Thursday, 19th September 2024

ಜಾತಿ ವಿಷವರ್ತುಲದಿಂದ ಪಠ್ಯ ಹೊರಬರಲಿ

ಸ್ವಾಸ್ಥ್ಯ ಸಂಪದ

yoganna55@gmail.com

ಸೃಷ್ಟಿಯಲ್ಲಿರುವ ಪ್ರತಿಯೊಂದಕ್ಕೂ ಅದರದೇ ಗುಣ ಮತ್ತು ವಿಶೇಷಗಳಿದ್ದು, ಮನುಷ್ಯ ಅವುಗಳನ್ನು ಒಂದೊಂದು ನಾಮಾಂಕಿ ತದ ಅಡಿಯಲ್ಲಿ ವರ್ಗೀಕರಿಸಿಕೊಂಡು ಅಧ್ಯಯನ ಮಾಡಿದ್ದಾನೆ/ಮಾಡುತ್ತಿದ್ದಾನೆ. ಸೃಷ್ಟಿ ರಚನೆಯಾಗಿರುವ ಮೂಲವಸ್ತುಗಳಿಗೆ (ಎಲಿಮೆಂಟ್ಸ್) ಒಂದೊಂದಕ್ಕೂ ಒಂದೊಂದು ಹೆಸರಿಟ್ಟು ಅವುಗಳ ಗುಣ- ವಿಶೇಷಗಳನ್ನು ಕಂಡುಕೊಂಡು ವರ್ಗೀಕರಿಸಿದ್ದಾನೆ.

ಜೀವಿಗಳ ಗುಣ-ವಿಶೇಷ ಗಳಿಗನುಗುಣಗಳಾಗಿ ಹಲವಾರು ಪ್ರಬೇಧಗಳಾಗಿ ವರ್ಗೀಕರಿಸಿ ಒಂದೊಂದಕ್ಕೂ ಹೆಸರಿಟ್ಟು ಗುರುತಿಸಿ  ಕೊಂಡಿದ್ದಾನೆ. ಹೀಗೆ ಸಸ್ಯ ಮತ್ತು ಪ್ರಾಣಿಜೀವಿ ಗಳನ್ನು ವರ್ಗೀಕರಣ ಮಾಡಿಕೊಳ್ಳಲಾಗಿದೆ. ಮನುಷ್ಯನನ್ನು ಸ್ತನಯುಕ್ತ ಗುಂಪಿನ
ಪ್ರಾಣಿಯಾಗಿ ವರ್ಗೀಕರಣ ಮಾಡಲಾಗಿದ್ದು, ಮಗುವಿಗೆ ಹಾಲು ಕುಡಿಸಲು ಸ್ತನವಿರುವ ಎಲ್ಲಾ ಪ್ರಾಣಿಗಳು ಈ ಗುಂಪಿಗೆ ಬರುತ್ತವೆ. ಇವು ವೈಜ್ಞಾನಿಕವಾದ ವರ್ಗೀಕರಣ.

ಸುಮಾರು 20 ಕೋಟಿ ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಜನ್ಮತಾಳಿದ ಮಾನವಕುಲ ಕ್ರಮೇಣ, ಆದಿ ಮಾನವ, ಆಧುನಿಕ ಮಾನವನಾಗಿ ವಿಕಾಸವಾಗುತ್ತ ಪ್ರಸ್ತುತ ಮಾನವನ ವರೆಗೆ ಸಾಗಿ ಬಂದಿದ್ದಾನೆ. ಕ್ರಿಪೂ ಸುಮಾರು 1600 ವರ್ಷಗಳ ಹಿಂದೆ ಇರಾಕ್‌ ನಿಂದ ಬುದ್ಧಿವಂತ ಆರ್ಯರು ಭಾರತಕ್ಕೆ ಬಂದ ನಂತರ ಅವರು ಮನುಷ್ಯರನ್ನು ಅವರವರ ಗುಣ, ವೃತ್ತಿ, ಆಹಾರಾ ಭ್ಯಾಸ ಇತ್ಯಾದಿಗಳ ಆಧಾರದ ಮೇಲೆ ಮಾನವ ಕುಲವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವರ್ಣಾಶ್ರಮ ಪ್ರಾರಂಭ ಮಾಡಲಾಗಿ, ಮಾನವಕುಲ ಮೊಟ್ಟ ಮೊದಲಿಗೆ ಛಿದ್ರವಾ ಯಿತು.

