Tuesday, 3rd December 2024

ಪ್ರತಿರೋಧ ಎದುರಿಸಬೇಕಾದೀತು ಚೀನಾ!

ದಾಸ್ ಕ್ಯಾಪಿಟಲ್

ಟಿ. ದೇವಿದಾಸ್ ಬರಹಗಾರ, ಶಿಕ್ಷಕ

ನದಿನೀರಿನ ವಿಷಯದಲ್ಲಿ ಚೀನಾ ಎರಡು ಬಗೆಯ ಮಾರ್ಗಗಳನ್ನು ಅನುಸರಿಸುತ್ತದೆ. ಒಂದು, ಕೃತಕ ಸರೋವರಗಳನ್ನು ನಿರ್ಮಿಸುವುದರ ಮೂಲಕ, ಡ್ಯಾಾಂಗಳನ್ನು ಕಟ್ಟಿ ನೀರಿನ ವೇಗವನ್ನು ನಿಯಂತ್ರಿಸುವುದರ ಮೂಲಕ ನದಿನೀರನ್ನೇ ಹಿಡಿದಿಟ್ಟುಕೊಳ್ಳುವುದು. ಎರಡನೆಯದು, ನೀರಿನ ಚಲಿಸುವ ಪಥವನ್ನೇ ಬದಲಿಸುವುದು. ಹಿಂದೊಮ್ಮೆ, ಸತ್ಲೆಜ್  ಮತ್ತು ಯಾರ್ಲುಂಗ್ ನದಿಗೆ ಕೃತಕ ಸರೋವರಗಳನ್ನು ಕಟ್ಟಿ ಅದು ಒಡೆದದ್ದರಿಂದ 2000ರಲ್ಲಿ ಹಿಮಾಚಲ, ಅರುಣಾಚಲ ಪ್ರದೇಶಗಳಲ್ಲಿ ಜಲಸ್ಫೋಟ ಉಂಟಾಗಿ, ಜನಜೀವನವೇ ನಿಂತುಹೋಗಿ ಹಲವರು ಜಲಸಮಾಧಿಯಾಗಿ, ಭಾರತಕ್ಕೆ ಸುಮಾರು 300 ಕೋಟಿಯಷ್ಟು ನಷ್ಟ ಉಂಟಾಗಿತ್ತು. ತನ್ನ ದೇಶದಿಂದ ಹೊರಹೋಗುವ ಎಲ್ಲಾ ನದಿಗಳಿಗೂ ಚೀನಾ ಸಣ್ಣ, ಮಧ್ಯಮ, ದೊಡ್ದದು ಅಂತ ಸುಮಾರು 85000 ಡ್ಯಾಾಂಗಳನ್ನು ಕಟ್ಟಿದೆ. ಡ್ಯಾಾಂಗಳನ್ನು ಕಟ್ಟುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದ ಮಾವೋನಿಂದ ಬಂದ ಹುಚ್ಚಿದು. 23 ದೇಶಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಚೀನಾ ಎಲ್ಲರೊಂದಿಗೂ ನದಿಯ ವಿಚಾರದಲ್ಲಿ ದುರಹಂಕಾರಿಯಾಗಿ ವರ್ತಿಸುತ್ತಲೇ ಇದೆ. ನದಿ ಮತ್ತು ಗಡಿವಿಚಾರದಲ್ಲಿ ಬಿಗಿಯಾದ ಅನ್ಯಾಯದ ಮಾರ್ಗವನ್ನೇ ತುಳಿಯುವುದು ಅದರ ಹುಟ್ಟುಗುಣ. ವಿರೋಧಿಸಿದರೆ ಆಕ್ರಮಣದ ಭಯವನ್ನು ಹೆಚ್ಚಿಸಿ ಹಬ್ಬಿಸಿ, ಏಷ್ಯಾದಲ್ಲಿ ತಾನೇ ಸೂಪರ್ ಪವರ್ ಎಂತಲೂ, ಅಷ್ಟೇಕೆ ವಿಶ್ವದಲ್ಲೇ ಪರಮ ಸಾರ್ವಭೌಮ ಎನಿಸಲು ಯಾವ ಬಗೆಯ ಹಠ, ಅಹಂಕಾರ, ನರಿ, ಶಕುನಿ ಮತ್ತು ಮೊಂಡು ಬುದ್ಧಿಯನ್ನೂ ಅದು ಪ್ರದರ್ಶಿಸುತ್ತದೆ. ಅದರಲ್ಲೂ ಭಾರತದೊಂದಿಗೆ ಮಾತ್ರ 1949ರಿಂದಲೂ ಅಂದರೆ ಕಮ್ಯುನಿಷ್ಟರು ಆಡಳಿತ ನಡೆಸಲು ಆರಂಭಿಸಿದಂದಿನಿಂದಲೂ ಎಷ್ಟು ಸಾಧ್ಯವೋ ಅಷ್ಟೂ ಬಗೆಯಲ್ಲಿ ದುಷ್ಟತನವನ್ನು ಪ್ರದರ್ಶಿಸುತ್ತಲೇ ಇದೆ.

