Monday, 16th September 2024

ಆಪಲ್ ಎಂಬ ವಂಡರ್ ಬ್ರ್ಯಾಂಡ್‌ನ ಸರಳತೆಯ ಏಕಮಂತ್ರ

ಶಿಶಿರಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ಅದೊಂದು ಸುಂದರ, ತಿಳಿ ಬಿಸಿಲಿನ ಶುಕ್ರವಾರದ ಸಂಜೆ. ಸುಮಾರು ನಾಲ್ಕು ಗಂಟೆಯಿರಬೇಕು. ವಾರ ಪೂರ್ತಿ ದುಡಿದ ಸುಸ್ತನ್ನು ಮರೆಯುವ ವೀಕೆಂಡ್‌ನ ಸಂಭ್ರಮದ ಮನಸ್ಥಿತಿ ನ್ಯೂಯೋರ್ಕ್ ನಗರದೆಡೆ ಅದಾಗಲೇ ಆವರಿಸಿಯಾಗಿತ್ತು.

ನ್ಯೂಯೋಕ್ ನ ಬಾರುಗಳು ಶುಕ್ರವಾರವೆಂದರೆ ಮಧ್ಯಾಹ್ನ ವೇ ಬಾಗಿಲು ತೆರೆದುಕೊಳ್ಳುತ್ತವೆ. ಉಳಿದ ದಿನ ಸಂಜೆಯವರೆಗೆ
ಗಿರಾಕಿಗಳಿಗೆ ಕಾಯಬೇಕು. ಶುಕ್ರವಾರ ಮಾತ್ರ ಹಾಗಲ್ಲ, ಮಧ್ಯಾಹ್ನ ನಾಲ್ಕಾಯಿತೆಂದರೆ ಹ್ಯಾಪಿ ಅವರ್. ಕೆಲವರಂತೂ
ಮಧ್ಯಾಹ್ನವೇ ಬೀಯರ್ ಹೀರಲು ಬಂದು ಕೂತು ಬಿಡುತ್ತಾರೆ. ಶುಕ್ರವಾರ ಬೆಳಿಗ್ಗೆಯಿಂದಲೇ ವೀಕೆಂಡ್ ಎಂಬ ಒಂದು ನಿರಾಳತೆ ಇಡೀ ನ್ಯೂಯೋರ್ಕ್‌ನಲ್ಲಿ ಒಂದು ಸಂಚಲನ ಮೂಡಿಸಿರುತ್ತದೆ. ಆದರೆ ಆ ಶುಕ್ರವಾರ ಮಾತ್ರ ಹಾಗಿರಲಿಲ್ಲ.

ರಸ್ತೆಗಳಲ್ಲಿ ಜನರು ಗಡಿಬಿಡಿಯಲ್ಲಿ ಅತ್ತಿಂದಿತ್ತ ಹೋಗುತ್ತಿದ್ದರು. ಯಾರೂ ಬಾರ್ ರೆಸ್ಟೋರೆಂಟ್‌ನತ್ತ ಬರುತ್ತಿರಲಿಲ್ಲ. ಸಾಮಾನ್ಯ ವಾಗಿ ಶುಕ್ರವಾರ ರೆಸ್ಟೋರೆಂಟಿನ ಹೊರಗೆ ಚೀಟಿ ತೆಗೆದುಕೊಂಡು ಟೇಬಲ್ಲಿಗಾಗಿ ಕಾಯಬೇಕು. ಗುಂಪು ದೊಡ್ಡದಿದ್ದರೆ ಅಡ್ವಾನ್ಸ್ ಆಗಿ ಬುಕ್ ಮಾಡಿರಬೇಕು. ಆ ದಿನ ಮಾತ್ರ ಎಲ್ಲ ರೆಸ್ಟೋರೆಂಟುಗಳು ಬಿಕೋ ಬಿಕೋ. ಕಾರಣ ಎಲ್ಲರಿಗೂ ತಿಳಿದಿದೆ. ಆಪಲ್‌ನ ಹೊಸ ಐಫೋನ್  ಬಿಡುಗಡೆಯಾದ ವಾರವದು. ಎಲ್ಲರ ಗಡಿಬಿಡಿ ಐಫೋನ್ ಖರೀದಿಗೆ.

ಯಾರಿಗೂ ಬೇರೇನೂ ಬೇಡ. ಸರತಿಯಲ್ಲಿ ಐಫೋನ್ ಖರೀದಿಗೆ ಹೋಗಿ ನಿಂತರೆ ರಾತ್ರಿಯಾಗುವುದರೊಳಗೆ ಹೊಳೆಯುವ ಹೊಸ ಐಫೋನ್ ಕೈಗೆ ಸಿಗಬಹುದು. ಕೆಲವರಂತೂ ಬೆಳಿಗ್ಗೆ ಆರಕ್ಕೆಲ್ಲ ಅಂಗಡಿಯ ಮುಂದೆ ಕ್ಯಾಂಪಿಂಗ್ ಕುರ್ಚಿಯನ್ನು ಹೊತ್ತು ತಂದು ಕೂತು ಸ್ಥಾಪನೆಯಾಗಿಬಿಟ್ಟಿದ್ದಾರೆ. ಬಹಳಷ್ಟು ಮಂದಿ ಅಂದು ಆಫೀಸಿಗೆ ರಜೆ ಹಾಕಿ ಬೆಳಿಗ್ಗೆಯಿಂದಲೇ ಸರತಿಯಲ್ಲಿ ನಿಂತಿದ್ದಾರೆ. ಸರಿಯಾಗಿ ಐದುಗಂಟೆಗೆ ಹೊಸ ಐಫೋನ್ ಮಾರಾಟ ಶುರುವಾಗುವುದಿದೆ. ಥೇಟ್ ತಮಿಳುನಾಡಿನಲ್ಲಿ ರಜನಿಕಾಂತ್ ಚಲನ ಚಿತ್ರದ ಫಸ್ಟ್ ಡೇ ಫೋಸ್ಟ್ ಷೋ ನೋಡಲು ಕಾದು ನಿಲ್ಲುವವರಂತೆ ನ್ಯೂಯೋರ್ಕ್‌ನ ಬಹುತೇಕ ಮಂದಿ ಐಫೋನ್ ಅಂಗಡಿಯ ಮುಂದೆ ಶುಕ್ರವಾರವಾದರೂ ನಿಂತಿದ್ದಾರೆ.

