Wednesday, 11th December 2024

ಚಂದ್ರನ ಮೇಲೊಂದು ಪಣಯ: ನಂಬಿಕೆ, ತತ್ವಶಾಸ್ತ್ರ ಹಾಗೂ ವಿಜ್ಞಾನದ ಸಂಧಾನ

-ಎಂ.ಜೆ.ಅಕ್ಬರ್

ನಮ್ಮಲ್ಲಿ ಎರಡು ಚಂದ್ರರಿದ್ದಾರೆ. ಒಂದು ಪ್ರಶಾಂತವಾದ ಮತ್ತು ಮೃದು ಹೃದಯಿ ಚಂದ್ರ. ಇನ್ನೊಂದು ದೈವಿಕವಾದ ಚಂದ್ರ. ಜಗತ್ತಿನ ಮೊದಲ ಜೋಡಿಯಾದ ಆಡಂ ಮತ್ತು ಈವ್ ತಮ್ಮ ಪ್ರಣಯದಾಟಕ್ಕೆ ಹುಣ್ಣಿಮೆಯ ರಾತ್ರಿಯನ್ನು ಆಯ್ಕೆ ಮಾಡಿಕೊಂಡಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಮನೆ ಎಲ್ಲಿತ್ತು ಎಂಬುದನ್ನು ಗಮನಿಸಿದರೆ ನಮಗೆ ಈ ವಿಷಯದಲ್ಲೊಂದು ಪಕ್ಕಾ ಐಡಿಯಾ ಬರುತ್ತದೆ. ಅವರಿದ್ದುದು ಸ್ವರ್ಗದಲ್ಲಿ ಅಲ್ಲವೇ? ಸ್ವರ್ಗ ಇರುವುದು ಚಂದ್ರನಿಗಿಂತ ಮೇಲೆ. ಚಂದ್ರ ಇರುವುದು ಖಗೋಳದಲ್ಲಿ. ಖಗೋಳಕ್ಕಿಂತ ಮೇಲೆ ಸ್ವರ್ಗವಿದ್ದರೆ, ಜಗತ್ತಿನ ಮೊದಲ ಜೋಡಿ ಕೂಡ ಪ್ರಣಯದಾಟ ಆಡಿದ್ದು ಚಂದ್ರನಿಗಿಂತ ಮೇಲೆ ಎಂದಾಯಿತು. ಅಷ್ಟಾಗಿಯೂ ಪ್ರೀತಿ ಪ್ರೇಮ ಪ್ರಣಯ ಎಂಬುದು ಬಂದಾಗ ಅದಕ್ಕೆ ಚಂದ್ರನೆಂಬ ಚುಂಬಕ ಶಕ್ತಿಯ ಅಪೂರ್ವ ಆಕರ್ಷಣೆಯೊಂದು ಬೇಕೇ ಬೇಕು. ಉದಾಹರಣೆಗೆ ನೋಡಿ; ‘ಚೋರಿ ಚೋರಿ’ ಚಿತ್ರದಲ್ಲಿ ನರ್ಗಿಸ್ ಮತ್ತು ರಾಜ್ ಕಪೂರ್ ‘ಯೇ ಚಾಂದ್ ಪ್ಯಾರಾ ಪ್ಯಾರಾ’ ಎಂದು ಹಾಡುತ್ತಾರೆ. ನಿಜವಾಗಿಯೂ ನೀವು ಚಂದ್ರನ ಮೇಲೆ ನಿಂತು ಕೆಳಗೆ ನೋಡಿದರೆ ಈ ‘ಪ್ಯಾರಾ ಪ್ಯಾರಾ’ ಭಾವನೆ ಬರುತ್ತದೆಯೇ?
ಇಲ್ಲ. ಬಹುಶಃ ಚಂದ್ರ ಮತ್ತು ಪ್ರೀತಿಯ ನಡುವಿನ ಶಾಶ್ವತ ಬಂಧ ಶುರುವಾಗಿದ್ದು ತುಂಬಾ ಹಿಂದೆ ಅಲ್ಲ, ಅದು ೨ನೇ ತಲೆಮಾರಿನಿಂದ ಶುರುವಾಗಿದ್ದಿರಬಹುದು.

