Monday, 16th September 2024

ಜರ್ಮನಿ ಎಂಬ ಧರ್ಮ ನಗರಿ

ವಿದೇಶವಾಸಿ

dhyapaa@gmail.com

ಯಾರದ್ದಾದರೂ ಮನೆಯ ಮುಂದೆ ಹಳೆಯ ಪೀಠೋಪಕರಣಗಳು, ಇತರ ವಸ್ತುಗಳು ಅಷ್ಟೇ ಏಕೆ, ಮಣ್ಣು ಇದ್ದರೂ ಕೂಡ ಕೊಂಡು ಹೋಗಬಹುದು. ಅವೆಲ್ಲ ತಮಗೆ ಅವಶ್ಯಕವಲ್ಲ, ಬೇಕಾದವರು ಬಳಸಿಕೊಳ್ಳಲಿ ಎಂದು ಹೊರಗೆ ಇಟ್ಟ ವಸ್ತುಗಳು. ಅದ್ಯಾವುದಕ್ಕೂ ಹಣ ಕೊಡಬೇಕಾಗಿಲ್ಲ. ವಾಹನ ತಂದರಾಯಿತು, ತುಂಬಿಕೊಂದು ಹೋದರಾಯಿತು.

ರಾಮ ಎಂದಾಕ್ಷಣ ನೆನಪಿಗೆ ಬರುವುದು, ಸಜ್ಜನ, ಶಾಂತ ಸ್ವಭಾವ, ಏಕಪತ್ನಿ ವೃತಸ್ಥ ಎಂಬುದು. ಹರಿಶ್ಚಂದ್ರ ಎಂದಾಗ ನೆನಪಾಗುವುದು ಸತ್ಯಪರತೆ. ಕರ್ಣ ಎಂದಾಕ್ಷಣ ದಾನ, ತ್ಯಾಗ. ಹಾಗೆಯೇ, ಯುಧಿಷ್ಠಿರ ಎಂದರೆ ಧರ್ಮ ಮಾರ್ಗ ದಲ್ಲಿ ನಡೆಯುವವ. ತಾನು ಪಾಲಿಸಿದ ಧರ್ಮದಿಂದಾಗಿಯೇ ಆತ ಧರ್ಮರಾಯ ಎಂದು ಹೆಸರು ಮಾಡಿದವ.

ಧರ್ಮರಾಯನನ್ನು ಕೆಲವರು ಬೋಳೆ ಎಂದು ಕರೆದರೂ, ಇಂದಿಗೂ ಧರ್ಮ ಮಾರ್ಗದಲ್ಲಿ ನಡೆಯುವವರನ್ನು ಧರ್ಮರಾಯ ನಿಗೆ ಹೋಲಿಸುವುದಿದೆ. ಹರಿಶ್ಚಂದ್ರನಂತೆ ಧರ್ಮರಾಯನೂ ಸತ್ಯದ ಪಥದ ನಡೆದವ. ವೈರಿಗಳಿಗೂ ಆತನ ಮಾತಿನ ಮೇಲೆ ಭರವಸೆ ಇತ್ತು ಎಂದರೆ ಅದಕ್ಕಿಂತ ಇನ್ನೇನು ಬೇಕು? ಆತನ ಭ್ರಾತೃ ಪ್ರೇಮವೂ ಅನುಕರಣೀಯ. ದಾಯಾದಿಗಳನ್ನೂ ಮತ್ಸರದಿಂದ ಕಾಣದೆ, ತನ್ನ ಸಹೋದರರಂತೆಯೇ ಪ್ರೀತಿಸಿದವ.

ಧರ್ಮಜನ ಇನ್ನೊಂದು ಗುಣವೆಂದರೆ ಹಿರಿಯರೆಡೆಗೆ ಆತನಿಗಿದ್ದ ಗೌರವ ಭಾವ. ಎಲ್ಲಕ್ಕಿಂತಲೂ ಹೆಚ್ಚಾಗಿ, ಇತರರೂ ತನ್ನಂತೆಯೇ ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆಯುವವರು (ಇದನ್ನು ಬೇಕಾದರೆ ಬೋಳೆತನ ಎನ್ನಬಹುದು) ಎಂದು ನಂಬಿದವ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ವಿರುದ್ಧ ಜಯಿಸಿದ ನಂತರ ಹದಿನೈದು ವರ್ಷ ಆತ ರಾಜ್ಯ ಆಳಿದವ. ಇನ್ನೊಂದಿಷ್ಟು ವರ್ಷ ರಾಜ್ಯಭಾರ ಮಾಡಿದ್ದಿದ್ದರೆ ‘ರಾಮರಾಜ್ಯ’ದಂತೆ ‘ಧರ್ಮರಾಜ್ಯ’ ಎಂದು ಹೆಸರಾ ಗುತ್ತಿತ್ತೋ ಏನೋ, ಸ್ವರ್ಗ ಕಾಣುವ ಬಯಕೆಯಿಂದ ಆ ಕಡೆಗೆ ಹೆಜ್ಜೆ ಹಾಕಿದ.

