Thursday, 19th September 2024

ರೈಲು, ಬೋಗಿ, ಹಳಿ; ನೆನಪು ಹೃದಯದ ಬಳಿ

ಸುಪ್ತ ಸಾಗರ

ರಾಧಾಕೃಷ್ಣ ಎಸ್.ಭಡ್ತಿ

rkbhadti@gmail.com

ಒಂದೊಮ್ಮೆ ಅದರ ಅಗಾಧತೆ, ದೇಶದೆಲ್ಲೆಡೆ ನರನಾಡಿಗಳಂತೆ ಹಬ್ಬಿಕೊಂಡಿರುವ ರೈಲ್ವೆ ಮಾರ್ಗಗಳು, ಒಂದಿನಿತೂ ವ್ಯತ್ಯಯವಾಗದಂತೆ ಇಡೀ ರೈಲ್ವೆ ವ್ಯವಸ್ಥೆ
ನಡಕೊಂಡು ಹೊರಟಿರುವ ರೀತಿಯನ್ನು ನೆನಪಿಸಿಕೊಂಡರೆ ಸಾಕು, ಇನ್ನೂ ಏಕಿದು ಜಗತ್ತಿನ ವಿಸ್ಮಯಗಳ ಸಾಲಿಗೆ ಸೇರಿಲ್ಲ ಎಂಬ ಪ್ರಶ್ನೆ ತನ್ನಿಂದ ತಾನೇ ಉದ್ಭವಿಸುತ್ತದೆ.

ದಿನಕ್ಕೆ ಎರಡೇ ಬಾರಿ ಅಲ್ಲಿ ಜನಜಂಗುಳಿ. ಬೆಳಗ್ಗೆ ೯.೩೦ಕ್ಕೊಮ್ಮೆ ಸಂಜೆ ೫.೩೦ಕ್ಕೊಮ್ಮೆ ಬಿಟ್ಟರೆ ಉಳಿದಂತೆ ಆ ಇಡೀ ಪ್ರದೇಶ ಬಹುತೇಕ ನಿರ್ಜನವೇ. ಹಾಗೆಂದು ಅಲ್ಲಿ ಜನರೇ ಇರುತ್ತಿರಲಿಲ್ಲವೆಂದೇನೂ ಅಲ್ಲ. ಇರುತ್ತಿದ್ದ ವರೆಲ್ಲ ಬಹುತೇಕ ಒಂದಷ್ಟು ಹೊತ್ತು ಒಂಟಿತನವನ್ನು ಬಯಸಿಯೇ ಅಲ್ಲಿಗೆ ಬರುತ್ತಿದ್ದುದು.

ಆ ಪುಟ್ಟ ಪಟ್ಟಣದ ಯುವ ಜೋಡಿಗಳಿಗೆ ಊರಿನವರ, ಪರಿಚಿತರ, ಹೆತ್ತವರ ಕಣ್ತಪ್ಪಿಸಿ ಅಲ್ಲಿನ ಬೆಂಚಿನ ಮೇಲೋ, ಮರದ ಕೆಳಗೋ ಪರಸ್ಪರ ತೆಕ್ಕೆಯಲ್ಲಿ ಕಳೆದು ಹೋಗಿರುತ್ತಿತ್ತು. ಬಸ್‌ಸ್ಟಾಂಡ್‌ನಲ್ಲೋ, ಎಪಿಎಂಸಿ ಯಲ್ಲೋ, ಅಡಕೆ, ಬಾಳೆಕಾಯಿ ಮಂಡಿಯಲ್ಲೋ ಮೂಟೆಗಳನ್ನು ಹೊತ್ತು ದಣಿದು ಮಧ್ಯಾಹ್ನದ ಉರಿಬಿಸಿಲಿ ನಲ್ಲಿ ಒಂದಷ್ಟು ವಿಶ್ರಾಂತಿ ಬಯಸುವ ದೇಹ ಅಲ್ಲಿ ಯಾವುದೋ ಕಟ್ಟೆಯ ಮೇಲೆ ಒರಗಿ ಜಗತ್ತನ್ನೇ ಮರೆತು ನಿದ್ರಿಸುತ್ತಿರುತ್ತಿತ್ತು. ಇನ್ಯಾವುದೋ ಮೂಲೆಯಲ್ಲಿ ಇಬ್ಬರು ಮಧ್ಯ ವಯಸ್ಕರು ತಂತಮ್ಮ ಸಂಸಾರದ ಹಳವಂಡಗಳನ್ನು ಮುಚ್ಚುಮರೆಯಿಲ್ಲದೇ ಹಂಚಿಕೊಳ್ಳುವುದರಲ್ಲಿ ನಿರತರು. ಹೂ ಮಾರುವ ಹಣ್ಣು ಹಣ್ಣು ಅಜ್ಜಿ ಹಳೆಯ ಬಿಸ್ಲೇರಿ ಬಾಟಲಿಗೆ ಅಲ್ಲಿಯ ನಳದ ನೀರನ್ನೇ ತುಂಬಿಸಿಟ್ಟುಕೊಂಡು ಬಂದು ಕುಳಿತು ಮಧ್ಯಾಹ್ನದ ಬುತ್ತಿ ಮೆಲ್ಲುತ್ತಿದ್ದಳು.

