Thursday, 28th November 2024

ಆತಂಕ ಸೃಷ್ಟಿಸಿದ ಮಂಕಿ ಪಾಕ್ಸ್

ವೈದ್ಯ ವೈವಿಧ್ಯ

drhsmohan@gmail.com

ಈ ವೈರಸ್‌ನ ವಾಸಸ್ಥಾನ ಕಾಡು ಪ್ರಾಣಿಗಳು. ಸಾಮಾನ್ಯವಾಗಿ ಪಶ್ಚಿಮ ಮತ್ತು ಮಧ್ಯ ಆಫ್ರಿಕಾಗಳಲ್ಲಿ ಮಳೆ ಬರುವ ಕಾಡುಗಳಲ್ಲಿ ಕಂಡು ಬರುವ ಈ ವೈರಸ್ ಮತ್ತೊಂದು ಸೋಂಕಿತ ಪ್ರಾಣಿಯ ಜತೆ ಸಂಪರ್ಕಕ್ಕೆ ಬಂದಾಗ ಅದರ ಮೂಲಕ ಮನುಷ್ಯರಲ್ಲಿ ಕಂಡು ಬರುವುದು ಸ್ವಾಭಾವಿಕ.

ನಾವು ನೀವೆಲ್ಲ ಇನ್ನೂ ಕೋವಿಡ್ ಕಾಯಿಲೆ ಬಗ್ಗೆ ಮಾತನಾಡುತ್ತಿದ್ದರೆ ಈಗ ಇನ್ನೊಂದು ವೈರಸ್ ಧುತ್ತೆಂದು ಬಂದು ನಮ್ಮನ್ನು ಕಂಗೆಡಿಸಿದೆ. ಹೌದು. ಅದು ಈಗಾಗಲೇ ಇಪ್ಪತ್ತಕ್ಕೂ ಹೆಚ್ಚಿನ ದೇಶಗಳ ೨೦೦ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿರುವ ಮಂಕಿ ಪಾಕ್ಸ್ ವೈರಸ್. ಹಾಗೆಂದು ಕೋವಿಡ್ ಕಾಯಿಲೆಯಷ್ಟು ಬೇಗ ಜನರಲ್ಲಿ ಹರಡುವುದಿಲ್ಲ ಎಂಬ ವಿಜ್ಞಾನಿಗಳ ಅಂಬೋಣ ದ ನಡುವೆಯೇ ಇದು ಆ ವೈರಸ್‌ನ ಅಸಾಮಾನ್ಯ ರೀತಿಯ ಹರಡುವಿಕೆ ಎನ್ನಲಾಗಿದೆ.

ಇದುವರೆಗೆ ಈ ಮಂಕಿ ಪಾಕ್ಸ್ ವೈರಸ್ ಹೀಗೆಯೇ ಎಂದು ತಿಳಿದಿದ್ದ ವೈರಸ್ ತಜ್ಞರು ಸಹಿತ ಈ ರೀತಿಯ ವೈರಸ್‌ನ ಅಸಾಮಾನ್ಯ ಮತ್ತು ವೇಗದ ರೀತಿಯ ಹರಡುವಿಕೆ ವೀಕ್ಷಿಸಿದವರು, ಒಂದು ವೈರಸ್ ತನ್ನ ವರ್ತನೆ ಯನ್ನು ಬದಲಿಸಿದಾಗ ಅದು ಯಾವಾಗಲೂ ಚಿಂತೆಗೆ ಎಡೆಮಾಡಿಕೊಡುತ್ತದೆ ಹಾಗೂ ಅನಿರೀಕ್ಷಿತ
ಅಪಾಯಗಳನ್ನು ತರುತ್ತದೆ ಎಂದು ಗಂಭೀರವಾದ ಎಚ್ಚರಿಕೆ ಕೊಡುತ್ತಾರೆ.

