ವಿಶ್ಲೇಷಣೆ
ಡಾ.ಸುಧಾಕರ ಹೊಸಳ್ಳಿ
ಸಂವಿಧಾನ ಶಿಲ್ಪಿ ಅಂಬೇಡ್ಕರರ ನೆನಪು ಈಗ ಭಾರತಕ್ಕಲ್ಲದೆ ಇಡೀ ಜಗತ್ತನ್ನು ಕಾಡುತ್ತಿದೆ. ಅದಕ್ಕೆ ಕಾರಣ ಬಾಂಗ್ಲಾದಲ್ಲಿನ ಅರಾಜಕತೆ. ಅಂಬೇಡ್ಕರರು ಯಾವುದಾದರೂ ವಿಷಯದ ಕುರಿತು ಮಾತನಾಡಿದರೆ ಅಥವಾ ಲಿಖಿತ ರೂಪದಲ್ಲಿ ದಾಖಲಿಸಿದರೆ, ಅದರ ಹಿಂದೆ ಪರಿಪೂರ್ಣವಾದ ಸಂಶೋಧನೆ ಇದ್ದೇ ಇರುತ್ತಿತ್ತು.
ಇತ್ತೀಚೆಗೆ ಬಾಂಗ್ಲಾದಲ್ಲಿ ಮತ್ತು ಹಿಂದೆ ಸಿರಿಯಾ, ಈಜಿಪ್ಟ್, ಅಫ್ಘಾನಿಸ್ತಾನ ಮುಂತಾದ ಕಡೆ ಮತೀಯ ಕಾರಣಕ್ಕೆ ಸಾಂವಿಧಾನಿಕ ಅರಾಜಕತೆ ಸೃಷ್ಟಿ ಯಾಗಿದ್ದನ್ನು ನಾವೆಲ್ಲ ಕಂಡಿದ್ದೇವೆ; ಆದರೆ ಇಂಥ ಪರಿಸ್ಥಿತಿ ಉದ್ಭವವಾಗುವುದಕ್ಕಿರುವ ಹಿನ್ನೆಲೆಯನ್ನು ಬಾಬಾ ಸಾಹೇಬರು ೧೯೩೬ರ ಕಾಲಘಟ್ಟದಲ್ಲೇ ವಿವರಿಸಿದ್ದರು. ಇಂಥ ಹಿನ್ನೆಲೆಯನ್ನು ವಿಸ್ತೃತ ಆಧಾರಗಳುಳ್ಳ ದಾಖಲೆಯೊಂದಿಗೆ ‘”Thoughts on Pakistan’, “Pakistan Or The Partition of India’’ ಎಂಬ ಕೃತಿಗಳಲ್ಲಿ ಸಮಾಜಕ್ಕೆ ಕಟ್ಟಿಕೊಟ್ಟಿದ್ದರು. ಇಸ್ಲಾಂನ ಮತೀಯ ವಿಸ್ತರಣಾವಾದ ಜಗತ್ತಿಗೆ ಹೇಗೆ ಅಪಾಯಕಾರಿ ಆಗಬಲ್ಲದು, ಸಮಾನತೆಯ ತತ್ವದಿಂದ ಮುಸ್ಲಿಮರು ಹೇಗೆ ದೂರ ಉಳಿದಿದ್ದಾರೆ, ಮುಸ್ಲಿಂ ಅಲ್ಲದವನು ಬದುಕಲು ಅರ್ಹನೇ ಅಲ್ಲ ಎಂಬ ‘ಕಾಫಿರ್ ಪದ್ಧತಿ’ಯ ದುಷ್ಪರಿಣಾಮ ಇವೆಲ್ಲವನ್ನೂ ಅಂಬೇಡ್ಕರರು ಎಳೆಎಳೆಯಾಗಿ ಮತ್ತು ನಿರ್ಭಯವಾಗಿ ಬಿಚ್ಚಿಟ್ಟಿದ್ದರು.
