Thursday, 19th September 2024

ಅಷ್ಟಕ್ಕೂ ನೂರಕ್ಕೆ ನೂರು ಜೀವನದ ಅರ್ಹತೆಯೇ ?

ಸುಪ್ತ ಸಾಗರ

ರಾಧಾಕೃಷ್ಣ ಎಸ್.ಭಡ್ತಿ

rkbhadti@gmail.com

ಹೊಸತನ, ಆವಿಷ್ಕಾರಗಳಿಗೆ ಮಕ್ಕಳನ್ನು ಪ್ರೋತ್ಸಾಹಿಸಿ ಅವರನ್ನು ಸೃಜನಶೀಲರನ್ನಾಗಿಸಿದಾಗಲೇ ಅವರೊಳಗಿನ ಪ್ರತಿಭೆ ಪುಟವಿಟ್ಟು ಕೊಂಡು ಹೊಳೆ ಯಲು ಸಾಧ್ಯ. ಮಾತ್ರವಲ್ಲ, ವ್ಯಕ್ತಿ, ವಸ್ತು, ಸ್ಥಳ, ಸನ್ನಿವೇಶ ಮತ್ತು ವಿಷಯಗಳ ಬಗ್ಗೆ ನಾವು ಮೊದಲು ಸಕಾರಾತ್ಮಕವಾಗಿ ಯೋಚಿಸಬೇಕು. ಆಗ ನಮ್ಮ ಮಕ್ಕಳು ಸಹ ವಿಶ್ವಾಸದ ಹೆಜ್ಜೆಗಳನ್ನು ಇಡಲು ಸಾಧ್ಯ.

ಹಿಂದೆ…
‘ಶಾಲೆಯ ಪರೀಕ್ಷೆ ಯಾಕೋ ಆಗಿಬರುತ್ತಿಲ್ಲ, ಮಗಳು ಮನೆಯಲ್ಲಿದ್ದು ಮನೆ ಕೆಲಸ ಕಲಿಯಲಿ. ವಯಸ್ಸಿಗೆ ಬಂದ ತಕ್ಷಣ ಮದುವೆ ಮಾಡಿ ಬಿಟ್ಟರಾಯಿತು’ ಮನೆಯಲ್ಲಿ ಅಮ್ಮ ಯಜಮಾನರಿಗೆ ಹೇಳಿ ಬಿಡುತ್ತಿದ್ದಳು. ‘ಮಗನಿಗೇಕೋ ಗವರ‍್ನಮೆಂಟ್ ಪಾಠ ಹತ್ತುತ್ತಿಲ್ಲ, ಶಾಲೆ ಖೈದು ಮಾಡಿ ತೋಟದ ಕಡೆಗೋ, ಅಂಗಡಿ ಕಡೆಗೋ ಹಾಕೋದು ಒಳ್ಳೇದು’ ಅಪ್ಪ ಮನೆಯಲ್ಲಿ ನಿರ್ಧರಿಸಿಬಿಡುತ್ತಿದ್ದ.

ಇದರ ಹೊರತಾಗಿ ಮಗನೋ ಮಗಳೋ ನಪಾಸಾದ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅದೊಂದು ಸಂಗತಿಯೇ ಆಗಿರಲಿಲ್ಲ. ಒಂದೇ ಒಂದು ತಲೆಮಾರಿನ ಹಿಂದೆ ತಿರುಗಿ ನೋಡಿ. ಬಹುತೇಕ ಎಲ್ಲ ಮನೆಗಳ ಸನ್ನಿವೇಶವೂ ಹೀಗೆಯೇ ಇರುತ್ತಿತ್ತು. ಮಗು ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ತೆಗೆದುಕೊಂಡಿದೆ ಎಂದರೆ ಅದೇ ದೊಡ್ಡ ಸಾಧನೆ. ನೂರಕ್ಕೆ ೬೦ಕ್ಕಿಂತ ಹೆಚ್ಚು ತೆಗೆಯುವ ಎಲ್ಲ ಮಕ್ಕಳೂ ಜಾಣರೇ.

ಹಾಗೆಂದು ಅವರ ಬುದ್ಧಿವಂತಿಕೆಗೆ ಅದು ಯಾವತ್ತೂ ಮಾನದಂಡವಾಗಿರಲಿಲ್ಲ. ಪಾಸಾದರೂ ಸಾಕು. ‘ಕಲಿಕೆಯಲ್ಲಿ ಹುಷಾರಿದ್ದಾನೆ. ಮನೆಯಲ್ಲಿ ಇವನು ಓದಲು ಹೋಗಲಿ’ ಎಂಬ ಫರ್ಮಾನು ಹಿರಿಯರಿಂದ ಹೊರಡುತ್ತಿತ್ತೇ ಹೊರತಾಗಲಿ, ಓದಲೇಬೇಕೆಂಬ ಒತ್ತಾಯ ಪೂರ್ವಕ ಹೇರಿಕೆ ಯಾರಿಂದಲೂ ಇರುತ್ತಿರಲಿಲ್ಲ. ಅಷ್ಟೇಕೆ, ಬಹುತೇಕ ಸಂದರ್ಭದಲ್ಲಿ ‘ವ್ಯವಹಾರ, ಮನೆ ತೂಗಿಸಿಕೊಂಡು ಹೋಗಲು ಇವನಿಂದಾಗದು, ಓದಾದರೂ ಓದಲಿ’ ಎಂಬಂಥ ತೀರ್ಮಾನಗಳೂ ಬರುತ್ತಿದ್ದವು.

