Friday, 29th November 2024

ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಕಿವಿಮಾತು

ಕಿವಿಮಾತು

ಡಾ.ಕೆ.ಎಚ್.ಗೋವಿಂದ ರಾಜ್

ಎಲ್ಲವನ್ನೂ ಬದಿಗಿಟ್ಟು ಯುಪಿಎಸ್‌ಸಿ ಪ್ರಯತ್ನಿಸಬೇಡಿ. ಒಂದು ಕೆಲಸ ಅಥವಾ ಪಿಜಿ ಕೋರ್ಸ್ ಸೇರಿ ಅದರೊಂದಿಗೇ ಯುಪಿಎಸ್‌ಸಿಗೆ ಅಭ್ಯಾಸ ಮಾಡಿ. ಹೀಗೆ ಮಾಡಿದರೆ ಮೂರು ವರ್ಷಗಳಲ್ಲಿ ಏನಿಲ್ಲದಿದ್ದರೂ ಒಂದು ಪಿಜಿ ಪದವಿ ಕೈಸೇರುತ್ತದೆ, ಬೇರೆ ನೌಕರಿಗೆ ನಾಂದಿಯಾಗುತ್ತದೆ.

ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆ ಹೆಚ್ಚಾಗುತ್ತಾ ಹೋದಂತೆ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಗಬೇಕು, ವಯೋಮಿತಿ ಏರಿಸಬೇಕು, ಪ್ರಯತ್ನಗಳ ಮಿತಿಯನ್ನೂ ಏರಿಸಬೇಕು ಎಂಬ ಬೇಡಿಕೆ ಬರುವುದು ನಿರೀಕ್ಷಿತವೇ. ಸರಕಾರವೂ ಈ ಬೇಡಿಕೆಗೆ ಸ್ಪಂದಿಸಿ ಮಿತಿಯನ್ನು ಏರಿಸುತ್ತಾ ಬಂದಿದೆ. ಈಗ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ೩೨ ವರ್ಷ ಹಾಗೂ ಪ್ರಯತ್ನ
ಗಳು ೯. ಇತರ ಹಿಂದುಳಿದ ಮೀಸಲು ಅಭ್ಯರ್ಥಿಗಳಿಗೆ ೩೫ ವರ್ಷ ಹಾಗೂ ೯ ಪ್ರಯತ್ನಗಳು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ೩೭ ವರ್ಷ ಹಾಗೂ ಪ್ರಯತ್ನ ಗಳ ಮಿತಿ ಇಲ್ಲ. ಈ ಎರಡೂ ಮಿತಿಗಳನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿಸಬಹುದೇ ಹೊರತು ಕಡಿಮೆ ಮಾಡುವ ಸಾಧ್ಯತೆ ಕ್ಷೀಣ.

೩೦ ವರ್ಷಗಳ ಹಿಂದೆ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಕುಳಿತ ಅಭ್ಯರ್ಥಿಗಳು ಸುಮಾರು ಒಂದು ಲಕ್ಷ. ೨೦೨೩ರ ಪರೀಕ್ಷೆಗೆ ಕುಳಿತವರ ಸಂಖ್ಯೆ ೧೩.೪ ಲಕ್ಷ. ೨೦೦೬ ರಲ್ಲಿ
೧.೯೫ ಲಕ್ಷ ಜನ ಕುಳಿತಿದ್ದರು. ಪ್ರತಿ ವರ್ಷ ಈ ಪರೀಕ್ಷೆಯ ಮೂಲಕ ತುಂಬಲಾಗುವ ಹುzಗಳ ಸಂಖ್ಯೆ ಸುಮಾರು ಒಂದು ಸಾವಿರ. ಅದರಲ್ಲಿ ಯಾವುದೇ ಏರಿಕೆ ಇಲ್ಲ. ಆದ್ದರಿಂದ ಯಶಸ್ಸಿನ (೧೦೦೦ರಲ್ಲಿ ಯಾವುದಾದರೂ ಒಂದು ಹುದ್ದೆಗೆ ಆಯ್ಕೆ) ಪ್ರಮಾಣ ಇಳಿಕೆಯಾಗುತ್ತಾ ಬಂದು ಈಗ ಶೇ.೦.೦೭೫ ರಷ್ಟಾಗಿದೆ. ಅದರಲ್ಲೂ ಐಎಎಸ್, ಐಪಿಎಸ್ ಆಗುವ ಸಾಧ್ಯತೆ ಇನ್ನೂ ಕಡಿಮೆ. ಆದ್ದರಿಂದ ಐಎಎಸ್ ಮಾಡುವ ಪ್ರಯತ್ನದಲ್ಲಿ ಯಶ ಕಾಣುವ ಸಾಧ್ಯತೆ ಜಾಕ್ ಪಾಟ್ ಹೊಡೆಯುವ ಸಾಧ್ಯತೆಗಿಂತಲೂ ಕಡಿಮೆ ಎನ್ನಬಹುದು.

