Sunday, 24th November 2024

ಬಾನೆತ್ತರಕ್ಕೆ ಹಾರಿದ ಗಾಳಿಪಟ ೨

ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್‌ನಲ್ಲಿ ಮರಳಿಬಂದ ಗಾಳಿಪಟ ೨ ಯಶಸ್ಸು ಕಂಡಿದೆ. ಬಿಡುಗಡೆಯಾದ ಕಡೆಯಲೆಲ್ಲಾ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರೇಕ್ಷಕರು ಇಷ್ಟಪಟ್ಟು ಚಿತ್ರವನ್ನು ಕಣ್ತುಂಬಿಕೊಂಡಿದ್ದು ಮನಸಾರೆ ಮೆಚ್ಚಿಕೊಂಡಿ ದ್ದಾರೆ. ಹಾಗಾಗಿ ದಶಕದ ಬಳಿಕ ಗಾಳಿಪಟ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ. ಈ ಸಂತಸದಲ್ಲಿರುವ ಚಿತ್ರತಂಡ ಮತ್ತೊಂದು ಚಿತ್ರಕ್ಕೆ ಪ್ಲಾನ್ ಮಾಡುತ್ತಿದೆ. ಹಾಗಾಗಿ ಮುಂದೆ ಗಾಳಿಪಟ ೩ ಸೆಟ್ಟೇರಬಹುದೇ ಎಂಬ ನಿರೀಕ್ಷೆಯೂ ಇದೆ.

ದಶಕದ ಹಿಂದೆ ಬಂದ ಗಾಳಿಪಟದಲ್ಲಿ ಅನಂತ್‌ನಾಗ್ ಮುಖ್ಯ ಪಾತ್ರವನ್ನು ನಿರ್ವಹಿಸಿ ದ್ದರು. ಆ ಪಾತ್ರ ಚಿತ್ರದ ಜೀವಾಳವೇ ಆಗಿತ್ತು. ಇವರಿಗೆ ಪ್ರಸಿದ್ಧಿ ತಂದುಕೊಟ್ಟಿತ್ತು. ಗಾಳಿಪಟ ೨ ಚಿತ್ರದಲ್ಲಿಯೂ ಅನಂತ್‌ನಾಗ್ ಕಿಶೋರ್ ಕುಮಾರ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು. ಕನ್ನಡ ಪ್ರಾಧ್ಯಾಪಕರಾಗಿ ಮನಸೆಳೆದರು. ಇಲ್ಲಿಯೂ ಇವರದ್ದೇ ಮುಖ್ಯ ಪಾತ್ರ. ಒಂದು ಅರ್ಥದಲ್ಲಿ ಇವರೇ ನಾಯಕ ಅಂದರೂ ತಪ್ಪಿಲ್ಲ. ನನಗೆ ಕಥೆ ಕೇಳಿದಾಗಲೇ ಸಿನಿಮಾದ ಬಗ್ಗೆ ನಿರೀಕ್ಷೆಯಿತ್ತು. ಚಿತ್ರದಲ್ಲಿ ಹೊಸತನವಿರುವುದು ಸ್ಪಷ್ಟವಾಯಿತು. ಚಿತ್ರದಲ್ಲಿ ನಟಿಸಲು ನಾನು ಉತ್ಸುಕನಾದೆ.

ನಿರ್ದೇಶಕ ಯೋಗರಾಜ್ ಭಟ್ ಮಾನಸಿಕ ಒತ್ತಡದ ನಡುವೆಯೂ ಒಂದು ಒಳ್ಳೆಯ ಚಿತ್ರವನ್ನು ನೀಡಿದ್ದಾರೆ. ಪ್ರೇಕ್ಷಕರು ಚಿತ್ರವನ್ನು ಮೆಚ್ಚಿದ್ದಾರೆ. ಸಿನಿಪ್ರಿಯರು ಇಷ್ಟಪಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಸಂತಸಪಟಿದ್ದಾರೆ. ಇದು ಚಿತ್ರರಂಗದ ಮಟ್ಟಿಗೆ ಒಳ್ಳೆಯ ಬೆಳೆವಣಿಗೆ. ಇಂದು ಶಿಕ್ಷಣ ವ್ಯಾಪಾರಿಕರಣವಾಗುತ್ತಿದೆ. ಅದರಿಂದ ಆಗುತ್ತಿರುವ ಸಮಸ್ಯೆಗಳು ಹೀಗೆ ಹಲವು ವಿಚಾರಗಳನ್ನು ನಿರ್ದೇಶಕರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಅನಂತ್‌ನಾಗ್ ಸಂತಸದಿಂದ ನುಡಿದರು.