ಈ ವೈರಸ್‌ನ ವಾಸಸ್ಥಾನ ಕಾಡು ಪ್ರಾಣಿಗಳು. ಸಾಮಾನ್ಯವಾಗಿ ಪಶ್ಚಿಮ ಮತ್ತು ಮಧ್ಯ ಆಫ್ರಿಕಾಗಳಲ್ಲಿ ಮಳೆ ಬರುವ ಕಾಡುಗಳಲ್ಲಿ ಕಂಡುಬರುವ ಈ ವೈರಸ್ ಮತ್ತೊಂದು ಸೋಂಕಿತ ಪ್ರಾಣಿಯ ಜತೆ ಸಂಪರ್ಕಕ್ಕೆ ಬಂದಾಗ ಅದರ ಮೂಲಕ ಮನುಷ್ಯರಲ್ಲಿ ಕಂಡು ಬರುವುದು ಸ್ವಾಭಾವಿಕ. ಆಗ ಮನುಷ್ಯನ ಚರ್ಮದಲ್ಲಿ ದದ್ದುಗಳು ಕಾಣಿಸಿ ಕೊಂಡು, ಅದು ನಿಧಾನವಾಗಿ ಒಣಗಿ ಹೊಪ್ಪಳಗಳಾಗಿ ಉದುರುತ್ತವೆ. ಆದರೆ ಈ ಬಾರಿ ಕಂಡು ಬಂದ ಮಂಕಿ ಪಾಕ್ಸ್ ವೈರಸ್‌ನ ವರ್ತನೆ ಸಂಪೂರ್ಣ ಭಿನ್ನ. ಮೊಟ್ಟ ಮೊದಲ ಬಾರಿ ಈ ವೈರಸ್ ಪಶ್ಚಿಮ ಮತ್ತು ಮಧ್ಯ ಭಾಗದ ಆಫ್ರಿಕಾಗಳ ಜತೆಗೆ ಏನೂ ನಂಟಿಲ್ಲದ ವ್ಯಕ್ತಿ ಮತ್ತು ದೇಶಗಳಲ್ಲಿ ಕಂಡು ಬಂದಿದೆ.

ಹಾಗೆಯೇ ಈ ವ್ಯಕ್ತಿಗಳು ಆಫ್ರಿಕಾ ದೇಶಗಳಿಂದ ಪ್ರಯಾಣ ಮಾಡಿದ ಚರಿತ್ರೆಯೂ ಲಭ್ಯವಿಲ್ಲ. ಯಾವ್ಯಾವ ವ್ಯಕ್ತಿಗಳಿಂದ ಹರಡುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಲೈಂಗಿಕ ಕ್ರಿಯೆಗಳಿಂದ ಇದು ಹರಡುತ್ತಿದೆಯೋ ಎಂಬ ಸಂಶಯ ಬರುತ್ತಿದೆ. ಹೆಚ್ಚಿನ ಸಂದರ್ಭಗಳಲ್ಲಿ ಪುರುಷ ಲೈಂಗಿಕ ಅಂಗಗಳ ಮತ್ತು ಸುತ್ತಲಿನ ಪ್ರದೇಶಗಳ
ಮೇಲೆ ಹುಣ್ಣುಗಳು ಕಂಡು ಬಂದಿವೆ. ಇವರಲ್ಲಿ ಹೆಚ್ಚಿನವರು ಪುರುಷ ಸಲಿಂಗ ಕಾಮಿಗಳು ಹಾಗೂ ದ್ವಿಲಿಂಗ ರೀತಿ ವರ್ತಿಸುವ ತರುಣ ವ್ಯಕ್ತಿಗಳು. ನಾವೆಲ್ಲ ಈ ಬಾರಿ ತುಂಬಾ ಭಿನ್ನ ಮತ್ತು ಹೊಸ ರೀತಿಯ ಸನ್ನಿವೇಶದಲ್ಲಿದ್ದೇವೆ. ಇದು ನಮಗೆ ಆಶ್ಚರ್ಯದಾಯಕ ಹಾಗೂ ಅದರ ಜತೆಗೆ ಚಿಂತೆ ಯನ್ನು ಉಂಟುಮಾಡಿದೆ ಎಂದು ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಸಾಂಕ್ರಾಮಿಕ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ಸರ್ ಪೀಟರ್ ಹೋರ್ಬಿ ಅಭಿಪ್ರಾಯ ಪಡುತ್ತಾರೆ. ಹೌದು, ಇದು ನಿಜವಾಗಿಯೂ ಕೋವಿಡ್‌ನ ಎರಡನೇ ಇನ್ನಿಂಗ್ಸ್ ಅಲ್ಲ.