ದೇಶದ ಮಹಿಳಾ ಪ್ರಧಾನಿಯ ಮನೆಯನ್ನು ಲೂಟಿ ಮಾಡಿದ್ದೂ ಅಲ್ಲದೆ, ಅವರ ಒಳ ಉಡುಪುಗಳನ್ನು ದೋಚಿ ಹೊರಜಗತ್ತಿಗೆ ಅದನ್ನು ಪ್ರದರ್ಶಿಸುವ ಬಾಂಗ್ಲಾದ ಕೆಲ ವಿಕ್ಷಿಪ್ತ ಜನರ ಕ್ರೂರತೆಯನ್ನು ಹೀಗೆ ೮೮ ವರ್ಷಗಳ ಹಿಂದೆಯೇ ದಾಖಲೆ ಸಮೇತ ವಿವರಿಸಿ ಎಚ್ಚರಿಸಿದ್ದ ಅಂಬೇಡ್ಕರರದ್ದು ಅದೆಂಥಾ ದೂರದೃಷ್ಟಿಯಲ್ಲವೇ? ಮೀಸಲಾತಿಯ ಕಾರಣ ಮುಂದುಮಾಡಿ ಆರಂಭವಾದ ಒಂದು ಹೋರಾಟ ಇಡೀ ದೇಶವನ್ನೇ ಅಂಧಕಾರದಲ್ಲಿ ಮುಳುಗಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದರ ಹಿಂದೆ ಮತೀಯ ವಿಸ್ತರಣಾವಾದದ ಉದ್ದೇಶ ಇದ್ದೇ ಇದೆ ಎಂಬುದಕ್ಕೆ ಅಲ್ಲಿನ ಮತಾಂಧರು ಹತ್ತಾರು ಸಾಕ್ಷಿಗಳನ್ನು ನೀಡಿದ್ದಾರೆ.
೧೯೭೧ರ ಬಾಂಗ್ಲಾದ ಉಗಮದ ಸಂದರ್ಭದಿಂದ ಇಲ್ಲಿಯವರೆಗೆ ಧರ್ಮಾತೀತವಾಗಿ ಅನ್ನದಾನ ಮಾಡುತ್ತಾ ಬಂದಿದ್ದ ಇಸ್ಕಾನ್ ಸಂಸ್ಥೆಯ ಮೇಲೆ ದಾಳಿ ಮಾಡಿರುವುದು, ಹಿಂದೂ ದೇವಾಲಯಗಳನ್ನು ನಾಶಮಾಡಿರುವುದು, ಹಿಂದೂಗಳ ಹತ್ಯೆ, ಅತ್ಯಾಚಾರ, ಅಪಹರಣ ಇವುಗಳ ಹಿಂದೆ ಮತಾಂಧರ
ಹಿಡನ್ ಅಜೆಂಡಾ ಇರುವುದು ದೃಢಪಟ್ಟಿದೆ. ಮತಾಂಧತೆ, ಮಹಿಳಾ ಅಸಮಾನತೆ, ವಿಜ್ಞಾನ-ವಿರೋಧಿ ಶರಿಯಾ ಆಚರಣೆ ಮುಂತಾದವುಗಳ ಅಪಾಯಗಳ ಕುರಿತು ಅಂಬೇಡ್ಕರ್ ಅವರಷ್ಟು ಗಟ್ಟಿಯಾಗಿ ಹೇಳಿದ, ತನ್ಮೂಲಕ ಇಸ್ಲಾಂ ಅನ್ನು ವಿಮರ್ಶಿಸಿದ ಮತ್ತೊಬ್ಬ ಭಾರತೀಯ ಇಲ್ಲವೆನ್ನಬೇಕು.