ಆಯಾಯ ಗುಂಪುಗಳು ತಮ್ಮ ತಮ್ಮ ಪ್ರತ್ಯೇಕತೆಯನ್ನು ಕಾಪಾಡಿಕೊಂಡು ಅವರವರದೇ ಆದ ಜೀವನಶೈಲಿ ಮತ್ತು ಗುಣಗಳನ್ನು
ರೂಢಿಸಿಕೊಂಡರು. ಬ್ರಾಹ್ಮಣರು ಬ್ರಹ್ಮಜ್ಞಾನವನ್ನು ಬಲ್ಲವರೆಂದು, ಕ್ಷತ್ರಿಯರು ರಕ್ಷಣೆ ಮಾಡುವ ವೀರರೆಂದು, ವೈಶ್ಯರು ವ್ಯಾಪಾ ರಸ್ಥರೆಂದು, ಶೂದ್ರರು ಶ್ರಮಜೀವಿಗಳೆಂದು ಪರಿ ಗಣಿಸಲಾಗಿದ್ದು, ಕ್ರಮೇಣ ಇದು ಮೇಲು ಕೀಳೆಂಬ ಭಾವನೆಗಳ ಉಗಮಕ್ಕೆ
ನಾಂದಿಯಾಯಿತು. ಕಾಲ ಉರುಳಿದಂತೆ ಪ್ರಧಾನ ನಾಲ್ಕು ವರ್ಣಬೇಧಗಳಲ್ಲೂ ಉಪಬೇಧಗಳುಂಟಾಗಿ, ಇಂದು ಸುಮಾರು 3000 ಜಾತಿಗಳು ಮತ್ತು 26000 ಉಪಜಾತಿಗಳಿವೆ.

ಇದಲ್ಲದೆ ಮಾನವ ಸ್ಥಾಪಿತ ಧರ್ಮಗಳ ಆಧಾರದ ಮೇಲೆ ಮಾನವಕುಲ ವಿಂಗಡಣೆಯಾಗಿದೆ. ಪ್ರತಿಯೊಂದು ಜಾತಿಗೂ ತನ್ನದೇ ಆದ ಕಸುಬು, ಧಾರ್ಮಿಕ ನಂಬಿಕೆ, ನಡವಳಿಕೆ, ಆಚಾರ ವಿಚಾರಗಳಿದ್ದು, ಅವರವರು ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುತ್ತಿದ್ದು, ವಿರಸಗಳಿದ್ದು, ಮಾನವ ಕುಲ ಇಂದು ಜಾತಿ ಮತ್ತು ಧರ್ಮಗಳ ಆಧಾರದ ಮೇಲೆ ಛಿದ್ರ ಛಿದ್ರವಾಗಿದೆ. ದಲಿತರನ್ನು ಅಸ್ಪಶ್ಯರು ಎಂದು ಪರಿಗಣಿಸಿ ಅವರನ್ನು ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಆಚರಣೆಗಳಿಂದ ದೂರವಿಡುತ್ತಿದ್ದ ಅಮಾನವೀಯ ಕೃತ್ಯವಂತೂ ಅಸಹನೀಯ.

ದುರ್ದೈವವೆಂದರೆ ಬ್ರಿಟೀಷರು ಭಾರತಕ್ಕೆ ಬರುವವರೆವಿಗೂ ವಿದ್ಯಾಭ್ಯಾಸ ಕೆಲವೇ ವರ್ಗದ, ಜಾತಿಯವರಿಗೆ ಮಾತ್ರ ಸೀಮಿತ ವಾಗಿದ್ದು, ಇನ್ನಿತರ ಬಹುಪಾಲು ಜಾತಿಯವರು ವಿದ್ಯಾಭ್ಯಾಸದಿಂದ ವಂಚಿತರಾಗಿ, ಸಮಾಜದಲ್ಲಿ ಜ್ಞಾನಾರ್ಜನೆಯ ಕಂದಕ
ಉಂಟಾಯಿತು. ಬ್ರಿಟೀಷರು ಶಾಲೆಗಳನ್ನು ತೆರೆದ ಮೇಲೆ ವಿದ್ಯಾಭ್ಯಾಸ ಸ್ವಲ್ಪ ಮಟ್ಟಿಗೆ ಮುಕ್ತವಾಯಿತು. ಸ್ವಾತಂತ್ರ್ಯ ಬಂದ ನಂತರ ಸಮಾಜದ ಅಸಮಾನತೆಯನ್ನು ಸರಿಪಡಿಸಲು ಸಂವಿಧಾನದಲ್ಲಿಯೇ ವಿದ್ಯಾಕ್ಷೇತ್ರದಲ್ಲಿ ಜಾತಿ ಆಧಾರಿತ ಮೀಸಲಾತಿ ಜಾರಿಗೆ ಬಂದು ಇಂದು ಎಲ್ಲಾ ವರ್ಗದವರಿಗೆ ಅವಕಾಶಗಳು ಲಭ್ಯವಾಗುತ್ತಿವೆ.