ನಾವು ಬಹಳ ಬೇಗ ಪ್ರತ್ರಿಕ್ರಿಯಿಸಬೇಕು ಮತ್ತು ಕ್ರಿಯಾಶೀಲರಾಗಬೇಕು ಎಂದು ಅವರು ಅಭಿಪ್ರಾಯ ಪಡುತ್ತಾರೆ. ಮಂಕಿ ಪಾಕ್ಸ್ ಕಾಯಿಲೆ ಅದೇ ಹೆಸರಿನ ವೈರಸ್ ನಿಂದ ಬರುತ್ತದೆ. ಇದು ಸಿಡುಬಿನ ವೈರಸ್‌ನ ಜಾತಿಯದ್ದೇ ವೈರಸ್. ಆರ್ಥೋಪಾಕ್ಸ್ ವೈರಸ್ ಗುಂಪಿಗೆ ಸೇರಿದ ಇದು ಸಿಡುಬಿನ ವೈರಸ್‌ನಷ್ಟು
ಅಪಾಯಕಾರಿ ಅಲ್ಲ ಎಂದು ತಜ್ಞರ ಅಭಿಮತ. ಹೆಚ್ಚಿನ ಸಂದರ್ಭಗಳಲ್ಲಿ ಮೊದಲು ತಿಳಿಸಿದಂತೆ ಇದು ಮಳೆ ಬರುವ ಕಾಡಿನ ದೇಶಗಳಾದ ಪಶ್ಚಿಮ ಮತ್ತು ಮಧ್ಯಭಾಗದ ಆಫ್ರಿಕಾದ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಇದರಲ್ಲಿ ೨ ಭಿನ್ನ ಜಾತಿಯ ವೈರಸ್‌ಗಳಿವೆ. 1) ಮಧ್ಯ ಆಫ್ರಿಕಾ (ಕಾಂಗೋ ಬೇಸಿನ್) ಜಾತಿ ಹಾಗೂ 2) ಪಶ್ಚಿಮ ಆಫ್ರಿಕಾ ಜಾತಿ. ಕಾಂಗೋ ಬೇಸಿನ್ ಜಾತಿಯ
ವೈರಸ್ ಹೆಚ್ಚು ವೇಗವಾಗಿ ಹರಡುತ್ತದೆ ಹಾಗೂ ಹೆಚ್ಚಿನ ರೋಗ ಲಕ್ಷಣಗಳಿಂದ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ಆಫ್ರಿಕಾದ ಹೊರಗೆ ಕಾಣಿಸಿಕೊಂಡಾಗ ಸಾಮಾನ್ಯವಾಗಿ ಅಲ್ಲಿಂದ ಪ್ರಯಾಣ ಮಾಡಿದ ಹಿನ್ನೆಲೆ ಇರುತ್ತದೆ. ಈ ಬಾರಿ ಸಹಿತ ಇಂಗ್ಲೆಂಡಿನಲ್ಲಿ ಕಂಡುಬಂದ ರೋಗಿಗಳ ಪೈಕಿ ಇಬ್ಬರಲ್ಲಿ ನೈಜೀರಿಯಾದಿಂದ ಪ್ರಯಾಣಿಸಿದ ಹಿನ್ನೆಲೆ ಇತ್ತು. ಆದರೆ ಉಳಿದ ರೋಗಿಗಳಲ್ಲಿ ಅಂತಹ ಯಾವ ಹಿನ್ನೆಲೆ ಇರಲಿಲ್ಲ ಎಂಬುದೇ ಈ ಬಾರಿಯ ವಿಶೇಷ.

