Sunday, 5th January 2025

ಬಯ್ಗಳಗಳ ಮನರಂಜನೆ ಏಕೆ?

ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪ ಸರ್ವೇ ಸಾಮಾನ್ಯ. ಅದರಲ್ಲಿಯೂ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಈ ವಾಕ್ಸಮರ ತಾರಕಕ್ಕೇರುವುದನ್ನು ನೋಡಬಹುದು. ರಾಜಕೀಯ ಮಾಡುವಾಗ ಈ ರೀತಿ ಕೆಸರೆರಚಾಟಗಳು ಸಾಮಾನ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಆದರೆ ಈ ರೀತಿ ವಾಕ್ಸಮರದ ನಡುವೆ, ನಾಲಗೆ ‘ಎಲ್ಲೆ’ ಮೀರಬಾರದು. ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿರುವುದು ಇಂತಹ ಸಭ್ಯ ವಿಷಯದಲ್ಲಿಯೇ. ರಾಜಕೀಯವಾಗಿ ದ್ವೇಷ ಎಷ್ಟೇ ಇದ್ದರೂ, ಅದು ವೈಯಕ್ತಿಕ ಟೀಕೆಗೆ ಅಥವಾ ಸಭ್ಯತೆಯ ಎಲ್ಲೆಯನ್ನು ಮೀರುವ ಹಂತಕ್ಕೆ ಹೋಗುವುದು ತೀರಾ ಕಡಿಮೆ. ನೆರೆ ರಾಜ್ಯ ತಮಿಳುನಾಡು, ಆಂಧ್ರ ಪ್ರದೇಶದ ರೀತಿಯಲ್ಲಿ ಇಲ್ಲಿ ಪ್ರತಿಪಕ್ಷಗಳ ಮುಖಂಡರು ಎಂದ ಮಾತ್ರಕ್ಕೆ, ವಿರೋಧಿಗಳ ರೀತಿಯಲ್ಲಿಯೇ ಇರುವುದಿಲ್ಲ.

ಬದಲಿಗೆ, ರಾಜಕೀಯ ಹಾಗೂ ವೈಯಕ್ತಿಕ ಸ್ನೇಹವನ್ನು ಭಿನ್ನವಾಗಿ ನೋಡುವುದಿದೆ. ಸಿದ್ದರಾಮಯ್ಯ, ಯಡಿಯೂರಪ್ಪ ಅವರು ರಾಜಕೀಯ ವಾಗಿ, ಸೈದ್ಧಾಂತಿಕವಾಗಿ ಒಬ್ಬರನ್ನು ಒಬ್ಬರು ವಿರೋಧಿಸಬಹುದು. ಆದರೆ ರಾಜಕೀಯ ಮೀರಿದ ಸ್ನೇಹ ಅವರಿಬ್ಬ ರಲ್ಲಿಯೂ ಇದೆ. ಕೇವಲ ಇವರಿಬ್ಬರೇ ಅಲ್ಲ, ಸಿದ್ದರಾಮಯ್ಯ ದೇವೇಗೌಡ, ದೇವೇಗೌಡ- ಯಡಿಯೂರಪ್ಪ ಸೇರಿದಂತೆ ಅನೇಕರಲ್ಲಿ ಈ ರೀತಿ ರಾಜಕೀಯ ಮೀರಿದ ಸ್ನೇಹವಿದೆ. ಇಂತಹ ಸಭ್ಯ ಸಂಸ್ಕೃತಿಯನ್ನು ಹೊಂದಿರುವ ಕರ್ನಾಟಕದಲ್ಲಿ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿರುವ ರಾಜಕೀಯ ಕೆಸರೆರಚಾಟ ಸಭ್ಯತೆಯನ್ನು ಮೀರಿದಂತೆ ಭಾಸವಾಗುತ್ತಿದೆ.