ಸು ಚೆಂಗ್ ಸುಮಾರು ಎಂಭತ್ತು ಮೈಲಿ ದೂರದ ಕನೆಕ್ಟಿಕಟ್ ರಾಜ್ಯದ ನಗರವೊಂದರಿಂದ ಐಫೋನ್ ಖರೀದಿಗೆಂದೇ ಹೊರಟಿದ್ದ. ನ್ಯೂಯೋರ್ಕ್ ನಗರಕ್ಕೆ ಕನೆಕ್ಟಿಕಟ್‌ನಿಂದ ಬಂದು ಒಳ ಹೊಕ್ಕುವ ರಸ್ತೆಗಳೆಂದರೆ ನಮ್ಮ ಬೆಂಗಳೂರಿನ ಸಿಲ್ಕ್‌ ಬೋರ್ಡ್, ಮುಂಬೈನ ಕಾಲಾಘೋಡಾ, ಜೋಹಾರ್ ಚೌಕ್, ದೆಹಲಿಯ ಕರೋಲ್ ಭಾಗ್ ಮಾರ್ಕೆಟ್‌ನ ಟ್ರಾಫಿಕ್ಕಿನಂತೆ. ಕೆಲವೊಮ್ಮೆ ಅರ್ಧಗಂಟೆ ನಿಂತರೂ ಒಂದೆರಡು ಇಂಚು ಸರಿಯಲಾಗುವುದಿಲ್ಲ. ಅಸಹನೆ ಎಷ್ಟೇ ಹುಟ್ಟಿದರೂ ಒಂದು ಸಿಗ್ನಲ್ ದಾಟುವು ದರೊಳಗೆ ಬೇಡವೆಂದರೂ ಶಮನವಾಗಿ ಮನುಷ್ಯ ಸಹಜಕ್ಕೆ ಮರಳುವಷ್ಟು ಟ್ರಾಫಿಕ್ಕು. ಕೆಲವು ಬ್ರಿಡ್ಜ್‌ಗಳನ್ನು ದಾಟಿ ನ್ಯೂಯೋರ್ಕ್ ನಗರಕ್ಕೆ ಹೊಕ್ಕಬೇಕು.

ಒಂದೊಂದು ಬ್ರಿಡ್ಜ್ ದಾಟುವುದೂ ಒಂದೊಂದು ಮೌಂಟ್ ಎವರೆಸ್ಟ್ ಹತ್ತಿದ ಅನುಭವ. ಅಂಥದ್ದೇ ಟ್ರಾಫಿಕ್ಕಿನಲ್ಲಿ ಆ ದಿನ
ಅದೇನೋ ಒಂದು ಆಕ್ಸಿಡೆಂಟ್ ಬೇರೆ ಆಗಿತ್ತು. ಹಾಗಾಗಿ ಮಧ್ಯಾಹ್ನ ಒಂದಕ್ಕೆ ಬಂದು ಮುಟ್ಟಬೇಕಾಗಿದ್ದ ಸು ಚೆಂಗ್
ನ್ಯೂಯೋರ್ಕ್‌ನ ಆಪಲ್ ಅಂಗಡಿಗೆ ಬಂದು ತಲುಪುವಾಗ ಸಂಜೆ ಐದಾಗಿ ಹೋಗಿತ್ತು. ಇನ್ನೇನು ಆಪಲ್ ಅಂಗಡಿ ತೆರೆಯಬೇಕು. ಅದಾಗಲೇ ಅಂಗಡಿಯ ಮುಂದಿನ ಸರತಿ ಸುಮಾರು ಒಂದು ಮೈಲಿಗಿಂತ ದೊಡ್ಡದಿತ್ತು.

ನ್ಯೂಯೋರ್ಕ್ ನಲ್ಲಿ ಆಗ ನಾಲ್ಕು ಆಪಲ್ ಅಂಗಡಿಗಳಿದ್ದವು. ಎಲ್ಲದರ ಮುಂದೆಯೂ ಇದೆ ಕಥೆ. ಸು ಚೆಂಗ್ ಗೆ ತಲೆ ಕೆಟ್ಟು
ಹೋಯಿತು. ತನ್ನ ಜೀಪಿನ ಹಿಂದೆ ಅಲಂಕಾರಕ್ಕೆ ಅಂಟಿಸಿಕೊಂಡಿದ್ದ ಥೇಟ್ ಲೋಹದ ಖಡ್ಗದಂತೆಯೇ ತೋರುವ ಪ್ಲಾಸ್ಟಿಕ್ ಖಡ್ಗವನ್ನು ಹಿಡಿದು ಆಪಲ್ ಅಂಗಡಿಗೆ ನುಗ್ಗಿದ. ನನಗೇನೂ ಬೇಡ, ಒಂದು ಐಫೋನ್ ಕೊಡಿ ಸಾಕು. ಇಲ್ಲಿದೆ ಹಣ ಎಂದು ಐದುನೂರು ಡಾಲರ್ ಅನ್ನು ಮುಂದೆಸೆದ. ಆತನ ವರಸೆಯನ್ನು ನೋಡಿ ಆಪಲ್ ಗ್ರಾಹಕರೆಲ್ಲ ಚೆಪಿಲ್ಲಿಯಾಗಿ ಓಡಿದ್ದರು. ಅಲ್ಲಿಯೇ ಇದ್ದ ಪೊಲೀಸರು ಆತನನ್ನು ಬಂಧಿಸಿ ಮತ್ತೆ ಅಂಗಡಿಯನ್ನು ಸಹಜಕ್ಕೆ ತರುವಲ್ಲಿ ಸಾಕಾಗಿ ಹೋಯಿತು.