ಬ್ರಹ್ಮಪುತ್ರ ವಿಶ್ವದ ದೊಡ್ಡ ನದಿಗಳಲ್ಲಿ 10ನೆಯ ಸ್ಥಾನದಲ್ಲಿದೆ. ಯಾರ್ಲುಂಗ್ ತ್ಸಾಾಂಗ್ ಬೊ ಎಂದೇ ಪ್ರಸಿದ್ಧವಾದ ಇದು ಟಿಬೆಟ್ಟಲ್ಲಿ ಹುಟ್ಟಿ ಈಶಾನ್ಯ ಭಾರತದಲ್ಲಿ ಪ್ರವಹಿಸುವಾಗ ಗಂಗೆಯನ್ನು ಕೂಡಿಕೊಂಡು ಬಾಂಗ್ಲಾಕ್ಕೂ ಮೈಚಾಚಿ ಮೇಘನಾ ನದಿಯನ್ನು ತುಂಬಿಕೊಳ್ಳುತ್ತ ಯಮುನೆಯಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಅರುಣಾಚಲ ಪ್ರದೇಶದ ಜನಜೀವನ, ಕೃಷಿ ಈ ನದಿಯನ್ನು ಆಧರಿಸಿದೆ. ಅಲ್ಲಿ ಈ ನದಿಗೆ ಸಿಯಾಂಗ್ ಎನ್ನುತ್ತಾರೆ. ಅಸ್ಸಾಾಂನಲ್ಲೂ ಇದು ಹರಿಯುತ್ತದೆ. ಈಶಾನ್ಯ ಭಾರತದ ಕೃಷಿಗೆ ಬ್ರಹ್ಮಪುತ್ರವೇ ಮೂಲಾಧಾರ. ಬಾಂಗ್ಲಾಕ್ಕೂ ಈ ನದಿಯೇ ಮಹತ್ವದ್ದಾಗಿದೆ. 3 ಭಾಗಗಳಲ್ಲಿ ಹರಿಯುವ ಈ ನದಿಯು ಸುಮಾರು 22 ಸಾವಿರ ಟಿಎಂಸಿ ನೀರು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಭಾರತ ಹಾಗೂ ಚೀನಾದಲ್ಲಿ ತನ್ನ ಮೈಯನ್ನು ಚಾಚಿಕೊಂಡಿರುವ ಬ್ರಹ್ಮಪುತ್ರ ನದಿಯು ಭಾರತದಲ್ಲಿ ವಿಷಪೂರಿತವಾಗಿತ್ತು. ಹಾಗಂತ ಚೀನಾದ ಭೂಪ್ರದೇಶದಲ್ಲಿ ವಿಷಯುಕ್ತವಾಗಿಲ್ಲ. ಇದೇ ಬಲು ಸೋಜಿಗ ಮತ್ತು ಸಂಶಯವನ್ನು ಹುಟ್ಟಿಸಿತ್ತು. ಚೀನಾ ನಮ್ಮೊೊಂದಿಗೆ ವಿಶ್ವಾಸದಿಂದ ರಾಜತಾಂತ್ರಿಕ ವ್ಯವಹಾರಗಳನ್ನು ನಡೆಸಿದ್ದು ಸ್ವಾರ್ಥದ ನೆಲೆಯಲ್ಲೇ! ವಿಶ್ವಾಸದಿಂದ ನಡೆಸಿದೆನ್ನಲಾದ ವ್ಯವಹಾರದಲ್ಲೂ ನಮ್ಮ ಅಸ್ತಿತ್ವವನ್ನು ಶಿಥಿಲಗೊಳಿಸಿ ತನ್ನನ್ನು ಬಲಗೊಳಿಸಿಕೊಳ್ಳುವ ಹುನ್ನಾರವೇ ಅಡಗಿರುತ್ತದೆ. ನೇರವಾಗಿ ಯುದ್ಧ ಮಾಡಿದ್ದು ಒಂದು ಕಡೆ, ಕುಮ್ಮಕ್ಕನ್ನು ನೀಡುವ ಮೂಲಕ ಪಾಕಿಸ್ತಾನವನ್ನು ನಮ್ಮ ಮೇಲೆ ಆಕ್ರಮಣ ಮಾಡಿಸಿದ್ದು ಇನ್ನೊೊಂದು ಕಡೆ. ಭಾರತದ ಪಾಲಿಗೆ ಚೀನಾ ಯಾವತ್ತೂ ಕೇಡನ್ನೇ ಬಯಸಿದೆ. ಬ್ರಹ್ಮಪುತ್ರ ನದಿ ಭಾರತದ ಪಾಲಿಗೆ ಜೀವನದಿ. ಚೀನಾದ ಕಂಪನಿಗಳು ಹೊರಬಿಡುವ ವಿಷಯುಕ್ತ ರಾಸಾಯನಿಕಗಳು ಈ ನದಿಯನ್ನು ಸೇರಿರುವುದರಿಂದ ಚೀನಾದ ಗಡಿಯನ್ನು ದಾಟಿ ಭಾರತದಲ್ಲಿ ಹರಿಯುವ ನದಿನೀರಲ್ಲಿ ಮಾತ್ರ ವಿಷವಿರುತ್ತದೆ. ಭಾರತದಲ್ಲಿ ಹರಿಯುವ ಈ ನದಿನೀರು ವಿಷಯುಕ್ತವಾಗಿರಲು ಬೇರೆ ಯಾವ ಕಾರಣವೂ ಭೌಗೋಳಿಕವಾದ ಹಿನ್ನೆೆಲೆಯಲ್ಲಿ ಇಲ್ಲವಾದ್ದರಿಂದ ಇದು ಚೀನಾದ ಪಿತೂರಿಯೆಂಬುದು ನಿಸ್ಸಂದೇಹ. ಭಾರತದ ಭಾಗದಲ್ಲಿ ಹರಿಯುತ್ತಿರುವ ನೀರಿಗೆ ಮಾತ್ರ ವಿಷಯುಕ್ತ ರಾಸಾಯನಿಕಗಳು ಸೇರಿದರೆ ಸೇರಿಕೊಳ್ಳಲಿ ಎಂಬ ಚೀನಾದ ದುರುಳತನವೇ ಇದಕ್ಕೆೆ ಕಾರಣ.

