Thursday, 19th September 2024

ಅಮೆರಿಕ ಇಪ್ಪತ್ತು ವರ್ಷದ ಅಫ್ಘಾನ್‌ ಯುದ್ಧದಲ್ಲಿ ಕಡಿದು ಗುಡ್ಡೆ ಹಾಕಿದ್ದೇನು ?

ಶಿಶಿರ ಕಾಲ

ಶಿಶಿರ್‌ ಹೆಗ್ಡೆ, ನ್ಯೂಜೆರ್ಸಿ

shishirh@gmail.com

ಹಡ್ಸನ್ ನದಿಯ ಇತ್ತಕಡೆ ನ್ಯೂಜರ್ಸಿಯ ಎಕ್ಸ್ ಚೇಂಜ್ ಪ್ಲೇಸ್‌ನಲ್ಲಿ ನಿಂತು ಕಣ್ಣು ಎತ್ತಿ ನೋಡಿದರೆ ಅಂದು ವರ್ಡ್ ಟ್ರೇಡ್ ಸೆಂಟರ್ ಇರುವ ಜಾಗ ಕಾಣಿಸುತ್ತದೆ. ಆ ಜಾಗದ ಪಕ್ಕದಲ್ಲಿಯೇ ಹೊಸತಾಗಿ ನಿಂತ 94 ಅಂತಸ್ತಿನ, ಅರ್ಧ ಕಿಲೋಮೀಟರ್ ಎತ್ತರದ ಒನ್ ವರ್ಡ್ ಟ್ರೇಡ್ ಸೆಂಟರ್ ಬಿಲ್ಡಿಂಗ್.

ಅಂದು ಟ್ವಿನ್ ಟವರ್ ಇದ್ದ ಜಾಗವನ್ನು ಇಂದು ಕರೆಯುವುದು ಗ್ರೌಂಡ್ ಜೀರೋ. ಈಗ ಆ ಜಾಗದಲ್ಲಿ ಎರಡು ಬಾವಿಯಾಕಾರದ, ಸುತ್ತಲಿನಿಂದ ನೀರು ಸುರಿಯುವ ಸ್ಮಾರಕವಿದೆ. ಬಾವಿ ಕಟ್ಟೆಯಂತಿರುವ ಮೂರು ಫೂಟು ಗೋಡೆಯ ಮೇಲ್ಮೈಯಲ್ಲಿ ಅಂದು ಉಗ್ರರ ದಾಳಿಯಲ್ಲಿ ಸತ್ತವರ ಹೆಸರನ್ನು ಗ್ರಾನೈಟ್‌ನಲ್ಲಿ ಕೆತ್ತಿ ಬರೆಯ ಲಾಗಿದೆ. ಹೆಸರನ್ನು ಓದುತ್ತ ಹೋದರೆ ಅಲ್ಲಿ ಭಾರತೀಯ ಹೆಸರುಗಳೂ ಇವೆ. ಎಲ್ಲ ದೇಶ, ಜಾತಿ, ಧರ್ಮದ ಹೆಸರುಗಳೂ ಕಾಣಿಸುತ್ತವೆ. ಇಂದಿಗೂ ಅಲ್ಲಿಗೆ ಬಂದು, ಆ ಕಲ್ಲಿನಲ್ಲಿ ಕೆತ್ತಿದ ಹೆಸರಿನಲ್ಲಿ ಉಂಟಾದ ಕುಳಿಯಲ್ಲಿ ಬಿಳಿಯ ಬಣ್ಣದ ಗುಲಾಬಿ ಸಿಕ್ಕಿಸಿ ಹೋಗುವ ಮೃತರ ಕುಟುಂಬದವರಿದ್ದಾರೆ.

ಆ ಗೋಡೆಗೆ ತಲೆ ಕೊಟ್ಟು ಕಣ್ಣೀರು ಸುರಿಸುವ ಸೀನ್ ಅಲ್ಲಿ ಒಂದರ್ಧ ಗಂಟೆ ಕೂತರೆ ನಾಲ್ಕಾರು ಬಾರಿ ಕಾಣಿಸುತ್ತದೆ. ಟ್ವಿನ್ ಟವರ್ ಉರುಳಿ ಇಪ್ಪತ್ತು ವರ್ಷ ವಾಯಿತು. ಅಂದಿನಿಂದ ಇಂದಿನವರೆಗೂ ಈ ಒಂದು ಆಘಾತದಿಂದ ಅಮೆರಿಕ ಹೊರಗೆ ಬಂದೇ ಇಲ್ಲ. ಅಲ್ಲಿ ಅಂದು ಸತ್ತವರು 19 ಉಗ್ರರನ್ನು ಸೇರಿಸಿ 2996 ಮಂದಿ. ಆದರೆ ಅಮೆರಿಕಕ್ಕೆ ಆದ ಆಘಾತವನ್ನು ಈ ಸಂಖ್ಯೆಯಿಂದ ಅಳೆದರೆ ತಪ್ಪಾಗುತ್ತದೆ. 9/11 ಘಟನೆಯಾದ ನಂತರ ಅಮೆರಿಕದ ಸೆಕ್ಯೂರಿಟಿ ವ್ಯವಸ್ಥೆಗಳು ಎಲ್ಲಿಲ್ಲದಂತೆ ಬದಲಾಗಿಬಿಟ್ಟಿವೆ.