ಇಲ್ಲಿ ಗಮನಿಸಬೇಕಾದುದು ಬಹಳಷ್ಟಿದೆ. ಶಾಲಾ ಶಿಕ್ಷಣ ಜೀವನಕ್ಕೆ ಅಗತ್ಯ ಎಂಬುದನ್ನು ಮನಗಂಡಿದ್ದರೂ, ಅದೇ ಅನಿವಾರ್ಯ ಆಗಿರಲಿಲ್ಲ. ಒಂದಷ್ಟು ವ್ಯಾವಹಾರಿಕ ಜ್ಞಾನಕ್ಕಾಗಿ ಶಾಲೆಗೆ ಸೇರಿಸಲಾಗುತ್ತಿತ್ತು. ಉಳಿದಂತೆ ಬುದ್ಧಿವಂತಿಕೆಯ ಮಾನದಂಡ ಆತ ಬದುಕನ್ನು ಹೇಗೆ ತೂಗಿಸಿಕೊಂಡು ಹೋಗಬಲ್ಲ ಎಂಬುದರ ಮೇಲೆಯೇ ನಿರ್ಧರಿತವಾಗುತ್ತಿತ್ತು. ಶೈಕ್ಷಣಿಕ ಪರೀಕ್ಷೆಯಲ್ಲಿನ ಸೋಲು ಯಾವತ್ತೂ ಸೋಲೆಂದು ಪರಿಗಣಿತವಲ್ಲವೇ ಅಲ್ಲ. ಬದುಕಿನ ಗೆಲವೇ ಪ್ರತಿ ಮಕ್ಕಳ ಹೆತ್ತವರ ಗುರಿಯಾಗಿರುತ್ತಿತ್ತು. ಅದಕ್ಕಾಗಿ ಮಕ್ಕಳನ್ನು ಗುರುತಿಸಿ ಸಜ್ಜುಗೊಳಿಸಿ, ಅವರಲ್ಲಿ ಯಾವ ಶಕ್ತಿ ಸಾಮರ್ಥ್ಯಗಳಿರುತ್ತವೆಯೋ ಅದಕ್ಕೇ
ಹಚ್ಚುತ್ತಿದ್ದರು.
***

ಈಗ?
ಮೊನ್ನೆ ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದ ಮರುದಿನ ಸಹೋದ್ಯೋಗಿ ರಂಜಿತ್ ಒಂದು ವಿಚಿತ್ರ ಸನ್ನಿವೇಶದ ಬಗ್ಗೆ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದ. ಬೋರ್ಡ್ ಎದುರು ವಿದ್ಯಾರ್ಥಿಯೊಂದಿಗೆ ಪೋಷಕರು ತೀರಾ ಹ್ಯಾಪು ಮೋರೆ ಹಾಕಿಕೊಂಡು ಜಗತ್ತೇ ತಲೆಮೇಲೆ ಬಿದ್ದಂತೆ ನಿಂತಿದ್ದರಂತೆ. ಬಹುಶಃ ಪ್ರತಿ
ಭಾವಂತ ವಿದ್ಯಾರ್ಥಿಯ ಫಲಿತಾಂಶ ಏನೋ ಹೆಚ್ಚುಕಡಿಮೆ ಆಗಿರಬೇಕು ಎಂದುಕೊಂಡು ಅನುಕಂಪಪೂರಿತ ಕಾಳಜಿಯೊಂದಿಗೆ ವಿಚಾರಿಸಲು ಮುಂದಾ ದರೆ, ‘ಎಲ್ಲ ಸಬ್ಜೆಕ್ಟ್‌ನಲ್ಲಿ ಔಟ್‌ಆಫ್ ಔಟ್ ಬಂದಿದೆ. ಆದರೆ, ಸಂಸ್ಕೃತದಲ್ಲಿ ಮಾತ್ರ…’

ಅಪ್ಪ ಹೇಳಿ ಮುಗಿಸುವುದರೊಳಗೆ ವಿದ್ಯಾರ್ಥಿ ಮಧ್ಯೆ ಬಾಯಿ ಹಾಕಿ ‘ಹಂಗಾಗಕ್ಕೆ ಛಾನ್ಸೆ ಇಲ್ಲ ಡ್ಯಾಡ್.. ಎಲ್ಲ ಪರ್ಫೆಕ್ಟ್ ಮಾಡಿ ಬಂದಿದೀನಿ. ಏನೇ ಸೀರಿಯಸ್ ಪ್ರಾಬ್ಲಮ್ ಆಗಿದೆ…’ ಅಷ್ಟರಲ್ಲಿ ಅಮ್ಮನ ಮುಸಿಮುಸಿ ಕಣ್ಣಿರು. ಛೇ, ಇಷ್ಟೆಲ್ಲಾ ಪ್ರತಿಭಾವಂತ ಹುಡುಗ ಸಂಸ್ಕೃತದಲ್ಲಿ ಫೇಲ್ ಆಗಿರಬೇಕು ಅಥವಾ ತೀರಾ ಕಡಿಮೆ ಅಂಕಗಳು ಬಂದಿರಬಹುದು ಎಂದು ಇನ್ನಷ್ಟು ಅನುಕಂಪದಿಂದ ವಿಚಾರಿಸಿದಾಗ ಗೊತ್ತಾಗಿದ್ದು, ಸಂಸ್ಕೃತದಲ್ಲಿ ಒಂದು ಅಂಕ
ಕಡಿಮೆ ಬಂದಿದೆ! ಅಷ್ಟಾಗಿದ್ದಕ್ಕೇ ಜಗತ್ತೇ ಮುಳುಗಿ ಹೋದಂತೆ ಅವರಾಡುತ್ತಿರುವುದು.