ಸು ಚೆಂಗ್ ನ ಮೇಲೆ ಆಪಲ್ ಯಾವುದೇ ಕೇಸ್ ಮಾಡಲಿಲ್ಲ. ಆದರೆ ನ್ಯೂಯೋರ್ಕ್‌ನ ಪೊಲೀಸರು ಜನರಿಗೆ ನಕಲಿ ಆಯುಧ ತೋರಿಸಿ ಹೆದರಿಸಿದ್ದಕ್ಕೆ ಬಂಧಿಸಿ ಒಂದಿಷ್ಟು ದಂಡ ಹಾಕಿದರು. ಸು ಚೆಂಗ್ ನನ್ನು ಮರ್ಲು, ಹುಚ್ಚು, ಹಾಫ್‌ – ಏನಾದರೂ ಕರೆಯಿರಿ. ಆ ಕೆಲಸದಿಂದ ತನ್ನ ಮೇಲೆ ಕೇಸುಗಳು ಬೀಳಬಹುದು ಎಂಬೆಲ್ಲ ಜ್ಞಾನ ಇದ್ದವನೇ. ಆತ ಯಾವುದೇ ಮಾನಸಿಕ ಸಮಸ್ಯೆ ಇದ್ದ ವ್ಯಕ್ತಿಯೇನಲ್ಲ. ಆದರೆ ಆತನ ಆಪಲ್ ಐ-ನ್ ಅನ್ನು ಪಡೆಯುವ ಉತ್ಕಟತೆ ಇಷ್ಟೆಲ್ಲ ಕೆಲಸವನ್ನು ಮಾಡಿಸಿತ್ತು. ಇಂತಹ ಅದೆಷ್ಟೋ ಘಟನೆಗಳು ಪ್ರತೀ ವರ್ಷ ಆಪಲ್ ಐಫೋನ್ ಬಿಡುಗಡೆಯ ಸಮಯದಲ್ಲಿ ನಡೆಯುತ್ತವೆ.

ಆಪಲ್ ಹುಟ್ಟುಹಾಕುವ ಕ್ರೇಜ್ ಅಂಥದ್ದು. ಇದೆಲ್ಲ ಒಮ್ಮೆ ಆಪಲ್ ಫೋನ್ ಬಳಸಿದವನಿಗೆ ಮಾತ್ರ ಗೊತ್ತು. ಅದೆಷ್ಟೇ ಗಟ್ಟಿ ಮನಸ್ಸು ಮಾಡಿ ಆಪಲ್ ಫೋನ್ ಬಿಟ್ಟು ಇನ್ನೊಂದು ಫೋನ್ ಖರೀದಿಸಿದರೂ ಕೆಲವೇ ದಿನಗಳಲ್ಲಿ ಬಹುತೇಕರು ಮತ್ತೆ
ಆಪಲ್ ಫೋನ್‌ಗೆ ವಾಪಸ್ಸಾಗುತ್ತಾರೆ. ಆಪಲ್ ಫೋನ್‌ನಲ್ಲಿ ಮಾಡುವ ಎಲ್ಲ ಕೆಲಸಗಳನ್ನೂ ಉಳಿದ ಸ್ಮಾರ್ಟ್ ಫೋನ್’ಗಳಲ್ಲಿ ಮಾಡಬಹುದು. ಆದರೂ ಆಪಲ್ ಗ್ರಾಹಕನಿಗೆ ಆಪಲ್ ಎಂದರೆ ಆಪಲ. ಇದು ಕೇವಲ ಆಪಲ್ ಫೋನ್ಗೊಂದೇ ಸೀಮಿತವಾಗುವ ವಿಚಾರವಲ್ಲ. ನೀವು ಆಪಲ್ ಮ್ಯಾಕ್ ಬುಕ್, ಐಪ್ಯಾಡ್ ಯಾವುದನ್ನೂ ಒಮ್ಮೆ ಬಳಸಿದರೆ ಮುಗಿದುಹೋಯಿತು.

ಮತ್ತೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಆಪಲ್ ಉತ್ಪನ್ನ ಒಂದು ರೀತಿಯ ಡ್ರಗ್ಸ್ ನಂತೆ. ಒಮ್ಮೆ ಬಳಸಿದರೆ ಮತ್ತೆ ಅದೇ ಬೇಕು. ಖರೀದಿಸಲು ಅದೆಷ್ಟೇ ತುಟ್ಟಿಯೇನಿಸಿದರೂ, ಒಂದು ಹೊತ್ತು ಊಟವನ್ನು ತಿಂಗಳು ಗಟ್ಟಲೆ ಬಿಟ್ಟಾದರೂ ಸರಿಯೇ, ಖರೀದಿಸಿದರೆ ಆಪಲ್ ಫೋನ್ ಅನ್ನೇ ಖರೀದಿಸುವುದು ಎನ್ನುವ ಒಂದು ದೊಡ್ಡ ಜನಸಂಖ್ಯೆಯೇ ಇದೆ. ಇದು ಅಮೆರಿಕ ದಲ್ಲಷ್ಟೇ ಅಲ್ಲ, ಜಗತ್ತಿನ ಎಲ್ಲ ದೇಶಗಳಲ್ಲಿರುವ ಕ್ರೇಜ್. ಅಮೇರಿಕನ್‌ರನ್ನು ರಿಲಿಜಿಯಸ್ ಆಗಿ ದ್ವೇಷಿಸುವ ಉತ್ತರ ಕೊರಿಯಾದ ಮಂದಿ ಕೂಡ ಆಪಲ್ ಫೋನ್ ಎಂದರೆ ಎಲ್ಲ ಮರೆತು ನಿಲ್ಲುತ್ತಾರೆ.

ತುಟ್ಟಿಯೇನಿಸುವ ಆಪಲ್ ಪ್ರಾಡಕ್ಟ್ ಶೋಕಿಯ, ಷೋ ಆಫೋನ, ಅಂತಸ್ತನ್ನು ತೋರಿಸುವ ವಿಚಾರ ಅಲ್ಲವೇ ಅಲ್ಲ. ಆಪಲ್ ಎಂಬ ಬ್ರಾಂಡ್‌ನ ತಾಕತ್ತು ಅಂಥದ್ದು. ಇದೇ ಕಾರಣಕ್ಕೆ ಫೋನ್, ಕಂಪ್ಯೂಟರ್ ಬಿಸ್ನೆಸ್ ಅಲ್ಲದೇ ಯಾವುದೇ ವ್ಯವಹಾರದ ಬ್ರಾಂಡಿಂಗ್ ವಿಚಾರ ಬಂದಾಗ ಆಪಲ್‌ನ ಉದಾಹರಣೆ ಪಂಡಿತರು ಮೊದಲು ತೆಗೆದುಕೊಳ್ಳುತ್ತಾರೆ.