ಆ ಪ್ರಯತ್ನದಲ್ಲಿ ಜೀವನದ ಅತ್ಯಂತ ಸೃಜನಶೀಲವಾದ ಆರೇಳರಿಂದ ಹತ್ತು ವರ್ಷಗಳೇ ಕಳೆದು ಹೋಗುತ್ತವೆ. ಇಷ್ಟೆ ವರ್ಷಗಳು ಪ್ರಯತ್ನಿಸಿ ಯಶ ಕಾಣದೇ ಹತಾಶರಾದ, ಬೇರೇನನ್ನೂ ಮಾಡುವ ಅರ್ಹತೆ, ಸ್ಥೈರ್ಯ ಹಾಗೂ ಸಾಮರ್ಥ್ಯ ಕಳೆದುಕೊಂಡ ಲಕ್ಷಾಂತರ (೩೨ ವರ್ಷ ಹಾಗೂ ಮೇಲ್ಪಟ್ಟ) ಯುವಕ-ಯುವತಿಯರು ದೇಶದಲ್ಲಿ ಸೃಷ್ಟಿಯಾಗುತ್ತಿದ್ದಾರೆ. ಐಎಎಸ್ ಕೋಚಿಂಗ್ ಸೆಂಟರ್‌ಗಳು ಸರಿಸುಮಾರು ಎಲ್ಲ ನಗರಗಳಲ್ಲಿ ಇವೆ. ಐಎಎಸ್ ಕನಸು ಮಾರುವ ಈ ಕೇಂದ್ರಗಳು ವಿದ್ಯಾರ್ಥಿಯ ಸಾಮರ್ಥ್ಯ ಪರೀಕ್ಷೆ ಮಾಡದೇ ಬರುವ ಎಲ್ಲರನ್ನೂ ಸೇರಿಸಿಕೊಂಡು ದುಬಾರಿ ಶುಲ್ಕ ಪಡೆಯುವುದು ಒಂದು ಕಡೆಯಾದರೆ, ಈ ಅಭ್ಯರ್ಥಿಗಳ ಊಟ, ವಸತಿ ಸೇವೆ ಗಳದ್ದೇ ಒಂದು ವ್ಯಾಪಾರವಾಗಿ ಬಹಳಷ್ಟು ಜನರ ಆದಾಯದ ಮೂಲವಾಗಿ ಪರಿಣಮಿಸಿದೆ. ಅಲ್ಲದೆ ಅಭ್ಯರ್ಥಿಗಳು ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವರಾಗಿ ಐಎಎಸ್ ಕನಸಿಗಾಗಿ ಎಲ್ಲ ಕಷ್ಟಗಳನ್ನೂ ಸಹಿಸುತ್ತಾರೆ.