ರಾಜಕೀಯ ನಾಯಕರು, ಅದರಲ್ಲಿಯೂ ದಶಕಗಳ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡರು, ಅವರ ವಯಸ್ಸು ಹಾಗೂ ಅನುಭವಕ್ಕೆ ತಕ್ಕ ಮಾತುಗಳನ್ನು ಆಡದಿರುವುದು ಕೆಟ್ಟ ಪರಂಪರೆ ಎಂದರೆ ತಪ್ಪಾಗುವುದಿಲ್ಲ. ಅದರಲ್ಲಿ ಮುಖ್ಯಮಂತ್ರಿ ಗಳಾಗಿದ್ದವರು, ಪಕ್ಷಗಳ ರಾಜ್ಯಾಧ್ಯಕ್ಷರಾಗಿದ್ದವರು, ‘ಬಚ್ಚಾ’, ‘ತಲೆತಿರುಕ’, ‘ಧಮ್’ ಎನ್ನುವ ಪದಗಳನ್ನು ಉಪಯೋಗಿಸು ವುದು ಉತ್ತಮ ಬೆಳವಣಿಗೆಯಲ್ಲ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನುವ ಬದಲು ಎಲ್ಲ ಪಕ್ಷಗಳ ನಾಯಕರು ಇಂತಹ ಸಂಸ್ಕೃತಿಯನ್ನು ಮುಂದವರಿಸುವುದು ರಾಜ್ಯದ ಮಟ್ಟಿಗೆ ಉತ್ತಮ ಬೆಳವಣಿಗೆ ಯಲ್ಲ. ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವಾಗ ಇಂಥ ಆರೋಪ, ಪ್ರತ್ಯಾರೋಪಗಳ ಬದಲು ಜನೋಪಯೋಗಿ ವಿಷಯಗಳ ಚರ್ಚೆಗೆ ನಾಯಕರೆನಿಸಿಕೊಂಡವರು ಆದ್ಯತೆ ನೀಡಬೇಕಿದೆ. ರಾಜ್ಯದ ಸಮಸ್ಯೆಗಳು, ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು, ಇಲಾಖಾವಾರು ಸುಧಾರಣೆಗಳ ಬಗೆಗೆ ಯಾರೊಬ್ಬರೂ ಮಾತನಾಡುತ್ತಿಲ್ಲ.

ಪ್ರತಿಪಕ್ಷಗಳ ಮುಖಂಡ ರೆನಿಸಿಕೊಂಡಿರುವವರು, ನೀರಾವರಿ, ಆಡಳಿತ ಸುಧಾರಣೆ, ಗ್ರಾಮೀಣಾಭಿವೃದ್ಧಿ, ಲೋಕೋಪ ಯೋಗಿ, ಆರ್ಥಿಕ ಕ್ಷೇತ್ರಗಳಲ್ಲಿನ ವೈಫಲ್ಯ ಅಥವಾ ಲೋಪಗಳನ್ನಿಟ್ಟುಕೊಂಡು ಚರ್ಚೆ ಹುಟ್ಟು ಹಾಕಬೇಕಿದೆ. ಬಹುಶಃ ಜನರಿಗೆ ಇವು ಅರ್ಥವಾಗುವುದಿಲ್ಲ, ಸ್ಪಂದನೆ ದೊರೆಯುವುದಿಲ್ಲ ಎಂಬ ‘ಪೂರ್ವಗ್ರಹಕ್ಕೆ’ ನಾಯಕರುಗಳು ಒಳಪಟ್ಟಿದ್ದಾರೆನಿಸುತ್ತಿದೆ. ತಾವು ಅಽಕಾರಕ್ಕೆ ಬಂದರೆ ರಾಜ್ಯವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತೇವೆಂಬ ಬಗ್ಗೆ ಯಾವ ಪಕ್ಷಗಳವರೂ ಹೇಳುತ್ತಲೇ ಇಲ್ಲ. ಕೇವಲ ಬಯ್ಗಳಗಳ ಮೂಲಕ ಮತದಾರರಿಗೆ ಮನರಂಜನೆ ನೀಡುವಲ್ಲಿ ನಿರತರಾಗಿರುವುದು ದುರಂತ.