ಇಪ್ಪತ್ತು ವರ್ಷದ ನಂತರ, ಇಂದು ಕೂಡ ಅಮೆರಿಕದಲ್ಲಿ 9/11 ಘಟನೆಯನ್ನು ದಿನಕ್ಕೆರಡು ಬಾರಿಯಾದರೂ ಇಲ್ಲಿನ ಟಿವಿಯಲ್ಲಿ ಕೇಳಿಯೇ ಇರುತ್ತೇವೆ. ನ್ಯೂಯಾರ್ಕ್ ನಗರ ವಾಸಿಗಳನ್ನು ಸುಮ್ಮನೆ ಮಾತನಾಡಿಸಿ ಅಂದು ಸ್ಥಿತಿ ಹೇಗಿತ್ತು ಎಂದು ಕೇಳಿದರೆ ಕಣ್ಣೀರಿನ ಜತೆಯೇ ಮಾತು ಶುರುವಾಗುತ್ತದೆ. ಇಂದಿಗೂ ಅಂದಿನ ಘಟನೆಯನ್ನು ವಿವರಿಸುವಾಗ ನ್ಯೂಯಾರ್ಕಿಗರ ಸ್ವರ ಗದ್ಗತಿತವಾಗುತ್ತದೆ. ವರ್ಡ್ ಟ್ರೇಡ್ ಸೆಂಟರ್‌ನ ಆಗ ಕೆಲಸ ಮಾಡುತ್ತಿದ್ದ ಸ್ನೇಹಿತ ಆ ದಿನ ಬೆಳಗಿನ ರೈಲು ತಪ್ಪಿಸಿಕೊಂಡಿದ್ದ ಹಾಗಾಗಿ ಬದುಕುಳಿದ. ಸಹೋದ್ಯೋಗಿ ಅಂದು ಅಲ್ಲಿಗೆ ಹೋಗುವವನಿದ್ದ, ಆದರೆ ಅಲಾರಾಂ ಆಗಿದ್ದು ಕೇಳಿಸದೇ ಸಮಯಕ್ಕೆ ಸರಿಯಾಗಿ ಏಳಲಿಲ್ಲ, ಹಾಗಾಗಿ ಬಚಾವಾದ. ಒಬ್ಬ ತನ್ನ ಅಣ್ಣನನ್ನು ಕಳೆದುಕೊಂಡ, ಇನ್ನೊಬ್ಬ ತನ್ನ ತಂದೆಯನ್ನು. ಹೀಗೆ ಒಬ್ಬೊಬ್ಬರದು ಒಂದೊಂದು ಕಥೆ.

ಅದರ ಭೀಕರತೆ ನಾವು ಟಿವಿಯಲ್ಲಿ ನೋಡಿದ್ದಕ್ಕಿಂತ ಹತ್ತು ಪಟ್ಟು ಜಾಸ್ತಿ ಎಂದು ತಿಳಿಯುವುದೇ ಅಲ್ಲಿನ ಪ್ರತ್ಯಕ್ಷ ದರ್ಶಿಗಳನ್ನು ಮಾತನಾಡಿಸಿದಾಗ. ಇದೆಲ್ಲ
ಕೇಳಿದಾಗ ಇಪ್ಪತ್ತು ವರ್ಷಗಳಿಂದ ನಡೆಯುತ್ತಿರುವ ಯುದ್ಧವೊಂದು ನಡೆಯಲೇ ಬೇಕಿತ್ತು ಅನಿಸಿಬಿಡುತ್ತದೆ. ವರ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿಯಾದದ್ದು
೨೦೦೧ರಲ್ಲಿ ಮೊದಲ ಬಾರಿಯೇನಲ್ಲ. ಅದಕ್ಕಿಂತ ಎಂಟು ವರ್ಷ ಮೊದಲು, 1993 ರ ಫೆಬ್ರವರಿಯಲ್ಲಿ ವರ್ಡ್ ಟ್ರೇಡ್ ಸೆಂಟರ್ ಕಾಂಪ್ಲೆಕ್ಸ್‌ನ ಪಾರ್ಕಿಂಗ್ ಲಾಟ್‌ನಲ್ಲಿ ಬಾಂಬ್ ಒಂದನ್ನು ಇಸ್ಲಾಮಿ ಭಯೋತ್ಪಾದಕರಿಬ್ಬರು ಸಿಡಿಸಿದ್ದರು.

ಅದರಲ್ಲಿ ಸತ್ತವರ ಸಂಖ್ಯೆ ಆರು ಆದರೆ ಒಂದು ಸಾವಿರ ಮಂದಿ ಗಾಯಗೊಂಡಿದ್ದರು. ಆ ದಾಳಿಯನ್ನು ಮಾಡಿದ್ದು ಅಹ್ಮದ್ ಅಜಾಜ್ ಮತ್ತು ರಾಂಝಿ ಯೌಸೆಫ್. ಅವರು ಬಂದದ್ದು ಪಾಕಿಸ್ತಾನದಿಂದ. ಈ ದಾಳಿ ಅದೆಷ್ಟು ದೊಡ್ಡದಿತ್ತು ಎಂದರೆ ಸುಮಾರು ಅರವತ್ತು ಫೂಟ್ ಅಗಲದ ಬಾವಿಯನ್ನು ವರ್ಡ್ ಟ್ರೇಡ್ ಸೆಂಟರ್‌ನ ನೆಲಮಹಡಿಯಲ್ಲಿ ಸೃಷ್ಟಿಸಿತ್ತು. ಅಂದು ಆದ ನಷ್ಟ ಬರೋಬ್ಬರಿ ಐದುನೂರು ಮಿಲಿಯನ್ ಡಾಲರ್. ಅಂದು ಆ ದಾಳಿಯಾಗುವಾಗ ಆ ಬಿಲ್ಡಿಂಗ್‌ಗಳಲ್ಲಿ ಐವತ್ತು ಸಾವಿರ ಮಂದಿ ಇದ್ದರು. ಒಂದು ವೇಳೆ ಅಂದೇ ಆ ಬಿಲ್ಡಿಂಗ್ ಬಿದ್ದಿದ್ದರೆ ಬಹುಷಃ ಜಗತ್ತಿನ ಅತ್ಯಂತ ಭೀಕರ ಘಟನೆ ಅಂದು ಸಂಭವಿಸಿಬಿಡುತ್ತಿತ್ತು. ವಹಾಬಿ ಉಗ್ರರಿಗೆ ಯಾವತ್ತಿನಿಂದಲೂ ಈ ಎರಡು ಬಿಲ್ಡಿಂಗ್ ಮೇಲೆ ಕಣ್ಣು ಇತ್ತು. ಆದರೆ ಆಕಾಶದಲ್ಲಿ ವಿಮಾನ ಹಾರಿಸಿಕೊಂಡು ಬಂದು ಈ ರೀತಿ ದಾಳಿಯಾಗಬಹುದು ಎಂದು ಯಾರಿಗೂ ಅಂದಾಜಿರಲಿಲ್ಲ.