ಹಾಗಂತ ಆಪಲ್ ಫೋನ್ ಅಥವಾ ಅದರ ಯಾವುದೇ ಪ್ರಾಡಕ್ಟ್ ಇರಬಹುದು, ಮಾರ್ಕೆಟ್‌ನಲ್ಲಿ ಅದೇ ಸುಪೀರಿಯರ್,  ಅತ್ಯು ತ್ಕ್ರಷ್ಟ ಎಂದೇನಲ್ಲ. ಆಪಲ್ ಪ್ರಾಡಕ್ಟ್ ಗಿಂತ ಹೆಚ್ಚು ಶಕ್ತಿಶಾಲಿ ಫೋನ್‌ಗಳು, ಲ್ಯಾಪ್ಟಾಪ್‌ಗಳು, ಕಂಪ್ಯೂಟರ್‌ಗಳು ಬೇರೆ ಹಲವಾರು ಕಂಪನಿಗಳು ರುತ್ತವೆ. ಆದರೆ ಅದೆಲ್ಲದರ ಮಧ್ಯೆ ತುಸು ತುಟ್ಟಿಯೇನಿಸುವ, ಇದೇ ಉತ್ಕ್ರಷ್ಟವಲ್ಲ ಎಂದು ತಿಳಿದಿದ್ದರೂ
ಅದನ್ನೇ ಬಳಸುವ ಆಪಲ್‌ನ ಗ್ರಾಹಕರ ಈ ಸ್ಥಿತಿಯನ್ನು ಒಂದು ಕಂಪನಿ ಹೇಗೆ ನಿರ್ಮಿಸಿತು ಎನ್ನುವುದೇ ಒಂದು ಅದ್ಭುತ.

ಬಿಸಿನೆಸ್ ಮಾಡುವವರಿಗೆ ಅಷ್ಟೇ ಅಲ್ಲ, ಎಲ್ಲರಿಗೂ ಇದರಿಂದ ಕಲಿಯಬೇಕಾದದ್ದು ತುಂಬಾ ಇದೆ. ಆಪಲ್ ತನ್ನ ಮೊದಲ ಕಂಪ್ಯೂಟರ್ ಬಿಡುಗಡೆ ಮಾಡುವಾಗ ಅದಕ್ಕಿಂತ ಅಗ್ಗದಲ್ಲಿ, ಅಷ್ಟೇ ಶಕ್ತಿಯುತ ಬೇರೆ ಕಂಪ್ಯೂಟರ್‌ಗಳು ಲಭ್ಯವಿದ್ದವು. ಆಪಲ್ ಮ್ಯೂಸಿಕ್ ಪ್ಲೇಯರ್, ಐಪಾಡ್ ಬಿಡುಗಡೆಯಾಗುವಾಗ ಕೂಡ ಅದಾಗಲೇ ಬೇರೆ ಕಂಪನಿಗಳು ಮ್ಯೂಸಿಕ್ ಪ್ಲೇಯರ್ಗಳನ್ನು, ಟ್ಯಾಬ್ಲೆಟ್‌ಗಳನ್ನು ಆಪಲ್ ಮುಖಬೆಲೆಗಿಂತ ಅಗ್ಗದಲ್ಲಿ ಮಾರುತ್ತಿದ್ದರು. ಇದು ಆಪಲ್‌ನ ಎಲ್ಲ ಉತ್ಪನ್ನಗಳಿಗೂ ಅನ್ವಯ ವಾಗುತ್ತದೆ.

ಆಪಲ್ ಐಫೋನ್ ಬಿಡುಗಡೆಯಾದದ್ದೇ ೨೦೦೭ರಲ್ಲಿ. ಆ ಸಂದರ್ಭದಲ್ಲಿ ನೋಕಿಯಾ ಫೋನ್‌ಗಳು ಜಗತ್ತಿನ ಮೂಲೆ ಮೂಲೆ ಗಳಲ್ಲಿ ಮಾರಾಟವಾಗುತ್ತಿದ್ದವು. ಆಪಲ್ ಅದ್ಯಾವ ಉತ್ಪನ್ನವನ್ನೂ ಮೊದಲು ಮಾರುಕಟ್ಟೆಗೆ ತಂದ ಕಂಪನಿಯಲ್ಲ. ಆದರೆ ಅದಾಗಲೇ ಮರುಕಟ್ಟೆಯಲ್ಲಿದ್ದ ಎಲ್ಲ ದಿಗ್ಗಜರನ್ನೂ ಒಮ್ಮೆ ತಿರುಗಿ ನೋಡುವಂತೆ, ಪ್ರತೀ ಹೊಸ ಉತ್ಪನ್ನವನ್ನು ಬಿಡುಗಡೆ ಗೊಳಿಸಿದಾಗಲೂ ಗ್ರಾಹಕರಲ್ಲಿ ಹುಚ್ಚೆಬ್ಬಿಸುವಂತೆ ಮಾಡಿದೆ.

