Friday, 22nd November 2024

ನಿರ್ಲಕ್ಷಿಸಲ್ಪಟ್ಟ ಜ್ಞಾನ-ವಿಜ್ಞಾನ ಪರಂಪರೆ

-ಗಣೇಶ್ ಭಟ್ ವಾರಣಾಸಿ

ಪಾಶ್ಚಾತ್ಯರ ಇತಿಹಾಸವನ್ನು ಓದಿದರೆ, ಕೆಲ ಧಾರ್ಮಿಕ ಸಂಸ್ಥೆಗಳು ವೈಜ್ಞಾನಿಕತೆಯನ್ನು ಹತ್ತಿಕ್ಕಿದ ಉದಾಹರಣೆಗಳು ಸಿಗುತ್ತವೆ. ‘ಭೂಮಿ ಸಹಿತ ಇತರ ಗ್ರಹಗಳು ಸೂರ್ಯನನ್ನು ಸುತ್ತುತ್ತಿವೆ’ ಎಂಬ ಕೋಪರ್ನಿಕಸ್‌ನ ಸೂರ್ಯಕೇಂದ್ರಿತ ಸಿದ್ಧಾಂತವನ್ನು ಅನುಮೋದಿಸಿದ್ದಕ್ಕೆ ಇಟಲಿಯ ಖಗೋಳ ಶಾಸಜ್ಞ ಗೆಲಿಲಿಯೋ ವಿರುದ್ಧ ಚರ್ಚ್ ಅಸಮಾಧಾನವನ್ನು ಹೊಮ್ಮಿಸಿತು. ‘ಸೂರ್ಯ ಭೂಮಿಯನ್ನು ಸುತ್ತುತ್ತಿದೆ’ ಎಂದು ಬೈಬಲ್ ಹೇಳಿರುವ ಕಾರಣ, ಗೆಲಿಲಿಯೋ ಅನುಮೋದಿಸಿದ್ದ ಸೂರ್ಯಕೇಂದ್ರಿತ ಸಿದ್ಧಾಂತ ಬೈಬಲ್ ವಿರೋಧಿಯಾಗಿದೆ ಎಂದು ಹೇಳಿ ಆತನ ವಿರುದ್ಧ ಧಾರ್ಮಿಕ ವಿಚಾರಣೆ ಆರಂಭಿಸಿದ ವ್ಯಾಟಿಕನ್, ಅವನಿಗೆ ಜೀವಾವಧಿ
ಜೈಲುಶಿಕ್ಷೆ ವಿಧಿಸಿತು. ಶಿಕ್ಷೆಗೆ ಹೆದರಿದ ಗೆಲಿಲಿಯೋ, ಸೂರ್ಯಕೇಂದ್ರಿತ ಸಿದ್ಧಾಂತದ ಅನುಮೋದನೆಯಿಂದ ಹಿಂಸರಿದರೂ ಆತನನ್ನು ಕೊನೆವರೆಗೂ ಗೃಹಬಂಧನದಲ್ಲಿರಿಸಲಾಯಿತು. ಸೂರ್ಯಕೇಂದ್ರಿತ ಸಿದ್ಧಾಂತವನ್ನು ಪ್ರತಿಪಾದಿಸಿದ್ದ ಕೋಪರ್ನಿಕಸ್, ‘ಆನ್ ದ ರೆವೊಲ್ಯೂಷನ್ಸ್ ಆಫ್ ದ ಸೆಲೆಸ್ಟಿಯಲ್ ಸ್ಪಿಯರ್ಸ್’ ಎಂಬ ಪುಸ್ತಕ ಬರೆದು ಕೆಲವೇ ದಿನಗಳಲ್ಲಿ ಮರಣಿಸಿದ ಕಾರಣ, ಅವನಿಗೆ ಯಾವ ಧಾರ್ಮಿಕ ಶಿಕ್ಷೆ ನೀಡುವುದಕ್ಕೂ ಚರ್ಚುಗಳಿಗೆ ಅವಕಾಶವಾಗಲಿಲ್ಲ. ಆದರೆ ಅವನ ಸಿದ್ಧಾಂತವನ್ನು ನಿಷೇಧಿಸಿತಷ್ಟೇ.