ಎಲ್ಲಾ ಜಾತಿಗಳಲ್ಲೂ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಪ್ರe ಬೆಳೆಯುತ್ತಿದೆ. ಆದರೆ ತುಳಿತಕ್ಕೊಳಗಾದ ವರ್ಗದಿಂದ ವಿದ್ಯಾವಂತರಾದ ಕೆಲವರು, ಸಾಹಿತಿಗಳು ತಮ್ಮ ಪೂರ್ವಜರಿಗೆ ಆದ ಹಿಂದಿನ ಅಪಮಾನಗಳನ್ನು ಇಂದಿಗೂ ಮರೆತಿಲ್ಲ. ಸವರ್ಣೀಯರೂ ಬದಲಾಗುತ್ತಿದ್ದರೂ ನಿಮ್ಮ ತಾತ ನಮ್ಮ ತಾತನನ್ನು ಶೋಷಣೆ ಮಾಡಿದ್ದಾನೆ. ನಾನು ನಿನ್ನನ್ನು ಸಹಿಸುವುದಿಲ್ಲ ವೆಂಬ ಮನೋವೃತ್ತಿಯಿಂದ ಹಿಂದಿನ ಘಟನೆಗಳನ್ನು ಮೆಲುಕುಹಾಕಿ ಸಾಹಿತ್ಯ ಸೃಷ್ಟಿಮಾಡಿ ಇಂದು ಸಮಾಜದಲ್ಲಿ ಅಶಾಂತಿಗೆ
ನಾಂದಿಯಾಗುತ್ತಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ಆಧಾರದ ಮೇಲೆ ರಾಜಕೀಯ ಮೀಸಲು ಬಂದ ಮೇಲೆ ಜಾತಿಯನ್ನು ಅಧಿಕಾರದ ಮೆಟ್ಟಿಲು ಗಳನ್ನಾಗಿಸಿ, ಜಾತಿಗಳ ನಡುವೆ ವಿಷಬೀಜ ಬಿತ್ತಿ ಜಾತಿ ರಾಕ್ಷಸ ದಿನೇ ದಿನೇ ಬೃಹದಾಕಾರವಾಗಿ, ಕ್ಯಾನ್ಸರ್‌ನಂತೆ ವ್ಯಾಪಿಸಿ,
ಸಮಾಜದ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಜಾತಿಗೊಂದು ಮಠ, ಮಠಕ್ಕೊಬ್ಬ ಸ್ವಾಮೀಜಿ ಉಗಮಿಸುತ್ತಿದ್ದು, ಜಾತಿ ಸಂಘಟನೆ ಗಳಿಗೆ ಆಧ್ಯಾತ್ಮಿಕ ಹಿನ್ನೆಲೆ ನೀಡುತ್ತಿರುವುದು ಆಧ್ಯಾತ್ಮಕ್ಕೆ ಎಸಗಿದ ದ್ರೋಹವಾಗುತ್ತಿದೆ. ಆಧ್ಯಾತ್ಮ ಪರಂಪರೆಯ ಮಠಮಾನ್ಯ ಗಳು, ಎಲ್ಲರಲ್ಲೂ ಪ್ರೀತಿ ಹಂಚುವ, ಮಾನವಕುಲವನ್ನು ಒಗ್ಗೂಡಿಸಿ, ಸಮಗ್ರ ದೃಷ್ಟಿಕೋನವನ್ನು ಸಮುದಾಯದಲ್ಲಿ ಬೆಳೆಸಿ ನಿರಂತರ ಸಂತೋಷವನ್ನು ನೀಡುವ ಬದಲು ಜಾತಿ ಆಧಾರದ ಮೇಲೆ ಸಮಾಜವನ್ನು ಒಡೆಯುತ್ತಿವೆ.

