Friday, 20th September 2024

ಗ್ರಾಹಕ ಜಾಗ್ರತೆಗೆ ಇದು ಸಕಾಲ

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಜಿಯೊ ಮಾರ್ಟ್‌ಗೆ ನಿಮಗೆ ಬೇಕಾದ ಪದಾರ್ಥಗಳಲ್ಲಿ ಕಳಿಸಿ ನೋಡಿ. ಆರ್ಡರ್ ಪಡೆಯುವಾಗ ಇಲ್ಲದ ಸಮಸ್ಯೆ, ಡೆಲಿವರಿ ಸಮಯದಲ್ಲಿ ತಲೆದೋರುತ್ತದೆ. ಸರಾಸರಿ ಒಂದು ನೂರು ರುಪಾಯಿ ಮೊತ್ತದ ಒಂದೆರಡು ಐಟಂಗಳು ಸ್ಟಾಕ್ ಇಲ್ಲ ಎಂದು ಹೇಳುತ್ತಾರೆ. ಮುಂದಿನ ಬಿಲ್‌ನಲ್ಲಿ ಅದನ್ನು ಸರಿದೂಗಿಸುತ್ತಾರೆ. ಭಾರತಾದ್ಯಂತ ಇರುವ ಜಿಯೊ ಮಾರ್ಟ್‌ಗಳಲ್ಲಿ ದಿನಕ್ಕೆ ಸುಮಾರು ಒಂದು ಲಕ್ಷ ಗ್ರಾಹಕರ ಸರಾಸರಿ ನೂರು ರುಪಾಯಿ ತಡೆಹಿಡಿದಿದ್ದರಿಂದ ಅಂಬಾನಿಗೆ ದಿನಂಪ್ರತಿ ದೊರಕುವ ಬಡ್ಡಿರಹಿತ ಬಂಡವಾಳ ಕೇವಲ ಒಂದು ಕೋಟಿ.

ಕೆಲವು ವರ್ಷಗಳ ಹಿಂದೆ, ನಮ್ಮ ನಗರದ ಕುಡಿಯುವ ನೀರಿನಲ್ಲಿ ಇ-ಕೋಲೈ ಬ್ಯಾಕ್ಟೀರಿಯಾ ಇದೆಯೆಂದು ವರದಿಯಾಗಿತ್ತು. ಇದು ಮಲದಲ್ಲಿ ಕಂಡುಬರುವ ಬ್ಯಾಕ್ಟೀರಿಯಾ. ಈ ಸಮಾಚಾರವನ್ನು ಪಕ್ಕದ ಮನೆಯವರಿಗೆ ತಿಳಿಸಿದೆ. ವಿದ್ಯಾವಂತರಾದ ಅವರು ಹೌಹಾರುತ್ತಾರೆ ಎಂದೆಣಿಸಿದ್ದೆ. ಅದೇನಂತಹ ಆಘಾತಕಾರಿ ಸುದ್ದಿಯಲ್ಲ ಎನ್ನುವಂತೆ ಪ್ರತಿಕ್ರಿಯಿಸಿದರು. ಈ ಕುರಿತು ನಗರದಲ್ಲೂ ಉಗ್ರ ಪ್ರತಿಭಟನೆ ಕಂಡು ಬರಲಿಲ್ಲ.