ಇಷ್ಟೆಲ್ಲಾ ವಿಷಯಗಳಲ್ಲಿ ಮಗ ನೂರಕ್ಕೆ ನೂರು ಗಳಿಸಿದ ಬಗ್ಗೆ ಒಂದಿನಿತೂ ಸಂಭ್ರಮವಿಲ್ಲ. ಬದಲಿಗೆ ಒಂದು ವಿಷಯದಲ್ಲಿ, ಅದರಲ್ಲೂ ಭಾಷೆಯಲ್ಲಿ ಒಮದು ಅಂಕ ಕಡಿಮೆ ಬಂದಿದ್ದು ಮಹಾ ವೈಫಲ್ಯವೆನ್ನುವಂತೆ ಶತಪತ ಹಾಕುತ್ತಿದ್ದರು… ಹೌದು, ಎಸ್ಸೆಸ್ಸೆಲ್ಸಿಯಲ್ಲೋ, ಪಿಯುಸಿಯಲ್ಲೋ ಶೇ.೮೫-೯೦ ಅಂಕಗಳಿಸಿದರೂ ಅದು ಏನೇನೂ ಅಲ್ಲ. ನಮ್ಮ ಮನೆಯ ಮಗುವೋ, ಪರಿಚಿತರ ಮಕ್ಕಳೋ ಡಿಸ್ಟಿಂಕ್ಷನ್ ಪಡೆದಿರುವುದೂ ನಮಗೆ ಹೆಗ್ಗಳಿಕೆ, ಹೆಮ್ಮೆಯ ಸಂಗತಿಯಲ್ಲವೇ ಅಲ್ಲ. ಶೇ. ೭೦, ೮೦, ೮೫ರಷ್ಟು ಅಂಕಗಳೂ ಗಣನೆಗೆ ಬರುತ್ತಿಲ್ಲ. ನೂರಕ್ಕೆ ನೂರು ಗಳಿಕೆಯ ದಾಖಲೆಯ ಮುಂದೆ ಒಂದು ಅಂಕ ಕಡಿಮೆ ಪಡೆದವರನ್ನೂ ನಿರಾಸೆಯ ಕಾರ್ಮೋಡಕ್ಕೆ ತಳ್ಳುತ್ತಿದೆ.

ಕಾರಣ ನೂರಕ್ಕೆ ನೂರು ಸಾಧನೆ ಸಾಧ್ಯವೆಂದು ಸಾಬೀತಾಗಿದೆ ರಾಜ್ಯದ ೧೪೫ ವಿದ್ಯಾರ್ಥಿಗಳಿಂದ. ಮೊನ್ನೆಮೊನ್ನೆ ಪ್ರಕಟವಾದ ರಾಜ್ಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಹಿಂದೆಂದೂ ಕಾಣದಂಥ ೧೪೫ ಮಂದಿ ೬೨೫ಕ್ಕೆ ೬೨೫ ಅಂಕ ಗಳಿಸಿದ್ದಾರೆ. ಇದರಲ್ಲಿ ಮೊದಲ್ಯಾರು, ಕೊನೆ ಯಾರು. ಹೀಗಾಗಿ ‘ರಾಜ್ಯಕ್ಕೇ ನನ್ನ ಮಗ/ ಮಗಳು ಮೊದಲ ಸ್ಥಾನ ಪಡೆದಿದದಾಳೆ/ನೆ’ ಅಂತ ಹೇಳಿಕೊಂಡು ಬೀಗುವಂತಿಲ್ಲ. ಅಥವಾ ಹಾಗೆ ೧೪೫ ವಿದ್ಯಾರ್ಥಿಗಳ ಹೆತ್ತ ವರೂ ಹೇಳಿಕೊಂಡು ತಿರುಗಬಹುದು. ಇರಲಿ. ಇನ್ನೂ ವಿಶೇಷವೆಂದರೆ ಬರೊಬ್ಬರಿ ೩೦೯ ಮಂದಿ ಕೇವಲ ಒಂದು ಅಂಕದಲ್ಲಿ ‘ಫಸ್ಟ್ ರ‍್ಯಾಂಕ್’ ತಪ್ಪಿಸಿ ಕೊಂಡಿದ್ದಾರೆ. ಇಷ್ಟಕ್ಕೇ ಅಚ್ಚರಿಗೊಳ್ಳುವಂತಿಲ್ಲ. ಪಟ್ಟಿ ಮುಮದುವರಿಯುತ್ತದೆ.

೪೭೨ ವಿದ್ಯಾರ್ಥಿಗಳು ೨ ಅಂಕಗಳಿಂದ ನತದೃಷ್ಟ(?)ರಾಗಿದ್ದಾರೆ. ೬೧೫ ವಿದ್ಯಾರ್ಥಿಗಳಿಗೆ ಮೂರು ಅಂಕಗಳ ಕೊರತೆಯಾಗಿದೆ. ೭೦೬ ವಿದ್ಯಾರ್ಥಿಗಳು ೪ ಅಂಕದಿಂದ ವಂಚಿತರಾದರು. ೭೭೩ ವಿದ್ಯಾರ್ಥಿಗಳು ಬರೋಬ್ಬರಿ ೫ ಅಂಕ ಕಡಿಎ ಪಡೆಯಬೇಕೇ? ಇನ್ನು ಡಿಸ್ಟಿಂಕ್ಷನ್, ಫಸ್ಟ್‌ಕ್ಲಾಸ್‌ಗಳ ಕಥೆ  ಹೇಗಿರಬ ಹುದು. ಈ ಎಲ್ಲರೂ ಅಭಿನಂದನಾರ್ಹರೇ. ಆದರೆ, ಇಂಥ ದಾಖಲೆಯ ಫಲಿತಾಂಶ ಹೆಮ್ಮೆಯಷ್ಟೇ ಆಗಿ ಉಳಿದಿಲ್ಲ. ಸಹಜ ಅಚ್ಚರಿಗೂ ಕಾರಣ ವಾಗುತ್ತಿಲ್ಲ.

ಬದಲಾಗಿ ಮಕ್ಕಳ ‘ಬುದ್ಧಿವಂತಿಕೆ’ಗೆ ಹೊಸ ವ್ಯಾಖ್ಯಾನವನ್ನು ಹೆತ್ತವರ ತಲೆಯಲ್ಲಿ ಸೃಷ್ಟಿಸಿಬಿಟ್ಟಿದೆ. ಶೇ.೯೯.೯೯, .೯೮, .೯೭ ಹೀಗೆ ದಶಮಾಂಶದಲ್ಲಿ ಮಾನದಂಡಗಳು ನಿಗದಿಯಾಗುತ್ತಿವೆ. ಸಹಜವಾಗಿ ನೂರಕ್ಕೆ ೮೦, ೮೫ ಪಡೆದವರ ಸಾಧನೆ ಏನೇನೂ ಅಲ್ಲವೆಂದು ಅನಿಸಲು ಆರಂಭಿಸಿದೆ. ಇದನ್ನು ಹೇಗೆ
ವಿಶ್ಲೇಷಿಸೋಣ? ಇದು ನಿಜಕ್ಕೂ ಶೈಕ್ಷಣಿಕ ಸುಧಾರಣೆಯ ದಿಕ್ಸೂಚಿಯೇ, ಮಕ್ಕಳ ಪರಿಶ್ರಮ, ಪ್ರತಿಭೆಯ ಫಲವೇ? ನಾವು ಅವಲೋಕನಕ್ಕಿಳಿಯಲೇಬೇಕಿದೆ.
ಎರಡೂವರೆ ವರ್ಷ ಸಾಂಕ್ರಾಮಿಕ ಸಂಕಷ್ಟವಿದ್ದರೂ ೧೪೫ ಮಕ್ಕಳು ಔಟ್ ಆಫ್ ಔಟ್ ಗಳಿಸಿದ್ದು ತುಸು ಅಚ್ಚರಿಯೇ.