ಹಾಗೆ ಹೇಳುವುದಕ್ಕೂ ಕಾರಣವಿದೆ. ಹೇಗೆ ಭೀಮ ಗದೆಯಲ್ಲಿ, ಅರ್ಜುನ ಬಿಲ್ವಿದ್ಯೆಯಲ್ಲಿ ನೈಪುಣ್ಯ ಪಡೆದರೋ, ಹಾಗೆಯೇ ಯುಧಿಷ್ಠಿರ ಈಟಿ ವಿದ್ಯೆಯಲ್ಲಿ ನುರಿತವನಾಗಿದ್ದರ ಜತೆಗೆ, ಆಚಾರ್ಯರಾದ ಕೃಪ ಮತ್ತು ದ್ರೋಣರಿಂದ ವಿಜ್ಞಾನ, ಸೇನಾ ತರಬೇತಿ ಮತ್ತು ಆಡಳಿತದ ಶಿಕ್ಷಣವನ್ನೂ ಕಲಿತು ನಿಪುಣ ನಾಗಿದ್ದ. ಇತ್ತೀಚೆಗೆ ಜರ್ಮನಿಗೆ ಹೋದಾಗ ಯಾಕೋ ಧರ್ಮರಾಯ ಆಗಾಗ ನೆನಪಾಗುತ್ತಿದ್ದ.

ಜರ್ಮನಿ ಎಂದರೆ ಸೀದಾ ಮನಸ್ಸು ಹೋಗಿ ನಿಲ್ಲುವುದು ವಿಜ್ಞಾನದ ನಿಲ್ದಾಣದಲ್ಲಿ. ವಿಜ್ಞಾನ- ತಂತ್ರಜ್ಞಾನದ ವಿಷಯದಲ್ಲಿ ಜರ್ಮನಿ ಇಂಗ್ಲೆಂಡಿಗಿಂತ ಏನಿಲ್ಲವೆಂದರೂ ಹತ್ತರಿಂದ ಇಪ್ಪತ್ತು ವರ್ಷ ಮುಂದಿದೆ ಎಂದು ನನ್ನ ಜತೆ ಕೆಲಸಮಾಡುವ
ಬ್ರಿಟಿಷ್ ಪ್ರಜೆಯೇ ಹೇಳುತ್ತಾನೆ ಎಂದರೆ ಅಂದಾಜು ಮಾಡಿ. ವಿಜ್ಞಾನ, ತಂತ್ರಜ್ಞಾನ, ಅಭಿವೃದ್ಧಿ ಇವೆಲ್ಲ ಒಂದು ಕಡೆ. ಇನ್ನೊಂದು ಕಡೆ ಸಿರಿಯಾದಿಂದ ಹಿಡಿದು ಇತ್ತೀಚಿನ ಯುಕ್ರೇನ್ ಯುದ್ಧದ ಸಂದರ್ಭದಲ್ಲಿ ಬಂದ ನಿರಾಶ್ರಿತರಿಗೆ ಆಶ್ರಯ ನೀಡುವುದರಲ್ಲೂ ಜರ್ಮನಿ ಉದಾರತೆ ಮೆರೆದಿದೆ.