ಮನುಷ್ಯನ ಮಾನಸಿಕ ಏರಿಳಿತ ಅಥವಾ ಸಮಸ್ಯೆಗಳಿಗೂ ಹುಣ್ಣಿಮೆ, ಅಮಾವಾಸ್ಯೆ ಇತ್ಯಾದಿ ಚಂದ್ರನ ಸ್ಥಿತಿಗೂ ನಂಟು ಹಾಕುವ ರೂಢಿ ನಮ್ಮಲ್ಲಿದೆ. ಹೀಗಾಗಿ ಚಂದ್ರನೆಂದರೆ ಪ್ರಣಯ ಹೇಗೋ ಹಾಗೆಯೇ ನಮ್ಮ ಮಾನಸಿಕ ಅಸಮತೋಲನಕ್ಕೊಂದು ಹೋಲಿಕೆಯೂ ಹೌದು. ಹುಚ್ಚುತನಕ್ಕೆ ಇಂಗ್ಲಿಷ್‌ನಲ್ಲಿ ಲೂನಸಿ ಎನ್ನುತ್ತಾರೆ. ಇದು ಲೂನಾ ಎಂಬ ಪದದಿಂದ ಬಂದಿದ್ದು. ಚಂದ್ರನಿಗೆ ಲ್ಯಾಟಿನ್ ಭಾಷೆಯಲ್ಲಿ ಲೂನಾ(ರ್) ಎನ್ನುತ್ತಾರೆ. ಹಾಗಾಗಿ ನಮ್ಮ ಪ್ರಕಾರ ಅಲೌಕಿಕವೂ ಅನಂತವೂ ಆದ ಚಂದ್ರ ನಮ್ಮನ್ನು ಕಾಡುವವನೂ ಗೋಳಾಡಿಸುವವನೂ ಹೌದು. ಸೂರ್ಯ ನಮ್ಮ ಕಣ್ಣಿಗೆ ಬಹಳ ಕಠೋರ. ಚಂದ್ರ ಬಹಳ ಸೌಮ್ಯ. ಅವನನ್ನು ಎಷ್ಟು ಹೊತ್ತು ಬೇಕಾದರೂ ನೋಡುತ್ತ ಇರಬಹುದು. ಮನುಷ್ಯನ ಹುಚ್ಚಿಗೆ ಚಂದ್ರ ಕಾರಣ ಎಂದು ಅಲ್ಲಿ ಇಲ್ಲಿ ನಾವು ದೂಷಿಸುವುದು ಇದೆಯಾದರೂ ಸ್ವತಃ ಚಂದ್ರನೇ ಯಾವತ್ತೂ ಹುಚ್ಚನಾಗಿದ್ದಿಲ್ಲ. ಶೇಕ್ಸ್‌ಪಿಯರ್‌ನ ದುರಂತ ನಾಯಕ ಒಥೆಲೋ ತನ್ನ ಹುಚ್ಚಾಟಗಳಿಗೆ ಹುಣ್ಣಿಮೆಯತ್ತ ಸಾಗುತ್ತಿದ್ದ ಚಂದ್ರ ಕಾರಣ ಎಂದು ನೆಪ ಹೇಳಿದರೂ ಅದು ನಿಜವಲ್ಲ ಎಂಬುದು ನಮಗೂ ಗೊತ್ತು. ಎಲ್ಲ ಕೆಟ್ಟದಕ್ಕೂ ಇನ್ನಾರೋ
ಒಬ್ಬರನ್ನು ಕಾರಣ ಮಾಡುವ ಚಟವಿರುವ ಮನುಷ್ಯ ಕೂಡ ತನ್ನ ಮಾನಸಿಕ ಸಮಸ್ಯೆಗಳಿಗೆ ಚಂದ್ರನ ಪ್ರಭಾವದ ಮೇಲೆ ಆರೋಪ ಮಾಡುವ ಅಭ್ಯಾಸ ಮಾಡಿಕೊಂಡಿದ್ದಾನಷ್ಟೆ.

ಚಂದ್ರನ ಈ ಶಕ್ತಿ ಹಾಗೂ ಪ್ರಭಾವ ನಮ್ಮಲ್ಲಿ ಒಳ್ಳೆಯದಕ್ಕೂ ಅನಾಹುತಗಳಿಗೂ ಏಕಕಾಲಕ್ಕೆ ಕಾರಣವಾಗಿದೆ. ಚಂದ್ರನಿಂದ ಅದ್ಭುತ ಕಾವ್ಯಗಳೂ, ಭಯಾನಕ ಸಾಹಿತ್ಯಗಳೂ ಹುಟ್ಟಿವೆ. ಚಂದ್ರನನ್ನು ನಾವು ಹೇಗೆ ಶಾಶ್ವತ ಪ್ರೀತಿಯ ಸಂಕೇತವನ್ನಾಗಿ ಮಾಡಿದ್ದೇವೋ ಹಾಗೆಯೇ ಮಾಟಗಾತಿಯರು ಕಪ್ಪುಗತ್ತಲೆಯಲ್ಲಿ ಸಣ್ಣ ಬೆಳಕಿನ ಜತೆ ಪೊರಕೆ ಹಿಡಿದು ಓಡಾಡುವ ಜಾಗವನ್ನಾಗಿಯೂ ಮಾಡಿದ್ದೇವೆ. ಚಂದ್ರನ ಮೇಲೆ ನೆಗೆದ ಹಸುವಿನ ಕತೆ