ಕುರಿಗಳನ್ನು ಅಲ್ಲೆಲ್ಲೋ ಮೇಯಲು ಬಿಟ್ಟು ಬಂದ ದನಗಾಹಿ ಅಜ್ಜನಿಗೂ ಅದು ವಿಶ್ರಾಂತಿಯ ತಾಣ. ಜೀವನದಲ್ಲಿ ಬೇಸತ್ತು ಬಂದವನೊಬ್ಬ ತದೇಕ ಚಿತ್ತನಾಗಿ ಆಗಸ ನೋಡುತ್ತ ಕುಳಿತಿರುತ್ತಿದ್ದ. ಪದವಿ ಮುಗಿಸಿ ವರ್ಷವಾದರೂ ಕೆಲಸ ಸಿಗದೇ ಕಚೇರಿಗಳನ್ನು ಅಲೆಯುವ ಯುವಕ ಅಲ್ಲಿ ಕುಳಿತು ಮುಂದಿನ ಸಂದರ್ಶನಕ್ಕೆ ಆತ್ಮವಿಶ್ವಾಸವನ್ನು ಒಗ್ಗೂಡಿಸಿಕೊಳ್ಳುತ್ತಿದ್ದ. ಸಾಲದಿಂದ ಕಂಗೆಟ್ಟ ಮನಸ್ಸಿಗೆ ಅಲ್ಲೆಲ್ಲೋ ಸಿಗುತ್ತಿದ್ದ ಸಾಂತ್ವನ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನೊಂದು ವಾರವಿರುವ ಆ ಹುಡುಗ ಸೋಷಿಯಲ್ ಸೈನ್ಸ್ ಪುಸ್ತಕ ಹಿಡಿದು ಅಲ್ಲೆಲ್ಲೋ ಕುಳಿತು ಗಟ್ಟಿಯಾಗಿ ಇಸವಿಗಳ ಉರು ಹೊಡೆಯು ತ್ತಿರುತ್ತಿದ್ದ.

ಮನೆ ಮಠಗಳ್ಯಾವುದನ್ನೂ ಕಾಣದ ಭಿಕ್ಷುಕನಿಗೆ ಇದ್ದೊಂದು ಜತೆ ಬಟ್ಟೆಯನ್ನು ತೊಳೆದೊಣಗಿಸಿಕೊಳ್ಳಲು ಅಲ್ಲಿ ಸೌಕರ್ಯ ಒದಗಿತ್ತು. ಅಲ್ಲಿಂದ ತುಸುವೇ ದೂರ ದಲ್ಲಿ ಆಗಾಗ ಗಿರಾಕಿಗಳನ್ನು ಹುಡುಕಿಕೊಂಡು ಬಂದು ವ್ಯವಹಾರ ಕುದುರಿಸಿಕೊಳ್ಳಲು ‘ಅವಳು’ ಯತ್ನಿಸುತ್ತಿದ್ದಳು. ಇವೆಲ್ಲದರ ನಡುವೆ ಮನೆಯಲ್ಲಿ ಶಾಲೆಗೆ ಹೋಗುತ್ತೇನೆಂದು ಹೇಳಿ ಪಾಠಿಚೀಲ ಹೆಗಲಿಗೇರಿಸಿಕೊಂಡು ಹೊರಟ ಬಳಿಕ ಗಣಿತ ಮಾಸ್ತರರು ಕೊಟ್ಟಿದ್ದ ಹೋಮ್‌ವರ್ಕ್ ನೆನಪಾದ ಹುಡುಗರು, ಶಾಲೆ ತಪ್ಪಿಸಿ ಅಲ್ಲಿಯೇ ಕೇಕೆ ಹಾಕುತ್ತ ಸಂಜೆಯವರೆಗೆ ಆಡುತ್ತ ಕಳೆಯುತ್ತಿದ್ದುದು ಸಾಮಾನ್ಯ ದೃಶ್ಯ.

ಬಹುಶಃ ಆ ಒಂದು ತಾಣವನ್ನು ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಹೃದ್ಯ ಎಲ್ಲ ಭಾವನೆಗಳಿಗೂ ಮುಕ್ತ ಅಭಿವ್ಯಕ್ತಿಯನ್ನು ಕಟ್ಟಿಕೊಡಬಲ್ಲದಾಗಿದ್ದ ಏಕೈಕ ಸ್ಥಳ ಅದಾಗಿದ್ದುದರಲ್ಲಿ ವಿಶೇಷ ಇಲ್ಲವೇ ಇಲ್ಲ. ಆಗೊಮ್ಮೆ ಈಗೊಮ್ಮೆ ಹಾಗೆ ಬಂದು ಹೀಗೆ ಹೋಗುವ ಗೂಡ್ಸ್ ಟ್ರೈನ್ ಗಳು, ಹಳಿಗಳ ಪರಿಶೀಲನೆಗಾಗಿ ಕಾಣಿಸಿಕೊಳ್ಳುವ ತಳ್ಳುಗಾಡಿಯ ನಮೂನೆಯ ವ್ಯಾಗನ್‌ಗಳನ್ನು ಬಿಟ್ಟರೆ ‘ಸಾಗರ ಜಂಬಗಾರು’ ಪ್ರದೇಶಕ್ಕೆ ದಿನದಲ್ಲಿ ಬರುವುದು ಎರಡೇ ಎರಡು ರೈಲುಗಳು.
ಹೌದು, ರೈಲ್ವೆ ಭಾಷೆಯಲ್ಲಿ ಅದನ್ನು ಜಂಬಗಾರು ಎಂತಲೇ ಕರೆಯುತ್ತಾರಂತೆ.