ಪ್ರಸ್ತುತ ಬಾಂಗ್ಲಾದಲ್ಲಿನ ಅರಾಜಕತೆಯ ಘಟನಾವಳಿಗಳನ್ನು ಅಂಬೇಡ್ಕರರ ನಿರ್ದೇಶನದ ಪರಿಧಿಯಲ್ಲಿ ನಿಂತು ನೋಡುವುದಾದರೆ, ‘ಇಡೀ ಜಗತ್ತಿನಲ್ಲಿ ಮುಸ್ಲಿಮರು ಸಮಾನತೆಯಿಂದ ಬಹುದೊಡ್ಡ ಘಾಸಿಗೊಳಗಾಗಿದ್ದಾರೆ, ಅವರು ಸಮಾನತೆಯನ್ನು ಎಂದೂ ಬಯಸುವುದಿಲ್ಲ’ ಎಂದು ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ. ‘ಮುಸ್ಲಿಂ ದಾಳಿಕೋರರು ಸಾಮ್ರಾಜ್ಯ ವಿಸ್ತರಣೆಯ ಭಾಗವಾಗಿ ಭಾರತದ ಭೂಭಾಗದ ಮೇಲೆ ಹಲವಾರು ಬಾರಿ ದಾಳಿಮಾಡಿದ್ದು
ಇತಿಹಾಸದಲ್ಲಿ ದಾಖಲಾಗಿದೆ. ಭಾರತದ ಮೇಲೆ ದಾಳಿ ಮಾಡಿದ ಮಿಕ್ಕ ಪರಕೀಯರಿಗಿಂತ ಮುಸ್ಲಿಂ ದಾಳಿಕೋರರ ಅಜೆಂಡಾ ಭಿನ್ನವಾದದ್ದು. ಅಧಿಕಾರ ದಕ್ಕಿಸಿಕೊಳ್ಳುವುದರ ಜತೆಗೆ ಈ ನೆಲಮೂಲದ ಹಿಂದೂಧರ್ಮವನ್ನು, ಅದರ ಆಚರಣೆಗಳನ್ನು ನಾಶಮಾಡುವ ಉದ್ದೇಶವನ್ನು ಈ ದಾಳಿ ಕೋರರು ಹೊಂದಿದ್ದರು’ ಎಂಬ ತಲಸ್ಪರ್ಶಿ ವಿಚಾರವನ್ನು ಅಂಬೇಡ್ಕರರು ತಮ್ಮ ಬರವಣಿಗೆಯಲ್ಲಿ ವಸ್ತುನಿಷ್ಠವಾಗಿ ದಾಖಲಿಸಿದ್ದಾರೆ.
‘ಭಾರತದ ಮೇಲಿನ ತನ್ನ ದಾಳಿಗಳ ಉದ್ದೇಶ ಪವಿತ್ರ ಯುದ್ಧವೆಂದು ಘಸ್ನಿ ಮಹಮ್ಮದನೂ ಭಾವಿಸಿದ್ದ. ವಿಗ್ರಹ ಗಳಿದ್ದ ದೇವಾಲಯಗಳನ್ನು ಕೆಡವಿ
ಇಸ್ಲಾಂ ಅನ್ನು ಸ್ಥಾಪಿಸಿದ. ಆತನು ನಗರಗಳನ್ನು ಆಕ್ರಮಿಸಿಕೊಂಡು ವಿಗ್ರಹಾರಾಧಕರನ್ನು ನಾಶಮಾಡುವುದರ ಮೂಲಕ ಮುಸಲ್ಮಾನರನ್ನು ಸಂತೃಪ್ತಿ ಗೊಳಿಸಿದ. ನಂತರ ತನ್ನ ದೇಶಕ್ಕೆ ಹಿಂದಿರುಗಿ, ಇಸ್ಲಾಂಗಾಗಿ ಗಳಿಸಿದ ವಿಜಯಗಳ ಲೆಕ್ಕವನ್ನು ಘೋಷಿಸಿದ. ಅಲ್ಲದೆ, ಪ್ರತಿ ವರ್ಷವೂ ಹಿಂದೂಗಳ ವಿರುದ್ಧ
ಪವಿತ್ರ ಯುದ್ಧ ಮಾಡುತ್ತೇ ನೆಂದು ಶಪಥಮಾಡಿದ’ ಎಂದು ಅಂಬೇಡ್ಕರ್ ದಾಖಲಿಸಿದ್ದಾರೆ.