ಇದಕ್ಕೆ ಹಲವು ಕಾರಣಗಳಿದ್ದರೂ ಅದೆಲ್ಲದರಲ್ಲಿ ಎದ್ದು ನಿಲ್ಲುವ ಒಂದು ಕಾರಣ ಆಪಲ್ ಕಂಪನಿ ಅಳವಡಿಸಿಕೊಂಡಿರುವ ಸರಳತೆಯ ಮಂತ್ರ. Simplicity is ultimate sophistication. ಸರಳತೆಯೇ ಆಧುನಿಕತೆಯ ಉತ್ತುಂಗ. ಇದು ಆಪಲ್‌ನ ಎಲ್ಲ ಪ್ರಾಡಕ್ಟ್‌ಗಳಲ್ಲಿ, ವ್ಯವಹಾರದಲ್ಲಿ ಕಾಣಿಸುತ್ತದೆ. ಸಾಮಾನ್ಯವಾಗಿ ಸುಧಾರಿತ, ಮುಂದುವರಿದ, ಆಧುನಿಕ ಸಲಕರಣೆ – ಪ್ರಾಡಕ್ಟ್ ಎಂದರೆ ಎಲ್ಲರೂ ತಮ್ಮ ಉತ್ಪನ್ನಗಳಲ್ಲಿ ಇನ್ನಷ್ಟು ಕ್ಲಿಷ್ಟತೆಯನ್ನು, ಸಂಕೀರ್ಣತೆಯನ್ನು ಒಳ ಹೊಗ್ಗಿಸಲು ನೋಡುತ್ತಿರುತ್ತಾರೆ. ಆದರೆ ಆಪಲ್ ಮಾತ್ರ ಪ್ರತೀ ಹೊಸ ಉತ್ಪನ್ನಗಳಲ್ಲಿ ಹೇಗೆ ಸರಳತೆಯನ್ನು ತರಬಹುದು ಎಂದು ವ್ಯತಿರಿಕ್ತವಾಗಿ ವಿಚಾರ ಮಾಡುತ್ತಾ ಹೋಗುತ್ತದೆ. ತನ್ನ ಗ್ರಾಹಕನಿಗೆ ಹೇಗೆ ತನ್ನ ಉತ್ಪನ್ನ ಬಳಸಲು ಸುಲಭವಾಗಬೇಕು ಎನ್ನುವುದೇ ಉತ್ಪನ್ನವೊಂದನ್ನು
ವಿನ್ಯಾಸಗೊಳಿಸುವಾಗ ಆಪಲ್ ಕೊಡುವ ಮೊದಲ ಆದ್ಯತೆ.

ಈ ಸರಳತೆ ಆಪಲ್ ಫೋನ್, ಐಪ್ಯಾಡ್, ಮ್ಯಾಕ್ ಬುಕ್ (ಲ್ಯಾಪ್ಟಾಪ್) ಅನ್ನು ಬಳಸುವಾಗ ಗ್ರಹಿಸ ಬಹುದು. ಪ್ರತೀ ಹೊಸ ಆವೃತ್ತಿಯ ಉತ್ಪನ್ನ ಹೊರತರುವಾಗ ಕೂಡ ಈಗಾಗಲೇ ಗ್ರಾಹಕ ಆಪಲ್‌ನ ಉತ್ಪನ್ನ ಬಳಸಿದ್ದಲ್ಲಿ ಆತನಿಗೆ ಹೊಸ ಆವೃತ್ತಿಯ ಉತ್ಪನ್ನ ಹೇಗೆ ಬಳಸುವುದು ಎಂದು ಮೊದಲೇ ತಿಳಿದಿರುವ ಅನುಭವವಾಗುತ್ತದೆ. ಇದಲ್ಲದೇ ಈ ಸರಳತೆ ಮತ್ತು ಅದೇ ಲಯ ಆಪಲ್‌ನ ಎಲ್ಲ ಉತ್ಪನ್ನಗಳಲ್ಲಿಯೂ ಕಾಣಸಿಗುತ್ತದೆ. ಉದಾಹರಣೆಗೆ, ನೀವು ಆಪಲ್ ಫೊನ್ ಬಳಸಿದ್ದರೆ ಹೊಸತಾಗಿ ಆಪಲ್ ಲ್ಯಾಪ್ಟಾಪ್ ಖರೀದಿಸಿದಲ್ಲಿ ಅದನ್ನು ಬಳಸುವುದು ನಿಮಗೆ ಮೊದಲೇ ತಿಳಿದಿದೆ ಎಂದೆನಿಸುತ್ತದೆ. ಆಪಲ್‌ನ ಸರಳತೆ ಕೇವಲ
ಉತ್ಪನ್ನಕ್ಕಷ್ಟೇ ಸೀಮಿತವಲ್ಲ.

ಅದೇ ಸರಳತೆ ಆಪಲ್‌ನ ಅಂಗಡಿಗಳಲ್ಲಿ ಕೂಡ ಕಾಣಿಸುತ್ತದೆ. ಆಪಲ್ ಅಂಗಡಿಗಳಲ್ಲಿ, ಆಪಲ್ ಕಸ್ಟಮರ್ ಕೇರ್‌ಗೆ ಕರೆಮಾಡಿ ದಾಗ ಎಡೆ ಈ ಸರಳತೆಯ, ಸಿಂಪ್ಲಿಸಿಟಿಯ ಅನುಭವಾಗುತ್ತದೆ. ಕೊನೆಗೆ ಆಪಲ್‌ನ ಬಿಲ್ ಬೋರ್ಡ್ ಗಳನ್ನು ನೀವು ನೋಡಿದ್ದರೆ ಅಲ್ಲಿ ಕೂಡ ಸರಳತೆಯಿರುತ್ತದೆ. ಅಲ್ಲಿ ಒಂದು ಆಪಲ್ ಲೋಗೋ ಮತ್ತು ಉತ್ಪನ್ನದ ಚಿತ್ರ ಅದಷ್ಟೇ. ಗ್ರಾಹಕನಿಗೆ ಒಂದು
ಕಂಪನಿಯ ಜೊತೆ ಈ ಸರಳತೆಯ ಅನುಭವವೇ ಆತನನ್ನು ಬೇರೆಡೆ ಹೋಗದಂತೆ ನೋಡಿಕೊಳ್ಳುತ್ತದೆ. ಒಂದು ಚಂದದ ಅನು ಭವ ಕಟ್ಟಿಕೊಡುತ್ತದೆ.

ನಮ್ಮ ನಡುವೆ ಮಹಾ ಮೇಧಾವಿಗಳಿರುತ್ತಾರೆ. ಅವರಿಗೆ ನೀವು ಒಂದು ಸರಳ ಪ್ರಶ್ನೆ ಕೇಳಿ ನೋಡಿ. ಏನೇನೆಲ್ಲ ವಿವರಣೆ ಕೊಟ್ಟು ಉದ್ದುದ್ದದ ಉತ್ತರ ಕೊಡುತ್ತಾರೆ. ಅದೇನೋ ಜ್ಞಾನವನ್ನೆಲ್ಲ ನಮ್ಮೆದುರಿಗೆ ಹಡೆದು ಕೊನೆಗೆ ಸರಳವಾದ, ಪ್ರಶ್ನೆಗೆ ಅವಶ್ಯವಿರುವ ನೇರ ಉತ್ತರವನ್ನು ಕೊಡುವುದೇ ಇಲ್ಲ. ಪ್ರಶ್ನೆ ಕೇಳಿದವನಿಗೆ ಕೊನೆಯಲ್ಲಿ ಯಾಕಾದರೂ ಕೇಳಿದನೇನೋ, ಉತ್ತರ ಯಾವಾಗ ಮುಗಿಯುತ್ತದೆಯೇನೋ ಎಂದೆನಿಸಲು ಶುರುವಾಗುತ್ತದೆ. ಅದೇ ಇನ್ನು ಕೆಲವರಿರುತ್ತಾರೆ.