ದೆಹಲಿಯ ರಾಜೇಂದ್ರ ನಗರದಲ್ಲಿ ವಾಸಕ್ಕೆ ಯೋಗ್ಯವಲ್ಲದ ಹಾಗೂ ಅನಧಿಕೃತ ಕಟ್ಟಡಗಳಲ್ಲಿ ಉಳಿದುಕೊಳ್ಳುವ, ಅರೆ ಹೊಟ್ಟೆ ತಿಂದು ನಿದ್ದೆಗೆಟ್ಟು ಓದುವ ಅಭ್ಯರ್ಥಿಗಳು ಕಾಣಸಿಗುತ್ತಾರೆ.
ಮೊನ್ನೆ ರಾ ಐಎಎಸ್ ಸ್ಟಡಿ ಸರ್ಕಲ್‌ನ (ವಾಸಕ್ಕೆ ಅನುಮತಿಯಿಲ್ಲದ) ನೆಲಮಹಡಿಯಲ್ಲಿ ವಾಸವಿದ್ದು, ಅಮೂಲ್ಯ ಜೀವ ಕಳೆದುಕೊಂಡ ಮೂರು ಅಭ್ಯರ್ಥಿಗಳು ಇದಕ್ಕೆ ನಿದರ್ಶನ ಹಾಗೂ ಇದು ನಮ್ಮೆಲ್ಲರ ಕಣ್ಣು ತೆರೆಸುವ ವಿಷಯ. ಈ ಕೇಂದ್ರಗಳು ಯಾವುದೇ ಪದವಿ ನೀಡುವುದಿಲ್ಲವಾದ್ದರಿಂದ ಯಾವುದೇ ನಿಯಮ, ನಿರ್ದೇಶನಗಳಿಗೆ ಒಳಗಾಗುವುದಿಲ್ಲ. ಹೀಗಾಗಿ ಸರಕಾರವೂ ಇವುಗಳ ಮೇಲೆ ನಿಯಂತ್ರಣ ಸಾಽಸುವುದು ಕಷ್ಟವೇ.

ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತಮ್ಮ ಸಾಮರ್ಥ್ಯ ತಾವೇ ಗುರುತಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ ಹಾಗೂ ಅದಕ್ಕನುಗುಣವಾಗಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಹೊಸದಾಗಿ ಪ್ರಯತ್ನಕ್ಕೆ ಇಳಿಯುವ ಹಾಗೂ ಒಂದೆರಡು ಪ್ರಯತ್ನಗಳನ್ನು ಮುಗಿಸಿರುವ ಅಭ್ಯರ್ಥಿಗಳಿಗೆ ನನ್ನ ಕಿವಿಮಾತುಗಳು ಹೀಗೆ. ೧. ಎಲ್ಲವನ್ನೂ ಬದಿಗಿಟ್ಟು ಯುಪಿಎಸ್‌ಸಿಗೆ ಪ್ರಯತ್ನಿಸ
ಬೇಡಿ. ಒಂದು ನೌಕರಿ ಗಿಟ್ಟಿಸಿ ಅದನ್ನು ಮಾಡುತ್ತಲೇ ಪ್ರಯತ್ನ ಮಾಡಿ. ಇಲ್ಲವಾದರೆ ಒಂದು ಪಿಜಿ ಕೋರ್ಸ್ ಸೇರಿ ಅದರೊಂದಿಗೇ ಯುಪಿಎಸ್‌ಸಿಗೆ ಅಭ್ಯಾಸ ಮಾಡಿ. ಹೀಗೆ ಮಾಡಿದರೆ ಮೂರು ವರ್ಷಗಳಲ್ಲಿ ಏನಿಲ್ಲದಿದ್ದರೂ ಒಂದು ಪಿಜಿ ಪದವಿ ಕೈಸೇರುತ್ತದೆ, ಬೇರೆ ನೌಕರಿಗೆ ನಾಂದಿ ಯಾಗುತ್ತದೆ.