ವಿಶ್ವಮಾನತ್ವವನ್ನು ಪ್ರತಿಪಾದಿಸಿದ ಕುವೆಂಪು ಸಾಹಿತ್ಯ ರಕ್ಷಣೆಗೆ ಒಕ್ಕಲಿಗರು, ಜಾತಿ ತೊರೆದು “ಇವನಾರವ ಎನ್ನದಿರಯ್ಯ, ಇವ ನಮ್ಮವ ಇವ ನಮ್ಮವ ಎನ್ನಿರಯ್ಯ” ಎಂದ ಬಸವಣ್ಣನ ಸಾಹಿತ್ಯ ರಕ್ಷಕರಾಗಿ ಲಿಂಗಾಯಿತರು, ಸರ್ವರು ಸಮಾನರೆಂಬ ಸಂವಿ ಧಾನ ನೀಡಿದ ಅಂಬೇಡ್ಕರ್ ಅವರ ವಿಚಾರ ರಕ್ಷಣೆಗೆ ದಲಿತರು ಮುಂದಾಗುತ್ತಿರುವುದು, ಜಾತಿಯನ್ನು ಮೀರಿ ಮಹನೀಯರ ಸಾರ್ವತ್ರಿಕ ವಿಚಾರಗಳನ್ನು ಸರ್ವರೂ ರಕ್ಷಿಸಬೇಕೆಂಬ ಮನೋವೃತ್ತಿ ಇಂದು ಇಲ್ಲದೆ, ಅವರವರ ಜಾತಿಗೆ ದಾರ್ಶನಿಕರನ್ನು ಸೀಮಿತಗೊಳಿಸುತ್ತಿರುವುದು ನೈತಿಕ ಅಧಃಪತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇದನ್ನು ಪೋಷಿಸುತ್ತಿರುವುದು ಪ್ರಬುದ್ಧ ಸಾಹಿತಿಗಳು ಮತ್ತು ರಾಜಕಾರಣಿಗಳು ಎಂಬುದು ಆತಂಕಕಾರಿ. ಸಾಹಿತ್ಯ ಸಾಮರಸ್ಯ ವನ್ನು ಬೆಳೆಸಬೇಕೇ ವಿನಃ ವಿರಸವನ್ನಲ್ಲ. ಇದು ನಮ್ಮ ಸಾಹಿತಿಗಳಿಗೆ ಅರ್ಥವಾಗುತ್ತಿಲ್ಲ ಏಕೆ? ಪಠ್ಯಪುಸ್ತಕಗಳಲ್ಲಿ ಅಳವಡಿಸಿರುವ ಅಥವಾ ಅಳವಡಿಸಬೇಕಾದ ವಿಷಯಗಳ ಬಗ್ಗೆ ಸಾಹಿತಿಗಳು, ಮಠಾಧೀಶರು, ಜಾತಿ ಸಂಘಗಳ ನಾಯಕರ ನಡುವೆ ನಡೆಯು ತ್ತಿರುವ ಬೀದಿ ಜಗಳ ನಮ್ಮ ಸಂಸ್ಕೃತಿಗೆ ಶೋಭೆ ತರುವಂತದ್ದಲ್ಲ. ಇದು ಪಠ್ಯ ಪುಸ್ತಕಗಳನ್ನು ಅಧ್ಯಯನ ಮಾಡಬೇಕಾದ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ವಿವಾದಿತ ವಿಷಯಗಳನ್ನು ಅಳವಡಿಸಿದರೂ ಅದನ್ನು ವಿದ್ಯಾರ್ಥಿಗಳು ಅನುಮಾನದಿಂದಲೇ ಸ್ವೀಕರಿಸುತ್ತಾರೆ. ಎಲ್ಲರೂ
ಒಂದೆಡೆ ಕುಳಿತು ಚರ್ಚೆಮಾಡಿ ಸತ್ಯಶೋಧನೆಗೆ ಏಕೆ ಮುಂದೆ ಬರುತ್ತಿಲ್ಲ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಏಕೆ ಕಾರ್ಯೋನ್ಮುಖ ವಾಗುತ್ತಿಲ್ಲ? ಹಾಲಿ ನಡೆಯುತ್ತಿರುವ ಪಠ್ಯ ಪುಸ್ತಕದ ಚರ್ಚೆಯ ಆಂತರ್ಯದಲ್ಲೂ ಕಾಣುತ್ತಿರುವುದು ಜಾತಿ ಮತ್ತು ಧರ್ಮದ ಪ್ರಭಾವ. ಬ್ರಾಹ್ಮಣರು ಮತ್ತು ಅಬ್ರಾಹ್ಮಣರ ನಡುವಿನ ವೈಚಾರಿಕ ಸಂಘರ್ಷ. ಬ್ರಾಹ್ಮಣ ವೈದಿಕ ಧರ್ಮದ ನೇತೃತ್ವದ ಪಠ್ಯ ಪುಸ್ತಕ ಸಮಿತಿ, ಅಬ್ರಾಹ್ಮಣ ದಾರ್ಶನಿಕರ ವಿಚಾರಗಳನ್ನು ತಿರುಚಿವೆ, ವೈದಿಕ ಧರ್ಮ ಮತ್ತು ಬ್ರಾಹ್ಮಣರನ್ನು  ವೈಭವೀಕರಿಸಿವೆ ಎಂಬ ಆರೋಪಗಳು. ಬರಗೂರು ಸಮಿತಿಯ ಪಠ್ಯಪುಸ್ತಕದಲ್ಲಿ ಮೊಗಲರು, ಬ್ರಿಟೀಷರು, ಕ್ರೈಸ್ತ ಧರ್ಮ, ಇಸ್ಲಾಂ, ಜೈನ, ಬೌದ್ಧ ಮತಗಳ ಬಗ್ಗೆ ಮಾಹಿತಿ ಇದ್ದು, ಭಾರತದ ಸನಾತನ ಧರ್ಮದ ಬಗ್ಗೆ ಒಂದಕ್ಷರವೂ ಇರಲಿಲ್ಲವಾದುದು, ಪ್ರಸ್ತುತ ಪಠ್ಯ ಪುಸ್ತಕ ಸಮಿತಿ ಸನಾತನ ಧರ್ಮ ಬಗ್ಗೆ ಸೇರಿಸಲಾಗಿದೆ ಎಂಬುದು ಶಿಕ್ಷಣ ಸಚಿವರ ಉತ್ತರವಾಗಿದ್ದು, ಇದು ಸಮಂಜಸವಾಗಿಯೇ ಇದೆ.