ಹೇಳುತ್ತ, ಚಮಚದಲ್ಲಿರುವ ಅನ್ನ ಮಗುವಿನ ಬಾಯಿಯೊಳಗೆ ಮಾಯವಾಗುವ ಕೌತುಕವನ್ನು ನೋಡಿದ್ದೇವೆ. ಅದೇ ವೇಳೆ ನಮ್ಮಲ್ಲಿ ಚಾಂದ್ರಮಾನ ಪಂಚಾಂಗವಿದೆ. ಅದಕ್ಕೂ ಚಂದ್ರನೇ ಮೂಲ. ಚಂದ್ರ ಪ್ರತಿದಿನ ಬದಲಾಗುತ್ತಾನಾದ್ದರಿಂದ ಬದಲಾಗುವ ಕಾಲಕ್ಕೆ ಅವನೇ ಅನುಪಮ ರೂಪಕ. ‘ಹೊಣೆಗೇಡಿ ಚಂದ್ರ ಕರಗುತ್ತಾನೆ, ಕ್ಷಯಿಸುತ್ತಾನೆ; ಓ ಜೂಲಿಯೆಟ್ ದಯವಿಟ್ಟು ಅವನ ಮೇಲೆ ಆಣೆ ಮಾಡಬೇಡ’ ಎನ್ನುತ್ತಾನೆ ರೋಮಿಯೋ. ಹೀಗಾಗಿ ಚಂದ್ರ ನಮ್ಮ ಕಣ್ಣಿನಲ್ಲಿ ಕ್ಷಣಿಕವೂ ಅಸ್ಥಿರವೂ ಹೌದು. ಇದು ಚಂದ್ರನ ಕತ್ತಲಿನ ಬದಿ. ಚಂದ್ರನಿಗೆ ಇನ್ನೊಂದು ಮುಖವಿದೆ. ಅದು ದೈವಿಕವಾದ ಮುಖ. ಜಗತ್ತಿನ ಅನೇಕ ಪುರಾತನ ಸಂಸ್ಕೃತಿಯಲ್ಲಿ ಅವನು ದೇವರಾಗಿದ್ದಾನೆ.

ಗ್ರೀಸ್‌ನಲ್ಲಿ ಅವನು ಸೆಲೀನ್. ರೋಮ್‌ನಲ್ಲಿ ಲೂನಾ. ಅಜ್ಟೆಕ್ ಮೆಕ್ಸಿಕೋದಲ್ಲಿ ಕೋಯೋಲ್‌ಕ್ಸಾಕಿ. ಭಾರತದಲ್ಲಿ ಚಂದ್ರದೇವತೆ ಅಥವಾ ಚಂದ್ರಗ್ರಹ. ಸಂಸ್ಕೃತದಲ್ಲಿ ಅವನು ಸೋಮ. ಅದರಿಂದಲೇ ಮತ್ತೇರಿಸುವ ಸೋಮರಸ ಬಂದಿದೆ. ಚಂದ್ರ ಅಗಣಿತ ಗುಣಗಳ ನಿಧಿ ಹಾಗೂ ಅಚಲ ಎಂದು ನಾವು ಕೊಂಡಾಡುತ್ತೇವೆ. ಅವನು ನಕ್ಷತ್ರಗಳ ದೇವತೆ. ಕೃಷ್ಣನ ಚಂದ್ರವಂಶಕ್ಕೂ ಅವನೇ ಅಧಿ ದೇವತೆ. ಅತ್ರಿಯ ಮಗ. ಬ್ರಹ್ಮನ ಮನಸ್ಸಿ
ನಿಂದ ಹುಟ್ಟಿದವನು. ಅವನ ಪ್ರಕಾಶಮಯವಾದ ಪ್ರಶಾಂತ ಬೆಳಕು ಜ್ಯೋತ್ಸ್ನಾ ಅಥವಾ ಜ್ಯೋತಿಯ ರೂಪದಲ್ಲಿ ಇಡೀ ಜಗತ್ತಿನಲ್ಲಿ ಹರಡಿದೆ. ಅದೊಂದು ದೈವಿಕ ಬೆಳಕು. ಪ್ರತಿ ಹುಣ್ಣಿಮೆಯೂ ವಿಶೇಷ ಪೂಜೆಗೆ ಹೇಳಿಮಾಡಿಸಿದ ದಿನ. ಅದು ಸಂಭ್ರಮಾಚರಣೆಗೂ ನೆಪ. ಹೋಳಿ ಹುಣ್ಣಿಮೆ, ಹನುಮಾನ್ ಜಯಂತಿ, ಆಷಾಢದಲ್ಲಿ ಬರುವ ಗುರುಪೂರ್ಣಿಮೆಗಳೆಲ್ಲ ಆಚರಿಸಲ್ಪಡುವುದು ಹುಣ್ಣಿಮೆಯಂದು. ಬುದ್ಧ ಹುಟ್ಟಿದ್ದು,
ಜ್ಞಾನೋದಯ ಪಡೆದಿದ್ದು ಹಾಗೂ ಮರಣಹೊಂದಿದ್ದು ಹುಣ್ಣಿಮೆಯಂದು. ಅಂದು ಬೈಸಾಕಿ ಹುಣ್ಣಿಮೆ. ಹೀಗಾಗಿ ಚಂದ್ರ ನಮಗೆ ದೈವಿಕ ಸಾಕ್ಷಾತ್ಕಾರದ ಪ್ರತಿರೂಪ. ಭಾರತೀಯರಿಗೆ ಚಂದ್ರಯಾನ ನೌಕೆ ಚಂದ್ರನ ಅಂಗಳದ ಮೇಲೆ ಇಳಿದ ಸಾಧನೆಯು ಕೇವಲ ವಿಜ್ಞಾನಕ್ಕೆ ಸಂಬಂಧಪಟ್ಟಿದ್ದಷ್ಟೇ ಅಲ್ಲ, ಅದಕ್ಕಿಂತ ಹೆಚ್ಚಿನದು. ಅದು