Monday, 16th September 2024

ಕಗ್ಗತ್ತಲು ಮತ್ತು ದೃಷ್ಟಿ: ಜೀವ ವಿಸ್ಮಯ ೪

ಶಿಶಿರ ಕಾಲ

shishirh@gmail.com

ಒಂದು ವಾರಾಂತ್ಯ ಗ್ಯಾಲಕ್ಸಿ ಮಿಲ್ಕಿ ವೇ ನ ಚಿತ್ರ ತೆಗೆಯೋದು ಅಂತ ಕೆಲ ಫೋಟೋಗ್ರಫಿ ಹವ್ಯಾಸಿ ಸ್ನೇಹಿತರೆಲ್ಲ ಮಾತಾಡಿ ಕೊಂಡೆವು. ಯಾವುದೋ ಒಂದು ಬಯಲಲ್ಲಿ ಹೋಗಿ ಕ್ಯಾಮೆರಾ ಸೆನ್ಸರ್ ಅನ್ನು ಲಾಂಗ್ ಎಕ್ಸ್‌ಪೋಸ್ ಮಾಡಿದರೆ ಆಗಸದ ಹಾಲಿನ ದಾರಿಯ ಚಿತ್ರ ತೆಗೆಯಬಹುದು ಎಂದೇ ಎಂದುಕೊಂಡಿದ್ದೆವು.

ಆದರೆ ನಮ್ಮ ಗುಂಪಿನಲ್ಲಿ ಆಗಸದ ಫೋಟೋಗ್ರಫಿಯಲ್ಲಿ ನುರಿತವರೊಬ್ಬರಿದ್ದರು. ನಿಮಗೆ ಊರ ಮಧ್ಯೆ ಗ್ಯಾಲಕ್ಸಿ ಫೋಟೋ ತೆಗಯಲು ಸಾಧ್ಯವೇ ಇಲ್ಲ, ಅದಕ್ಕೆ ಕಗ್ಗತ್ತಲ ಜಾಗಕ್ಕೆ ಹೋಗಬೇಕು ಎಂದರು. ಆಗ ಅರ್ಥವಾಗಲಿಲ್ಲ. ಉಮೇದಿ ಮಾಡಿ ಒಂದು ಪ್ರಯೋಗ ಮಾಡಿಬಿಡೋಣ ಎಂದು ಊರ ಸ್ವಲ್ಪ ದೂರದ ಬಯಲಿನಲ್ಲಿ ಕ್ಯಾಮರಾ ವನ್ನು ಟ್ರೈಪಾಡ್ ಗೆ ಸಿಕ್ಕಿಸಿ ಒಂದಿಷ್ಟು ಫೋಟೋ ತೆಗೆದೆ ತಂದೆವು. ಅದನ್ನು ಸೆಸ್ ಮಾಡುವಾಗಲೇ ಗೊತ್ತಾಗಿದ್ದು, ನಮ್ಮ ಸುತ್ತ ಅದೆಷ್ಟು ಕೃತಕ ಬೆಳಕುಗಳು ನಮ್ಮರಿವಿ ಗಿಲ್ಲದಂತೆ ಆವರಿಸಿಕೊಂಡಿವೆ ಎಂದು.

ಅನಂತರ ಅತ್ಯಂತ ಸ್ಪಷ್ಟ ಮಿಲ್ಕಿ ವೇ ಫೋಟೋ ತೆಗಯಲು ಸುಮಾರು ನೂರು ಮೈಲಿ ಉತ್ತರಕ್ಕೆ ವಿಸ್ಕಾನ್ಸಿನ್ ನ ಕಾಡಿಗೆ ಹೋಗ ಬೇಕಾಯಿತು. ತೀರಾ ಕಗ್ಗತ್ತಲು ಏನೆನ್ನುವುದು ಪೇಟೆಯಲ್ಲಿಯೇ ಹುಟ್ಟಿ ಬೆಳೆದವರಿಗಂತೂ ಅಂದಾಜಿಸಿ ಕೊಳ್ಳಲಿಕ್ಕೆ ಕಷ್ಟವಾಗ ಬಹುದು. ಏಕೆಂದರೆ ಅದೆ ಕರೆಂಟು ಹೋದರೂ ಸಂಪೂರ್ಣ ಕಗ್ಗತ್ತಲು ಸಿಟಿಯಲ್ಲಿ, ಬಹಳಷ್ಟು ಕಡೆ ಇಂದು ಅಸಾಧ್ಯ.
ಭೂಮಿಯ ಶೇ.71 ಸಾಗರ. ಇನ್ನುಳಿದದ್ದು ನೆಲ. ಅದರಲ್ಲಿ ಮರಳುಗಾಡು, ಉತ್ತರ ದಕ್ಷಿಣ ದ್ರುವ ಅವನ್ನೆಲ್ಲ ಬಿಟ್ಟು ಉಳಿದದ್ದು ನಮಗೆಲ್ಲರಿಗೆ ವಾಸ ಯೋಗ್ಯ ಜಾಗ. ಈ ಲೆಕ್ಕದ ಪ್ರಕಾರ ಭೂಮಿಯ ವಾಸಯೋಗ್ಯ ಜಾಗವೇ 20-25%.

