Monday, 30th December 2024

ಅಗ್ನಿಪಥ್ ಎಂಬುದು ಉದ್ಯೋಗ ಖಾತರಿ ಕಾರ್ಯಕ್ರಮವಲ್ಲ!

ಸೇನೆಯ ಮೂರೂ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ನವ ಯುವಕ- ಯುವತಿಯರಿಗೆ ಅವಕಾಶವನ್ನು ನೀಡುವ ಅಗ್ನಿಪಥ್ ಯೋಜನೆಗೆ ದೇಶಾದ್ಯಂತ ವಿನಾಕಾರಣ ವಿರೋಧ ವ್ಯಕ್ತವಾಗುತ್ತಿದೆ.

ಈ ಯೋಜನೆಯ ವಿರುದ್ಧ ಉದ್ಯೋಗಾಕಾಂಕ್ಷಿಗಳ ಹೆಸರಿನಲ್ಲಿ ಕಾಣದ ಕೈಗಳು ಹೋರಾಟ, ಪ್ರತಿಭಟನೆ, ಧಂಗೆ ಮಾಡುತ್ತಿವೆ.  ಕಳೆದ ಎರಡು ವರ್ಷಗಳಿಂದ ಸೇನಾ ನೇಮಕಗಳು ನಡೆದಿಲ್ಲವಾದ್ದರಿಂದ 21ರಿಂದ 23 ವರ್ಷಕ್ಕೆ ವಯೋಮಿತಿಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಆರಂಭದಲ್ಲಿ ಪ್ರತಿಭಟನಾಕಾರರು ಮಂಡಿಸಿದ್ದರು. ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರಕಾರ, ವಯೋಮಿತಿಯನ್ನು 21ರಿಂದ 23ಕ್ಕೆ ಹೆಚ್ಚಿಸಿದೆ. ಆದರೂ ದೇಶದ ಹಲವೆಡೆ ರೈಲಿಗೆ ಬೆಂಕಿ ಹಚ್ಚುವುದು, ಕಲ್ಲು ತೂರಾಟ ನಡೆಸುವುದು ಮುಂದು ವರಿದಿದೆ.

ಅಲ್ಲದೆ, ಯೋಜನೆಯ ಕುರಿತು ದಿನಕ್ಕೊಂದು ಸುಳ್ಳುಗಳನ್ನು ಹರಿಬಿಡುತ್ತಿದ್ದಾರೆ. ಈ ಯೋಜನೆ ಜಾರಿಗೂ ಮುನ್ನ ಸಶಸ್ತ್ರ ಪಡೆಗಳ ಅಧಿಕಾರಿಗಳೊಂದಿಗೆ ಚರ್ಚೆಯನ್ನೇ ನಡೆಸಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ವಾಸ್ತವವಾಗಿ ಕಳೆದ ಎರಡು ವರ್ಷಗಳಿಂದ ಸಶಸ್ತ್ರ ಪಡೆಗಳ ಸೇವಾನಿರತ ಅಧಿಕಾರಿಗಳೊಂದಿಗೆ ನಿಯಮಿತ ಸಮಾಲೋಚನೆ ನಡೆಸಿಯೇ ಯೋಜನೆ ಜಾರಿಗೆ ತರಲಾಗಿದೆ.

ಅಗ್ನಿವೀರರ ಭವಿಷ್ಯ ಅಭದ್ರವಾಗಲಿದೆ ಎಂಬ ಸುದ್ದಿಯೊಂದನ್ನು ಹರಿಬಿಡಲಾಗಿದೆ. ಅಗ್ನಿವೀರರಾದವರು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಮತ್ತು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಆದ್ಯತೆಯ ಮೇರೆಗೆ ನೇಮಕವಾಗಲಿದ್ದಾರೆ. ಈ ಯೋಜನೆಯಲ್ಲಿ ನೇಮಕವಾದವರ ಶೈಕ್ಷಣಿಕ ಭವಿಷ್ಯ ಮೊಟಕುಗೊಳ್ಳುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ ಅಗ್ನಿವೀರರಿಗೆ ನಾಲ್ಕು ವರ್ಷ ಮುಗಿದ ನಂತರ 12ನೇ ತರಗತಿಗೆ ಸಮಾನವಾದ ಪ್ರಮಾಣಪತ್ರ ಮತ್ತು ಹೆಚ್ಚಿನ ಅಧ್ಯಯನಕ್ಕಾಗಿ ಬ್ರಿಡ್ಜಿಂಗ್ ಕೋರ್ಸ್ ನೀಡಲಾಗುತ್ತದೆ.

ಇನ್ನು ಹಣಕಾಸಿನ ಪ್ಯಾಕೇಜ್ ಮತ್ತು ಬ್ಯಾಂಕ್ ಸಾಲ ಯೋಜನೆಗಳನ್ನು ಪಡೆಯಲಿದ್ದಾರೆ. ನಾಲ್ಕು ವರ್ಷಗಳ ನಂತರ ಬದುಕಿಗೆ ಯಾವುದೇ ತೊಂದರೆಯಾಗದಂತೆ ಯೋಜನೆ ನಿರ್ಮಿಸಲಾಗಿದೆ ಯಾದರೂ ವಿನಾಕಾರಣ ವಿರೋಧ ಮಾಡಲಾಗುತ್ತಿದೆ.  ವಾಸ್ತವ ವೇನೆಂದರೆ ತಂತ್ರಜ್ಞಾನ, ಆಯುಧಗಳ ಅರಿವಿರುವ ಯುವ ಸಶಸ ಪಡೆಯ ಅಗತ್ಯ ಭಾರತಕ್ಕೆ ಇದೆ. ದೇಶದ ಸಶಸ ಪಡೆಗಳು ಉದ್ಯೋಗ ಖಾತರಿ ಕಾರ್ಯಕ್ರಮವಲ್ಲ ಎಂಬುದನ್ನು ತಿಳಿದುಕೊಳ್ಳಬೇಕಿದೆ.