ನಮ್ಮ ನಂಬಿಕೆ ಹಾಗೂ ತತ್ವಶಾಸದ ಜತೆಗೆ ನಡೆಸಿದ ಅನುಸಂಧಾನ. ಪ್ರಚಂಡ ಬುದ್ಧಿವಂತಿಕೆಯ ವಿಜ್ಞಾನಿಗಳು ಮಾತೃದೇವತೆಗೆ ಉಲ್ಟಾ ಹೊಕ್ಕಳುಬಳ್ಳಿಯೊಂದನ್ನು ಸೃಷ್ಟಿಸಿ, ಅದರ ಮೂಲಕ ವಿಶ್ವದ ಅನಂತ ವಾತಾವರಣದಲ್ಲಿ ಸುತ್ತುತ್ತ ಸಾಗುವ ನೌಕೆಯನ್ನು ಕಳುಹಿಸಿ, ನಮ್ಮ ಕಲ್ಪನಾಶಕ್ತಿ ಈ ಸೃಷ್ಟಿಯ ಕುತೂಹಲದ ತಾಣಗಳಲ್ಲಿ ಒಂದಾಗಿರುವ ಚಂದ್ರನ ಕುಳಿಗಳ ಬಳಿಗೆ ಕರೆದೊಯ್ದು ಬಿಟ್ಟಿದ್ದಾರೆ.

ವಿಜ್ಞಾನಿಗಳು ನಿಜವಾಗಿಯೂ ಹೀರೋಗಳು
ಆಗಸ್ಟ್ ೧೪ರಂದು ಗೋವಾದ ದಿನಪತ್ರಿಕೆಯೊಂದರ ಮೊದಲ ಪುಟದಲ್ಲಿ ದೊಡ್ಡದೊಂದು ಹೆಡ್‌ಲೈನ್ ಇತ್ತು. ಕೇಂದ್ರ ಸರಕಾರದ ಲೆಕ್ಕಪರಿಶೋಧಕರು ಗೋವಾ ಸರಕಾರ ಹೇಗೆ ೨೦೦೦ ಕೋಟಿ ರು. ಗಳನ್ನು ಮಾಯ ಮಾಡಿದೆ ಎಂಬುದನ್ನು ಪತ್ತೆಹಚ್ಚಿದ ಕುರಿತ ಸುದ್ದಿಯದು. ಆ ಹಣ ಎಲ್ಲಿ ಹೋಯಿತು ಎಂಬುದೇ ಯಾರಿಗೂ ಅಂತಪಾರು ಹರಿಯುವಂತಿರಲಿಲ್ಲ. ಪಂಚಾಯತ್ ಇಲಾಖೆ,
ಮುನ್ಸಿಪಾಲಿಟಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಸಂಸ್ಕೃತಿ ಇಲಾಖೆ ಈ ನಾಲ್ಕು ಇಲಾಖೆಗಳಲ್ಲೇ ೧೬೧೮.೫ ಕೋಟಿ ರೂಪಾಯಿ ನಾಪತ್ತೆಯಾಗಿತ್ತು. ಸಚಿವ ಸಂಪುಟ ರಚನೆಯಾಗುವಾಗ ಇನ್ನುಮುಂದೆ ಶಾಸಕರು ಯಾವ ಖಾತೆ ಕೇಳಬೇಕು ಎಂಬುದು ನಿಮಗೀಗ ಅರ್ಥವಾಗಿರಬೇಕು. ಕೇಂದ್ರ ಸರಕಾರದ ಲೆಕ್ಕ ಪರಿಶೋಧಕರಿಗೆ ಗೋವಾದ ಹಣಕಾಸು ಸಚಿವಾಲಯ ಇನ್ನುಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ, ಸಾರ್ವಜನಿಕ
ಹಣವನ್ನು ನಿಗದಿತ ಉದ್ದೇಶಕ್ಕೇ ಬಳಕೆಯಾಗುವಂತೆ ನೋಡಿ ಕೊಳ್ಳಲು ಕಠಿಣ ವ್ಯವಸ್ಥೆ ಜಾರಿಗೆ ತರುತ್ತೇವೆ ಎಂದು ಹೇಳಿತು. ಥ್ಯಾಂಕ್ಯೂ ಥ್ಯಾಂಕ್ಯೂ ಥ್ಯಾಂಕ್ಯೂ. ಆದರೆ ಈಗಾಗಲೇ ಗಾಯಬ್ ಆಗಿರುವ ಹಣದ ಕತೆಯೇನು ಸ್ವಾಮಿ? ಪ್ರಶ್ನೆ ಕೇಳಬೇಡಿ, ಉತ್ತರವನ್ನೂ ಕೇಳಿಸಿಕೊಳ್ಳಬೇಡಿ. ಗೋವಾದಂತಹ ಪುಟ್ಟ ರಾಜ್ಯದಲ್ಲೇ ಹೀಗೆ ಬೇಕಾಬಿಟ್ಟಿಯಾಗಿ ಸರ್ಕಾರಗಳು ಇಷ್ಟೊಂದು ಹಣ ಹೊಡೆಯುತ್ತವೆ ಎಂದಾದರೆ ದೊಡ್ಡ ರಾಜ್ಯಗಳ ಕತೆಯೇನು?
