ಸುಪ್ತ ಸಾಗರ
rkbhadti@gmail.com
ನಮ್ಮ ಕಿವಿಗಳು ಬಿಸಿಲ ತಾಪವನ್ನು ತಣಿಸುವ ‘ಏರ್ ಕಂಡೀಶನರ್’ಗಳ ಶಬ್ದದಲ್ಲಿ ಕಿವುಡಾಗಿವೆ. ನಮ್ಮ ದೃಷ್ಟಿ ಸೋಮಾರಿತನ ವನ್ನು ಪೋಷಿಸುತ್ತಿರುವ ಪ್ರೀಜರ್‌ನಿಂದ ಮರಗಟ್ಟಿ ಹೋಗಿವೆ. ನಮ್ಮ ಬುದ್ಧಿ ಐಷಾರಾಮಿ ಪ್ರತೀಕ ವಾದ ಕಾರಿನ ದಟ್ಟ ಹೊಗೆಯಿಂದ ಮಂಕಾಂಗಿದೆ. ವಿಕಿರಣ ಸೂಸುತ್ತಿರುವ ಇಂಥ ಉಪಕರಣಗಳ ಅಬ್ಬರದಲ್ಲಿ ಪರಿಸರ ಬುಡಮೇಲಾಗಿದೆ.
ನೀರನ್ನಷ್ಟೇ ಬೆಂಬತ್ತಿ ಹೋಗುತ್ತಿರುವ ನಾನು ನನ್ನಂಥವನಿಗೆ ಪರಿಸರದ ವ್ಯಾಪ್ತಿ ನಿಲುಕದ್ದು. ಅದು ವೈಯಕ್ತಿಕ ಮಿತಿ. ಬಹುತೇಕ ರದ್ದೂ ಅದೇ ಕಥೆ. ಪರಿಸರ ಎಂದಾಕ್ಷಣವೇ ಒಂದಷ್ಟು ಸಸಿ ನೆಡುವುದು, ಮಾಲಿನ್ಯದ ಬಗ್ಗೆ ಮಾತನಾಡುವುದು. ವನ್ಯ ಜೀವಿಗಳ (ಅದರಲ್ಲೂ ಹುಲಿ, ಆನೆಗಳಂಥ ದೊಡ್ಡ ಪ್ರಾಣಿಗಳಷ್ಟೇ) ಸಂರಕ್ಷಣೆಯ ಬಗ್ಗೆ ಪ್ರತಿಪಾದಿಸುವುದು.
ಹೆಚ್ಚೆಂದರೆ ನದಿ-ಕೆರೆ ಇತ್ಯಾದಿ ಬೃಹತ್ ಜಲಮೂಲಗಳ ಬಗೆಗೆ ಹೇಳುವುದು… ಇದನ್ನೂ ಮೀರಿ ಬಹುತೇಕರಿಗೆ ಪರಿಸರ ಇದೆ ಯೆಂಬುದು ಮಾಹಿತಿ ಕಡಿಮೆಯೇ. ಇದಕ್ಕೆ ಕಾರಣ ಗಳೂ ಇಲ್ಲದಿಲ್ಲ. ಇತ್ತೀಚಿನ ದಿನಗಳಲಿ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿರುವ
ನೀರು-ಸ್ವಚ್ಛ ಗಾಳಿ, ಹಸಿರು ಮರಗಿಡಗಳಂಥ ಮೂಲಭೂತ ನೈಸರ್ಗಿಕ ಸಂಪನ್ಮೂಲದ ಕೊರತೆ, ಅದನ್ನು ಸಂಬಾಳಿಸಲಾರದೇ ಪರದಾಡುತ್ತಿರುವ ಆಡಳಿತ ವ್ಯವಸ್ಥೆಯ ಹಿನ್ನೆಲೆಯಲ್ಲಿ ಪರಿಸರವೆಂದರೆ ಇವಿಷ್ಟೇ ಎಂಬಂತಾಗಿದೆ. ಹೀಗಾಗಿ ಬಿಸಿಲನ್ನು ಪರಿಸರ
ಎಂದು ಯಾವತ್ತಿಗೂ ನಾವು ಅಂದುಕೊಂಡೇ ಇಲ್ಲ.
ಹಾಗೇ, ಕಾಡೊಳಗಿನ ಹಾವು-ಚೇಳು, ಇರುವೆ-ಗೆದ್ದಲು, ಹುಲ್ಲು ಕಡ್ಡಿಗಳು ನಮಗೆಂದಿಗೂ ಪರಿಸರ ಸಂರಕ್ಷಣೆ ಭಾಗವೆನಿಸಲೇ ಇಲ್ಲ. ಇರಲಿ, ದೇಶದ ನಿವ್ವಳ ಆದಾಯ ಹೆಚ್ಚುತ್ತಲೇ ಇದೆ. ದಿನದಿಂದ ದಿನಕ್ಕೆ ನಾವು ಅಭಿವೃದ್ಧಿ ಹೊಂದುತ್ತಲೇ ಇದ್ದೇವೆ ಎಂಬ ಅಂಕಿಅಂಶ ಗಳ ಮಾರುದ್ದದ ಪಟ್ಟಿಯನ್ನು ಬಿಡುಗಡೆಮಾಡುತ್ತಲೇ ಬರುತ್ತಿದ್ದೇವೆ. ಅದೇ ಸಮಯಕ್ಕೆ ದೇಶದ ಬಡವರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬರುತ್ತಿದೆ. ಏಕೆ ಹೀಗೆ ಎಂಬುದಕ್ಕೆ ಕಾರಣ ಹುಡುಕುತ್ತ ಹೋದರೆ ಬಡವರ ಹೆಸರಿನ ಸಬ್ಸಿಡಿಯಲ್ಲಿ ಶ್ರೀಮಂತ ಬದುಕುತ್ತಿದ್ದಾನೆ. ಆತನ ಬೊಕ್ಕಸ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತಿದೆ.