ಈ ಉದಾರತೆ ಮುಂದೊಂದು ದಿನ ಆ ದೇಶಕ್ಕೆ ಮುಳುವಾಗಲಿದೆಯೇ ಎಂಬ ಪ್ರಶ್ನೆ ಇದ್ದರೂ, ಸದ್ಯಕ್ಕಂತೂ ಅದೊಂದು ಧರ್ಮ ನಗರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೆಚ್ಚೇನೂ ಹೇಳದೆ, ಒಂದೆರಡು ಉದಾಹರಣೆ ಹೇಳಿದೆರೆ ಸಾಕೆನಿಸುತ್ತದೆ. ಇತ್ತೀಚೆಗೆ ಜರ್ಮನಿ ಪ್ರಯಾಣದಲ್ಲಿದ್ದಾಗ ತಿರುಗಾಟಕ್ಕೆಂದು ಖರ್ಚಾದದ್ದು ಕೇವಲ ಒಂಬತ್ತು ಯೂರೋ. ಅಂದರೆ, ಸುಮಾರು ಏಳುನೂರ ಇಪ್ಪತ್ತು ರುಪಾಯಿ ಮಾತ್ರ.

ಹೋದ ದಿನವೇ ಆ ಟಿಕೆಟ್ ಖರೀದಿಸಿದ್ದರೂ, ಬರುವವರೆಗೂ ನಾನು ಬಳಸಿದ್ದು ಅದೇ ಟಿಕೆಟ್. ಅದನ್ನು ಬಸ್, ಫೆರ‍್ರಿ (ದೋಣಿ) ಅಥವಾ ರೈಲು ಯಾವುದೇ ಸಾರ್ವಜನಿಕ ಸಾರಿಗೆಗೆ ಬಳಸಬಹುದಾಗಿತ್ತು ಎಂದರೆ ನಾನು ಕಂಬಿ ಇಲ್ಲದೇ ರೈಲು ಬಿಡುತ್ತಿದ್ದೇನೆ ಎಂದು ತಿಳಿಯಬೇಡಿ. ರೈಲಿನಲ್ಲೂ, ರೀಜನಲ್ (ಪ್ರಾದೇಶಿಕ), ಸಬ್‌ರ್ಬನ್ (ಉಪ ನಗರ) ಮತ್ತು ಮೆಟ್ರೊ (ಸಾಮನ್ಯವಾಗಿ ನೆಲದ ಅಡಿಯಲ್ಲಿ ಚಲಿಸುವಂಥದ್ದು) ಈ ಮೂರರಲ್ಲೂ ಅದನ್ನು ಬಳಸಬಹುದಾಗಿತ್ತು. ಅದೂ ಒಂದು ದಿನವಲ್ಲ, ಎರಡು ದಿನವಲ್ಲ, ಬರೊಬ್ಬರಿ ಒಂದು ತಿಂಗಳು! ಅಂದರೆ, ನಿಮಗೆ ತಾಕತ್ತಿದ್ದರೆ, ಒಂದು ತಿಂಗಳು ಇಡೀ ಜರ್ಮನಿಯನ್ನು ಏಳುನೂರ
ಇಪ್ಪತ್ತು ರುಪಾಯಿಯಲ್ಲಿ ಸುತ್ತಾಡಬಹುದಾಗಿತ್ತು.

ಎಲ್ಲಕ್ಕಿಂತ ಆಶ್ಚರ್ಯ ಎನಿಸಿದ್ದು, ಯಾವುದರ ಸುತ್ತಾಡಿ, ನಿಮಗೆ ಮನಸ್ಸಿದ್ದರೆ ಬಸ್ ಅಥವಾ ಫೆರ‍್ರಿ ಹತ್ತುವಾಗ ಚಾಲಕನಿಗೆ ಟಿಕೆಟ್ ತೋರಿಸಿ, ಇಲ್ಲವಾದರೆ ಬಿಡಿ, ಅವರಂತೂ ಅಪ್ಪಿ-ತಪ್ಪಿಯೂ ನಿಮ್ಮನ್ನು ಕೇಳುವುದಿಲ್ಲ. ರೈಲಿನಲ್ಲೂ ಟಿಸಿ ಬಂದು
ತಲೆ ತಿನ್ನುವುದಿಲ್ಲ. ನಿಮ್ಮ ಬಳಿ ಟಿಕೆಟ್ ಇಲ್ಲದಿದ್ದರೂ, ಇದೆ ಎಂದೇ ಅವರು ನಂಬುತ್ತಾರೆ. ಎಲ್ಲೋ ಆಗೊಮ್ಮೆ ಈಗೊಮ್ಮೆ ಬಂದು ಕೇಳಿದರು ಅಂದುಕೊಳ್ಳಿ, ಆಗ ನಿಮ್ಮ ಬಳಿ ಟಿಕೆಟ್ ಇಲ್ಲ ಎಂದುಕೊಳ್ಳಿ, ಆಗ ಮಾತ್ರ ಸರಿಯಾದ ಬೆಲೆ ತೆತ್ತಬೇ ಕಾಗುತ್ತದೆ.