 ***
ನಮ್ಮಲ್ಲಿ ಕೆಲವರಿಗೆ ಇದೊಂದು ದುಃಖದ ಸುದ್ದಿ. ಅನಾಮತ್ತು ಎರಡು ಶತಮಾನಗಳ ಕಾಲ ಜಗತ್ತಿನ ಎಲ್ಲ ಭಾಷೆಗಳಿಂದಲೂ ಪದಗಳು ಹಾಗೂ ನುಡಿಗಟ್ಟುಗಳನ್ನು ಪಡೆದುಕೊಂಡು ತನ್ನದಾಗಿಸಿಕೊಂಡು ಬೆಳೆಯುತ್ತ ಹೋಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂವಹನದ ಸಾಧನವಾಗಿದ್ದ ಇಂಗ್ಲಿಷ್ ಭಾಷೆ ಈಗ ೨೧ನೇ ಶತಮಾನದಲ್ಲಿ ಬಹುರಾಷ್ಟ್ರೀಯತೆಯ ಮುಂದೆ ಶರಣಾಗಿದೆ. ಈಗ ಹೊಸತೊಂದು ಭಾಷೆಯು ವ್ಯಾಕರಣ, ನಾಮಪದ, ಕ್ರಿಯಾಪದಗಳನ್ನೆಲ್ಲ ನುಂಗಿಹಾಕುತ್ತಾ ೧೩ನೇ ಶತಮಾನದಲ್ಲಿ ಮಂಗೋಲಿಯನ್ನರು ಬೆಳೆದಿದ್ದಕ್ಕಿಂತ ವೇಗವಾಗಿ ಬೆಳೆಯುತ್ತಿದೆ. ಅದರ ಹೆಸರು ಗ್ಲೋಬ್ಲಿಶ್. ತಂತ್ರಜ್ಞಾನವೇ ಅದರ ನಾಲಿಗೆ. ಮೊಬೈಲು ಹಾಗೂ ಸೋಷಿಯಲ್ ಮೀಡಿಯಾಗಳೇ ಅದರ ಆಡುಂಬೊಲ. ಆ ಭಾಷೆಯಲ್ಲಿ ಅಕ್ಷರಗಳಿಗಿಂತ ಹೆಚ್ಚಾಗಿ ನಂಬರ್ ಗಳು ಹಾಗೂ ಚಿಹ್ನೆಗಳಿವೆ. ಅದರಲ್ಲಿ ಸ್ವರಗಳೂ, ವ್ಯಂಜನಗಳೂ, ಕ್ರಿಯಾಪದಗಳೂ, ನಾಮಪದಗಳೂ xint, tch, mm, brr, ನಿಮ್ಮ ಐಕ್ಯೂ ಇನ್ನೂ ಎತ್ತರದಲ್ಲಿದ್ದರೆ phpht ಇಂತಹ ಪದಗಳಲ್ಲಿ ಮಾತನಾಡಬಹುದು. ತಂತ್ರಜ್ಞಾನದಲ್ಲಿ ಸೂಚ್ಯವಾಗಿ ಮಾತನಾಡುವುದಕ್ಕಷ್ಟೇ ಸಮಯವಿದೆ. ಚಾಟ್‌ಜಿಪಿಟಿ ಮುಂತಾದವುಗಳ ಮೂಲಕ ಈ ಗ್ಲೋಬ್ಲಿಶ್ ಇನ್ನಷ್ಟು ಬೆಳೆಯುತ್ತಾ, ಸಾಹಿತ್ಯ ದೊಳಗೂ ತೂರಿಕೊಳ್ಳಲು ನಕ್ಷೆ ಸಿದ್ಧಪಡಿಸಿ ಕೊಳ್ಳತೊಡಗಿದೆ. ಗ್ಲೋಬ್ಲಿಶ್ ಪದ ನನ್ನ ಸೃಷ್ಟಿ. ಮುಂದೆ ಯಾರಾದರೂ ಇತಿಹಾಸಕಾರರು ಈ ಪದಕ್ಕೆ ಇನ್ನಾರಿಗೋ ಕ್ರೆಡಿಟ್ ನೀಡು ತ್ತಿದ್ದರೆ ನೀವಿದನ್ನು ಮೊಟ್ಟಮೊದಲು ಇಲ್ಲಿ ಓದಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ. ಇದು ಗ್ಲೋಬ್ಲಿಶ್ ಅಲ್ಲ ಘೆಲಿಶ್ ಎಂದು ಮಡಿವಂತರು ಯಾರಾದರೂ ಹೇಳಿದರೆ ಅದರಲ್ಲೂ ತಪ್ಪಿಲ್ಲ.  