ಅವರು ಮೇಧಾವಿಗಳೇನಲ್ಲ. ಅವರಿಗೆ ಬ್ರಹ್ಮಾಂಡವೆಲ್ಲ ಗೊತ್ತಿಲ್ಲ. ಆದರೆ ಕೇಳಿದ ಪ್ರಶ್ನೆ ತಿಳಿದ ವಿಚಾರವಾಗಿದ್ದಲ್ಲಿ ಅತ್ಯಂತ ಸರಳತೆಯಿಂದ ವಿವರಿಸುತ್ತಾರೆ. ಎದುರಿಗಿರುವ ಎಂಥವನಿಗೂ ಉತ್ತರ ಸಿಗುತ್ತದೆ. ಶಿಕ್ಷಕರಲ್ಲಿ ಕೂಡ ಇದನ್ನು ನೋಡಬಹುದು. ಕೆಲ ಶಿಕ್ಷಕರಿಗೆ ಅತ್ಯಂತ ಜ್ಞಾನವಿರುತ್ತದೆ. ಆದರೆ ಸರಳವಾಗಿ ಮಕ್ಕಳಿಗೆ ವಿವರಿಸಲು ಬರುವುದಿಲ್ಲ. ಮಕ್ಕಳ ಅಚ್ಚು ಮೆಚ್ಚಿನ ಶಿಕ್ಷರೆಂದರೆ ಸರಳವಾಗಿ, ಅರ್ಥವಾಗುವಂತೆ ವಿಷಯ ಮಂಡಿಸಲು ಬರುತ್ತದೆ ಎಂದೇ ಅರ್ಥ. ಇಲ್ಲಿ ವಿದ್ಯಾರ್ಥಿಗಳೇ ಗ್ರಾಹಕ. ಆಪಲ್‌ನ ಎಲ್ಲ ಉತ್ಪನ್ನಗಳೂ ಈ ಎರಡನೆಯ ರೀತಿಯ ಶಿಕ್ಷಕರಂತೆ.

ಒಬ್ಬನ ವ್ಯಕ್ತಿತ್ವ ಇನ್ನೊಬ್ಬರಿಗೆ ಆತನ ಜ್ಞಾನಕ್ಕೆ ಅನುಗುಣವಾಗಿ ಇಷ್ಟವಾಗುವುದಿಲ್ಲ, ಬದಲಿಗೆ ಆತ ಅದೆಷ್ಟು ಸರಳವಾಗಿ ಮಾತನಾಡುತ್ತಾನೆ, ತನ್ನನ್ನು ವ್ಯಕ್ತಪಡಿಸಿಕೊಳ್ಳುತ್ತಾನೆ ಎನ್ನುವುದರ ಮೇಲೆ ಪ್ರೀತಿಪಾತ್ರನಾಗುತ್ತಾನೆ. ಯಾವ ಯಾವ ವ್ಯಕ್ತಿ, ಯಾವ ಯಾವ ಬಿಸಿನೆಸ್ ಸರಳತೆಯನ್ನು ಮಂತ್ರವನ್ನಾಗಿಸಿಕೊಂಡಿದೆಯೋ ಅದೆಲ್ಲ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ಬೆಳೆದಿದೆ. ಆ ಕಾರಣಕ್ಕೆ ಆಪಲ್ ಎಂಬ ಬ್ರಾಂಡ್‌ನ ಸರಳತೆಯಿಂದ ನಾವೆ ಕಲಿಯುವುದಿದೆ ಎಂದದ್ದು. ನಮ್ಮ ಬಿಸ್ನೆಸ್, ಕೆಲಸ
ಯಾವುದೇ ಇರಬಹುದು.

ಗ್ರಾಹಕ ಯಾರೇ ಇರಬಹುದು, ಎಷ್ಟೇ ಬುದ್ಧಿವಂತನಿರಬಹುದು ಅಥವಾ ಎಂಥ ಗಮಾರನಿರಬಹುದು. ಎಲ್ಲ ಗ್ರಾಹಕನೂ ಬಯಸುವುದು ಸರಳತೆಯನ್ನು. ಹೋಟೆಲ್‌ನಲ್ಲಿ, ಕ್ಲಾಸ್ ರೂಮಿನಲ್ಲಿ, ನ್ಯೂಸ್ ನೋಡುವಾಗ, ಪೇಪರ್ ಓದುವಾಗ, ಯಾವುದೇ ಬ್ಯಾಂಕ್, ಕಚೇರಿಗೆ ಹೋದಾಗ – ಎಡೆ ವ್ಯಕ್ತಿ ಸರಳತೆಯನ್ನೇ ಬಯಸುತ್ತಾನೆ. ಸುಲಭದಲ್ಲಿ ತನಗೆ ಬೇಕಾದದ್ದನ್ನು ಹೇಗೆ ಪಡೆಯಬಹುದು ಎನ್ನುವ ಒಂದೇ ವಿಚಾರ ಪ್ರತಿಸ್ಪರ್ಧಿಗಳ ನಡುವಿನ ಯಶಸ್ಸನ್ನು ನಿರ್ಧರಿಸುತ್ತದೆ. ನಮ್ಮ ವೃತ್ತಿ, ಕೆಲಸ ಯಾವುದೇ ಇರಬಹುದು, ಅಲ್ಲಿ ಒಂದಿಷ್ಟು ಸರಳತೆಯನ್ನು ತಂದರೆ ಸಹಜವಾಗಿ ಯಶಸ್ಸು ಸಾಧ್ಯ.