ನಿಲ್ದಾಣದ ಆಚೆ ಈಚೆ ತುದಿಗಳ ಸಿಮೆಂಟ್ ಬೋರ್ಡ್‌ನಲ್ಲಿ ಅಚ್ಚ ಹಳದಿ ಬಣ್ಣದ ಮೇಲೆ ಕಪ್ಪು ಅಕ್ಷರಗಳಿಂದ ಬರೆದು ಹಾಕಿದ್ದರ ಅರ್ಥ ಅಂದಿಗೂ ಇಂದಿಗೂ ನನ್ನ ಪಾಲಿಗೆ ನಿಗೂಢವೆ. ಒಟ್ಟಾರೆ ರೈಲ್ವೆ ಸ್ಟೇಷನ್ ಅನ್ನೋದಕ್ಕೆ ಹಾಗಂತಾರೆ ಇರಬಹುದು ಎಂದುಕೊಂಡಿದ್ದೆ. ಬಾಲ್ಯದಿಂದಲೂ ಆ ಬೋರ್ಡ್‌ನ ಬಗೆಗಿರುವಷ್ಟೇ ಕುತೂಹಲ, ವಿಸ್ಮಯ, ಕೌತುಕ ಆ ರೈಲ್ವೆ ನಿಲ್ದಾಣ ಹಾಗೂ ಅಲ್ಲಿ ಬಂದು ಹೋಗುವ ಟ್ರೈನ್‌ಗಳ ಬಗೆಗೆ. ಈಗಲೂ ಅದು ತಣಿದಿಲ್ಲ. ಬದಲಾಗಿ ಹೆಚ್ಚಿದೆ.
ಮಟ್ಟಸವಾಗಿ ಹಾಕಿರುವ ಜಲ್ಲಿ ಕಲ್ಲುಗಳ ಮೇಲಿನ ಎರಡು ಸಮಾನಾಂತರ ಹಳಿಗಳನ್ನು ಉಜ್ಜಿಕೊಂಡು ಒಮ್ಮೊಮ್ಮೆ ಕಿಡಿಗಳನ್ನು ಏಳಿಸುತ್ತಾ, ಕೂಧಿಧಿಧಿ… ಎಂದು ಶಿಳ್ಳೆ ಹಾಕುತ್ತ ಟ್ರೈನು ಸಾಗುತ್ತಿದ್ದರೆ, ನಾವು ಓಡೋಡಿ ಬಂದು ಅದು ಕಣ್ಮರೆಯಾಗುವವರೆಗೂ ನೋಡುತ್ತ ನಿಲ್ಲುತ್ತಿದ್ದೆವು.