ಘೆಲಿಶ್ ಅಂದರೆ ಘೋರ ಎಂದರ್ಥ. ಕೃತಕ ಬುದ್ಧಿಮತ್ತೆ ಯಾವತ್ತೂ ಮನುಷ್ಯನ ಬುದ್ಧಿಮತ್ತೆಯ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ ಎಂದು ಸ್ವಲ್ಪ ಕಾಲದ ಹಿಂದಷ್ಟೇ ಯಾರೋ ವಾದ ಮಾಡುತ್ತಿದ್ದರಲ್ಲವೇ? ಅಥವಾ ನಾನೇ ಬದಿಗೆ ಸರಿದು ಸುಮ್ಮನಾಗಿಬಿಡಲಾ? ಇಷ್ಟಾಗಿಯೂ ನಾನು ಆಶವಾದಿ. ಮುಂದೆಯಾವುದಾದರೂ ಚಾಟ್‌ಬಾಕ್ಸ್ ಅಗಾಥಾ ಕ್ರಿಸ್ಟಿ ಅಥವಾ ಲಿಯೋಟಾಲ್‌ಸ್ಟಾಯ್‌ನ ಕಾದಂಬರಿಯನ್ನು ಬರೆದರೆ ಆಗ ಮನುಷ್ಯರು ೧೦ ರುಪಾಯಿಗೆ ಅದರ ಪೈರೇಟೆಡ್ ಆವೃತ್ತಿ ಖರೀದಿಸಿ ಹಣ ಉಳಿಸುತ್ತಾರೆ! ಲೇಖಕನಿಗೆ ಸುಖಾಸುಮ್ಮನೆ ಯಾಕೆ ದುಡ್ಡು ಕೊಡಬೇಕು ಅಲ್ಲವೇ? ಅದು ಗ್ಲೋಬ್ಲಿಶ್‌ನ ಬಿಸಿನೆಸ್ ಮಾಡೆಲ್ಲನ್ನೇ ನಾಶಪಡಿಸುತ್ತದೆ ಬಿಡಿ, ಚಿಂತೆ ಬೇಡ.

***

ಪ್ರತಿ ವರ್ಷ ಅಮೆರಿಕದಲ್ಲಿ ಆಗಸ್ಟ್ ೧೦ರಂದು ರಾಷ್ಟ್ರೀಯ ಆಲಸಿಗಳ ದಿನ ಆಚರಿಸಲಾಗುತ್ತದೆ. ಇದು ಇಷ್ಟು ಕಾಲ ಭಾರತೀಯರ ಕಣ್ಣಿಗೆ ಏಕೆ ಬಿದ್ದಿಲ್ಲವೋ ಗೊತ್ತಿಲ್ಲ. ಆಲಸಿತನವನ್ನೂ ಕಲಾತ್ಮಕ ಅಭಿವ್ಯಕ್ತಿಯೆಂದು ಬಿಂಬಿಸುವ ಕಲೆ ಭಾರತೀಯರಿಗೆ ಚೆನ್ನಾಗಿ ಗೊತ್ತಿದೆ. ಏನನ್ನೂ ಮಾಡದೆ ಸುಮ್ಮನೆ ಕುಳಿತುಕೊಳ್ಳಲು ನಾವು ಕಂಡುಕೊಂಡಿರುವ ಅದ್ಭುತ ವಿಧಾನ ವೆಂದರೆ ಗಾಸಿಪ್ ಮಾಡುವುದು. ನಮ್ಮ ಪಾಲಿಗೆ ಸರ್ವಾಧಿಕಾರಿ ಗಳೆಂದರೆ ನಮ್ಮ ಬದುಕನ್ನು ನಿಯಂತ್ರಿಸಲು ಯತ್ನಿಸುವವರಲ್ಲ, ಬದಲಿಗೆ ನಮ್ಮ ಮಾತನ್ನು ನಿಯಂತ್ರಿಸಲು ಯತ್ನಿಸುವ ವ್ಯಕ್ತಿಗಳು. ಹೀಗೆ ಆಲಸಿಗಳ ಬಗ್ಗೆ ಯೋಚಿಸುತ್ತ ರಜಾದಿನಗಳ ಬಗ್ಗೆ ಸಣ್ಣದೊಂದು ಸಂಶೋಧನೆ ಮಾಡಿ ನೋಡಿದೆ. ಅರ್ಥಾತ್ ಗೂಗಲ್ ಮಾಡಿದೆ. ಅದರಲ್ಲಿ ಕ್ರಿಸ್ತಶಕ ೧೬೫ರಲ್ಲಿ ರೋಮನ್ ಸಾಮ್ರಾಜ್ಯದಲ್ಲಿ ವರ್ಷಕ್ಕೆ ೧೩೫ ರಜಾದಿನಗಳಿದ್ದವು. ಅವರಿಗೆ ವೀಕೆಂಡ್‌ಗಳಿರಲಿಲ್ಲ. ಬದಲಿಗೆ ಹಬ್ಬ, ರಾಜರ ಹುಟ್ಟುಹಬ್ಬ ಹಾಗೂ ಟ್ರೇಡ್ ಯೂನಿಯನ್‌ಗಳು ನಿಗದಿಪಡಿಸಿದ ದಿನಗಳು ರಜಾದಿನಗಳಾಗಿದ್ದವು. ಉದಾಹರಣಗೆ, ಅಲ್ಲಿ ಪ್ಲಂಬರ್‌ಗಳನ್ನು ಗೌರವಿಸಲು ಒಂದು ರಾಷ್ಟ್ರೀಯ ದಿನವಿತ್ತು. ಅದಕ್ಕೆ ಶನಿಗ್ರಹ ಅಧಿಪತಿಯಾಗಿದ್ದ! ವ್ಯಾಪಾರಿಗಳನ್ನು ಗೌರವಿಸುವ ದಿನಾಚರಣೆ ಮೇ ೧೫ರಂದು