೧೭-೧೮ನೇ ಶತಮಾನದವರೆಗೆ ಬಹುತೇಕ ಎಲ್ಲಾ ಅಬ್ರಹಾಮಿಕ್ ಮತಗಳು ವಿಜ್ಞಾನ ಆವಿಷ್ಕಾರಗಳನ್ನು ವಿರೋಧಿಸಿವೆ. ಆದರೆ ಭಾರತದಲ್ಲಿ ಖಗೋಲ ಶಾಸಜ್ಞರು, ಗಣಿತಜ್ಞರು ಮತ್ತು ಸಂಶೋಧಕರು ಪ್ರಾಚೀನ ಕಾಲ
ದಿಂದಲೂ ಆದರಿಸಲ್ಪಟ್ಟಿದ್ದಾರೆ. ಚಂದ್ರಯಾನ-೩ ಯೋಜನೆಯ ರೂವಾರಿ, ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರು ಕೆಲ ತಿಂಗಳ ಹಿಂದೆ, ‘ವಿಜ್ಞಾನದ ತತ್ತ್ವಗಳು ವೇದಗಳಲ್ಲಿ ಹುಟ್ಟಿಕೊಂಡಿವೆ; ಆದರೆ ಇವು
ಪಾಶ್ಚಾತ್ಯ ಸಂಶೋಧನೆಗಳಾಗಿ ಪ್ರಕಟಿಸಲ್ಪಟ್ಟಿವೆ’ ಎಂದಿದ್ದರು. ಬೀಜಗಣಿತ, ವರ್ಗಮೂಲ, ಸಮಯದ ಪರಿಕಲ್ಪನೆ, ವಿಶ್ವದ ರಚನೆ, ಲೋಹಶಾಸ, ವಾಸ್ತುಶಿಲ್ಪ, ವೈಮಾನಿಕ ತಂತ್ರಜ್ಞಾನ ಮೊದಲಾದವು ವೇದಗಳಲ್ಲಿವೆ.
ಇವು ಅರಬ್ ದೇಶಗಳ ಮೂಲಕ ಪಾಶ್ಚಾತ್ಯರನ್ನು ತಲುಪಿ ಅವರ ಸಂಶೋಧನೆಗಳಾಗಿ ಪ್ರಕಟಿಸಲ್ಪಟ್ಟವು ಎಂದೂ ಅವರು ಹೇಳಿದ್ದರು. ಸನಾತನ ಧರ್ಮವು ವಿಜ್ಞಾನಿಗಳನ್ನು, ವೈಜ್ಞಾನಿಕತೆಯನ್ನು ಎಂದಿಗೂ ಹತ್ತಿಕ್ಕಲಿಲ್ಲ; ಬದಲಿಗೆ ವರಾಹಮಿಹಿರ, ಬ್ರಹ್ಮಗುಪ್ತ, ಆರ್ಯ ಭಟ, ಭಾಸ್ಕರಾಚಾರ್ಯ ಮುಂತಾದವರಿಗೆ ಪೂಜನೀಯ ಸ್ಥಾನವನ್ನು ನೀಡಿತು. ಕ್ರಿ.ಪೂ. ೮ನೇ ಶತಮಾನದಲ್ಲೇ ಶಸಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿಯನ್ನು ಆವಿಷ್ಕರಿಸಿದ್ದ ಸುಶ್ರುತರು ‘ಮಹರ್ಷಿ ಸುಶ್ರುತ’ ಎಂಬ ಹಿರಿಮೆಗೆ ಭಾಜನ ರಾಗಿದ್ದು ಹೀಗೆಯೇ.