ಅದಲ್ಲದಿದ್ದರೂ ಇಷ್ಟೊಂದು ಮಂದಿಗೆ ಇಷ್ಟೊಂದು ಅಂಕ ಸಿಗಲು ಹೇಗೆ ಸಾಧ್ಯ? ನಾವೆಲ್ಲ ಕಲಿಯುತ್ತಿದ್ದಾಗ ಹೆಚ್ಚೆಂದರೆ ಗಣತದಲ್ಲಿ, ಇನ್ನೂ ಕೆಲ ಸಂದರ್ಭದಲ್ಲಿ ವಿಜ್ಞಾನದ ವಿಷಯಗಳಲ್ಲಿ ನೂರಕ್ಕೆ ನೂರು ಗಳಿಸುವ ಅವಕಾಶವಿದೆ ಎಂದು ನಮ್ಮ ಮಾಸ್ತರರು ಹೇಳುತ್ತಿದ್ದುದನ್ನು ಕೇಳಿದ್ದೆವು. ನಾವು
ಯಾವತ್ತಿಗೂ ಅಷ್ಟೆಲ್ಲ ಅಂಕ ಗಳಿಸುವ ಸಾಹಸ ಮಾಡುವುದಿರಲಿ, ಅದರ ಹತ್ತಿರಕ್ಕೂ ಹೋದವರಲ್ಲವಾಗಿದ್ದರಿಂದ ಗೊತ್ತಿಲ್ಲ ಬಿಡಿ. ಆದರೂ ಭಾಷಾ ವಿಷಯಗಳಲ್ಲೂ ಪರಿಪೂರ್ಣ ಅಂಕಗಳಿಕೆ ಸಾಧ್ಯವೇ? ಇದು ಬಿಡಿಸಲಾಗದ ಪ್ರಶ್ನೆ.

ಎಸ್ಸೆಸ್ಸೆಲ್ಸಿಗೆ ಪಠ್ಯದ ಒಳಗಡೆ ಬರಿ ವಿಜ್ಞಾನ ಲೆಕ್ಕ ಮಾತ್ರವಲ್ಲ, ಕನ್ನಡ-ಇಂಗ್ಲಿಷ್, ಸಮಾಜ-ವಿಜ್ಞಾನದಂತಹ ಮಾನವಿಕ ವಿಷಯಗಳೂ ಇರುತ್ತವಲ್ಲ. ಅದು ಹೇಗೆ ಅಂತಹ ವಿಷಯಗಳಲ್ಲೂ ನೂರಕ್ಕೆ ನೂರು ಅಂಕ ಪಡೆಯಲು ಸಾಧ್ಯ? ಬಹುಶಃ ಈಗಿನ ಪಠ್ಯ ಪರೀಕ್ಷೆ ಮತ್ತು ಮೌಲ್ಯಮಾಪನ ಪದ್ಧತಿಗಳೇ
ಬದಲಾಗಿ ಹೋಗಿವೆಯೇ? ಹಾಗೂ ನೋಡಿದರೂ ಇಡೀ ರಾಜ್ಯಕ್ಕೆ ಒಂದಿಬ್ಬರು, ಅಥವಾ ಹತ್ತಿಪ್ಪತ್ತು ವಿದ್ಯಾರ್ಥಿಗಳು ಈ ಸಾಧನೆ ಮಾಡಬಹುದು. ನಾವೆಲ್ಲ ಓದುತ್ತಿದ್ದಾಗ ತರಗತಿಗಳಲ್ಲಿ ಕೈಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಪ್ರಥಮ ಶ್ರೇಣಿಯಲ್ಲಿ ಪಾಸಾಗುವವರು.

ವರು ಯಾವತ್ತಿದ್ದರೂ ತರಗತಿಗಳಲ್ಲಿ ಫಸ್ಟ್ ಬೆಂಚ್ ವಿದ್ಯಾರ್ಥಿಗಳಾಗಿರುವವರು. ನಾನಂತೂ ೬೦ರ ಬಳಿಕ ಅಂಕಗಳನ್ನು ನೋಡಿಯೇ ಇಲ್ಲ.
ಬ್ಯಾಂಕಿಂಗ್ ಡಿಪ್ಲೋಮಾದಲ್ಲಿ ಅಪ್ಪನ ಮೇಲಿನ ಹಠಕ್ಕೆ ಬಿದ್ದು ಶೇ.೮೭ ಅಂಕಗಳಿಸಿದ್ದು ಬಿಟ್ಟರೆ, ಇಂದಗೂ ಡಿಗ್ರಿ -ಲ್ಡ್ ವ್ಯಕ್ತಿಯೇ. ಆದರೆ ಬದುಕಿನಲ್ಲಿ ಎಂದಿಗೂ ಸೋಲಲಿಲ್ಲ. ಹೀಗಾಗಿ ಅಂಕಗಳಿಕೆ ಎಂದಿಗೂ ನನಗೆ ದೊಡ್ಡ ವಿಚಾರ ಎನ್ನಿಸಲೇ ಇಲ್ಲ. ಹಾಗೆಂದು ಇವತ್ತಿನ ಔಟ್ ಆಫ್ ಔಟ್ ಪಡೆದವ ರೆಲ್ಲರದ್ದೂ ತಪ್ಪೆಂದು ಹೇಳುತ್ತಿಲ್ಲ.

ಭಾಷೆ, ಸಮಾಜ-ವಿಜ್ಞಾನದಂಥ ವಿಷಯಗಳಲ್ಲೂ ನೂರಕ್ಕೆ ನೂರು ಗಳಿಕೆ ಅನುಮಾನ ಹುಟ್ಟಿಸುವುದಿಲ್ಲವೇ? ಇದು ನೈಜ ಅರ್ಹತೆಯೇ ಅಥವಾ ಮೌಲ್ಯಮಾಪನದ ವೈಫಲ್ಯವೇ? ಅನುಮಾನಗಳೆಲ್ಲವೂ ಒತ್ತೊಟ್ಟಿಗಿರಲಿ, ಎಲ್ಲವೂ ಸರಿಯಾಗಿಯೇ ಇದೆ ಎಂದುಕೊಂಡರೆ ಫಲಿತಾಂಶ ಮೇಲ್ನೋಟಕ್ಕೆ
ಹೆಮ್ಮೆ ಎಂದೆನಿಸುತ್ತಿದೆ. ಆದರೆ, ಇದರ ಹಿಂದಿನ ಒತ್ತಡ ಹಾಗೂ ಅದು ಮಕ್ಕಳ ಮನಃಸ್ಥಿತಿಯ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಒಮ್ಮೆ ಯೋಚಿಸಿ. ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ತಂತ್ರಜ್ಞಾನದ ಗತಿ ವೇಗದಲ್ಲಿ ಸಾಗಿರುವಾಗ ಪ್ರತಿ ಮಕ್ಕಳ ಜ್ಞಾನ ಪರಿಧಿ ವಿಸ್ತಾರವಾಗುತ್ತಿದೆ.

ಹೆಚ್ಚೆಚ್ಚು ಪೈಪೋಟಿಗೆ ಮಕ್ಕಳು ಸಹ ಸಜ್ಜಾಗುತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಇಂಥಾ ಪರಿ ಸ್ಪರ್ಧೆಗೆ ಮಕ್ಕಳನ್ನು ಒಡ್ಡುವುದು ಅಗತ್ಯವೇ? ಅಷ್ಟಕ್ಕೂ ಎಸ್ಸೆಸ್ಸೆಲ್ಸಿ, ಪಿಯುಸಿ ಜೀವನ ಅತಿ ಮುಖ್ಯ ಘಟ್ಟವೆಂದು ಹೇಗೇ ನಿರ್ಧರಿಸಬೇಕು? ಓದೆಲ್ಲಾ ಮುಗಿದು ಬದುಕನ್ನು ನಿರ್ಧರಿಸುವ ಹಂತದಲ್ಲಿ ನಿಮ್ಮ ಎಸ್ಸೆಸ್ಸೆಲ್ಸಿ ಗಳಿಕೆಯೇ ಪರಿಗಣನೆಗೆ ಒಳಪಡುತ್ತದೆಯೇ? ಈ ದೃಷ್ಟಿಯಲ್ಲಿ, ಈಗ ನಿರ್ಮಾಣವಾಗಿರುವ ಅನಾರೋಗ್ಯಕರ ಪೈಪೋಟಿಯ
ದುಷ್ಪರಿಣಾಮಗಳನ್ನೂ ಗ್ರಹಿಸಬೇಕಿದೆ.

ಇವೆಲ್ಲದರ ನಡುವೆ ರಾಜ್ಯದಲ್ಲಿ ಪರೀಕ್ಷೆಗೆ ಕುಳಿತ ಒಟ್ಟು ೮,೫೩,೪೩೪ವಿದ್ಯಾರ್ಥಿಗಳ ಪೈಕಿ, ೧,೨೨,೫೫೩ ಮಕ್ಕಳು ಈ ಬಾರಿ ನಪಾಸಾಗಿದ್ದಾರೆ. ಅವರ‍್ಯಾ ರಿಗೂ ಹಾಗಿದ್ದರೆ ಬದುಕೇ ಇಲ್ಲವೇ? ಅಥವಾ ಇದೇ ಮೊದಲ ಬಾರಿಗೆ ಇವರಷ್ಟೇ ಸೋತವರಲ್ಲ. ಈ ಹಿಂದೆ ಒಂದು ತಲೆಮಾರಿನವರು ಪರೀಕ್ಷೆಯಲ್ಲಿ ಸೋತೂ ಇಂದು ಬದುಕಿನಲ್ಲಿ ಗೆದ್ದು ಬೀಗುತ್ತಿದ್ದಾರಲ್ಲವೇ? ಹಾಗಿದ್ದೂ ಈಗಿನ ಮಕ್ಕಳು ಫೇಲಾಗುವುದಿರಲಿ, ತುಸು ಕಡಿಮೆ ಅಂಕ ಗಳಿಸಿದರೂ ಸಾಕು, ಅವರನ್ನು ಬಹುತೇಕ ದೂರ ತಳ್ಳುವ ಮನೋಭಾವ ನಿರ್ಮಾಣವಾಗುತ್ತಿದೆ.