ಮೈಸೂರು, ಬೆಂಗಳೂರುಗಳಂತಹ ಹಳೆಯ ನಗರಗಳಲ್ಲಿ, ನೀರು ಸರಬರಾಜಾಗುವ ಪೈಪ್‌ಗಳು ಎಂದೋ ಅಳವಡಿಸಲ್ಪಟ್ಟಿದ್ದು ಸವಕಲಾದ ಅವುಗಳ ಒಳಗೆ ಕೊಳಚೆ ನೀರು ಸೇರಿ ಇಂತಹ ಅವಘಡಗಳು ಸಂಭವಿಸುತ್ತ ವೆಂದು ಸಮಜಾಯಿಷಿ ರೂಪದ ಅಧಿಕೃತ ಪ್ರತಿಕ್ರಿಯೆ ನೀಡಲಾಯಿತು. ಅಲ್ಲಿಗೆ, ಪ್ರಕರಣಕ್ಕೆ ತೆರೆ ಎಳೆಯ ಲಾಯಿತು. ಇದಾದ ನಂತರ ಅದೆಷ್ಟೋ ದಿನ, ಪೂರೈಕೆಯಾಗುವ ನೀರು ವಿವಿಧ ಬಣ್ಣಗಳಿಂದ ಕೂಡಿದ್ದು, ಕೆಲವೊಮ್ಮೆ ನಗರಾಡಳಿತ ಜನಪರ ನಿಲುವು ತಳೆದು ಕಾಫಿ ಡಿಕಾಕ್ಷನ್ ಅನ್ನು ಮನೆಮನೆಗೆ ನಲ್ಲಿಯಲ್ಲಿ ತಲುಪಿಸುವ ನಿರ್ಧಾರ ಕೈಗೊಂಡಿದೆಯೇನೊ ಅನ್ನಿಸುವುದು ನನಗೊಬ್ಬನಿಗೇ ಅಲ್ಲ ಎಂದುಕೊಂಡಿದ್ದೇನೆ.
ಮಲಿನವಾದ ನೀರನ್ನು ಶೀಶೆಯೊಳಗೆ ಸಂಗ್ರಹಿಸಿ ಪತ್ರಿಕಾಲಯಕ್ಕೆ ಎಡತಾಕುವ ಪದ್ಧತಿಯೂ ಕಡಿಮೆಯಾ ಗುತ್ತಿದೆ.

ಅವ್ಯವಸ್ಥೆ ಹೆಚ್ಚಿದಷ್ಟೂ ನಾಗರಿಕ ಪ್ರಜ್ಞೆಯೂ ಹೆಚ್ಚಬೇಕಿತ್ತು. ಆದರೆ ನಾವು ಸ್ಥಿತಪ್ರಜ್ಞರಾಗುತ್ತಿದ್ದೇವೆ. ಜಲಾಶಯದ ನೀರಿನ ಮಟ್ಟದ ಮಾಹಿತಿ ಒದಗಿಸುವಷ್ಟೇ
ವ್ಯವಸ್ಥಿತವಾಗಿ ಪೂರೈಸಲಾಗುವ ನೀರಿನ ಗುಣಮಟ್ಟದ ಮಾಹಿತಿಯನ್ನೂ ಬಳಕೆದಾರರಿಗೆ ನೀಡುವಂತಾಗಬೇಕು. ಸದ್ಯಕ್ಕೆ ಪೂರೈಸಲಾಗುವ ನೀರನ್ನು ಕೆಲವೊಮ್ಮೆ ಕುಡಿಯುವದಕ್ಕಿರಲಿ ಅಥವಾ ಸ್ನಾನಕ್ಕಿರಲಿ ಕಮೋಡ್ ಸ್ವಚ್ಛಗೊಳಿಸುವುದಕ್ಕೂ ಯೋಗ್ಯವಲ್ಲ. ಇದು ನಮ್ಮ ವ್ಯವಸ್ಥೆ. ಮೈಸೂರಲ್ಲಿ, ಕಾಲು ಶತಮಾನ ಕ್ಕಿಂತಲೂ ಹೆಚ್ಚು ಕಾಲ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಮೈಸೂರು ಗ್ರಾಹಕ ಪರಿಷತ್ತು.