ಇದು ಸತ್ಯವಾದರೂ ಇಂದು ಬೇರೆಯ ಅಯಾಮವಿದೆ. ಸಮುದ್ರವೆಂದರೆ ಕೇವಲ ಸಮುದ್ರದ ಮೇಲ್ಮೈ ಅಲ್ಲವಲ್ಲ. ಸಮುದ್ರ ದೊಳಕ್ಕೆ ಎವರೆಸ್ಟ ಅನ್ನು ತಲೆಕೆಳಗಾಗಿ ತುಂಬಿಸುವಷ್ಟು ಆಳದ ಕಂದಕಗಳಿವೆ. ಭೂಮಿಯ ಮೇಲ್ಮೈ ಅಲ್ಲಿ ಹಕ್ಕಿ ಆಕಾಶದಲ್ಲಿ ಹಾರಿದರೂ ಬದುಕುವುದು ನೆಲದಲ್ಲಿಯೇ. ಆದರೆ ಸಮುದ್ರವೆಂದರೆ ಅಲ್ಲಿ ಅತ್ಯಂತ ಆಳದ ಪ್ರದೇಶ ಮಾರಿಯಾನಾ ಟ್ರೆಂಚ್ ಹತ್ತಿರ ಹತ್ತಿರ ಹನ್ನೊಂದು ಕಿಲೋಮೀಟರ್ ಕೆಳಕ್ಕೆ. ಎವರೆಸ್ಟ್‌ನ ಎಲಿವೇಷನ್ (ಸಮುದ್ರ ಮಟ್ಟದಿಂದ ತುದಿಗೆ) ಎತ್ತರ ಹೆಚ್ಚುಕಡಿಮೆ ಒಂಬತ್ತು ಕಿಲೋಮೀಟರ್.

ಎಂದರೆ ಮೌಂಟ್ ಎವರೆಸ್ಟ್ ಅನ್ನು ಸಮುದ್ರ ಮಟ್ಟದಿಂದ ಬುಡಮೇಲು ಎತ್ತಿ ಕಮಚಿದರೆ ಇನ್ನೆರಡು ಕಿಲೋಮೀಟರ್ ಆದರೆ ಮೇಲೆ ನೀರಿರುತ್ತದೆ. ಮಾರಿಯಾನಾ ಟ್ರೆಂಚ್ ನ ಆಳದಲ್ಲಿ ವಾತಾವರಣದ ಒತ್ತಡ ಸಾವಿರ ಪಟ್ಟು ಜಾಸ್ತಿ. ಅದಷ್ಟೇ ಅಲ್ಲ, ಜಗತ್ತಿನ ಅತ್ಯಂತ ಕಗ್ಗತ್ತಲೆಯ ಜಾಗ ಯಾವುದು ಎಂದರೆ ಬಹುಷಃ ಅದೇ ಇರಬಹುದು. ಅಲ್ಲಿಯೂ ಜೀವಗಳಿವೆ ಎನ್ನುವುದು ಅನ್ಯಗ್ರಹದ ಜೀವ ಸಾಧ್ಯತೆಯನ್ನು ಗರಿಷ್ಟ ಪ್ರಮಾಣಕ್ಕೆ ಕೊಂಡೊಯ್ದು ನಿಲ್ಲಿಸಿವೆ.

ಇರಲಿ – ಈ ನಿಜವಾದ ಸಮುದ್ರದ ಆವರಿಸುವಿಕೆಯನ್ನು ಪರಿಗಣಿಸಿದಲ್ಲಿ ಭೂಮಿಯ ಶೇ.99 ಕ್ಕಿಂತ ಜಾಸ್ತಿ ಜೀವಿಗಳಿರಬಹು ದಾದ ಸ್ಥಳ ಸಮುದ್ರ. ಈ ಆಯಾಮದಲ್ಲಿ ವಿವರಿಸಿದ್ದು ಯಾರು ಅಂತ ನೆನಪಿಲ್ಲ. ಇಂತಹ ಸಮುದ್ರದಾಳದಲ್ಲಿ ಬೆಳಕು ಕೆಳಗಿ ಳಿಯದ ಜಾಗದ ವಿಸ್ತಾರ ಬಹುದೊಡ್ಡದು. ಬೆಳಕಿಲ್ಲದ ಜಾಗದಲ್ಲಿ ಕಣ್ಣಿಗೇನು ಕೆಲಸ, ಅಲ್ಲವೇ? ಸಹಜ ಮೇಲ್ನೋಟದ ಅಂದಾ ಜಿಗೆ ಈ ಕಗ್ಗತ್ತಲೆಯ ಜಾಗದಲ್ಲಿ ವಿಕಾಸವಾದದ ಪ್ರಕಾರ ಕಣ್ಣಿಲ್ಲದ ಜೀವಿಗಳೇ ಜಾಸ್ತಿ ಇರಬೇಕು ಅಲ್ಲವೇ? ವಿಜ್ಞಾನಿಗಳೂ ಬಹಳಷ್ಟು ಕಾಲ ಹಾಗೆಯೇ ಅಂದುಕೊಂಡಿದ್ದರು.