ಸನಾತನ ಧರ್ಮ ಇಡೀ ಪ್ರಪಂಚದಲ್ಲಿಯೇ ಮೊಟ್ಟ ಮೊದಲು ಪ್ರಾರಂಭವಾದ ಧರ್ಮವಾಗಿದ್ದು, ಆಧ್ಯಾತ್ಮಿಕ  ಜ್ಞಾನವನ್ನುಳ್ಳ
ಧರ್ಮವಾಗಿದೆ. ಅದರ ನಂತರ ಬಂದ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಧರ್ಮಗಳನ್ನು ಸೇರಿಸಿ, ಮೊದಲ ಸನಾತನ ಧರ್ಮವನ್ನು ಕೈಬಿಟ್ಟಿದ್ದು ವಾಸ್ತವಿಕಕ್ಕೆ ಮಾಡಿದ ಅಪಚಾರವಲ್ಲವೇ? ಅದನ್ನು ಸರಿಪಡಿಸಿದ್ದು ಸರಿಯಲ್ಲವೇ? ಮಾನವ ನಿರ್ಮಿತ ಎಲ್ಲಾ ಧರ್ಮಗಳು ಅವೈಜ್ಞಾನಿಕ ಅಸತ್ಯಗಳನ್ನುಳ್ಳ ಧರ್ಮಾಚರಣೆಗಳನ್ನೊಳಗೊಂಡಿವೆ.

ಬೌದ್ಧ, ಜೈನ ಧರ್ಮಗಳು ಸನಾತನ ಧರ್ಮಕ್ಕೆ ಅಂಟಿಸಿದ್ದ ಅವೈಜ್ಞಾನಿಕ ಧರ್ಮಾಚರಣೆಗಳು, ಅಮಾನವೀಯ ವಿಚಾರಗಳಿಗೆ ವಿರುದ್ಧವಾಗಿ ಸಿಡಿದೆದ್ದು ಬಂದ ಧರ್ಮಗಳಾಗಿದ್ದರೂ ಸನಾತನ ಧರ್ಮದ ಮೂಲ ಆಧ್ಯಾತ್ಮ ಎಂಬುದನ್ನು ಅಲ್ಲಗಳೆಯ  ಲಾಗದು. ಇನ್ನಿತರ ಎಲಾ ಧರ್ಮಗಳ ಬೇರುಗಳನ್ನು ಸನಾತನ ಧರ್ಮಕ್ಕೆ ಜೋಡಿಸಬಹುದಾಗಿದೆ. ಸನಾತನ ಧರ್ಮಕ್ಕೆ ಸಂಸ್ಥಾಪಕ ನಿಲ್ಲ. ನಂತರ ಮನುಷ್ಯರಿಂದ ಅಂಟಿಸಿದ ಮೇಲು-ಕೀಳು, ಜಾತಿ, ಧರ್ಮಾಚರಣೆಗಳನ್ನು ಹೊರತುಪಡಿಸಿದರೆ ಅತಿಶಕ್ತಿಯೊಡನೆ ನೇರ ಅನುಸಂಧಾನ ಮಾಡುವ, ನಿರಂತರವಾಗಿ ಸಂತೋಷವಾಗಿ ಬದುಕುವ ಜೀವನಶೈಲಿಯನ್ನುಳ್ಳ ಆಧ್ಯಾತ್ಮಿಕ ವಿಜ್ಞಾನವನ್ನು ಸನಾತನ ಧರ್ಮ ಒಳಗೊಂಡಿದೆ.