ಒಂದು ಅಂಕಿ ಅಂಶದ ಪ್ರಕಾರ, ದೇಶದಲ್ಲಿ ಟಿಕೆಟ್ ಖರೀದಿಸದೇ ಪ್ರಯಾಣಿಸುವವರ ಸಂಖ್ಯೆ ಶೇಕಡಾ ಮೂರಕ್ಕಿಂತಲೂ ಕಮ್ಮಿ. ಇದು ಜರ್ಮನಿಯ ಸಾರಿಗೆ ಸೌಲಭ್ಯದಲ್ಲಿ ಯಾವತ್ತೂ ಇರುವ ದರ ಖಂಡಿತ ಅಲ್ಲ. ಯುಕ್ರೇನ್ ಮತ್ತು ರಷ್ಯಾದ ಯುದ್ಧದಿಂದ ಉಂಟಾದ ಇಂಧನ ಕೊರತೆ, ಅದರಿಂದ ಹೆಚ್ಚಾದ ಬೆಲೆಯ ಬಿಸಿ ಸಾಮಾನ್ಯ ಪ್ರಜೆಗಳಿಗೆ ತಟ್ಟಬಾರದು ಎಂಬ ಕಾರಣಕ್ಕೆ ಕಳೆದ ಮೂರು ತಿಂಗಳಿನಿಂದ ಅಲ್ಲಿಯ ಸರಕಾರ ಕಲ್ಪಿಸಿಕೊಟ್ಟ ವಿಶೇಷ ಉಡುಗೊರೆ. ಹಾಗಾದರೆ ಇದಕ್ಕಿಂತ ಮೊದಲು ಹೇಗಿತ್ತು ಎಂಬ ಪ್ರಶ್ನೆಗೆ ಮಿತ್ರರಾದ ಶ್ರೀಕಾಂತ್ ಉತ್ತರಿಸಿದ್ದರು.

ಜರ್ಮನಿಯಲ್ಲಿ ಎರಡು ಬಗೆಯ ‘ಡೇ ಟಿಕೆಟ್’ ಇದೆ. ಒಂದು ಬೆಳಿಗ್ಗೆ ಆರು ಗಂಟೆಯಿಂದ ಬೆಳಗಿನ ಜಾವ ಎರಡು ಗಂಟೆಯವರೆ ಗಿನದ್ದು. ಅದರ ಬೆಲೆ ಹನ್ನೊಂದು ಯೂರೋ (ಒಂಬೈನೂರು ರುಪಾಯಿಗಿಂತಲೂ ಸ್ವಲ್ಪ ಕಮ್ಮಿ), ಇನ್ನೊಂದು ಬೆಳಿಗ್ಗೆ ಹತ್ತು
ಗಂಟೆಯ ನಂತರ, ಮಧ್ಯರಾತ್ರಿಯವರೆಗೆ. ಅದಕ್ಕೆ ಆರೂವರೆ ಯೂರೋ (ಸುಮಾರು ಐದುನೂರ ಇಪ್ಪತ್ತು ರೂಪಾಯಿ). ಇನ್ನು ಸಂಸಾರ ಸಮೇತ ತಿರುಗಾಟಕ್ಕೆ ಹೋಗಬೇಕೆಂದರೆ, ಇಬ್ಬರ ಟಿಕೆಟ್ ಕೊಂಡುಕೊಂಡರೂ ಸಾಕು. ಅದರಲ್ಲಿ ಗಂಡ,
ಹೆಂಡತಿ, ಇಬ್ಬರು ಮಕ್ಕಳು (ಅಲ್ಲ್ ಹದಿನೆಂಟು ವರ್ಷದವರೆಗೂ ಮಕ್ಕಳೇ!) ಪ್ರಯಾಣಿಸಬಹುದು.