ನಡೆಯುತ್ತಿತ್ತು. ಅದಕ್ಕೆ ಬುಧಗ್ರಹ ಅಧಿಪತಿಯಾಗಿದ್ದ. ಬೇಕರಿ ಕೆಲಸಗಾರರಿಗಾಗಿ ಜೂನ್‌ನಲ್ಲಿ ಒಂದು ದಿನಾಚರಣೆಯಿತ್ತು. ಮಾಂಸಖಂಡಗಳಿಂದ ತುಂಬಿದ ದಷ್ಟಪುಷ್ಟ ಯುದ್ಧದೇವರು ಮಂಗಳ ಹಾಗೂ ಅದೃಷ್ಟದ ಬಲಶಾಲಿ ದೇವತೆ ಫಾರ್ಚುನಾಗಳಿಗೆ ಬೇರೆ ಬೇರೆ ರಾಷ್ಟ್ರೀಯ ದಿನಗಳಿದ್ದವು. ಆಗಸ್ಟ್ ೧೩ರಂದು ಗುಲಾಮರ ದಿನವಾಗಿತ್ತು. ಅಂದು ಅವರಿಗೆ ಬೇಕಾದಷ್ಟು ಕುಡಿಯಲು, ತಿನ್ನಲು, ಮೋಜು ಮಾಡಲು ಬಿಡುತ್ತಿದ್ದರು. ಮುಂದೆ ಬಂದ ತತ್ವಶಾಸಜ್ಞನೂ ಆದ ಸಾತ್ವಿಕ ಚಕ್ರವರ್ತಿ ಮಾರ್ಕಸ್ ಔರೆಲಿಯಸ್ ಈ ರಜೆಗಳನ್ನು ಕಡಿತಗೊಳಿಸಲು
ಹೊರಟಾಗ ಅಧಿಕಾರಿಗಳು ಅಡ್ಡ ಬಂದರು. ಪರಿಣಾಮ ಉಲ್ಟಾ ಆಯಿತು. ರಜೆಗಳ ಸಂಖ್ಯೆ ೧೭೭ಕ್ಕೆ ಏರಿತು.

***
ನಿಯತಕಾಲಿಕೆಗಳಲ್ಲಿ ಆಗಾಗ ಎಲ್ಲೋ ಒಂದು ಕಡೆ ಹೊಳೆಯುವ ವಜ್ರಗಳು ಸಿಕ್ಕಿಬಿಡುತ್ತವೆ. ‘ಸ್ಪೆಕ್ಟೇಟರ್‘ ಮ್ಯಾಗಜೀನ್‌ನಲ್ಲಿ ಸಿಕ್ಕ ಅತ್ಯುತ್ತಮ ತುಣುಕು ಇದು. ಜಗತ್ಪ್ರಸಿದ್ಧ ಕೃತಿಗಳಾದ ‘ಅದಾ’ ಮತ್ತು ‘ಲಾಫ್ಟರ್ ಇನ್ ದಿ ಡಾರ್ಕ್’ನ ಲೇಖಕ ವ್ಲಾದಿಮಿರ್ ನಬೋಕೋವ್ ಯಾವಾಗಲೂ ಮೌಖಿಕ ಸಂದರ್ಶನ ನೀಡುತ್ತಿರಲಿಲ್ಲ. ಬದಲಿಗೆ, ಪ್ರಶ್ನೆಗಳನ್ನು ತರಿಸಿಕೊಂಡು ಉತ್ತರ ಬರೆದು ಕಳುಹಿಸುತ್ತಿದ್ದ. ಒಮ್ಮೆ ಅವನು ಪತ್ರಕರ್ತನೊಬ್ಬನಿಗೆ ಯಾವ ನಾಚಿಕೆಯೂ ಇಲ್ಲದೆ, ‘ನಾನು ಜೀನಿಯಸ್ ರೀತಿ ಯೋಚಿಸುತ್ತೇನೆ, ಪಳಗಿದ ಲೇಖಕನ ರೀತಿ ಬರೆಯುತ್ತೇನೆ, ಆದರೆ ಮಗುವಿನಂತೆ ಮಾತನಾಡುತ್ತೇನೆ’ ಎಂದು ಹೇಳಿದ್ದ. ಬಹಳಷ್ಟು ಲೇಖಕರ ವಿಷಯದಲ್ಲಿ ಸತ್ಯವಾದ ಮಾತಿದು. ಆದರೆ ನಮ್ಮ ಕತೆಯೇನು?  ಅಯ್ಯೋ, ಜೀನಿಯಸ್ ರೀತಿಯಲ್ಲಿ ಯೋಚಿಸದಿದ್ದರೂ ನಾವೇ ಜೀನಿಯಸ್ ಎಂದುಕೊಂಡಿರುತ್ತೇವೆ. ಅದರ ಬದಲಿಗೆ ನಮ್ಮ ಕಾಲಿನ ಮೇಲೆ ನಿಂತು ನಾವೇನು ಎಂಬುದನ್ನು ಯೋಚಿಸೋಣ. ನಾವೇನು ಬರೆಯುತ್ತೇವೋ ಅದನ್ನು ಮತ್ತೆ ಮತ್ತೆ ಪರಿಶೀಲಿಸೋಣ. ನಮ್ಮ ಅಂಕಣಗಳನ್ನು ನೋಡಿ ಪತ್ರಿಕಾಲಯದಲ್ಲಿ ಸಂಪಾದಕರು ಮೂಗು ಮುರಿಯದಂತೆ ಎಚ್ಚರ ವಹಿಸೋಣ.