ಕಾಯಿಲೆಯ ರೋಗ ಲಕ್ಷಣಗಳು: ಆರಂಭಿಕ ಲಕ್ಷಣಗಳೆಂದರೆ ಜ್ವರ, ನಡುಕ ಬರುವುದು, ತಲೆನೋವು, ಮೈಕೈ ನೋವು, ಬೆನ್ನು ನೋವು ಹಾಲ್ರಸ ಗ್ರಂಥಿ ಗಳು(ಲಿಂಫ್ ಗ್ಲಾಂಡ್ಸ್) ಊದಿ ಕೊಳ್ಳುವುದು. ಜ್ವರ ಬರಲು ಆರಂಭಿಸಿದ ನಂತರ ಚರ್ಮದಲ್ಲಿ ದದ್ದುಗಳು ಕಂಡು ಬರುತ್ತವೆ. ಮೊದಲು ಈ ದದ್ದುಗಳು ಮುಖದ ಮೇಲೆ ಕಾಣಿಸಿಕೊಂಡು ನಂತರ ಇತರ ಭಾಗಗಳಿಗೆ ಹರಡುತ್ತವೆ. ಮುಖ್ಯವಾಗಿ ಅಂಗೈ ಮತ್ತು ಅಂಗಾಲುಗಳಲ್ಲಿ ಇವು ಕಾಣಿಸುತ್ತವೆ. ಈ ದದ್ದುಗಳು ತುಂಬಾ
ನೋವನ್ನು ಉಂಟು ಮಾಡುವುದಲ್ಲದೆ ತೀವ್ರ ಪ್ರಮಾಣದ ಕಡಿತವನ್ನೂ ಉಂಟು ಮಾಡುತ್ತವೆ. ಇವು ತಮ್ಮ ಸ್ವಭಾವವನ್ನು ಬದಲಿಸಿ ಭಿನ್ನ ರೀತಿಗಳಲ್ಲಿ ಕಂಡು ಬಂದು ಕೊನೆಯಲ್ಲಿ ಹೊಪ್ಪಳಗಳಾಗಿ ಚರ್ಮದಿಂದ ಬಿದ್ದುಹೋಗುತ್ತವೆ. ಕೆಲವೊಮ್ಮೆ ಇವು ಚರ್ಮದ ಮೇಲೆ ಕಲೆಗಳನ್ನು ಉಳಿಸುತ್ತವೆ. ಈ ವೈರಸ್ ಸೋಂಕು 14-21 ದಿನಗಳಲ್ಲಿ ತನ್ನಿಂದ ತಾನೇ ವಾಸಿಯಾಗುತ್ತದೆ.

ಕಾಯಿಲೆ ಹರಡುವ ರೀತಿ: ಈ ಕಾಯಿಲೆ ಬಂದ ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹತ್ತಿರದ ಸಂಪರ್ಕ ದಿಂದ ಬರುತ್ತದೆ. ಈ ವೈರಸ್ ವ್ಯಕ್ತಿಯ ದೇಹವನ್ನು ಚರ್ಮದಲ್ಲಿನ ಬಿರುಕು, ಉಸಿರಾಟದ ಅಂಗಗಳು ಅಥವಾ ಕಣ್ಣು, ಮೂಗು ಮತ್ತು ಬಾಯಿಗಳಿಂದ ಒಳ ಪ್ರವೇಶಿಸುತ್ತದೆ. ಇದು ಇಷ್ಟರವರೆಗೆ ಲೈಂಗಿಕ ಕ್ರಿಯೆಯಿಂದ ಹರಡುತ್ತದೆ ಎಂಬ ಪ್ರತೀತಿ ಇರಲಿಲ್ಲ. ಆದರೆ ಈ ಬಾರಿ ಲೈಂಗಿಕ ಕ್ರಿಯೆಯಲ್ಲಿ ಹರಡುತ್ತಿರುವುದು ಚರ್ಮದಿಂದ ಚರ್ಮದ ಸಂಪರ್ಕದಿಂದ ಎಂದು ಹೇಳಲಾಗಿದೆ. ಹಾಗೆಯೇ ಸೋಂಕಿತ ಪ್ರಾಣಿಗಳಿಂದ ಉದಾ: ಕೋತಿ, ಇಲಿ ಮತ್ತು ಇಣಚಿಗಳಿಂದಲೂ ಹರಡುತ್ತದೆ. ಹಾಗೆಯೇ ವೈರಸ್‌ಗಳಿಂದ ಕಲುಷಿತಗೊಂಡ ಹಾಸಿಗೆಯ ವಸ್ತುಗಳು ಹಾಗೂ ಬಟ್ಟೆಗಳಿಂದಲೂ ಹರಡಬಹುದು.

