Thursday, 19th September 2024

ದಿಲ್ಲಿ ದಂಡಯಾತ್ರೆಗೆ ಬೊಮ್ಮಾಯಿ ರೆಡಿ

ಮೂರ್ತಿ ಪೂಜೆ

ಸದ್ಯದಲ್ಲೇ ದಿಲ್ಲಿ ದಂಡಯಾತ್ರೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಮಾನಿಸಿದ್ದಾರೆ. ತಮ್ಮ ಸಂಪುಟಕ್ಕೆ ಕೆ.ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮತ್ತು ವಿಜಯೇಂದ್ರರನ್ನು ಸೇರಿಸಿಕೊಳ್ಳುವುದು ಈ ಯಾತ್ರೆಯ ಉದ್ದೇಶ. ‘ಸಂಪುಟ ವಿಸ್ತರಣೆ/ಪುನಾರಚನೆಯ ಪ್ರಪೋಸಲ್ಲು ಹಿಡಿದು ನೀವು ದಿಲ್ಲಿಯವರೆಗೆ ಬರಬೇಕಿಲ್ಲ’ ಅಂತ ಬಿಜೆಪಿ ವರಿಷ್ಠರು ಹಿಂದೆಯೇ ಹೇಳಿದ್ದರೂ, ಪದೇಪದೆ ದಿಲ್ಲಿಗೆ ಎಡತಾಕುವ ಅನಿವಾರ್ಯತೆ ಬೊಮ್ಮಾಯಿಯವರಿಗೆ ಎದುರಾಗುತ್ತಲೇ ಇದೆ.

ಮಂತ್ರಿಪದವಿ ಆಕಾಂಕ್ಷಿಗಳ ಒತ್ತಡ ಅತಿಯಾದಾಗ ತಮಗಿಷ್ಟವಿಲ್ಲದಿದ್ದರೂ ಅವರು ದಿಲ್ಲಿಯ ವಿಮಾನ ಹತ್ತುವಂತಾಗುತ್ತಿದೆ. ದಿಲ್ಲಿಗೆ ಹೋದಾಗ ವರಿಷ್ಠರ ಮುಂದೆ ಗಟ್ಟಿ ಧ್ವನಿಯಲ್ಲಿ ಇದನ್ನು ಹೇಳಲಾಗುವುದಿಲ್ಲವಲ್ಲ? ಹೀಗಾಗಿ ರಾಜ್ಯದ ಅಭಿವೃದ್ಧಿ ಕುರಿತಾದ ಯಾವುದೋ ಪ್ರಪೋಸಲ್ಲನ್ನು ತೆಗೆದು ಕೊಂಡು ಹೋಗುತ್ತಾರೆ. ಅದಕ್ಕೆ ಸಂಬಂಧಿಸಿದ ಕೇಂದ್ರ ಸಚಿವರ ಬಳಿ ಮಾತನಾಡುವ ಜತೆಗೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಕೇಂದ್ರ ಗೃಹ ಸಚಿವರ ಸೌಹಾರ್ದ ಭೇಟಿಗೆ ಸಮಯ ಕೇಳುತ್ತಾರೆ.

ಈ ಹಂತದಲ್ಲಿ ಅವರಿಗೆ ನೆರವಾಗುವ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ‘ಓನ್ಲಿ ಕರ್ಟಸಿ ಕಾಲ್ ಸರ್’ ಅಂತ ಹೇಳಿ ಸಮಯ ನಿಗದಿ ಮಾಡಿಕೊಡುತ್ತಾರೆ. ಅದರಂತೆ ಈ ನಾಯಕರನ್ನು ಭೇಟಿಮಾಡಿದಾಗ ಅದೂ-ಇದೂ ಮಾತನಾ ಡುವ ಬೊಮ್ಮಾಯಿ ಕೊನೆಗೆ, ‘ಇಂತಹ ಡಿಮಾಂಡು ಇದೆ, ನಿಮ್ಮ ಗಮನಕ್ಕಿರಲಿ ಅಂತ ಹೇಳಿದೆ’ ಎಂದು ಹೇಳಿ ಹೊರಬರು ತ್ತಾರೆ. ಅಲ್ಲಿಗೆ ಬೊಮ್ಮಾಯಿಯವರ ದಂಡಯಾತ್ರೆ ಸಂಪನ್ನವಾಗುತ್ತದೆ. ಅದರ ಫಲಿತಾಂಶವೇನೇ ಇರಲಿ, ಮಂತ್ರಿ ಪದವಿ ಆಕಾಂಕ್ಷಿಗಳು ಇನ್ನಷ್ಟು ದಿನ ಕಾಯಲು ಮನಸ್ಸು ಗಟ್ಟಿಮಾಡಿಕೊಳ್ಳುತ್ತಾರೆ.