9/11 ದಾಳಿಯಾಗಿ ಇಂದಿಗೆ ಎರಡು ದಶಕವಾಗಿದೆ. ಅಂದಿನಿಂದ ಇಂದಿನವರೆಗೂ ಅಫ್ಘನ್‌ನಲ್ಲಿ ಅಮೆರಿಕದ ಸೈನ್ಯ ಬೀಡು ಬಿಟ್ಟಿದೆ – ದಾಳಿ ನಡೆಸುತ್ತ, ಯುದ್ಧ
ಮಾಡುತ್ತ ಇಪ್ಪತ್ತು ವರ್ಷ ಕಳೆದಿದೆ. ಒಂದಿಷ್ಟು ಅಂಕಿ ಸಂಖ್ಯೆಗಳನ್ನು ಹೇಳುವುದಾದರೆ – ಇಪ್ಪತ್ತು ವರ್ಷದ ಯುದ್ಧದಲ್ಲಿ 47,245 ಅಫ್ಘನ್ ನಾಗರಿಕರು, 72 ಪತ್ರಕರ್ತರು, 444 ನೆರವು ಕಾರ್ಯಕರ್ತರು, 69000 ಅಫ್ಘನ್ ಯೋಧರು, 2448 ಅಮೆರಿಕನ್ ಯೋಧರು, 2846 ಅಮೆರಿಕನ್ ಖಾಸಗಿ ಭದ್ರತಾ
ಗುತ್ತಿಗೆದಾರರು, 1444 ಮಂದಿ ನ್ಯಾಟೋ ಯೋಧರು –  ಹೀಗೆ ಲೆಕ್ಕಕ್ಕೆ ಸಿಕ್ಕ ಸತ್ತವರ ಸಂಖ್ಯೆ ಒಂದೂಕಾಲು ಲಕ್ಷ ಮಂದಿ. ಯುದ್ಧ ಶುರುವಾಗಲು ಬೆಂಕಿಯ ಕಿಡಿಯಂತೆ ನಡೆದ 9/11 ಘಟನೆಯಲ್ಲಿ ಸತ್ತದ್ದು 2977 ಮಂದಿ, ಗಾಯಗೊಂಡವರು 25000.

ಅಮೆರಿಕ ಯುದ್ಧಕ್ಕೆ ವ್ಯಯಿಸಿದ ಹಣ 2.26 ಟ್ರಿಲಿಯನ್ ಡಾಲರ್. 1,68,46,040 ಕೋಟಿ ರುಪಾಯಿಗೆ ಸಮ. ಈ ಯುದ್ಧದಲ್ಲಿ ಗಾಯಗೊಂಡವರು, ಕೈ, ಕಾಲು, ಕಣ್ಣು, ಕಳೆದುಕೊಂಡವರ ಸಂಖ್ಯೆಯ ಲೆಕ್ಕ ಇಟ್ಟವರು ಯಾರು? ಈ ಸಂಖ್ಯೆಗಳನ್ನು ಇನ್ನೊಮ್ಮೆ ಓದಿಕೊಂಡು ನೋಡಿ. ಇದರ ವಿಶ್ಲೇಷಣೆ ನಿಮಗೇ ಬಿಡುತ್ತೇನೆ. ಪ್ರಶ್ನೆ ಯುದ್ಧದ್ದಲ್ಲ, ಯುದ್ಧ ಬೇಕಿತ್ತೇ, ಬೇಡವೇ ಅದು ಕೂಡ ಪ್ರಶ್ನೆಯೇ ಅಲ್ಲ. ಅಮೆರಿಕ ಸರಕಾರವನ್ನು ಕೇಳಿದರೆ, ವರ್ಡ್ ಬ್ಯಾಂಕ್ ಅಂಕಿ ಸಂಖ್ಯೆಯನ್ನು ನಮ್ಮ ಮುಂದಿಡುತ್ತದೆ.

ಯುದ್ಧಕ್ಕಿಂತ ಮೊದಲು ಅಫ್ಘನ್ ಹೇಗಿತ್ತು ಮತ್ತು ಈಗ ಹೇಗಿದೆ ಎಂದು ವಿವರಿಸಲು ಸರಾಸರಿ ಜೀವಿತಾವಧಿ ಯುದ್ಧಕ್ಕಿಂತ ಮೊದಲು ೫೬ ವರ್ಷವಿತ್ತು. ಈಗ ಅದು 64 ಕ್ಕೇರಿದೆ, ಅಕ್ಷರಸ್ಥರ ಸಂಖ್ಯೆ 8% ಇದ್ದದ್ದು ಈಗ ಅದು 43% ಕ್ಕೇರಿದೆ, ಅಫ್ಘನ್ ಪೇಟೆಯ ಜೀವನ ಸುಧಾರಿಸಿದೆ, ಬದಲಾಗಿದೆ, ಮೊದಲು ಸ್ವಚ್ಛ ಕುಡಿಯುವ ನೀರಿನ ಲಭ್ಯತೆ ಕೇವಲ 16% ಮಂದಿಗೆ ಮಾತ್ರವಿತ್ತು. ಈಗ ಅದು ಶೇ.89ಕ್ಕೇರಿದೆ. ಅಫ್ಘನ್ ಕ್ರೀಡಾ ತಂಡಗಳು – ಕ್ರಿಕೆಟ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿವೆ – ಹೀಗೆ ತರಹೇವಾರಿ ಒಳ್ಳೊಳ್ಳೆ ಅನ್ನಿಸುವ ಸಂಖ್ಯೆಗಳನ್ನು ಮುಂದಿಡುತ್ತವೆ.