ಈ ಸೋಂಕು ಎಷ್ಟು ಅಪಾಯಕಾರಿ?: ಹೆಚ್ಚಾಗಿ ಇದು ಸಣ್ಣಮಟ್ಟದಲ್ಲಿ ತೊಂದರೆ ಕೊಡುವ ಕಾಯಿಲೆ ಆಗಿದ್ದು ಚಿಕನ್ ಪಾಕ್ಸ್ ಕಾಯಿಲೆಯ ರೀತಿಯಲ್ಲಿ ಕೆಲವು ವಾರಗಳ ನಂತರ ತನ್ನಿಂದ ತಾನೇ ವಾಸಿಯಾಗುತ್ತದೆ. ಹಿಂದೆ ಕೆಲವೊಮ್ಮೆ ತೀವ್ರ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು ಕೆಲವು ರೋಗಿಗಳು ಮರಣ ಹೊಂದಿದ ಉದಾಹರಣೆಗಳು ಪಶ್ಚಿಮ ಆಫ್ರಿಕಾದಲ್ಲಿ ಜರುಗಿವೆ.

ಪುರುಷ ಸಲಿಂಗಕಾಮಿಗಳಲ್ಲಿ ಜಾಸ್ತಿ ಕಂಡುಬರುವುದೇ?: ಇದು ಇತ್ತೀಚೆಗೆ ಪುರುಷ ಸಲಿಂಗಕಾಮಿಗಳು ಹಾಗೂ ದ್ವಿಲಿಂಗಿಗಳಲ್ಲಿ ಕಾಣಿಸಿಕೊಂಡಿದ್ದರೂ ಮಂಕಿ ಪಾಕ್ಸ್ ಕಾಯಿಲೆ ಇರುವ ವ್ಯಕ್ತಿಯ ಹತ್ತಿರದ ಸಂಪರ್ಕಕ್ಕೆ ಬಂದ ಯಾರಿಗೂ ಇದು ಬರಬಹುದು. ಈ ಕಾಯಿಲೆ ಆಗಾಗ ಕಾಣಿಸಿಕೊಳ್ಳುವುದೇ? ಹಿಡಿದಿಟ್ಟಿದ್ದ ಕೋತಿಯಲ್ಲಿ ಮೊದಲು ಈ ಕಾಯಿಲೆಯ ವೈರಸ್ ಕಾಣಿಸಿಕೊಂಡಿತ್ತು. 1970ರ ನಂತರ ಆಫ್ರಿಕಾದ 10 ದೇಶಗಳಲ್ಲಿ ಆಗಾಗ ಅಲ್ಲಲ್ಲಿ ಕಾಣಿಸಿಕೊಂಡದ್ದುಂಟು. 2003ರಲ್ಲಿ ಆಫ್ರಿಕಾದ ಹೊರಗೆ ಮೊಟ್ಟ ಮೊದಲ ಬಾರಿಗೆ ಅಮೆರಿಕದಲ್ಲಿ ಕಾಣಿಸಿಕೊಂಡಿತ್ತು. ಪ್ರೈರೇ ನಾಯಿಗಳು ಎಂಬ ಪ್ರಾಣಿಗಳಿಂದ ಮನುಷ್ಯನಿಗೆ ವೈರಸ್ ಆಗ ದಾಟಿತ್ತು. ಹೊರ ದೇಶದಿಂದ ಆಮದು ಮಾಡಿಕೊಂಡ ಸಣ್ಣ ಪ್ರಾಣಿಗಳಿಂದ ಈ ಸೋಂಕು ಪ್ರೈರೇ ನಾಯಿಗಳಿಗೆ ದಾಟಿತ್ತು.