ಇನ್ನಿತರ ಧರ್ಮಗಳನ್ನು ಬೋಧಿಸಲು ತೀರ್ಮಾನಿಸಿದಾಗ ಅತ್ಯಂತ ಪ್ರಾಚೀನವಾದ ಸನಾತನ ಧರ್ಮವನ್ನು ಬೋಧಿಸುವು ದರಲ್ಲಿ ತಪ್ಪೇನಿದೆ? ವೇದಗಳ ಕಾಲದಲ್ಲಿ ಹೋಮ ಹವನಗಳಿಂದ ಹಾಲುತುಪ್ಪ ಆಹಾರಗಳಿಗೆ ಅಭಾವವುಂಟಾಗಿ ಬಡತನಕ್ಕೆ ಕಾರಣವಾಗಿತ್ತು. ಬ್ರಾಹ್ಮಣರು ಇದಕ್ಕೆ ಕಾರಣರು ಎಂದು ಬರಗೂರು ರಾಮಚಂದ್ರಪ್ಪನವರ ಸಮಿತಿ ಸೇರಿಸಿದ್ದನ್ನು ಹೊಸ ಸಮಿತಿ ತೆಗೆದುಹಾಕಿರುವುದು ಅರ್ಥಪೂರ್ಣವಾಗಿದೆ. ಇಡೀ ಪ್ರಪಂಚದಲ್ಲಿಯೇ ವೇದಗಳು ಆಧ್ಯಾತ್ಮಿಕ ಜ್ಞಾನದ ಪ್ರಥಮ ಜ್ಞಾನಭಂಡಾರ ವೆಂಬುದು ನಿರ್ವಿವಾದದ ಸಂಗತಿಯಾಗಿರುವಾಗ, ಕುಚೋದ್ಯದ ವ್ಯಂಗ್ಯ ವಾಕ್ಯಗಳಿಂದ ವೇದಗಳ ಮೂಲಜ್ಞಾನಕ್ಕೆ ಬರಗೂರು ಸಮಿತಿ ಅಪಚಾರವೆಸಗಿದ್ದನ್ನು ಮತ್ತು ಬ್ರಾಹ್ಮಣರಿಗೆ ಅಪಮಾನವಾಗುವುದನ್ನು ತೆಗೆದುಹಾಕಿ ಸರಿಪಡಿಸಿದ್ದು ತಪ್ಪೇ? ಹಿಂದಿನ
ಬ್ರಾಹ್ಮಣರು ನಿರೀಕ್ಷಿತ ಮಟ್ಟದಲ್ಲಿ ಇನ್ನಿತರರಿಗೆ ಜ್ಞಾನವನ್ನು ಹಂಚಲಿಲ್ಲವಾದರೂ ಜ್ಞಾನಭಂಡಾರಗಳನ್ನು ಶತಮಾನಗಳಿಂದ ಕಾಪಾಡಿಕೊಂಡು ಬಂದಿರುವುದನ್ನು ತಳ್ಳಿಹಾಕುವಂತಿಲ್ಲ.

ಇಂದ್ರದೇವನು ಸೋಮರಸವನ್ನು ಕುಡಿಯುತ್ತಾನೆ, ಕೋಣಗಳನ್ನು ತಿನ್ನುತ್ತಾನೆ ಎಂಬಂಶವನ್ನು ಅಳವಡಿಸಿ ಹಿಂದು ಧಾರ್ಮಿಕ ಭಾವನೆಗಳಿಗೆ ಅಪಚಾರ ಮಾಡಿ ಇನ್ನಿತರ ಧರ್ಮಗಳಲ್ಲಿರುವ ಅವೈಜ್ಞಾನಿಕ ಅಂಶಗಳನ್ನು ಮುಚ್ಚಿಟ್ಟು, ಅವುಗಳನ್ನು ವೈಭವೀ ಕರಿಸುವ ಬರಗೂರು ಸಮಿತಿಯ ವಿಚಾರಗಳನ್ನು ಕೈಬಿಟ್ಟಿದ್ದು ಸರ್ವಸೂಕ್ತವಲ್ಲವೇ? ಟಿಪ್ಪು ಮತ್ತು ಹೈದರಾಲಿಯವರು ಗಳನ್ನು ವೈಭವೀಕರಿಸಿ, ಅವರುಗಳನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಿ. ಕಿತ್ತೂರು ರಾಣಿ ಚೆನ್ನಮ್ಮ, ಮದಕರಿ
ನಾಯಕ ಮುಂತಾದವರ ಪ್ರಸ್ತಾಪವೇ ಇಲ್ಲದೆ ಇರುವುದನ್ನು ಸರಿಪಡಿಸಿ ಪರಿಪೂರ್ಣಗೊಳಿಸಿದ್ದು ತಪ್ಪೇ? ೮ನೇ ತರಗತಿಯಲ್ಲಿ ಭಾರತೀಯ ಮೂಲ ಸಂಸ್ಕೃತಿಯ ಸಿಂಧೂ ನಾಗರಿಕತೆಯನ್ನು ಸೇರಿಸಿದ್ದು ತಪ್ಪೇ? ಬ್ರಿಟೀಷರ ವಿರುದ್ಧ ಹೋರಾಡಿದ ಭಾರತೀಯ ಅರಸರು, ಭಾರತ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾತ್ರವಲ್ಲ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತು ಈ ಹಿಂದಿನ ಸಮಿತಿ ರದ್ದುಗೊಳಿಸಿದ್ದ ಪಠ್ಯವನ್ನು ಹೊಸ ಸಮಿತಿ ಮತ್ತೆ ಸೇರಿಸಿದ್ದು ಸರಿಯಲ್ಲದೆ ಮತ್ತೇನು? ಇವು ಸರ್ಕಾರ ಕೊಡುತ್ತಿರುವ
ಸಮಜಾಯಿಷಿಗಳು.