ಸಮಾಜದಲ್ಲಿ ಜಾತಿ ಅಸ್ಪೃಶ್ಯತೆ ನಿವಾರಣೆಗೆ ಚಳವಳಿಗಳು, ಆಂದೋಲನಗಳು ನಡೆಯುತ್ತಿರುವಾಗಲೇ, ನಮಗೇ ಅರಿವಿಲ್ಲದಂತೆ ಅಂಕಗಳ ಅಸ್ಪೃಶ್ಯತೆ ಮೊಳೆಯುತ್ತಿದೆ. ಈ ಮಕ್ಕಳ ಸೋಲಿಗೆ (?)ಹಾಗಿದ್ದರೆ ಯಾರು ಹೊಣೆ? ರಾಜ್ಯದ ಶೈಕ್ಷಣಿಕ ಗುಣಮಟ್ಟದ ಮಾನದಂಡವಾಗಿ ಇದನ್ನು ಪರಿಗಣಿಸುವ ಅಗತ್ಯ ಇಲ್ಲವೇನು? ನಪಾಸಾದವರ ಬದುಕೇನೂ ಮುಳುಗಿ ಹೋಗುತ್ತಿಲ್ಲ. ಏಕೆಂದರೆ ಎಸ್ಸೆಸ್ಸೆಲ್ಸಿ ಎಂಬುದು ಖಂಡಿತಾ ಬದುಕನ್ನು ನಿರ್ಧರಿಸುವ ಘಟ್ಟವೇ ಅಲ್ಲ. ಹಾಗೊಂದು ಭ್ರಮೆಯನ್ನು ನಾವು ಬಿತ್ತಿ ಕುಳಿತುಬಿಟ್ಟಿದ್ದೇವೆ. ಅದಕ್ಕೆ ಪ್ರಮುಖ ಕಾರಣ ದಂಧೆಗೆ ಬಿದ್ದಿರುವ ಖಾಸಗಿ ಶಾಲೆಗಳು, ಟ್ಯೂಷನ್ ಇನ್‌ಸ್ಟಿಟ್ಯೂಷನ್ ಗಳು. ಮಕ್ಕಳ ಎಲ್ಲ ಸಮಯ, ಸ್ವಾತಂತ್ರ್ಯಗಳನ್ನು ಕಸಿದು ಕಣ್ಕಾಪು ಕಟ್ಟಿದ ಕುದುರೆಯ ಮಾದರಿಯಲ್ಲಿ ಪರೀಕ್ಷೆಯೆಂಬ ಅಖಾಡಕ್ಕೆ ತಳ್ಳಿ ಬಿಡುತ್ತಿದ್ದೇವೆ.

ಇನ್ನು ಎಂಜಿನಿಯರಿಂಗ್ ವೈದ್ಯ, ದಂತ ವೈದ್ಯದಂಥ ವೃತ್ತಿಪರ ಕೋರ್ಸ್‌ಗಳ ಹೆಸರಿನಲ್ಲಿ ಅರಳುವ ಮನಸ್ಸಿನಲ್ಲಿ ಭೀತಿಯ ಹಂದರವನ್ನೇ ಸೃಷ್ಟಿಸಿದ್ದೇವೆ.
ಹೀಗಾಗಿ ಇಂಥ ಕೃತಕ ಪೈಪೋಟಿಯಲ್ಲಿ ತುಸು ಹಿನ್ನಡೆ ಕಂಡರೂ ಮಕ್ಕಳನ್ನು ನಿರಾಸೆ, ಖಿನ್ನತೆ ಆವರಿಸಿಕೊಳ್ಳುತ್ತಿದೆ. ಇನ್ನೂ ಹದಿಹರೆಯದ ಹೊಸ್ತಿಲ ಲ್ಲಿರುವ ಮಕ್ಕಳ ಮನಸ್ಸು ಇನ್ನಿಲ್ಲದಂತೆ ನಲುಗುತ್ತಿದೆ. ಇಂಥ ಹುಚ್ಚು ಪೈಪೋಟಿಯಲ್ಲಿ ಸೋತವರ(?) ಮನಸ್ಥಿತಿಯನ್ನು ಯಾರೂ ಗಮನಕ್ಕೆ ತಂದು ಕೊಳ್ಳುತ್ತಿಲ್ಲ.

ಸರಕಾರವೂ ‘ರ‍್ಯಾಂಕ್ ಗೀಳನ್ನು’ ಉದ್ದೀಪಿಸಿ ಮೃದು ಮನಸ್ಸಿನ ಸ್ವಾಸ್ಥ್ಯ ಕದಡುತ್ತಿದೆ. ಪ್ರಥಮ ಶ್ರೇಣಿಯಲ್ಲಿ ಪಾಸಾಗುವುದು, ಡಿಸ್ಟಿಂಕ್ಷನ್ ಗಳಿಸುವುದು ಏನೇನೂ ಅಲ್ಲ ಎಂಬ ಮನೋಭಾವ ಮಕ್ಕಳಲ್ಲಿ ಕೀಳರಿಮೆಯನ್ನು ಹೆಚ್ಚಿಸುತ್ತಿದೆ. ಒಂದಿಡೀ ಯುವ ಜನಾಂಗ ಇಂಥ ಕೀಳರಿಮೆಗೆ ಸಿಲುಕಿ ಬದುಕಿನ ಆಸಕ್ತಿಯನ್ನೇ ಕಳೆದುಕೊಳ್ಳುವ ಭೀತಿ ಸೃಷ್ಟಿಯಾಗುತ್ತಿದೆ. ರ‍್ಯಾಂಕ್ ಬರುವ ಅರ್ಹತೆಯುಳ್ಳವರಿಗೆ ಮಾತ್ರ ಪ್ರವೇಶ ಎನ್ನುವ ಬಹುತೇಕ ಖಾಸಗಿ ಶಾಲೆಗಳ, ಅತಿಹೆಚ್ಚು ಅಂಕಗಳಿಕೆಯ ಮಾರ್ಗ ತೋರುವ ಉದ್ದೇಶಕ್ಕೇ ಹುಟ್ಟಿಕೊಂಡಿರುವ ಟ್ಯೂಷನ್ ಇನ್ಸ್‌ಟಿಟ್ಯೂಷನ್‌ಗಳ ‘ದಂಧೆ’ಯ ಇನ್ನೊಂದು ಮುಖವನ್ನು ಗಮನಿಸಲೇಬೇಕು.