ಆಗ 81 ರೋಗಿಗಳಲ್ಲಿ ಕಾಯಿಲೆ ಕಾಣಿಸಿಕೊಂಡು ಯಾರೂ ಮರಣ ಹೊಂದಿರಲಿಲ್ಲ. 2010-19ರ ಮಧ್ಯೆ 10000ಕ್ಕೂ ಹೆಚ್ಚು ರೋಗಿಗಳಲ್ಲಿ ಸಂದೇಹಾಸ್ಪದ ಅಥವಾ ವೈರಸ್ ಇರುವ ಬಗ್ಗೆ ಕಾಂಗೋದಿಂದ ವರದಿಯಾದರೆ 2020ರಲ್ಲಿ 6000 ಸಂದೇಹಾಸ್ಪದ ರೋಗಿಗಳ ಬಗ್ಗೆ ವರದಿಯಾಗಿದೆ. 2017ರಲ್ಲಿ ನೈಜೀರಿಯಾ ದಲ್ಲಿ ದೊಡ್ಡ ಪ್ರಮಾಣದಲ್ಲಿ ಮಂಕಿ ಪಾಕ್ಸ್ ಕಾಣಿಸಿಕೊಂಡಿತ್ತು. ಆಗ 231 ಜನರಲ್ಲಿ ಸೋಂಕು ಇದ್ದ ಬಗ್ಗೆ ಹಾಗೂ 558 ವ್ಯಕ್ತಿಗಳಲ್ಲಿ ಸೋಂಕಿನ ಬಗ್ಗೆ ಸಂದೇಹ ಇತ್ತು. ಅವರಲ್ಲಿ ಶೇ. 75 ರೋಗಿಗಳು 21-40 ವರ್ಷದವರಾಗಿದ್ದರು.

ಚಿಕಿತ್ಸೆ ಏನು?: ಸೋಂಕುಗಳು ಉಂಟಾಗುವುದನ್ನು ನಿಲ್ಲಿಸುವ ಕ್ರಮಗಳಿಂದ ದೊಡ್ಡ ಪ್ರಮಾಣದಲ್ಲಿ ಸೋಂಕುಗಳು ಹರಡದಂತೆ ನೋಡಿಕೊಳ್ಳಬೇಕು.
ಸಿಡುಬಿನ ವ್ಯಾಕ್ಸಿನ್ ತೆಗೆದುಕೊಳ್ಳುವುದರಿಂದ ಸುಮಾರು ಶೇ. 85ರಷ್ಟು ಈ ಕಾಯಿಲೆ ಬರದಂತೆ ಮಾಡಬಹುದು. ಎಫ್ಡಿಎ ಇಂದ ಪರವಾನಗಿ ಪಡೆದ ಮಂಕಿ ಪಾಕ್ಸ್‌ಗೇ ನಿರ್ದಿಷ್ಟವಾದ ಎಂವಿಏಫ್ ಬಿಎನ್ ಎಂಬ ವ್ಯಾಕ್ಸಿನ್ ಇದೆ. ಆದರೆ ಇದು ಎಲ್ಲ ಕಡೆ ಲಭ್ಯವಿಲ್ಲ. ಟೀಕೋವಿರಿಮ್ಯಾಟ್ ಎಂಬುದು ಮಾತ್ರೆಯ ರೂಪದಲ್ಲಿ ಹಾಗೂ ಐವಿ ಇಂಜಕ್ಷನ್ ರೂಪದಲ್ಲಿ ಕೌಪಾಕ್ಸ್, ಮಂಕಿಪಾಕ್ಸ್ ಹಾಗೂ ಸಿಡುಬು- ಎಲ್ಲ ಕಾಯಿಲೆಗಳಿಗೆ ಲಭ್ಯವಿದೆ.