ಸಾರ್ವಜನಿಕ ಹಿತಕ್ಕೆ ತೊಡಕಾಗುವಂಥ ಅನೇಕ ವಿಚಾರಗಳತ್ತ ಗಮನ ನೀಡಿ ಅವುಗಳನ್ನು ವಿರೋಧಿಸುತ್ತಾ ಬಂದಿದೆ. ನಗರವಿನ್ನೂ ಸಂಪೂರ್ಣವಾಗಿ
ಹದಗೆಡದಿರುವುದಕ್ಕೆ ಕಾರಣ ಅಲ್ಲಿ ಬದ್ಧತೆಯಿಂದ ತಮ್ಮನ್ನು ತೊಡಗಿಸಿಕೊಂಡಿರುವ ಹತ್ತಾರು ಹಿರಿಯ ನಾಗರಿಕರು. ತೊಂಬತ್ತು ವರ್ಷ ತುಂಬಿರುವ ಬಾಪು ಸತ್ಯನಾರಾಯಣ ಯಾವುದೇ ಯುವಕನನ್ನೂ ನಾಚಿಸುವ ಹುರುಪಿನಿಂದ ಮೈಸೂರಿಗಾಗಿ ಶ್ರಮಿಸುತ್ತಿದ್ದಾರೆ. ಅಷ್ಟೇ ಮುತುವರ್ಜಿಯಿಂದ ಯೋಧರಂತೆ ಸೇವಾ ಮನೋಭಾವ ಪ್ರದರ್ಶಿಸುತ್ತಿರುವವರಲ್ಲಿ ಭಾಮಿ ಶೆಣೈ, ಚಂದ್ರಪ್ರಕಾಶ್, ಪಿ.ಎಂ ಭಟ್, ಮೇಜರ್ ಜನರಲ್ (ನಿ) ಸುಧೀರ್ ಒಂಬತ್ಕೆರೆ ಮುಂತಾದವರು.

ಇವರೆಲ್ಲರೂ ಎಂಬತ್ತರ ಸರಹದ್ದಿನಲ್ಲಿರುವವರೇ. ಪ್ರಸಾದ್‌ರಂತಹ ಕೆಲವು ಹಿರಿಯರ ಸೇವೆಯೂ ಪ್ರಶಂಸಾರ್ಹ. ಖೇದನೀಯ ವಿಚಾರವೆಂದರೆ ಯುವಶಕ್ತಿಯ ಕೊರತೆ. ಮೈಸೂರಿನಂತಹ ಪಾರಂಪರಿಕ ನಗರ ಅವಸಾನ ಹೊಂದದಿರಲು ಪ್ರಜ್ಞಾವಂತ ನಾಗರಿಕರು ಸಂಖ್ಯೆಯಲ್ಲಿ ವೃದ್ಧಿಸಬೇಕು. ನಾಗರಿಕ ಪ್ರಜ್ಞೆ ಬೆಳೆಯ ಬೇಕು. ಜವಾಬ್ದಾರಿ ಬೆಳೆಸಿಕೊಳ್ಳಬೇಕಾದ್ದು ಕೇವಲ ಮೈಸೂರಿಗರಲ್ಲ, ಸಮಸ್ತ ಭಾರತೀಯರು. ಆಗಷ್ಟೆ ಗ್ರಾಹಕರಲ್ಲಿ ಅರಿವು ಮೂಡಲು ಸಾಧ್ಯ. ಇದು ಆಂದೋ ಲನದ ಸ್ವರೂಪ ಪಡೆಯಬೇಕು. ಆಂದೋಲನ ಒಮ್ಮೆಯಷ್ಟೇ ಸಂಭವಿಸಬಹುದಾದ ಸ್ಥಿತಿಪಲ್ಲಟ ಪ್ರಕ್ರಿಯೆ.