ಇದು ಆಪಲ್ ನಮಗೆ ಕಲಿಸುವ ಮಹತ್ವದ ಪಾಠ. ಆಪಲ್‌ನ ಸರಳತೆಯ ಮಂತ್ರದ ಮೇಲೆ ಕೆನ್ ಸೀಗಲ್ ಬರೆದಿರುವ ಪುಸ್ತಕ Insanely Simple The Obsession That Drives Apple’s Success  ಎಲ್ಲರಿಗೂ ಜೀವನ ಪಾಠ ಹೇಳುವ ಪುಸ್ತಕವಾಗುವುದು ಅದೇ ಕಾರಣಕ್ಕೆ. ಆಪಲ್ ಯಾವುದೇ ಗ್ರಾಹಕನನ್ನು ಕಡೆಗಣಿಸುವುದಿಲ್ಲ. ಗ್ರಾಹಕನ ಸರಳ ನೇರ ಅನುಭವವೇ ಎಲ್ಲದಕ್ಕಿಂತ ಮುಖ್ಯ.
ಇದರ ಅನುಭವ ಆಪಲ್ ಅಂಗಡಿಗೆ ಹೋದಲ್ಲಿ, ಅವರ ಕಸ್ಟಮರ್ ಕೇರ್‌ಗೆ ಕರೆ ಮಾಡಿದಲ್ಲಿ ಎಡೆ ಅನುಭವವಾಗುತ್ತದೆ. ಒಮ್ಮೆ ನಾನು ಹೊರದೇಶದಲ್ಲಿದ್ದಾಗ ನನ್ನ ಐಫೋನ್ ಕೆಟ್ಟಿತ್ತು. ಅದು ಕೆಡುವಾಗ ಆಗಿನ್ನೂ ವಾರಂಟಿಯಿತ್ತು.

ಸುಮಾರು ಒಂದು ತಿಂಗಳ ನಂತರ ಅಮೆರಿಕಾಕ್ಕೆ ಮರಳಿದ ಮೇಲೆ ಆಪಲ್‌ಗೆ ಕರೆ ಮಾಡಿ ವಿವರಿಸಿದಾಗ ಎರಡನೇ ಪ್ರಶ್ನೆ ಕೇಳ ಲಿಲ್ಲ. ಅಂಗಡಿಗೆ ಅಲೆಯುವಂತೆ ಮಾಡಲಿಲ್ಲ. ಏನೋ ಒಂದು ಸಬೂಬು ಹೇಳಲಿಲ್ಲ. ಆ ಹಾಳಾದ ಫೋನ್ ತೆಗೆದುಕೊಂಡು ಹೊಸ ಫೋನ್ ಅನ್ನು ಕಳಿಸಿಕೊಟ್ಟರು. ಇಂತಹ ಅನುಭವ ಆಪಲ್ ಗ್ರಾಹಕರಿಗೆ ಸರ್ವೇ ಸಾಮಾನ್ಯ. ಒಂದು ಫೋನ್ ಕರೆ, ನೇರ ಸಂಭಾಷಣೆಯಲ್ಲಿ, ಸರಳ ವ್ಯವಹಾರದಲ್ಲಿ ಗ್ರಾಹಕ ಖುಷ್ ಆಗಿದ್ದ. ಈ ರೀತಿಯ ಸುಂದರ ಅನುಭವ ಆಪಲ್‌ನ ಎಲ್ಲ ಗ್ರಾಹಕ ರಿಗೂ ಸಾಮಾನ್ಯ. ಅದೇ ಕಾರಣಕ್ಕೆ ಆಪಲ್ ನ ಗ್ರಾಹಕ ಹೋದಲ್ಲ ಒಂದಿಂದು ಅನುಭವದಿಂದ Word of Mouth ಬಾಯಿಮಾತಿನ ಹೊಗಳಿಕೆಯನ್ನು ಹರಡುತ್ತ ಹೋಗುತ್ತಾನೆ.

ಒಂದು ಬಿಸಿನೆಸ್‌ಗೆ ಗ್ರಾಹಕ ತನ್ನ ಬ್ರಾಂಡ್ ಅಂಬಾಸೆಡರ್ ಆಗುವುದು ಬಹಳ ಮುಖ್ಯವಾಗುತ್ತದೆ. ಅದಲ್ಲದೇ ಗ್ರಾಹಕ ತನ್ನಲ್ಲಿಯೇ ಬರುತ್ತಾನೆ ಎನ್ನುವ ಅನಿವಾರ್ಯ ಸೃಷ್ಟಿಸಿ ಕೂಡ ದಾರ್ಷ್ಟ್ಯ ತೋರಬಾರದು ಎನ್ನುವುದು ಇಲ್ಲಿ ಆಪಲ್ ಕಲಿಸಿಕೊಡುವ ಇನ್ನೊಂದು ಪಾಠ. ಊರಿನಲ್ಲಿ ಒಂದೇ ಕಿರಾಣಿ ಅಂಗಡಿಯಿದ್ದರೆ, ಬಟ್ಟೆ ಅಂಗಡಿಯಿದ್ದರೆ, ಮಿಕ್ಸರ್ ರಿಪೇರಿ ಮಾಡುವವನಿದ್ದರೆ,
ಹೊಲಿಗೆಯವನಿದ್ದರೆ ಗ್ರಾಹಕ ಇನ್ನೆಲ್ಲಿ ಹೋದಾನು ಎಂದು ಧಿಮಾಕು ಮೆರೆಯುವ ಹಲವರನ್ನು ನಾವು ನೋಡಿರುತ್ತೇವೆ.

ಅವರಿಗೆಲ್ಲ ಆಪಲ್ ಗ್ರಾಹಕರಿಗೆ ಕೊಡಮಾಡುವ ಪ್ರಥಮ ಆದ್ಯತೆ ಇನ್ನೊಂದು ಬೋಧನೆ. ಆಪಲ್ ಗ್ರಾಹಕ ಕೂಡ ಬೇರೆಡೆ ಹೋಗುವುದಿಲ್ಲ ಆದರೂ ತನ್ನ ಗ್ರಾಹಕನೆಡೆ ಆಪಲ್ ಎಂದೂ ಅಸಡ್ಡೆ ತೋರುವುದಿಲ್ಲ, ಹಗುರವಾಗಿ ನೋಡುವುದಿಲ್ಲ. ಆಪಲ್ ತನ್ನ ಪ್ರಾಡಕ್ಟ್ ಅನ್ನು ವಿವರಿಸುವುದಕ್ಕಿಂತ ತನ್ನ ಪ್ರಾಡಕ್ಟ್‌ನಿಂದ ಗ್ರಾಹಕನಾದವನು ಏನನ್ನು ಮಾಡಲು ಸಾಧ್ಯ ಎನ್ನುವುದನ್ನು ಸರಳವಾಗಿ ಹೆಚ್ಚು ಒತ್ತಿ ಹೇಳುತ್ತದೆ.