ಚೀನಾದಲ್ಲಿರುವ ಸುಮಾರು 87000 ಡ್ಯಾಾಂಗಳಲ್ಲಿ ಹೆಚ್ಚಿನವು ಟಿಬೆಟ್ಟಿನಲ್ಲಿವೆ. ಟಿಬೆಟಿನಲ್ಲಿರುವ ನದಿಗಳು, ಡ್ಯಾಾಂಗಳು ಯಾವತ್ತೂ ಭಾರತಕ್ಕೆ ಭಾರೀ ಅಪಾಯವನ್ನು ತರುತ್ತವೆ. ಪ್ರಾಕೃತಿಕವಾಗಿ ಕೂಡ ಇಷ್ಟು ಡ್ಯಾಾಂಗಳು ಟಿಬೆಟ್ಟಿಗೆ ಪ್ರತಿಕೂಲವಾಗಿರುವಂಥದ್ದೇ! ಹಿಂದೊಮ್ಮೆ ಟಿಬೆಟ್ಟಿನ ವಿಷಯದಲ್ಲಿ ನೆಹರೂ ಇಟ್ಟ ತಪ್ಪುಹೆಜ್ಜೆಯಿಂದಾಗಿ ಟಿಬೆಟ್ಟಿನ ಜತೆಯಲ್ಲಿ ಭಾರತದ ಭೂಭಾಗವನ್ನೂ ಚೀನಾ ಆಕ್ರಮಿಸಿತು. ಆಗ ನೆಹರೂ ಪ್ರತಿರೋಧ ಒಡ್ಡದೆ ಚೀನಾದ ತುಷ್ಟೀಕರಣವನ್ನು ಆರಂಭಿಸಿದರು. ಅಂದಿನಿಂದ ಮೊನ್ನೆಮೊನ್ನೆಯ ಡೋಕ್ಲಾಾಂ ಘಟನೆಯವರೆಗೂ ಚೀನಾಕ್ಕೆ ಭಾರತ ಸಲಾಮು ಹೊಡೆಯುತ್ತ ಹೆದರುತ್ತಲೇ ಬಂದಿದೆ. ಡೋಕ್ಲಾಾಂನ ವಿಚಾರದಲ್ಲೂ ಹಾಗೇ ಆಗುತ್ತಿತ್ತು. ಆದರೆ, ಭಾರತ ಕ್ಯಾರೇ ಎನ್ನದೆ ಸೆಡ್ಡು ಹೊಡೆದುದುದರ ಪರಿಣಾಮವಾಗಿ ಚೀನಾ ಹೆದರಬೇಕಾಯಿತು. ನೀರಿನ ವಿಷಯದಲ್ಲಿ ಸಂಪೂರ್ಣ ಏಷ್ಯಾವನ್ನೇ ತನ್ನ ನಿಯಂತ್ರಿಸಲು ಚೀನಾ ನಡೆಸುತ್ತಿರುವ ಹುನ್ನಾರಗಳಿಗೆ ಕೊನೆಯೇ ಇಲ್ಲ. ಬಹುಜನಸಂಖ್ಯೆೆಯನ್ನು ಹೊಂದಿರುವ ಭಾರತಕ್ಕೆ ನೀರಿನ ಅಸ್ತ್ರವನ್ನು ಪ್ರಯೋಗಿಸಲು ಚೀನಾ ಮುಂದಾಗಿದೆ. ನಮ್ಮ ದೇಶದೊಳಗೂ ನೀರಿನ ವಿಚಾರದಲ್ಲಿ ರಾಜ್ಯಗಳ ನಡುವೆ ಹೊಂದಾಣಿಕೆ ರಾಜಕೀಯ ಹಿತಾಸಕ್ತಿಯ ಕೊರತೆಯಿಂದ ಶಾಶ್ವತ ಪರಿಹಾರವನ್ನು ಕಾಣುತ್ತಿಲ್ಲ. ನದಿನೀರಿನ ಹಂಚಿಕೆಯೆಂಬುದು ಯಾವ ಪಕ್ಷ ಯಾವ್ಯಾಾವ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೋ ಅದನ್ನಾಧರಿಸಿದೆ. ದೇಶದೊಳಗೇ ಇಂಥ ದೊಡ್ಡ ಸಮಸ್ಯೆೆಗಳಿರುವಾಗ ಇನ್ನು ಎರಡು ದೇಶಗಳ ನಡುವಿನ ನೀರಿನ ವಿಚಾರದಲ್ಲಿ ಆಗುವ ಸಮಸ್ಯೆೆ ಯಾವ ಪ್ರಮಾಣದ್ದೆಂದು ಊಹಿಸಲಾಧ್ಯ! ನದಿನೀರಿನ ವಿಷಯವನ್ನು ಭಾರತದೊಂದಿಗೆ ಹಂಚಿಕೊಳ್ಳಬೇಕೆಂಬ ಒಪ್ಪಂದಕ್ಕೆೆ ಚೀನಾ ಸಹಿ ಹಾಕಿದೆ. ಆದರೆ ಭಾರತಕ್ಕೆೆ ಮಾತ್ರ ಚೀನಾದಿಂದ ಯಾವ ವಿಚಾರವೂ ಈ ಕುರಿತಾಗಿ ಲಭ್ಯವಾಗುತ್ತಿಲ್ಲ. ನದಿ ಒಪ್ಪಂದಗಳನ್ನು ಚೀನಾ ಒಪ್ಪಿದೆಯೇ ಹೊರತು ಅದರಂತೆ ನಡೆದುಕೊಳ್ಳುತ್ತಿಲ್ಲ. ತಂತ್ರಜ್ಞಾನವನ್ನು ಬಳಸಿ ಡ್ಯಾಾಂಗಳನ್ನು ನಿರ್ಮಿಸುತ್ತಾ ಭಾರತಕ್ಕೆ ಸಮಸ್ಯೆಯನ್ನು ತಂದೊಡ್ಡುತ್ತಲೇ ಇದೆ.