ಅದೇ ಐದು ಜನ ಪ್ರಯಾಣಿಸಬೇಕೆಂದರೆ ಹದಿನೆಂಟು ಯೂರೋ ಕೊಟ್ಟರಾಯಿತು. ಅದರ ಹೊರತಾಗಿ, ವೀಕ್ಲಿ (ಒಂದು ವಾರಕ್ಕೆ) ಟಿಕೆಟ್, ಮಂತ್ಲಿ (ಒಂದು ತಿಂಗಳಿಗೆ) ಬೇರೆ ಇದೆ. ವಾರದಲ್ಲಿ ನಾಲ್ಕು ದಿನಕ್ಕಿಂತ ಹೆಚ್ಚು ಪ್ರಯಾಣ ಮಾಡುವು ದಾದರೆ, ಇಪ್ಪತ್ತೈದು ಯೂರೋ ಕೊಟ್ಟು ಟಿಕೆಟ್ ಕೊಳ್ಳಬಹುದು. ಹಾಗೆಯೇ ಎಪತ್ತೈದೋ, ಎಂಬತ್ತೋ ಯೂರೋ ನೀಡಿ ಮಾಸಿಕ ಟಿಕೆಟ್ ಖರೀದಿಸಿದರೆ ತಿಂಗಳು ಪೂರ್ತಿ ಜರ್ಮನಿ ಸುತ್ತಾಡಬಹುದು.

ಇದಿಷ್ಟು ಟಿಕೆಟ್‌ಗೆ ಸಂಬಂಧಿಸಿದ್ದು.  ಇದರ ಹೊರತಾಗಿ, ರೈಲಿನಲ್ಲಿ ಪ್ರಯಾಣಿಸದೇ ಆಸನ ಕಾಯ್ದಿರಿಸುವ ವ್ಯವಸ್ಥೆ, ವಾರಾಂತ್ಯದಲ್ಲಿ ಸಂಸಾರ ಸಮೇತ ಸುತ್ತಾಡಲು ಉಚಿತ ಫ್ಯಾಮಿಲಿ ಪ್ಯಾಕೇಜ, ಅಬ್ಬಾ… ಒಂದಾ, ಎರಡಾ… ನಾನು
ಸುತ್ತಾಡಿ ಸುಸ್ತಾದದ್ದಕ್ಕಿಂತಲೂ ಅವರು ಹೇಳಿದ್ದನ್ನು ಕೇಳಿಯೇ ಹೆಚ್ಚು ಸುಸ್ತಾಗಿದ್ದೆ!

ಇನ್ನೊಂದು ವಿಭಿನ್ನ ವಿಷಯ. ಹ್ಯಾಂಬರ್ಗ್ ಸಮೀಪ ಒಂದು ಸೇಬಿನ ತೋಟಕ್ಕೆ ಹೋಗಿದ್ದೆ. ಅಲ್ಲಿ ಇನ್ನೂರ ಐವತ್ತಕ್ಕೂ ಹೆಚ್ಚು ಬೇರೆ ಬೇರೆ ಜಾತಿಯ ಸಾವಿರಾರು ಸೇಬಿನ ಗಿಡಗಳಿವೆ. ಪ್ರಾಮಾಣಿಕವಾಗಿ ಹೇಳುತ್ತೇನೆ, ಸೇಬಿನಲ್ಲಿ ಅಷ್ಟೊಂದು ತಳಿ ಇದೆ
ಎಂದು ತಿಳಿದದ್ದೇ ಆಗ. ನಂತರ ಹೆಚ್ಚಿನ ಮಾಹಿತಿ ಹುಡುಕಿದಾಗ ತಿಳಿದದ್ದು, ಸೇಬು ಹಣ್ಣಿನಲ್ಲಿ ಒಟ್ಟೂ ಏಳೂವರೆ ಸಾವಿರಕ್ಕೂ ಹೆಚ್ಚು ವೈವಿಧ್ಯವಿದೆ, ಜರ್ಮನಿಯ ಸುಮಾರು ನಾಲ್ಕು ಸಾವಿರದಷ್ಟು ಬೇರೆ ಬೇರೆ ಜಾತಿಯ ಸೇಬು ಹಣ್ಣಿದೆ ಎಂಬುದು. ಆ
ತೋಟದಲ್ಲಿ ಸ್ಟ್ರಾಬೆರಿ, ಚೆರ್ರ‍ಿ, ಪಿಯರ್, ಪ್ಲಮ್ ಇತ್ಯಾದಿ ಹಣ್ಣಿನ ಗಿಡಗಳೂ ಇವೆ.