ಈಗ ಕೆಲವು ದಶಕಗಳಿಂದೀಚೆ ಈ ಬೆಳಕಿಳಿಯದ ಜಾಗದಲ್ಲಿನ ಅನ್ವೇಷಣೆಯ ಕೆಲಸ ಎಲ್ಲಿಲ್ಲದ ಪ್ರಮಾಣದಲ್ಲಿ ನಡೆದಿದೆ. ಈ ಮೂಲಕ ಕೆಲವು ಚಿತ್ರ- ವಿಚಿತ್ರ, ಏಲಿಯನ್ ನ ಕಲ್ಪನೆಯನ್ನು ಹೋಲುವ ಜೀವಿಗಳ ಇರುವು ಈಗ ನಮ್ಮರಿವಿಗೆ ಬರುತ್ತಿದೆ. ಇಂದು ವಿಚಿತ್ರವೆಂದರೆ ಹಿಂದಿನ ವಿಜ್ಞಾನಿಗಳ ಅಂದಾಜಿಗೆ ವ್ಯತಿರಿಕ್ತವಾಗಿ ಇಲ್ಲಿ ಕಣ್ಣಿಲ್ಲದ ಜೀವಿಗಳಿಗಿಂತ ಕಣ್ಣನ್ನು ವಿಚಿತ್ರ ಮಾರ್ಪಾಡು ಮಾಡಿಕೊಂಡ ಜೀವಿಗಳು ಅನ್ವೇಷಣೆಗೆ ಸಿಗುತ್ತಿವೆ.

ಸಮುದ್ರದಾಳದ ಕಗ್ಗತ್ತಲಲ್ಲಿ ಕಣ್ಣು ಬೇಡವೇಬೇಡವೆಂದುಕೊಂಡರೆ ಅದಕ್ಕೆ ವ್ಯತಿರಿಕ್ತವಾಗಿ ಅತ್ಯಂತ ತೀಕ್ಷ್ಣ, ನಾವು ಮನುಷ್ಯರು ಗ್ರಹಿಸಲಾರದಷ್ಟು ಕಡಿಮೆ ಪ್ರಮಾಣದ ಬೆಳಕನ್ನು ಗ್ರಹಿಸಬಲ್ಲಷ್ಟು ವಿಕಸನವನ್ನು, ಮಾರ್ಪಾಡನ್ನು ಈ ಜೀವಿಗಳು ತಮ್ಮದಾಗಿಸಿ ಕೊಂಡಿವೆ. ಅದಲ್ಲದೆ ನಾವು ಕತ್ತಲೆಯಲ್ಲಿ ಬ್ಯಾಟರಿ ಹಿಡಿದುಕೊಂಡು ಹೋಗುವಂತೆ ಕೆಲ ಜೀವಿಗಳು ತಮ್ಮ ದೇಹದಲ್ಲಿಯೇ ಬೆಳಕನ್ನು ಉತ್ಪಾದಿಸಿಕೊಂಡು ಹೋಗಬಲ್ಲ ಸಾಧ್ಯತೆಯೇ ವಿಸ್ಮಯ.

ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಕೇವಲ ಅವುಗಳ ಕಣ್ಣಿಗಷ್ಟೇ ಕಾಣಿಸಬಲ್ಲ ಫ್ರಿಕ್ವೆನ್ಸಿಯ, ಅನ್ಯ ಜೀವಿಗಳಿಗೆ ಕಾಣಿಸದ
ಬೆಳಕನ್ನು ಹೊರಸೂಸಬಲ್ಲ ತಾಕತ್ತುಳ್ಳ ಜೀವಿಗಳೆಲ್ಲ ಅಲ್ಲಿವೆ. Barreleye Fish ಪೀಪಾಯಿ ಕಣ್ಣಿನ ಮೀನು – ಒಂದು ಜಾತಿಯ ಕಗ್ಗತ್ತಲೆಯಲ್ಲಿಯೇ ಬದುಕುವ ಮೀನು. ಒಮ್ಮೆ ಮೀನಿನ ಮುಖವನ್ನು ನೆನಪಿಸಿಕೊಳ್ಳಿ. ಅದರ ಮೂತಿಯ ಅಕ್ಕ ಪಕ್ಕ ಕಣ್ಣಿರುತ್ತದೆಯಲ್ಲ. ಆದರೆ ಈ ಮೀನಿನ ದೇಹರಚನೆ ವಿಚಿತ್ರ. ಸಾಮಾನ್ಯವಾಗಿ ಮೀನಿಗೆ ಕಣ್ಣಿರುವ ಜಾಗದಲ್ಲಿ ಈ ಮೀನಿಗೆ ಎರಡು ಕಪ್ಪು ಚುಕ್ಕೆಗಳಿದ್ದಂತೆ ರಚನೆಯಿದೆ ಆದರೆ ಅವು ಕಣ್ಣಲ್ಲ.

ಬದಲಿಗೆ, ಅದರ ತಲೆಯ ಮೇಲ್ಭಾಗ ಟ್ರಾನ್ಸ್ಪೆರೆಂಟ್. ಆ ಭಾಗದಲ್ಲಿ ಮೇಲ್ಮುಖವಾಗಿ, ಪಾರದರ್ಶಕ ತಲೆಯೊಳಕ್ಕೆ ಅದರ  ಅಸಲಿ ಕಣ್ಣಿರುತ್ತದೆ. ಆಳದಲ್ಲಿ ಬದುಕುವ ಇದರ ಬೇಟೆ ಸದಾ ಅದರ ಮೇಲ್ಬಾಗದಲ್ಲಿರುವುದರಿಂದ ಈ ಮಾರ್ಪಾಡು. ಇದಕ್ಕಿಂತ ಆಶ್ಚರ್ಯದ ಇನ್ನೊಂದು ಜೀವಿಯೆಂದರೆ ಕೊಲೊಸಲ್ ಸ್ಕ್ವಿಡ. ಐದಾರು ನೂರು ಕೆಜಿ ತೂಕದಷ್ಟಿರುವ ಈ ಜಲಚರದ ಕಣ್ಣು ಹೆಚ್ಚು ಕಡಿಮೆ ವಾಲಿಬಾಲಿನಷ್ಟು ದೊಡ್ಡದು. ಇದು ಅತ್ಯಂತ ಕಡಿಮೆ ಬೆಳಕನ್ನು ಗ್ರಹಿಸಬಲ್ಲವು.