ತನ್ನಿಿಂದ ಹೊರಹೋಗುವ ಎಲ್ಲಾ ನದಿಗಳಿಗೂ ಡ್ಯಾಾಂಗಳನ್ನು ಕಟ್ಟಿರುವ ಚೀನಾ ಈಶಾನ್ಯ ಏಷ್ಯಾದಲ್ಲಿ ‘ಬರ’ವನ್ನು ಉಂಟುಮಾಡುತ್ತಿದೆ. ಕುಡಿಯುವ ನೀರಿಗಾಗಿಯೇ 3ನೇ ಮಹಾಯುದ್ಧ ಸಂಭವಿಸಿದರೂ ಅಚ್ಚರಿಪಡಬೇಕಿಲ್ಲ ಎಂಬುದಾಗಿ ಜಾಗತಿಕ ಪರಿಸರ ಹಾಗೂ ಜಲತಜ್ಞರು ವಿಶ್ಲೇಷಿಸಿದ್ದಾರೆ. ವಿಶ್ವಮಟ್ಟದಲ್ಲಿ ಚೀನಾದ ಭಯೋತ್ಪಾದನೆಯಿದು. ಚೀನಾದಂಥ ಅತೀದುರಾಸೆಯನ್ನು ಹೊಂದಿರುವ ರಾಷ್ಟ್ರಗಳಿಂದ ಯಾವತ್ತೂ ಭಯ ಇದ್ದೇ ಇರುತ್ತದೆ. ಹರಿಯುವ ನದಿಗೆ ಒಡ್ಡುಕಟ್ಟಿ ಕೃತಕವಾಗಿ ನೀರಿನ ಅಭಾವ ಸೃಷ್ಟಿಸಿ ಆಮೇಲೆ ತಾನೇ ನೀರು ಕೊಟ್ಟೆೆಯೆಂದು ವಿಶ್ವಮಟ್ಟದಲ್ಲಿ ಫೋಸು ಕೊಟ್ಟು ದೊಡ್ಡತನವನ್ನು ಪ್ರದರ್ಶಿಸುವ ಚೀನಾದ ದುರುಳತನ ಮಾವೋ ಕಾಲದಿಂದಲೂ ಇದೆ. 1954ರಲ್ಲಿ ಪಂಚಶೀಲ ತತ್ತ್ವಗಳ ಒಪ್ಪಂದ ನಡೆಯಿತು. 1954ರಲ್ಲೇ ಭಾರತದ 12000 ಕಿ.ಮೀ ಭೂಭಾಗವನ್ನು ಚೀನಾ ಆಕ್ರಮಿಸಿತ್ತು. 1959ರಲ್ಲಿ ಚೀನಾ ಟಿಬೆಟ್ಟನ್ನು ಆಕ್ರಮಿಸಿತು. ಆಗ ದಲಾಯಿಲಾಮರಿಗೆ ಆಶ್ರಯಕೊಟ್ಟಿದ್ದಕ್ಕೆ ಚೀನಾ ನಮ್ಮನ್ನು ಆಕ್ಷೇಪಿಸಿತ್ತು. ಆ ಸಂದರ್ಭದಲ್ಲಿ ಲ್ಹಾಸಾದಲ್ಲಿ ಎದ್ದ ದಂಗೆಗೆ ಭಾರತವೇ ಕಾರಣವೆಂದು ಬಗೆದ ಚೀನಾ ಏಕಾಏಕಿ 1962ರಲ್ಲಿ ನಮ್ಮ ಮೇಲೆ ಆಕ್ರಮಣ ಮಾಡಿತು. ಯುದ್ಧದ ಯಾವ ಸಿದ್ಧತೆಯೂ ಇಲ್ಲದ ಭಾರತದ 20000 ಯೋಧರು ಚೀನಾದ 80000 ಯೋಧರ ಮುಂದೆ ಹತಾಶಗೊಂಡರು. ತಿಂಗಳ ಪರ್ಯಂತ ನಡೆದ ಯುದ್ಧಕ್ಕೆ ವಿರಾಮ ಬಯಸಿ ಚೀನಾದ ಮಾವೋ ಝೆಡಾಂಗ್ ನೆಹರೂಗೆ ಪತ್ರ ಬರೆದರು. ಆದರೆ ತಾನು ವಶಪಡಿಸಿಕೊಂಡ ಪ್ರದೇಶಗಳನ್ನು ಬಿಟ್ಟುಕೊಡುವುದಿಲ್ಲವೆಂದ ಚೀನಾ ಇಂದಿಗೂ ಅರುಣಾಚಲ, ಹಿಮಾಚಲ ಪ್ರದೇಶಗಳ ಭೂಭಾಗವನ್ನು ತನ್ನದೆಂದೇ ಹೇಳುತ್ತಿರುವುದು ಚೀನಾದ ದುಷ್ಟಮೊಂಡುತನ. ಈ ತನ್ನ ಅಸ್ತ್ರದಿಂದ ಚೀನಾ ಭಾರತದ ಮೇಲೆ ಪಾಕಿಸ್ತಾನವನ್ನು ಛೂ ಬಿಡುತ್ತಲೇ ಇದೆ. ಹಾಗಾದರೆ ಚೀನಾ ಹೀಗೆ ವರ್ತಿಸಲು ಕಾರಣವೇನು? ಸುಲಭದಲ್ಲಿ ಹೇಳುವುದಾದರೆ, ಇಡೀ ಏಷ್ಯಾಕ್ಕೆ ಹೀರೋ ಎನ್ನಿಸಿಕೊಳ್ಳುವ, ವಿಶ್ವವನ್ನು ನಿಯಂತ್ರಿಸುವ ಅತಿರೇಕದ ದುರುಳ ಮಹತ್ವಾಕಾಂಕ್ಷೆ. ಜಗತ್ತಿನ ಇತರ ರಾಷ್ಟ್ರಗಳ ಅಸ್ತಿತ್ವವನ್ನು ಅಲ್ಲಗಳೆಯುವ ಕುಹಕದ ದುರ್ಬುದ್ಧಿ.