ಅದಕ್ಕೆ ತಕ್ಕಂತೆ ಅಂಥ ಶ್ರೀಮಂತರ ವ್ಯವಹಾರಗಳಲ್ಲಿ, ಅವರು ನಡೆಸುತ್ತಿರುವ ಉದ್ದಿಮೆಗಳಲ್ಲಿ ನಿಸರ್ಗ ಸಿಲುಕಿ ನಲುಗುತ್ತಿದೆ. ಜೀವವೈವಿಧ್ಯ ಕಣ್ಮರೆಯಾಗುತ್ತಿದೆ. ದೇಶದ ಸಂಪತ್ತಿನ ಲೆಕ್ಕಕ್ಕೆ ಕುಳಿತರೆ, ಅಭಿವೃದ್ಧಿಯ ಮಾನದಂಡದ ಸಂದರ್ಭಲ್ಲಿ ಇಲ್ಲಿನ ನಿಸರ್ಗದ ನಾಶ, ಶಕ್ತಿಯ ಅಪವ್ಯಯವನ್ನು ಪರಿಗಣಿಸುತ್ತಲೇ ಇಲ್ಲ. ಅಭಿವೃದ್ಧಿಯೆಂದರೆ ನಮ್ಮಲ್ಲಿ ಅದು ನಗರ ಕೇಂದ್ರಿತ.
ಬೆಳವಣಿಗೆ ಎಂದರೆ ಅದು ಶ್ರೀಮಂತ ಕಾರ್ಪೋರೇಟ್ ಕಂಪನಿಗಳ ವಾರ್ಷಿಕ ಗ್ರಾಫ್ನಲ್ಲಿನ ಏರಿಕೆ. ಸೌಲಭ್ಯಗಳ ಪೂರೈಕೆ ಎಂದರೆ ಅದು ಸೀಮಿತ ವ್ಯಕ್ತಿಗಳ ಭಾಗ್ಯ.
ಇದನ್ನುಳಿದು ಮಣ್ಣಿನ ಪೂಷಕಾಂಶಗಳ ಹಾನಿ, ಅರಣ್ಯ ನಾಶ, ನೀರಿನ ಮಾಲಿನ್ಯ, ಬಿಸಿಲಿನ ಪೋಲು, ಪವನ ಶಕ್ತಿಯ ಅಪವ್ಯಯ
ಹಾಗೂ ಇವೆಲ್ಲದರ ಜತೆಗೆ ಕನಿಷ್ಠ ಮೂಲ ಸೌಕರ್ಯಕ್ಕಾಗಿ ಹೆಣಗಾಡುವ ಬಡವನ ಶ್ರಮ ಇದ್ಯಾವುದನ್ನೂ ನಾವು ನಮ್ಮ ನಿವ್ವಳ ಆದಾಯ ಅಥವಾ ನಷ್ಟದಲ್ಲಿ ಪರಿಗಣಿಸುತ್ತಲೇ ಇಲ್ಲ. ಇಂಥ ವಿಚಾರಗಳು ನಮಗೆ ಅರ್ಥವಾಗುತ್ತಲೇ ಇಲ್ಲ. ಏಕೆಂದರೆ ನಮ್ಮ ಕಿವಿಗಳು ಬಿಸಿಲ ತಾಪವನ್ನು ತಣಿಸುವ ‘ಏರ್ ಕಂಡೀಶನರ್’ಗಳ ಶಬ್ದದಲ್ಲಿ ಕಿವುಡಾಗಿವೆ. ನಮ್ಮ ದೃಷ್ಟಿ ಸೋಮಾರಿತನವನ್ನು ಪೋಷಿಸುತ್ತಿರುವ ಪ್ರೀಜರ್‌ನಿಂದ ಮರ ಗಟ್ಟಿ ಹೋಗಿವೆ.
ನಮ್ಮ ಬುದ್ಧಿ ಐಷಾರಾಮಿಯ ಪ್ರತೀಕವಾದ ಕಾರಿನ ದಟ್ಟ ಹೊಗೆಯಿಂದ ಮಂಕಾಂಗಿದೆ. ವಿಕಿರಣಗಳನ್ನು ಹೊರಸೂಸುತ್ತಿರುವ ಇಂಥವೇ ಅತ್ಯಾಧುನಿಕ ಉಪಕರಣಗಳ ಅಬ್ಬರದಲ್ಲಿ ‘ನೀರು ಉಳಿಸಿ, ಬಿಸಿಲು ಬಳಸಿ’ ಎಂಬಿತ್ಯಾದಿ ಮಾತುಗಳನ್ನು ಕೇಳಲು ವ್ಯವಧಾನವಾದರೂ ಎಲ್ಲಿದೆ? ಒಂದೆಡೆ ವಿದ್ಯುತ್ ಕೊರತೆ ಮತ್ತೊಂದೆಡೆ ಉತ್ಪಾದನಾ ಮಾರ್ಗಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಪರಿಸರಕ್ಕೆ ಮಾರಕವಾಗಿವೆ. ಜಲವಿದ್ಯುತ್ ಕೇಂದ್ರಗಳು ನಮ್ಮ ಅರಣ್ಯ ಸಂಪತ್ತನ್ನು ನುಂಗಿ ಹಾಕುತ್ತಿವೆ.
ಇನ್ನು ಪರಮಾಣು ಸ್ಥಾವರಗಳಿಂದ ಹೊರಸೂಸುವ ವಿಕಿರಣ ವಾಯುಮಂಡಲವನ್ನೇ ಮಲಿನಗೊಳಿಸುತ್ತಿದೆ. ಪ್ಲುಟೋನಿಯಂ ನಂಥ ದ್ರವ್ಯಗಳು ಅತ್ತ ಕರಗದೇ, ಇತ್ತ ಉಳಿಯದೇ ಸಾವಿರಾರು ವರ್ಷಗಳವರೆಗೆ ವಿಕಿರಣವನ್ನು ಹೊರಸೂಸುತ್ತಲೇ ಇರುತ್ತವೆ. ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳು ಇದರ ಫಲಶ್ರುತಿಯೇ. ಇನ್ನು ಪರಮಾಣು ತ್ಯಾಜ್ಯಗಳ ವಿಲೇವಾರಿಯಿಂದ ಆಗುತ್ತಿರುವ ಹಾನಿಯನ್ನು ಲೆಕ್ಕ ಹಾಕಲೇ ಸಾಧ್ಯವಿಲ್ಲ. ಯೂರೇನಿಯಂ, ಥೋರಿಪರಿಣಾಮ ಏನೆಂಬುದು ಈಗಾಗಲೇ ಜಗತ್ತಿಗೆ ಮನವರಿಕೆ ಯಾಗಿದೆ.