ಒಳಗಿನಿಂದ ಅದ್ಯಾರು ಟಾಟಾ ಮಾಡಲಿ, ಬಿಡಲಿ ನಾವಂತೂ ಬೆಳಗ್ಗೆ ಮತ್ತು ಸಂಜೆ ಸಮಯಕ್ಕೆ ಸರಿಯಾಗಿ ಮನೆಯ ಹಿತ್ತಲಿಗೆ ಓಡಿ ಹೋಗಿನಿಂತು ಅಲ್ಲಿಂದ ಸ್ಪಷ್ಟವಾಗಿ ಕಾಣುತ್ತಿದ್ದ ಟ್ರೈನಿನತ್ತ ಕೈಬೀಸುತ್ತಿದ್ದೆವು. ಆಗೆಲ್ಲ ಹಳಿಗಳ ಮೇಲೆ ಉರುಳುವ ಚಕ್ರಗಳನ್ನು ಕಂಡು ಅಷ್ಟು ಸಣ್ಣ ಜಾಗದ ಮೇಲೆ ಅದು ಹೇಗೆ ಬೀಳದೇ ಹೋಗುತ್ತದೆ ಎಂಬ ಅಚ್ಚರಿಯುಕ್ತ ಪ್ರಶ್ನೆಗಳೇಳುತ್ತಿದ್ದವು. ರೈಲು ಇಲ್ಲದಾಗ ನಾವು ಸಹ ಕಾಲು ಬಿಡದೇ ಹಳ್ಳಿಗಳ ಮೇಲೆ ಅದರಗುಂಟವೇ ನಡೆಯಲು ಪ್ರಯತ್ನಿಸಿ, ಉರುಳಿಬಿದ್ದು, ಮೊಣಕೈ ತರಚಿಕೊಂಡು ಬಂದದ್ದು ಎಷ್ಟು ಸಲವೋ. ಬೇಸಿಗೆ ರಜೆಯಲ್ಲಂತೂ ನಮ್ಮ ದಂಡು ಇರುತ್ತಿದ್ದುದೇ ರೈಲ್ವೆ ನಿಲ್ದಾಣದಲ್ಲಿ. ಈ ಟ್ರೈನುಗಳ
ಡ್ರೈವಿಂಗ್ ಹೇಗೆ? ಒಳಗಡೆ ಎಂಜಿನ್ ಹೇಗಿರುತ್ತೆ? ಪ್ರಾಥಮಿಕ ಪಾಠಗಳಲ್ಲಿ ಕಲಿಸಿದ್ದೇ ನಿಜವಾದರೆ, ಹಬೆಗೆ ಇಷ್ಟು ದೊಡ್ಡ ಟ್ರೈನ್ ತಳ್ಳಿಕೊಂಡು ಹೋಗುವ ಶಕ್ತಿಯಾ ದರೂ ಬಂದದ್ದು ಹೇಗೆ? ಎದುರಿಗೆ ಜನ ಬಂದರೆ ಡ್ರೈವರ್ (ಆವಾಗ ಲೋಕೋಪೈಲೆಟ್ ಎಂಬ ಪದ ಗೊತ್ತಿರಲಿಲ್ಲ ಬಿಡಿ) ಗೆ ಕಾಣಿಸೋದು ಹೇಗೆ? ಒಳಗೆ ಸೂಸು, ಇಶ್ಶೀ ಮಾಡಿದ್ದೆಲ್ಲ ಎಲ್ಲಿಗೆ ಹೋಗುತ್ತೆ? ಎದುರಿಂದ ಮತ್ತೊಂದು ಟ್ರೈನ್ ಬಂದು ಬಿಟ್ಟರೆ ಎಲ್ಲಿ ಜಾಗ ಬಿಡೋದು? ಇತ್ಯಾದಿ ಇತ್ಯಾದಿ ಕುತೂಹಲದ ಮೂಟೆಯೇ ತಲೆಯೊಳಗೆ ಸುಳಿದಾಡುತ್ತಿತ್ತು.

ಅಂದು ರೈಲಿನ ಬಗೆಗೆ ಹುಟ್ಟಿದ ಬೆರಗು ಇಂದಿಗೂ ತಣಿದಿಲ್ಲ. ಅಷ್ಟರ ಮೇಲೆ ಅದೆಷ್ಟೋ ಬಾರಿ ಟ್ರೈನಿನಲ್ಲಿ ಓಡಾಡಿದ್ದೇನೆ. ದಿನಗಟ್ಟಲೆ ರೈಲಿನಲ್ಲಿ ಕಳೆದಿದ್ದೇನೆ. ಮುಂಬೈ ಲೋಕಲ್ ಟ್ರೈನ್ ನಲ್ಲಿ ಅನುಭವಕ್ಕಾಗಿಯೇ ಸುತ್ತಾಡಿ ಬಂದಿದ್ದೇನೆ. ಕೊಂಕಣ ರೈಲಿನಲ್ಲಿ ಕುಳಿತು ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಕಣ್ತುಂಬಿಸಿ ಕೊಂಡಿದ್ದೇನೆ. ಗೋವಾಕ್ಕೆ ಹೋಗುವ ಟ್ರೈನಿನಲ್ಲಿ ಕುಳಿತು, ದೂಧ್ ಸಾಗರದ ಕೆಳಗೆ ತೂರಿ ಹೋಗುವಾಗ ಆಗುವ ಪನ್ನೀರ  ಚನವನ್ನು ಅನುಭವಿಸಿದ್ದೇನೆ. ಊಟಿಯ ಪುರಾತನ ರೈಲ್ವೆಯ ಬೋಗಿಗಳನ್ನುಆತ್ಮೀಯವಾಗಿ ತಡವಿದ್ದೇನೆ.

ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮುಂಬಯಿನ ಛತ್ರಪತಿ ಶಿವಾಜಿ ಟರ್ಮಿನಸ್ ಹಾಗೂ ಮೌಂಟೇನ್ ರೈಲ್ವೇಸ್ ಆಫ್ ಇಂಡಿಯಾದ ಹೆಗ್ಗಳಿಕೆಯನ್ನು ಕಣ್ಣಾರೆ ಕಂಡಿದ್ದೇನೆ. ದಾರ್ಜಿಲಿಂಗ್‌ನ ಪರ್ವತ ಶ್ರೇಣಿಯ ಅಗೋನಿ ಪಾಯಿಂಟನಲ್ಲಿ ಸಾಗಿ ಪುಳಕಗೊಂಡಿದ್ದೇನೆ. ತಮಿಳುನಾಡಿನ ನೀಲಗಿರಿ ಪರ್ವತ ಶ್ರೇಣಿಯ ಮೀಟರ್ ಗೇಜ್‌ನ ಮಜಾ ಅನುಭವಿಸಿದ್ದೇನೆ. ಕಾಲ್ಕಾ ಶಿಮ್ಲಾ ನ್ಯಾರೊ ಗೇಜ್‌ನಲ್ಲಿ ಪಯಣಿಸಿ ಹಿಮಶಿಖರಗಳನ್ನು ಕಣ್ತುಂಬಿ ಕೊಂಡಿದ್ದೇನೆ. ಇಷ್ಟಾದರೂ ಎಲ್ಲೋ ಹೋಗುತ್ತಿರುವಾಗೊಮ್ಮೆ ಸನಿಹದಲ್ಲಿ ರೈಲು ಸಾಗುವುದು ಗಮನಕ್ಕೆ ಬಂದರೆ ಎರಡು ನಿಮಿಷ ನಿಂತು ಅದು ಕಣ್ಮರೆಯಾಗು ವವರೆಗೂ ನೋಡುತ್ತ ಇದ್ದು ಮುಂದೆ ಹೋಗಬೇಕೆನಿಸುತ್ತದೆ. ಒಳಗಿದ್ದವರಿಗೊಮ್ಮೆ ಕೈಬೀಸಿ ಟಾಟಾ ಮಾಡಬೇಕೆಂಬ ಬಯಕೆ ಮೊಳೆಯುತ್ತದೆ.

ಏನೇ ಹೇಳಿ, ಈ ರೈಲೆಂಬುದು ನಿಜಕ್ಕೂ ಕೊನೆಯಿಲ್ಲದ ಬೆರಗು. ಈಗಂತೂ ದಿನದಿಂದ ದಿನಕ್ಕೆ ಭಾರತೀಯ ರೈಲ್ವೆಯ ಬಗೆಗೆ ಹೆಮ್ಮೆ ನೂರ್ಮಡಿಸುತ್ತಿದೆ. ಅದಕ್ಕೆ ಕಾರಣಗಳು ಹಲವು. ಜಗತ್ತಿನ ನಾಲ್ಕನೇ ಅತಿ ದೊಡ್ಡ, ಏಷ್ಯಾದ ಅತಿ ದೊಡ್ಡ ಸಂಚಾರ ಮಾಧ್ಯಮ ಎಂಬುದಷ್ಟಕ್ಕೇ ಭಾರತೀಯ ರೈಲ್ವೆಯ ಕುರಿತು ಅಂಥ ಕುತೂಹಲ, ಹೆಮ್ಮೆಗಳಲ್ಲ. ಒಂದೊಮ್ಮೆ ಅದರ ಅಗಾಧತೆ, ದೇಶದೆಲ್ಲೆಡೆ ನರನಾಡಿಗಳಂತೆ ಹಬ್ಬಿಕೊಂಡಿರುವ ರೈಲ್ವೆ ಮಾರ್ಗಗಳು, ಒಂದಿನಿತೂ ವ್ಯತ್ಯಯ ವಾಗದಂತೆ ಇಡೀ ರೈಲ್ವೆ ವ್ಯವಸ್ಥೆ ನಡಕೊಂಡು ಹೊರಟಿರುವ ರೀತಿಯನ್ನು ನೆನಪಿಸಿಕೊಂಡರೆ ಸಾಕು, ಇನ್ನೂ ಏಕಿದು ಜಗತ್ತಿನ ವಿಸ್ಮಯಗಳ ಸಾಲಿಗೆ ಸೇರಿಲ್ಲ ಎಂಬ ಪ್ರಶ್ನೆ ತನ್ನಿಂದ ತಾನೇ ಉದ್ಭವಿಸುತ್ತದೆ.