ಈ ಸಲವೂ ಅಷ್ಟೇ, ಸಂಪುಟಕ್ಕೆ ಮೂವರನ್ನು ಸೇರಿಸಿಕೊಳ್ಳಲು ಅವರು ವರಿಷ್ಠರ ಅನುಮತಿ ಬಯಸಿದ್ದಾರೆ. ಅವರನ್ನು ಸೇರಿಸಿಕೊಳ್ಳುವುದರಿಂದ ಸರಕಾರ ಮತ್ತು ಪಕ್ಷದ ಬಲ ಹೆಚ್ಚುತ್ತದೆ ಎಂಬ ಯೋಚನೆ ಬೊಮ್ಮಾಯಿಯವರದ್ದು. ಹೀಗೆ ಅವರು ಸಂಪುಟಕ್ಕೆ ಸೇರಿಸಿಕೊಳ್ಳಲು ಬಯಸಿರುವ ಮೊದಲ ಹೆಸರು ಕೆ.ಎಸ್. ಈಶ್ವರಪ್ಪ ಅವರದು. ಈಶ್ವರಪ್ಪನವರ ಮೇಲೆ ಲಂಚದ ಆರೋಪ ಹೊರಿಸಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡರಲ್ಲ? ಆ ವೇಳೆ ಮಂತ್ರಿ ಪದವಿಗೆ ರಾಜೀನಾಮೆ ಕೊಡಲು ಈಶ್ವರಪ್ಪ ತಯಾರಿರಲಿಲ್ಲ.

ಆದರೆ ವರಿಷ್ಠರ ಸೂಚನೆಯಂತೆ ಈಶ್ವರಪ್ಪ ಬಳಿ ಮಾತನಾಡಿದ ಬೊಮ್ಮಾಯಿ, ‘ಈಗ ರಾಜೀನಾಮೆ ಕೊಡಿ, ತನಿಖೆಯಾಗಿ
ನೀವು ನಿರಪರಾಧಿ ಅಂತ ರಿಪೋರ್ಟು ಬಂದಾಕ್ಷಣ ಮಂತ್ರಿಮಂಡಲಕ್ಕೆ ಸೇರುತ್ತೀರಿ’ ಅಂತ ವಿವರಿಸಿದ್ದರು. ತಾವಷ್ಟೇ
ಹೇಳಿದರೆ ಸಾಲದು ಎನ್ನಿಸಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದಲೂ ಹೇಳಿಸಿದ್ದರು- ‘ನೀವು ಶಾಸ್ತ್ರಕ್ಕೆ
ರಾಜೀನಾಮೆ ನೀಡಿ. ತನಿಖೆಯ ವರದಿ ಬೇಗ ಬರುವಂತೆ ನೋಡಿಕೊಳ್ಳೋಣ. ನೀವು ಮತ್ತೆ ಮಂತ್ರಿಯಾಗ್ತೀರಂತೆ.