ಬಿಗ್‌ಬ್ರೇಕ್ ನೀಡಿದ ಗಾಳಿಪಟ

ನಟ ಗಣೇಶ್ ಈ ಹಿಂದೆ ಅಭಿನಯಿಸಿದ ಹಲವು ಸಿನಿಮಾಗಳು ಅಷ್ಟಾಗಿ ಪ್ರಸಿದ್ಧಿ ತಂದುಕೊಡಲಿಲ್ಲ. ಹೆಚ್ಚು ದಿನ ಚಿತ್ರಮಂದಿರ ಗಳಲ್ಲಿ ಉಳಿಯಲಿಲ್ಲ. ಗಾಳಿಪಟ ೨ ಗಣಿಗೆ ಮತ್ತೊಂದು ಬ್ರೇಕ್ ನೀಡಿದೆ. ನಗಿಸುತ್ತಾ ಅಳಿಸುವ ಗಣಿಯ ಅಭಿನಯಕ್ಕೆ ಪ್ರೇಕ್ಷಕರ ಮನಸೋತಿದ್ದಾರೆ. ಮತ್ತೊಮ್ಮೆ ಮೆಚ್ಚಿಕೊಂಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಗಾಳಿಪಟ ಚಿತ್ರದ ಕಥೆ ಹೇಳಿದಾಗ, ಗಣಿಗೆ ನಿದ್ರೆಯೇ ಮಾಯ ವಾಯಿತಂತೆ.

ಕಥೆಯ ಬಗ್ಗೆ ಸ್ಪಷ್ಟತೆ ಸಿಗದೆ ಚಡಪಡಿಸಿದ್ದಾರೆ. ಬಳಿಕ ನಿರ್ದೇಶಕರೇ ಕಥೆಗೆ ಒಳ್ಳೆಯ ಆಯಾಮ ನೀಡಿ ಚಿತ್ರೀಕರಣ ಆರಂಭಿಸಿದ್ದಾರೆ. ಕಥೆಗೆ ತಕ್ಕಂತೆ ಸಿದ್ಧವಾದ ಗಣೇಶ್ ಅದ್ಭುತ ಅಭಿನಯ ತೋರಿದ್ದಾರೆ. ಹಾಗಾಗಿ ನಿರ್ದೇಶಕ ಯೋಗರಾಜ್ ಭಟ್ಟರೆ , ಗಣಿಗೆ ಸೆಲ್ಯೂಟ್ ಮಾಡಿದ್ದಾರೆ.

ಕನ್ನಡಿಗರ ಮನಗೆದ್ದ ಶ್ವೇತಾ  
ನಾನು ಮುಂಬೈನಲ್ಲಿ ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ನೋಡಿದೆ. ಅವರಿಂದ ವ್ಯಕ್ತವಾದ ಪ್ರೋತ್ಸಾಹ ಮರೆಯಲು ಸಾಧ್ಯ ವಿಲ್ಲ. ಗಾಳಿಪಟದ ಶ್ವೇತಾ ಎಂದೇ ನನ್ನನ್ನು ಪ್ರೇಕ್ಷಕರು ಗುರುತಿಸುತ್ತಾರೆ. ಇದು ನನಗೆ ಸಂತಸತಂದಿದೆ. ಗಾಳಿಪಟ ೨ ಸಿನಿಮಾ ಮಾತ್ರವಲ್ಲ ಅದು ಸಂಸ್ಕೃತಿಯನ್ನು ಬೆಸೆಯುವ ಕಥಾವಸ್ತು. ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಇಡೀ ದೇಶವೇ ಮೆಚ್ಚಿದೆ. ಕನ್ನಡ ಚಿತ್ರದಲ್ಲಿ ನಾನು ನಟಿಸಿರುವುದು ಸಂತಸತಂದಿದೆ.

ಮೂಡಿಬರಲಿದೆ ಗಾಳಿಪಟ ೩
ಗಾಳಿಪಟ ೨ ಯಶಸ್ಸಿನ ಖುಷಿಯಲ್ಲಿರುವ ಚಿತ್ರತಂಡ ಮತ್ತೊಂದು ಒಳ್ಳೆಯ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಉತ್ಸುಕವಾಗಿದೆ. ಹಾಗಾಗಿ ಮುಂದೆ ಗಾಳಿಪಟ ೩ ಮೂಡಿಬರಬಹುದು ಎಂಬ ನಿರೀಕ್ಷೆಯೂ ಇದೆ. ಪ್ರೇಕ್ಷಕರಿಗೆ ಮಾತ್ರವಲ್ಲ, ಕಲಾವಿದರಿಗೂ ಮುಂದಿನ ಭಾಗ ತೆರೆಗೆ ಬರಲಿ ಎಂಬ ಆಸೆಯೂ ಇದೆ. ಈ ಬಗ್ಗೆ ಹಿರಿಯ ನಟ ಅನಂತ್‌ನಾಗ್ ಅವರೇ ತಮ್ಮ ಮನದಾಳ
ಹಂಚಿಕೊಂಡಿದ್ದಾರೆ. ಪವನ್ ಅಂತು ಮುಂದಿನ ಭಾಗದಲ್ಲಿಯೂ ನಾನು ಖಂಡಿತಾ ನಟಿಸುತ್ತೇನೆ ಎಂದಿದ್ದಾರೆ.