ಗ್ರಾಹಕನಾದವನು ಉತ್ಪನ್ನದಿಂದ ತನಗೇನು ಲಾಭ ಎಂದು ನೋಡುತ್ತಾನೆ ಎನ್ನುವ ಸರಳ ವಿಚಾರವನ್ನು ಆಪಲ್‌ನಷ್ಟು
ಚೆನ್ನಾಗಿ ಅರಿತುಕೊಂಡವರು ಇನ್ನೊಬ್ಬರಿಲ್ಲ. ಆಪಲ್ ಇಂದು ಜಗತ್ತಿನ ಅತಿ ಹೆಚ್ಚು ಫೋನ್ ಮಾರಾಟ ಮಾಡುವ ಕಂಪನಿ ಯಲ್ಲದಿರಬಹುದು. ಆದರೆ ಅದರ ಬ್ರಾಂಡ್ ವ್ಯಾಲ್ಯೂ ಬಹುತೇಕ ಕಂಪನಿಗಳಿಗೆ ಹೋಲಿಸಿದರೆ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ನಾಳೆ ಆಪಲ್ ನೀರನ್ನು ಮಾರಲು ಹೊರಟರೂ ಅದನ್ನು ಕೂಡ ಸರತಿಯಲ್ಲಿ ನಿಂತು ಖರೀದಿಸುವವರು ಪಕ್ಕಾ ಇzರೆ. ಅದು ಒಂದು ಗಟ್ಟಿ ಬ್ರಾಂಡ್‌ನ ತಾಕತ್ತು. ಅದೆಲ್ಲ ಸಾಧ್ಯವಾದದ್ದು ಸರಳತೆಯೆನ್ನುವ ಏಕಮಂತ್ರದಿಂದ.

ನಮ್ಮ ವೃತ್ತಿ ಯಾವುದೇ ಇರಬಹುದು. ಶಿಕ್ಷಕ, ಡಾಕ್ಟರ್, ಮೆಡಿಕಲ್ ರೆಪ್ರೆಸೆಂಟೇಟಿವ್, ಬರಹಗಾರ, ಪತ್ರಕರ್ತ, ಫೋಟೋಗ್ರಾಫರ್, ಕೂಲಿ ಕಾರ್ಮಿಕ, ಕುಶಲ ಕರ್ಮಿ, ಸರಕಾರೀ ಇಲ್ಲವೇ ಖಾಸಗೀ ನೌಕರ, ಲಾಯರ್, ಎಂಜಿನಿಯರ್ ಹೀಗೆ – ಇಲ್ಲ ವ್ಯಕ್ತಿಯೇ ಬ್ರಾಂಡ್. ಹೋಟೆಲ, ಅಂಗಡಿ ಹೀಗೆ ಯಾವುದೇ ಬಿಸ್ನೆಸ್ ಇರಬಹುದು. ಪ್ರತಿಯೊಬ್ಬರಿಗೂ ಅಬ್ಬ ಕನ್ಸುಮರ್, ಗ್ರಾಹಕನಿzನೆ. ಒಟ್ಟಾರೆ ಹೆಚ್ಚಿನ ಪಕ್ಷ – ಎಲ್ಲ ಕಡೆ ಸರಳತೆ ತಂದಲ್ಲಿ, ಗುಣಮಟ್ಟದ ಜೊತೆ ಗ್ರಾಹಕನಿಗೆ ಮೊದಲ ಆದ್ಯತೆ ಕೊಟ್ಟಲ್ಲಿ ಯಶಸ್ಸು ಪಕ್ಕಾ ಕಟ್ಟಿಟ್ಟ ಬುತ್ತಿ. ಇಂದು ನಾವು ಬಹುತೇಕ ಕಡೆ ದಿನಗಳೆದಂತೆ ಸಂಕೀರ್ಣತೆ ಹೆಚ್ಚಾಗುವುದನ್ನೇ ಕಾಣುತ್ತೇವೆ.

ಆಧುನಿಕತೆ ಎಂದರೆ ಸಂಕೀರ್ಣತೆ ಎನ್ನುವ ಭ್ರಮೆ ಹಲವರಲ್ಲಿದೆ. ಸರಳತೆಯನ್ನು ಒಳತರುವ ಬದಲಾವಣೆಯನ್ನು ಗುರುತಿಸು ವುದು ಮತ್ತು ಅಳವಡಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಆ ನಿಟ್ಟಿನಲ್ಲಿ ವಿಚಾರ ಮಾಡಿದಲ್ಲಿ ಸಾಧ್ಯವಿದೆ. ನಮಗೆ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಅವಕಾಶ ಸಿಕ್ಕಾಗಲೆಲ್ಲ ಸಂಕೀರ್ಣತೆಯನ್ನು ತಗ್ಗಿಸುವ, ಸರಳತೆಯನ್ನು ಹೆಚ್ಚಿಸುವ ಕೆಲಸ ಮಾಡಿದರೆ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಸರಳತೆ ವ್ಯಕ್ತಿತ್ವದಲ್ಲಷ್ಟೇ ಅಲ್ಲ, ನಾವು ಮಾಡುವ ಯಾವುದೇ ಉದ್ಯೋಗದ, ಕೆಲಸದ ಅವಶ್ಯಕತೆ ಕೂಡ ಹೌದು. ಇದು ಆಪಲ್ ಎಂಬ ವಂಡರ್ ಬ್ರಾಂಡ್ ನಮಗೆಲ್ಲ ಕಲಿಸುವ ಸರಳತೆಯ ಪಾಠ.

Leave a Reply

Your email address will not be published. Required fields are marked *