ಚೀನಾ ಮಹತ್ವಾಕಾಂಕ್ಷೆಯ ಒಬಿಒಆರ್ ಯೋಜನೆಯ ನೀಲನಕ್ಷೆ ನದಿಯ ದಡದಲ್ಲಿ ಹುಟ್ಟಿರುವ ಈ ನಾಗರಿಕ ಪ್ರಪಂಚದ ದೊಡ್ಡ ದುರಂತವೆಂದರೆ ನದಿಗಳನ್ನೇ ವಿಷಯುಕ್ತಗೊಳಿಸಿದ್ದು. ನದಿಯ ನೀರನ್ನೇ ಉಪಯೋಗಿಸಿಕೊಂಡು ನದಿಯನ್ನೇ ಕಲುಷಿತಗೊಳಿಸಿ ಬೆಳೆಯುವುದರಿಂದ ಮುಕ್ತವಾಗುವುದು ಯಾವ ರಾಷ್ಟ್ರಕ್ಕೂ ಸಾಧ್ಯವಾಗುತ್ತಿಲ್ಲ. ಔದ್ಯಮೀಕರಣದ ಪ್ರತಿಫಲನವಿದು. ಈ ಕಾಲದ ಮಾದರಿ ಅಭಿವೃದ್ಧಿಯ ವಿಧಾನ. ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿನ ಕೊರತೆ ವಿಶ್ವದೆಲ್ಲೆಡೆ ಹೆಚ್ಚುತ್ತಿದೆ. ಇಡೀ ಜಗತ್ತಿಗೆ ಅನ್ವಯವಾಗುವ ಬಲಿಷ್ಠವಾದ ಜಲನೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿಲ್ಲ. ಅಂಥದ್ದರಲ್ಲಿ ಜೀವಕ್ಕೆ ಮಾರಕವಾಗುವಂಥ ವಿಷ ಸಿಯಾನ್ ನದಿಗೆ ಸೇರುತ್ತದೆಂದಾದರೆ ಚೀನಾದ ದುರುಳುತನಕ್ಕೆ ಎಲ್ಲೆಯುಂಟೇ? ಚೀನಾಕ್ಕೆ ತಾನು ಮಾತ್ರ ಅಭಿವೃದ್ಧಿ ಹೊಂದಬೇಕೆಂಬ ದುರಾಸೆ. ಅದಕ್ಕಾಗಿ ಅದು ಜಗತ್ತಿನ ರಾಷ್ಟ್ರಗಳ ಮೇಲೆ ಇಂಥ ಹೇಯ ಮತ್ತು ನೀಚ ಕಾರ್ಯಗಳನ್ನು ಮಾಡುತ್ತಲೇ ಇರುತ್ತದೆ. ಅಂತಾರಾಷ್ಟ್ರೀಯ ನ್ಯಾಯಾಲಯವು ಕೊಟ್ಟ ತೀರ್ಪನ್ನು ಅಮೆರಿಕ, ಚೀನಾ, ರಷ್ಯದಂಥ ರಾಷ್ಟ್ರಗಳೇ ಉದಾಸೀನ ಮಾಡುತ್ತವೆ, ನಿರ್ಲಕ್ಷ್ಯಿಸುತ್ತವೆ. ಮನುಷ್ಯಸಂಕುಲಕ್ಕೆ ಮಾರಕವಾದ ಕಾರ್ಯಗಳನ್ನು ಯಾವುದೇ ರಾಷ್ಟ್ರ ಮಾಡಿದರೂ ಅದನ್ನು ಖಂಡಿಸಲಾರದ ಮಟ್ಟಿಗೆ ಜಗತ್ತು ಬಂದುನಿಂತಿದೆ. 1978ರಲ್ಲಾದ ಆರ್ಥಿಕ ಉದಾರೀಕರಣದ ಅನಂತರದಲ್ಲಿ ಜಗತ್ತಿನ 2ನೆಯ ಅತೀದೊಡ್ಡ ಅರ್ಥವ್ಯವಸ್ಥೆಯನ್ನು ಹೊಂದಿದ ಚೀನಾ 2012-13ರಲ್ಲಿ ಆರ್ಥಿಕತೆಯ ಕುಸಿತವನ್ನು ಕಾಣತೊಡಗಿತು. ಆಗ ಜಗತ್ತಿನ ಅರ್ಥವ್ಯವಸ್ಥೆಯಲ್ಲಿ ಚೀನಾ ಪ್ರಭಾವ ಮತ್ತು ಉತ್ಕರ್ಷವನ್ನು ಗುರಿಯನ್ನಿಟ್ಟುಕೊಂಡು ಅಧಿಕಾರಕ್ಕೆ ಬಂದವನೇ ಜಿನ್ ಪಿಂಗ್. ಇದಕ್ಕಾಾಗಿ ಇವನು ಹಾಕಿದ ಯೋಜನೆಗಳು ಬಹು ಪ್ರಳಯಾಂತಕ ಸ್ವರೂಪದ್ದು. ಮಾಲ್ಡೀವ್‌ಸ್‌ ಗೆ 100 ದಶಲಕ್ಷ ಡಾಲರ್ ನೀಡಿದ ಚೀನಾ ಅಲ್ಲಿಯ ಹುಲ್ ಹುಲೇ ದ್ವೀಪವನ್ನು ಕಬಳಿಸುವ ಹುನ್ನಾರ ನಡೆಸಿತು. ಶೇಕಡಾ 5ರ ಬಡ್ಡಿದರದಲ್ಲಿ ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ 6ಶತಕೋಟಿ ಡಾರ್ಲರ್ ಸಾಲವನ್ನು ಚೀನಾ ಪಾಕಿಸ್ತಾನಕ್ಕೆ ನೀಡಿದೆ. ಸರಕಾರ ನಡೆಸಲು ಹಣವಿಲ್ಲದೆ ಎಮ್ಮೆ, ಕತ್ತೆಗಳನ್ನು ಹರಾಜು ಹಾಕುತ್ತಿರುವ ಪಾಕ್ ಸರಕಾರ ಸಾಲ ತೀರಿಸುವುದು ಬಹುದೂರದ ಮಾತು. ಜಾಗತಿಕವಾಗಿ ತಾನು ಸೂಪರ್ ಪವರ್ ಆಗಬೇಕೆಂಬ ಚೀನಾದ ಮಹತ್ವಾಕಾಂಕ್ಷೆಯು ಅಮೆರಿಕದ ಮೇಲೂ ಹಿಡಿತವನ್ನು