ಕೇವಲ ಆ ಸಂಖೆಯನ್ನಷ್ಟೇ ನೋಡಿದರೆ ಅಮೆರಿಕ ಕೇವಲ ದಾಳಿ ನಡೆಸಿದ್ದಷ್ಟೇ ಅಲ್ಲ ಬದಲಿಗೆ ತುಂಬಾ ಒಳ್ಳೆಯ ಬದಲಾವಣೆಗೆ ಕಾರಣವಾಗಿದೆ ಎಂದೆನಿಸಿ ಬಿಡುತ್ತದೆ. ಆದರೆ ಅಸಲಿ ಹಕೀಕತ್ತು ಏನು? ಅಧ್ಯಕ್ಷ ಟ್ರಂಪ್ ಈ ಯುದ್ಧವನ್ನು ಕೊನೆಗಾಣಿಸುವ ವಿಚಾರವನ್ನು ಬಡಬಡಾಯಿಸಿ ಒಂದಿಷ್ಟು ಮಾತು, ಕೆಲಸವನ್ನು
ತನ್ನ ಅಽಕಾರದ ಕೊನೆಯ ದಿನಗಳಲ್ಲಿ ಮಾಡಿದ್ದ. ಅದಾದ ನಂತರ ಅಧಿಕಾರಕ್ಕೆ ಬಂದ ಜೋ ಬೈಡನ್ ಯುದ್ಧ ನಿಲ್ಲಿಸಬೇಕು ಎಂದು ಮೊದಲ ವಾರದ ಹೇಳಿಕೆ ಕೊಟ್ಟಿದ್ದ. ಹಾಗೆ ಹೇಳುವಾಗ ಅಂದಿಷ್ಟು ಅಫ್ಘನ್ ಎಡೆಗಿನ ಕಾಳಜಿ ಕಾಣಿಸಿತ್ತು. ಇಷ್ಟೊಂದು ದೀರ್ಘ ಕಾಲದ ಯುದ್ಧಕ್ಕೊಂದು ತಾರ್ಕಿಕ ಅಂತ್ಯ ಸಿಗಬಹುದು ಎಂದೆನಿಸಿತ್ತು. ಯಾವುದೇ ಯುದ್ಧವಿರಲಿ – ಅದು ಸಂಭವಿಸಲೇಬಾರದು, ಆದಷ್ಟು ಬೇಗ ಮುಗಿಯಬೇಕು.

ಯುದ್ಧ ದೇಶ ದೇಶಗಳ ನಡುವೆ ನಡೆಯುತ್ತಿದ್ದರೂ ಅದರ ಪೆಟ್ಟು ಒಂದಿಂದು ರೀತಿಯಲ್ಲಿ ಜಗತ್ತಿನ ಎಲ್ಲ ದೇಶಗಳೂ ತಿನ್ನುತ್ತವೆ. ಒಂದು ದೇಶ ತನ್ನ ಗಡಿಯಲ್ಲಿ ನಿಂತು ಇನ್ನೊಂದು ದೇಶದ ಮೇಲೆ ನಡೆಸುವ ಯುದ್ಧದಂತಲ್ಲ ಅಫ್ಘನ್ ಯುದ್ಧ. ಅಮೆರಿಕ ಇರುವುದು ಇನ್ನೊಂದು ಖಂಡದಲ್ಲಿ. ಅಫ್ಘನ್ ನೆಲದ ನಿಂತು ಅಮೆರಿಕ
ಈ ಯುದ್ಧವನ್ನು ಇಷ್ಟೊಂದು ದೀರ್ಘ ಕಾಲ ಮಾಡಿದೆ. ಆದರೆ ಅಮೆರಿಕ ಕಳೆದ ಎರಡು ವಾರದಿಂದ ಅಫ್ಘನ್‌ನಿಂದ ಪ್ಯಾಕಪ್ ಮಾಡಿಕೊಂಡು ಹೊರಡುತ್ತಿದೆ. ಅಲ್ಲಿನ ತನ್ನ ಅತಿ ದೊಡ್ಡ ಏರ್ ಬೇಸ್ ಬಗ್ರಾಮ್‌ನಿಂದ ಅಮೆರಿಕನ್ ಸೈನಿಕರು ಜುಲೈ ರಂದು ಪೊಟ್ಲೆ ಕಟ್ಟಿ ಹೊರಟಿದ್ದಾರೆ. ಈ ಬಗ್ರಾಮ್ ಏರ್ ಬೇಸ್ ಅನ್ನು ಕಟ್ಟಿದ್ದು 1950ರಲ್ಲಿ ಶೀತಲ ಸಮರದ ಸಮಯದಲ್ಲಿ. ಅಲ್ಲಿಂದ ಮುಂದೆ ಸೋವಿಯತ್ ಅಫ್ಘನ್ ಯುದ್ಧದಲ್ಲಿ ಇದೊಂದು ತೀರಾ ಸ್ಟ್ರಾಟೆಜಿಕ್ ಏರ್ ಬೇಸ್ ಆಗಿತ್ತು.