ಇಂಧನ ಸಂಸ್ಕರಣಾ ಘಟಕಗಳ ಕೊಡುಗೆಗಳಿವು. ಹಾಗೆ ನೋಡಿದರೆ ವೈವಿಧ್ಯದ ದೃಷ್ಟಿಯಿಂದ ನೋಡಿದಾಗ ಭಾರತಕ್ಕೆ ಹೋಲಿಸಿ ದರೆ ಆಫ್ರಿಕಾ ನಮಗಿಂತ ಹತ್ತು ಹೆಜ್ಜೆ ಹಿಂದೆ ಇದೆ. ಲ್ಯಾಟಿನ್ ಅಮೆರಿಕದವರು ನಲವತ್ತು ನಲವತ್ತೈದು ಹೆಜ್ಜೆ ಹಿಂದಿದ್ದಾರೆ. ಸೌತ್ ಈಸ್ಟ್ ರಾಷ್ಟ್ರಗಳು ಮೂರ್ನಾಲ್ಕು ಹೆಜ್ಜೆ ಹಿಂದಿವೆ. ಸಂಪನ್ಮೂಲದ ದೃಷ್ಟಿಯಿಂದ ನಾವು ಸಮೃದ್ಧವಾಗಿದ್ದೇವೆ. ಇಡೀ ಜಗತ್ತಿಗೆ ನಾಯಕನಾಗಿ ನಿಲ್ಲುವ ಎಲ್ಲ ಅರ್ಹತೆ, ಸಾಧ್ಯತೆಗಳೂ ನಮಗಿವೆ. ಭಾರತ ಕೈಗೊಳ್ಳುವ ಯಾವುದೇ ಅಭಿವೃದ್ಧಿ ಇಡೀ ಜಗತ್ತಿಗೇ ಮಾದರಿಯಾಗಬಲ್ಲುದು.
ಇಲ್ಲಿನ ಭೌಗೋಳಿಕ ಮತ್ತು ಸಾಮಾಜಿಕ ವೈವಿಧ್ಯ ಇಡೀ ಜಗತ್ತನ್ನು ಪ್ರತಿನಿಧಿಸುತ್ತವೆ. ಒಂದು ಭಾರತದಲ್ಲಿ ಇಡೀ ಜಗತ್ತಿನ ಎಲ್ಲ
ರಾಷ್ಟ್ರಗಳೂ ಅಡಗಿವೆ. ನಾವು ಮಾದರಿಯಾದರೆ ಇಡೀ ಜಗತ್ತೇ ನಮ್ಮನ್ನು ಅನುಸರಿಸಲು ಸಿದ್ಧವಿದೆ. ಆದರೆ ನಾವು ಅದನ್ನು
ಬಿಟ್ಟು ಅಮೆರಿಕ-ಯೂರೋಪ್ ರಾಷ್ಟ್ರಗಳನ್ನು ಅನುಸರಿಸುತ್ತಿದ್ದೇವೆ. ಇದಕ್ಕಿಂತ ದುರಂತ ಮತ್ತೊಂದಿಲ್ಲ. ವಿದ್ಯುತ್ ಕ್ಷೇತ್ರದ ಉದಾಹರಣೆಯನ್ನೇ ತೆಗೆದುಕೊಂಡರೆ ಭಾರತದ ೫೦ ಕೋಟಿ ಜನರಿಗೆ ಮಾತ್ರ ವಿದ್ಯುತ್ ಇಲ್ಲ. ನಾವು ಇದನ್ನು ಮಾತ್ರ ಗಮನಿಸು ತ್ತಿದ್ದೇವೆ. ದೇಶದ ಎಲ್ಲರಿಗೂ ವಿದ್ಯುತ್ ನೀಡಿದ ಮಾತ್ರಕ್ಕೆ ಅಭಿವೃದ್ಧಿ ಸಾಧಿಸಿದಂತಾಗುವುದಿಲ್ಲ.
ಅಭಿವೃದ್ಧಿಯ ವ್ಯಾಖ್ಯಾನ ಬೇರೆಯದೇ ಇದೆ. ವಿದ್ಯುತ್ ಅದರ ಭಾಗವಷ್ಟೆ. ಒಂದೊಮ್ಮೆ ವಿದ್ಯುತ್ ನೀಡಿದ ಮಾತ್ರಕ್ಕೆ ಅಭಿವೃದ್ಧಿ ಸಾಧಿಸಿದಂತಾಗಿದ್ದರೆ ನಗರಗಳ ಎಲ್ಲ ಮಕ್ಕಳೂ ಅತಿ ಬುದ್ಧಿವಂತರೂ, ಸ್ಮಾರ್ಟ್ ವ್ಯಕ್ತಿಗಳೂ ಆಗಿರಬೇಕಿತ್ತು. ಆದರೆ ಹಾಗಾಗಿಲ್ಲ ವಲ್ಲ? ಹಾಗೆ ನೋಡಿದರೆ ಜಗತ್ತಿನ ೧೬೦ ಕೋಟಿ ಜನರು ವಿದ್ಯುತ್ ಅನ್ನೇ ಕಂಡಿಲ್ಲ. ಈ ಹಂತದಲ್ಲಿ ನಾವು ಇಡೀ ಜಗತ್ತನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಮಾದರಿಯನ್ನು ರೂಪಿಸುವ ಅಗತ್ಯವಿದೆ.
ಮಣಿಪುರ, ಉತ್ತರ ಪ್ರದೇಶ, ರಾಜಸ್ಥಾನ, ಕರ್ನಾಟಕ ಹೀಗೆ ಇಡೀ ವಿಶ್ವದ ಮರುಮಾದರಿಗಳೇ ಇಲ್ಲಿ ರಾಜ್ಯಗಳ ರೂಪದಲ್ಲಿವೆ. ಕರ್ನಾಟಕದ ಸಮಸ್ಯೆಗೆ ರೂಪಿಸುವ ಪರಿಹಾರ ಫಿಲಿಪ್ಪೀನ್ಸ್‌ಗೆ ಹೊಂದಿಕೆಯಾಗಬಲ್ಲುದು. ಮಣಿಪುರದ ಮಾದರಿ ಸೂಡಾನ್‌ಗೂ
ಸೂಕ್ತ. ನಮಗೆ ಇನ್ಸರ್ಜನ್ಸಿ ಇದೆ, ನೀಡ್ ಇದೆ. ನಿಜಕ್ಕೂ ನಾವು ಇಡೀ ವಿಶ್ವದ ಸಂಶೋಧನಾ(ಆರ್‌ಎನ್‌ಡಿ) ಕೇಂದ್ರವಿದ್ದಂತೆ.