ಸಮುದ್ರದಾಳದಲ್ಲಿ ಬೆಳಕನ್ನು ಸೂಸುವ ಸೂಕ್ಷ್ಮಜೀವಿಗಳಿರುತ್ತವೆಯಲ್ಲ, ಅದರ ಮಧ್ಯೆ ಬೆಳಕಿಲ್ಲದ ಅನ್ಯ ಜೀವಿಯನ್ನು ಅಲ್ಲಿ ನಿರ್ಮಾಣವಾಗುವ ಕತ್ತಲೆ ಯಿಂದಾಗಿಯೇ, ಅಥವಾ ಬೆಳಕಿಲ್ಲದ್ದನ್ನು ಗ್ರಹಿಸಿ ಆ ಜೀವಿಯನ್ನು ನೋಡಬಲ್ಲವು. ಹೀಗೆ ಹೇಳುತ್ತ ಹೋದಲ್ಲಿ ಅದೆಷ್ಟೋ ಚಿತ್ರ ವಿಚಿತ್ರ ದೃಷ್ಟಿಯ ಜೀವಿಗಳೆಲ್ಲ ಇರುವುದು ಈ ಸಮುದ್ರದಾಳದಲ್ಲಿಯೇ, ಅಥವಾ ಕಗ್ಗತ್ತಲ ಗುಹೆ ಗಳಲ್ಲಿ.

ಮೊದಲೆಲ್ಲ ನಮ್ಮ ಹಳ್ಳಿಯಲ್ಲಿ ಕಗ್ಗತ್ತಲ ರಾತ್ರಿಯಲ್ಲಿ ಬೆಳಕಿಲ್ಲದೆ ನಡೆಯುವುದು ಸಾಮಾನ್ಯವಾಗಿತ್ತು. ಟಾರ್ಚ್ ಕೈಲಿದ್ದರೂ ಅದಕ್ಕೆ ಸೆಲ್ ಸರಿಯಿರುತ್ತಿರಲಿಲ್ಲ. ನಾಲ್ಕಾರು ಬಾರಿ ಟಾರ್ಚ್ ನ ಬುರುಡೆಗೆ ಹೊಡೆದಾಗ ಅಲ್ಪಸ್ವಲ್ಪ ಲೈಟ್ ಆಗುತ್ತಿತ್ತು. ಆಮೇಲೆ ಸಾಕೆನ್ನಿಸಿ ಕತ್ತೆಲೆಯ ನಡೆಯುತ್ತಿದ್ದೆವು. ಬೆಳಕಿಂದ ಒಮ್ಮೆಲೇ ಕತ್ತಲಿಗೆ ಹೋದಾಗ ತಡವಾಗಿ ಸಿನೆಮಾ ಥಿಯೇಟರಿಗೆ ಪಿರ್ಚ್ಚ ಶುರುವಾದ ನಂತರ ಒಳಹೊಕ್ಕಂತಹ ಅನುಭವವಾದರೂ ನಂತರದಲ್ಲಿ ಸುತ್ತಲ ಸ್ಪಷ್ಟತೆ ಹೆಚ್ಚುತ್ತಿತ್ತು. ಚಂದ್ರನ ಬೆಳಕಿzಗ ಅದನ್ನು ಬಳಸಿಯೇ ರಾತ್ರಿ ಸಂಚರಿಸುವುದು ನಮ್ಮ ಕಡೆ, ಹಳ್ಳಿಗಳಲ್ಲಿ ಸಾಮಾನ್ಯ.

ಬೆಳದಿಂಗಳಿದ್ದರೆ ಬೆಳಕಾಗದ ಟಾರ್ಚ್ ಕೂಡ ಬೇಡ. ಈ ಅಭ್ಯಾಸ ಮುಂದುವರಿದು ಚಂದ್ರನಿಲ್ಲದಾಗ, ತಾರೆಗಳ ಬೆಳಕ
ನಡೆಯುವುದೂ ಅಭ್ಯಾಸವಾಗಿತ್ತು. ನಮ್ಮ ಕಡೆ ಚಾರ್ಕ್ಲ (ತಾರೆಗಳ) ಬೆಳಕ ಓಡಾಡುವುದು ಸಾಮಾನ್ಯ. ಸ್ವಲ್ಪ ಹೊತ್ತಿನ
ನಂತರ ಕತ್ತಲಲ್ಲಿ ನಮ್ಮ ಕಣ್ಣುಗಳು ಸ್ಪಷ್ಟವಾಗಿ ಇನ್ನಷ್ಟು ಕಾಣಿಸಲು ಒಗ್ಗಿಕೊಳ್ಳುತ್ತವೆಯಾದರೂ ಸುಮಾರು ಐದ್ ಹತ್ತು
ನಿಮಿಷದ ನಂತರ ಸ್ಪಷ್ಟತೆ ಇನ್ನಷ್ಟು ಹೆಚ್ಚಿರುತ್ತದೆ. ಇದು ಎಲ್ಲರ ಅನುಭವಕ್ಕೆ ಬರುವಂತದ್ದೇ. ಬೆಳಕು ಕಡಿಮೆಯಾದಾಗ ಕಣ್ಣಿನ ಪುಪಿಲ್ ಹೆಚ್ಚಿಗೆ ತೆರೆದುಕೊಂಡು ಒಳಕ್ಕೆ ಹೆಚ್ಚಿನ ಬೆಳಕಿಗೆ ದಾರಿ ಮಾಡಿಕೊಳ್ಳುತ್ತವೆ ಎನ್ನುವುದು ಗೊತ್ತಿದ್ದದ್ದೇ.