ಅಲ್ಲಿಂದ ೨೦೦೧ರವರೆಗೆ ಅಮೆರಿಕನ್ ಹಿಡಿತದಲ್ಲಿ ಪರೋಕ್ಷವಾಗಿದ್ದ ಈ ಏರ್ ಬೇಸ್ ನಂತರದಲ್ಲಿ ಸಂಪೂರ್ಣವಾಗಿ ಅಮೆರಿಕನ್ ಹಿಡಿತದಲ್ಲಿಯೇ ಇತ್ತು. ಕಳೆದ
ಇಪ್ಪತ್ತು ವರ್ಷ ಅಮೆರಿಕನ್ ಯೋಧರ ಮನೆಯಾಗಿದ್ದ ಈ ಏರ್ ಬೇಸ್ ಸುತ್ತ ಕಾಲಾನಂತರದಲ್ಲಿ ಊರು – ಪೇಟೆಗಳು ಹುಟ್ಟಿಕೊಂಡವು. ಈ ಊರಿನಲ್ಲಿದ್ದ ಯುವಕರಿಗೆಲ್ಲ ಈ ಏರ್ ಬೇಸ್‌ನಲ್ಲಿಯೇ ಉದ್ಯೋಗ. ಆ ಏರ್ ಬೇಸ್‌ನಲ್ಲಿ ಹತ್ತು ಸಾವಿರ ಸೈನಿಕರು ಉಳಿದುಕೊಳ್ಳುವ ವ್ಯವಸ್ಥೆಯಿದೆ. ಆ ಎಲ್ಲ ಯೋಧರಿಗೆ ಬೇಕಾಗುವ ಸೌಲಭ್ಯ, ಆಹಾರ, ವಿಮಾನ ಹೀಗೆ ಎಲ್ಲದರ ವ್ಯವಸ್ಥೆ ಅಲ್ಲಿದೆ. ಬುಷ್, ಒಬಾಮ ಅಲ್ಲಿಗೆ ಹೋಗಿ ಉಳಿದು ಭಾಷಣ ಬಿಗಿದು ಬಂದಿದ್ದಾರೆ.

ಇಂತಹ ದೊಡ್ಡ ಏರ್ ಬೇಸ್ ಅನ್ನು ಏಕಾಏಕಿ ಜುಲೈ 2ರ ರಾತ್ರಿ ಅಮೆರಿಕ ಖಾಲಿ ಮಾಡಿಕೊಂಡು ಹೊರಟುಬಿಟ್ಟಿದೆ. ಏಕಾಏಕಿ ಎಂದರೆ ಹೇಗೆ ಗೊತ್ತೇ? ಅಫ್ಘನ್ ಸರಕಾರಕ್ಕಾಗಲಿ ಅಥವಾ ಇನ್ಯಾರಿಗೋ ಈ ಏರ್‌ಬೇಸ್ ಅನ್ನು ಹಸ್ತಾಂತರಿಸಿಲ್ಲ. ಸಾವಿರದ ಲೆಕ್ಕದಲ್ಲಿ ಕಾರು, ಸುಮಾರು ಮೂವತ್ತು ಲಕ್ಷ ಸೈನಿಕ ಬಳಕೆಯ ವಸ್ತುಗಳು, ಸುಮಾರು ಐದು ಸಾವಿರ ತಾಲಿಬಾನ್ ಖೈದಿಗಳು ಇವೆಲ್ಲವನ್ನು ಹಾಗೆಯೇ ಬಿಟ್ಟು, ಎಷ್ಟು ಸಾಧ್ಯವೋ ಅಷ್ಟು ಬಂದೂಕುಗಳನ್ನು, ಮದ್ದು ಗುಂಡುಗಳನ್ನು ವಿಮಾನದಲ್ಲಿ ತುಂಬಿಸಿಕೊಂಡು ಸೈನ್ಯ ಹೊರಟುಬಿಟ್ಟಿದೆ.

ಖಿಖ eZo Zeಜಿಛಿqಛಿb ಜಿಠಿo ಜಟZ ಜ್ಞಿ ಅಜeZಜಿoಠಿZ ಹೀಗೆ ವೈಟ್‌ಹೌಸ್‌ನ ಮೈಕ್‌ನ ಎದುರು ಬಂದು ಮೊನ್ನೆ ಹೇಳಿದ್ದು ಜೋ ಬೈಡನ್. ಬುಷ್, ಒಬಾಮ,
ಟ್ರಂಪ್ ಈಗ ಬೈಡನ್, ಇವರೆಲ್ಲರೂ ಈ ಒಂದು ಡೈಲಾಗ್ ಅನ್ನು ಹೇಳಿದವರೇ. ಆದರೆ ಆ ಗೋಲ್ ಏನು ಎನ್ನುವುದರಲ್ಲಿ ಯಾರೊಬ್ಬರಿಗೂ ಸ್ಪಷ್ಟತೆಯೇ ಇದ್ದಂತಿಲ್ಲ. ಜೋ ಬೈಡನ್ ತನ್ನ ಸಮರಾಂತ್ಯದ (!?) ಭಾಷಣದಲ್ಲಿ ನಾವು ಅಫ್ಘನ್ ದೇಶದ ಮೇಲೆ ದಂಡೆತ್ತಿ ಹೋದ ಕಾರಣ ಈಡೇರಿದೆ. ೯/೧೧ ದಾಳಿಯ
ಮೂಲಕ ಅಮೆರಿಕದ ಮೇಲೆ ದಾಳಿ ಮಾಡಿದ ಉಗ್ರರನ್ನು ಕೊಂದಾಗಿದೆ.