ಗ್ರಾಹಕಾಂದೋಲನ ನಿರಂತರವಾಗಿರಬೇಕು. ಸಾಮಾಜಿಕ ಸುವ್ಯವಸ್ಥೆಗೆ, ಸೇವೆ ಮತ್ತು ಉತ್ಪನ್ನಗಳ ಮೌಲ್ಯವರ್ಧನೆಗೆ ಅದು ಸಹಾಯಕ. ಸಮಾಜದ ಒಟ್ಟಾರೆ
ಔನ್ನತ್ಯಕ್ಕೆ ಎಚ್ಚೆತ್ತ ಗ್ರಾಹಕನ ಕೊಡುಗೆ ಅಪಾರ. ಜಾಗೃತ ಗ್ರಾಹಕ ತಾನು ನೀಡುವ ಹಣಕ್ಕೆ ತಕ್ಕ ಮೌಲ್ಯವನ್ನು ನಿರೀಕ್ಷಿಸುತ್ತಾನೆ. ಅವನ ಪಾತ್ರ ಅಲ್ಲಿಗೆ  ಕೊನೆ ಗೊಳ್ಳುವುದಿಲ್ಲ, ತನ್ನ ಜಾಗ್ರತೆ ಮಾತ್ರದಿಂದಲೇ ತನ್ನ ಪರಿಸರಕ್ಕೆ ಉತ್ಕೃಷ್ಟತೆಯ ಕಾಣಿಕೆಯನ್ನು ಪರೋಕ್ಷವಾಗಿ ನೀಡುತ್ತಾನೆ. ನ್ಯಾಯ ನಿರೀಕ್ಷೆಯಲ್ಲಿ ಒಬ್ಬ ಪ್ರಜ್ಞಾ ವಂತ ಗ್ರಾಹಕ ನಡೆಸುವ ಪ್ರತಿಯೊಂದು ಸಣ್ಣ ಹೋರಾಟದ ಫಲ ಇಡೀ ಸಮಾಜಕ್ಕೆ ದೊರಕುತ್ತದೆ.

ಅಂತಹ ಹೋರಾಟ ನಡೆಸಲು ವಿಷಯಗಳಿಗೆ ಬರವಿಲ್ಲ. ಇತ್ತೀಚಿಗೆ, ನನ್ನ ವಕೀಲ ಮಿತ್ರ ಸುನಿಲ್ ಕುಮಾರ್ ಒಂದು ಪ್ರಕರಣವನ್ನು ನನ್ನ ಗಮನಕ್ಕೆ ತಂದರು. ಕೊಂಡ ಬೆಂಕಿಪೆಟ್ಟಿಗೆಯಲ್ಲಿ ಐವತ್ತು ಕಡ್ಡಿಗಳ ಬದಲು ಒಂದೆರಡು ಕಡ್ಡಿಗಳು ಕಡಿಮೆ ಇದ್ದ ನ್ಯೂನತೆಯ ಪ್ರಕರಣವನ್ನು ಜಿಲ್ಲಾ ಗ್ರಾಹಕ ವೇದಿಕೆಯ ಗಮನಕ್ಕೆ ತಂದು ಪರಿಹಾರ ಪಡೆದುಕೊಂಡ ಗ್ರಾಹಕರ ವಿಷಯವದು. ಎರಡು ಕಡ್ಡಿ ಕಡಿಮೆಯಾದರೆ ತಲೆಕೆಡಿಸಿಕೊಳ್ಳಬೇಕೇ ಎಂದು ನಿರ್ಲಕ್ಷ್ಯ ತೋರದೆ, ಗ್ರಾಹಕ ನ್ಯಾಯಾಲಯದ ಮೊರೆ ಹೋಗಿ ನ್ಯಾಯ ಗಿಟ್ಟಿಸಿಕೊಂಡ ಆ ವ್ಯಕ್ತಿಗೆ ನನ್ನ ಪ್ರಣಾಮ.