‘ಭೂಮಿಯು ಗೋಲಾಕಾರದಲ್ಲಿದೆ’ ಎಂಬುದಾಗಿ ಕೋಪರ್ನಿಕಸ್ ಅಥವಾ ಗೆಲಿಲಿಯೋಗಿಂತ ೧ ಸಾವಿರ ವರ್ಷಗಳಷ್ಟು ಮೊದಲೇ (ಕ್ರಿ.ಶ. ೪ನೇ ಶತಮಾನಕ್ಕೂ ಮುನ್ನ) ಪ್ರತಿಪಾದಿಸಿತ್ತು ಭಾರತದಲ್ಲಿ ರಚಿಸಲ್ಪಟ್ಟ
‘ಸೂರ್ಯಸಿ ದ್ಧಾಂತ’. ‘ಸ್ಥಿರಸೂರ್ಯನ ಸುತ್ತ ಭೂಮಿ, ಮಂಗಳ, ಶುಕ್ರ, ಗುರು ಮೊದಲಾದ ಗ್ರಹಗಳು ಸುತ್ತುತ್ತಿವೆ. ಭೂಮಿಯ ವ್ಯಾಸ ಸುಮಾರು ೮,೦೦೦ ಮೈಲುಗಳು, ಚಂದ್ರನ ವ್ಯಾಸ ಸುಮಾರು ೨,೪೦೦ ಮೈಲುಗಳು’ ಎಂದು ಸೂರ್ಯಸಿದ್ಧಾಂತ ಹೇಳಿತ್ತು (ಆಧುನಿಕ ಕಾಲದಲ್ಲಿ ಇವನ್ನು ಕ್ರಮವಾಗಿ ೭೯೧೭.೫ ಮತ್ತು ೨೧೫೯.೧ ಮೈಲುಗಳೆಂದು ಲೆಕ್ಕಿಸಲಾಗಿದೆ). ಸೂರ್ಯ ಸಿದ್ಧಾಂತವು ಅರೇಬಿಕ್ ಭಾಷೆಗೆ ಭಾಷಾಂತರಗೊಂಡು ನಂತರ ಯುರೋಪಿಗೆ ತಲುಪಿತು. ಕ್ರಿ.ಶ. ೪೭೬ರಲ್ಲಿ ಜನಿಸಿದ ಖಗೋಲ ಶಾಸಜ್ಞ ಆರ್ಯ ಭಟರು, ‘ಗೋಲಾಕಾರದಲ್ಲಿರುವ ಭೂಮಿಯು ತನ್ನ ಅಕ್ಷದಲ್ಲೇ ಸುತ್ತುತ್ತಿದ್ದು, ೨೩ ಗಂಟೆ, ೫೬ ನಿಮಿಷ, ೪ ಸೆಕೆಂಡುಗಳಲ್ಲಿ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ’ ಎಂದು ತಮ್ಮ ‘ಆರ್ಯಭಟೀಯ’ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ದೂರದ ನಕ್ಷತ್ರಗಳನ್ನು ಆಧರಿಸಿ ಲೆಕ್ಕಹಾಕಿ ಆಧುನಿಕ ಸಂಶೋಧನೆಗಳು ಹೇಳಿದ್ದೂ ಇದನ್ನೇ. ಆರ್ಯಭಟರು ಸಾಕಷ್ಟು ವರ್ಷಗಳ ಹಿಂದೆಯೇ ಇದನ್ನು ಎಷ್ಟು ನಿಖರವಾಗಿ ಹೇಳಿದ್ದರಲ್ಲವೇ? ಐಸಾಕ್ ನ್ಯೂಟನ್ ಗಿಂತ ೫೦೦ ವರ್ಷಗಳಷ್ಟು ಮುಂಚೆ ಹುಟ್ಟಿದ್ದ ಭಾಸ್ಕರಾಚಾರ್ಯರು ತಮ್ಮ ‘ಸಿದ್ಧಾಂತ ಶಿರೋ ಮಣಿ’ ಕೃತಿಯಲ್ಲಿ, ‘ಭೂಮಿಯು ಸ್ವಾಭಾವಿಕವಾಗಿ ಪ್ರತಿ ವಸ್ತುವನ್ನೂ ತನ್ನೆಡೆಗೆ ಆಕರ್ಷಿಸುತ್ತದೆ. ಈ ಆಕರ್ಷಣ ಶಕ್ತಿಯಿಂದಾಗಿ ಮೇಲಿರುವ ಎಲ್ಲಾ ವಸ್ತುಗಳು ಭೂಮಿಯ ಮೇಲೆಯೇ ಬೀಳುತ್ತವೆ’ ಎಂದು ಉಲ್ಲೇಖಿಸುವ ಮೂಲಕ
ನ್ಯೂಟನ್‌ಗಿಂತ ಮೊದಲೇ ಗುರುತ್ವಾಕರ್ಷಣ ಬಲದ ಬಗ್ಗೆ ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದಾರೆ.