ಇನ್ನು ನಮ್ಮಲ್ಲಿ ಬೃಹತ್ ಮಾನವ ಸಂಪನ್ಮೂಲವಿದೆ. ಆದರೆ ಅದು ಸೂಕ್ತ ರೀತಿಯಲ್ಲಿ, ಸೂಕ್ತ ಸಂದರ್ಭದಲ್ಲಿ ಬಳಕೆಯಾಗು ತ್ತಿಲ್ಲ. ಅಭಿವೃದ್ಧಿಯ ಸಮಾನ ಹಂಚಿಕೆಯಾಗುತ್ತಿಲ್ಲ.
ಅಭಿವೃದ್ಧಿ ಎಂದರೆ ಜನರ ಜೀವನ ಮಟ್ಟದ ಸುಧಾರಣೆಯಾಗಿ ಬದಲಾಗಬೇಕು. ಸಾಮಾನ್ಯ ಜನಜೀವನದ ಗುಣಮಟ್ಟ ಸುಧಾ ರಣೆಯ ಮೊದಲ ಹಂತ ಆರೋಗ್ಯ ಮತ್ತು ಶಿಕ್ಷಣ. ಸಮಾಜವೊಂದರ ಅಭಿವೃದ್ಧಿಯ ಮಾನದಂಡ ಇವೆರಡೇ ಹೊರತೂ ಆರ್ಥಿಕತೆ, ಯಾಂತ್ರಿಕತೆ, ಕೈಗಾರಿಕೆ, ತಂತ್ರಜ್ಞಾನಗಳಲ್ಲ. ಈ ಹಂತದಲ್ಲಿ ‘ಡೆಲವರಿ ಮಾಡೆಲ’ ಅನ್ನು ಯಾವ ರೀತಿ ಬದಲಿಸ ಬೇಕೆಂದು ಚಿಂತಿಸುವ ನಾಯಕತ್ವ ಅಗತ್ಯ.
ಉದಾಹರಣೆಗೆ ಆರೋಗ್ಯ ಕ್ಷೇತ್ರದಲ್ಲಿ ನಾವು ಇನ್ನಿಲ್ಲದ ಪ್ರಗತಿ ಸಾಧಿಸಿದ್ದೇವೆ. ದೇಶ ವಿದೇಶಗಳಿಂದ ಜನ ಚಿಕಿತ್ಸೆಗಾಗಿ
ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಹೆಮ್ಮೆ ಪಡುತ್ತಿದ್ದೇವೆ. ಸೌಲಭ್ಯಗಳಿವೆ ನಿಜ. ಆದರೆ ನಿಜಕ್ಕೂ ಇಲ್ಲಿನ ಚಿಕಿತ್ಸಾ ವೆಚ್ಚ
ಸಾಮಾನ್ಯನ ಕೈಗೆಟುಕದಷ್ಟು ಹೆಚ್ಚಿದೆ. ಹಾಗೂ ಗ್ರಾಮೀಣರು ಇಂದಿಗೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ದೂರದ ಪಯ
ಣವನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ.
ಗ್ರಾಮೀಣ ಜನಜೀವನದ ಆರೋಗ್ಯ ಮಟ್ಟ ಇಂದಿಗೂ ಸುಧಾರಿಸಿಲ್ಲ. ಹಾಗೇ ಶಿಕ್ಷಣ ಕ್ಷೇತ್ರದಲ್ಲಿ ಸಹ. ಬಡವರ ಮಕ್ಕಳು ಹಣ ವಿಲ್ಲದ ಕಾರಣಕ್ಕೆ ಗುಣಮಟ್ಟದ ಶಾಲೆ, ಶಿಕ್ಷಣದಿಂದ ವಂಚಿರಾಗುತ್ತಲೇ ಬರುತ್ತಿದ್ದಾರೆ. ಒಬ್ಬ ಪಿಚಾಯ, ಒಬ್ಬ ಕೇಜ್ರಿವಾಲ, ಒಬ್ಬ ಹರೀಶ್ ಹಂದೆ (ಈ ಮೂವರೂ ಐಐಟಿಯ ಸಹಪಾಠಿಗಳು) ಈ ಮಟ್ಟ ತಲುಪಿದ್ದಾನೆಂದರೆ ಅದು ಆತನಿಗೆ ಶಿಕ್ಷಣದಲ್ಲಿ ಸಿಕ್ಕ ಅವಕಾಶವೇ ಹೊರತು, ಕೇವಲ ಆತನ ಬುದ್ಧಿಮತ್ತೆಯಲ್ಲ.
ಇಂಥ ಬುದ್ಧಿವಂತ ಅದೆಷ್ಟೋ ಮಕ್ಕಳು ನಮ್ಮ ಹಳ್ಳಿಗಳಲ್ಲಿ ಅವಕಾಶ ವಂಚಿತರಾಗುತ್ತಿzರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ
ನಗರ ಕೇಂದ್ರಿತ ಏಕಸ್ವಾಮ್ಯದಿಂದಾಗಿ ಸಾಮಾನ್ಯರು ಇವೆರಡರಿಂದಲೂ ದೂರವೇ ಉಳಿದಿzರೆ. ಇವೆರಡೂ ಪ್ರಜಾಶೀಲಗೊಂಡಾಗ ಬಡಮಕ್ಕಳ ಬುದ್ಧಿವಂತಿಕೆ, ಗ್ರಾಮೀಣರ ಸಾಮರ್ಥ್ಯದ ದರ್ಶನ ಆಗಲು ಸಾಧ್ಯ. ಸೌಲಭ್ಯಗಳ ವಿಕೇಂದ್ರೀಕರಣವೊಂದೇ ಇದಕ್ಕಿ ರುವ ಪರಿಹಾರ. ಊಟ, ಬಟ್ಟೆಗೇ ಇಲ್ಲದ ವ್ಯಕ್ತಿಗೆ ವಿದ್ಯುತ್, ಕಂಪ್ಯೂಟರ್, ಹೈಟೆಕ್ ಸೌಲಭ್ಯಗಳನ್ನು ಕೊಟ್ಟು ಏನು ಪ್ರಯೋಜನ? ನಮ್ಮಲ್ಲಿನ ಬಡವ, ಕಡುಬಡವ, ಅತಿಕಡು ಬಡವ ಎಂಬ ಮೂರು ವರ್ಗಗಳಿವೆ.