ಮೀಟರ್ ಅನ್ವಯ ಬಾಡಿಗೆ ಪಡೆಯಲು ನಿರಾಕರಿಸುವ ಆಟೋರಿಕ್ಷಾ ಚಾಲಕರನ್ನು ನಾವು ಪ್ರಶ್ನಿಸುತ್ತೇವೆ. ವಾಪಸ್ ಖಾಲಿ ಬರಬೇಕು, ಅಲ್ಲಿ ಗಿರಾಕಿ ಸಿಗುವುದಿಲ್ಲ ಎಂದು ಹೇಳಿ ನಮ್ಮಿಂದ ದುಪ್ಪಟ್ಟು ಹಣ ಪಡೆಯುವ ಅಂಥವರನ್ನು ತರಾಟೆಗೆ ತೆಗೆದುಕೊಳ್ಳುತ್ತೇವೆ. ಬೆಂಗಳೂರಿಗೆ ಡ್ರಾಪ್ ಮಾಡಲು ಟ್ಯಾಕ್ಸಿ ಬುಕ್ ಮಾಡಿದರೆ ನಾವು ಪ್ರಯಾಣಿಸದ ವಿರುದ್ಧ ದಿಕ್ಕಿನ ಪ್ರಯಾಣಕ್ಕೂ ಹಣ ಪಡೆಯುವುದರ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ನೂರೇ ಕಿಮೀ ಪ್ರಯಾಣಿಸಿದರೂ (ದಿನಕ್ಕೆ) ಕನಿಷ್ಠ ೨೫೦ ಕಿಮೀ ಪ್ರಯಾಣಕ್ಕೆ ದುಡ್ಡು ತೆರುವ ನಿಯಮವನ್ನು ಮಾಡಿದವರಾದರೂ ಯಾರು? ಸರಕಾರವೂ ಇದರ ಬಗ್ಗೆ ಚಿಂತಿಸಿಲ್ಲ. ಮಗು ಅತ್ತರೆ ತಾನೇ ಹಾಲು!

ಕೋವಿಡ್ ಆಕ್ರಮಣದ ನಂತರ ಮನೆಬಾಗಿಲಿಗೇ ನಿತ್ಯಾವಶ್ಯಕ ಪದಾರ್ಥಗಳನ್ನು ಪೂರೈಸುವವರು ಹೆಚ್ಚಾಗುತ್ತಿದ್ದಾರೆ. ಆ ಸೇವೆ ಪಡೆಯಲು ಕನಿಷ್ಠ ಇಷ್ಟು
ಮೌಲ್ಯದ ಸಾಮಾನು ಖರೀದಿಸಬೇಕು ಎಂಬ ಷರತ್ತು ಕೆಲವರದ್ದು, ನಮ್ಮ ಸೇವೆ ಉಚಿತ ಎನ್ನುವವರು ಮತ್ತೆ ಕೆಲವರು. ಇತ್ತೀಚೆಗೆ ಲಾಯಲ್ ವರ್ಲ್ಡ್‌ನಿಂದ ಖರೀದಿಸಿದ ವಸ್ತುಗಳಲ್ಲಿ ಗೋಧಿ ತರಿಯೂ ಇತ್ತು. ಕಳಿಸಿದ್ದು ನೂರು ಗ್ರಾಂ, ಬಿಲ್ ಮಾಡಿದ್ದು 200 ಗ್ರಾಮ್‌ಗೆ. ಉಚಿತ ಸೇವೆಗೆ ತೆರಬೇಕಾದ ಬೆಲೆ ಇದು.

ಫೋನ್ ಮಾಡಿ, ತಪ್ಪನ್ನು ಸರಿಪಡಿಸಲು ಹೇಳಿದೆ. ಯಾವುದೂ ಉಚಿತವಾಗಿ ಸಿಗುವುದಿಲ್ಲ, ಉಚಿತವೆಂಬ ಶಬ್ದವೇ ನಮ್ಮನ್ನು ಜಾಗೃತಗೊಳಿಸಬೇಕು. ಇದು ಲಾಯಲ್ ವರ್ಲ್ಡ್ ಒಂದರ ಹಣೆಬರಹವಲ್ಲ. ಎಲ್ಲಾ ಡಿಪಾರ್ಟ್‌ಮೆಂಟ್ ಸ್ಟೋರ್‌ಗಳು ಪ್ರತಿನಿತ್ಯ ನಡೆಸುವ ದಂಧೆ. ಜಿಯೊ ಮಾರ್ಟ್‌ಗೆ ನಿಮಗೆ ಬೇಕಾದ ಪದಾರ್ಥ ಗಳಲ್ಲಿ ಕಳಿಸಿ ನೋಡಿ. ಆರ್ಡರ್ ಪಡೆಯುವಾಗ ಇಲ್ಲದ ಸಮಸ್ಯೆ, ಡೆಲಿವರಿ ಸಮಯದಲ್ಲಿ ತಲೆದೋರುತ್ತದೆ. ಸರಾಸರಿ ಒಂದು ನೂರು ರುಪಾಯಿ ಮೊತ್ತದ ಒಂದೆರಡು ಐಟಂಗಳು ಸ್ಟಾಕ್ ಇಲ್ಲ ಎಂದು ಹೇಳುತ್ತಾರೆ. ನಿಮ್ಮ ಹಣ ವಾಪಸ್ ಬರುವುದಿಲ್ಲ ಎಂದಲ್ಲ. ಮುಂದಿನ ಬಿಲ್‌ನಲ್ಲಿ ಅದನ್ನು ಸರಿದೂಗಿಸುತ್ತಾರೆ.

ಭಾರತಾದ್ಯಂತ ಇರುವ ಜಿಯೊ ಮಾರ್ಟ್‌ಗಳಲ್ಲಿ ದಿನಕ್ಕೆ ಸುಮಾರು ಒಂದು ಲಕ್ಷ ಗ್ರಾಹಕರ ಸರಾಸರಿ ನೂರು ರುಪಾಯಿಯನ್ನು ತಡೆಹಿಡಿದು ಒಂದು ತಿಂಗಳ ನಂತರ ಅದನ್ನು ಅಡ್ಜ ಮಾಡಿದರೆ, ಈ ಸಣ್ಣ ಅಡ್ಜಸ್ಟ್‌ಮೆಂಟ್‌ನಿಂದ ಅಂಬಾನಿಗೆ ದಿನಂಪ್ರತಿ ದೊರಕುವ ಬಡ್ಡಿರಹಿತ ಬಂಡವಾಳ ಕೇವಲ ಒಂದು ಕೋಟಿ.
ದಿನನಿತ್ಯ, ಹಾಡಹಗಲೇ ನಡೆಯುವ ಇಂತಹ ಅನೇಕ ಅನೈತಿಕ ವ್ಯಾಪಾರ ಪದ್ಧತಿಗಳ ಮೇಲೆ ನಿರಂತರ ನಿಗಾ ಇಟ್ಟು ಆ ಸುಲಿಗೆಯಿಂದ ಗ್ರಾಹಕರನ್ನು ಪಾರು ಮಾಡಬೇಕಾದ ಜವಾಬ್ದಾರಿಯನ್ನು ಗ್ರಾಹಕ ನ್ಯಾಯಾಧೀಕರಣವೇ ಹೊರುವಂಥ ವ್ಯವಸ್ಥೆ ಬರಬೇಕಿದೆ.