ನಮ್ಮ ಉದ್ದೇಶ ಉಗ್ರರನ್ನು, ಒಸಾಮಾನನ್ನು ಕೊಲ್ಲುವುದು. ಉಗ್ರರನ್ನು ಹುಟ್ಟಿಹಾಕಬಹುದಾದ ವ್ಯವಸ್ಥೆಯ ನ್ನು ನಾಶ ಮಾಡುವುದು. ನಾವು ಅಫ್ಘನಿಸ್ತಾನಕ್ಕೆ ದೇಶ ಕಟ್ಟಲು ಹೋದದ್ದಲ್ಲ. ಅದು ನಮ್ಮ ಉದ್ದೇಶ, ಕೆಲಸ ಎರಡೂ ಅಲ್ಲ. ಇನ್ನೂ ಈ ಯುದ್ಧವನ್ನು ಮುಂದುವರಿಸಬೇಕು ಎನ್ನುವವರಲ್ಲಿ ನನ್ನ ಪ್ರಶ್ನೆಯೆಂದರೆ ಇನ್ನೆಷ್ಟು ಅಮೆರಿಕನ್ನರ ಜೀವವನ್ನು ನಾವು ಈ ಯುದ್ಧದ ಹೆಸರಿನಲ್ಲಿ ಕಳೆದುಕೊಳ್ಳಬೇಕು? ಇಷ್ಟು ಸಾವು ನೋವು ಸಾಕಲ್ಲವೇ?’. ಮೇಲ್ನೋಟಕ್ಕೆ ಈ ಎಲ್ಲ ಮಾತು, ಪ್ರಶ್ನೆ ಸಮಂಜಸವೆನ್ನಿಸುತ್ತದೆ. ಆದರೆ ಬೈಡನ್ ಮಾತನ್ನು ಸ್ವಲ್ಪ ವಿವರವಾಗಿ ನೋಡಬೇಕಿದೆ.

ಅಮಾಯಕರು ಸತ್ತದ್ದು ಸರಿಯೇ ತಪ್ಪೇ? ಈ ಎಲ್ಲ ಸಾವು ನ್ಯಾಯವೇ? ಎಂಬಿತ್ಯಾದಿ ನೂರೆಂಟು ಪ್ರಶ್ನೆಗಳು ಪಕ್ಕಕ್ಕಿರಲಿ. ಇಲ್ಲಿ ಏಳುವ ಪ್ರಶ್ನೆಗಳು ಬೇರೆಯದು. ಅಮೆರಿಕ ಈ ಇಪ್ಪತ್ತು ವರ್ಷದ ಯುದ್ಧದಲ್ಲಿ ಸಾಧಿಸಿದ್ದೇನು? ದಾಳಿ ನಡೆಸಿದ ಉಗ್ರರನ್ನು ಕೊಲ್ಲುವುದೇ ಉದ್ದೇಶವಾಗಿದ್ದಲ್ಲಿ ಆ ಕೆಲಸವನ್ನು ದಂಡೆತ್ತಿ ಹೋದ ಕೆಲವೇ ತಿಂಗಳುಗಳಲ್ಲಿಯೇ ಅಮೆರಿಕ ಮಾಡಿ ಮುಗಿಸಿತ್ತು. ಬಹುತೇಕ ಮಾಸ್ಟರ್ ಮೈಂಡ್‌ಗಳನ್ನು ಅಮೆರಿಕ ಅದ್ಯಾವತ್ತೋ ಕೊಂದು ಆಗಿತ್ತು. ಅದಾದ ನಂತರ
ಉಳಿದುಕೊಂಡ ಒಬ್ಬನೇ ಒಬ್ಬನೆಂದರೆ ಬಿನ್ ಲಾಡೆನ್. ಆತ ಸತ್ತ ಬಗ್ಗೆ ಖಾತ್ರಿಯಿರಲಿಲ್ಲ. ಹಾಗಾಗಿ ಯುದ್ಧವನ್ನು ಮುಂದುವರಿಸಿಕೊಂಡು ಹೋಯಿತು ಎನ್ನುವ ವಾದವನ್ನೇ ಇಟ್ಟುಕೊಂಡರೂ ಮೇ ೨೦೧೧ ರಲ್ಲಿ ಲಾಡೆನ್ ಕೊಂದು ಹಾಕಿ ಆಗಿತ್ತು.

ಆಗ ಯುದ್ಧ ಮುಗಿಸಬಹುದಿತ್ತಲ್ಲ? ಮತ್ತೊಂದು ದಶಕ ಯುದ್ಧ ಮುಂದುವರಿಸಿಕೊಂಡು ಹೋದದ್ದು ಏಕೆ? ಲಾಡೆನ್ ಕೊಂದ ನಂತರ ಕೂಡ ತಾಲಿಬಾನ್ ಇನ್ನೂ
ಅಸ್ತಿತ್ವದಲ್ಲಿದೆ, ಅದನ್ನು ನಾಮಾವಶೇಷ ಮಾಡುತ್ತೇವೆ ಎಂಬ ಸಬೂಬು ಹೇಳಿಕೊಂಡೇ ಬಂದಿತು ಅಮೆರಿಕ. ನಿಜ, ತಾಲಿಬಾನ್ ಅನ್ನು ಹಾಗೆಯೇ ಬಿಟ್ಟರೆ ಅಫ್ಘನ್ ಎರಡು ದಶಕದ ಹಿಂದಿನ ಸ್ಥಿತಿಗೆ, ಉಗ್ರರನ್ನು ಸಾಕಿ ಬೆಳೆಸುವ ಬೇಸ್ ಆಗಬಹುದು ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ. ಆದರೆ ಈಗ ಯುದ್ಧ ಮುಗಿಸುತ್ತೇವೆ, ನಾವು ಬಂದ ಕೆಲಸವಾಯಿತು ಎನ್ನುವ ಸ್ಥಿತಿ ಅಲ್ಲಿ ನಿಜವಾಗಿ ನಿರ್ಮಾಣವಾಗಿದೆಯೇ? ಅಫ್ಘನಿಸ್ಥಾನದಲ್ಲಿ ಇಂದಿಗೂ ಅಲಖೈದಾ ಜೀವಂತವಾಗಿಯೇ ಇದೆ. ಐಸಿಸ್ ಕೂಡ ಅಫ್ಘನಿಸ್ತಾನದಲ್ಲಿ ಸಕ್ರಿಯವಾಗಿಯೇ ಇದೆ.