೧.೧೫ ಲಕ್ಷ ಕಿ.ಮೀ, ೬೫,೪೩೬ ಮಾರ್ಗಗಳು, ೭,೧೭೨ ನಿಲ್ದಾಣಗಳು, ೧೬ ಲಕ್ಷ ನೌಕರರು, ವರ್ಷದಲ್ಲಿ ೮೪.೨೫ ಕೋಟಿ ಪ್ರಯಾಣಿಕರ ಸಂಚಾರ, ಪ್ರತಿನಿತ್ಯ ೨.೩ ಕೋಟಿಗೂ ಹೆಚ್ಚು ಪ್ರಯಾಣಿಕರ ಸಂಚಾರ, ವರ್ಷದಲ್ಲಿ ೧೦,೫೦೨ ಲಕ್ಷ ಟನ್ ಸರಕು ಸಾಗಣೆ, ಈ ಪೈಕಿ ೨,೩೯,೨೮೧ ಸರಕು ಸಾಗಣೆ ವ್ಯಾಗನ್‌ಗಳು, ೬೨,೯೨೪ ಪ್ರಯಾಣಿಕರ ಬೋಗಿ, ಪ್ರತಿನಿತ್ಯ ೧೨,೬೧೭ ಪ್ರಯಾಣಿಕರ ರೈಲುಗಳು, ೪೨೧ ಸರಕು ಸಾಗಣೆ ರೈಲುಗಳು(ಎಲ್ಲವೂ ಹತ್ತು ವರ್ಷದ ಹಿಂದಿನ -೨೦೦೨ರ ಅಂಕಿ ಅಂಶ)… ಅಬ್ಬಬ್ಬಾ! ಇಷ್ಟೊಂದು ಬೃಹತ್ ಜಾಲವನ್ನು ನಿಯಂತ್ರಿಸುವುದು, ನಿರ್ವಹಿಸುವುದು ಎಂದರೆ ಹುಡುಗಾಟಿಕೆಯ ಮಾತೇ? ದೇಶದ ನಾಲ್ಕೂ ದಿಕ್ಕುಗಳನ್ನು ಬೆಸೆದು ನಿಂತಿರುವ ರೈಲು ಜಾಲ ಒಂದೇ ಒಂದು ದಿನದ ಮಟ್ಟಿಗೆ ಸ್ಥಗಿತಗೊಂಡರೆ ಪ್ರಾಯಶಃ ಇಡೀ ಭಾರತದ ಅಭಿವೃದ್ಧಿಯೇ ಒಂದು ಹೆಜ್ಜೆ ಹಿಂದಕ್ಕೆ ಉಳಿದೀತು.

ಏಕೆಂದರೆ ಜಗತ್ತಿನ ಯಾವುದೇ ವಾಣಿಜ್ಯ ಅಥವಾ ಸಾರ್ವಜನಿಕರ ಬಳಕೆಯ ಸೇವಾ ಕ್ಷೇತ್ರ ಇಷ್ಟು ಬೃಹತ್ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಒಂದೇ ಸಂಸ್ಥೆಯಲ್ಲಿ ಇದಕ್ಕಿಂತ ಹೆಚ್ಚು ಜನರಿರುವುದು ಚೀನಾದ ಸೇನೆಯಲ್ಲಿ ಮಾತ್ರ ಎಂದೂ ಹೇಳಲಾಗುತ್ತದೆ. ಇಂಥ ರೈಲೆಂಬ ದೈತ್ಯ ವ್ಯವಸ್ಥೆ ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಪರಿಚಯಗೊಂಡದ್ದು ೧೮೫೩ರಲ್ಲಿ ಎನ್ನುತ್ತದೆ ದಾಖಲೆಗಳು. ಬಾಂಬೆ ಸರಕಾರದ ಮುಖ್ಯ ಎಂಜಿನಿಯರ್ ಜಾರ್ಜ್ ಕ್ಲಾರ್ಕ್ ಕಲ್ಪನೆ ಕೂಸಿದು.
ಮೊದಲ ರೈಲು ಓಡಾಡಿದ್ದು ಮುಂಬಯಿ-ಠಾಣೆ ನಡುವಿನ ೨೧ಮೈಲು ಅಂತರದಲ್ಲಿ. ಮುಂಬಯಿನ ಬೋರಿ ಬಂದರ್‌ನಿಂದ ೧೪ ಬೋಗಿಗಳಲ್ಲಿ ೪೦೦ ಅತಿಥಿಗಳನ್ನು ಹೊತ್ತ ರೈಲು ಏಪ್ರಿಲ್ ೧೬ರಂದು ಮಧ್ಯಾಹ್ನ ೩.೩೦ಕ್ಕೆ ಸಂಚಾರ ಆರಂಭಿಸಿತು.

ಆದರೆ, ಸಾರ್ವಜನಿಕರಿಗೆ ಈ ರೈಲಿನಲ್ಲಿ ಪಯಣಿಸುವ ಸೌಭಾಗ್ಯ ಇರಲಿಲ್ಲ. ಆ ಕಾರಣಕ್ಕೆ ನಮ್ಮ ಮೊದಲ ಪ್ರಯಾಣಿಕರ ರೈಲು ಎಂಬ ಪಟ್ಟದಿಂದ ಇದು ವಂಚಿತವಾಯಿತು. ಹೀಗಾಗಿ ೧೮೫೪ರ ಆಗ ೧೫ರಂದು ಕೋಲ್ಕತ್ತದ ಹೌರಾ ನಿಲ್ದಾಣದಿಂದ ಹೂಗ್ಲಿಗೆ ೨೪ ಮೈಲು ಸಂಚರಿಸಿದ ಈ ಇಂಡಿಯಾ ಕಂಪನಿಯ ರೈಲು ಭಾರತದ ಮೊದಲ ಪ್ರಯಾಣಿಕರ ರೈಲು ಎಂದು ಇತಿಹಾಸದಲ್ಲಿ ದಾಖಲಾಗಿದೆ.