ಹಿಂದೆ ಸಿದ್ದರಾಮಯ್ಯ ಕಾಲದಲ್ಲಿ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ ನಡೆದಾಗ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ರಾಜೀನಾಮೆ ಕೊಡುವಂತೆ ಮಾಡಿದ್ದೆವು. ಈಗ ನಿಮ್ಮ ಮೇಲೆ ಆರೋಪ ಬಂದಿದೆ. ರಾಜೀನಾಮೆ ಕೊಡಲ್ಲ ಅಂದ್ರೆ ಪಕ್ಷಕ್ಕೆ ಮುಜುಗರ ಆಗುತ್ತದೆ’ ಎಂದು ಯಡಿಯೂರಪ್ಪ ಹೇಳಿದಾಗ ದಾರಿಗಾಣದೆ ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಆದರೆ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರ ಪಾತ್ರವಿಲ್ಲ ಅಂತ ರಿಪೋರ್ಟು ಬಂದು ಸಾಕಷ್ಟು ಕಾಲವಾಗಿದ್ದರೂ ಅವರಿಗೆ ಮರಳಿ ಮಂತ್ರಿಗಿರಿ ಸಿಕ್ಕಿಲ್ಲ. ಈ ವಿಷಯದಲ್ಲಿ ಈಶ್ವರಪ್ಪ ಅವರಿಗೆ ಸಿಟ್ಟಿರುವುದು ಬೊಮ್ಮಾಯಿ ಮೇಲಲ್ಲ, ಯಡಿಯೂರಪ್ಪ ಅವರ ಮೇಲೆ.

ಕಾರಣ? ಮಂತ್ರಿಮಂಡಲ ವಿಸ್ತರಣೆಗೆ ವರಿಷ್ಠರು ತಯಾರಿದ್ದರೂ ಯಡಿಯೂರಪ್ಪ ಅವರಿಗೆ ಇದು ಇಷ್ಟವಿಲ್ಲ. ಹೀಗಾಗಿ ಅವರು, ‘ವಿಸ್ತರಣೆಗೆ ಇನ್ನೂ ಸ್ವಲ್ಪ ದಿನವಾಗಲಿ’ ಅಂತ ವರಿಷ್ಠರಿಗೆ ಹೇಳಿದ್ದಾರಂತೆ. ಶಿವಮೊಗ್ಗದಲ್ಲಿ ಮೇಲೇಳದಂತೆ ತಮ್ಮನ್ನು ತಡೆಯುವುದು ಯಡಿಯೂರಪ್ಪನವರ ಯೋಜನೆ ಎಂಬುದು ಈಶ್ವರಪ್ಪ ಅವರ ಅನುಮಾನ. ಮುಂದಿನ ವಿಧಾನಸಭಾ ಚುನಾವಣೆ ಕಾಲಕ್ಕೆ ತಾವು ಮಂತ್ರಿಯಾಗಿರಬೇಕು; ಹಾಗಿದ್ದರಷ್ಟೇ ರಾಜಕಾರಣದಲ್ಲಿ ತಮ್ಮ ಪುತ್ರ ಕಾಂತೇಶ್ಗೆ ನೆಲೆ ಕಲ್ಪಿಸಲು
ಸಾಧ್ಯ ಎಂಬುದು ಈಶ್ವರಪ್ಪ ಅವರ ಆಲೋಚನೆ.

ಹೀಗಾಗಿ ಅವರು ಸಂಘ ಪರಿವಾರದ ಬಿ.ಎಲ. ಸಂತೋಷ್, ಮುಕುಂದ್ ಬಳಿ ತಮ್ಮ ದುಮ್ಮಾನ ಹೇಳಿಕೊಂಡಿದ್ದಾರೆ.
ಎಷ್ಟಾದರೂ ಈಶ್ವರಪ್ಪ ‘ಸಂಘಂ ಶರಣಂ ಗಚ್ಛಾಮಿ’ ಬ್ರ್ಯಾಂಡಿನ ನಾಯಕ. ಜತೆಗೆ, ರಾಜ್ಯ ಬಿಜೆಪಿಗೆ ಸವಾಲಾಗಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಕೌಂಟರ್ ಕೊಡಬಲ್ಲ ಮಾತಿನ ಮಲ್ಲ ಎಂಬುದು ಸಂತೋಷ್- ಮುಕುಂದ್ ಜೋಡಿಯ ಆಲೋಚನೆ. ಆದ್ದರಿಂದಲೇ ‘ಈ ವಿಷಯವನ್ನು ಅಮಿತ್ ಶಾ ಗಮನಕ್ಕೆ ತರುತ್ತೇವೆ’ ಅಂತ ಅವರು ಭರವಸೆ ನೀಡಿದ್ದಾರೆ.