ಎಲ್ಲವೂ ಪ್ರತ್ಯೇಕ ಜಾಗದಲ್ಲಿ ಸಾಲಾಗಿ ನಿಂತ ಮರಗಳು ಅಥವಾ ಗಿಡಗಳು. ಪ್ರತಿ ಸಾಲಿನ ಆರಂಭದಲ್ಲಿ ನೀಟಾಗಿ ತೂಗು ಹಾಕಿದ ಫಲಕ. ಫಲಕದಲ್ಲಿ, ಆ ಸಾಲಿನಲ್ಲಿರುವ ಮರಗಳ ಸಂಖ್ಯೆ, ಹಣ್ಣಿನ ತಳಿ, ಅದು ಬೆಳೆದು ಕೊಯ್ಲಿಗೆ ಬರುವ ಸಮಯ, ಇತ್ಯಾದಿ ವಿವರಗಳು. ಜತೆಗೆ ಅದಕ್ಕೆ ಬೇರೆ ವಾರಸುದಾರರಿದ್ದರೆ ಅವರ ಹೆಸರು. ನಿಜ, ಅಲ್ಲಿ ಹಣ್ಣಿನ ಮರಗಳನ್ನು ದತ್ತಕ್ಕೆ ಪಡೆಯಬಹುದು. ಒಂದು ವರ್ಷದಿಂದ ಮೇಲ್ಪಟ್ಟು, ಇಂತಿಷ್ಟು ವರ್ಷಗಳ ವರೆಗೆ ಎಂದು ಅಲ್ಲಿಯ ಮರಗಳನ್ನು ದತ್ತಕ್ಕೆ ಪಡೆದು, ‘ಫಲಾನುಭವಿ’ ಆಗುವ ಅವಕಾಶವೂ ಇದೆ.

ತೋಟದಲ್ಲಿ ಒಂದು ಅಂಗಡಿ, ಒಂದು ಉಪಹಾರ ಗೃಹ. ಉಪಹಾರ ಗೃಹದಲ್ಲಿ ಅಲ್ಲಿಯೇ ಬೆಳೆದ ಹಣ್ಣಿನ ಕೇಕ್, ಪಫ್ ಇತ್ಯಾದಿ ತಿನಿಸು, ಪಾನೀಯ. ಇನ್ನು ಅಂಗಡಿಯಲ್ಲಿ, ಆ ತೋಟದಲ್ಲಿ ಬೆಳೆದ ಹಣ್ಣುಗಳಿಂದ ಹಿಡಿದು, ಅದರಿಂದ ತಯಾರಿಸಿದ ತಿಂಡಿ, ಚಾಕಲೇಟ್, ವೈನ್, ಜೇನುತುಪ್ಪದವರೆಗೆ ಲಭ್ಯ. ಎಲ್ಲವೂ ತಾಜಾ-ತಾಜಾ, ಘಮ- ಘಮ. ಅಲ್ಲಿಯ ವಿಶೇಷತೆಯೆಂದರೆ, ತೋಟದಲ್ಲಿ ಬೇಕಾದರೆ ಬೆಳಗಿನಿಂದ ಸಾಯಂಕಾಲದವರೆಗೆ ಸುತ್ತಾಡಿ, ಬೇಕಾದಷ್ಟು ತಾಜಾ ಹಣ್ಣನ್ನು ಮರದಿಂದ ಕಿತ್ತು ತಿನ್ನಿ, ಅದಕ್ಕೆ ಹಣ ಕೊಡಬೇಕೆಂದಿಲ್ಲ. ಅಲ್ಲಿ ಮಾಲಿಯೂ ಇಲ್ಲ, ಸಿಸಿ ಟಿವಿ ಕೆಮೆರಾವೂ ಇಲ್ಲ.

ಸಾವಿರ ಹಣ್ಣು ತಿಂದರೂ ಕೇಳುವವರಿಲ್ಲ. ಆದರೆ, ಒಂದೇ ಒಂದು ಹಣ್ಣನ್ನು ತೋಟದಿಂದ ಹೊರಗೆ ಒಯ್ಯಬೇಕೆಂದರೆ ಹಣ ಕೊಡಬೇಕು. ಅಂಗಡಿಯಲ್ಲಿ ಅದನ್ನು ತೂಗಿ, ತಕ್ಕ ಮೌಲ್ಯ ಕೊಟ್ಟು ಕೊಂಡು ಹೋಗಬಹುದು. ವಿಶೇಷವೆಂದರೆ ಇಂತಹ ನೂರಾರು ತೋಟಗಳು ಅನೇಕ ವರ್ಷಗಳಿಂದ ಈ ನಿಯಮ ಇಟ್ಟುಕೊಂಡು ಇನ್ನೂ ಬದುಕಿ ಉಳಿದಿವೆ. ಕಾರಣ ಏನೆಂದು ಬಿಡಿಸಿ ಹೇಳಬೇಕಿಲ್ಲವಲ್ಲ? ನಗರದ ಹೊರ ಪ್ರದೇಶಗಳಲ್ಲಿ ಇನ್ನೂ ಒಂದು ಬಗೆಯ ತೋಟವಿದೆ.

