ತುಮಕೂರು: ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಅವರು ಮಹಿಳೆಯರಿಗೆ ಎಂದೆAದಿಗೂ ಪ್ರೇರಣೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ವೀರಶೈವ ಮಹಾಸಭಾ, ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ, ಬಸವ ಸೇವಾ ಸಮಿತಿ, ಮೈತ್ರಿ ಮಹಿಳಾ ಸಮಾಜ, ಕದಳಿ ವೇದಿಕೆ ವತಿಯಿಂದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ, ವೀರ ರಾಣಿ ಚನ್ನಮ್ಮನವರು ಪರಕೀಯರ ವಿರುದ್ಧ ಹೋರಾಡಿ ಸಾಹಸ ಮೆರೆದು ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಸರ್ಕಾರವು ಮುಂದಿನ ದಿನಗಳಲ್ಲಿ ಈ ಜಯಂತಿ ಯನ್ನು ಇನ್ನಷ್ಟು ವಿಜೃಂಭಣೆಯಾಗಿ ಆಚರಿಸಿ, ಇವರ ಸಾಧನೆಗಳನ್ನು ಜನರಿಗೆ ಮನಮುಟ್ಟುವ ರೀತಿಯಲ್ಲಿ ತಿಳಿಸಬೇಕು ಎಂದು ತಿಳಿಸಿದರು.
ಮಹಿಳಾ ಚಿಂತಕಿ ಬಿ.ಸಿ. ಶೈಲಾ ನಾಗರಾಜ್ ಮಾತನಾಡಿ ರಾಣಿ ಚನ್ನಮ್ಮರಂತಹ ಧೀಮಂತ ಮಹಿಳೆಯರ ಜಯಂತ್ಯುತ್ಸವಗಳನ್ನು ಆಚರಿಸುವುದರ ಮೂಲಕ ಜನಸಾಮಾನ್ಯರಿಗೆ ಇವರ ಸಾಹಸಗಾಥೆಗಳನ್ನು ತಿಳಿಸಿಕೊಡ ಬೇಕಿದೆ ಎಂದು ತಿಳಿಸಿದರು.
ಕರ್ಯಕ್ರಮದಲ್ಲಿ ವೀರಶೈವ ಬ್ಯಾಂಕಿನ ಆಡಳಿತ ಮಂಡಳಿಯ ಪದಾಧಿಕಾರಿಗಳು, ಜಿಲ್ಲಾ ಕಿತ್ತೂರು ರಾಣಿ ಪ್ರಶಸ್ತಿ ವಿಜೇತರಾದ ಲಲಿತಮ್ಮ, ಅನ್ನಪೂರ್ಣಮ್ಮ, ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಿ.ವಿ. ಸುರೇಶ್ ಕುಮಾರ್, ರಾಜೇಶ್, ಬಿ.ಆರ್.ರಾಜೇಗೌಡ, ದರ್ಶನ್, ಇತರರು ಉಪಸ್ಥಿತರಿದ್ದರು.