ಇಷ್ಟಾದರೂ ತಾವು ಬಯಸಿದ ಬೆಳವಣಿಗೆ ನಡೆಯುವುದಕ್ಕೆ ಯಡಿಯೂರಪ್ಪನವರೇ ಅಡ್ಡಿ ಎಂಬುದು ಈಶ್ವರಪ್ಪನವರ ಅನುಮಾನ. ಅದು ಬಹಿರಂಗ ಸಿಟ್ಟಾಗಿ ಪರಿವರ್ತನೆಯಾಗುವುದು ಬೊಮ್ಮಾಯಿ ಅವರಿಗೆ ಬೇಕಾಗಿಲ್ಲ. ಹೀಗಾಗಿ ಒಮ್ಮೆ ಟ್ರೈ ಮಾಡಿಬಿಡೋಣ ಎಂದು ತೀರ್ಮಾನಿಸಿ ದಿಲ್ಲಿಗೆ ತೆರಳಲು ರೆಡಿಯಾಗುತ್ತಿದ್ದಾರೆ. ಮುಂಬೈ-ಕರ್ನಾಟಕ ಭಾಗದಲ್ಲಿ ಪಕ್ಷದ ಶಕ್ತಿ
ಉಳಿಯಬೇಕೆಂದರೆ ರಮೇಶ್ ಜಾರಕಿಹೊಳಿ ಮರಳಿ ಮಂತ್ರಿಯಾಗಬೇಕು ಮತ್ತು ಯಡಿಯೂರಪ್ಪನವರು ಆತ್ಮತೃಪ್ತಿ
ಯಿಂದ ಚುನಾವಣಾ ಅಖಾಡಕ್ಕೆ ಧುಮುಕಬೇಕೆಂದರೆ ಅವರ ಪುತ್ರ ವಿಜಯೇಂದ್ರ ಮಂತ್ರಿಯಾಗಬೇಕು ಎಂಬುದು
ಬೊಮ್ಮಾಯಿ ಫೀಲಿಂಗು.

ವರಿಷ್ಠರಿಗೆ ಈ ಸಂದೇಶ ಕೊಡಲೆಂದೇ ಅವರು ದಿಲ್ಲಿಗೆ ಹೋಗುತ್ತಿದ್ದಾರೆ. ಅವರಿಚ್ಛೆ ಈಡೇರುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಈ ವಿಷಯ ಬಗೆಹರಿಯುವವರೆಗೆ ಅವರ ತಲೆನೋವು ಕಡಿಮೆ ಯಾಗುವುದಿಲ್ಲ. ಕಾಂಗ್ರೆಸ್‌ನ ‘ಪೇಸಿಎಂ ಅಭಿಯಾನ’
ಬೊಮ್ಮಾಯಿ ಪಾಲಿಗೆ ಮತ್ತೊಂದು ತಲೆನೋವಾಗಿಬಿಟ್ಟಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ತೆಲಂಗಾಣಕ್ಕೆ ಹೋದಾಗ
ಅವರನ್ನು ಸ್ವಾಗತಿಸಿದ್ದು ಬೊಮ್ಮಾಯಿ ಅವರ ಮುಖವೇ. ‘ನಲವತ್ತು ಪರ್ಸೆಂಟ್ ಸಿಎಂ’ ಅಂತ ಬೊಮ್ಮಾಯಿಯವರನ್ನು
ದೂರುವ ಪೋಸ್ಟರುಗಳನ್ನು ನೋಡಿ ಶಾ ಪೆಚ್ಚಾಗಿದ್ದರಂತೆ.

ಪರಿಣಾಮ? ಆಕ್ರೋಶಗೊಂಡ ಬೊಮ್ಮಾಯಿ, ‘ಇದು ಒಕ್ಕೂಟ ವ್ಯವಸ್ಥೆಯ ಸೌಹಾರ್ದತೆಯನ್ನು ಹಾಳುಮಾಡುತ್ತದೆ’ ಎಂದು
ಎಚ್ಚರಿಸಿದ್ದರು. ಆದರೆ ಇದೀಗ ರಾಜ್ಯದ ಕಾಂಗ್ರೆಸ್ ನಾಯಕರು ಬೊಮ್ಮಾಯಿ ಅವರನ್ನು ಭ್ರಷ್ಟ ಅಂತ ಗುರುತಿಸುವ ಪೇಸಿಎಂ
ಅಭಿಯಾನ ಆರಂಭಿಸಿ ಮುಜುಗರ ತಂದೊಡ್ಡಿದ್ದಾರೆ. ಮುಖ್ಯಮಂತ್ರಿಗಳಾದವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊಸತೇನಲ್ಲ. ಕೆಂಗಲ್ ಹನುಮಂತಯ್ಯ ಅವರನ್ನು, ವಿಧಾನಸೌಧದ ನಿರ್ಮಾಣಕಾರ್ಯದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಸುತ್ತುವರಿದಿತ್ತು.