ಆಧುನಿಕ ಮಜ್ಜಿಗೆ ಕಡೆಯುವ ಯಂತ್ರಗಳಾಗಲೀ ಸ್ಮಾರ್ಟ್ ಪೋನ್ ಗಳಾಗಲಿ, ವೈಫೈ ಸೌಲಭ್ಯವಾಗಲಿ ಇವರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದ ಸಂಗತಿ. ಅವರಿಗೆ ಉಪ್ಪು-ಗಂಜಿಯ ಪ್ರಶ್ನೆಯೇ ಮುಖ್ಯ. ನಮ್ಮ ಆದ್ಯತೆಗಳು ಖಂಡಿತಾ ಬದಲಾಗಬೇಕು. ನಮ್ಮ ಉನ್ನತ ಶಿಕ್ಷಣ, ವಿದ್ಯಾ ಸಂಸ್ಥೆ ಎನ್ನುವುದು ಕೇವಲ ಚರ್ವಿತ ಚರ್ವಣ, ಪಾಶ್ಚಾತ್ಯ ಪ್ರೇರಿತ ಮಾಡೆಲ್‌ಗಳನ್ನಷ್ಟೇ ರೂಪಿಸುತ್ತಿದೆ. ವಿದ್ಯಾರ್ಥಿಗಳಲ್ಲಿನ ಕ್ರಿಯಾಶೀಲತೆಗೆ ನೀರೆರೆಯುವ, ಹೊಸತಕ್ಕೆ ಪ್ರೇರಣೆ ನೀಡುವ, ಸ್ವಾವಲಂಬಿ ಬದುಕನ್ನು ರೂಪಿಸಿಕೊಡುವಲ್ಲಿ ನಾವು ಸೋತಿದ್ದೇವೆ.
ಎಂಜಿನಿಯರಿಂಗ್ ಗಳಂಥ ವೃತ್ತಿ ಆಧಾರಿತ ಶಿಕ್ಷಣದಲ್ಲೂ ಕಾಟಾಚಾರಕ್ಕೆ ನಡೆಯುವ ಪ್ರಾಜೆಕ್ಟ್‌ಗಳು ವಿದ್ಯಾರ್ಥಿಗಳನ್ನು ಸವಾಲೊಂದಕ್ಕೆ ಸಜ್ಜುಗೊಳಿಸುವುದೇ ಇಲ್ಲ. ಸಮಸ್ಯೆಗಳಿಗೆ ಹೊಸ ಪರಿಹಾರ ಸೂಚಿಸುವ ಮಟ್ಟಕ್ಕೆ ಅಲ್ಲಿ ಏನೂ ನಡೆಯುವು ದಿಲ್ಲ. ಕೌಶಲವನ್ನು ಅಭಿವೃದ್ಧಿ ಪಡಿಸುವ ಕುರಿತು ಯಾವ ಸಿಲೆಬಸ್‌ಗಳೂ ಚರ್ಚಿಸುವುದೇ ಇಲ್ಲ. ಸರಕಾರಗಳು ಸಹ ಐಐಟಿಗಳಿಗೆ ಕೊಡುವ ಆದ್ಯತೆಯನ್ನು ಐಟಿಐಗಳಿಗೆ ಕೊಡುತ್ತಿಲ್ಲ.
ಬದುಕಿನ ಸವಾಲನ್ನು ಮೆಟ್ಟಿನಿಲ್ಲುವ, ಯುವಕರಲ್ಲಿ ಆತ್ಮವಿಶ್ವಾಸ ಮೂಡಿಸಬಲ್ಲ ಶಿಕ್ಷಣವೇ ನಿಜವವಾದ ಶಿಕ್ಷಣ. ಅಕಾಡೆಮಿಕ್ ಆಗಿ ಸಿಲೆಬಸ್ ಓದಿ, ಒಂದು ಪ್ರಾಜೆಕ್ಟ್, ಒಂದು ಪ್ರಸೆಂಟೇಷನ್ ಕೊನೆಗೊಂದು ಪರೀಕ್ಷೆ ಮುಗಿಸಿ, ಗೋಲ್ಡ್ ಮೆಡಲಿಸ್ಟ್ ಎಂಬ
ಕೋಡಿನೊಂದಿಗೆ ವಿದೇಶಕ್ಕೆ ಹಾರುವ ಅಥವಾ ಎಂಎನ್ ಸಿಯೊಂದರಲ್ಲಿ ಆರಂಕಿ ಸಂಬಳದ ಜೀತಕ್ಕೆ ಸೇರುವ ಯುವಕರಿಂದ ದೇಶ ಬದಲಾಗಲು, ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ. ನಮ್ಮ ಶಿಕ್ಷಣದ ಅಂತಿಮ ಗುರಿಯೇ ಇಂಥ ಯುವಕರ ತಯಾರಿಕೆ ಎಂಬಂತಾಗಿದೆ. ಸರಕಾರ ಒಮ್ಮೆಯೂ ಭಾರತದಂಥ ಮಧ್ಯಮ ವರ್ಗದವರೇ ಹೆಚ್ಚಿರುವ ದೇಶದ ಯುವಕರನ್ನು ಗಮನದಲ್ಲಿಟ್ಟು ಕೊಂಡು ಶಿಕ್ಷಣ ವ್ಯವವಸ್ಥೆಯನ್ನು ಬದಲಿಸುವ ಮನಸ್ಸನ್ನೇ ಮಾಡಿಲ್ಲ.
ಕಳೆದ 20 ವರ್ಷಗಳಲ್ಲಿ ಐಟಿಐನಲ್ಲಿ ಬ್ಯೂಟಿ ಪಾರ್ಲರ್, ಸೆಲೂನ್ ಶಾಪ್‌ನಂಥ ಎರಡು ಮೂರು ಕೋರ್ಸ್ಗಳನ್ನು ಬಿಟ್ಟರೆ ಬೇರೆ ವೃತ್ತಿ ಆಧಾರಿತ ಕೋರ್ಸ್ ಗಳ ಪರಿಚಯವೇ ಆಗಿಲ್ಲ. ಮೂಲಸೌಕರ್ಯ ಈ ಪ್ರಮಾಣದಲ್ಲಿರುವಾಗ, ಇಷ್ಟೆಲ್ಲ ಮಾನವ ಸಂಪನ್ಮೂಲವನ್ನು ಹೊಂದಿರುವಾಗ, ಇಷ್ಟೊಂದು ಶಿಕ್ಷಣ ಸಂಸ್ಥೆಗಳಿದ್ದಾಗ ವರ್ಷಕ್ಕೆ ಸಾವಿರ ಸಾವಿರ ಸಂಖ್ಯೆಯ ಉದ್ದಿಮೆ ಗಳನ್ನು ಹುಟ್ಟು ಹಾಕುವ ಮಟ್ಟಕ್ಕೆ ಯುವಕರನ್ನು ಸಜ್ಜುಗೊಳಿಸಬಹುದಿತ್ತು.
ಐಐಎಂ, ಐಐಟಿಗಳಂಥ ಶಿಕ್ಷಣ ಸಂಸ್ಥೆಗಳಿಂದ ಗ್ರಾಮೀಣ ಭಾರತದ ಸಮಸ್ಯೆ ನೀಗಬಲ್ಲ ಒಂದೇ ಒಂದು ಸಂಶೋಧನೆಯೂ ಈವರೆಗೆ ಬಂದಿಲ್ಲ. ಆದರೂ ನಮ್ಮ ದೊಡ್ಡಸ್ತಿಕೆಯ ಪ್ರತೀಕವಾಗಿ ಅವನ್ನು ಪೋಷಿಸುತ್ತೇವೆ. ನಮ್ಮ ಅಕಾಡೆಮಿಕ್ ಸ್ಟ್ರಕ್ಚರ್ ಹಾಗಿದೆ. ನಮ್ಮ ರೈತರು, ರೈತ ಯುವಕರು ಹೊಲದಲ್ಲಿ ನಲವತ್ತು- ನಲವತ್ತೈದು ವರ್ಷಗಳಿಂದ ಒಂದಿಂದು ಪ್ರಯೋಗಳನ್ನು
ಮಾಡುತ್ತಲೇ ಬರುತ್ತಿದ್ದಾರೆ.
ಹೊಸ ಹೊಸ ಸಮಸ್ಯೆಗಳು ಸೃಷ್ಟಿಯಾದಂತೆಲ್ಲ ಹೊಸತೊಂದು ಪರಿಹಾರವನ್ನು ಕಂಡುಕೊಳ್ಳುತ್ತಲೇ ಬರುತ್ತಿದ್ದಾರೆ. ಇವ್ಯಾ ವುದೂ ಸಂಶೋಧನೆಗಳೆನಿಸುವುದೇ ಇಲ್ಲ. ಏಕೆಂದರೆ ಅವರ ಬಳಿ ಪಿಎಚ್.ಡಿಗಳಿಲ್ಲ. ಹೋಗಲಿ ಎಂದರೆ ಅಂಥ ಸಂಶೋಧನೆ ಗಳಿಗೆ ಡಾಕ್ಟರೇಟ್ ಕೊಡುವ ಮನಸ್ಸೂ ನಮ್ಮ ವಿಶ್ವವಿದ್ಯಾಲಯಗಳಿಗಿಲ್ಲ. ನಮ್ಮ ಇಡೀ ಶೈಕ್ಷಣಿಕ, ಔದ್ಯೋಗಿಕ, ಔದ್ಯಮಿಕ ರಂಗವನ್ನು ಎರಡೇ ಜಾತಿಯವರು ಆಳುತ್ತಿದ್ದಾರೆ. ಒಂದು ‘ಡಿಗ್ರಿ ಕಾಸ್ಟ್’ ಹಾಗೂ ಇನ್ನೊಂದು ‘ಇಂಗ್ಲಿಷ್ ಕಾಸ್ಟ್’. ಇವರಿಗೆ ಮಾತ್ರ ಸೌಲಭ್ಯಗಳು, ಅನುದಾನಗಳು, ಉದ್ದಿಮೆ ಸ್ಥಾಪನೆಗಾಗಿನ ಸಾಲ ಸೌಕರ್ಯಗಳು, ತೆರಿಗೆ ವಿನಾಯಿತಿಗಳು ದೊರೆಯುತ್ತಿದೆ.
ಸಾಮಾನ್ಯನಿಗೆ ಇವಾವುದೂ ಸಿಗದು. ಡಿಗ್ರಿ, ಇಂಗ್ಲಿಷ್ ಇಲ್ಲದವ ಎಷ್ಟೇ ಬುದ್ಧಿವಂತನಾದರೂ, ಶ್ರಮಜೀವಿ, ಪ್ರಾಮಾಣಿಕ ಆಗಿದ್ದರೂ ಆತನನ್ನು ನಂಬಲು ಯಾರೂ ಸಿದ್ಧರಿರುವುದಿಲ್ಲ. ದೇಶದಲ್ಲಿರುವ ಇಷ್ಟು ಕಾರ್ಪೋರೇಟ್ ಸಂಸ್ಥೆಗಳಲ್ಲಿ ಒಬ್ಬನೇ ಒಬ್ಬ ಇಂಗ್ಲಿಷ್ ಮಾತನಾಡದ ಮುಖ್ಯಸ್ಥ ಸಿಗುವುದಿಲ್ಲ. ಆ ಹುದ್ದೆಯ ಮೊದಲ ಕ್ರೈಟೀರಿಯಾವೇ ಇಂಗ್ಲಿಷ್ ಎಂಬಂತಾಗಿದೆ. ಚೈನಾ, ಇಟಲಿ, ಪ್ರಾನ್ಸ್‌ನಲ್ಲಿ ಈ ವ್ಯವಸ್ಥೆ ಇಲ್ಲ. ಆದರೂ ಅವರು ಅಭಿವೃದ್ಧಿ ಸಾಧಿಸಿಲ್ಲವೇ? ನಮ್ಮಲ್ಲಿ ಕೊನೆ ಪಕ್ಷ ಸ್ಥಳೀಯ ಭಾಷೆಗಳಲ್ಲಿ ರೆಸ್ಯೂಮಿ ಸಹ ಪಡೆಯಲು ಸಿದ್ಧರಿಲ್ಲ.