ಅದಾದ ಎರಡು ವರ್ಷಗಳ ನಂತರ ದಕ್ಷಿಣದತ್ತ ರೈಲು ಹೊರಳಿತು. ದಕ್ಷಿಣದಲ್ಲಿ ೧೮೫೬ರಲ್ಲಿ ಮದ್ರಾಸ್ ರೈಲು ಕಂಪನಿಯ ಪ್ರಯಾಣಿಕರ ರೈಲು ವೇಸರಪಾಂಡಿ- ಅರ್ಕಾಟ್ ನಡುವೆ ೬೩ ಮೈಲು ಸಂಚರಿಸಿತು. ನಂತರದ ಸರದಿ ಉತ್ತರ ಭಾರತದ್ದು. ೧೮೫೯ರಲ್ಲಿ ಮಾರ್ಚ್ ೩ರಂದು ಅಲಹಾಬಾದ್ -ಕಾನ್ಪುರ ನಡುವೆ ೧೧೯ ಮೈಲು ರೈಲು ಸಂಚರಿಸಿತ್ತು. ರೈಲ್ವೆ ಜಾಲ ಪಶ್ಚಿಮವನ್ನು ಬೆಸೆದದ್ದು ೧೮೭೫ರ ಅಕ್ಟೋಬರ್ ೧೯ರಂದು. ಹಥ್ರಾಸ್ ರಸ್ತೆಯಿಂದ ಮಥುರಾ ದಂಡು ರೈಲು
ನಿಲ್ದಾಣಕ್ಕೆ ಈ ರೈಲು ಸಂಚರಿಸಿತ್ತು. ಒಟ್ಟಾರೆ ಭಾರತಕ್ಕೆ ೧೯೪೭ರಲ್ಲಿ ಸ್ವಾತಂತ್ರ್ಯ ಬರುವ ವೇಳೆಯಲ್ಲಿ ೪೨ ರೈಲ್ವೆಗಳು ಅಸ್ತಿತ್ವದಲ್ಲಿದ್ದವಂತೆ. ೧೯೫೧ರಲ್ಲಿ ಇವೆಲ್ಲವನ್ನೂ ರಾಷ್ಟ್ರೀಕರಿಸಿ ಒಂದುಗೂಡಿಸಲಾಯಿತು. ಈ ಮೂಲಕ ಭಾರತೀಯ ರೈಲ್ವೆಯು ಜಗತ್ತಿನಲ್ಲಿಯೇ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಯಿತು.

ಈವರೆಗೆ ನಮ್ಮ ರೈಲ್ವೆ ಜಾಲವು ಸಿಕ್ಕಿಮ್, ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯಗಳಲ್ಲಿ ಸೇವೆಗೆ ದಕ್ಕಿಲ್ಲ. ಭಾರತದ ಈವರೆಗಿನ ಅತಿ ಉದ್ದದ
ಪಯಣವೆಂದರೆ ಕನ್ಯಾಕುಮಾರಿಯಿಂದ ಜಮ್ಮುವರೆಗಿ ನದು. ‘ಹಿಮಸಾಗರ ಎಕ್ಸ್ ಪ್ರೆಸ್’ ಹೆಸರಿನ ಈ ರೈಲು ಸುಮಾರು ೭೪.೫ ತಾಸಿನಲ್ಲಿ ೩,೭೪೫ ಕಿ.ಮೀ (೨,೩೨೭ ಮೈಲಿ)ಗಳನ್ನು ಕ್ರಮಿಸುತ್ತದೆ. ಇಂಥ ಬೃಹತ್ ವ್ಯವಸ್ಥೆಯ ಜತೆಗಿನ ಪ್ರತಿ ಭಾರತೀಯನ ಸಂಬಂಧ ಅತ್ಯಂತ ಭಾವನಾತ್ಮಕವಾದದ್ದು. ಅತ್ಯಂತ ಕಡಿಮೆ ವೆಚ್ಚದಲ್ಲಿ ತೀರಾ ಬಡ ವರ್ಗದವರಿಗೂ ಕೈಗೆಟುಕುವ ದರದಲ್ಲಿ ಪ್ರಯಾಣ ಸೌಲಭ್ಯ ಒದಗಿಸುತ್ತಿರುವ ರೈಲು, ಭಾರತೀಯರ ಜೀವನದೊಂದಿಗೆ ಒಂದು ರೀತಿಯಲ್ಲಿ ಅವಿನಾ ಸಂಬಂಧವನ್ನು ಹೊಂದಿದೆ. ರೈಲಿನ ಪಯಣವೆಂದರೆ ಅದೊಂದು ಅನುಭವ. ಹತ್ತಾರು ಕಥೆಗಳು, ನೂರಾರು ಘಟನೆಗಳು, ಸಾವಿರಾರು ವಿಭಿನ್ನ ವ್ಯಕ್ತಿಗಳು, ಅಸಂಖ್ಯ ಅನುಭವಗಳು ಒಟ್ಟಾರೆ ರೈಲ್ವೆ ಪಯಣವೆಂದರೆ ಅದೊಂದು ವಿಚಿತ್ರ ಜಗತ್ತಿನ ಅನಾವರಣ.