ಈ ಬಾರಿ ಮಂಕಿಪಾಕ್ಸ್ ವೇಗವಾಗಿ ಹರಡಲು ಕಾರಣ ಏನು? ನಿರ್ದಿಷ್ಟ ಕಾರಣ ಗೊತ್ತಿಲ್ಲ. ಈ ವೈರಸ್ ಬಹುಶಃ ಮೊದಲಿನ ತಳಿಗಿಂತ ಬೇರೆಯ ರೀತಿಯಲ್ಲಿ
ಬದಲಾಗಿದೆ. ವೈರಸ್‌ಗೆ ಹೆಚ್ಚು ವೇಗವಾಗಿ ಹರಡಲು ಪೂರಕ ವಾತಾವರಣ ದೊರೆತಿದೆ. ಈ ವೈರಸ್ ಡಿಎನ್‌ಎ ವೈರಸ್. ಇದು ಕೋವಿಡ್ ಅಥವಾ – ಕಾಯಿಲೆ ಯಷ್ಟು ಬೇಗ ಹರಡುವುದಿಲ್ಲ. ಕೆಲವೊಮ್ಮೆ ವೇಗವಾಗಿ ಹರಡಲು ಅದು ಸೀಕ್ವೆನ್ಸ್‌ನಲ್ಲಿ ಬದಲಾಗಬೇಕು ಎಂದೇನಿಲ್ಲ. ಈ ಬಾರಿ ಇದು ಪುರುಷ ಸಲಿಂಗ ಕಾಮಿಗಳಲ್ಲಿ ಹೆಚ್ಚಾಗಿ ಕಂಡು ಬಂದುದರಿಂದ ಈ ಕಾಯಿಲೆ ಲೈಂಗಿಕ ಕಾಯಿಲೆಯ ಪರಿಧಿಗೆ ಬಂದಿತಾ ಎಂಬ ಸಂದೇಹ ಕೆಲವರಲ್ಲಿ ಬಂದಿದೆ.

ಈಗಾಗಲೇ ತಿಳಿಸಿರುವಂತೆ ಈ ವೈರಸ್ ಹತ್ತಿರದ ಸಂಪರ್ಕದಿಂದ ಹರಡುತ್ತದೆ. ಲೈಂಗಿಕ ಕ್ರಿಯೆಗಳ ಸಂದರ್ಭ ಕೆಮ್ಮು, ಶೀತ ಸಹಿತ ಹರಡಬಹುದು. ಹಾಗೆಂದು ಅವೆಲ್ಲ ಲೈಂಗಿಕ ಕಾಯಿಲೆಗಳು ಎಂದು ಹೇಳಲು ಬರುವುದಿಲ್ಲ. ಈ ವೈರಸ್ ಮುಖ್ಯವಾಗಿ ಚರ್ಮದಲ್ಲಿನ ಬಿರುಕು, ಶ್ವಾಸಕೋಶದ ಅಂಗಾಂಗಗಳು, ಕಣ್ಣು,
ಮೂಗು, ಬಾಯಿಗಳಿಂದ ಹರಡುತ್ತದೆ. ಮನುಷ್ಯನ ದೇಹದ ಹೊರಗಡೆ ಈ ವೈರಾಣು ಜಾಸ್ತಿ ಕಾಲ ಜೀವಿಸಬಹುದು. ಹಾಗಾಗಿ ಬೆಡ್ ಶೀಟ್‌ಗಳು, ಬಟ್ಟೆಗಳ ಸಂಪರ್ಕದಿಂದಲೂ ಹರಡುತ್ತದೆ ಎಂದು ತಜ್ಞರ ಅಭಿಮತ. ಈ ಕಾಯಿಲೆಯ ಬಗ್ಗೆ ಇನ್ನೂ ಹಲವಾರು ವಿವರಗಳು ಭವಿಷ್ಯದ ದಿನಗಳಲ್ಲಿ ಲಭ್ಯವಾಗಬಹುದು ಎಂದು ಆಶಿಸೋಣ