ಇಂಥವಕ್ಕೆಲ್ಲ ಕಾರಣ ನಮ್ಮಲ್ಲಿರುವ ಗೊಂದಲ. ನಮಗೆ ಇಂದಿಗೂ ಬೌದ್ಧಿಕ ಮತ್ತು ಆರ್ಥಿಕ ಬಡತನದ ಬಗ್ಗೆ ಸಾಕಷ್ಟು
ಗೊಂದಲಗಳಿವೆ. ಇಂಗ್ಲಿಷ್ ಮಾತಾಡಬಲ್ಲವರೆಲ್ಲ ಇಂಟಲೆಕ್ಚುವಲ್ ಎಂಬ ಭ್ರಮೆಯಲ್ಲಿ ನಾವಿದ್ದೇವೆ. ಬಡವ ಎಂದ ಮಾತ್ರಕ್ಕೆ
ಆತ ದಡ್ಡನಾಗಿರಲೇಬೇಕಿಲ್ಲ. ಇಂಗ್ಲಿಷ್ ಬಾರದ ಬಗೆಗಿನ ಕೀಳರಿಮೆಯ ಮಂದಿ ಮತ್ತು ನೈಜ ಪ್ರತಿಭೆಯ ಕೊರತೆಯಿರುವ ಡಿಗ್ರಿ ಹೋಲ್ಡರ್‌ಗಳು ಸೃಷ್ಟಿಸಿದ ಸಮಸ್ಯೆಯಿದು. ಅದರಲ್ಲೂ ಮಧ್ಯಮ ವರ್ಗವನ್ನು ಇಂಥ ಸಮಸ್ಯೆ ಕಾಡುತ್ತಿದೆ.
ಸ್ಥಳೀಯ ಸಮಸ್ಯೆಗಳನ್ನು ವ್ಯಾಖ್ಯಾನಿಸುವ ಒಂದೇ ಒಂದು ಕೋರ್ಸ್ ಗಳೂ ಭಾರತದ ಸೋಕಾಲ್ಡ ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲದರ ಪರಿಣಾಮ ಇದು. ಎಂಐಟಿ ಬಾಸ್ಟನ್‌ನಲ್ಲಿ ಮೂರು ಪಾರ್ವರ್ಟಿ ಆಕ್ಷನ್ ಲ್ಯಾಬ್‌ಗಳು ಭಾರತದ ಬಗೆಗೇ ಇವೆ. ‘ಅಮೆರಿಕದ
ಏಲ’ನಲ್ಲಿ ಒಂದು ಲ್ಯಾಬ್ ಬಿಟ್ಟರೆ ನಮಗೆ ಭಾರತದ ಸಮಸ್ಯೆಗಳನ್ನು ಉದ್ದೇಶಿಸಿ ಮಾತನಾಡಬಲ್ಲ, ನಮ್ಮ ಬಡತನ ಕುರಿತ ಕ್ರಿಯಾ ಯೋಜನೆಗಳನ್ನು ರೂಪಿಸಬಲ್ಲ ಅಕಾಡೆಮಿಕ್ ವ್ಯವಸ್ಥೆ ನಮ್ಮಲ್ಲಿ ಇಲ್ಲವೇ ಇಲ್ಲ.
ಮಾತೆತ್ತಿದರೆ ಅಮೆರಿಕ, ಯೂರೋಪ್ ಎನ್ನುವವ ನಾವು ಅಲ್ಲಿನಂತೆ ಕೌಶಲಾಭಿವೃದ್ಧಿಯ ಬಗ್ಗೆ ಯೋಚಿಸುವುದೇ ಇಲ್ಲ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಕುರಿತು ತರಬೇತಿ ನೀಡುವು ಗೋಜಿಗೇ ಹೋಗುವುದಿಲ್ಲ. ಹೀಗಾಗಿ ನಮ್ಮ ವಿದ್ಯಾವಂತ ಯುವಕ ರಲ್ಲಿ ಶೇ.60 ಮಂದಿ ಉದ್ಯೋಗ ಅರಸಿ ಹೊರಡುತ್ತಾರೆ. ಶೇ.೩೦ ಮಂದಿ ಸ್ವಂತ ಉದ್ದಿಮೆಯ ಸಾಹಸಕ್ಕೆ ಹೊರಳುತ್ತಾರೆ. ಕೇವಲ ಶೇ.5ರಷ್ಟು ಯುವಕರು ಮಾತ್ರವೇ ಹೊಸ ಹೊಸ ಸಂಶೋಧನೆಗೆ ಮುಂದಾಗುತ್ತಾರೆ.
ಹೀಗೆ ಇನ್ನೋವೇಟಿವ್ ಮನೋಭಾವ ಪ್ರೋತ್ಸಾಹಿಸುವ ಯೋಜನೆಗಳೇ ನಮ್ಮ ಸರಕಾರಗಳ ಬಳಿ ಇಲ್ಲ. ನಮ್ಮಲ್ಲಿ ವೈಫಲ್ಯ ಗಳನ್ನು ಸೆಲೆಬ್ರೇಟ್ ಮಾಡುವ ಮನೋಭಾವವೇ ಇಲ್ಲ ಹುಟ್ಟುತ್ತಲೇ ‘ನೋ’ ಮನೋಭಾವವನ್ನು ಮಕ್ಕಳಲ್ಲಿ ಬಿತ್ತಲು ಆರಂಭಿ ಸುತ್ತೇವೆ. ಅದನ್ನು ಮುಟ್ಟಬೇಡ, ಹೀಗೆ ಮಾಡಬೇಡ, ಅಲ್ಲಿ ಹೋಗಬೇಡ, ಇಲ್ಲಿ ನಿಲ್ಲಬೇಡ, ಹಾಗೆ ಆಡಬೇಡ. ಅದು ಅಪಾಯ, ಇದು ಸರಿಯಲ್ಲ, ಅಲ್ಲಿ ಬಿದ್ದೀಯ, ಇಲ್ಲಿ ಸೋಲಬಹುದು… ಇದನ್ನು ಹೊರತುಪಡಿಸಿ ನುಗ್ಗು, ಹೋಗು, ಸೋತರೆ ಸೋಲು ಪರವಾಗಿಲ್ಲ ಅನುಭವ ದಕ್ಕುತ್ತದೆ.