ಇನ್ನು ದೇಶದ ಲೋಕಲ್ ಟ್ರೈನ್‌ನದ್ದು ಎಲ್ಲದಕ್ಕಿಂತ ಭಿನ್ನವಾದ ಪ್ರತ್ಯೇಕ ಜಗತ್ತು. ಅದರಲ್ಲೂ ಮುಂಬೈ ಲೋಕಲ್ ಟ್ರೈನ್ ಒಂದು ರೀತಿಯಲ್ಲಿ ದಂತಕತೆಯೇ ಸರಿ. ಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕೆಂದರೆ ಮುಂಬೈ ಟ್ರೈನಿನಲ್ಲಿ ಪಯಣಿಸಿದರೆ ಸಾಕು ಎಂಬಷ್ಟರ ಮಟ್ಟಿಗಿನ ವೈವಿಧ್ಯ ಅಲ್ಲಿನ ಪಯಣಿಗರದ್ದು. ಎಷ್ಟೋ ಮಂದಿಗೆ ದಿನದ ಸೂರ್ಯನ ಮೊದಲ ಕಿರಣ ಸ್ಪರ್ಶವಾಗುವುದೇ ಮುಂಬೈನ್ ಲೋಕಲ್ ಟ್ರೈನಿನಲ್ಲಿ. ಮಾತ್ರವಲ್ಲ ಕೊನೆಯ ಕಿರಣವನ್ನು ದರ್ಶಿಸುವುದೂ ರೈಲಿನ ಬೋಗಿಯಲ್ಲಿ ಕುಳಿತೇ. ಮುಂಬೈನ ಕೆಲ ಗೃಹಿಣಿಯರು ಕೈಗೊಳ್ಳುವ ಊಟೋಪಹಾರದ ಸಿದ್ಧತೆಯಿಂದ ಹಿಡಿದು, ಎಷ್ಟೋ ಮಕ್ಕಳ ಹೋಮ್‌ ವರ್ಕ್ಗಳವರೆಗಿನ ಕೆಲಸಕ್ಕೂ ಈ ಟ್ರೈನೇ ಪ್ರಶಸ್ತ ತಾಣ. ಮುಂಬೈನ ಒಂದಿಡೀ ಜೀವನವೇ ಹಳಿಗಳ ಮೇಲೆ ಪ್ರತಿ ದಿನ ಓಡಾಡುತ್ತದೆ ಎಂದರೆ ತಪ್ಪಲ್ಲ.

ಇಂಥ ಐತಿಹಾಸಿಕ ಭಾರತೀಯ ರೈಲ್ವೆ ಸಾಕಷ್ಟು ಅವಸ್ಥಾಂತರಗಳನ್ನು ಕಂಡಿದೆ. ತಡೆರಹಿತ ಪಯಣ, ಮೋದಿಯವರ ಕನಸಿನ ಬುಲೆಟ್ ಟ್ರೈನ್‌ಗಳಿಂದ ಹಿಡಿದು ಬೆಂಗಳೂರಿನಂಥ ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆರಂಭಗೊಂಡ ಮೆಟ್ರೋ ರೈಲಿನವರೆಗೆ ಮುಗಿಯದ ಪ್ರಗತಿಯ ಹಾದಿ ಸಾಗಿಬಂದಿದೆ.
ನಿಜಕ್ಕೂ…  ಈ ಬೆರಗಿಗೆ ಇನ್ನೊಂದು ಸಾಟಿ ಇಲ್ಲವೇ ಇಲ್ಲ. ನೆನಪಿನ ಬೋಗಿಗಳು ಮನದಾಳದಲ್ಲಿ ಸಾಗಿ ಬಂದವು. ಭಾರತದ ಇಂಥ ಅನರ್ಘ್ಯ ವ್ಯವಸ್ಥೆಯನ್ನು ಕಾಪಿಟ್ಟುಕೊಂಡು ಬರುವುದು ನಮ್ಮೆಲ್ಲರ ಹೊಣೆ. ಇದಕ್ಕಾಗಿ ನಾವೇನು ಯುದ್ಧ ಜಯಿಸಬೇಕಿಲ್ಲ. ಜವಾಬ್ದಾರಿಯತ ನಾಗರಿಕರಾಗಿ ರೈಲ್ವೆ ನಿಲ್ದಾಣಗಳನ್ನು, ನಾವು ಪಯಣಿಸುವ ಬೋಗಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋಣ.

ಕಡ್ಡಾಯವಾಗಿ ಟಿಕೆಟ್ ಪಡೆದೇ ಪಯಣಿಸುವ ಕನಿಷ್ಠ ಹೊಣೆಯನ್ನುಪಾಲಿಸಿ ಕೃತಜ್ಞತೆ ಸಲ್ಲಿಸೋಣ. ಏಕೆಂದರೆ ನಮ್ಮ ಪಾಲಿಗೆ ರೈಲ್ವೆ ಕೇವಲ ಒಂದು ವ್ಯವಸ್ಥೆಯಲ್ಲ. ನಮ್ಮ ಬದುಕಿನ ಚಟುವಟಿಕೆಯ ದ್ಯೋತಕ. ಚೇತೋಹಾರಿ ನೆನಪುಗಳ ಹಂದರ!