ಮಧುಗಿರಿ: ಮಧುಗಿರಿ ತೀರಾ ಹಿಂದುಳಿದ ಪ್ರದೇಶವಾಗಿದ್ದು, ಶಿಕ್ಷಣದಿಂದ ಮಾತ್ರ ಅಭಿ ವೃದ್ದಿ ಸಾಧ್ಯವಾಗಿದೆ. ಇದಕ್ಕೆ ಪೂರಕ ವಾಗಿ ಮಧುಗಿರಿ ಜಿಲ್ಲೆಯಾದರೆ ಎಲ್ಲಾ ಸೌಲಭ್ಯಗಳು ಬರಲಿದ್ದು ಅದು ಕುಮಾರಸ್ವಾಮಿಯವರಿಂದ ಮಾತ್ರ ಸಾಧ್ಯವೆಂದು ಶಾಸಕ ಎಂ.ವಿ.ವೀರ ಭದ್ರಯ್ಯ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಶ್ರಾವಂಡನಹಳ್ಳಿಯಲ್ಲಿನ ಅಲ್ಪ ಸಂಖ್ಯಾತರ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೨.೪ ಕೋಟಿ ರೂ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಧುಗಿರಿ ವ್ಯವಸಾಯವನ್ನೇ ನಂಬಿ ಬದುಕುತ್ತಿರುವ ಕ್ಷೇತ್ರ. ಇಲ್ಲಿನ ಮಕ್ಕಳಿಗೆ ಶಿಕ್ಷಣದ ಹೊರತು ಯಾವುದೇ ಕೈಗಾರಿಕೆ ಶಾಶ್ವತ ನೀರಾವರಿ ಯೋಜನೆಗಳಿಲ್ಲ.
ಈ ಕ್ಷೇತ್ರ ಸರ್ವತೋಮುಖ ಅಭಿವೃದ್ದಿಯಾಗಬೇಕಾದರೆ. ಜಿಲ್ಲಾ ಕೇಂದ್ರವಾಗಲೇ ಬೇಕು. ಈ ವಿಚಾರವನ್ನು ಸದನದಲ್ಲಿ ಒತ್ತಾಯಿಸಿದ್ದೇನೆ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ವಿಶ್ವಾಸವಿದ್ದು, ಅವರಿಂದಲೇ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಿಸಿಯೇ ಸಿದ್ದ ಎಂದು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪರೋಕ್ಷವಾಗಿ ಸುಳಿವು ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡ ತುಂಗೋಟಿ ರಾಮಣ್ಣ, ಹೋಬಳಿ ಅಧ್ಯಕ್ಷ ನರಸಿಂಹರೆಡ್ಡಿ, ಗ್ರಾ.ಪಂ ಸದಸ್ಯ ರಾದ ಸುರೇಶ್, ಸಯ್ಯದ್ ಗೌಸ್, ಪ್ರಾಂಶುಪಾಲ ಮರುಳ ಸಿದ್ದೇಶ್ವರ, ಇಂಜಿನಿಯರ್ ಮಹದೇವ್, ಮುಖಂಡರುಗಳಾದ ರವಿ, ನಾಸಿರ್, ಜಬಿ ಉಲ್ಲಾ ಹಾಗೂ ಮುಂತಾದವರು ಇದ್ದರು.