ಗಾಳಿಪಟ ೩ ಸೆಟ್ಟೇರಲೇಬೇಕು ಎಂದು ವೈಭವಿ, ಶರ್ಮಿಳಾ ಕೂಡ ಮನದಾಳದಿಂದ ನುಡಿದಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ಗಾಳಿಪಟ ೩ ಸೆಟ್ಟೇರುವುದು ಬಹುತೇಕ ಖಚಿತವಾಗಿದೆ.

***

ಗಣೇಶ್ ಒಪ್ಪಿದರೆ ಖಂಡಿತಾ ಗಾಳಿಪಟ ೩ ಮೂಡಿಬರಲಿದೆ. ಹತ್ತು ವರ್ಷದ ಹಿಂದೆಯೇ ಗಾಳಿಪಟ ೨ ಬರಬೇಕು ಎಂದುಕೊಂಡಿದ್ದೊ. ಅಂತೆಯೇ ಚಿತ್ರ ತೆರೆಗೆ ಬಂದಿದೆ. ಮುಂದೆ ಗಣೇಶ್ ಸಿದ್ಧವಾದರೆ, ಕಥೆ ರಚಿಸಿ ಚಿತ್ರೀಕರಣಕ್ಕೆ ತೆರಳಬಹುದು. ಗೆಳೆಯ ದಿಗಂತ್ ಕೂಡ ನಮ್ಮೊಂದಿಗೆ ಸೇರುತ್ತಾನೆ.

-ಯೋಗರಾಜ್ ಭಟ್ ನಿರ್ದೇಶಕ

ಗಾಳಿಪಟದಲ್ಲಿ ಅಚ್ಚಕನ್ನಡದ ಬೆಚ್ಚನೆಯ ಭಾವವಿದೆ. ಹದಿನೈದು ವರ್ಷದ ಹಿಂದೆ ನನ್ನನ್ನುಗೀತ ಸಾಹಿತಿಯಾಗಿ
ಕರೆತಂದವರು ಯೋಗರಾಜ್ ಭಟ್. ಅವರೊಂದಿಗಿನ ಪಯಣ ಇಂದಿಗೂ ಯಶಸ್ವಿಯಾಗಿ ಸಾಗಿದೆ. ಸಂಗೀತ ಪ್ರಿಯರ ಮನಸಿಗೆ ಹಿಡಿಸುವ ಮಧುರಗಾನವನ್ನು ಹೆಣೆಯಲು ಸಾಧ್ಯವಾಗಿದೆ.

-ಜಯಂತ್ ಕಾಯ್ಕಿಣಿ

ಗಾಳಿಪಟ ೨ ಚಿತ್ರ ಗೆದ್ದಿದೆ. ನಾನು ಪಾಸ್ ಆಗಿದ್ದೇನೆ. ನಮ್ಮ ಸಿನಿಮಾ ಬಿಡುಗಡೆಯ ಸಂದರ್ಭ ಚಿತ್ರಮಂದಿಕ್ಕೆ ಭೇಟಿಕೊಟ್ಟಾಗ ಸಿನಿಪ್ರಿಯರು ತೋರಿದ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಹಲವು ಕಡೆ ಚಿತ್ರದ ಟಿಕೆಟ್ ಹೆಚ್ಚಿನ ಬೆಲೆಗೆ ಮಾರಾಟವಾಗಿವೆ. ಚಿತ್ರದ ಗಳಿಕೆಯೂ ಉತ್ತಮವಾಗಿದೆ. ಇದು ಮುಂದೆ ಮತ್ತೊಂದು ಒಳ್ಳೆಯ ಚಿತ್ರವನ್ನು ನಿರ್ಮಾಣ ಮಾಡಲು ಪ್ರೇರಣೆಯಾಗಿದೆ.
-ರಮೇಶ್ ರೆಡ್ಡಿ ನಿರ್ಮಾಪಕ