ಮೇಲು ನೋಟಕ್ಕೆ ಈ ಸಮಜಾಯಿಷಿಗಳು ಸರಿಯೆನಿಸುವುದಿಲ್ಲವೇ? ಪಠ್ಯ ಸಮಿತಿಯ ಅಧ್ಯಕ್ಷರು ಚರ್ಚೆಗೆ ಬನ್ನಿ ಎಂದು ಆಹ್ವಾನಿಸುತ್ತಿದ್ದರೂ, ಚರ್ಚೆಗೆ ಬಾರದೆ, ಲೇಖಕರು ತಮ್ಮ ತಮ್ಮ ಲೇಖನಗಳನ್ನು ಪಠ್ಯಪುಸ್ತಕಗಳಿಂದ ವಾಪಸ್ ಪಡೆಯುತ್ತೇವೆ ಎಂದು ಹೇಳಿಕೆ ನೀಡುತ್ತಿರುವುದರ ಹಿಂದಿನ ಮರ್ಮಗಳೇನು? ಸರ್ಕಾರವೂ ಸಹ ಈ ಬಗ್ಗೆ ಆಯ್ದ ಸಾಹಿತಿಗಳ ಸಭೆ ಕರೆದು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳದೆ ಬೀದಿ ಜಗಳಕ್ಕೆ ಸಾಹಿತಿಗಳನ್ನು ಬಿಟ್ಟಿರುವುದು ಖಂಡನೀಯ.

ಸತ್ಯವನ್ನು ವಿದ್ಯಾರ್ಥಿಗಳಿಗೆ ಬೋಧಿಸಬೇಕೇ ವಿನಃ ವ್ಯಕ್ತಿಗಳ ಸಿದ್ಧಾಂತವನ್ನಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಠ್ಯಪುಸ್ತಕಗಳ ಬಗ್ಗೆ ರಾಷ್ಟ್ರೀಯ ನೀತಿಯೊಂದನ್ನು ಕಾನೂನಾತ್ಮಕವಾಗಿ ರೂಪಿಸುವುದು ಅತ್ಯವಶ್ಯಕ. ಭಾಷೆಗೆ ಅತಿ ಹೆಚ್ಚು ಒತ್ತು ಕೊಟ್ಟು, ಓದಲು, ಬರೆಯಲು, ಸಂವಾದ ಮಾಡಲು ಬರುವಂತೆ ಮಾತೃ ಭಾಷೆ, ಆಂಗ್ಲಭಾಷೆ, ಮತ್ತು ಹಿಂದಿಯನ್ನು ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಾಗಿ ಕಲಿಸುವ ಪಠ್ಯಪುಸ್ತಕಗಳು ಅತ್ಯವಶ್ಯಕ.

ಮಾತೃಭಾಷೆಯಲ್ಲಿಯೇ ಶಿಕ್ಷಣ ಅತ್ಯವಶ್ಯಕ. ನೊಬೆಲ್ ಪಾರಿತೋಷಕ ಪಡೆದ ಬಹುಪಾಲು ಮಹನೀಯರು ತಮ್ಮ ತಮ್ಮ ಪ್ರಬಂಧಗಳನ್ನು, ಸಂಶೋಧನಾತ್ಮಕ ವಿಚಾರಗಳನ್ನು ಅವರವರ ಮಾತೃಭಾಷೆಯಲ್ಲಿಯೇ ಮಂಡಿಸಿದ್ದಾರೆ ಎಂಬಂಶ, ಕಲಿಕೆಗೆ
ಮಾತೃಭಾಷೆ ಎಷ್ಟು ಪರಿಣಾಮಕಾರಿ ಎಂಬುದನ್ನು ಬಿಂಬಿಸುತ್ತದೆ. ಸಮಾಜ ಸುಧಾರಕರಿಗೆ ಸಂಬಂಧಿಸಿದ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ವಿವಾದಗ್ರಸ್ತವಲ್ಲದ, ಸರ್ವರಿಗೂ ಒಪ್ಪುವ ವಿಚಾರಗಳನ್ನು ಪ್ರತಿಪಾದಿಸಿದ ವ್ಯಕ್ತಿ ಗಳನ್ನು ಮಾತ್ರ ಪಠ್ಯಪುಸ್ತಕಕ್ಕೆ ಸೇರಿಸಬೇಕು.