ಇನ್ನು ತಾಲಿಬಾನ್ : ಇಷ್ಟೊಂದು ಉದ್ದದ ಯುದ್ಧದ ನಂತರವೂ ತಾಲಿಬಾನ್ ಗಟ್ಟಿಯಾಗಿಯೇ ಇದೆ. ಇಂದು ಅಫ್ಘನಿಸ್ತಾನದ ಶೇ.85 ನೆಲವನ್ನು ಆಳುತ್ತಿರುವುದು, ಅಂಕೆಯಲ್ಲಿಟ್ಟುಕೊಂಡಿರುವುದು ಅದೇ ಸೇಮ್ ಓಲ್ಡ್‌ ತಾಲಿಬಾನ್. ಇನ್ನುಳಿದ ಶೇ.೧೫ ನೆಲವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬೇಕಾದ ಹಣ, ಶಸಾಸ, ಉಗ್ರರು ಎಲ್ಲ ತಾಲಿಬಾನ್‌ನ ಬಳಿ ಈಗಲೂ ಇದೆ. ಅಮೆರಿಕಗೆ ಸುಸ್ತಾದ ನಂತರ ಹಿಂದಿನ ವರ್ಷ ತಾಲಿಬಾನಿಗಳ ಜತೆ ಮಾತುಕತೆಯ ನಾಟಕವಾಡಿದ್ದು ಅಮೆರಿಕ. ಆಗ ತೇಲಿ ಬಂದ ಸುದ್ದಿಯೆಂದರೆ ಇದು ಹೊಸ ತಾಲಿಬಾನ್, ಅವರು ಮೊದಲಿನಂತಲ್ಲ ಎಂಬಿತ್ಯಾದಿ.

ತಾಲಿಬಾನ್ ಒಂದು ಉಗ್ರ ಸಂಘಟನೆ. ಐಸಿಸ್, ಅಲ್ ಖೈದಾ ಇವೆಲ್ಲ ಇದರದೇ ಇನ್ನೊಂದು ಮುಖ, ಹೆಸರು ಅಷ್ಟೇ. ಹೀಗಿರುವಾಗ, ಅಫ್ಘನಿಸ್ತಾನದ ಇಷ್ಟೊಂದು ಭಾಗದ ಹಿಡಿತ ತಾಲಿಬಾನಿಗಳ ಬಳಿ ಇರುವಾಗ ಅಮೆರಿಕ ಯಾವ ಮುಖವಿಟ್ಟುಕೊಂಡು ತಾನು ಬಂದ ಕೆಲಸವಾಯಿತು ಎಂದು ಬ್ಯಾಗ್ ತುಂಬಿಸಿಕೊಂಡು ಕಟ್ಟಿ ಹೊರಟುಬಿಟ್ಟಿದೆ? ಇಂದು ಅಮೆರಿಕ ನಡು ನೀರಿನಲ್ಲಿ ಆಫ್ಘನಿಸ್ತಾನವನ್ನು ಕೈ ಬಿಟ್ಟು ಹೊರಟುಬಿಟ್ಟಿದೆ ಎನ್ನುವುದು ಸತ್ಯ. ಇನ್ನೊಂದು ವರ್ಷದೊಳಗೆ ಮತ್ತೆ ಅಫ್ಘನಿ ಸ್ತಾನ ಈಗ ಇಪ್ಪತ್ತು ವರ್ಷದ ಹಿಂದೆ ಇದ್ದ ಸ್ಥಿತಿಗೆ ಮರಳುವ ಬಗ್ಗೆ ಯಾವುದೇ ಅನುಮಾನ ಬೇಡ.

ಅಲ್ ಖೈದಾ, ಐಸಿಸ್ ಇವೆಲ್ಲ ಆ ನೆಲದಲ್ಲಿ ಮತ್ತೆ ಚಿಗುರಿ ಬೆಳೆದು ಹೆಮ್ಮರವಾಗಲು ಹೆಚ್ಚಿಗೆ ಸಮಯವೇನೂ ಬೇಕಾಗುವುದಿಲ್ಲ. ಈ ಬಾರಿ ಇನ್ನಷ್ಟು ಗಟ್ಟಿಯಾಗಿ
ಮರುಹುಟ್ಟು ಪಡೆಯಬಹುದು. ಮತ್ತೆ ಯಥಾಪ್ರಕಾರ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ, ಮತ್ತೆ ಅಮೆರಿಕದ ಮೇಲೆ ದಾಳಿ ಮಾಡುವುದರ ಬಗ್ಗೆ ಕೂಡ ಅನುಮಾನವೇ ಇಲ್ಲ. ತಾಲಿಬಾನ್ ಮತ್ತೆ ಆಡಳಿತವನ್ನು ಕೈಗೆತ್ತಿಕೊಂಡಿತೆಂದರೆ ಅಮೆರಿಕ ತನ್ನ ಯುದ್ಧದ ಸಾಧನೆಯ ಪಟ್ಟಿಯಲ್ಲಿಟ್ಟು ಹೇಳಿದ ಎಲ್ಲ ವಿಷಯಗಳೂ ಕೊನೆಗಾಣುವುದರಲ್ಲಿ ಕೂಡ ಅನುಮಾನವಿಲ್ಲ.