ಹಾಗಾದರೆ ಇವರೆಲ್ಲರ ಗುರಿ ಜಾಣರಿಗಷ್ಟೇ ಪಾಠ ಮಾಡುವುದೇ? ಹಾಗಿದ್ದರೆ ಉಳಿದವರು ಕಲಿಕೆಗೆ, ಬದುಕಿಗೇ ಅನರ್ಹರೇ? ಅಷ್ಟಕ್ಕೂ ಅಂಕಗಳಿಕೆ ಯೊಂದೇ ಜಾಣತನವೇ? ಅಕಾಡೆಮಿಕ್ ಸ್ವರೂಪದಿಂದ ಹೊರತಾಗಿ, ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಮಕ್ಕಳ ಮನಸ್ಸನ್ನು ಸಜ್ಜುಗೊಳಿಸುವ ಸಾಂಸ್ಕೃತಿಕ ಪೈಪೋಟಿಯನ್ನು ಸೃಷ್ಟಿಸುವವರುಯಾರು?
***

ಯಾವತ್ತಿಗೂ…
ಪ್ರತಿಭೆ ಎನ್ನುವುದು ಹುಟ್ಟಿನಿಂದಲೇ ಬರುತ್ತದೆ, ಆದರೆ ಪರಿಪೂರ್ಣತೆ ತರಬೇತಿ- ಪರಿಶ್ರಮದಿಂದ ಮಾತ್ರ ದಕ್ಕುವಂಥದ್ದು. ಜೀನಿಯಸ್‌ನ ಮೂಲ ಇರುವುದು ಜೀನ್ ನಲ್ಲಿ. ಒಪ್ಪೋಣ. ಆದರೆ ಅದು ಪ್ರತಿಯೊಂದು ಮಗುವಿ ನಲ್ಲೂ ಮೊಳೆತಿರುತ್ತದೆ. ಅದನ್ನು ಗುರುತಿಸಿ, ನೀರೆರೆಯಬೇಕಾದ್ದು ಪರಿಸರದ ಹೊಣೆ. ಗುಣಾತ್ಮಕ, ಮೌಲ್ಯಯುತ ಕ್ರಮಗಳಿಂದ ಮಾತ್ರವೇ ಒಬ್ಬ ಜೀನಿಯಸ್‌ನನ್ನು ಸೃಷ್ಟಿಸಬಹುದೇ ಹೊರತೂ ಹಲವು ಮಿಶ್ರಣಗಳನ್ನು ಕಲಕಿ ಎರಕ
ಹೊಯ್ಯುವುದರಿಂದಾಗಲೀ, ಹರಕೆ, ಹಾಡ್ಯಗಳನ್ನು ಹೊತ್ತು ಅಂಥ ಮಗುವನ್ನು ಹೆತ್ತು ಬಿಡುತ್ತೇನೆ ಎಂಬ ನಂಬಿಕೆಯಿಂದಾಗಲೀ, ಲಕ್ಷಗಟ್ಟಲೆ ಸುರಿದು ಖಾಸಗಿ ಶಾಲೆಗಳಿಗೆ ಸೇರಿಸುವುದರಿಂದಾಗಲೀ ಜೀನಿಯಸ್‌ನನ್ನು ಪಡೆಯಲು ಸಾಧ್ಯವೇ ಇಲ್ಲ.

ನಮ್ಮ ಮೆದುಳಿನ ವಿಶೇಷ ಗುಣ ಮತ್ತು ಅದರ ವೈಫಲ್ಯ ಎರಡೂ ಒಂದೇ. ಏನೆಂದರೆ ಬಳಸದೇ ಇದ್ದ ಭಾಗ ಸಾಯುತ್ತದೆ. ಶೇ. ೨೫ರಷ್ಟು ಮೆದುಳನ್ನು ಮಾತ್ರ ಸದಾ ಕ್ರಿಯಾಶೀಲವಾಗಿಟ್ಟು ಉಳಿದದ್ದನ್ನು ಹಾಗೆಯೇ ಬಿಟ್ಟರೆ ಅದು ನಮ್ಮೊಂದಿಗೇ ಸತ್ತು ಹೋಗುತ್ತದೆ. ಹಾಗೆ ಸಾಯದೇ ಮೆದುಳಿನ ಎಲ್ಲ ಭಾಗವನ್ನೂ ಕ್ರಿಯಾಶೀಲವಾಗಿರುವಂತೆ ಮಾಡಲು ಮೂಲಭೂತವಾಗಿ ಬೇಕಾಗಿರುವಂಥದ್ದು ಪ್ರೇರಣೆ. ಅಂಥ ಪ್ರೇರಣೆಯನ್ನು ಮಕ್ಕಳಿಗೆ ಹೆತ್ತವರು,
ಶಿಕ್ಷಕರು, ಬಂಧುಗಳು ಅಥವಾ ಸುತ್ತಲಿನ ಪರಿಸರದ ವ್ಯಕ್ತಿಗಳು ನೀಡಬೇಕಾಗುತ್ತದೆ. ಆಗ ತಂತಾನೇ ಅವರೊಳಗಿನ ಆಸಕ್ತಿ, ಕುತೂಹಲಗಳು ಹೆಚ್ಚಿ ಮಕ್ಕಳು ಆತ್ಮ ವಿಶ್ವಾಸದೊಂದಿಗೆ ಮುನ್ನುಡಿ ಇಡಲಾರಂಭಿಸುತ್ತವೆ.

ಹೆಜ್ಜೆ ಇಡಲಾರಂಭಿಸುವ ಮಗುವನ್ನು ಬಿದ್ದುಬಿಟ್ಟೀತೆಂದು ಕಟ್ಟಿಹಾಕಿ ಬಿಟ್ಟರೆ ಅದರ ಕಾಲು ಬಲಿತು ನಡೆಯುವುದನ್ನು ಕಲಿಯುವುದಾದರೂ ಹೇಗೆ? ಅಥವಾ ನಾವೇ ಅದನ್ನು ಕೆಳಕ್ಕೆ ಇಳಿಸದೇ ಎತ್ತಿಕೊಂಡೋ, ಕೈಹಿಡಿದುಕೊಂಡೋ ತಿರುಗಾಡಿಸಿದರೂ ಮಗು ಅವಲಂಬನೆಯಿಂದ ಹೊರಬರುವುದೇ ಇಲ್ಲ. ಮಗು ಬೀಳಲೇಬೇಕು. ಅದರಿಂದ ಅದಕ್ಕೆ ತೀವ್ರ ಆಘಾತವಾಗದಂತೆ ಕಣ್ಣೆಚ್ಚರದಲ್ಲಿ ಇಟ್ಟುಕೊಳ್ಳುವುದಷ್ಟೇ ನಮ್ಮ ಕರ್ತವ್ಯ. ಜತೆಗೆ ಹೀಗೆಯೇ ನಡೆ ಎನ್ನುವುದನ್ನು ನಾವದರ ಮುಂದೆ ನಡೆದಾಡಿ ತೋರಿಸಿ ತಿದ್ದಬೇಕು. ಆಗಲೇ ಅದು ದೃಢವಾಗಿ ತನ್ನ ಕಾಲಮೇಲೆ ನಿಂತುಕೊಳ್ಳುತ್ತದೆ. ನಂತರ
ದಿನವೂ ಸ್ವಲ್ಪ ಸ್ವಲ್ಪವೇ ನಡೆದಾಡಿಸಿ, ಓಡಿಸಿ, ಕಠಿಣ ವ್ಯಾಯಾಮಗಳನ್ನು ಕಲಿಸಿ, ತಂತ್ರಗಾರಿಕೆಗಳನ್ನು ಕಲಿಸಿ ಆ ಮಗುವನ್ನು ನುರಿತ ಓಟಗಾರನನ್ನಾಗಿ ಸಿದ್ಧಪಡಿಸಬಹುದು.