೬ನೇ ಶತಮಾನದಲ್ಲಿ ಜೀವಿಸಿದ್ದ ವರಾಹಮಿಹಿರರು, ಭೂಮಿಯು ಹೇಗೆ ಗೋಲಾಕಾರದಲ್ಲಿದೆ ಎಂಬುದನ್ನು ವಿವರಿಸಿರುವುದರ ಜತೆಗೆ, ಚಂದ್ರನು ಭೂಮಿಯ ನೆರಳನ್ನು ಪ್ರವೇಶಿಸಿದರೆ ಅದು ಚಂದ್ರಗ್ರಹಣವೆಂದೂ, ಸೂರ್ಯನ ನೆರಳನ್ನು ಪ್ರವೇಶಿಸಿದರೆ ಅದು ಸೂರ್ಯಗ್ರಹಣವೆಂದೂ ಹೇಳಿದ್ದಾರೆ. ಇದೇ ಕಾಲದ ಮತ್ತೋರ್ವ ಗಣಿತಜ್ಞರಾದ ಬ್ರಹ್ಮಗುಪ್ತರು ಅಂಕಗಣಿತ, ಬೀಜಗಣಿತ, ತ್ರಿಕೋನಮಿತಿ (ಟ್ರಿಗೊನಾಮೆಟ್ರಿ) ಮೊದಲಾದ ವಿಷಯಗಳಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ, ಅನಂತದ (ಇನಿನಿಟಿ) ಬಗ್ಗೆಯೂ ವಿವರಿಸಿದ್ದಾರೆ. ೧೧ನೇ ಶತಮಾನದಲ್ಲಿ ಚೋಳರು ತಂಜಾವೂರಿನಲ್ಲಿ ನಿರ್ಮಿಸಿದ ೧೦೦ ಅಡಿ ಎತ್ತರದ ಬೃಹದೀಶ್ವರ ದೇಗುಲದ
ಗೋಪುರವು, ವಾಸ್ತುಶಿಲ್ಪಶಾಸ ಮತ್ತು ಗಣಿತದ ಪ್ರಾವೀಣ್ಯ ವಿಲ್ಲದಿದ್ದಿದ್ದರೆ ಪರಿಪೂರ್ಣವಾಗಿ ಕೈಗೂಡುತ್ತಿರಲಿಲ್ಲ. ದೇಗುಲ ಮತ್ತು ಗೋಪುರ ನಿರ್ಮಾಣದಲ್ಲಿ ಗಣಿತ ಶಾಸದ ‘ಚಿನ್ನದ ಅನುಪಾತ’ದ ಬಳಕೆಯಾಗಿರುವುದನ್ನು ವೇಲು ಮುರುಗನ್ ತಲೈವಾನ್ ಎಂಬ ಗಣಿತಜ್ಞರು ಸಂಶೋಧಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಇಲ್ಲದ ಕಾಲದಲ್ಲೇ ಇವು ರೂಪುಗೊಂಡಿದ್ದು ನಮ್ಮ ಪ್ರಾಚೀನರ ಪ್ರತಿಭೆಗೆ ದ್ಯೋತಕ. ಎಲ್ಲೋರದಲ್ಲಿ ಏಕಶಿಲೆಯಲ್ಲಿ ಕೊರೆದು ನಿರ್ಮಿಸಿರುವ ಕೈಲಾಸನಾಥ ಗುಹಾ ದೇವಾಲಯವು ಆಧುನಿಕ ವಿಜ್ಞಾನಕ್ಕೂ ಒಂದು ಸವಾಲಾಗಿದೆ. ಶೃಂಗೇರಿಯ ವಿದ್ಯಾಶಂಕರ ಮಂದಿರದಲ್ಲಿ ೧೨ ರಾಶಿಗಳನ್ನು ಪ್ರತಿನಿಧಿಸುವ ಕಂಬಗಳಿದ್ದು, ಬೆಳಗಿನ ಮೊದಲ ಸೂರ್ಯಕಿರಣವು ಆಯಾ ತಿಂಗಳಿಗೆ ನಿಗದಿತವಾಗಿರುವ ರಾಶಿ ಕಂಬದ ಮೇಲೆ ಬೀಳುವಂಥ ತಜ್ಞವ್ಯವಸ್ಥೆಯಿದೆ.

೧೩ನೇ ಶತಮಾನದಲ್ಲಿ ಇದನ್ನು ರೂಪಿಸಿದಾತನಿಗೆ ಶಿಲ್ಪಶಾಸ್ತ್ರ ಮಾತ್ರವಲ್ಲದೆ ಖಗೋಳ ಶಾಸ್ತ್ರದಲ್ಲೂ ಅದೆಂಥಾ ಪರಿಣತಿಯಿತ್ತು ಎಂಬುದನ್ನು ನೀವೇ ಊಹಿಸಿ. ಇನ್ನು, ಬೇಲೂರು-ಹಳೇಬೀಡಿನ ದೇಗುಲಗಳಲ್ಲಿ ಸೂಕ್ಷ್ಮ ಕುಸುರಿಕಲೆಯನ್ನು ಮೆರೆದಿರುವ ಜಕಣಾಚಾರಿ ಅದೆಂಥಾ ಪ್ರತಿಭಾವಂತನಲ್ಲವೇ? ಆದರೆ ಭಾರತದ ಮೇಲೆ ಸಾಕಷ್ಟು ವರ್ಷಗಳ ಹಿಂದೆ ದಾಳಿ ಮಾಡಿ ನಮ್ಮನ್ನಾಳಿದ ಮೊಘಲ್ ದಾಳಿಕೋರರು ಹಾಗೂ ಬ್ರಿಟಿಷರು, ಭಾರತದ ಪ್ರಾಚೀನ ಜ್ಞಾನ-ವಿಜ್ಞಾನಗಳನ್ನು ನಾಶಮಾಡಿದರು. ಸಂಪತ್ತಿನ ಜತೆಗೆ ಜ್ಞಾನವನ್ನೂ ಕೊಳ್ಳೆ ಹೊಡೆದು ನಂತರ ಈ ಎಲ್ಲಾ ಆವಿಷ್ಕಾರಗಳು ತಮ್ಮವೆಂದು ಹೇಳಿಕೊಂಡರು! ಕೇರಳದ ಸ್ಪೀಕರ್ ಎ.ಎನ್. ಶಂಸೀರ್ ಅವರು ಕಾರ್ಯ ಕ್ರಮವೊಂದರಲ್ಲಿ ಮಾತನಾಡುತ್ತಾ, ‘ಹಿಂದೂಗಳು ರಾಮಾಯಣದ ಪುಷ್ಪಕ ವಿಮಾನವೇ ಆಧುನಿಕ ಕಾಲ ಘಟ್ಟದ ವಿಮಾನಗಳ ಪರಿಕಲ್ಪನೆಗೆ ಮೂಲವಾಯಿತೆಂದು ಪ್ರತಿಪಾದಿ ಸುತ್ತಾರೆ. ಆನೆಯ ತಲೆಯನ್ನು ಮನುಷ್ಯ ದೇಹಕ್ಕೆ ಜೋಡಿಸಿ ಗಣಪತಿಯನ್ನು ರೂಪಿಸಿದ್ದು ಮೊದಲ ಪ್ಲಾಸ್ಟಿಕ್ ಸರ್ಜರಿ ಎನ್ನುತ್ತಾರೆ. ಇವು ಕಟ್ಟುಕಥೆಯಲ್ಲದೆ ಬೇರೇನಲ್ಲ’ ಎಂದಿದ್ದು ಕೇರಳದ ಹಿಂದೂ ಆಸ್ತಿಕರಲ್ಲಿ ಭಾರಿ ಸಂಚಲನವನ್ನೇ ಮೂಡಿ ಸಿತ್ತು. ಶಂಸೀರ್ ಅವರ ಅಭಿಪ್ರಾಯವನ್ನು ಸಮರ್ಥಿಸಿ ಕೊಂಡಿದ್ದ ಕೇರಳದ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಗಣಪತಿಯ ಕಥೆಯನ್ನು ‘ಕಟ್ಟು ಕಥೆ’ ಎಂದಿದ್ದರ ಜತೆಗೆ, ‘ಹಿಂದೂ ಧಾರ್ಮಿಕ ನಂಬುಗೆ ಗಳ ಹೊರತಾಗಿ ಇತರ ಧರ್ಮಗಳ ಧಾರ್ಮಿಕ ನಂಬುಗೆಗಳು ಕಟ್ಟುಕಥೆಯಲ್ಲ’ ಎಂಬರ್ಥದ ಮಾತನ್ನೂ ಆಡಿದ್ದರು. ಕಮ್ಯುನಿಸ್ಟ್ ಪಕ್ಷ ಮಾತ್ರವಲ್ಲದೆ, ತನ್ನನ್ನು ನಾಸ್ತಿಕನೆಂದು ಕರೆದುಕೊಳ್ಳುವ ತಮಿಳುನಾಡಿನ ಡಿಎಂಕೆಯಂಥ ಪಕ್ಷಗಳು ಹಿಂದೂ ಪುರಾಣ, ನಂಬಿಕೆ, ಜ್ಞಾನ, ಆರಾಧನೆಗಳನ್ನು ಮಾತ್ರ ಹೀಯಾಳಿಸುತ್ತವೆ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವೂ ಭಿನ್ನವಾಗೇನೂ ಇಲ್ಲ. ಎಡಪಂಥೀಯರಿಂದ ರೂಪಿತವಾದ ಪಠ್ಯಪುಸ್ತಕಗಳು, ಪ್ರಾಚೀನ ಭಾರತದ ಶ್ರೇಷ್ಠ ವಿಜ್ಞಾನಿಗಳು ಮತ್ತು ಖಗೋಳ ಶಾಸಜ್ಞರನ್ನು ಪರಿಚಯಿಸದೆ ವಿದ್ಯಾರ್ಥಿಗಳಲ್ಲಿ ಭಾರತದ ಬಗ್ಗೆ ಕೀಳರಿಮೆಯನ್ನು ಮಾತ್ರ ಬೆಳೆಸಿದವು. ಈ ಹಿನ್ನೆಲೆಯಲ್ಲಿ, ಇಸ್ರೋ ಮುಖ್ಯಸ್ಥ ಸೋಮನಾಥ್ ಅವರು ವೇದಗಳ ಬಗ್ಗೆ ಮತ್ತು ಪ್ರಾಚೀನ ಭಾರತದ ವೈಜ್ಞಾನಿಕ ಹಿರಿಮೆಗಳ ಬಗ್ಗೆ ಮಾತನಾಡಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ.
(ಲೇಖಕರು ಹವ್ಯಾಸಿ ಬರಹಗಾರರು)