದಷ್ಟು ಈ ಪ್ರಯೋಗಕ್ಕೆ ದೀರ್ಘವಾದ ಸಫಲತೆಯ ದಾಖಲೆ ಇಲ್ಲ.

ಹಾಗಾಗಿ ಈ ಪ್ರಯೋಗಕ್ಕೆ ಒಳಪಡುವ ದಂಪತಿಗಳು ಆ ಬಗ್ಗೆ ತಿಳಿದಿರಬೇಕು. ಈ ರೀತಿ ಜನಿಸಿದ ಮಕ್ಕಳ ತೀರಾ ಮುಂದಿನ ಭವಿಷ್ಯದ ಬಗ್ಗೆ ಈಗಲೇ ಸ್ಪಷ್ಟವಾಗಿ ಏನೂ ಹೇಳಲು ಸಾಧ್ಯವಿಲ್ಲ ಎಂದು ಈ ಚಿಕಿತ್ಸೆ ಕೈಗೊಳ್ಳುವ ವೈದ್ಯರುಗಳು ಅಭಿಪ್ರಾಯ ಪಡುತ್ತಾರೆ.