ಆತ್ಮಬಲ, ಸ್ವಯಂಶಿಸ್ತು, ಪರಿಶ್ರಮ, ಕಾರ್ಯತತ್ಪರತೆಗಳನ್ನು ಮಕ್ಕಳಲ್ಲಿ ತುಂಬಿದಾಗ ಬೇರೆ ಬೇರೆ ಅಭಿರುಚಿಯ ಮಕ್ಕಳು ಆಯಾ ಕ್ಷೇತ್ರಗಳ ಸಾಧಕರಾಗಿ ಹೊರಹೊಮ್ಮಲು ಸಾಧ್ಯ. ಇಲ್ಲದಿದ್ದರೆ ಕತ್ತೆಯನ್ನು ಗಾಣಕ್ಕೆ ಕಟ್ಟಿ ಕೋಣವನ್ನು ಮರಳುಗಾಡಿಗೆ ಬಿಟ್ಟಂತಾಗಬಹುದು. ತಮ್ಮ ಮಗು ಎಲ್ಲರಿಗಿಂತ ಬುದ್ಧಿವಂತ ನಾಗಬೇಕು ಎಂಬುದು ಬಹುಶಃ ಈ ಭೂಮಿಯ ಮೇಲಿನ ಎಲ್ಲರ ಹೆಬ್ಬಯಕೆಯೂ ಆಗಿರುತ್ತದೆ. ಆದರೆ ಅಂಥ ಕನಸಿಗೆ ನೀರೆರೆದು ಪೋಷಿಸಿಕೊಳ್ಳುವಲ್ಲಿ ಸ್ವತಃ ಹೆತ್ತವರೇ ವಿಫಲರಾಗುತ್ತಾರೆ.

ಹೊಸತನ, ಆವಿಷ್ಕಾರಗಳಿಗೆ ಮಕ್ಕಳನ್ನು ಪ್ರೋತ್ಸಾಹಿಸಿ ಅವರನ್ನು ಸೃಜನಶೀಲರನ್ನಾಗಿಸಿದಾಗಲೇ ಅವರೊಳಗಿನ ಪ್ರತಿಭೆ ಪುಟವಿಟ್ಟುಕೊಂಡು ಹೊಳೆಯಲು ಸಾಧ್ಯ. ಮಾತ್ರವಲ್ಲ, ವ್ಯಕ್ತಿ, ವಸ್ತು, ಸ್ಥಳ, ಸನ್ನಿವೇಶ ಮತ್ತು ವಿಷಯಗಳ ಬಗ್ಗೆ ನಾವು ಮೊದಲು ಸಕಾರಾತ್ಮಕವಾಗಿ ಯೋಚಿಸಬೇಕು. ಆಗ ನಮ್ಮ ಮಕ್ಕಳು ಸಹ ವಿಶ್ವಾಸದ ಹೆಜ್ಜೆಗಳನ್ನು ಇಡಲು ಸಾಧ್ಯ. ಸ್ಪರ್ಧೆಗೆ ಹೆದರುವ ಮನಸ್ಸುಗಳಿಂದ ಯಾವುದೇ ಸಾಧನೆ ಸಾಧ್ಯವೇ ಇಲ್ಲ. ಹೀಗಾಗಿ ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಮಕ್ಕಳಲ್ಲಿನ ಪುಕ್ಕಲುತನ, ಹಿಂಜರಿಕೆ, ಸಂಕೋಚ, ವಿಶ್ವಾಸಗಳನ್ನುಹೊಡೆದೋಡಿಸಿ.

ಜತೆಗೆ ಎಲ್ಲ ಮಕ್ಕಳೂ ಎಲ್ಲದರಲ್ಲೂ ಪರಿಣಿತರಾಗಿರಲು ಸಾಧ್ಯವೇ ಇಲ್ಲ. ಅದು ನಮ್ಮ ದೌರ್ಬಲ್ಯ, ನವಿಲನ್ನು ಕಂಡೊಡನೆ ನಮ್ಮ ಮಗುವೂ ನೃತ್ಯ ಮಾಡಬೇಕಿತ್ತು ಎನಿಸುತ್ತದೆ. ಕೋಗಿಲೆಯನ್ನು ನೋಡಿ ಮಗುವನ್ನು ಹಾಡುಗಾರನಾಗಿಸಬೇಕಿತ್ತು ಎಂದುಕೊಳ್ಳುತ್ತೇವೆ. ನಿಜವಾಗಿ ಅದು ಓಡುವ ಚಿಗರೆ. ಒಂದೊಂದು ಮಗುವಿನಲ್ಲಿ ಒಂದೊಂದು ವಿಶೇಷತೆ ಇರುತ್ತದೆ. ಅದನ್ನು ಗುರುತಿಸಿ ಆ ದಾರಿಯಲ್ಲೇ ಮುನ್ನಡೆಸಿದರೆ ಯಶಸ್ಸು ಖಂಡಿತಾ ಲಭ್ಯ.