ಮುಂದೆ ನಿಜಲಿಂಗಪ್ಪನವರು ಶರಾವತಿ ಕರ್ಮಕಾಂಡದ ಆರೋಪಕ್ಕೆ ಸಿಲುಕಿದರೆ, ರಾಮಕೃಷ್ಣ ಹೆಗಡೆಯವರನ್ನು ಬಾಟ್ಲಿಂಗ್,
ರೇವಜಿತು ಹಗರಣಗಳು ಆವರಿಸಿದ್ದವು. ಬಂಗಾರಪ್ಪ ಕ್ಲಾಸಿಕ್ ಕಂಪ್ಯೂಟರ್ ಹಗರಣದ ಆರೋಪವನ್ನು ನೆತ್ತಿಯ ಮೇಲೆ
ಹೊತ್ತರೆ, ದೇವೇಗೌಡರು ಕೃಷ್ಣಾ ಮೇಲ್ದಂಡೆ ಯೋಜನೆಯ ತುಂಡುಗುತ್ತಿಗೆ ಹಗರಣಕ್ಕೆ ಸಿಲುಕಿಕೊಂಡಿದ್ದರು. ಯಡಿಯೂರಪ್ಪ ಚೆಕ್ ರೂಪದಲ್ಲಿ ಲಂಚ ಪಡೆದರು ಎಂಬುದೂ ಸೇರಿದಂತೆ ಹಲವು ಆರೋಪಗಳಿಗೆ ಗುರಿಯಾದರೆ, ಸಿದ್ದರಾಮಯ್ಯ ‘ರೀ ಡೂ’ ಹಗರಣದ ಜಾಲಕ್ಕೆ ಸಿಲುಕಿದ್ದರು.

ಇಂಥ ಎಲ್ಲ ಆರೋಪಗಳ ಹಿಂದೆ ನಿರ್ದಿಷ್ಟ ವಿಷಯವಾದರೂ ಇತ್ತು. ಆದರೆ ಬೊಮ್ಮಾಯಿ ವಿರುದ್ಧದ ಪೇಸಿಎಂ ಆರೋಪಕ್ಕೆ ಒಂದು ನಿರ್ದಿಷ್ಟ ದಾಖಲೆಯೂ ಇಲ್ಲ. ಆದರೂ ಆ ವಿವಾದ ರಾಜ್ಯದ ಗಡಿದಾಟಿ, ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಹೋಗಲಿ, ಇಂಥ ಆರೋಪಕ್ಕೆ ಪುಷ್ಟಿ ನೀಡುವಂಥ ಬೆಳವಣಿಗೆಗಳು ನಡೆದಿದ್ದರೆ ಅದರಲ್ಲಿ ಹಲವರ ಪಾತ್ರವಿದೆ. ಆದರೆ ಇದರ
ಘಾಟನ್ನು ಮಾತ್ರ ಬೊಮ್ಮಾಯಿ ಒಬ್ಬರೇ ಅನುಭವಿಸುತ್ತ ಕೊರಗುವಂತಾಗಿದೆ. ಇದು ಲಿಂಗಾಯತರಿಗೆ ಮಾಡಿದ ಅಪಮಾನ ಅಂತ ಬಿಜೆಪಿ ಬಾಂಬು ಎಸೆದರೂ, ನೆಲಕ್ಕಪ್ಪಳಿಸುತ್ತಿದ್ದಂತೆಯೇ ಅದು ‘ಟುಸ್’ ಆಗಿದೆ.