ಆದರೆ ಇದೆಲ್ಲದಕ್ಕೆ ಕೆಲ ಕ್ಷಣ ಮಾತ್ರ ಸಾಕು – ಆದರೆ ನಾವು ಒಳ ಹೊಕ್ಕು ಸುಮಾರು ಹೊತ್ತಾದರೂ ಬಳಚುತ್ತ, ಅವರಿವರ ಕಾಲು ಮೆಟ್ಟುತ್ತಲೇ ಹೋಗುವುದು ಏಕೆ? ಅದಕ್ಕಿಂತ ಸುಮಾರು ಹತ್ತು ಹದಿನೈದು ನಿಮಿಷದ ನಂತರ ನಮ್ಮ ದೃಷ್ಟಿ ಸ್ಪಷ್ಟತೆ ಹೆಚ್ಚು ವುದು ಹೇಗೆ? ಈ ಪ್ಯಾರಾವನ್ನು ಸ್ವಲ್ಪ ನಿಧಾನಕ್ಕೆ ಒಳಗಿಳಿಸಿಕೊಳ್ಳಿ. ಸಿನೆಮಾ ಥಿಯೇಟರ್‌ ಒಂದು ಉದಾಹರಣೆಗೆ ತೆಗೆದು ಕೊಂಡದ್ದು. ಇದೇನು ಹೇಳುವಷ್ಟು ಕಗ್ಗತ್ತಲೆಯ ಜಾಗವೇನಲ್ಲ. ನಮ್ಮ ಕಣ್ಣಿನ ಕತ್ತಲೆಯ ದೃಷ್ಟಿಯ ಸೂಕ್ಷ್ಮತೆಯನ್ನು, ಸಾಧ್ಯತೆ ಯನ್ನು ತಿಳಿಯಲು ಸುಮಾರು ನಲವತ್ತು ನಿಮಿಷ ಬೇಕು.

ಇಷ್ಟುಕಾಲ ಬೇಕು ಎಂದಾದರೆ ಏನೋ ಒಂದು ಕಾಮಗಾರಿ ಕಣ್ಣಿನಲ್ಲಿ, ನಮ್ಮೊಳಗೇ ಅಷ್ಟು ಹೊತ್ತಿನಲ್ಲಿ ನಡೆಯುತ್ತದೆ ಎಂದೇ
ಆಯಿತಲ್ಲವೇ. ಅಂದಹಾಗೆ ಇದೆಲ್ಲ ಅನುಭವಕ್ಕೆ ಬರಬೇಕಾದರೆ ಕಾಡಿನಲ್ಲಿ, ಅತ್ಯಂತ ಮಂದ ಅಥವಾ ಅತ್ಯಲ್ಪ – ತಾರೆಯ
ಬೆಳಕಷ್ಟೇ ಇರುವ ಜಾಗದಲ್ಲಿ ಅಷ್ಟು ಹೊತ್ತು ಕಳೆಯಬೇಕಾಗುತ್ತದೆ. 30-40 ನಿಮಿಷ ಕಗ್ಗತ್ತಲಲ್ಲಿದ್ದರೆ ನಿದ್ರೆ ಬರುವ ಸಾಧ್ಯತೆಯೇ ಜಾಸ್ತಿ ಬಿಡಿ. ಇರಲಿ, ಸಿನೆಮಾ ಥಿಯೇಟರಿಗೆ ಹೊಕ್ಕಾಗ ಆಗುವ ತಕ್ಷಣದ, ವೇಗದ ಬದಲಾವಣೆ ಯಾಂತ್ರಿಕ ವಾದದ್ದು.

ಆದರೆ ಸುಮಾರು 30-40 ನಿಮಿಷ ಅತ್ಯಲ್ಪ ಬೆಳಕಿನ ಕತ್ತಲೆಯಲ್ಲಿದ್ದರೆ ಕಣ್ಣಿನಲ್ಲಿ ಕೆಲವು ರಾಸಾಯನಿಕ ಬದಲಾವಣೆಗಳಾ ಗುತ್ತವೆ. ಇದನ್ನು ವಿವರಿಸುವುದಕ್ಕಿಂತ ಮೊದಲು ಕಣ್ಣಿನ ಲೈಟ್ ಅನ್ನು ಗ್ರಹಿಸುವ ಬೆಳಕು ಗ್ರಾಹಿಗಳ ಬಗ್ಗೆ ಚಿಕ್ಕದಾಗಿ ಹೇಳಿ
ಬಿಡುತ್ತೇನೆ. ಕಣ್ಣಿನ ಬೆಳಕುಗ್ರಾಹಿ ಜೀವಕೋಶಗಳಲ್ಲಿ ಎರಡು ವಿಧ. ರಾಡ್ ಗಳು ಮತ್ತು ಕೋನ್ ಗಳು. ಕೋನ್ ಗಳು ಹಸಿರು, ಕೆಂಪು ಮತ್ತು ನೀಲಿಯನ್ನು ಗ್ರಹಿಸಬಲ್ಲವು. ಇದು ಕಣ್ಣಿನ ಪಟಲದ ಕೇಂದ್ರದಲ್ಲಿ ಹೆಚ್ಚು ಸಾಂದ್ರಿತವಾಗಿರುತ್ತವೆ.