ಭಾರತದ ಮೇಲಿನ ಮಹಮ್ಮದ್ ಘೋರಿಯ ದಾಳಿಗಳ ಹಿಂದೆ ಇಂಥದೇ ಉನ್ಮಾದಗಳ ಪ್ರೇರಣೆಯಿತ್ತು. ಹಸನ್ ನಿಸಾಮಿ ಎಂಬ ಇತಿಹಾಸಕಾರನು ಘೋರಿಯ ಕೃತ್ಯವನ್ನು ಹೀಗೆ ವಿವರಿಸಿದ್ದಾನೆ: ‘ಕುಧರ್ಮ ಮತ್ತು ಪಾಪಪೂರಿತ ಹಿಂದೂಗಳ ದೇಶದ ಕೊಳಚೆಯನ್ನು ಆತ ತನ್ನ ಕತ್ತಿಯ ಸಹಾಯದಿಂದ ತೊಳೆದ. ಅಲ್ಲದೆ, ಬಹುದೇವತಾರಾಧನೆಯ ಮುಳ್ಳಿನಿಂದ ಮತ್ತು ವಿಗ್ರಹಾರಾಧನೆಯ ಅಪವಿತ್ರತೆಯಿಂದ ಆ ದೇಶವನ್ನು ಮುಕ್ತಗೊಳಿಸಿದ. ತನ್ನ ರಾಜಶಕ್ತಿ ಮತ್ತು ಧೈರ್ಯಗಳಿಂದ ಯಾವುದೇ ಒಂದು ದೇವಾಲಯವೂ ಉಳಿಯಲು ಅವನು ಬಿಡಲಿಲ್ಲ’.
ಭಾರತದ ಮೇಲಿನ ತನ್ನ ದಾಳಿಯನ್ನು ತೈಮೂರನು ತನ್ನ ಆತ್ಮಕಥೆಯಲ್ಲಿ ವಿವರಿಸುತ್ತಾ, ‘ಕುಧರ್ಮಿಗಳ ವಿರುದ್ಧದ ಕದನ ಪರಂಪರೆಯ ನೇತೃತ್ವ ವಹಿಸುವುದೇ ಹಿಂದೂಸ್ತಾನದ ಮೇಲಿನ ನನ್ನ ದಂಡಯಾತ್ರೆಯ ಉದ್ದೇಶ’ ಎಂದು ಹೇಳಿಕೊಂಡಿದ್ದಾನೆ. ‘ಮಹಮ್ಮದ ಮತ್ತು ಆತನ ಕುಟುಂಬದ ವರ್ಗದವರ ಮೇಲೆ ದೇವರ ಆಶೀರ್ವಾದವಿರಲಿ. ಮಹಮ್ಮದನ ಆಹ್ವಾನಾನುಸಾರವಾಗಿ ಕುಧರ್ಮಿಗಳನ್ನು ನಿಜವಾದ ಧರ್ಮಕ್ಕೆ ಮತಾಂತರಿಸುವುದು, ಅವರಲ್ಲಿನ ಅಪನಂಬಿಕೆಯನ್ನು ಕಳೆಯುವುದು ಮತ್ತು ಬಹುದೇವತಾ ರಾಧನೆಗಳಿಂದ ಆ ಭೂಮಿಯನ್ನು ಮುಕ್ತಗೊಳಿಸಿ ಪವಿತ್ರ ವಾಗಿಸುವುದು,
ದೇವಸ್ಥಾನಗಳು ಮತ್ತು ವಿಗ್ರಹಗಳನ್ನು ಧ್ವಂಸ ಮಾಡುವುದು ಮುಂತಾದ ಕಾರ್ಯಗಳನ್ನೆಸಗಿದಾಗ ನಾವು ದೇವರ ದೃಷ್ಟಿಯಲ್ಲಿ ಧರ್ಮದ ಎತ್ತರದ ಸೈನಿಕರೂ ಆಗುತ್ತೇವೆ’ ಎಂಬ ಆಶಯ ಅವನಿಂದ ವ್ಯಕ್ತವಾಗಿತ್ತು.
