Wednesday, 27th November 2024

ಕೊರಟಗೆರೆ ಪರ್ತಕರ್ತರ ಮೇಲಿನ ಹಲ್ಲೆ, ಸುಳ್ಳು ಪ್ರಕರಣ ಖಂಡಿಸಿ ಪ್ರತಿಭಟನೆ

ತಿಪಟೂರು : ಕೊರಟಗೆರೆ ಪರ್ತಕರ್ತನ ಮೇಲೆ ಸುಳ್ಳು ದೂರು ನೀಡಿದ ಸರ್ಕಾರಿ ಆಸ್ಪತ್ರೆ ವೈದ್ಯ ಹಾಗೂ ಮೊಕದ್ದಮೆ ದಾಖಲಿಸಿ ಕೊಂಡ ಪಿಎಸ್‌ಐರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿ ಕಾರ್ಯನಿರತ ಪರ್ತಕರ್ತರ ಸಂಘದ ತಿಪಟೂರು ತಾಲ್ಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ನೀಡಿದ್ದಾರೆ.

ನಗರದ ಮಿನಿವಿಧಾನಸೌಧದ ಬಳಿಯಲ್ಲಿ ಬುಧವಾರ ಕಾರ್ಯನಿರತ ಪರ್ತಕರ್ತರ ಸಂಘದ ತಿಪಟೂರು ತಾಲ್ಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಕಲ್ಪಶ್ರೀ ಹಾಗೂ ತಹಶೀಲ್ದಾರ್ ಆರ್.ಜೆ.ಚಂದ್ರಶೇಖರ್ ಮುಖಾಂತರ ರಾಜ್ಯಸರ್ಕಾರದ ಮುಖ್ಯಮಂತ್ರಿಗಳಿಗೆ, ಗೃಹಸಚಿವರಿಗೆ ಹಾಗೂ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ್ ಕರೀಕೆರೆ ಮಾತನಾಡಿ ಕೊರಟಗೆರೆಯಲ್ಲಿ ಸ್ಥಳೀಯರು ಮಾಹಿತಿಯ ಮೇರೆಗೆ ಸುದ್ದಿ ಮಾಡಲು ಆಸ್ಪತ್ರೆಗೆ ತೆರಳಿದ್ದ ಪರ್ತಕರ್ತನ ಮೊಬೈಲ್‌ನ್ನು ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವೈದ್ಯ ನವೀನ್ ಹಾಗೂ ಸುಳ್ಳು ಪ್ರಕರಣ ದಾಖಲಿಸಿದ ಪಿಎಸ್‌ಐ ನಾಗರಾಜ್‌ರನ್ನು ಸೇವೆಯಿಂದ ಅಮಾನತ್ತು ಮಾಡಬೇಕು.

ಸಮಾಜದ ಅನ್ಯಾಯಗಳನ್ನು ತಿದ್ದುವಂತಹ ಪರ್ತಕರ್ತರು ಹಾಗೂ ಮಾಧ್ಯಮ ಪ್ರತಿನಿಧಿ ಗಳ ಮೇಲೆ ಪದೇ ಪದೇ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆಯoತಹ ಪ್ರಕರಣಗಳು ನಡೆಯುತ್ತಿರುವುದು ವಿಷಾದಕರ ಸಂಗತಿ. ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುವವರ ಮೇಲಿನ ಹಲ್ಲೆಗಳು ಸಮಾಜ ದಲ್ಲಿ ಸಾಮಾನ್ಯ ಜನರು ಜೀವನ ನಿರ್ವಹಣೆ ಮಾಡುವುದು ಭಯವನ್ನುಂಟು ಮಾಡುವಂತಾಗುತ್ತದೆ. ರಾಜ್ಯಸರ್ಕಾರ ಈಗಲಾದರೂ ಪರ್ತಕರ್ತರಿಗೆ ರಕ್ಷಣೆ ನೀಡುವ ಕಾರ್ಯವನ್ನು ಮಾಡಬೇಕಿದೆ. ಗೃಹ ಸಚಿವರು ಸೂಕ್ತ ಕಾನೂನು ಜಾರಿಗೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.

ತುಮಕೂರು ಕಾರ್ಯನಿರತ ಪರ್ತಕರ್ತರ ಸಂಘದ ಉಪಾಧ್ಯಕ್ಷ ಕೃಷ್ಣ ಮಾತನಾಡಿ ನೈಜ ಪರ್ತಕರ್ತ ಸಮಾಜವನ್ನು ತಿದ್ದುವ ಪ್ರಮಾಣಿಕ ಪ್ರಯತ್ನದಲ್ಲಿರುವಾಗ ಇಂತಹ ಘಟನೆಗಳು ಸಾಮಾನ್ಯ. ಆದರೆ ಸಮಸ್ಯೆಗಳನ್ನು ಬೆಳಕಿಗೆ ತರುವಾಗ ಪರ್ತಕರ್ತರಿಗೂ ರಕ್ಷಣೆಯ ಅಗತ್ಯವಿದೆ. ಸರ್ಕಾರ ಕೂಡಲೇ ಪರ್ತಕರ್ತರ ರಕ್ಷಣೆಗೆ ಮುಂದಾಗಬೇಕು. ಜೊತೆಗೆ ಈ ಪ್ರಕರಣದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡು ಅಮಾನತ್ತು ಮಾಡಲೇಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ತುಮಕೂರು ಕಾರ್ಯನಿರತ ಪರ್ತಕರ್ತರ ಸಂಘದ ನಿರ್ದೇಶಕ ಹಾಲ್ಕುರಿಕೆ ಮಂಜುನಾಥ್, ಮಂಜುನಾಥ್, ತಾಲ್ಲೂಕು ಉಪಾಧ್ಯಕ್ಷ ಬಿ.ರವೀಂದ್ರ ಕುಮಾರ್, ಕಾರ್ಯದರ್ಶಿ ಡಿ.ಕುಮಾರ್, ಎನ್.ಭಾನುಪ್ರಶಾಂತ್, ಉಜ್ಜಜ್ಜಿ ರಾಜಣ್ಣ, ಆನಂದ್, ಎಚ್.ಬಿ.ಸುಪ್ರತೀಕ್, ಎ.ಆರ್.ಕುಮಾರಸ್ವಾಮಿ, ಟಿ.ಸಿ.ಎಸ್.ಮೂರ್ತಿ, ದಯಾನಂದ, ಕಿರಣ್, ಮನೋಹರ್ ರಂಗಾಪುರ, ನಾಗರಾಜು, ಸೋಮಶೇಖರ್ ಇದ್ದರು.