ಸಾಧಿಸಹೊರಟಿದೆ. ಸೇನಾಬಲವರ್ಧನೆಯಿಂದ ದಕ್ಷಿಣ ಚೀನಾದ ಸಮುದ್ರದಲ್ಲಿ ಪ್ರಭುತ್ವವನ್ನು ಸಾಧಿಸಿ ತನ್ನ ಸಾರ್ವಭೌಮತ್ವವನ್ನು ಮೆರೆಯುವ ಚೀನಾ ಭಾರತದ ಪಾಲಿಗೆ ಯಾವತ್ತೂ ಮಗ್ಗುಲ ಮುಳ್ಳಾಾಗಿದೆ. ಏಷ್ಯಾಾ, ಯುರೋಪ್ ಮತ್ತು ಆಫ್ರಿಕಾ ಖಂಡಗಳನ್ನು ಬೆಸೆಯುವ, ವ್ಯಾಪಾರ ಮತ್ತು ಮೂಲಸೌಕರ್ಯ ಸಂಬಂಧಿತ ವ್ಯಾಪಕ ಜಾಲ ಹುಟ್ಟುಹಾಕುವ ಒಬಿಒಆರ್ ಉಪಕ್ರಮದ ಮೂಲಕವೂ ಚೀನಾ ತನ್ನ ಕಬಂಧ ಬಾಹುವನ್ನು ವಿಸ್ತರಿಸಿಕೊಂಡಿದೆ. ಒಬಿಒಆರ್ ಎಂಬುದು ಇತರ ರಾಷ್ಟ್ರಗಳಿಗೆ ಪ್ರಲೋಭನೆಯೊಡ್ಡಿ ಸಾಲದ ಬಲೆಯೊಳಗೆ ಬೀಳಿಸಿ ಆ ರಾಷ್ಟ್ರಗಳನ್ನು ತನ್ನ ಸ್ವಾಮ್ಯಕ್ಕೆ ತಂದುಕೊಳ್ಳುವ ಹುನ್ನಾರ. ಇದಕ್ಕೆ ನಿದರ್ಶನವೆಂದರೆ, ಸುಮಾರು 9940ಕೋಟಿ ರು.ಗಳ ಚೀನಾದ ಸಾಲದ ಸುಳಿಗೆ ಸಿಲುಕಿದ ಶ್ರೀಲಂಕಾ ತನ್ನ ಬಹುಮುಖ್ಯ ಬಂದರೊಂದನ್ನು 99 ವರ್ಷಗಳವರೆಗೆ ಲೀಸಿಗೆ ನೀಡಿದೆ. ಒಬಿಒಆರ್ ಅನ್ನು ಹಲವು ರಾಷ್ಟ್ರಗಳು ವಿರೋಧಿಸುವ ಮೂಲಕ ತನ್ನ ನಡೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಮಾನಿಯಿಂದ ನೋಡಿಕೊಳ್ಳುವ ದುಸ್ಥಿತಿಯನ್ನು ಚೀನಾ ತಂದುಕೊಂಡಿದೆ. ಪಾಕಿಸ್ತಾನ, ಮಾಲ್ಡೀವ್‌ಸ್‌ ದ್ವೀಪ ರಾಷ್ಟ್ರಗಳು, ಮಲೇಷ್ಯಾಗಳಿಗೆ ಜ್ಞಾನೋದಯವಾಗಿ ಚೀನಾದ ಸೆರೆಯಿಂದ ಹೊರಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಅಗಾಧ ವಿದೇಶೀ ವಿನಿಮಯವನ್ನು ಕುಗ್ಗಿಸಲು ಅಮೆರಿಕ ಮುಂದಾಗಿದೆ. ಇದು ಚೀನಾ ಪಾಲಿಗೆ ದೊಡ್ಡ ಹೊಡೆತವಾಗಿ ಭವಿಷ್ಯದಲ್ಲಿ ಕಾಡಬಹುದು.

ಚೀನಾದ ಅಧ್ಯಕ್ಷ ಪಟ್ಟಕ್ಕಿದ್ದ ‘ಎರಡು ಅವಧಿಯ ಮಿತಿ’ ಯನ್ನು ತೆಗೆದುಕೊಳ್ಳುವ ಮೂಲಕ ಜಿನ್ ಪಿಂಗ್ ತಾನು ಜೀವಾವಧಿ ಅಧ್ಯಕ್ಷರಾಗುವ ಮೂಲಕ ಪ್ರಬಲ ರಾಷ್ಟ್ರವಾದಿ ನಾಯಕನಾಗಿ ತನ್ನನ್ನು ಬಿಂಬಿಸಿಕೊಂಡ. ಜಿನ್ಪಿಿಂಗ್ ಚೀನಾದ ಪಾಲಿಗೆ ಬಹುಮಹತ್ವಾಕಾಂಕ್ಷೆಯ ಅಧ್ಯಕ್ಷ. ಚೀನಾವನ್ನು ವಿಶ್ವದಲ್ಲೇ ಬಲಾಢ್ಯವನ್ನಾಗಿಸುವ ತುಡಿತದಲ್ಲಿರುವ ವ್ಯಕ್ತಿ. ಆದರೆ, ಅವರಿಗೆ ಅಡ್ಡಲಾಗಿ ನಿಂತಿರೋದು ಭಾರತ ಮಾತ್ರ. ಇದೇ ಸಮಯದಲ್ಲಿ ಅಮೆರಿಕದೊಂದಿಗೆ ವ್ಯಾಪಾರ ಸಮರದೊಂದಿಗೂ ಚೀನಾ ಸೆಣೆಸಬೇಕಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ  ಭಾರತ ಚೀನಾಕ್ಕೆ ಒಡ್ಡಿರುವ ಸವಾಲು ಸಾಮಾನ್ಯವೇನಲ್ಲ. ಭಾರತದ ವಿಶ್ವಮಟ್ಟದ ರಾಜತಾಂತ್ರಿಕ ವ್ಯವಹಾರ ಮತ್ತು ನಿಲುವುಗಳನ್ನು ಚೀನಾ ಅರಿತುಕೊಳ್ಳಲು ಹೆಣಗಬೇಕಾಯಿತು. ಇದರಿಂದಾಗಿ ಚೀನಾ ತನ್ನ ವಿಶ್ವರಾಜತಾಂತ್ರಿಕ ನೀತಿಗಳನ್ನು ಬದಲಿಸಿಕೊಂಡಿತು. ವಿಶ್ವದ ಇತರ ನಾಯಕರಿಂದ ಸಾಧ್ಯವಾಗದ ಈ ಕಾರ್ಯವನ್ನು ಭಾರತ ಮಾಡಿದೆ. ಏಷ್ಯಾದಲ್ಲಿ ಚೀನಾದೆದುರು ನಿಲ್ಲುವಂತೆ ಭಾರತ ಬೆಳೆಯಬೇಕೆಂಬ ದೊಡ್ಡ ಮನಸು ಪಾಕಿಸ್ತಾನವನ್ನು ಹೊರತುಪಡಿಸಿ ಉಳಿದೆಲ್ಲಾ ದೇಶಗಳಿಗಿದೆಂಬುದರಲ್ಲಿ ಸಂದೇಹವಿಲ್ಲ. ವಿಯೆಟ್ನಾಾಂ ತೈಲಗುತ್ತಿಗೆ, ಭೂತಾನ್ ಒಪ್ಪಂದ, ನೇಪಾಳದೊಂದಿಗಿನ ವಿದ್ಯುತ್ ಉತ್ಪಾದನಾ ಒಡಂಬಡಿಕೆ, ಸೌದಿ ಅರೇಬಿಯಾದಿಂದಾಗುವ ಇಂಧನ ರಫ್ತಿನಲ್ಲಿ ಸಂಪೂರ್ಣ ತೆರಿಗೆರಹಿತ ಸಂಬಂಧ ವೃದ್ಧಿ, ರುಪಾಯಿಯಲ್ಲೇ ಭಾರತಕ್ಕೆ ತೈಲವನ್ನು ನೀಡುತ್ತೇನೆಂದ ಇರಾನಿನ ನಿಲುವು, ಅಬುಧಾಬಿ ತೈಲೋತ್ಪಾದನೆಯಲ್ಲಿ ಷೇರು ಪಡೆದದ್ದು, ಚೀನಾಕ್ಕೆ ಅನನುಕೂಲವಾಗುವಂತೆ ಶ್ರೀಲಂಕಾದ ಅಧ್ಯಕ್ಷ ಬದಲಾವಣೆ, ಯಮನ್‌ನಲ್ಲಿ ಸೆರೆಯಾಗಿದ್ದ ನಾಲ್ಕು ಸಾವಿರ ಭಾರತೀಯರನ್ನು ಬಂಧಮುಕ್ತಗೊಳಿಸಿದ್ದು, ಸೌದಿಯ ಭೌಗೋಳಿಕ ಕಕ್ಷೆಯ ಮೇಲೆ ಭಾರತದ ವಿಮಾನಗಳು ಹಾದುಹೋಗಲು ಅಲ್ಲಿಯ ರಾಜನಿಂದ ಅನುಮತಿ ಪಡೆದದ್ದು, ಫ್ರಾನ್ಸಿನಿಂದ ರಿಯಾಕ್ಟರ್  ತಂತ್ರಜ್ಞಾನ ಪೂರೈಕೆಯ ಒಪ್ಪಂದ, ಫಿಜಿ ದ್ವೀಪದ ಮನೆಗಳಿಗೆ ಸೌರವಿದ್ಯುತ್ ಒದಗಿಸುವಲ್ಲಿ ನೀಡಿದ ಭರವಸೆ, ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ದಲ್ವಿಿಂದರ್ ಭಂಡಾರಿ ಗೆಲ್ಲುವಂತಾದುದು, ಅಗಾಧ ಪ್ರಮಾಣದಲ್ಲಿ ವಿದೇಶೀ ಹೂಡಿಕೆಯಲ್ಲಿ ಏರಿಕೆ, ಚೀನಾದ ಯುದ್ಧ ವಿಮಾನಗಳ ಮೇಲೆ ನಿಗಾ ಇಡುವಂತೆ ಸೀಶೆಲ್ಸ್ ದ್ವೀಪಗಳ ನಡುವೆ ಒಪ್ಪಂದ, ಕೆನಡಾದೊಂದಿಗೆ ನ್ಯೂಕ್ಲಿಯರ್ ರಿಯಾಕ್ಟರುಗಳಿಗೆ ಯುರೇನಿಯಂ ಒದಗಿಸುವ ಒಪ್ಪಂದ, ಕೆನಡಾದ ಭಾರತೀಯರಿಗಿರುವ ವೀಸಾ ಸಮಸ್ಯೆಯನ್ನು ಪರಿಹರಿಸಿದ್ದು, ಚೀನಾವನ್ನು ಕುಗ್ಗಿಸಲು ಮಂಗೋಲಿಯಾದ ಬೆಂಬಲ ಪಡೆದದ್ದು- ಇವೆಲ್ಲ ಭಾರತದ ವಿರುದ್ಧ ಯಾವತ್ತೂ ಅಪರೋಕ್ಷವಾಗಿ ಕತ್ತಿಮಸೆಯುವ ಚೀನಾಕ್ಕೆ ಸಹಿಸಲಾಗದ ಬೆಳವಣಿಗೆಗಳಾಗಿ ಮಾರ್ಪಟ್ಟಿತು. ವಿಶ್ವದ ಪ್ರಭುತ್ವವನ್ನು ಅಲ್ಲಗಳೆದು ಮೋದಿ ಸರಕಾರ ತನ್ನ ವಿದೇಶಿ ನೀತಿಯನ್ನು ಬಲಗೊಳಿಸಲಿಲ್ಲ. ನೇಪಾಳದಿಂದ ರಷ್ಯಾದ ತನಕ ಅಂತಾರಾಷ್ಟ್ರೀಯ ಸೌಹಾರ್ದತೆಯನ್ನು ಭಾರತ ವಿಸ್ತರಿಸಿಕೊಂಡಿದೆ. ಬಹುರಾಷ್ಟ್ರಗಳ ಪ್ರೀತಿ ವಿಶ್ವಾಸವನ್ನು ಗಳಿಸಿದೆ. ಹೀಗೆ ಪ್ರತಿಷ್ಠೆ ಮತ್ತು ಘನತೆಯನ್ನು ಜಗದಗಲಕ್ಕೂ ವಿಸ್ತರಿಸಿಕೊಂಡ ಭಾರತವನ್ನು ಅಷ್ಟು ಸುಲಭವಾಗಿ ಬಗ್ಗುಬಡಿಯಲು ಸಾಧ್ಯವಿಲ್ಲವೆಂಬುದನ್ನರಿತ ಚೀನಾ ವಾಮಮಾರ್ಗದ ಮೂಲಕ ಭಾರತೀಯರಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಸುವ ದುಷ್ಟ, ಅಮಾನುಷ, ಕೀಳು ಅಭಿರುಚಿಯ ಕಾರ್ಯ ಮಾಡುತ್ತಿದೆ. ಬ್ರಹ್ಮಪುತ್ರೆಗೆ ವಿಷಪ್ರಾಶನ ಮಾಡಿದೆ.

ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರದಿಂದಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. ಜಾಗತಿಕವಾಗಿ ತೈಲಬೆಲೆ ಏರಿದರೂ ದೇಶೀಯ ತೈಲ ಬೆಲೆಯನ್ನು ನಮ್ಮ ಸರಕಾರ ಏರಿಸಿರಲಿಲ್ಲವೆಂದು ಯುಪಿಎ ಹೇಳಿತ್ತು. ಅಧಿಕಾರದಿಂದ ಕೆಳಗಿಳಿಯುವ ಹೊತ್ತಿಗೆ ಯುಪಿಎ ಸರಕಾರ 1.44 ಲಕ್ಷ ಮೌಲ್ಯದ ತೈಲಬಾಂಡನ್ನು ಖರೀದಿಸಿದ್ದು ಭಾರತಕ್ಕೆ ಸಾಲವಾಗಿ ಕಾಡುತಿತ್ತು. ಮೋದಿ ಸರಕಾರ ಇದರ ಬಡ್ಡಿಯಾಗಿಯೇ 70ಸಾವಿರ ಕೋಟಿಯನ್ನು ಪಾವತಿಸಿ ಒಟ್ಟು ಎರಡು ಲಕ್ಷ ಕೋಟಿ ರು.ಗಳನ್ನು ಮರುಪಾವತಿಸಿದೆ. ಡಾಲರ್ ಬೆಲೆ ರುಪಾಯಿಯ ಮುಂದೆ ಏರಿಕೆಯಾಗಿರುವುದರಿಂದ ಇವುಗಳ ಬೆಲೆಯೇರಿಕೆಯಾಗಿತ್ತು. ಈ ಮಧ್ಯೆೆ ಅಮೆರಿಕ ಹೊಸ ತಗಾದೆ ಎತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲದ ಚೀನಾ ಮತ್ತು ಭಾರತಕ್ಕೆ ಸೇವಾತೆರಿಗೆಯಲ್ಲಿ ರಿಯಾಯಿತಿಯನ್ನು ಕೊಡುವುದಿಲ್ಲ ಎಂದಿದೆ. ಚೀನಾವನ್ನು ನಿಯಂತ್ರಿಸಲು ಅಮೆರಿಕ ಏನೇ ಕ್ರಮ ಕೈಗೊಂಡರೂ ಅದು ಭಾರತದ ಮೇಲೂ ಪರಿಣಾಮ ಬೀರುತ್ತದೆ.

ಭಾರತ ಈಗ ಯಾರಿಗೂ ಬಗ್ಗಬೇಕಿಲ್ಲ, ಬಾಗಬೇಕಿಲ್ಲ. ಸಲಾಮು ಹೊಡೆಯಬೇಕಿಲ್ಲ. ಕೈಕಟ್ಟಿ ನಿಲ್ಲಬೇಕಿಲ್ಲ. ಭಾರತದ್ದು ಈಗ ಬೇಡುವ ಕೈ ಅಲ್ಲ. ಮಾರಿಷಸ್, ಸೆಶೆಲ್ಸ್, ಜಾಂಬಿಯಾ, ಗಿನಿ, ಗ್ರೀಸ್, ಕ್ಯೂಬಾ, ಈಕ್ವಟೋರಿಯಲ್, ಸ್ವಾಝಿಲ್ಯಾಾಂಡ್, ಜಿಬೂತಿ, ಇಥಿಯೋಪಿಯಾ, ಕೀನ್ಯಾ, ಮುಂತಾದ ಕೆಲದೇಶಗಳಿಗೆ ಸಹಾಯಹಸ್ತ ನೀಡುವುದರ ಮುಖೇನ ಭಾರತ ಅಪಾರ ವಿಶ್ವಾಸವನ್ನು ಗಳಿಸಿದೆ. ಭಾರತದೆದುರು ಜಗತ್ತಿನ ಹಲವು ರಾಷ್ಟ್ರಗಳು ಸ್ನೇಹಸೌಹಾರ್ದತೆಯನ್ನು ಹೊಂದಿವೆ. ಅಮೆರಿಕ, ರಷ್ಯಾ, ಫ್ರಾನ್‌ಸ್‌, ಇಸ್ರೇಲ್, ಜಪಾನಿನಂಥ ಬಹುರಾಷ್ಟ್ರಗಳು ಭಾರತದ ವಿದೇಶಿ ನೀತಿಯನ್ನು ಮೆಚ್ಚಿವೆ. ಅಂತಾರಾಷ್ಟ್ರೀಯ ಭಯೋತ್ಪಾದನಾ ನಿಗ್ರಹಕ್ಕೆ ಭಾರತದೊಂದಿಗೆ ಹೆಗಲುಕೊಟ್ಟಿವೆ. ಈ ಬೆಳವಣಿಗೆ ಚೀನಾ, ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ತನ್ನ ಎದುರಾಳಿಯನ್ನು ಮಣಿಸಲು ಸಾಧ್ಯವಾಗದ ಸಂದರ್ಭದಲ್ಲಿ ಅಡ್ಡದಾರಿಯನ್ನು ಹಿಡಿಯುವ ತನ್ನ ಹುಟ್ಟುಸ್ವಭಾವವಾದ ಕುತ್ಸಿತ ಬುದ್ಧಿ ಚೀನಾದ್ದು. ತಾನು ನಿಯಂತ್ರಿಸಿಕೊಳ್ಳಬೇಕಾದ ಕೊರೋನಾ ಭೀತಿಯನ್ನು ಜಗತ್ತಿಗೆ ಹಬ್ಬಿಸಿ ತಾನು ಸೇಫಾಗಿರಲು ಚೀನಾ ಪ್ರಯತ್ನಿಸುತ್ತಿದೆ. ಪ್ರತಿಹೆಜ್ಜೆಯಲ್ಲೂ ಸ್ವಾರ್ಥವನ್ನೇ ಸಾಧಿಸುವ ಚೀನಾ ತಾನೇ ತೋಡಿಕೊಂಡ ಗುರುತರವಾದ ದ್ರೋಹಕೂಪದಲ್ಲಿ ಬೀಳುವುದಷ್ಟೇ ಅಲ್ಲದೆ ವಿಶ್ವಮಟ್ಟದಲ್ಲಿ ದೊಡ್ಡಮಟ್ಟದ ಪ್ರತಿರೋಧವನ್ನು ಎದುರಿಸುವ ದಿನಗಳನ್ನು ಕಂಡೀತು!