ಇನ್ನೊಂದು ರಾಡ್ ಆಕಾರದ ಬೆಳಕು ಗ್ರಾಹಿಗಳು. ಇವು ಕೇವಲ ಬೆಳಕು ಮತ್ತು ಕತ್ತಲನ್ನು ಮಾತ್ರ ಗ್ರಹಿಸಬಲ್ಲವು. ಕೋನ್ ನ
ಸಾಂದ್ರತೆ 1 ಮಿಲಿಮೀರ್ಟ ಕೇಂದ್ರದಲ್ಲಿ ಹೆಚ್ಚು. ಅಲ್ಲಿಂದಾಚೆ ರಾಡಿನ ಆಕೃತಿಯ ಜೀವ ಕೋಶಗಳ ಸಾಂದ್ರತೆ ಹೆಚ್ಚಿರುತ್ತದೆ.
ಈ ಕೋನ್ ಆಕೃತಿಯ ಬೆಳಕುಗ್ರಾಹಿ ಜೀವಕೋಶಗಳ ಸಂಖ್ಯೆ ಐವತ್ತು ಲಕ್ಷದಷ್ಟಿದ್ದರೆ ರಾಡ್ ಆಕೃತಿಯ ಬ್ಲಾಕ್ ಅಂಡ್ ವೈಟ್
ಅನ್ನು ಗ್ರಹಿಸುವ ಜೀವಕೋಶಗಳ ಸಂಖ್ಯೆ ಹತ್ತು ಕೋಟಿಯಷ್ಟು.

ಕ್ರಮೇಣ ನಾವು ಕತ್ತಲಲ್ಲಿ ಸುಮಾರು ಮೂವತ್ತು ನಿಮಿಷ ಕಳೆದಂತೆ ಈ ನಮ್ಮ ದೃಷ್ಟಿಯ ಈ ರಾಡ್ ಆಕೃತಿಯ ಬೆಳಕುಗ್ರಾಹಿ ಗಳು ಅಗುವ ರಾಸಾಯನಿಕ ಮಾದಲಾವಣೆಯಿಂದಾಗಿ ಇನ್ನಷ್ಟು ಸೂಕ್ಷ್ಮ ಬೆಳಕುಗ್ರಾಹಿಗಳಾಗಿಬಿಡುತ್ತವೆ. ಇದರಿಂದ ಅಕ್ಷಿಪಟಲದ ಕೇಂದ್ರದ ವರ್ಣವನ್ನು ಗ್ರಹಿಸುವ ಕೋನ್ ಗಳಿಗಿಂತ ಸುಮಾರು ಹತ್ತು ಸಾವಿರ ಪಟ್ಟು ಬೆಳಕನ್ನು ಗ್ರಹಿಸಬಲ್ಲಷ್ಟು ಸಾಮರ್ಥ್ಯ ವನ್ನು ಈ ರಾಡ್ ಬೆಳಕು ಗ್ರಾಹಿಗಳು ಪಡೆಯುತ್ತವೆ. ಆಗ ನಮ್ಮ ಕಣ್ಣು ಅತ್ಯಂತ ಸೂಕ್ಷ್ಮ ಬೆಳಕನ್ನು ಗ್ರಹಿಸುವಷ್ಟು ಸೂಕ್ಷ್ಮವಾ ಗುತ್ತವೆ. ಈ ರಾಡ್ ಬೆಳಕು ಗ್ರಾಹಿ ಜೀವಕೋಶಗಳು ಮೊದಲೇ ಹೇಳಿದಂತೆ ವರ್ಣವನ್ನು ಗ್ರಹಿಸಲಾರವು.

ಈ ಕಾರಣಕ್ಕಾಗಿಯೇ ಮಂದ ಬೆಳಕಿನಲ್ಲಿ, ಚಂದಿರನ, ತಾರೆಯ ಬೆಳಕಲ್ಲಿ ನಮಗೆ ಕಾಣುವುದೆಲ್ಲ ಬ್ಲಾಕ್ ಅಂಡ್ ವೈಟ್! ಈ ಸ್ಥಿತಿಯನ್ನು Scotopic Vision ಎನ್ನಲಾಗುತ್ತದೆ. ಈ ಕೋನ್ ಬೆಳಕು ಗ್ರಾಹಿಗಳಿವೆಯಲ್ಲ, ಅವು ಕೇವಲ ಕೆಂಪು, ಹಸಿರು ಮತ್ತು ನೀಲಿಯನ್ನು ಮಾತ್ರ ಗ್ರಹಿಸಬಲ್ಲವು ಎಂದೆನಲ್ಲ. ಆದರೆ ಇಲ್ಲಿ ಒಂದೇ ಕೋನ್ ಈ ಮೂರೂ ಬಣ್ಣವನ್ನು ಗ್ರಹಿಸಬಲ್ಲವು ಎಂದು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಈ ಬಣ್ಣಗಳನ್ನು ಗ್ರಹಿಸುವ ಕೋನ್ ಗಳೇ ಬೇರೆ ಬೇರೆ. ಒಂದಿಷ್ಟು ಕೆಂಪನ್ನು, ಇನ್ನೊಂದಿಷ್ಟು ಹಸಿರನ್ನು ಮತ್ತು ಮತ್ತೊಂದಿಷ್ಟು ನೀಲಿಯನ್ನು ಗ್ರಹಿಸಬಲ್ಲವು, ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ಗೊತ್ತು.