ತಾವು ಬಯಸದ ಹಲವು ಬೆಳವಣಿಗೆಗಳು ಬೊಮ್ಮಾಯಿ ನೆಮ್ಮದಿ ಕೆಡಿಸಿವೆ. ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ
ನಾರಾಯಣ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವಿನ ಸಂಘರ್ಷ ಇದಕ್ಕೊಂದು ಉದಾಹರಣೆ. ಒಂದು ಸಾರ್ವಜನಿಕ ಟ್ರಸ್ಟ್ ಆಗಿರುವ ಬಿಎಂಎಸ್ ಟ್ರಸ್ಟ್ ಅನ್ನು ಖಾಸಗಿ ಟ್ರಸ್ಟ್ ಆಗಿ ಪರಿವರ್ತಿಸಲು ಅಶ್ವತ್ಥ ನಾರಾಯಣ್ ಮುಂದಾಗಿದ್ದು, ಇದರಲ್ಲಿ ದೊಡ್ಡಮಟ್ಟದ ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂಬುದು ಕುಮಾರಸ್ವಾಮಿ ಅವರ ಆರೋಪ.

ಇದಕ್ಕೆ ಪ್ರತಿಯಾಗಿ ಅಶ್ವತ್ಥ ನಾರಾಯಣ್ ಕೂಡ ದೊಡ್ಡಮಟ್ಟದಲ್ಲಿ ತಿರುಗಿಬಿದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಶ್ವತ್ಥ ನಾರಾಯಣ್ ಎಲ್ಲರನ್ನೂ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಸ್ವಲ್ಪ ಸಾಫ್ಟ್ ಆಗಿ ಹೋದರೆ ನಿಭಾಯಿಸಬಹುದಾದ ವಿಷಯಗಳನ್ನು ಅಗ್ರೆಸಿವ್ ಆಗಿ ವರ್ತಿಸುವ ಮೂಲಕ ವೈರಿಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರು ಇಡುತ್ತಿರುವ ಹೆಜ್ಜೆಯ ಹಿಂದೆ ಒಂದು ಟೆಕ್ನಿಕ್ಕು ಇದೆ.

ಅದೆಂದರೆ, ಹಳೆ ಮೈಸೂರಿನಲ್ಲಿ ಒಕ್ಕಲಿಗ ನಾಯಕರಾಗಿ ತಾವು ಹೊರಹೊಮ್ಮಬೇಕಾದರೆ ದೇವೇಗೌಡರ ಕುಟುಂಬವನ್ನು ಎದುರುಹಾಕಿಕೊಳ್ಳಲೇಬೇಕು ಎಂಬುದು. ಹಿಂದೆ ಇಂಥದೇ ಕಾರಣಗಳಿಗಾಗಿ ಅವರು ‘ಡಿಕೆ’ ಪಾಳೇಪಟ್ಟಿನ ವಿರುದ್ಧ ತಿರುಗಿಬಿದ್ದಿದ್ದರು. ಆದರೆ ಇದರಿಂದ ತುಂಬ ಲಾಭವಿಲ್ಲ ಎಂಬುದು ಅವರಿಗೆ ಮನವರಿಕೆ ಆಗಿದೆ. ಏಕೆಂದರೆ, ಕನಕಪುರ ಬಿಟ್ಟು ಉಳಿದೆಡೆ ಡಿಕೆ ಪಾಳೇಪಟ್ಟಿನ ವಿರುದ್ಧದ ಕೂಗಿಗೆ ವಿರೋಧ ವ್ಯಕ್ತವಾಗುತ್ತಿಲ್ಲ. ವಿರೋಧದ ಧ್ವನಿಗಳು ಹೆಚ್ಚಿದ್ದರೆ ತಾನೇ ತಮ್ಮ ಪರವಾದ ಧ್ವನಿಗಳು ಮೇಲೆದ್ದು ನಿಲ್ಲುವುದು? ಹೀಗಾಗಿ ಡಿಕೆ ಪಾಳೇಪಟ್ಟಿನ ವಿರುದ್ಧ ಕೂಗುಹಾಕಿದರೆ ಒಕ್ಕಲಿಗ ನಾಯಕತ್ವಕ್ಕೆ ಲಗ್ಗೆಹಾಕುವ ಗುರಿ ಈಡೇರುವುದಿಲ್ಲ.