ಇನ್ನು ತೂಕದಲ್ಲಿನ ಮೋಸ. ಅದೆಷ್ಟು ಗ್ರಾಹಕರು ತಾವು ಕೊಳ್ಳುವ ಸಿದ್ಧಪಡಿಸಿದ ದಿನಸಿ ಪದಾರ್ಥಗಳ ತೂಕವನ್ನು ಪರೀಕ್ಷಿಸಿ ಕೊಳ್ಳುತ್ತಾರೋ ಕಾಣೆ. ಮನೆಗೇ ತಲುಪಿಸಲ್ಪಟ್ಟ ವಸ್ತುಗಳ ತೂಕದಲ್ಲಾಗುವ ಮೋಸವನ್ನು ತಡೆಯಲು ಮನೆಯ ಸ್ಕೇಲ್ ಇಟ್ಟುಕೊಳ್ಳುವುದು ಕ್ಷೇಮ. ಕರೋನಾ ಕಾಲದಲ್ಲಿ ವಹಿಸಬೇಕಾದ
ಮುಂಜಾಗ್ರತಾ ಕ್ರಮಗಳಲ್ಲಿ ಇದೂ ಒಂದು. ಆರ್ಟಿಫಿಷಿಯಲ್ ಇಂಟೆಲಿಜೆ ಮತ್ತು ಮಾಹಿತಿ ತಂತ್ರಜ್ಞಾನದ ಬಳಕೆ ವ್ಯಾಪಕವಾಗಿದೆ. ನಾವು ಯಾವ ವಿಷಯಗಳಲ್ಲಿ ಆಸಕ್ತರು ಎಂಬುದರ ಮಾಹಿತಿ ಗೂಗಲ್, ಫೇಸ್‌ಬುಕ್, ಆಮೆಜಾನ್ ಮುಂತಾದ ಬಹುರಾಷ್ಟ್ರೀಯ ಕಂಪನಿಗಳ ಬಳಿಯಿವೆ.

ಬಳಸುವ ವಸ್ತುಗಳನ್ನು ಆಯ್ಕೆ ಮಾಡುವಾಗ ನಮ್ಮ ಸ್ವಂತ ಮನೋಬಲ ಕೆಲಸ ಮಾಡದೆ ಈ ಕಂಪನಿಗಳ ರೋಬೊಗಳು (ರೋಬಾಟ್ ಅಂತ ಉಚ್ಛರಿಸುವುದು ಸರಿಯಲ್ಲ) ನಮ್ಮ ಮನಸ್ಸಿನ ಮೇಲೆ ಹಿಡಿತ ಸಾಧಿಸಿವೆ. ಅವು ತೋರುವ ಬಣ್ಣದ ಲೋಕದಲ್ಲಿ ಒಂದೊಂದು ವಸ್ತುವೂ ಮನಸೂರೆಗೊಳ್ಳುವಂಥದ್ದು, ವಿವಿಧ
ಬೆಲೆ, ಯಾವುದು ಅಗ್ಗ, ಯಾವುದು ದುಬಾರಿ ಎಂದು ಅರ್ಥವಾಗುವಷ್ಟರ ಹೊತ್ತಿಗೆ ತಲೆ ಕೆಟ್ಟು ಕೆರವಾಗಿರುತ್ತದೆ. ಸ್ವಂತಬುದ್ಧಿ (ಇರುವವರಿಗೆ) ಕೈಕೊಡುತ್ತದೆ. ಜಾಹಿರಾತಿನ ಉದ್ದೇಶವಾದರೂ ಅದೇ ಆಗಿರುತ್ತದೆ.

ಹಿಂದೆ, ಅಂಗಡಿಯಲ್ಲಿ ಪದಾರ್ಥ ಕೊಳ್ಳುವಾಗ, ನೂರು ಗ್ರಾಮಿನ ಪ್ಯಾಕೆಟ್‌ಗೆ ಇಷ್ಟಾದರೆ, ಅರ್ಧ ಕಿಲೋಗೆ ಇಷ್ಟು ಎಂದು ಲೆಕ್ಕಹಾಕಿ ಯಾವುದು ಅಗ್ಗವಾಗಿದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಲು ಗಿರಾಕಿ ಶಂಕುಂತಲಾ ದೇವಿಯಾಗಬೇಕಾಗಿರಲಿಲ್ಲ. ಈಗ, 65 ಗ್ರಾಮ್‌ಗೆ 37 ರುಪಾಯಿ 25 ಪೈಸೆ, 425 ಗ್ರಾಮಿಗೆ 111 ರುಪಾಯಿ 60 ಪೈಸೆ ಅಂತ ದರ ನಿಗದಿಯಾಗಿರುತ್ತೆ. ಮೊಬೈಲ್‌ನ ಕ್ಯಾಲ್ಕ್ಯುಲೇಟರ್‌ನಲ್ಲಿ ಲೆಕ್ಕ ಹಾಕೋಣವೆಂದರೆ, ಕರೋನಾ ಭೀತಿಯಿಂದ ಹೆಚ್ಚು ಹೊತ್ತು
ಅಂಗಡಿಯಲ್ಲಿ ನಿಲ್ಲುವ ಮನಸ್ಸಾಗುವುದಿಲ್ಲ.