ಉದಾ- ಬುದ್ಧ, ಬಸವ, ಕಬೀರ್, ಗಾಂಧೀಜಿ, ಜಯಪ್ರಕಾಶ್ ನಾರಾಯಣ್, ರವೀಂದ್ರನಾಥ ಠಾಕೂರ್, ಡಾ.ಬಿ.ಸಿ.ರಾಯ್, ಸರ್ವ ಪಲ್ಲಿ ರಾಧಾಕೃಷ್ಣ, ಕುವೆಂಪು, ಅಬ್ದುಲ್ ಕಲಾಂ ಇತ್ಯಾದಿ. ವಿಜ್ಞಾನಿಗಳು, ನೊಬೆಲ್ ಪ್ರಶಸ್ತಿ ವಿಜೇತರು, ವಿವಿಧ ಕ್ಷೇತ್ರಗಳಲ್ಲಿನ ಅಪ್ರತಿಮ ಸಾಧಕರ ವ್ಯಕ್ತಿಚಿತ್ರಣಗಳನ್ನು ಮತ್ತು ಬದುಕನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಇವರುಗಳ ವ್ಯಕ್ತಿತ್ವ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವಂತಾಗಿಸಬೇಕು.

ಎಲ್ಲಾ ಜ್ಞಾನವನ್ನು ಶಾಲೆಗಳಲ್ಲಿ ಕಲಿಸಲು ಸಾಧ್ಯವಿಲ್ಲ. ಬದುಕಿನಲ್ಲಿ ಯಶಸ್ಸು ಗಳಿಸಿ ಸಂತೋಷವಾಗಿ ಬದುಕಲು ವೃತ್ತಿ, ಪ್ರೀತಿಯ ಸಂಬಂಧಗಳು ಮತ್ತು ಆರೋಗ್ಯ ಪ್ರಮುಖವಾದವುಗಳಾಗಿದ್ದು, ಈ ಗುರಿಗಳನ್ನು ಉತ್ಕೃಷ್ಟವಾಗಿ ಸಾಧಿಸಲು ಅವಶ್ಯಕ ವಾಗಿರುವ ಜ್ಞಾನವನ್ನು ಮಕ್ಕಳಿಗೆ ನೀಡುವ ವಿಚಾರಗಳನ್ನುಳ್ಳ ಪಠ್ಯಪುಸ್ತಕಗಳಾಗಬೇಕು. ಮನುಷ್ಯನಿಗೆ ಸೃಷ್ಟಿ ಮತ್ತು ಅತೀತಶಕ್ತಿ ಯೊಡನಿರುವ ಸಪಪಳಿಯೋಪಾದಿಯ ಜೋಡಣೆಯನ್ನು ತಿಳಿಸುವ ಸೃಷ್ಟಿಯ ವಿಜ್ಞಾನ(ಆಧ್ಯಾತ್ಮಿಕ ಜ್ಞಾನ) ವನ್ನು ಪಠ್ಯಪುಸ್ತಕ ಗಳಲ್ಲಿ ಸೇರಿಸಬೇಕು.

ಇನ್ನುಳಿದ ವಿಷಯಗಳು ಅವರವರ ಖಾಸಗಿ ಆಯ್ಕೆಗೆ ಬಿಡಬೇಕು. ಪಠ್ಯಪುಸ್ತಕಗಳನ್ನು ರಚಿಸುವಾಗ ಜಾತಿ, ಧರ್ಮ, ರಾಜಕೀಯ
ಆಸಕ್ತಿಸಗಳಿಂದ ಹೊರಬಂದು ಸತ್ಯಸಂಗತಿಗಳನ್ನು ಮಾತ್ರ ವಿದ್ಯಾರ್ಥಿಗಳಿಗೆ ಕಲಿಸುವಂತಾಗಬೇಕು. ಅಂಥ ಪರಿಸರ ನಿರ್ಮಾಣ ಮಾಡುವುದು ಎಲ್ಲರ ಅದರಲ್ಲೂ ಸರ್ಕಾರದ ಪ್ರಮುಖ ಜವಾಬ್ದಾರಿಯಲ್ಲವೇ?