ಅಲ್ಲಿ ಅಂಗಡಿಯೂ ಇಲ್ಲ, ಮಾಲೀಕನೂ ಇಲ್ಲ, ಮಾಲಿಯೂ ಇಲ್ಲ. ಸಾಮಾನ್ಯವಾಗಿ ಹೂವು, ತರಕಾರಿ ಬೆಳೆಯುವ ತೋಟ ಅದು. ಡೇರೆ ಹೂವಿನಿಂದ ಆರಂಭಿಸಿ ಸೂರ್ಯಕಾಂತಿ ಹೂವಿನವರೆಗೆ, ಕುಂಬಳ ಕಾಯಿಂದ ಹಿಡಿದು ಟೊಮ್ಯಾಟೋ ಹಣ್ಣಿನವರೆಗಿನ ತರಕಾರಿಗಳು ಇಂತಹ ತೋಟದಲ್ಲಿ ಲಭ್ಯ. ಆ ತೋಟಕ್ಕೆ ಗೇಟಿಲ್ಲ. ಎಷ್ಟು ಹೊತ್ತಿಗೂ ಹೋಗಿಬರಬಹುದು. ನಮಗೆ ಬೇಕಾದದ್ದನ್ನು, ಬೇಕಾದಷ್ಟನ್ನು ನಾವೇ ಗಿಡದಿಂದ ಕೊಯ್ದು ತರುವ ಅನುಕೂಲಕ್ಕಾಗಿ ಪ್ರವೇಶ ದ್ವಾರದ ಬಳಿ ಒಂದಷ್ಟು ಚಾಕು-ಚೂರಿ ಇಟ್ಟಿರುತ್ತಾರೆ.

ಪ್ರತಿಯೊಂದಕ್ಕೂ ಬೆಲೆ ನಿಗದಿ ಮಾಡಿ ಫಲಕ ಹಾಕಿರುತ್ತಾರೆ. ಅಲ್ಲಿಯೇ ಹಣ ಹಾಕಲೆಂದು ದೇವಸ್ಥಾನದ ಹುಂಡಿಯಂತಹ ಡಬ್ಬಿ ಇಟ್ಟಿರುತ್ತಾರೆ. ನಾವೇ ಎಣಿಸಿ, ಆ ಡಬ್ಬಿಯಲ್ಲಿ ಹಣ ಹಾಕಿ ಬಂದರಾಯಿತು. ಒಂದೇ ಒಂದು ಪೈಸೆ ಹಾಕದಿದ್ದರೂ ಕೇಳುವವರಿಲ್ಲ. ಇನ್ನು, ಗಿಡದಲ್ಲಿಯೇ ಹಾಳಾಗುವುದಕ್ಕಿಂತ ಮೊದಲು ಅದನ್ನು ಕೊಯ್ದು ಒಂದು ಸ್ಥಳದಲ್ಲಿ ರಾಶಿ ಹಾಕುತ್ತಾರೆ. ಕುಂಬಳ, ಸೋರೆ ಕಾಯಿಗಳಾದರೆ ದೊಡ್ಡ, ಸಣ್ಣ, ಮಧ್ಯಮ ಹೀಗೆ ಮೂರು ಗಾತ್ರಗಳಲ್ಲಿ ವಿಂಗಡಿಸಿ ಬೇರೆ ಇಟ್ಟು, ಅದಕ್ಕೆ ತಕ್ಕ ಬೆಲೆ ನಮೂದಿಸಿರುತ್ತಾರೆ. ಅದಕ್ಕನುಗುಣವಾಗಿ ನಾವೇ ಲೆಕ್ಕಾಚಾರ ಮಾಡಿ (ಕಾಣಿಕೆ!) ಡಬ್ಬದಲ್ಲಿ ಹಾಕಿ ಬರಬೇಕು. ಏನು ಗೊತ್ತಾ? ಅಂತಹ ತೋಟಗಳೂ ನಷ್ಟ ಅನುಭವಿಸದೆ, ಇಂದಿಗೂ ಹಸಿರು, ಉಸಿರು ತುಂಬಿಕೊಂಡು ಸದಾ ನಳನಳಿಸುತ್ತಿವೆ. ಅದಕ್ಕೆ ಕಾರಣವನ್ನೂ ಬೇರೆ ಹೇಳಬೇಕಿಲ್ಲ ತಾನೆ? ಇನ್ನು ಯಾರದ್ದೇದರೂ ಮನೆಯ ಮುಂದೆ ಹಳೆಯ ಪೀಠೋಪಕರಣಗಳು, ಇತರ ವಸ್ತುಗಳು ಅಷ್ಟೇ ಏಕೆ, ಮಣ್ಣು ಇದ್ದರೂ ಕೂಡ ಕೊಂಡು ಹೋಗಬಹುದು.