ಅದೇ ರೀತಿ ಉದಾಹರಣೆಗೆ ಕೆಂಪು ಮತ್ತು ಹಸಿರು ಬಣ್ಣವನ್ನು ಸೇರಿಸಿ ನೋಡಿದರೆ ಹಳದಿ ಬಣ್ಣವಾಗಿ ಕಾಣಿಸುತ್ತದೆ ಏಕೆಂದರೆ
ಈ ಹಸಿರು ಮತ್ತು ಕೆಂಪು ಗ್ರಹಿಸುವ ಕೋನ್ ಗಳು ಏಕಕಾಲದಲ್ಲಿ ಜಾಗೃತವಾಗಿ ಅದನ್ನು ಮೆದುಳಿಗೆ ಕಳುಹಿಸಿ ಅದು ನಮ್ಮ ಮೆದುಳಿನಲ್ಲಿ ಹಳದಿಯಾಗಿ ಗ್ರಹಿಕೆಯಾಗುತ್ತದೆ. ಅದೇ ನಾವು ಹಳದಿ ಬಣ್ಣವನ್ನೇ ನೋಡಿದಾಗ ಈ ಎರಡು ರೀತಿಯ ಕೋನ್ ಗಳು ಅದಕ್ಕನುಗುಣವಾಗಿ ಜಾಗೃತವಾಗುತ್ತವೆ ಮತ್ತು ಹಳದಿ ಗೋಚರಿಸುತ್ತದೆ. ಇರಲಿ – ವಿವರಣೆ ಸ್ವಲ್ಪ ಕ್ಲಿಷ್ಟವಾಯಿತು ಅನ್ನಿಸುತ್ತದೆ. ಇದೆಲ್ಲವೂ ವೈಜ್ಞಾನಿಕವಾಗಿ ಇನ್ನಷ್ಟು ಸಂಕೀರ್ಣವಾಗಿದೆ.

ಕೇವಲ ಇಲ್ಲಿನ ಲೇಖನಕ್ಕೆ ಬೇಕಾಗಿ, ಒಂದಿಷ್ಟು ಅಂದಾಜಿಸಿಕೊಳ್ಳಲು ಕೆಲವನ್ನು ತೀರಾ ಸರಳೀಕರಿಸಿ ಹೇಳಿದ್ದೇನೆ. ಅಂದಹಾಗೆ ನಾವು ನೀವು ನೋಡುವ ಟಿವಿ ಇದೇ RGB (Red, Green, Blue) ಗಳ ಸೂಕ್ಷ್ಮ ಬೆಳಕಿನ ಹೊರಸೂಸುವಿಕೆಯ ಮೂಲಕವೇ ಕರ್ಲ ಟಿವಿಯಾಗಿ ಗೋಚರಿಸುವುದು. ಮನುಷ್ಯನ ದೃಷ್ಟಿಯನ್ನು ಈ ಕಾರಣಕ್ಕೆ Trichromatic vision ಎನ್ನುವುದು. ಇವಿಷ್ಟು ವಿವರಣೆ ಯ ನಂತರ ಒಂದು ಮಜದ ವಿಚಾರ ಹೇಳಬೇಕು. ಅದೇನೆಂದರೆ ಈ ರಾಡ್ ಬೆಳಕು ಗ್ರಾಹಿಗಳಿವೆಯಲ್ಲ ಅವು ಸಮುದ್ರದಾಳದ ಬಹುತೇಕ ಜೀವಿಗಳಲ್ಲಿ ಅತ್ಯಂತ ವಿಕಸನ ಹೊಂದಿರುತ್ತವೆ.

ಅಥವಾ ನಮಗೆ 30-40 ನಿಮಿಷದ ನಂತರ ಜಾಗ್ರತ ಹೆಚ್ಚುವ ಈ ರಾಡ್ ಜೀವಕೋಶಗಳು ಈ ಸಮುದ್ರದಾಳದ, ಕತ್ತಲೆಯಲ್ಲಿ ಬದುಕುವ ಜೀವಿಗಳಲ್ಲಿ ಕಣ್ಣ ಪಟಲದ ತುಂಬೆಲ್ಲ ಅದೇ ತುಂಬಿರುತ್ತದೆ. ಹಾಗಾಗಿ ಅವು ಅತ್ಯಂತ ಕಡಿಮೆ ಬೆಳಕನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಕಾಣಬಲ್ಲವು. ಆ ಕಾರಣಕ್ಕೆ ಅವು ಗಳಲ್ಲಿ ಬಹಳಷ್ಟು ಜೀವಿಗಳು ಬಣ್ಣ ಕುರುಡಾಗಿರುತ್ತವೆ. ಹಲವರಲ್ಲಿ ಕರ್ಲ ಬ್ಲೈಂಡ್ ನೆಸ್ ಇರುತ್ತದೆಯಲ್ಲ. ಈ ಕಲರ‍್ ಬ್ಲೈಂಡ್ ಎನ್ನುವುದು ಅಷ್ಟು ಸರಿಯಾದ ಪದಬಳಕೆಯಲ್ಲ.