***
ಗೋವಾದ ಕೋರ್ಜಿಮ್‌ನಲ್ಲಿರುವ ÊÜ fish-without-frills ರೆಸ್ಟೋರೆಂಟ್ ‘ಸಾಯಿ’ಯಲ್ಲಿ ನಾವು ಐದು ಮಂದಿ ಊಟಕ್ಕೆ ಸೇರಿದ್ದೆವು. ಬಹಳ ಒಳ್ಳೆಯ, ಆದರೆ ಈಗಿನವರು ಮರೆತೇಬಿಟ್ಟಿರುವ ಪ್ರಶಾಂತ ರೆಸ್ಟೋರೆಂಟ್ ಅದು. ಮೊಬೈಲ್ ಸದ್ದುಮಾಡಿತು. ಸ್ನೇಹಿತೆಯೊಬ್ಬಳು ಹುಬ್ಬು ಗಂಟಿಕ್ಕಿಕೊಂಡು ಎದ್ದು ಹೋಗಿ, ಮಾತನಾಡಿ, ವಾಪಸ್ ಬಂದು ಕುಳಿತು, ‘ನಮ್ಮನೆಗೆ ಹಾವು ಬಂದುಬಿಟ್ಟಿದೆಯಂತೆ’ ಅಂದಳು. ನಾವು ಮೀನು ತಿನ್ನುತ್ತಿದ್ದೆವು. ಅವಳ ಮನೆಗೆಲಸದಾಳು ಹೆದರದೆ ಶಾಂತವಾಗಿದ್ದನಂತೆ. ಹಾವು ಹೇಗೆ ಬಂತೋ ಹಾಗೇ ಮೆತ್ತಗೆ ಹೊರಗೆ ಹೋಗಿತ್ತಂತೆ. ಕೋರ್ಜಿಮ್‌ನಲ್ಲಿ ಯಾರೂ ಹಾವು ಕೊಲ್ಲುವುದಿಲ್ಲ. ಅಷ್ಟೇಕೆ, ಇಡೀ ಗೋವಾದಲ್ಲಿ ಯಾರೂ ಹಾವು ಹೊಡೆಯುವುದಿಲ್ಲ. ಮನೆಗೆ ಬಂದ ಹಾವು ಹೊರಗೆ ಹೋಗದಿದ್ದರೆ ಹಾವು ಹಿಡಿಯುವವರನ್ನು ಕರೆಸುತ್ತಾರೆ. ನಾವು ಮತ್ತೆ ಮೀನಿಗೆ ಮರಳಿ ಹರಟೆ ಹೊಡೆಯತೊಡಗಿದೆವು. ಅಷ್ಟರಲ್ಲಿ ಅವಳ ಮೊಬೈಲ್‌ಗೆ ಹಾವಿನ ಫೋಟೋ ಬಂತು. ಕತೆಯ ನೀತಿ ನಿಮಗೂ ಗೊತ್ತಿದೆ. ಹಿಂಸೆಯಿಂದ ಹಿಂಸೆ ಹುಟ್ಟುತ್ತದೆ. ಪ್ರಕೃತಿಯನ್ನು ಗೌರವಿಸಿ, ಆಗ ಪ್ರಕೃತಿಯೂ ನಿಮ್ಮನ್ನು ಗೌರವಿಸುತ್ತದೆ. ಅದಕ್ಕಿಂತ ಮೊದಲು ಬಾಗಿಲು ಮುಚ್ಚಿಕೊಂಡಿರಿ.
(ಲೇಖಕರು ಹಿರಿಯ ಪತ್ರಕರ್ತರು)