ಆಗ ಲಕ್ಷದ ಲೆಕ್ಕದಲ್ಲಿ ಸಾವು ನೋವು, ಟ್ರಿಲಿಯನ್‌ಗಳಲ್ಲಿ ಖರ್ಚು, ಮಾಲಿನ್ಯ ಇವೆಲ್ಲದಕ್ಕೆ ಸಮಜಾಯಿಷಿಯೇ ಸಿಗುವುದಿಲ್ಲ. ಈಗ ಹೇಳಿ, ಅಮೆರಿಕ ಸಾಧಿಸಿದ್ದಾ ದರೂ ಏನು? ದೊಡ್ಡಣ್ಣ, ಹಿರಿಯ ಎಂಬಿತ್ಯಾದಿ ಹೇಳಿಕೊಂಡು ಬೀಗುವ ಅಮೆರಿಕ ಹೀಗೆ ಏಕಾಏಕಿ ಯುದ್ಧ ನಿಲ್ಲಿಸಿ, ಅರ್ಧಾಮ್ಬರ್ದ ಕೆಲಸ ಮಾಡಿ ಹೊರಟದ್ದು ಎಷ್ಟು ಸರಿ? ಇದು ಗೆಲ್ಲಲಾಗದ ಯುದ್ಧ ಎಂದು ತಿಳಿದಿದ್ದರೂ ಇಪ್ಪತ್ತು ವರ್ಷ ಈ ಯುದ್ಧವನ್ನು ನಡೆಸಿಕೊಂಡು ಹೋದದ್ದಾದರೂ ಯಾವ ಪುರುಷಾ ರ್ಥಕ್ಕೆ? ದೇಶಕಟ್ಟು ವುದು ಅಮೆರಿಕದ ಕೆಲಸವಲ್ಲ ಎಂದಾದರೆ ಲಾಡೆನ್ ಕೊಂದ ಮರು ಕ್ಷಣವೇ ಬಂದ ಕೆಲಸ ಆಯಿತು ಎಂದು ಅಲ್ಲಿಂದ ಹೋರಡಲಿಲ್ಲವೇಕೆ? ತಾಲಿಬಾನ್ ಯಾವತ್ತಾದರೂ ಮತ್ತೆ ಈ ದೇಶವನ್ನು ತನ್ನ ಹಿಡಿತಕ್ಕೆ ಪಡೆಯುತ್ತದೆ, ಇದು ಗೆಲ್ಲಲಾಗದ ಹೊಡೆದಾಟ ಎಂದು ಮೊದಲೇ ತಿಳಿದಿದ್ದರೂ ಇಷ್ಟು ವರ್ಷ
ಕಾದದ್ದೇಕೆ, ಅಷ್ಟೊಂದು ಅಮಾಯಕರ ಸಾವಿಗೆ ಕಾರಣವಾಗಿದ್ದಾದರೂ ಏಕೆ? ಈಗ ಈ ರೀತಿ ರಾತ್ರೋರಾತ್ರಿ ಓಡಿ ಹೊರಟದ್ದಾದರೂ ಏಕೆ? ಒಂದಿಷ್ಟು ಇಂಟೆಲಿಜೆ
ವರದಿಗಳ ಪ್ರಕಾರ ಅಮೆರಿಕದ ಬಾಗ್ರಾಮ್ ಏರ್ ಬೇಸ್ ಮೇಲೆ ತಾಲಿಬಾನ್ ಇನ್ನೊಂದೆರಡು ದಿನಗಳಲ್ಲಿ ದಾಳಿ ಮಾಡುವುದಿತ್ತಂತೆ.

ಹಾಗಾಗಿ ಹೋಗಿದ್ದರೆ ಈ ಯುದ್ಧವನ್ನು ಕೊನೆಗಾಣಿಸಲು ಅಮೆರಿಕಕ್ಕೆ ಸಾಧ್ಯವಾಗುತ್ತಿರಲಿಲ್ಲ, ಅಮೆರಿಕ ಸೋತಿದೆ ಎಂದು ಜಗತ್ತಿಗೆ ಗೊತ್ತಾಗುತ್ತಿತ್ತು. ಹಾಗಾಗಿ ಅಲ್ಲಿಂದ ಅಮೆರಿಕ ಕಾಲು ಕಿತ್ತಿತು ಎನ್ನುವ ಕೆಲವು ವರದಿಗಳಿವೆ, ಅದು ಎಷ್ಟು ಸತ್ಯವೋ ಗೊತ್ತಿಲ್ಲ. ಇದರ ಸತ್ಯಾಸತ್ಯತೆ ಹೊರಬರಲು ಇನ್ನೊಂದಿಪ್ಪತ್ತು ವರ್ಷ ಕಾಯಬೇಕು. ಒಟ್ಟಾರೆ ಇಂದು ಜಗತ್ತು ಕೇಳುತ್ತಿರುವ ಯಾವ ಪ್ರಶ್ನೆಗಳಿಗೂ ಅಮೆರಿಕ ಮತ್ತು ಬೈಡನ್ ಹತ್ತಿರ ಉತ್ತರವಿಲ್ಲ. ಇದೆಲ್ಲದರ ನಡುವೆ ದೇಶಪ್ರೇಮದ ಹೆಸರಿನಲ್ಲಿ ಜೀವ ಬಿಟ್ಟ ಸೈನಿಕರು ಮತ್ತು ಅಲ್ಲಿ ಸತ್ತ ಅಮಾಯಕರು – ಹೀಗೆ ಒಂದೂಕಾಲು ಲಕ್ಷ ಜೀವಗಳು ಕೊಲ್ಯಾಟರಲ್ ಡ್ಯಾಮೇಜ್ ಅಷ್ಟೆ.  ಮುಂದಕ್ಕೋಗೋಣ.

Leave a Reply

Your email address will not be published. Required fields are marked *