ಅದೇ ಕಾಲಕ್ಕೆ ಕುಮಾರಸ್ವಾಮಿ ವಿರುದ್ಧ ಕೂಗುಹಾಕಿದರೆ ಹಳೆ ಮೈಸೂರಿನ ಎಲ್ಲ ಭಾಗಗಳಲ್ಲಿ ವಿರೋಧದ ಧ್ವನಿ ಕೇಳುತ್ತದೆ. ಹೀಗಾಗಿ ತಮ್ಮ ಪರವಾದ ಧ್ವನಿಗಳನ್ನು ಕ್ರೋಡೀಕರಿಸಿಕೊಳ್ಳಬಹುದು ಎಂಬುದು ಅಶ್ವತ್ಥ ನಾರಾಯಣ್ ಅವರಿಗೆ ಪಕ್ಕಾ ಆಗಿದೆ. ಅಡ್ಜಸ್ಟ್‌ಮೆಂಟ್ ರಾಜಕಾರಣಕ್ಕೆ ಗೆಳೆಯರು ಜಾಸ್ತಿ ಇರಬಹುದು. ಆದರೆ ನಾಯಕತ್ವ ಬೇಕೆಂದರೆ ಅಗ್ರೆಸಿವ್ ರಾಜಕಾರಣ ಬೇಕೇ ಬೇಕು ಎಂಬುದು ಅಶ್ವತ್ಥ ನಾರಾಯಣ್ ಲೆಕ್ಕಾಚಾರ. ಆ ದೃಷ್ಟಿಯಿಂದ ನೋಡಿದರೆ ಅವರು ರಾಜ್ಯ ಬಿಜೆಪಿಯ ಪ್ರಮುಖ ಒಕ್ಕಲಿಗ ನಾಯಕರಾಗಿ ಹೊರಹೊಮ್ಮುವ ಕಾಲ ದೂರವಿದ್ದಂತೆ ಕಾಣುತ್ತಿಲ್ಲ.

ಅವರು ತಿರುಗಿಬಿದ್ದಿರುವುದರಿಂದ ಕುಮಾರಸ್ವಾಮಿ ಸಾಮ್ರಾಜ್ಯ ತಕ್ಷಣ ಅಲುಗಾಡುವುದಿಲ್ಲ; ಆದರೆ ಈ ಬೆಳವಣಿಗೆ ದೂರಗಾಮಿ ನೆಲೆಯಲ್ಲಿ ಅಶ್ವತ್ಥ ನಾರಾಯಣ್ ಅವರಿಗೆ ಲಾಭ ತಂದುಕೊಡುವುದಂತೂ ನಿಶ್ಚಿತ. ಆದರೆ ಇವತ್ತಿನ ದೃಷ್ಟಿ ಯಿಂದ ಬಸವರಾಜ ಬೊಮ್ಮಾಯಿ ಅವರಿಗೆ ಕುಮಾರಸ್ವಾಮಿ-ಅಶ್ವತ್ಥ ನಾರಾಯಣ್ ನಡುವಿನ ಕದನ ಬೇಕಾಗಿಲ್ಲ. 2023ರಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಸ್ಥಿತಿ ಬಂದರೆ ತಮಗೆ ಜೆಡಿಎಸ್ ಬೆಂಬಲ ಬೇಕೇ ಬೇಕು ಎಂಬುದು ಅವರ ಆಲೋಚನೆ. ಹೀಗಾಗಿ ಜೆಡಿಎಸ್ ಜತೆಗಿನ ಸಂಬಂಧ ಉಳಿಸಿಕೊಳ್ಳಲು ಅವರು ಹೆಣಗುತ್ತಿದ್ದಾರೆ.

ಆದರೆ ಸನ್ನಿವೇಶ ಅವರಂದುಕೊಂಡಂತೆ ನಡೆಯಬೇಕಲ್ಲ? ಅದು ತಾವು ಬಯಸಿದಂತೆ ನಡೆಯುತ್ತಿಲ್ಲ ಎಂಬುದೇ
ಬೊಮ್ಮಾಯಿಯವರಿಗೆ ಚಿಂತೆಯಾಗಿಹೋಗಿದೆ.