Saturday, 26th October 2024

ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಿ: ಸಚಿವ ಶಂಕರ ಪಾಟೀಲ್

ಕೃತಕ ಅಭಾವ ಸೃಷ್ಟಿಸುವವರ ಮೇಲೆ ಕ್ರಮಕ್ಕೆ ಸೂಚನೆ

ರಾಯಚೂರು: ಜಿಲ್ಲೆಯ ರೈತರಿಗೆ ರಸ ಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕಾಳಸಂತೆಯಲ್ಲಿ ಕೃತಕ ಅಭಾವ ಸೃಷ್ಟಿಸುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಬ.ಪಾಟೀಲ್ ಮುನೇನಕೊಪ್ಪ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಸೋಮವಾರ ದಂದು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಮತ್ತು ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕುರಿತು ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ, ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಅತಿ ಹೆಚ್ಚು ಮಳೆಯಾಗಿದ್ದು, ಮಳೆಯಿಂದ ಜಿಲ್ಲೆಯಲ್ಲಿ ಹಾನಿಗೊಳ ಗಾದ ಪ್ರದೇಶಗಳಿಗೆ ಸಂಬAಧಿಸಿದ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸ್ಪಂದಿಸುವAತೆ ಕೆಲಸ ಮಾಡಬೇಕು. ಒಂದು ವೇಳೆ ಸಮಸ್ಯೆ ಇದ್ದಲ್ಲಿ ನನ್ನ ಗಮನಕ್ಕೆ ಕೂಡಲೇ ತರಬೇಕೆಂದು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಲೈಸೆನ್ಸ್ ಹೊಂದಿದ ಬಿತ್ತನೆ ಬೀಜ ಮಾರಾಟಗಾರರ ಜೊತೆ ಜಿಲ್ಲಾಧಿಕಾರಿಗಳು ಹಾಗೂ ಜಂಟಿ ಕೃಷಿ ಅಧಿಕಾರಿಗಳು ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಬೇಕು. ನಿರ್ದೇಶನ ನೀಡಿದ ಮೇಲೂ ಹೆಚ್ಚಿನ ಬೆಲೆಗೆ ಬೀಜ ಮಾರಾಟ ಮಾಡಿದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸಚಿವರು ಸೂಚನೆ ನೀಡಿದರು.

ಮಳೆಯ ನೆಪ ಹೇಳಿ ವಿದ್ಯುತ್ ತೆಗೆಯುವುದು ಸರಿಯಲ್ಲ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ ರಸ ಗೊಬ್ಬರ ಹಾಗೂ ಬಿತ್ತನೆ ಬೀಜಗಳು ಸರಿಯಾಗಿ ರೈತರಿಗೆ ಸಿಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದ್ದು, ಮುಂದಿನ ಮೂರು ದಿನಗಳಲ್ಲಿ ರೈತರಿಗೆ ಸರಿಯಾಗಿ ಬಿತ್ತನೆ ಬೀಜಗಳ ಪೂರೈಕೆಗೆ ಕ್ರಮ ಕೈಕೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪೂರ ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಬೀಜದ ಬೇಡಿಕೆ: 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜವು ರೈತರ ಬೇಡಿಕೆ ಅನುಗುಣವಾಗಿ ಪೂರೈಕೆ ಮಾಡಲಾಗುತ್ತಿದ್ದು, 2022-23ನೇ ಸಾಲಿನಲ್ಲಿ ಭತ್ತವು 10035 ಕ್ವಿಂಟಾಲ್, ತೊಗರಿ 4336.75 ಕ್ವಿಂಟಾಲ್, ಹೆಸರು 404.9 ಕ್ವಿಂಟಾಲ್, ಉದ್ದು 0 ಕ್ವಿಂಟಾಲ್, ಸಜ್ಜೆ 853.8 ಕ್ವಿಂಟಾಲ್, ಮೆಕ್ಕೆ ಜೋಳ 147.5 ಕ್ವಿಂಟಾಲ್, ಸೂರ್ಯಕಾಂತಿ 841.6 ಕ್ವಿಂಟಾಲ್ ಸೇರಿದಂತೆ ಒಟ್ಟು 16619.55 ಬೇಡಿಕೆ ಇದೆ ಎಂದು ಸಚಿವರಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.

ಚೆಕ್ ವಿತರಣೆ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಸಿಡಿಲು ಬಡಿದು ಮೃತಪಟ್ಟ ರೈತರ ಜಾನುವಾರುಗಳಿಗೆ ಜಿಲ್ಲಾಡಳಿತ ದಿಂದ ಚೆಕ್ ವಿತರಿಸಲಾಯಿತು.

ದೇವಸೂಗೂರು ಗ್ರಾಮದ ಜಂಬಣ್ಣ ತಂದೆ ಪೂಜಾರಿ ಅವೆ ಎರಡು ಟಗರುಗಳಿಗೆ 6ಸಾವಿರ, ಮಾಮಡದೊಡ್ಡಿಯ ಹನುಮಂತ ತಂದೆ ಪಾಲಪ್ಪ ಅವರ ಹಸು 30ಸಾವಿರ, ಅರಸಿಗೇರಾ ಗ್ರಾಮದ ಗೋವಿಂದ ತಂದೆ ತಿಮ್ಮಪ್ಪ ಅವರ ಎರಡು ಎತ್ತುಗಳಿಗೆ 50ಸಾವಿರ, ಆತ್ಕೂರು ಗ್ರಾಮದ ದತ್ತುಸ್ವಾಮಿ ತಂದೆ ಜಂಬಣ್ಣ ಅವರ ಒಂದು ಎಮ್ಮೆ 30ಸಾವಿರ ರೂಪಾಯಿ ಪರಿಹಾರದ ಚೆಕ್‌ಗಳನ್ನು ಸಚಿವರು ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಲಿಂಗಸೂಗೂರು ಶಾಸಕ ಡಿ.ಎಸ್. ಹುಲಿಗೇರಿ, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ, ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಸಿಂದನೂರು ಶಾಸಕ ವೆಂಕಟರಾವ್ ನಾಡಗೌಡ, ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರ್ ಜಹರಾ ಖಾನಂ, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಶಶಿಕಾಂತ ಶಿವಪೂರೆ, ರಾಯಚೂರು ತಹಶೀಲ್ದಾರ ಡಾ.ಹಂಪಣ್ಣ ಸಜ್ಜನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.