೨. ಕೋಚಿಂಗ್ ಸೆಂಟರ್ ಸೇರುವುದಕ್ಕಾಗಿ ಹಾಗೂ ಅಲ್ಲಿನ ವಾಸಕ್ಕಾಗಿ ಅಪಾರ ಹಣ ವ್ಯಯ ಮಾಡಬೇಡಿ. ಕೋಚಿಂಗ್ ಕೇಂದ್ರಗಳು ನಿಮಗೆ ಒಂದು ಮಟ್ಟಕ್ಕಷ್ಟೇ ಸಹಾಯಕವಾಗಬಹುದು. ಉಳಿದಿದ್ದು ನಿಮ್ಮ ಬುದ್ಧಿಮತ್ತೆ ಹಾಗೂ ಅವಿರತ ಶ್ರಮ.

೩. ಎಲ್ಲ ರೀತಿಯ ಸಿದ್ಧತೆಯೊಂದಿಗೆ ನಿಮ್ಮ ಮೊದಲನೇ ಅಥವಾ ಎರಡನೇ ಪ್ರಯತ್ನದಲ್ಲಿ ಪ್ರಿಲಿಮಿನರಿ ಪಾಸಾಗದೇ ಹೋದರೆ, ಮುಂದಿನ ಪ್ರಯತ್ನದಲ್ಲಿ ಪಾಸಾಗುವ ಸಾಧ್ಯತೆ ಬಹಳ ಕಡಿಮೆ. ಯಾಕೆಂದರೆ ಜನರಲ್ ಸ್ಟಡೀಸ್ ಹಾಗೂ ಸಿಸ್ಯಾಟ್ ಅವೇ ಪೇಪರ್‌ಗಳು, ಅದೇ ಅಭ್ಯಾಸ, ಅದೇ ನೀವು, ಪಾಸಾಗಲು ಹೊಸದೇನು ಮಾಡಬಲ್ಲಿರಿ? ಮೇಲಾಗಿ ಪ್ರತಿ ವರ್ಷ ಹೊಸ ಪದವೀ ಧರರು ಹೊಸ ಹುರುಪಿನೊಂದಿಗೆ ಸ್ಪರ್ಧೆಗೆ ಇಳಿಯುತ್ತಾರೆ. ಆದ್ದರಿಂದ ಸತತವಾಗಿ ಎರಡು ಪ್ರಯತ್ನಗಳಲ್ಲಿ ಯಶ ಸಿಗದೇ ಹೋದರೆ ನಿಮ್ಮ ಒಳ್ಳೆಯದಕ್ಕಾಗಿ ಯುಪಿಎಸ್‌ಸಿ ಕೈಬಿಡಿ. ಬೇರೇನಾದರೂ ಯೋಚಿಸಿ.

೪. ಮೂರು ದಶಕಗಳ ಸೇವೆಯ ನಂತರ ಇಷ್ಟು ಮಾತ್ರ ಹೇಳಬಹುದು. ಐಎಎಸ್ ಒಂದು ಒಳ್ಳೆಯ ನೌಕರಿಯೇ ಆದರೂ ಅದರಷ್ಟೇ, ಬಹುಶಃ ಈಗಿನ ಪರಿಸ್ಥಿತಿಯಲ್ಲಿ ಅದಕ್ಕಿಂತಲೂ
ಒಳ್ಳೆಯ ಅವಕಾಶಗಳು ಕಾರ್ಪೋರೇಟ್ ಜಗತ್ತಿನಲ್ಲಿ ಇವೆ. ೫. ಆರರಿಂದ ಹತ್ತು ವರ್ಷಗಳ ಪ್ರಯತ್ನ ಮಾಡಿ ಹತಾಶರಾಗಿ ಹೊರಬೀಳುವುದಕ್ಕಿಂತ ಎರಡು ಮೂರು ವರ್ಷಗಳ ನಂತರ ಬುದ್ಧಿವಂತರಾಗಿ ಹೊರಬರುವುದು ಮೇಲು. ಬೇರೆಲ್ಲಿಯಾದರೂ ನಿಮ್ಮ ಯಶಸ್ಸು ನಿಮಗೆ ಕಾಯುತ್ತಿರಬಹುದು.

( ಲೇಖಕರು : ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ
ಇಲಾಖೆ ಮಹಾರಾಷ್ಟ್ರ )