ಇದು ಬಣ್ಣ ಕುರುಡು ಎನ್ನುವುದಕ್ಕಿಂತ ಬಣ್ಣವನ್ನು ಗ್ರಹಿಸಲು ಅಸಾಧ್ಯವಾಗುವ – ಕೊರತೆ ಎಂದರೆ ಹೆಚ್ಚು ಸೂಕ್ತ. ಈ ಬಣ್ಣ ವನ್ನು ಗ್ರಹಿಸುವ ಕೊರತೆಯ ಸ್ಥಿತಿಗೆ ಮೂಲ ಕಾರಣ ಈ ಮೇಲೆ ಹೇಳಿದ ಎಆ ಬಣ್ಣವನ್ನು ಗ್ರಹಿಸುವ ಕೋನ್ ಜೀವಕೋಶ ಗಳ ಒಳಗಿನ ಜೀನ್ ಗಳು ಮ್ಯುಟೇಷನ್ (ರೂಪಾಂತರ) ವಾಗಿ ಮೆದುಳಿಗೆ ತಪ್ಪು ಗ್ರಹಿಕೆಯನ್ನು ಕಳಿಸುವುದರಿಂದ.

ಈ ದೃಷ್ಟಿ ಎನ್ನುವುದು ಹಾಗೆ ನೋಡಿದರೆ ಅದೆಂಥಹ ಅದ್ಭುತ ಜೀವ ವಿಸ್ಮಯವಲ್ಲವೇ? ಬೆಳಕು ಎನ್ನುವುದು ಏನು ಎಂದೇ ನಮ್ಮ ಗ್ರಹಿಕೆಗೆ ಇನ್ನೂ ಸರಿಯಾಗಿ ಬಂದಿಲ್ಲ. ಬೆಳಕು ಅಲೆಯೋ ಅಥವಾ ಕಣವೊ ಎನ್ನುವುದರಲ್ಲಿಯೇ ವಿಜ್ಞಾನ ಇನ್ನೂ ಜಿಜ್ಞಾಸೆ ಯಲ್ಲಿದೆ ಆದರೆ ನಮ್ಮ ಸೃಷ್ಟಿ (ವಿಕಾಸನವೋ ಅಥವಾ ಇನ್ನೊಂದೋ) ಯ ಜೊತೆಯಲ್ಲಿ ಪಡೆದ ಕಣ್ಣು,  ಅದರಲ್ಲಿರುವ ಬೆಳಕಿನ ಗ್ರಾಹಿಗಳು, ಅದನ್ನು ಹೀಗೆಯೇ ಎಂದು ಕರಾರುವಕ್ಕಾಗಿ ಗ್ರಹಿಸುವ, ಪ್ರೋಸೆಸ್ ಮಾಡುವ ಮೆದುಳು, ಆ ಕಣ್ಣುಗಳು ಕತ್ತಲೆಗೆ ಒಗ್ಗಿಕೊಳ್ಳುವ ರೀತಿ, ಮಾಡಿಕೊಳ್ಳುವ ಬದಲಾವಣೆ, ಬೇರೆ ಬೇರೆ ಬೆಳಕಿನ ಪ್ರಮಾಣದಲ್ಲಿ ಬದುಕುವ ಜೀವಿಗಳು ಮಾಡಿಕೊಂಡ ಬದಲಾವಣೆಗಳು ಇವೆಲ್ಲದಕ್ಕೆ ವಿಸ್ಮಯ ಎನ್ನುವ ಶಬ್ಧ ಅಗ್ಗವೆನ್ನಿಸುತ್ತದೆ.

ಇಲಿ ಸೇರಿದಂತೆ ಕೆಲವು ಪ್ರಾಣಿಗಳು ಕಣ್ಣುಗಳನ್ನು ಪ್ರತ್ಯೇಕವಾಗಿ ತಿರುಗಿಸಬಲ್ಲವು. ಘೇಂಡಾಮೃಗ ದಂತಹ ಜೀವಿಗಳಿಗೆ ಕೆಲವೇ
ಮೀರ್ಟ ದೂರದಲ್ಲಿ ಅಲುಗಾಡದೇ ನಿಂತರೆ ಕಾಣಿಸುವುದಿಲ್ಲ. ಜಿಂಕೆಯ ಹಗಲಿನ ದೃಷ್ಟಿ ನಮಗಿಂತ ಎಂಬತ್ತು ಪಟ್ಟು ಮಂದ.
ಆದರೆ ಅವುಗಳ ರಾತ್ರಿಯ ದೃಷ್ಟಿ ನಮಗಿಂತ ಐವತ್ತು ಪಟ್ಟು ಜಾಸ್ತಿ. ನಾಯಿಗೆ ಕೆಂಪು ಮತ್ತು ಹಸಿರನ್ನು ಗ್ರಹಿಸಲಾಗದು, ನೊಣ ಗಳ ಸಂಕೀರ್ಣ ಕಣ್ಣುಗಳು. ಹೀಗೆ ಒಂದೊಂದರದ್ದು ಒಂದೊಂದು ರೀತಿಯ ದೃಷ್ಟಿಯಾದರೂ ಎಲ್ಲ ಜೀವಿಗಳು ಮೇಲ್ನೋಟಕ್ಕೆ ಒಂದೇ ತೆರನಾದ ದೃಷ್ಠಿಯನ್ನೇ ಹೊಂದಿವೆ ಎಂಬ ರೀತಿಯಲ್ಲಿ ಬದುಕುವುದು ಜೀವ ಜಗ ವಿಸ್ಮಯವೇ ಅಲ್ಲವೇ?