ಮತ್ತೆ ನೀರಿನ ವಿಚಾರವನ್ನು ಪ್ರಸ್ತಾಪಿಸಿ ಲೇಖನವನ್ನು ಮುಕ್ತಾಯಗೊಳಿಸುತ್ತೇನೆ. ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸದೆ ಹೆಚ್ಚು ಮಂದಿ ಮಿನರಲ್
ನೀರನ್ನು ಕುಡಿಯಲಾರಂಭಿಸಿದ್ದಾರೆ. ಒಮ್ಮೆ, ಒಂದು ಮಿನರಲ್ ನೀರಿನ ಪ್ಲಾಂಟಿಗೆ ಭೇಟಿ ನೀಡಿದಾಗ ಹೆಗ್ಗಣದ ಗಾತ್ರದ ಇಲಿಗಳು ಅಭಯಾರಣ್ಯದ ವನ್ಯಜೀವಿ ಗಳಂತೆ ಸ್ವಚ್ಚಂದವಾಗಿ ಓಡಾಡುತ್ತಿದ್ದವು. ನೀರನ್ನು ಶುದ್ಧೀಕರಿಸದೆ ಸಪ್ಲೈ ಮಾಡುತ್ತಾರೆಂಬ ದೂರು ಹಳೆಯದು. ಸಪ್ಲೈ ಮಾಡುವ ಕ್ಯಾನ್ಗಳಾದರೂ ಲಕ್ಷಣ ವಾಗಿವೆಯಾ ಅಂದರೆ ಅದೂ ಇಲ್ಲ.

ಎಲ್‌ಪಿಜಿ ಸಿಲಿಂಡರ್‌ಗಳನ್ನು ಎಸೆಯುವಂತೆ ನೀರಿನ ಕ್ಯಾನ್ ಗಳನ್ನು ಬೇಜವಾಬ್ದಾರಿಯಿಂದ ಎಸೆದಾಡುತ್ತಾರೆ. (ಸಿಲಿಂಡರ್‌ಗಳನ್ನೂ ಹಾಗೆ ಎಸೆಯಲಿಕ್ಕೆ ಬಾರದು.) ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಇದನ್ನು ತಿಳಿಯಪಡಿಸುವವಾರು? ಕೋವಿಡ್ ಕಾರಣದಿಂದ ವ್ಯಾಪಾರ ಕುಸಿದು ವ್ಯಾಪಾರಸ್ಥರು ನಷ್ಟವನ್ನು ಸರಿದೂಗಿಸಲು ವಾಮಮಾರ್ಗವನ್ನು ಅನುಸರಿಸುತ್ತಿzರೆ. ಗ್ರಾಹಕರಿಗೂ ಕೋವಿಡ್ ಹೊಡೆತ ಬಿದ್ದಿರುವುದರ ಪರಿವೆ ಅವರಿಗಿದ್ದಂತಿಲ್ಲ. ಆ ಕಾರಣಕ್ಕೆ ಕೂಡ ಗ್ರಾಹಕರು ಹಿಂದೆಂದಿಗಿಂತ ಜಾಗರೂಕರಾಗಬೇಕಿದೆ.