ಅವೆಲ್ಲ ತಮಗೆ ಅವಶ್ಯಕವಲ್ಲ, ಬೇಕಾದವರು ಬಳಸಿಕೊಳ್ಳಲಿ ಎಂದು ಹೊರಗೆ ಇಟ್ಟ ವಸ್ತುಗಳು. ಅದ್ಯಾವುದಕ್ಕೂ ಹಣ ಕೊಡಬೇಕಾಗಿಲ್ಲ. ವಾಹನ ತಂದರಾಯಿತು, ತುಂಬಿಕೊಂದು ಹೋದರಾಯಿತು. ಸಾಧ್ಯವಾದರೆ ಒಂದು ಧನ್ಯವಾದದ
ಚೀಟಿ, ಇಲ್ಲವಾದರೆ ಅದನ್ನೂ ಕೇಳುವವರಿಲ್ಲ. ಅದೇ ವಸ್ತುವನ್ನು ಮಾಲೀಕ ಮಾರಾಟ ಮಾಡುವ ಸ್ಥಳಕ್ಕೆ ಕೊಂಡು ಹೋಗಿ ಮೂರು ದಿನ ಕಾಯಬಹುದು.

ಅಲ್ಲಿ ಮಾರಾಟವಾದರೆ ಆಯಿತು, ಇಲ್ಲವಾದರೆ, ಸಾಗಾಟದ ಖರ್ಚಿನ ಜತೆಗೆ ಆ ವಸ್ತುವಿನ ಸಂಸ್ಕಾರಕ್ಕೂ ಹಣ ಕೊಡಬೇಕು. ಏಕೆಂದರೆ, ಆಗ ಅದು ಮಾರಾಟವಾಗದ ಚಿಂದಿ, ಯಾರಿಗೂ ಬೇಡವಾದ ವೇ ಮಟೀರಿಯಲ. ಇಂತಹ ಅನೇಕ ಅನುಕರಣೀಯ ಉದಾಹರಣೆ ಜರ್ಮನಿಯಲ್ಲಿದೆ. ನೋಡುವ ಕಣ್ಣು ಬೇಕು, ಅನುಕರಿಸುವ ಮನಸ್ಸು ಬೇಕು. ಜರ್ಮನಿ ಇಂದು ಸಮೃದ್ಧ ವಾಗಿರಲು ಸಾಕಷ್ಟು ಕಾರಣಗಳಿರಬಹುದು.

ಅದರ ಜತೆಗೆ ಪ್ರಮುಖ ಕಾರಣ ಎಂದರೆ ಅಲ್ಲಿಯ ಜನರಲ್ಲಿರುವ ಪ್ರಾಮಾಣಿಕತೆ. ನಾವು ಬೇರೆಯವರನ್ನು ನಂಬಬೇಕು
ಎಂದರೆ ಮೊದಲು ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಪ್ರಾಮಾಣಿಕತೆಯ ಪಾಠ ಬೇರೆಯವರಿಗೆ ಹೇಳುವ ಮುನ್ನ ನಾವು ಪ್ರಾಮಾಣಿಕರಾಗಿರಬೇಕು. ಜರ್ಮನಿಯನ್ನು ಧರ್ಮಪುರಿ ಎಂದು ಸುಮ್ಮನೆ ಹೇಳಿದ್ದಲ್ಲ.