ಹಿಂದೂಗಳ ಎದೆಯಲ್ಲಿ ನಡುಕ ಹುಟ್ಟಿಸುವಂಥ ತಂತ್ರಗಳನ್ನೇ ಘಜ್ನಿ ಮಹಮ್ಮದನು ಮೊದಲಿನಿಂದಲೂ ಅಳವಡಿಸಿಕೊಂಡಿದ್ದ. ಕ್ರಿ.ಶ. ೧೦೦೧ರಲ್ಲಿ, ರಾಜ ಜಯಪಾಲನ ಪರಾಜಯದ ನಂತರ, ಆತನನ್ನು ಬೀದಿಗಳಲ್ಲಿ ಎಳೆದೊಯ್ಯಬೇಕೆಂಬ ಆಜ್ಞೆಯಿತ್ತ. ಏಕೆಂದರೆ, ಜಯಪಾಲನಿಗಾಗುವ ಅಪಮಾನ, ಅವನ ಬಂಧನ ಮತ್ತು ಮಾನಭಂಗಗಳನ್ನು ಆತನ ಮಕ್ಕಳು ಹಾಗೂ ಸಾಮಂತರು ನೋಡಬೇಕೆಂಬುದು ಮತ್ತು ಕುಧರ್ಮಿಗಳ ದೇಶದ ಮೂಲಕ ಇಸ್ಲಾಂನ ಭೀತಿಯು ಹೊರದೇಶಗಳಿಗೂ ತಲುಪಬೇಕೆಂಬುದು ಅವನ ಉದ್ದೇಶವಾಗಿತ್ತು. ಕುಧರ್ಮಿಗಳನ್ನು ಬಲಿ ಕೊಡುವುದು ಮಹಮ್ಮದನಿಗೆ ವಿಶೇಷ ಸಂತುಷ್ಟಿಯನ್ನು ಕೊಟ್ಟ ಏಕೈಕ ಸಂಗತಿಯೆಂದು ತೋರುತ್ತದೆ. ಕ್ರಿ.ಶ.೧೦೧೯ರಲ್ಲಿ ಚಾಂದ್ರಾಯ್ ಮೇಲೆ ಮಾಡಲಾದ ಒಂದು ದಾಳಿಯಲ್ಲಿ ಅನೇಕ ಕುಧರ್ಮಿಗಳನ್ನು ಕೊಲ್ಲಲಾಯಿತು ಅಥವಾ ಸೆರೆಯಾಳುಗಳಾಗಿ ಒಯ್ಯಲಾಯಿತು.
ಕುಧರ್ಮಿಗಳನ್ನು ಬಲಿಕೊಟ್ಟು, ಸೂರ್ಯ ಮತ್ತು ಅಗ್ನಿಪೂಜಕರನ್ನು ಕೊಂದು ತಮ್ಮನ್ನು ತಾವೇ ತೃಪ್ತಿಪಡಿಸಿಕೊಳ್ಳುವ ಕೃತ್ಯವು ಮುಸಲ್ಮಾನರಿಗೆ ಅವರು ಕೊಳ್ಳೆಹೊಡೆದ ಸಂಪತ್ತಿಗಿಂತ ಹೆಚ್ಚು ಮಾನ್ಯವಾಗಿತ್ತು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಎಂಟು ದಶಕಗಳಿಗೂ ಸಾಕಷ್ಟು
ಹಿಂದೆಯೇ ಅಂಬೇಡ್ಕರರು ಕೊಟ್ಟ ಎಚ್ಚರಿಕೆಯ ನಂತರವೂ, ರಾಜಕೀಯ ಕಾರಣಕ್ಕಾಗಿ, ಸೈದ್ಧಾಂತಿಕ ವಿರೋಧದ ದೃಷ್ಟಿಯಿಂದ ಅವರ ಚಿಂತನೆ ಗಳನ್ನು ಸೂಕ್ಷ್ಮ ಕಣ್ಣಿನಿಂದ ನೋಡ ಲಾಗಲೇ ಇಲ್ಲ ಎಂಬುದು ನಿರ್ವಿವಾದ. ನೆರೆಯ ಬಾಂಗ್ಲಾದ ಅರಾಜಕತೆಯನ್ನು ಈಗ ಲಾದರೂ ಅಂಬೇಡ್ಕರರ ಸಂಶೋಧನೆಯ ಮಾರ್ಗಸೂಚಿ ಅಡಿಯಲ್ಲಿ ನೋಡಬೇಕಾದದ್ದು, ವಿಮರ್ಶೆ ಮಾಡಬೇಕಾ ದದ್ದು ಹಾಗೂ ಪರಿಹಾರ ಸೂಚಕಗಳ ಬಗೆಗೆ ಅವಲೋಕನ ಮಾಡಬೇಕಾದದ್ದು ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನ ಆದ್ಯ ಕರ್ತವ್ಯವೇ ಆಗಿದೆ.
(ಆಧಾರ: ಅಂಬೇಡ್ಕರರ ಬದುಕು-ಬರಹಗಳು ಮತ್ತು
ಭಾಷಣಗಳು, ಸಂಪುಟ-೬. ಲೇಖಕರು ಸಂವಿಧಾನ ತಜ್ಞರು)