ಕಡಿ, ಮುರಿ, ಬೀಳಿಸು… ಎಂಬುದನ್ನು ಹೇಳುವುದೇ ಇಲ್ಲ. ಹೀಗಾಗಿ ಮಕ್ಕಳಲ್ಲಿ ಪ್ರಯೋಗಶೀಲತೆ, ಕೌತುಕ, ಸಂಶೋಧನಾತ್ಮಕ ಮನೋಭಾವವೇ ಬೆಳೆಯುತ್ತಿಲ್ಲ. ಮಕ್ಕಳು ಜೀವನದಲ್ಲಿ ಎಂದಿಗೂ ‘ರಿಸ್ಕ್’ ತೆಗೆದುಕೊಳ್ಳುವುದೇ ಇಲ್ಲ. ಇಂಥ ಮಕ್ಕಳು ದೊಡ್ಡವ ರಾದ ಮೇಲೂ ಸವಾಲಿಗೆ ತಮ್ಮನ್ನುತಾವು ಒಡ್ಡಿಕೊಳ್ಳುವುದಿಲ್ಲ. ಒಂದೊಮ್ಮೆ ಹೊಸತರ ಹುಡುಕಾಟಕ್ಕೆ ಇಳಿಯುವ ಯುವಕರನ್ನೂ ನಾವಾಗಲಿ, ಸರಕಾರವಾಗಲಿ ಪ್ರೋತ್ಸಾಹಿಸುವುದಿಲ್ಲ.
‘ಹೈ ರಿಸ್ಕ್ ಕ್ಯಾಪಿಟಲ್’ ಎಂಬ ಶಬ್ದವೇ ನಮ್ಮ ಬ್ಯಾಂಕಿಂಗ್ ಅಥವಾ ಆರ್ಥಿಕ ನಿಘಂಟಿನಲ್ಲಿ ಇಲ್ಲ. ಪದವಿ ಮುಗಿಸಿ ಹೊರಬರುವ ಎಲ್ಲ ಯುವಕರಿಗೂ ನಿಗದಿತ ಮೊತ್ತದ ಇಂಥ ಸಾಲಸೌಲಭ್ಯ ಸಿಗುವಂತಾಗಬೇಕು. ಇದರಲ್ಲಿ ಶೇ.50ವಿಫಲರಾದರೂ ದೇಶದ ಯುವಕರ ಜನಸಂಖ್ಯೆಯಿಂದ ಅದೆಷ್ಟೋ ಕೋಟಿ ಸಂಶೋಧನೆಗಳು, ಹೊಸ ಮಾದರಿಗಳು, ಯಶಸ್ವಿ ಉದ್ದಿಮೆಗಳು ಹೊರ ಬಂದಾವು.
ಅದಿಲ್ಲದ ಪರಿಣಾಮ ನಮ್ಮಲ್ಲಿ ಎಲ್ಲದಕ್ಕೂ ಸರಕಾರದ ಕಡೆ ನೋಡುವ ಮನೋಭಾವ ಬೆಳೆದಿದೆ. ಎಲ್ಲದಕ್ಕೂ ಪ್ರತಿಭಟನೆ,
ಮಾತೆತ್ತಿದರೆ ಬಂದ್, ಎಂದರಲ್ಲಿ ಹರತಾಳಗಳು ನಡೆಯುವಂತಾಗಿದೆ. ಕಾಲೇಜು ಹಂತದ ಪ್ರತಿ ವಿದ್ಯಾರ್ಥಿಗೆ ‘ನಿನ್ನಸುತ್ತಲಿನ ಕನಿಷ್ಠ 5 ಕಿ.ಮೀ. ವ್ಯಾಪ್ತಿಯ ಒಂದು ಸಮಸ್ಯೆಗೆ ನೀನೇ ಪರಿಹಾರ (ಕನಿಷ್ಠ ಐದು ಪರಿಹಾರ ಮಾರ್ಗಗಳು) ಸೂಚಿಸುವ ಪ್ರಾಜೆಕ್ಟ್ ತಯಾರಿಸಬೇಕು’ ಎಂಬ ಪ್ರಾಯೋಗಿಕ ಅವಧಿಯನ್ನು ಕಡ್ಡಾಯ ಮಾಡಬೇಕು.
ಸಾವಿರದಲ್ಲಿ ಒಂದು ಬದಲಾವಣೆಯ ಸಲಹೆ ಅನುಷ್ಠಾನಗೊಂಡರೂ ಭಾರತ ಸಮಸ್ಯೆಗಳ ಮುಕ್ತ ದೇಶವಾಗಬಲ್ಲುದು. ಇಂಥ ಹಸಿವಿಲ್ಲದ ಐಐಟಿ, ವೈದ್ಯ, ಎಂಜಿನಿಯರಿಂಗ್ ಕಾಲೇಜುಗಳನ್ನು ಪೋಷಿಸುತ್ತೇವೆ. ಹಸಿವಿರುವ ಐಟಿಐ ಕಾಲೇಜುಗಳನ್ನು ಬಡ
ಯುವಕರ ‘ಅನಿವಾರ್ಯ ಓದು’ ಎಂಬಂತೆ ನಿಕೃಷ್ಟವಾಗಿ ಕಾಣುತ್ತಿದ್ದೇವೆ. ಮತ್ತೆ ಮತ್ತೆ ಹೇಳುವುದಿಷ್ಟೆ. ನಮ್ಮ ನೆಲ ಇಡೀ ಜಗತ್ತಿಗೇ ಪ್ರಯೋಗಶಾಲೆಯಾಗಿ ನಿಲ್ಲಬಲ್ಲುದು. ನಾವು ಮಾಡಿಕೊಟ್ಟ ಮಾದರಿಯನ್ನು ಇಡೀ ಜಗತ್ತೇ ಅನುಸರಿಸಲು ತುದಿಗಾ ಲಲ್ಲಿ ನಿಂತಿದೆ.
ಭಾರತ ಎಂಬುದು ‘ಲಾರ್ಜ್ ಪ್ಲೇಸ್ ಆಫ್ ಮಲ್ಟಿಪಲ್ ಕಂಟ್ರೀಸ್’ ಅದನ್ನು ನಾವು ಮಾಡುತ್ತಿಲ್ಲ. ನಾವು ಮಾಡುತ್ತಿರುವುದು ಸೋತವರ ಅನುಕರಣೆಯನ್ನಷ್ಟೇ. ಇದು ಬದಲಾದ ದಿನ ಭಾರತ ಬದಲಾಗುವುದು ನಿಶ್ಚಿತ.